ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸದಿರಲಿ ಈ ‘ಸಸ್ಯಭಾರತಿ’

ಜ್ಞಾನಭಾರತಿಯ ಸಸ್ಯಸಂಪತ್ತಿನ ಮಹತ್ವದ ಅರಿವು ಸರ್ಕಾರಕ್ಕೆ ಆಗಬೇಕಾಗಿದೆ
Last Updated 5 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು ಕಾಂಕ್ರೀಟು ಕಾಡಾಗುತ್ತಿದ್ದು, ಸಸ್ಯ ಸಂಪತ್ತು ನಶಿಸುತ್ತಿದೆ. ಅಂದಿನ ರಾಜರ ಹಾಗೂ ಬ್ರಿಟಿಷರ ದೂರದೃಷ್ಟಿಯಿಂದ ಅಲ್ಲೊಂದು ಲಾಲ್‌ಬಾಗ್, ಇಲ್ಲೊಂದು ಕಬ್ಬನ್ ಪಾರ್ಕ್ ಅಭಿವೃದ್ಧಿಯಾಗಿದ್ದನ್ನು ಬಿಟ್ಟರೆ ಉಳಿದೆಲ್ಲವೂ ಸಣ್ಣ ಪುಟ್ಟ ಪಾರ್ಕುಗಳು. ಈಗಿರುವ ಎಲ್ಲಾ ಉದ್ಯಾನಗಳನ್ನು ಪರಿಗಣಿಸಿದರೂ ಬೆಂಗಳೂರಿನ ಜನಸಾಂದ್ರತೆ ಮತ್ತು ವಾಹನಗಳು ಉತ್ಪಾದಿಸುತ್ತಿರುವ ಇಂಗಾಲಾನಿಲಗಳನ್ನು ಹೀರಿಕೊಳ್ಳಲು ಇವು ಏನೇನೂ ಸಾಲದು.

ರಾಜ್ಯದ ಶೇ 20 ಭಾಗದಷ್ಟು ಜನಸಂಖ್ಯೆ ಬೆಂಗಳೂರಿನಲ್ಲೇ ಇದ್ದು, ಪ್ರತಿ ಚದರ ಕಿಲೊಮೀಟರ್‌ಗೆ 15,000 ಜನಸಾಂದ್ರತೆಯಾಗುತ್ತದೆ. ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಿತಿಮೀರಿದ ಜನದಟ್ಟಣೆ. ಪರಿಸರ ಹಾಗೂ ಸಮುದಾಯದ ಆರೋಗ್ಯದ ದೃಷ್ಟಿಯಿಂದ 1,000 ಜನಸಂಖ್ಯೆಗೆ ಕನಿಷ್ಠ 2 ಹೆಕ್ಟೇರ್‌ನಷ್ಟು ಹಸಿರು ಹೊದಿಕೆ ನಗರಗಳಲ್ಲಿ ಇರಬೇಕು ಎಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತ ವಿಚಾರ. ಮುಂದುವರಿದ ದೇಶಗಳಲ್ಲಿ, ಮುಖ್ಯವಾಗಿ ಅಮೆರಿಕ, ಯುರೋಪ್‌ ದೇಶಗಳಲ್ಲಿ ಇದು 2.5 ಹೆಕ್ಟೇರ್‌ಗಳಿಂದ 4 ಹೆಕ್ಟೇರ್‌ಗಳಷ್ಟಿದ್ದು ಭಾರತದ ನಗರ ಪ್ರದೇಶಗಳಲ್ಲಿ 1,000 ಜನಸಂಖ್ಯೆಗೆ ಕನಿಷ್ಠ 0.8 ಹೆಕ್ಟೇರ್‌ನಷ್ಟಾದರೂ ಹಸಿರು ಹೊದಿಕೆ ಇರಬೇಕೆಂಬುದು ಪರಿಸರ ಕಾಯ್ದೆಯ ಇಂಗಿತ. ಆದರೆ, ಬೆಂಗಳೂರಿನಲ್ಲಿ 1,000 ಜನಸಂಖ್ಯೆಗೆ 0.1 ಹೆಕ್ಟೇರ್‌ಗಿಂತಲೂ ಕಡಿಮೆ ಹಸಿರು ಹೊದಿಕೆಯಿದ್ದು, ಏರುಗತಿಯ ಜನಸಂಖ್ಯೆ ಮತ್ತು ನಗರೀಕರಣವು ಹಸಿರು ಉಳಿಸಿಕೊಳ್ಳಲು ದೊಡ್ಡ ತಡೆಯಾಗಿವೆ.

ಒಂದು ಕಾಲಕ್ಕೆ ಸಮೃದ್ಧ ಸಸ್ಯಸಂಪತ್ತಿನಿಂದ ಕೂಡಿದ್ದ ಬೆಂಗಳೂರು ಕಾಂಕ್ರೀಟ್ ಕಾಡಾಗಿ ಪರಿವರ್ತಿತವಾಗಿದೆ. ಅಳಿದುಳಿದ ಗಿಡಮರಗಳು ಅಭಿವೃದ್ಧಿಯೆಂಬ ಮರೀಚಿಕೆಗೆ ಬಲಿಯಾಗುತ್ತಿವೆ. ಅದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಬೆಂಗಳೂರು ವಿಶ್ವವಿದ್ಯಾಲಯದ ‘ಜ್ಞಾನಭಾರತಿ’ಯಲ್ಲಿ ಕುಂದುತ್ತಿರುವ ಭೂಪ್ರದೇಶ ಹಾಗೂ ಸಸ್ಯ ಸಂಪತ್ತು. 1964ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ವಿಶ್ವವಿದ್ಯಾಲಯವು 1977ರವರೆಗೆ ಸೆಂಟ್ರಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ ಜ್ಞಾನಭಾರತಿಗೆ ಸ್ಥಳಾಂತರಗೊಂಡಿತು. ಅಂದಿನ ಕುಲಪತಿ ಡಾ. ಎಚ್.ನರಸಿಂಹಯ್ಯನವರ ದೂರದೃಷ್ಟಿತ್ವದಿಂದ ವಿಶಾಲವಾದ ಜ್ಞಾನಭಾರತಿಯ ಕ್ಯಾಂಪಸ್ ಅಸ್ತಿತ್ವಕ್ಕೆ ಬಂತು. ಆಗ ಅದು ಬೆಂಗಳೂರಿಗೆ ತುಂಬಾ ದೂರದ ತಾಣವಾಗಿದ್ದರಿಂದ (ಮೆಜೆಸ್ಟಿಕ್‌ನಿಂದ 15 ಕಿ.ಮೀ) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ಅವರನ್ನು ಹೊಗಳಿದ್ದಕ್ಕಿಂತ ಟೀಕಿಸಿದ್ದೇ ಹೆಚ್ಚು. ಏಕೆಂದರೆ ಅಷ್ಟು ದೂರ ಹೋಗಬೇಕಲ್ಲಾ ಎಂದು! ಆದರೆ ಈಗ ಅವರ ದೂರದೃಷ್ಟಿಯನ್ನು ಎಲ್ಲರೂ ಕೊಂಡಾಡುತ್ತಾರೆ. ಆಗ ಒಂದು ಮೂಲೆಯಲ್ಲಿದೆ ಎನಿಸುತ್ತಿದ್ದ ಜ್ಞಾನಭಾರತಿ ಈಗ ನಗರದೊಳಗೇ ಸೇರಿಹೋಗಿ ಸುತ್ತಲೂ ಕಾಂಕ್ರೀಟು ಕಾಡು ಬೆಳೆದುಕೊಂಡಿದ್ದು, ಅದರ ಸರಹದ್ದಿನ ಸುತ್ತಲೂ ಒತ್ತುವರಿದಾರರ ಹಾವಳಿಯನ್ನು ತಡೆಯುವುದೇವಿಶ್ವವಿದ್ಯಾಲಯಕ್ಕೆ ಕಷ್ಟವಾಗಿದೆ.

ಎತ್ತರದ, ಸ್ವಲ್ಪ ವೃತ್ತಾಕಾರದ ಭೂಮಿಯಲ್ಲಿ 1,111 ಎಕರೆ ಪ್ರದೇಶದಲ್ಲಿ ಇರುವ ಜ್ಞಾನಭಾರತಿಯು ವಿಶಿಷ್ಟ ಭೂಗುಣಗಳನ್ನು ಹೊಂದಿದ್ದು ಫಲವತ್ತಾದ ಮಣ್ಣು, ಸಸ್ಯಸಂಪತ್ತು ವೃದ್ಧಿಸಲು ಹೇಳಿ ಮಾಡಿಸಿದ ಹಾಗಿದೆ. ಹಿಂದೆ ಕುಲಪತಿಯಾಗಿದ್ದ ಪ್ರೊ. ಕೆ.ಸಿದ್ಧಪ್ಪನವರು ವಿಶೇಷ ಕಾಳಜಿಯಿಂದ ಕ್ಯಾಂಪಸ್ಸಿನಲ್ಲಿ ಲಕ್ಷಾಂತರ ಗಿಡಮರಗಳನ್ನು ನೆಡುವ ಅಭಿಯಾನ ಪ್ರಾರಂಭಿಸಿ, ಚೆಕ್ ಡ್ಯಾಮ್, ಇಂಗು ಗುಂಡಿ ಮುಂತಾದ ಪರಿಸರಸ್ನೇಹಿ ಕ್ರಮಗಳ ಮೂಲಕ ಜ್ಞಾನಭಾರತಿಯ ಹಸಿರು ಹೆಚ್ಚಲು ಕಾರಣರಾದರು. ಎನ್.ಎಸ್.ಎಸ್ ವಿಭಾಗ, ಸಿವಿಲ್ ಎಂಜಿನಿಯರಿಂಗ್, ಭೂವಿಜ್ಞಾನ, ಪರಿಸರ, ಸಸ್ಯಶಾಸ್ತ್ರ ವಿಭಾಗಗಳ ಶಿಕ್ಷಕರು ಹಾಗೂ‌‌ ವಿದ್ಯಾರ್ಥಿಗಳ ಪರಿಶ್ರಮದಿಂದ ಮತ್ತು ಅನೇಕ ಕಾರ್ಪೊರೇಟ್ ಸಂಸ್ಥೆಗಳು, ಎನ್.ಜಿ.ಒ.ಗಳ ಕೊಡುಗೆಯಿಂದ ವಿಶಿಷ್ಟ ಬಯೊಪಾರ್ಕ್, ಔಷಧೀಯ ಗಿಡಗಳ ಉದ್ಯಾನಗಳು ಅಭಿವೃದ್ಧಿಗೊಂಡಿವೆ. ಅಷ್ಟೇ ಕಾಳಜಿ ಮತ್ತು ಪ್ರೋತ್ಸಾಹ ವಿಶ್ವವಿದ್ಯಾಲಯದ ಎಲ್ಲಾ ಕುಲಪತಿಗಳು ಮತ್ತು ಅಧಿಕಾರಿವರ್ಗದವರು ತೋರಿದ ಲಾಗಾಯ್ತು ಜ್ಞಾನಭಾರತಿ ಹಸಿರಿನಿಂದ ಕಂಗೊಳಿಸಲು ಸಾಧ್ಯವಾಗಿದೆ.

300 ಪ್ರಭೇದದ ಮರಗಿಡಗಳು, 250 ಪಕ್ಷಿ-ಪ್ರಾಣಿ ಪ್ರಭೇದಗಳಿದ್ದು ಜೈವಿಕ ವೈವಿಧ್ಯಕ್ಕೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಸಂಶೋಧನ ಮತ್ತು ಸ್ನಾತಕೋತ್ತರ ವಿಭಾಗದ ಅನೇಕ ವಿದ್ಯಾರ್ಥಿಗಳು ಇಲ್ಲಿನ ಮಣ್ಣು, ಗಿಡ-ಮರ, ಪಕ್ಷಿ ಪ್ರಭೇದ, ಶಿಲಾ ಸಮೂಹ, ಅಂತರ್ಜಲ ವೃದ್ಧಿ, ಪರಿಸರ ಮಾಲಿನ್ಯ ಹೀಗೆ ಅನೇಕ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿದ್ದು ಇದೊಂದು ಜೈವಿಕ ವೈವಿಧ್ಯದ ಕೇಂದ್ರಸ್ಥಾನ ಎಂದು ಹೇಳಬಹುದಾಗಿದೆ.

ಸುತ್ತಲಿನ ಗಾಳಿಯ ಮಲಿನಗಳನ್ನು ಹೀರಿ ವಾತಾವರಣವನ್ನು ಶುಚಿಯಾಗಿಡಲು ಇಲ್ಲಿನ ಸಸ್ಯಸಂಪತ್ತು ಸಹಕಾರಿಯಾಗಿದೆ. ಆದರೆ ಇತ್ತೀಚೆಗೆ ಇವೆಲ್ಲವುಗಳ ಮಧ್ಯೆ ಆತಂಕಕಾರಿ ಬೆಳವಣಿಗೆಗಳೂ ಜರುಗುತ್ತಿವೆ. ವಿಶಾಲವಾಗಿ ಹಬ್ಬಿರುವ ಜ್ಞಾನಭಾರತಿಯ ಜಾಗದ ಮೇಲೆ ಸರ್ಕಾರದ ಕಣ್ಣು ಬೀಳುತ್ತಿದೆ. ಈಗಾಗಲೇ ಇಲ್ಲಿ ವಿವಿಧ ಸ್ವಾಯತ್ತ ಸಂಸ್ಥೆಗಳಿಗೆ 270 ಎಕರೆಯಷ್ಟು ಜಾಗ ನೀಡಿ ಹಸಿರು ಹೊದಿಕೆ ಕಡಿಮೆಯಾಗಲು ಕಾರಣವಾಗಿದೆ. ಜಾಗ ಪಡೆದಿರುವ ಕೆಲವು ಸಂಸ್ಥೆಗಳು ಇನ್ನೂ ಹೆಚ್ಚು ಜಾಗ ಕೊಡಿ ಎಂದು ಸರ್ಕಾರದ ಮೂಲಕ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹಾಕುತ್ತಿವೆ. ತೀರ ಇತ್ತೀಚೆಗೆ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಲು 15 ಎಕರೆ ಮತ್ತು ಇನ್ನೂ ಅನೇಕ ಸಂಸ್ಥೆಗಳು ಸೇರಿದಂತೆ ಒಟ್ಟು 230 ಎಕರೆ ಭೂಮಿಯನ್ನು ಅವರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಕುಲಪತಿ ಹೇಳಿದ್ದಾರೆ. ಉದ್ಯಾನ, ಅರ್ಥ್ ಪಾರ್ಕ್, ಬಟಾನಿಕಲ್ ಪಾರ್ಕ್‌ ಮುಂತಾದವನ್ನು ಸ್ಥಾಪಿಸಲು ಯೋಜನೆ ರೂಪುಗೊಳ್ಳುತ್ತಿದೆ ಎಂದು ಅವರು ಹೇಳಿರುವುದು ಹೇಗಿದೆ ಎಂದರೆ, ಇರುವ ಕಾಡನ್ನು ನೆಲಸಮ ಮಾಡಿ ಅಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸುತ್ತೇವೆ ಎಂಬಂತಿದೆ.

ಜ್ಞಾನಭಾರತಿಯಲ್ಲಿ ಯಾವ ಕಾರಣಕ್ಕೂ ಹೊಸ ಸಂಸ್ಥೆಗಳಿಗೆ ಅವಕಾಶ ಕೊಡಬಾರದು. ಈ ದಿಸೆಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ಮನೋಭಾವ ಬದಲಾಗಬೇಕಿದೆ. ಜ್ಞಾನಭಾರತಿಯ ವಿಶಾಲ ಪ್ರದೇಶವನ್ನು ನೋಡಿ ಈ ಜಾಗ ವ್ಯರ್ಥವಾಗಿ ಬಿದ್ದಿದೆ ಅಂದುಕೊಳ್ಳುವ ಬದಲು, ‘ಎಂತಹ ಸುಂದರ ಪರಿಸರ, ಇದನ್ನು ಹೇಗೆ ಸಂರಕ್ಷಿಸುವುದು’ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯ ಹೊರತುಪಡಿಸಿ ಯಾವುದೇ ಹೊಸ ಸಂಸ್ಥೆಯ ಕಟ್ಟಡಗಳಿಗೆ ಕ್ಯಾಂಪಸ್ಸಿನೊಳಗೆ ಅವಕಾಶವಿಲ್ಲವೆಂಬ ಕಾನೂನನ್ನು ಸರ್ಕಾರ ತುರ್ತಾಗಿ ಮಾಡಬೇಕಿದೆ. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಂಡಿಕೇಟ್ ಸದಸ್ಯರು, ಇಲ್ಲಿ ಓದುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಎಲ್ಲರೂ ಈ ಕ್ಯಾಂಪಸ್ಸಿನ ನಿತ್ಯಹರಿದ್ವರ್ಣ ಸೌಂದರ್ಯವನ್ನು ಉಳಿಸಿಕೊಳ್ಳುವ ಕಡೆ ಸದಾ ಎಚ್ಚರಿಕೆಯಿಂದಿರಬೇಕು.

2010ರಲ್ಲಿ ಜಿ.ಕೆ.ವಿ.ಕೆ.ಯ ಹೆಬ್ಬಾಳ ಕ್ಯಾಂಪಸ್ಸಿನ ಒಂದು ಭಾಗದಲ್ಲಿ ನ್ಯಾಯಾಧೀಶರ ವಸತಿಗಾಗಿ ಲೇಔಟ್ ಮಾಡಬೇಕಾದ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ವಲ್ಪ ಭೂಮಿಯನ್ನು ಸರ್ಕಾರ ಪಡೆಯಲು ಮುಂದಾದಾಗ ಇಡೀ ಕ್ಯಾಂಪಸ್ ಪ್ರತಿಭಟಿಸಿತು. ಆಮೇಲೆ, ಆ
ಅನುಮೋದನೆಯನ್ನು ಸರ್ಕಾರ ಕೈಬಿಡಬೇಕಾಯಿತು. ಆದರೆ ಜ್ಞಾನಭಾರತಿಯಲ್ಲಿ ಒಂದಲ್ಲ ಒಂದು ಸಂಸ್ಥೆ ಮೆಲ್ಲಗೆ ತಲೆ ಎತ್ತಲು ಹವಣಿಸುತ್ತಿದ್ದು, ಸಸ್ಯ ಸಂಪತ್ತು ಕ್ಷೀಣಿಸುತ್ತಿದ್ದರೂ ಸುಮ್ಮನಿರುವುದು ಒಳಿತಲ್ಲ. ಆಲ್ಬರ್ಟ್ ಐನ್‌ಸ್ಟೀನ್‌ನ ಪ್ರಸಿದ್ಧ ಉಕ್ತಿ ‘ಈ ಜಗತ್ತನ್ನು ನಾಶ ಪಡಿಸಲು ಯತ್ನಿಸುವವರಿಂದ ಅದು ನಾಶವಾಗುವುದಿಲ್ಲ, ಅದನ್ನು ಮೌನವಾಗಿ ನೋಡುತ್ತ ಏನೂ ಪ್ರತಿಕ್ರಿಯಿಸದೆ ಕೂರುವ ಜನರಿಂದ ನಾಶವಾಗುತ್ತದೆ’ ಎಂಬಂತೆ ಕಣ್ಣ ಮುಂದೆಯೇ ತೆಗೆದುಕೊಳ್ಳುವ ಮಾರಕ ನಿರ್ಧಾರಗಳನ್ನುಪ್ರತಿಭಟಿಸದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳನ್ನು ಅನುಭವಿಸಲು ಸಿದ್ಧರಾಗಬೇಕಾಗುತ್ತದೆ.

ನಾಡೊಳಗೆ ಕಾಡು ಬೆಳೆಸುವ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸಣ್ಣ-ಸಣ್ಣ ಜಾಗಗಳಲ್ಲಿ ಒತ್ತಾಗಿ ಬೆಳೆಯುವ ಗಿಡಮರಗಳನ್ನು ಬೆಳೆಸುವ ಕ್ರಾಂತಿ ಈಗ ಎಲ್ಲೆಡೆ ಹಬ್ಬಬೇಕಾಗಿದೆ. ಈಗಾಗಲೇ ಪರಿಸರದ ಆರೋಗ್ಯ ಕುಸಿಯುತ್ತಿರುವ ಬೆಂಗಳೂರು ‘ಬದುಕಲು ಯೋಗ್ಯವಲ್ಲದ ನಗರ’ ಎನಿಸಿಕೊಳ್ಳುವ ದಿಸೆಯಲ್ಲಿ ಬಹುದೂರ ಸಾಗಿದ್ದು, ಇರುವ ಹಸಿರು ಹೊದಿಕೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಎಲ್ಲರ ಜವಾಬ್ದಾರಿ ಕೂಡ.

ಲೇಖಕ: ನಿವೃತ್ತ ಭೂವಿಜ್ಞಾನ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT