ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನೆಟ್ಟ ಗಿಡ ಹೇಳುತ್ತದೆ ಬೇರೆಯದೇ ಕತೆ

ಲಕ್ಷಾಂತರ ಗಿಡಗಳನ್ನು ನೆಟ್ಟ ಅಂಕಿ-ಅಂಶ ಲಭ್ಯವಾಗುತ್ತದೆ. ಆದರೆ ವಾಸ್ತವದಲ್ಲಿ...
Last Updated 3 ಜೂನ್ 2022, 19:31 IST
ಅಕ್ಷರ ಗಾತ್ರ

ಜೂನ್ 5 ಎಂದರೆ ಅಂದು ವಿಶ್ವ ಪರಿಸರ ದಿನಾಚರಣೆ ಎಂದು ಮಕ್ಕಳೂ ಹೇಳುವಷ್ಟು ಮಹತ್ವ ಈ ದಿನಕ್ಕಿದೆ. ಅಧಿಕಾರಸ್ಥರು ಆ ದಿನ ಬೆಳಗ್ಗೆಯೇ ಸಸಿ ನೆಟ್ಟು ನೀರು ಹಾಕುತ್ತಾರೆ. ಫೋಟೊಕ್ಕೊಂದು ಪೋಸು ಸಿಗುತ್ತದೆ. 1972ರಿಂದಲೂ ಈ ಪ್ರಕ್ರಿಯೆ ನಡೆಯುತ್ತಲೇ ಇದೆ. ಹಾಗಾದರೆ, ಈ ಕ್ರಮದಿಂದ ಇಡೀ ಕರುನಾಡು ಹಸಿರಾಗಿ ಕಂಗೊಳಿಸಬೇಕಿತ್ತಲ್ಲವೇ? ಈ ಹಸಿರಿನ ಕಾರಣಕ್ಕೆ ಸಾಮಾಜಿಕ ಆರೋಗ್ಯ ನಳನಳಿಸುತ್ತಿರಬೇಕಿತ್ತಲ್ಲವೇ? ಇದೇ ಹಸಿರಿನ ಕಾರಣಕ್ಕೆ ಜಲಸಮೃದ್ಧಿ ಆಗಿರಬೇಕಿತ್ತಲ್ಲವೇ? ಆಗಿಲ್ಲವೆಂದರೆ, ನೆಟ್ಟ ಗಿಡಗಳನ್ನು ಭೂಮಿ ನುಂಗಿತೇ? ಮತ್ತೇನಾಯಿತು?

ರಾಜ್ಯದಲ್ಲಿನ 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ
ಇರುವ ಅರಣ್ಯ ಇಲಾಖೆಗೆ ಸೇರಿದ ನರ್ಸರಿಗಳಲ್ಲಿ ಪ್ರತಿವರ್ಷ ಲಕ್ಷಾಂತರ ಗಿಡಗಳನ್ನು ಬೆಳೆಸಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಬಜೆಟ್ ಮೀಸಲಾಗಿರುತ್ತದೆ. ಮಧ್ಯ ಪಶ್ಚಿಮಘಟ್ಟದ ಸಾಗರದಂತಹ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ಎರಡು ನರ್ಸರಿಗಳಿವೆ. ವರ್ಷಂಪ್ರತಿ ಈ ನರ್ಸರಿಗಳಲ್ಲಿ
ಕನಿಷ್ಠ ನಾಲ್ಕು ಲಕ್ಷ ಸಸಿಗಳನ್ನು ಬೆಳೆಸುತ್ತಾರೆ ಹಾಗೂ ಪ್ರತೀ ಮಳೆಗಾಲದಲ್ಲಿ ಇಲಾಖಾ ಪ್ಲಾಂಟೇಷನ್‌ಗಳಲ್ಲಿ ಹಾಗೂ ಸಾರ್ವಜನಿಕ ವಿತರಣೆಯ ಮೂಲಕ ಅವುಗಳನ್ನು ನೆಡಲಾಗುತ್ತದೆ. ರಾಜ್ಯದ ಇನ್ನೂರು ತಾಲ್ಲೂಕುಗಳಲ್ಲಿ ವರ್ಷಕ್ಕೆ ತಲಾ ಒಂದು ಲಕ್ಷ ಸಸಿಗಳನ್ನು ನೆಡಲಾಗುತ್ತದೆ ಎಂದು ಭಾವಿಸಿದರೆ, ಕಳೆದ 25 ವರ್ಷಗಳಲ್ಲಿ 50 ಕೋಟಿ ಸಸಿಗಳು ಭೂಮಿಗೆ ತಮ್ಮ ಬೇರಿಳಿಸಿ ಬೆಳೆಯಬೇಕಿತ್ತು. ಹಾಗಾಗಿಲ್ಲವೆಂದರೆ ಬೇರೆ ಏನೋ ಬಲವಾದ ಕಾರಣ ಇರಬೇಕಲ್ಲವೇ?

ಗಿಡಗಳನ್ನು ಬೆಳೆಸುವುದು ಕ್ರಮಬದ್ಧವಾಗಿ ನಡೆಯುವ ಒಂದು ಪ್ರಕ್ರಿಯೆ. ಇದು, ಅರಣ್ಯ ಇಲಾಖೆಯ ನರ್ಸರಿಗೂ ಅನ್ವಯಿಸುತ್ತದೆ, ಖಾಸಗಿ ನರ್ಸರಿಗೂ
ಅನ್ವಯಿಸುತ್ತದೆ. ಮೊದಲು ಎಲ್ಲಾ ಜಾತಿಯ ಬೀಜಗಳನ್ನು ಸಂಗ್ರಹಿಸಬೇಕು. ಅರಣ್ಯ ಇಲಾಖೆಯಲ್ಲಿ ಬೀಜಗಳನ್ನು ಸಂಗ್ರಹಿಸಲು ಪ್ರತ್ಯೇಕ ವಿಭಾಗವೇ ಇದೆ. ಕಾಡಿನಲ್ಲಿ ಬೆಳೆದ ಅತ್ಯುತ್ತಮ ತಾಯಿಮರದಿಂದ ಸಂಗ್ರಹಿಸಿದ ಬೀಜಗಳು ಒಳ್ಳೆಯ ಗಿಡಗಳ ಸೃಷ್ಟಿಗೆ ಕಾರಣವಾಗಬಲ್ಲವು. ಈ ಮೊದಲ ಹೆಜ್ಜೆಯಲ್ಲೇ ಎಡವಟ್ಟು ಆಗುವುದು ಹೆಚ್ಚು. ಬೀಜ ಸಂಗ್ರಹ ವಿಭಾಗವೂಬೀಜಗಳನ್ನು ಸಂಗ್ರಹಿಸಿ ಕೊಡಲು ಖಾಸಗಿ ವ್ಯಕ್ತಿಗಳನ್ನು ನೆಚ್ಚಿಕೊಂಡಿರುವುದೇ ಅದಕ್ಕೆ ಕಾರಣ.

ಕಾಡಿನಲ್ಲಿ ಸಿಗುವ ಎಲ್ಲಾ ಬಗೆಯ ದುರ್ಬಲ ಹಾಗೂ ಸಬಲ ಬೀಜಗಳು ಗುತ್ತಿಗೆದಾರರ ಮೂಲಕ ಅರಣ್ಯ ಇಲಾಖೆಯ ಬೀಜ ನಿರ್ವಹಣೆ ವಿಭಾಗಕ್ಕೆ ಬಂದು, ಅಲ್ಲಿಂದ ತಾಲ್ಲೂಕು ಅರಣ್ಯ ಕಚೇರಿಗಳಿಗೆ ರವಾನೆಯಾಗುತ್ತವೆ. ಇದೇ ಬೀಜಗಳು ಅರಣ್ಯ ಇಲಾಖೆಯ ನರ್ಸರಿಗಳನ್ನು ಸೇರುತ್ತವೆ. ಅಲ್ಲಿ ವಿಶೇಷ ಆರೈಕೆಯ ಮೂಲಕ ಮಡಿ ಮಾಡಿ ಸಸಿಗಳನ್ನು ಬೆಳೆಸಲಾಗುತ್ತದೆ.

ವಿವಿಧ ಗಿಡಗಳ ಬೆಳವಣಿಗೆಯ ಆಧಾರದ ಮೇಲೆ ವಿವಿಧ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಅವನ್ನು ಬೆಳೆಸಲಾಗುತ್ತದೆ.
ಗಿಡಗಳು ಆರೋಗ್ಯವಂತವಾಗಿ ಬೆಳೆಯಬೇಕು ಎಂಬ ದೃಷ್ಟಿಯಿಂದ ಕಾಲಕಾಲಕ್ಕೆ ಅವುಗಳಿಗೆ ರಾಸಾಯನಿಕ ಗೊಬ್ಬರವನ್ನು, ಬೇಸಿಗೆ ಮತ್ತು ಚಳಿಗಾಲದಲ್ಲಿ ಪ್ರತಿನಿತ್ಯ ಎರಡು ಬಾರಿ ನೀರನ್ನು ನೀಡಿ ಪೋಷಣೆ ಮಾಡುತ್ತಾರೆ. ಅದೇ ಗಿಡ ಒಂದಡಿ ಎತ್ತರ ಬೆಳೆಯುತ್ತಿದ್ದಂತೆಯೇ ಮತ್ತೊಂದು ದೊಡ್ಡ ಪ್ಲಾಸ್ಟಿಕ್ ತೊಟ್ಟೆಗೆ ಅದನ್ನು ಸ್ಥಳಾಂತರಿಸಲಾಗುತ್ತದೆ. ವೇಗವಾಗಿ ಬೆಳೆಯುವ ನೇರಳೆ ಸಸಿಗಳ ಬೇರುಗಳು ಆಳಕ್ಕಿಳಿಯಲು ಅವಕಾಶ ಸಿಗದೆ ತೊಟ್ಟೆಯಲ್ಲಿ ಸುರುಳಿ ಸುತ್ತಿಕೊಳ್ಳುತ್ತವೆ. ಒಮ್ಮೆ ಸುರುಳಿಯಾದ ಬೇರುಗಳು ಮತ್ತೆಂದೂ ಮೊದಲಿನ ಹಂತಕ್ಕೆ ಬರುವುದಿಲ್ಲ. ಆ ಗಿಡಗಳನ್ನು ನೀವು ನೆಟ್ಟರೂ ಅವುಗಳ ಬೆಳವಣಿಗೆ ಅತ್ಯಂತ ನಿಧಾನಗತಿಯಲ್ಲಿರುತ್ತದೆ. ಗಿಡ ಬೆಳೆಸುವ ಈ ಮಾದರಿಯನ್ನು ಅರಣ್ಯ ಇಲಾಖೆಯ ಬೀಜ ನಿರ್ವಹಣೆ ವಿಭಾಗ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಗಳ ವೈಫಲ್ಯವೆಂದು ಕರೆಯಬಹುದು. ನೇರಳೆ ಬೀಜವನ್ನು ನೇರವಾಗಿ ಭೂಮಿಯೊಳಕ್ಕೆ ಹಾಕಿದರೆ ಯಾವುದೇ ವಿಶೇಷ ಆರೈಕೆ ಇಲ್ಲದೆ ಅದು ವೇಗವಾಗಿ ಬೆಳೆಯಬಲ್ಲದು.

ನರ್ಸರಿಯ ಗಿಡಗಳ ಆರೋಗ್ಯ ತಪಾಸಣೆಯು ಪ್ರತಿವರ್ಷ ನಡೆಯುತ್ತದೆ. ಅರಣ್ಯ ಇಲಾಖೆಯ ಮೇಲಧಿಕಾರಿಗಳು ನಡೆಸುವ ಈ ತಪಾಸಣೆಯಲ್ಲಿ ಗಿಡಗಳ ಆರೋಗ್ಯ ಉತ್ತಮವಾಗಿಲ್ಲ ಎಂದು ಗೊತ್ತಾದರೆ ಕುತ್ತು ಬರುವುದು ಅಲ್ಲಿನ ವಲಯ ಅರಣ್ಯಾಧಿಕಾರಿಗೆ.
ಆ ಅಧಿಕಾರಿಯ ಸೇವಾ ದಾಖಲೆಯಲ್ಲಿ ಒಂದು ಕಪ್ಪುಚುಕ್ಕೆ ಬಿತ್ತೆಂದು ಅರ್ಥ. ಆದಕಾರಣ ಸಸಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು ಅನಿವಾರ್ಯ ಆಗಿರುತ್ತದೆ. ಅದಕ್ಕಾಗಿ ನೈಸರ್ಗಿಕ ವಿಧಾನಗಳಿಂದ ದೂರ ಸರಿದು, ರಸಗೊಬ್ಬರಗಳನ್ನು ಬಳಸುವುದುಂಟು.ಮೂರು ವರ್ಷಗಳ ನಂತರ ಅವುಗಳು ನೆಡಲಿಕ್ಕೆ ಅರ್ಹವಾಗುತ್ತವೆ.

ಇಲ್ಲೊಂದು ತಾಂತ್ರಿಕ ಸಮಸ್ಯೆ ಇದೆ. ಮೂರು ವರ್ಷಗಳ ಕಾಲ ಯಥೇಚ್ಛ ನೀರು, ರಸಗೊಬ್ಬರ ಪಡೆದು ಬೆಳೆದ ಗಿಡಗಳನ್ನು ಮಳೆಗಾಲದಲ್ಲಿ ಪ್ಲಾಂಟೇಷನ್‌ನಲ್ಲಿ ನೆಟ್ಟರೆ, ಚಳಿಗಾಲದಲ್ಲಿ ಅವು ಬದುಕಲಾರವು. ಅವುಗಳ ನೈಸರ್ಗಿಕ ಚಕ್ರವನ್ನು ಮುಂದಿನ ಬದುಕಿನ ಹೋರಾಟಕ್ಕೆ ಸಜ್ಜುಗೊಳಿಸಿ ಆ ನಂತರ ನೆಟ್ಟರೆ ಬದುಕುವ ಸಂಭವ ಹೆಚ್ಚು. ಆ ಕಾರಣಕ್ಕಾಗಿಯೇ ಮೂರು ವರ್ಷ ಬೆಳೆದ ಗಿಡಗಳನ್ನು ನೆಡುವುದಕ್ಕೂ ಮುಂಚಿನ ಒಂದು ತಿಂಗಳು ಗೊಬ್ಬರ, ನೀರು ನೀಡುವುದನ್ನು ನಿಲ್ಲಿಸಿ, ಕಷ್ಟದ ವಾತಾವರಣಕ್ಕೆ ಹೊಂದಿಕೊಳ್ಳಲು ಸಜ್ಜುಗೊಳಿಸಬೇಕು. ಇದಕ್ಕೆ ಹಾರ್ಡನಿಂಗ್ ಎಂದು ಕರೆಯುತ್ತಾರೆ.

ಈ ಪ್ರಕ್ರಿಯೆಯಲ್ಲಿ ಹಲವು ಗಿಡಗಳು ಸತ್ತುಹೋಗುವ ಅಪಾಯವೂ ಇರುತ್ತದೆ. ಆಗ ಮತ್ತೆ ಅಪಾಯ ಬರುವುದು ಸ್ಥಳೀಯ ಅಧಿಕಾರಿಗೆ. ಅಧಿಕಾರಿಯ ಸೇವಾ ದಾಖಲೆಯಲ್ಲಿ ಮತ್ತೊಂದು ಕಪ್ಪುಚುಕ್ಕೆ ಮೂಡುತ್ತದೆ. ಹಾಗಾಗಿ ಈ ಹಾರ್ಡನಿಂಗ್ ಪ್ರಕ್ರಿಯೆ ನಡೆಯುವುದಿಲ್ಲ. ಇದನ್ನು ಬೇಕಾದರೆ ನೀವು ಆಡಳಿತ ವೈಫಲ್ಯವೆಂದು ಕರೆಯಬಹುದು.

ಒಂದು ಹದ ಮಳೆ ಬಿದ್ದು, ಬಿಸಿಲು ಬಂದು ಮತ್ತೆ ನೆಲ ಕಾಯಬೇಕು. ನೆಟ್ಟ ಗಿಡಗಳಿಗೆ ಬೇರು ಬಿಡಲು ಆಗ ಸೂಕ್ತ ವಾತಾವರಣ ಇರುತ್ತದೆ. ಇಷ್ಟು ವೈಜ್ಞಾನಿಕವಾಗಿ ಕೆಲಸ ಮಾಡುವ ಕಲೆ ನಮ್ಮ ಯಾವ ಇಲಾಖೆಗೂ ಸಿದ್ಧಿಸಿಲ್ಲ. ಒಬ್ಬ ವಲಯ ಅರಣ್ಯಾಧಿಕಾರಿಯ ವ್ಯಾಪ್ತಿಯಲ್ಲಿ ಎರಡು ಲಕ್ಷ ಸಸಿಗಳನ್ನು ನೆಡುವ ಗುರಿಯಿದೆ ಎಂದುಕೊಳ್ಳಿ. ಜೂನ್ ಐದರಿಂದ ಸಸಿಗಳನ್ನು ನೆಡಲು ಪ್ರಾರಂಭಿಸಿದರೆ ಮಳೆಗಾಲ ಮುಗಿಯುವ ಸೆಪ್ಟೆಂಬರ್‌ವರೆಗೂ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿರುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳ ಜೋರು ಮಳೆಗಾಲದಲ್ಲಿ ನೆಟ್ಟ ಗಿಡಗಳ ಬೇರು ಕೊಳೆತು ಸಾಯುವ ಪ್ರಮಾಣ ಹೆಚ್ಚಿರುತ್ತದೆ. ಇದನ್ನು ಅನುಷ್ಠಾನ ವೈಫಲ್ಯವೆಂದು ಕರೆಯಬಹುದು.

ಇನ್ನು ಗಿಡಗಳನ್ನು ನೆಟ್ಟ ನಂತರದ ಮೂರು ವರ್ಷಗಳ ಕಾಲ ಅವುಗಳ ನಿರ್ವಹಣೆ ಮಾಡಬೇಕು. ಬೇಸಿಗೆಯಲ್ಲಿ ಬೆಂಕಿಗೆ ಆಹುತಿಯಾಗದಂತೆ ನೋಡಿಕೊಳ್ಳಬೇಕು, ಜಾನುವಾರುಗಳ ಬಾಯಿಗೆ ಸಿಗದಂತೆ ಕಾಯಬೇಕು, ಒತ್ತುವರಿ ಹುನ್ನಾರ ಇಟ್ಟುಕೊಂಡವರು ನೆಟ್ಟ ಗಿಡಗಳನ್ನು ಸವರಿ ಹಾಕದಂತೆ ನೋಡಿಕೊಳ್ಳಬೇಕು. ಇಂತಹ ಕೆಲಸಗಳನ್ನು ಇಲಾಖೆಯಲ್ಲಿ ನಿಯೋಜಿತರಾದ ಗಾರ್ಡುಗಳು ಮಾಡಬೇಕು.

ಇಂತಹ ಮುಂಚೂಣಿ ಸಿಬ್ಬಂದಿಯ ತೀವ್ರವಾದ ಕೊರತೆ ಇಲಾಖೆಯಲ್ಲಿದೆ. ಈ ಕೊರತೆಯನ್ನು ನೀಗಿಸಲು ದಿನಗೂಲಿ ವಾಚರ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಅವರಿಗೆ ಕಾಲಕಾಲಕ್ಕೆ ಸಂಬಳ ನೀಡಲು ಇಲಾಖೆ ಪರದಾಡುತ್ತಿದೆ. ಹೀಗಾಗಿ, ಕುಟುಂಬ ಸಾಕಲು ಇವರೂ ಅನಿವಾರ್ಯವಾಗಿ ಕಳ್ಳತನವನ್ನು ಬೆಂಬಲಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಬೇಕಾದರೆ ಸರ್ಕಾರದ ವೈಫಲ್ಯವೆಂದು ನೇರವಾಗಿ ಕರೆಯಬಹುದು.

ಕೊನೆಯದಾಗಿ, ಗಿಡವನ್ನು ಹೇಗೆ ನೆಡಬೇಕು ಎಂಬುದನ್ನು ನೋಡೋಣ. 3 ಅಡಿ ಆಳ, ಅಗಲ ಗುಂಡಿಯನ್ನು ತೆಗೆಯಬೇಕು. ಮೇಲೆ ಸಿಗುವ ಒಂದೂವರೆ ಅಡಿ ಮೇಲ್ಮಣ್ಣನ್ನು ಮತ್ತೆ ಗುಂಡಿಯ ಒಳಕ್ಕೆ ಹಾಕಬೇಕು. ನಂತರದಲ್ಲಿ ಗಿಡವನ್ನು ನೆಟ್ಟು, ಗಿಡದ ಬುಡವನ್ನು ತುಳಿದು ಗಟ್ಟಿಗೊಳಿಸಬೇಕು. ನಂತರದಲ್ಲಿ ಉಳಿದ ಮಣ್ಣನ್ನು ಮುಚ್ಚಿ, ನೆಟ್ಟ ಗಿಡವು ಗಾಳಿಗೆ ಅಲ್ಲಾಡದಂತೆ ತಡೆಯಲು ಕೋಲು ನಿಲ್ಲಿಸಿ ಹಗ್ಗ ಕಟ್ಟಬೇಕು. ಇದು ಯಾವುದೂ ಸಾಧ್ಯವಾಗುವುದಿಲ್ಲ.

ಪ್ಲಾಸ್ಟಿಕ್ ತೊಟ್ಟೆಗಳ ಸಮೇತ ನೆಟ್ಟ ಗಿಡಗಳ ಲೆಕ್ಕವಾಗಲೀ ತಂದ ಗಿಡಗಳನ್ನು ನೆಡದೆ ಹಾಗೇ ಬಿಟ್ಟ ಗಿಡಗಳ ಲೆಕ್ಕವಾಗಲೀ ಯಾರಿಗೂ ಸಿಗುವುದೇ ಇಲ್ಲ. ಈ ವರ್ಷ ಇಂತಿಷ್ಟು ಲಕ್ಷ ಗಿಡಗಳನ್ನು ಇಂತಿಂತಲ್ಲಿ ನೆಡಲಾಯಿತು ಎಂಬ ಅಂಕಿ-ಅಂಶವು ಇಲಾಖೆಯ ದತ್ತಾಂಶ ಕೋಣೆಯಲ್ಲಿ ಲಭ್ಯವಾಗುತ್ತದೆಯೇ ವಿನಾ ವಾಸ್ತವದ ಅಂಕಿಅಂಶಗಳು ಬೇರೆಯದೇ ಕತೆ ಹೇಳುತ್ತವೆ. ಇದನ್ನು ಸಾಮೂಹಿಕ ಪ್ರಜ್ಞೆಯ ವೈಫಲ್ಯವೆಂದು ಕರೆಯೋಣವೇ? ಮುಂದಿನ ದಿನಗಳಲ್ಲಿ ಇಂತಹ ವೈಫಲ್ಯಗಳನ್ನು ಮೀರಿ ಅರಣ್ಯ ಬೆಳೆಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT