ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹೊಸ ವರ್ಷ, ಹೊಸ ಅರ್ಥಗಳ ಧ್ಯಾನ

ಹೊಸ ಭಾಷೆ, ಹೊಸ ನುಡಿಗಟ್ಟು, ಹೊಸ ಕ್ರಿಯೆಗಳ ಸೃಷ್ಟಿಯ ಹೊಣೆ ಎಲ್ಲರಲ್ಲಿರಲಿ
Last Updated 1 ಜನವರಿ 2023, 19:45 IST
ಅಕ್ಷರ ಗಾತ್ರ

ಹಳೆ ವರ್ಷ ಕಳೆದು, ಹೊಸ ವರ್ಷ ಬರುವ ದಿನ ಇದ್ದಕ್ಕಿದ್ದಂತೆ ಟಿ.ಎಸ್. ಎಲಿಯಟ್ ಕವಿತೆಯ ಸಾಲುಗಳು ನೆನಪಾಗುತ್ತವೆ:

ಕಳೆದ ವರ್ಷದ ಶಬ್ದಗಳು

ಕಳೆದ ವರ್ಷಕ್ಕೆ ಸೇರುವುವು

ಕಳೆದ ವರ್ಷ ಸಾರ್ವಜನಿಕ ವಲಯದಲ್ಲಿ ಮತ್ತೆ ಮತ್ತೆ ಕೇಳಿಬಂದ ದ್ವೇಷದ, ಒಡಕಿನ, ದುರಹಂಕಾರದ ಅಸಹ್ಯಕರ ಶಬ್ದಗಳು ನೆನಪಾದಾಗ ಈ ಕವಿವಾಣಿ ವಾಚ್ಯಾರ್ಥದಲ್ಲಾದರೂ ನಿಜವಾಗಲಿ ಎನ್ನಿಸುತ್ತದೆ!

ಮನೆಯಲ್ಲಿ ಚಾಕು ಚೂರಿ ರೆಡಿಯಿಟ್ಟುಕೊಳ್ಳಿ ಎಂಬಂಥ ಚೀತ್ಕಾರಗಳನ್ನು ಕಳೆದ ವರ್ಷದ ಕಸದಬುಟ್ಟಿಗೆ ಎಸೆದು, ‘ಮನೆಯಲ್ಲಿ ಒಳ್ಳೊಳ್ಳೆಯ ಪುಸ್ತಕ ಇಟ್ಟುಕೊಳ್ಳಿ’, ‘ಒಳ್ಳೊಳ್ಳೆಯ ಹಾಡುಗಳನ್ನು ಕೇಳಿಸಿಕೊಳ್ಳಿ’, ‘ಬಡ ಹುಡುಗ, ಹುಡುಗಿಯರಿಗೆ ನೆರವಾಗಿ’ ಎಂಬಂಥ ಹಳೆಯ ಸನ್ಮಾರ್ಗದ ಮಾತುಗಳನ್ನು ಹೊಸದಾಗಿ ಕೇಳಿಸಿಕೊಳ್ಳಲು ಜನ ತಯಾರಾಗಲಿ ಎಂದು ಹಾರೈಸಬೇಕೆನ್ನಿಸುತ್ತದೆ.

ಮಾಧ್ಯಮಗಳಲ್ಲಿ ನಿತ್ಯ ಕಾಣಿಸಿಕೊಳ್ಳುವ ನಾಯಕರು, ಧರ್ಮಗುರುಗಳು, ಚರ್ಚಾಪಟುಗಳು ಬಾಯಿತಪ್ಪಿಯಾದರೂ ಒಳ್ಳೆಯ ಮಾತುಗಳನ್ನಾಡಲು ಹೊಸ ವರ್ಷವಾದರೂ ನೆಪವಾಗಬಹುದೆ? ಸಮಾಜದ ರೋಗಗಳ ವಿರುದ್ಧ ಪ್ರಾಮಾಣಿಕವಾಗಿ ಹೋರಾಡುವವರು ಕೂಡ, ‘ಅಲ್ಪಕಾಲ ಕೆಡುಕಿನ ವಿರುದ್ಧ ಹೋರಾಟ; ದೀರ್ಘಕಾಲ ಒಳಿತಿನ ಜೊತೆಗೆ ಶಾಂತಿ’ ಎಂಬ ಲೋಹಿಯಾ ಮಾತಿನಲ್ಲಿರುವ ವಿವೇಕವನ್ನು ಮೆಲುಕು ಹಾಕಬಹುದೆ? ರಾಕ್ಷಸರ ವಿರುದ್ಧ ಮಾತಾಡುವವರು ತಾವೇ ರಾಕ್ಷಸರಾಗಿಬಿಡುವ ಅಪಾಯ ಕುರಿತ ತತ್ವಜ್ಞಾನಿ ನೀಷೆಯ ಮಾತು ನಮ್ಮನ್ನು ಎಚ್ಚರಿಸಬಹುದೆ?

ಪ್ರತಿಯೊಂದು ಭಾವಕ್ಕೂ ಹೊಸ ಶಬ್ದ ಹುಡುಕಲು ಕಾತರಿಸುವ ಕವಿಗೆ ಹಳೆಯ ಶಬ್ದಗಳ ಬಗ್ಗೆ ದಣಿವಾಗುವುದು ಸಹಜ. ಆದರೆ ಸಮಾಜದ ಆರೋಗ್ಯದ ಬಗ್ಗೆ ಕಾಳಜಿಯುಳ್ಳವರಿಗೆ ಕಳೆದ ವರ್ಷದ ಅರ್ಥಪೂರ್ಣ ಶಬ್ದಗಳನ್ನೆಲ್ಲ ಹಿಂದೆ ಬಿಟ್ಟು ಹೊರಡುವ ಲಕ್ಷುರಿ ಇರಲಾರದು.

ಪ್ರತೀ ವರ್ಷದಲ್ಲೂ ಹಳೆಯ ಉದಾತ್ತ ಶಬ್ದಗಳ, ಐಡಿಯಾಗಳ ಅರ್ಥ ಬೆಳೆಯುತ್ತಿರಬೇಕಾಗುತ್ತದೆ. ಉದಾಹರಣೆಗೆ, ‘ಭಾರತ್ ಜೋಡೊ’ ನುಡಿಗಟ್ಟು ದೇಶದ ಕೆಲವು ವಲಯಗಳಲ್ಲಾದರೂ ಮೂಡಿಸಿರುವ ಪ್ರೀತಿಯ ಭಾವ ವಿಶಿಷ್ಟವಾದುದು. ರಾಹುಲ್ ಗಾಂಧಿಯವರ ಜೊತೆಗೆ ನಡೆಯುತ್ತಿರುವ ಕನ್ಹಯ್ಯಾ ಕುಮಾರ್, ಯೋಗೇಂದ್ರ ಯಾದವ್ ಥರದ ಕ್ರಿಯಾಶೀಲ ನಾಯಕರ ಜೊತೆಗೆ, ಆಗಾಗ್ಗೆ ತುಷಾರ್ ಗಾಂಧಿ, ರಾಜಮೋಹನ್ ಗಾಂಧಿ, ಮೇಧಾ ಪಾಟ್ಕರ್ ಥರದ ಕಾಳಜಿವಂತರ ನಡಿಗೆಯೂ ಸೇರಿ, ಭಾರತವನ್ನು ಬೆಸೆಯಬೇಕೆಂಬ ಕಾತರ ಜನಮಾನಸದಲ್ಲಿ ಹುಟ್ಟತೊಡಗಿದೆ. ನಿಜಕ್ಕೂ ಹೊಸ ಕಾಲವನ್ನು ಸೃಷ್ಟಿಸಬಲ್ಲೆವು ಎಂದು ಪ್ರಾಮಾಣಿಕವಾಗಿ ನಂಬಿ ಭಾರತ್ ಜೋಡೊ ಸೇರುತ್ತಿರುವ ತರುಣ, ತರುಣಿಯರ ಮಾತುಗಳು ದೇಶದಲ್ಲಿ ಹೊಸ ಚೈತನ್ಯ ಹುಟ್ಟಿಸುವಂತಿವೆ. ಆದರೂ, ಭಾರತ್ ಜೋಡೊದಲ್ಲೂ ಕೆಲವರ ಬಾಯಿಗೆ ಮೈಕ್ ಹಿಡಿದರೆ, ಭಾರತವನ್ನು ಜೋಡಿಸುವ ಉದಾರ ಭಾವ ಹಬ್ಬಿಸುವ ಬದಲು ಯಾಂತ್ರಿಕವಾಗಿ ಚೀರತೊಡಗುತ್ತಾರೆ! ಸಂಜೆಯಾದರೆ ಮೈಮೇಲೆ ಬಂದವರಂತೆ ಕಿರುಚುವ ಹಿರಿಯಣ್ಣಗಳ ಚಾಳಿ ಎಲ್ಲ ಮಾತುಗಾರರಿಗೂ ತಗುಲಿ, ಇಡೀ ಸಮಾಜವೇ ‘ಚೀರು ಸಮಾಜ’ವಾಗುತ್ತಿದೆಯೆ?

ಈ ನಡುವೆ, ಆರ್‌ಎಸ್‌ಎಸ್‌ನ ಅಸಲಿ ಮುಖವನ್ನು ಬಿಡಿಸಿಟ್ಟಿರುವ ದೇವನೂರ ಮಹಾದೇವ ಅವರ ಪುಸ್ತಕ ‘ಆರ್‌ಎಸ್‌ಎಸ್‌: ಆಳ ಮತ್ತು ಅಗಲ’ ಲೇಖಕರ ಹಕ್ಕನ್ನೇ ಬಿಟ್ಟುಕೊಟ್ಟು ಲಕ್ಷಾಂತರ ಪ್ರತಿಗಳು ಮುದ್ರಣವಾಗಿ, ಎಲ್ಲೆಡೆ ಪ್ರಸಾರಗೊಂಡಿದೆ; ಈ ಬೆಳವಣಿಗೆ ಕರ್ನಾಟಕದ ಬೌದ್ಧಿಕ ಲೋಕದ ಸತ್ಯಾನ್ವೇಷಣೆಯ ಗುಣವನ್ನು, ಆರೋಗ್ಯವನ್ನು ಮತ್ತೆ ಸಾಬೀತು ಮಾಡಿದೆ. ನಾಗಮೋಹನದಾಸ್ ಅವರ ಪುಸ್ತಕ ‘ಸಂವಿಧಾನ ಓದು’ ಹಾಗೂ ಅಭಿಯಾನ ಲಕ್ಷಾಂತರ ಜನರನ್ನು ತಲುಪಿದೆ. ಮಂಗ್ಳೂರ ವಿಜಯ ಅವರ ‘ನಮ್ಮ ಸಂವಿಧಾನ’ ಹತ್ತಾರು ಕಾಲೇಜುಗಳನ್ನು ಮುಟ್ಟಿದೆ. ಓದುಗರಲ್ಲಿ ಉದಾತ್ತ ಭಾವ ಹುಟ್ಟಿಸುವ ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ’ 2022ರ ಕೊನೆಗೆ 25 ಮುದ್ರಣಗಳನ್ನು ಕಂಡಿದೆ. ಈ ಬಗೆಯ ಪುಸ್ತಕಗಳನ್ನು ನಾಡಿನೆಲ್ಲೆಡೆ ಕೊಂಡೊಯ್ಯುತ್ತಾ ಜನರನ್ನು ಎಚ್ಚರದಲ್ಲಿಟ್ಟಿರುವ ನಿಸ್ವಾರ್ಥಿ ಬಳಗಗಳು ಹಾಗೂ ಇಂಥ ಪುಸ್ತಕಗಳನ್ನು ಕೊಂಡು ಓದುತ್ತಿರುವ ಕನ್ನಡದ ವಿಭಿನ್ನ ತಲೆಮಾರುಗಳ ಮುಕ್ತತೆ ಈ ನಾಡಿನಲ್ಲಿ ಒಳಿತಿನ ಸ್ವೀಕಾರ ಸದಾ ಜಾಗೃತವಾಗಿರುವುದನ್ನು ಒತ್ತಿ ಹೇಳುತ್ತದೆ.

ಕೇವಲ ಎಫೆಕ್ಟಿಗಾಗಿ ಗಂಟಿಕ್ಕಿದ ಮುಖಗಳು, ಕ್ಲೀಷಾಮಯ ಕ್ರೂರ ಭಾಷೆ, ನೆತ್ತರ ಚೆಲ್ಲಾಟದ ಮೂಲಕ ಪ್ರೇಕ್ಷಕರ ಕ್ರೌರ್ಯವನ್ನೇ ಬಡಿದೆಬ್ಬಿಸಿದರೂ, ‘ಒಳ್ಳೆಯ ಸಂದೇಶ ಕೊಟ್ಟಿದ್ದೇವೆ’ ಎಂದು ಹೇಳಿಕೊಳ್ಳುವ ಹೊಣೆಗೇಡಿ ಸಿನಿಮಾಗಳ ನಡುವೆ, ಅಮೋಘವರ್ಷ ಅವರ ‘ಗಂಧದ ಗುಡಿ’ ಗೆದ್ದಿದ್ದು ಜನರೊಳಗಿನ ಸಾತ್ವಿಕ ಭಾವದ ಗೆಲುವಿನಂತಿದೆ. ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾದಲ್ಲಿನ ಕರ್ನಾಟಕದ ಪ್ರಕೃತಿ ಪಯಣ ಜನರ ಮನಸ್ಸನ್ನು ಅರಳಿಸಿದೆ; ಹಣವನ್ನೂ ಗಳಿಸಿದೆ. ಇಂಥ ಬೆಳವಣಿಗೆಗಳನ್ನು ಕಂಡಾಗ ಇಲ್ಲಿ ಹೊಸ ಶಬ್ದಗಳು, ಹೊಸ ಮಾರ್ಗಗಳು, ಹೊಸ ಪ್ರಯೋಗಗಳು ಹುಟ್ಟುತ್ತಲೇ ಇರುತ್ತವೆ ಎಂಬ ನೆಮ್ಮದಿ ಮೂಡುತ್ತದೆ.

ಮೊನ್ನೆ ಅಂಬೇಡ್ಕರ್ ಪರಿನಿಬ್ಬಾಣದ ದಿನ ಕರ್ನಾಟಕದ ಹತ್ತು ದಲಿತ ಸಂಘಟನೆಗಳು ಒಗ್ಗೂಡಿ ಸಮಾವೇಶ ನಡೆಸಿದಾಗ ಇಡೀ ಬೆಂಗಳೂರು ನೀಲಿಮಯವಾದ ಅಪೂರ್ವ ಚಿತ್ರ ನೆನಪಾಗುತ್ತದೆ. ಈ ಐಕ್ಯತೆಯ ಸಂದೇಶ ಈ ವರ್ಷದಲ್ಲೂ ಹಬ್ಬಿ ಸಮಾನತೆಯ ಆಶಯದ ಹಲ ಬಗೆಯ ಸಂಘಟನೆಗಳು ಒಂದು ವೇದಿಕೆಯಡಿ ಬರಬಹುದು, ಕರ್ನಾಟಕದ ರಾಜಕೀಯ- ಸಾಮಾಜಿಕ ಚಿತ್ರ ಬದಲಾಗಬಹುದು ಎಂಬ ನಿರೀಕ್ಷೆ ಮೂಡುತ್ತದೆ. ಹೀಗೆ ಒಂದಾಗುವವರು, ಹಳೆಯ ಒಡಕಿನ ಕೊಳೆಬಟ್ಟೆಗಳನ್ನು ಸಾರ್ವಜನಿಕವಾಗಿ ಒಗೆಯುವುದನ್ನು ಬಿಟ್ಟು, ನಿರ್ಮಾಣಾತ್ಮಕ ಕೆಲಸಗಳ ಹೊಸ ಭಾಷೆಯನ್ನು ಹಬ್ಬಿಸುತ್ತಾರೆಂದು ಆಶಿಸೋಣ. ಇವತ್ತು ಸಾರ್ವಜನಿಕ ಸಭೆಗಳಲ್ಲಿ ಮಾತಾಡುವ ಸಜ್ಜನರು ಕೂಡ ದುಷ್ಟರ ಮಾತುಗಳನ್ನು ಟೀಕಿಸಲು ಹೋಗಿ, ಅಂಥವರನ್ನೇ ಮತ್ತೆ ಮತ್ತೆ ಉಲ್ಲೇಖಿಸಿ, ಅವರ ಹೀನ ಮಾತುಗಳನ್ನೇ ಇನ್ನಷ್ಟು ಚಲಾವಣೆಗೆ ತರುತ್ತಿರುತ್ತಾರೆ! ನಮ್ಮ ಸಭ್ಯ ಸಾರ್ವಜನಿಕ ಭಾಷಣಕಾರರು ಈ ಅಪಾಯದಿಂದಲೂ ತಪ್ಪಿಸಿಕೊಳ್ಳಬೇಕಾಗಿದೆ.

ಮುಂಬರಲಿರುವ ದಿನಗಳಲ್ಲಿ ಕರ್ನಾಟಕ ಚುನಾವಣೆಯ ಮೂಡ್‌ಗೆ ತಿರುಗಲಿದೆ. ಚುನಾವಣೆಯ ಕಾಲದ ಚುರುಕಿನ, ಚಾಲಾಕಿನ ಸವಾಲ್- ಜವಾಬ್ ಲೋಕ ಗತಕಾಲಕ್ಕೆ ಸೇರಿಹೋಗಿದೆ. ಇನ್ನು ಮೂರು ತಿಂಗಳು ಕೊಳಕು ಮಾತುಗಳ ಚೀತ್ಕಾರವೇ ಕೇಳಿಬರುವ ಭಯ ಸಜ್ಜನರನ್ನು ಮುತ್ತಿದ್ದರೆ ಅಚ್ಚರಿಯಲ್ಲ. ಈ ಕಾಯಿಲೆಗೆ ಮದ್ದಿಲ್ಲ ಎಂದು ನಾವು ಸಿನಿಕರಾಗ
ಬೇಕಾದ್ದಿಲ್ಲ. ಯಾವ ಮಾನವಂತ ತಾಯಿ, ತಂದೆಗಳೂ ತಮ್ಮ ಮಕ್ಕಳು ಈ ಕಾಲದ ಕೆಲವು ನಾಯಕರ ಹೀನ ಭಾಷೆಯನ್ನು, ದುರುಳ ವರ್ತನೆಯನ್ನು ಅನುಸರಿಸಲೆಂದು ಬಯಸಲಾರರು. ಇಂಥ ಹೊಲಸು ಬಾಯಿಯ ನಾಯಕರು ಯಾವ ಪಕ್ಷದಲ್ಲಿದ್ದರೂ ಅವರನ್ನು ಮುಲಾಜಿಲ್ಲದೆ ಕಸದ ಬುಟ್ಟಿಗೆ ಹಾಕುವ ಛಾತಿ, ಕರ್ತವ್ಯ ತಂದೆ, ತಾಯಂದಿರಿಗಿದೆ; ಆ ಮೂಲಕವೂ ಹಿರಿಯರು ಮಕ್ಕಳಿಗೆ ಹೊಸ ರಾಜಕೀಯ ದಾರಿ ತೋರಿಸುವ ಅಗತ್ಯವಿದೆ. ಬರೀ ನಾನ್ಸೆನ್ಸ್ ಮಾತಾಡಿಕೊಂಡು ಅಡ್ಡಾಡಿರುವ ಅನೇಕ ನಾಯಕರು ಕಳೆದ ಐದು ವರ್ಷಗಳಲ್ಲಿ ಒಂದು ಒಳ್ಳೆಯ ಕೆಲಸವನ್ನೂ ಮಾಡಿಲ್ಲವಲ್ಲ ಎಂಬ ಪ್ರಶ್ನೆ ಮತದಾರರ ಮನಸ್ಸಲ್ಲಿ ಹುಟ್ಟಲಿ. ಅಷ್ಟೇ ಮುಖ್ಯವಾಗಿ, ಬೇಜವಾಬ್ದಾರಿ ರಾಜಕಾರಣಿಗಳಿಗೆ ತಮ್ಮ ಬಗ್ಗೆ ಜನರಲ್ಲಿ ಹುಟ್ಟಿರುವ ಅಸಹ್ಯಭಾವದ ಝಳ ಒಂಚೂರಾದರೂ ತಟ್ಟಿ, ಸಡಿಲ ನಾಲಗೆಯ, ಸಂಕುಚಿತ ಬುದ್ಧಿಯ ನಾಯಕರ ಬಾಲಗಳು ಕೊಂಚ ಮುದುರಲಿ.

ಗುಜರಾತಿನ ಮೊರ್ಬಿ ಸೇತುವೆ ಕುಸಿದಾಗ, ಜೀವದ ಹಂಗು ತೊರೆದು ಅಸಹಾಯಕರನ್ನು ರಕ್ಷಿಸಲೆತ್ನಿಸಿದ ಮುಸ್ಲಿಂ ಹುಡುಗರ ಧೈರ್ಯ, ಕಾಳಜಿ ಕಂಡಾದರೂ ಶಾಲಾಕಾಲೇಜುಗಳಲ್ಲಿ ಅಲ್ಪಸಂಖ್ಯಾತರ ಮನ ನೋಯಿಸುವ ಮೇಷ್ಟ್ರುಗಳ, ವಿದ್ಯಾರ್ಥಿಗಳ ನಿರ್ದಯ ಮನಸ್ಸುಗಳು ಕರಗಲಿ. ಭಾರತದಲ್ಲಿ ನಡೆಯುತ್ತಿರುವ ವಿಭಜಕ ಸಂಘಟನೆಗಳ ಆಕ್ರಮಣದ ಬಗ್ಗೆ, ಮಾನವ ಹಕ್ಕುಗಳ ಹೋರಾಟಗಾರರ ಅಕ್ರಮ ಬಂಧನಗಳ ಬಗ್ಗೆ ಹುಟ್ಟುವಷ್ಟೇ ಕೋಪ, ಭಾರತದ ಗಡಿಗಳಲ್ಲಿ ದುರಾಕ್ರಮಣ ಮಾಡುತ್ತಿರುವ ಚೀನಾ, ಉಕ್ರೇನನ್ನು ಸುಡುತ್ತಿರುವ ರಷ್ಯಾ, ಪ್ಯಾಲೆಸ್ತೀನೀಯರ ಮೇಲೆ ಕ್ರೌರ್ಯ ಚೆಲ್ಲುತ್ತಿರುವ ಇಸ್ರೇಲ್ ವಿರುದ್ಧವೂ ಹುಟ್ಟುತ್ತಿರಲಿ.

ಇಷ್ಟೆಲ್ಲದರ ನಡುವೆ, ಹೊಸ ವರ್ಷಕ್ಕೆ ಹೊಸ ಭಾಷೆ, ಹೊಸಹೊಸ ನುಡಿಗಟ್ಟು, ಹೊಸ ಕ್ರಿಯೆಗಳನ್ನು ಸೃಷ್ಟಿಸುವ ಹೊಣೆ ಎಲ್ಲರ ಹೆಗಲ ಮೇಲೂ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT