ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ವಿಶ್ವವಿದ್ಯಾಲಯಗಳಲ್ಲಿ ಉದ್ಯಮದ ಪರಿಣತರು

ಈ ಬಗೆಯ ಪರಿಣತಿಯಲ್ಲಿ ಆಳವುಂಟು, ಅಗಲವಿಲ್ಲ ಎಂಬ ಟೀಕೆಗೆ ಯುಜಿಸಿ ಹೇಗೆ ಉತ್ತರ ಕಂಡುಕೊಳ್ಳಲಿದೆ?
Last Updated 23 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

2020ರಲ್ಲಿ ಅನುಮೋದನೆ ದೊರೆತು ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ವೃತ್ತಿಪರ, ಉದ್ಯೋಗಾರ್ಹ, ಉದ್ಯಮಶೀಲ ಕೌಶಲಗಳನ್ನು ಬೆಳೆಸಿ, ಪೋಷಿಸಿ, ಸಂವರ್ಧಿಸುವ ಸವಾಲುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಪ್ರಯತ್ನದ ಭಾಗವಾಗಿ, ಕೈಗಾರಿಕಾ ಕ್ಷೇತ್ರದ ಪರಿಣತರು, ಉದ್ಯಮದ ನಾಯಕರನ್ನು ವಿಶ್ವವಿ
ದ್ಯಾಲಯಗಳಲ್ಲಿ ನೇಮಕ ಮಾಡಿಕೊಂಡು, ಅವರ ಅನುಭವ, ಪರಿಣತಿಗಳನ್ನು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಬಳಸಿಕೊಳ್ಳುವ ಯೋಜನೆಗೆ ಸಂಬಂಧಿಸಿದಂತೆ ಕರಡು ಮಾರ್ಗದರ್ಶಿ ಸೂತ್ರಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆಗಸ್ಟ್ 23ರಂದು ಪ್ರಕಟಿಸಿದೆ. ಆ ಕ್ಷೇತ್ರದಲ್ಲಿನ ವಿದ್ವಾಂಸರು ಹಾಗೂ ಆಸಕ್ತ ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಆಹ್ವಾನಿಸಿದೆ.

ಈ ಮಾರ್ಗದರ್ಶಿ ಸೂತ್ರಗಳ ಅನ್ವಯ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಮಾಧ್ಯಮ, ವಾಣಿಜ್ಯ ವ್ಯವಹಾರ, ಉದ್ಯಮಶೀಲತೆ, ಸಮಾಜವಿಜ್ಞಾನ, ನಾಗರಿಕ ಸೇವೆ, ನ್ಯಾಯಾಂಗ, ಭಾರತೀಯ ಸೇನೆಯಂಥ ಕೇತ್ರಗಳಲ್ಲಿ ಕನಿಷ್ಠ 15 ವರ್ಷ ಉತ್ತಮ ಸೇವೆ ಸಲ್ಲಿಸಿ, ಗಣನೀಯ ಕೊಡುಗೆ ನೀಡಿರುವ ಪ್ರತಿಭಾವಂತರನ್ನು ಆಯ್ಕೆ ಮಾಡಿ, ‘ಪ್ರೊಫೆಸರ್ ಆಫ್ ಪ್ರ್ಯಾಕ್ಟಿಸ್’ ಎಂಬ ಹೊಸ ಪದನಾಮ ನೀಡಿ, ವಿಶ್ವವಿದ್ಯಾಲಯಗಳು ನೇಮಿಸಿಕೊಳ್ಳಬಹುದು. ಈ ನೂತನ ವರ್ಗದ ಪ್ರಾಧ್ಯಾಪಕರಿಗೆ ಔಪಚಾರಿಕ ಶೈಕ್ಷಣಿಕ ಅರ್ಹತೆ, ಪಿಎಚ್‌.ಡಿ, ಬೋಧನೆ ಮತ್ತು ಸಂಶೋಧನೆಯ ಅನುಭವಗಳು ಸ್ವಾಗತಾರ್ಹವಾದರೂ ಕಡ್ಡಾಯವಲ್ಲ. ಸಾಂಪ್ರದಾಯಿಕ ಪ್ರಾಧ್ಯಾಪಕರಂತೆ, ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕೆಂಬ ಒತ್ತಡವೂ ಅವರ ಮೇಲಿರುವುದಿಲ್ಲ. ಆದರೆ ಅಂತಹ ಹುದ್ದೆಯ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವಿರಬೇಕು.ಕೈಗಾರಿಕಾ ಕ್ಷೇತ್ರದ ನೈಜ ಸನ್ನಿವೇಶಗಳು, ಸಮಸ್ಯೆ, ಸವಾಲುಗಳನ್ನು ತರಗತಿಯೊಳಗೆ ತಂದು, ವಿಶ್ಲೇಷಿಸಿ ಅವುಗಳನ್ನು ನಿರ್ವಹಿಸುವ ರೀತಿ, ಚಿಂತನಾಕ್ರಮ, ವಿವೇಕಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಪೋಷಿಸಬೇಕು. ಉದ್ಯಮಶೀಲತೆ, ನಾವೀನ್ಯಗಳನ್ನು ಬೆಳೆಸಲು ಅಗತ್ಯವಾದ ಪಠ್ಯವಸ್ತು, ಪಾಠ ಪ್ರವಚನಗಳನ್ನು ವಿನ್ಯಾಸಗೊಳಿಸಬೇಕು. ವಿಶ್ವವಿದ್ಯಾಲಯ ಮತ್ತು ಉದ್ಯಮಗಳ ನಡುವೆ ಸಂಪರ್ಕಸೇತುವಾಗಬೇಕು. ನೇಮಕಾತಿಯ ಅವಧಿ ಮೂರು ವರ್ಷಗಳಿಗೆ ಸೀಮಿತವಾಗಿದೆ. ವಿಶೇಷ ಸಂದರ್ಭಗಳಲ್ಲಿ ಇನ್ನೊಂದು ವರ್ಷ ವಿಸ್ತರಿಸಲು ಅವಕಾಶವುಂಟು. ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳಿಗೆ ಮಂಜೂರಾಗಿರುವ ಒಟ್ಟು ಪ್ರಾಧ್ಯಾಪಕ ಹುದ್ದೆಗಳ ಶೇ 10ಕ್ಕೆ ಮೀರದಂತೆ ಪ್ರೊಫೆಸರ್ ಆಫ್ಪ್ರ್ಯಾಕ್ಟಿಸ್ ಹುದ್ದೆಗಳಿರಬಹುದು. ಈ ಹುದ್ದೆಗಳಿಂದ, ಆಯಾ ವಿಭಾಗದಲ್ಲಿ ಈಗಾಗಲೇ ವಿಧ್ಯುಕ್ತವಾಗಿ ನೇಮಕಗೊಂಡಿರುವ ಪ್ರಾಧ್ಯಾಪಕರ ಸೇವಾ ಸ್ಥಿತಿಗತಿಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.

ಇಂತಹ ಪರಿಣತರ ನೇಮಕಕ್ಕೆ ಉದ್ಯಮಗಳೇ ವಿಶ್ವವಿದ್ಯಾಲಯಗಳಿಗೆ ಧನಸಹಾಯ ನೀಡಬಹುದು ಅಥವಾ ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಗಳೇ ತಾವಾಗಿಯೇ ಮುಂದಾಗಿ ನೇಮಿಸಿಕೊಳ್ಳಬಹುದು. ಯಾವುದೇ ಹಣಕಾಸಿನ ನಿರೀಕ್ಷೆಯಿಲ್ಲದೆ, ಸೇವೆಯ ದೃಷ್ಟಿಯಿಂದ ಮುಂದೆ ಬರುವ ಪರಿಣತರನ್ನೂ ಪರಿಗಣಿಸಬಹುದು.ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ನೂತನ ಪದನಾಮದ ಪ್ರಾಧ್ಯಾಪಕರು ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜುಗಳಲ್ಲಿ ಕೆಲಸ ಪ್ರಾರಂಭಿಸುವಂತೆ ಆಗಬೇಕೆಂಬುದು ಯುಜಿಸಿಯ ನಿರೀಕ್ಷೆ. ಈ ಯೋಜನೆ ಮತ್ತು ಮಾರ್ಗದರ್ಶಿ ಸೂತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿದ್ದು ಚರ್ಚೆಗಳು ನಡೆಯುತ್ತಿವೆ.

ಶಿಕ್ಷಣೇತರ ಕ್ಷೇತ್ರಗಳ ವೃತ್ತಿಜೀವನದಲ್ಲಿ ಗಳಿಸಿದ ಅನುಭವ, ಕೌಶಲ, ಪರಿಣತಿಗಳನ್ನು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ವರ್ಗಾಯಿಸಿ ಅವರನ್ನು ಉದ್ಯೋಗಸಿದ್ಧ
ರನ್ನಾಗಿ ಮಾಡುವ ಪದ್ಧತಿಯು ವಿದೇಶಿ ವಿಶ್ವವಿದ್ಯಾಲಯ
ಗಳಲ್ಲಿ ಬಹು ಸಾಮಾನ್ಯ. ಅಂತಹ ಪರಿಣತರಿಗೆ ‘ಪ್ರೊಫೆಸರ್ ಆಫ್ಪ್ರ್ಯಾಕ್ಟಿಸ್‌’, ‘ಪ್ರ್ಯಾಕ್ಟಿಸ್‌ ಪ್ರೊಫೆಸರ್’, ‘ಕ್ಲಿನಿಕಲ್ ಪ್ರೊಫೆಸರ್’ ಮುಂತಾದ ಪದನಾಮಗಳಿವೆ.

ಉದ್ಯಮದ ಪರಿಣತರನ್ನು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಬೋಧನಾ ಉದ್ದೇಶಕ್ಕಾಗಿ ನೇಮಿಸಿಕೊಳ್ಳುವ ಪದ್ಧತಿ ನಮ್ಮ ದೇಶಕ್ಕೂ ಹೊಸದೇನಲ್ಲ. ಸುಮಾರು 25 ವರ್ಷಗಳಿಂದ ವಿದ್ಯಾಸಂಸ್ಥೆಗಳು ಉದ್ಯಮದ ಪರಿಣತರನ್ನು ನೇಮಿಸಿಕೊಂಡು, ಅವರ ಸೇವೆಯನ್ನು ಬಳಸಿಕೊಂಡು ಬಂದಿವೆ. ಅಂತಹ ಪದ್ಧತಿಯಲ್ಲಿ ಕ್ರಮಬದ್ಧವಾದ ಏಕರೂಪತೆಯನ್ನು
ತಂದು, ಹೆಚ್ಚು ವ್ಯವಸ್ಥಿತಗೊಳಿಸಿ, ಬೋಧನೆಯ ಜೊತೆಗೆ ಮತ್ತಷ್ಟು ಹೊಸ ಜವಾಬ್ದಾರಿಗಳನ್ನು ಸೇರಿಸುವ ಉದ್ದೇಶದಿಂದ, 2015ರಲ್ಲಿ ಯುಜಿಸಿಯು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. 2015 ಮತ್ತು 2022ರ ಈಗಿನ ಯುಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಹೋಲಿಸಿ ನೋಡಿದರೆ, ಉದ್ಯಮದ ಪರಿಣತರನ್ನು ವಿಶ್ವವಿದ್ಯಾಲಯಗಳಲ್ಲಿ ನೇಮಿಸಿಕೊಳ್ಳುವ ಉದ್ದೇಶ, ವಿಧಾನ, ಸೇವಾ ನಿಯಮಗಳು, ಅವರ ಕರ್ತವ್ಯ, ಜವಾಬ್ದಾರಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡುಬರುವುದಿಲ್ಲ.

2015ರಲ್ಲಿ ಯುಜಿಸಿ ಪ್ರಕಟಿಸಿದ ಮಾರ್ಗದರ್ಶಿ ಸೂತ್ರಗಳಿಗೆ ವಿಶ್ವವಿದ್ಯಾಲಯಗಳೂ ಸೇರಿದಂತೆ ಶಿಕ್ಷಣ ಕ್ಷೇತ್ರದಿಂದ ಯಾವ ವಿಶೇಷ ಪ್ರತಿಕ್ರಿಯೆಯೂ ಬರಲಿಲ್ಲ. ಆ ಪ್ರಕಟಣೆಯಲ್ಲಿ, ವಿಶ್ವವಿದ್ಯಾಲಯಗಳಿಗೆ ಬರುವ ಉದ್ಯಮದ ಪರಿಣತರಿಗೆ, ‘ಅಡ್ಜಂಕ್ಟ್ ಫ್ಯಾಕಲ್ಟಿ’ (ಆನುಷಂಗಿಕ ಬೋಧಕ ವರ್ಗ) ಎಂಬ ಪದನಾಮವನ್ನು ನೀಡಲಾಗಿತ್ತು. ಆದರೆ ಈಗಿನ ಸೂತ್ರದಲ್ಲಿ, ಶೈಕ್ಷಣಿಕ ಅರ್ಹತೆಯಿಂದ ವಿನಾಯಿತಿ ಪಡೆದ, ಪಿಎಚ್‍.ಡಿ ಪದವಿಯಿಲ್ಲದ ಉದ್ಯಮದ ಪರಿಣತರಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪಟ್ಟ ನೀಡುವ ಪ್ರಸ್ತಾಪವಿದ್ದು ಅದಕ್ಕೆ ತೀವ್ರ ವಿರೋಧ ಕಂಡುಬರುತ್ತಿದೆ. ‘ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಹುದ್ದೆ ಆಳವಾದ ಜ್ಞಾನ, ಪ್ರಬುದ್ಧವಾದ ಚಿಂತನೆ, ವಿಸ್ತಾರವಾದ ಅನುಭವಗಳ ಪ್ರತೀಕ. ತಮ್ಮ ಅಧ್ಯಯನ ಕ್ಷೇತ್ರದ ಎಲ್ಲ ಪ್ರಚಲಿತ ಸಂಶೋಧನೆ, ಬೆಳವಣಿಗೆಗಳ ವಿಸ್ತಾರವಾದ, ಸಮಗ್ರ ಪರಿಚಯವಿರುವ ಪ್ರಾಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ದೊರೆಯುವ ಜ್ಞಾನ, ಮಾರ್ಗದರ್ಶನ ಬಹಳ ಮೌಲಿಕವಾದುದು. ಅಂಥವರು ರೂಪಿಸುವ ಪಠ್ಯವಸ್ತು, ಪಾಠ, ಪ್ರವಚನಗಳು, ಆ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ವಿಶ್ಲೇಷಣಾತ್ಮಕವಾಗಿ ಬಿಡಿಸಲು ಅಗತ್ಯವಾದ, ಭದ್ರವಾದ ಬುನಾದಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ. ಉದ್ಯಮಗಳ ಪರಿಣತರ ಪರಿಸ್ಥಿತಿಯೇ ಬೇರೆ. ಅವರ ಪರಿಣತಿಯ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಪರಿಣತಿ ಒಂದು ಸೂಕ್ಷ್ಮವಾದ, ಸಣ್ಣ ಕ್ಷೇತ್ರಕ್ಕೆ ಮಾತ್ರ ಸೀಮಿತ. ಆ ಪರಿಣತಿಯಲ್ಲಿ ಆಳವುಂಟು, ಆದರೆ ಅಗಲವಿಲ್ಲ. ಅಂಥವರಿಂದ ಸೀಮಿತ ಕ್ಷೇತ್ರದ, ನಿರ್ದಿಷ್ಟ ಸಮಸ್ಯೆಯನ್ನು ಬಗೆಹರಿಸುವ ಕೌಶಲ ದೊರೆಯಬಹುದೇ ಹೊರತಾಗಿ ವಿಶಾಲ ವ್ಯಾಪ್ತಿಯ ಸಮಗ್ರ ಜ್ಞಾನ ಲಭಿಸುವುದಿಲ್ಲ. ಹೀಗಾಗಿ ಅಂತಹ ಪರಿಣತರನ್ನು ‘ಪ್ರೊಫೆಸರ್ ಆಫ್ಪ್ರ್ಯಾಕ್ಟಿಸ್’ ಎಂದು ಗುರುತಿಸುವುದು ಗೊಂದಲಕ್ಕೆ ಕಾರಣವಾಗುತ್ತದೆ’ ಎನ್ನುವುದು ಶೈಕ್ಷಣಿಕ ವಲಯದಿಂದ ಬಂದಿರುವ ಟೀಕೆ. ಈ ಕಾರಣಕ್ಕಾಗಿಯೇ ಈ ಪ್ರಸ್ತಾವ
ವನ್ನು ವಿರೋಧಿಸುವುದಾಗಿ ದೆಹಲಿಯ ಶಿಕ್ಷಕರ ಸಂಘಟನೆ ಹೇಳಿದೆ. ಆದರೆ ಗುಣಮಟ್ಟ ಕುಸಿದು, ಶೈಕ್ಷಣಿಕ ವಾತಾವರಣ ಹದಗೆಟ್ಟು ಹೋಗಿರುವ ನಮ್ಮ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸ್ವತಃ ನಿರಂತರವಾಗಿ ಕಲಿಯುತ್ತ, ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಕಲಿಸುವ ಆಚಾರ್ಯರೂಪಿ ಪ್ರಾಧ್ಯಾಪಕರು ಬಹು ಅಪರೂಪವೆಂಬುದೂ ಸತ್ಯ.

2015ರಲ್ಲಿ ಯುಜಿಸಿ ಪ್ರಕಟಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿದ್ದ ಕೊರತೆಗಳೇನು, ಯಾವ ಕಾರಣಗಳಿಂದ ನಿರೀಕ್ಷಿತ ಫಲಿತಾಂಶ ದೊರೆಯಲಿಲ್ಲ, 2022ರ ಮಾರ್ಗದರ್ಶಿ ಸೂತ್ರಗಳಲ್ಲಿ ಆ ಸಮಸ್ಯೆಗಳನ್ನು ಹೇಗೆ ಪರಿಹರಿಸಲಾಗಿದೆ ಮುಂತಾದ ಪ್ರಶ್ನೆಗಳಿಗೆ ಯಾವ ಸ್ಪಷ್ಟ ಉತ್ತರವೂ ದೊರೆಯುವುದಿಲ್ಲವೆಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ. ಈ ಮಧ್ಯೆ ಅನೇಕ ಐಐಟಿ, ಐಐಎಂಗಳು ಇಂತಹ ಗೊಂದಲಗಳಿಲ್ಲದೇ ಉದ್ಯಮದ ಉತ್ಕೃಷ್ಟ ಪರಿಣತರ ಸೇವೆಯನ್ನು ಬಳಸಿಕೊಳ್ಳುತ್ತಿವೆ. ಅಧ್ಯಯನದ ಶಿಸ್ತಿಗೆ ಭದ್ರ ಬುನಾದಿ, ವಿಶಾಲ ದೃಷ್ಟಿಯನ್ನೊ
ದಗಿಸುವ ಕೆಲಸವನ್ನು ಪ್ರಾಧ್ಯಾಪಕರು ಮಾಡಿದರೆ, ಉದ್ಯಮ ರಂಗದಲ್ಲಿನ ಸಂಬಂಧಿತ ಕೆಲಸಗಳನ್ನು ಸಮರ್ಪಕವಾಗಿ, ಅಚ್ಚುಕಟ್ಟಾಗಿ, ಮಾಡಿಮುಗಿಸಲು ಬೇಕಾದ ಕೌಶಲ, ನೈಪುಣ್ಯಗಳನ್ನು ಉದ್ಯಮದ ಪರಿಣತರು ರೂಪಿಸುತ್ತಾರೆ. ಅನೇಕ ಪ್ರತಿಷ್ಠಿತ ಕಾಲೇಜುಗಳು ಸದ್ದು ಗದ್ದಲಗಳಿಲ್ಲದೇ ಐಐಟಿ, ಐಐಎಂಗಳ ಮಾದರಿಯನ್ನು ಅನುಸರಿಸುತ್ತಿರುವುದೂ ಉಂಟು. 2022ರ ಯುಜಿಸಿ ಮಾರ್ಗದರ್ಶಿ ಸೂತ್ರಗಳಿಗೆ, ಟೀಕೆಗಳ ಜೊತೆಗೆ ಅನೇಕ ಸಲಹೆ, ಸೂಚನೆಗಳು ಬಂದಿರುವ ವರದಿಗಳಿವೆ. ಇವುಗಳ ಹಿನ್ನೆಲೆಯಲ್ಲಿ ಯುಜಿಸಿ, ಈ ಯೋಜನೆಯಲ್ಲಿ ಎಂತಹ ಬದಲಾವಣೆಗಳನ್ನು ತರಲಿದೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT