ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ‘ಎಲ್ಲರ ಕನ್ನಡ’: ಸಾಧ್ಯತೆ, ಸವಾಲು

ಭಾಷೆಗೆಲ್ಲಾದರೂ ನಮ್ಮ ಸೈದ್ಧಾಂತಿಕ ಸರಿತನದ ಗೊಡವೆ ಇರುತ್ತದೆಯೇ?
Last Updated 4 ಜನವರಿ 2022, 19:31 IST
ಅಕ್ಷರ ಗಾತ್ರ

ಭಾಷೆ ಹರಿವ ನೀರಿನಂತೆ ನಿರಂತರವಾಗಿ ಬದಲಾಗುವಂತಹದು. ಕಡಲಿನತ್ತ ಹರಿವ ನದಿ ಹೇಗೆ ನಿರ್ದಿಷ್ಟ ಪಥ ಪಾತ್ರಗಳನ್ನು ಮುನ್ನವೇ ಗೊತ್ತು ಮಾಡಿಕೊಳ್ಳುವುದಿಲ್ಲವೋ ಅಂತೆಯೇ ಭಾಷೆಯೂ ಯಾರ ಊಹೆಗೂ ನಿಲುಕದಂತೆ, ಯಾರ ಅಪೇಕ್ಷೆ ಅಂದಾಜುಗಳಿಗೂ ಸಿಲುಕದಂತೆ ಬದಲಾಗುತ್ತಿರುತ್ತದೆ.

ಭಾಷೆಯ ಹುಟ್ಟು-ವಿಕಾಸಗಳ ಪ್ರಶ್ನೆಗೆ ಭಾಷಾವಿಜ್ಞಾನಕ್ಕೆ ಈವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹಿಂದಿದ್ದ ಭಾಷೆ ಈಗ ಬದಲಾಗಿದ್ದಲ್ಲಿ ಇಂತಿಂಥ ಕಾರಣಗಳಿಗೆ ಬದಲಾಗಿದೆ ಎಂದು ಭಾಷಾವಿಜ್ಞಾನಿಗಳು ವಿವರಿಸಬಲ್ಲರಲ್ಲದೇ ಈಗಿರುವ ಭಾಷೆ ಮುಂದೆ ಇಂತಿಂಥ ಕಾರಣಗಳಿಗೇ ಬದಲಾಗಬಲ್ಲದು ಎಂಬ ಭವಿಷ್ಯವಾಣಿಯನ್ನಾಗಲೀ ಅಥವಾ ಇಂತಿಂಥ ಕಾರಣಗಳಿಗೇ ಬದಲಾಗತಕ್ಕದ್ದು ಎಂಬ ಆಗ್ರಹದ ಮಾತನ್ನಾಗಲೀ ಭಾಷಾವಿಜ್ಞಾನ ನುಡಿಯಲಾರದು. ಅಂತಹ ಆಗ್ರಹಗಳಿಗೆ ಬೌದ್ಧಿಕ ವಿಲಾಸಕ್ಕಿಂತ ಮಿಗಿಲಿನ ವ್ಯಾಪ್ತಿ ಇಲ್ಲ.

ಭಾಷೆ ಅಯಾದೃಚ್ಛಿಕವಾಗಿ ಬದಲಾಗುತ್ತದಲ್ಲದೇ ಚಳವಳಿ, ಅಭಿಯಾನಗಳಿಂದ ಬದಲಾವಣೆ ತರಲಾಗು ವುದಿಲ್ಲ. ಒಂದು ಭಾಷಾ ಸಮುದಾಯ ಅಂತಹ ಬದಲಾವಣೆಗೆ ಆಸ್ಪದವನ್ನೂ ನೀಡುವುದಿಲ್ಲ. ಪದ-ವಾಕ್ಯಗಳ ರಚನೆ-ಪ್ರಯೋಗಗಳ ವಿಷಯದಲ್ಲಿ ಒಂದು ಭಾಷಾ ಸಮುದಾಯವು ಸರ್ವಸಮ್ಮತವಾದ ಒಂದು ಕರಾರನ್ನು (ಪ್ರಮಾಣೀಕರಣವನ್ನು) ನಿಗದಿ ಮಾಡಿರುತ್ತದೆ. ಅದನ್ನೇ ವ್ಯಾಕರಣವೆನ್ನುವುದು. ಒಬ್ಬ ವೈಯಾಕರಣಿ ಭಾಷೆಯ ಗತಿ-ಬದಲಾವಣೆಗಳನ್ನು ವೈಜ್ಞಾನಿಕ ನೆಲೆಯಲ್ಲಿ ವಿವರಿಸಿ ವಿಶ್ಲೇಷಿಸಬಲ್ಲನಲ್ಲದೇ ಭಾಷೆಯ ಹಣೆಬರಹವನ್ನು ತಿದ್ದುವ ಶಕ್ತಿ ಅವನಿಗಿರುವುದಿಲ್ಲ.

ಹಳಗನ್ನಡ ವೈಯಾಕರಣಿ ಕೇಶಿರಾಜನು ಭಾಷೆ ಯನ್ನು ಹೀಗೆಯೇ ಬಳಸಬೇಕೆಂದು ನಿಯಮ ರೂಪಿಸಿದ ನಾದರೂ ಆ ನಿಯಮವನ್ನು ಉಲ್ಲಂಘಿಸಿರುವ ಅನೇಕ ಪ್ರಯೋಗಗಳು ಅವನಿಗೂ ಹಿಂದಿನ ಕವಿಗಳಲ್ಲಿ, ಹಾಗೆಯೇ ಅವನ ಸಮಕಾಲೀನರಲ್ಲಿ ಕಂಡುಬಂದಿರುವುದುಂಟು. ಅಂತಹ ‘ನಿಯಮಬಾಹಿರ’ ಪ್ರಯೋಗವನ್ನು ಅವನು ಪ್ರತ್ಯೇಕವಾಗಿ ಉಲ್ಲೇಖಿಸಿ, ಹೀಗೂ ಪ್ರಯೋಗಿಸಬಹುದು ಎಂದು ತನ್ನ ‘ಶಬ್ದಮಣಿದರ್ಪಣ’ದಲ್ಲಿ ಅಲ್ಲಲ್ಲಿ ಷರಾ ಬರೆದಿರುವುದನ್ನು ನಾವು ಕಾಣಬಹುದು.

ಇದು ಬರೀ ಕೇಶಿರಾಜನ ಕತೆಯಲ್ಲ, ಜಗತ್ತಿನ ಎಲ್ಲ ವೈಯಾಕರಣಿಗಳ ಕತೆಯಾಗಿದೆ. ವ್ಯಾಸ, ವಾಲ್ಮೀಕಿ, ವೈದಿಕ ಋಷಿಗಳ ನಂತರ ಜನಿಸಿದ ಪಾಣಿನಿ ತನ್ನ ‘ಅಷ್ಟಾಧ್ಯಾಯಿ’ಯ ನಿಯಮಗಳನ್ನು ಉಲ್ಲಂಘಿಸಿರುವ ಪುರಾತನರ ಪ್ರಯೋಗಗಳನ್ನು ದೋಷವೆನ್ನದೇ ‘ಆರ್ಷಪ್ರಯೋಗ’ ಎಂದು ಕರೆಯುತ್ತಾನೆ.

ಇಂದು ‘ಎಲ್ಲರ ಕನ್ನಡ’ವನ್ನು ಪ್ರಚಾರ ಮಾಡ ಬೇಕೆಂಬ ಅಭಿಯಾನ ನಡೆಯುತ್ತಿದೆ. ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ, ಶಬ್ದಸಂಪತ್ತು, ಪದ-ವಾಕ್ಯರಚನೆ ಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ‘ಕಬ್ಬಿಗರ ಕಾವಂ’ ಬರೆದ ಆಂಡಯ್ಯನ ಕಾಲದಿಂದಲೂ ಕನ್ನಡದ ಅನನ್ಯತೆ
ಯನ್ನು ಸ್ಥಾಪಿಸುವ ಪ್ರಯತ್ನ ನಡೆದಿದೆ. ಕನ್ನಡಿಗರ ಸಂಸ್ಕೃತ ಮೋಹವನ್ನು, ಸಂಸ್ಕೃತ ಮಿಶ್ರಿತ ಕನ್ನಡ ಭಾಷಾ ಪ್ರಯೋಗವನ್ನು ಟೀಕಿಸುವ ಮಹಲಿಂಗರಂಗ ‘ತುಪ್ಪಕ್ಕೆ ಎಣ್ಣೆ ಬೆರೆಸುವುದು ತರವೇ?’ ಎಂದು ಕೇಳುತ್ತಾನೆ. ಆದರೆ ಆಂಡಯ್ಯ, ಮಹಲಿಂಗರಂಗನಂಥವರು ನಮ್ಮ ಪರಂಪರೆಯಲ್ಲಿ ಕಂಡುಬರುವ ವಿಶಿಷ್ಟ ನಮೂನೆಗಳೇ ವಿನಾ ಅಂತಹವರನ್ನು ಹೊಸ ಪರಂಪರೆಯ
ಪ್ರವರ್ತಕರೆನ್ನಲಾಗುವುದಿಲ್ಲ.

ಅಕ್ಷರವೆಂಬುದು ಶತಶತಮಾನಗಳಿಂದಲೂ ಸಂಸ್ಕೃತದೊಂದಿಗೆ ನಂಟುಳ್ಳ ಮೇಲ್ವರ್ಗದ ಸ್ವತ್ತಾಗಿತ್ತು. ಸಹಜವಾಗಿಯೇ ಕನ್ನಡವು ಸಂಸ್ಕೃತದ ವರ್ಣಮಾಲೆ, ಪದಸಂಪತ್ತು, ವ್ಯಾಕರಣ ಮತ್ತು ಪ್ರಯೋಗಗಳಿಂದ ಪ್ರಭಾವಿತವಾಗಿತ್ತು. ಭಾರತದಂತಹ ದೇಶದಲ್ಲಿ ಎಲ್ಲ ಜಾತಿಗಳಿಗೆ ಸೇರಿದ ಬಹುಜನರು ಕೇವಲ ಇನ್ನೂರು ವರ್ಷಗಳ ಹಿಂದಷ್ಟೇ ಅಕ್ಷರಜ್ಞಾನ ಪಡೆಯಲಾರಂಭಿಸಿದ್ದಾರೆ. ಹಾಗಾಗಿ ಕನ್ನಡ ಭಾಷೆ ಈ ಬಹುಜನರ ನುಡಿಬಳಕೆಯ ಪ್ರಭಾವವನ್ನು ಹೊಂದತಕ್ಕದ್ದು ಎಂಬುದು ಈ ‘ಎಲ್ಲರ ಕನ್ನಡ’ ಪ್ರಚಾರಕರ ವಾದವಾಗಿದೆ.

ಅವರ ಪ್ರಕಾರ, ವರ್ಣಮಾಲೆಯಿಂದ ಮಹಾಪ್ರಾಣಾಕ್ಷರಗಳೆಲ್ಲವನ್ನೂ ತೆಗೆಯುವುದು, ವರ್ಣಮಾಲೆಯ ಅಕ್ಷರಗಳನ್ನು 52ರಿಂದ 32 ಅಕ್ಷರಗಳಿಗೆ ಇಳಿಸುವುದು, ಅದಕ್ಕನುಗುಣವಾಗಿ ಕಂಪ್ಯೂಟರ್‌ ಕೀಬೋರ್ಡ್‌ ವಿನ್ಯಾಸ ಪಡಿಸುವುದು, ಕನ್ನಡದ್ದೇ ಆದ ವ್ಯಾಕರಣ, ಪದರಚನೆ, ವಾಕ್ಯರಚನೆಗಳನ್ನು ರೂಪಿಸುವುದು, ಸಂಸ್ಕೃತದ ಬದಲಿಗೆ ಕನ್ನಡದ್ದೇ ಪದಗಳನ್ನು ಬಳಸುವುದು ಇತ್ಯಾದಿ ಸುಧಾರಣೆಗಳಾಗತಕ್ಕದ್ದು.

ಈ ದಿಸೆಯಲ್ಲಿ ಹಿರಿಯ ಭಾಷಾವಿಜ್ಞಾನಿ ಡಿ.ಎನ್.‌ಶಂಕರ ಬಟ್ ಅವರು ಹಲವು ದಶಕಗಳಿಂದ ಸಂಶೋಧಿಸುತ್ತಿದ್ದಾರೆ ಮತ್ತು ನಾಡಿನ ಬಹುತೇಕ ಎಲ್ಲ ಪ್ರಮುಖ ಭಾಷಾವಿಜ್ಞಾನಿಗಳೂ ಶಂಕರ ಬಟ್‌ ವಾದವನ್ನು ಅನುಮೋದಿಸುತ್ತಲೇ ಬಂದಿದ್ದಾರೆ. ಶಂಕರ ಬಟ್‌ ಅವರ ಸಂಶೋಧನೆಗಳನ್ನು ಲೇವಡಿ, ಅಪಹಾಸ್ಯದ ಧಾಟಿಯಲ್ಲಿ ಟೀಕಿಸಿರುವವರುಂಟೇ ವಿನಾ ದೃಢವಾದ ಸೈದ್ಧಾಂತಿಕ ತಳಹದಿಯಲ್ಲಿ ಅದನ್ನು ವಿರೋಧಿಸಿದವರಿಲ್ಲ. ಅಲ್ಲದೇ ಶಂಕರ ಬಟ್‌ರ ಈ ಎಲ್ಲರ ಕನ್ನಡವೆಂಬ ಅಭಿಯಾನ ರಾಜಕೀಯ, ಸಾಮಾಜಿಕ ‘ಸರಿತನ’ದ (ಕರೆಕ್ಟ್‌ನೆಸ್‌) ಅಭಿಯಾನವೂ ಆಗಿದೆ. ಆದರೆ ಭಾಷೆಗೆಲ್ಲಾದರೂ ನಮ್ಮ ಸೈದ್ಧಾಂತಿಕ ಸರಿತನದ ಗೊಡವೆ ಇರುತ್ತದೆಯೇ? ಅಲ್ಲದೆ ನಮ್ಮ ಬಹುತೇಕ ಸಾಹಿತಿ, ಬುದ್ಧಿಜೀವಿಗಳು ಶಂಕರ ಬಟ್‌ರ ವಾದವನ್ನು ಒಪ್ಪುವರಾದರೂ ತಮ್ಮ ಬರವಣಿಗೆಯಲ್ಲಿ ಪ್ರಯೋಗತಃ ಅಳವಡಿಸಿಕೊಳ್ಳಲು
ಹಿಂಜರಿಯುತ್ತಿರುವುದು ಕೌತುಕದ ಸಂಗತಿಯಾಗಿದೆ.

ಈ ಹಿಂದೆ ನನ್ನ ಕೃತಿಯೊಂದು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರಕಟಗೊಳ್ಳಲು ಆಯ್ಕೆ ಯಾಗಿತ್ತು. ನಾನು ಪ್ರಯೋಗಾರ್ಥವಾಗಿ ಇಡೀ ಕೃತಿಯನ್ನು ಶಂಕರ ಬಟ್‌ರ ಕನ್ನಡದಲ್ಲಿ ಬರೆದು ಸಲ್ಲಿಸಿದಾಗ ಅಂದಿನ ಅಧ್ಯಕ್ಷರು (‌ನನ್ನ ವಿದ್ಯಾಗುರುಗಳಾದ ದಿವಂಗತ ಡಾ. ಸಿದ್ಧಲಿಂಗಯ್ಯನವರು) ನನ್ನ ಪ್ರಯೋಗವನ್ನು ಆಕ್ಷೇಪಿಸಿದ್ದರು. ‘ಇದನ್ನು ಮಾಮೂಲಿ ಕನ್ನಡದಲ್ಲಿ ಬರೆದುಕೊಡು’ ಎಂದು ಸೂಚಿಸಿದರು. ಆಗ ನಾನು ‘ಶಂಕರ ಬಟ್‌ರ ವಿಚಾರಗಳನ್ನು ಪುಸ್ತಕ ಪ್ರಾಧಿಕಾರವೇ ಪ್ರಕಟಿಸಿದೆಯಲ್ಲ ಸರ್’ ಎಂದು ವಾದಿಸಿದ್ದೆ. ‘ನಾವು ಎಲ್ಲ ವೈವಿಧ್ಯಮಯ ವಿಚಾರಗಳನ್ನೂ ಪ್ರಕಟಿಸಲು ಸಿದ್ಧರಿದ್ದೇವೆ. ಆದರೆ ಪ್ರಕಟಿಸಿದ ಮಾತ್ರಕ್ಕೆ ಆ ಎಲ್ಲ ವಿಚಾರಗಳನ್ನು ನಾವೂ ಅಂಗೀಕರಿಸಿ ಅಳವಡಿಸಿಕೊಳ್ಳಲು ಸಮ್ಮತಿಸಿದ್ದೇವೆ ಎಂದಲ್ಲ’ ಎಂದು ಹೇಳಿ ಕಳಿಸಿದ್ದರು. ನಾನು ಇಡೀ ಪುಸ್ತಕವನ್ನು ಮತ್ತೊಮ್ಮೆ ಮಾಮೂಲಿ ಕನ್ನಡದಲ್ಲಿ ಬರೆಯಬೇಕಾಯಿತು.

ಕನ್ನಡವನ್ನು ಸುಧಾರಿಸುವ ಈ ಪ್ರಯತ್ನ ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಎಲ್ಲರ ಭಾಷೆ ನಿಜಕ್ಕೂ ಎಲ್ಲರಿಗೂ ಸೇರಿದ ಭಾಷೆಯೇ? ಕರ್ನಾಟಕದಲ್ಲಿ ನೂರು ಕಿ.ಮೀ. ವ್ಯಾಪ್ತಿಯಾಚೆಗೆ ಕನ್ನಡ ಬದಲಾಗುತ್ತದೆ, ಭಾಷೆಯ ಸ್ವರೂಪ, ಉಚ್ಚಾರಣಾ ವಿಧಾನಗಳು ಬದಲಾ ಗುತ್ತಾ ಹೋಗುತ್ತವೆ. ಅಂದಮೇಲೆ ಯಾವ ಕನ್ನಡ ಎಲ್ಲರ ಕನ್ನಡವಾಗುತ್ತದೆ? ಬ್ರಾಹ್ಮಣರು, ಮುಸ್ಲಿಮರು ಮತ್ತು ಧಾರವಾಡ ಪ್ರಾಂತ್ಯದ ಹಲವು ಉಪಭಾಷಿಕರು ಮಹಾಪ್ರಾಣವನ್ನು ಸಹಜವಾಗಿ ತಮ್ಮ ಆಡುನುಡಿಯಲ್ಲಿ ಬಳಸುತ್ತಾರೆ. ಅವರನ್ನು ಈ ಅಭಿಯಾನಕ್ಕೆ ಹೊರಗಿನ ವರೆಂದು ಭಾವಿಸುವುದೇ? ಅಲ್ಲದೆ ವರ್ಣಮಾಲೆಯ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಕಲಿಕೆಯ ಹೊರೆ ಕಡಿಮೆಯಾಗುತ್ತದೆ ಎನ್ನಲು ಯಾವ ವೈಜ್ಞಾನಿಕ ಆಧಾರಗಳಿವೆ? ತಳವರ್ಗಗಳು ಸಾಮಾಜಿಕವಾಗಿ ಪ್ರಬಲವಾದಾಗ ಅವು ತಮಗೆ ವಿಶಿಷ್ಟವಾದ ಸಂಸ್ಕೃತಿ, ಆಚಾರ-ವಿಚಾರಗಳನ್ನು ನಿರ್ಲಕ್ಷಿಸಿ ಮೇಲ್ವರ್ಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನೋಡುವು ದಾದರೆ, ಬಹುಜನ ಸಮಾಜ ಸಾಕ್ಷರವಾದ ಕೂಡಲೇ ಅದು ತನಗೆ ವಿಶಿಷ್ಟವಾದ ಭಾಷೆಯನ್ನು ‘ಎಲ್ಲರ ಭಾಷೆ’ಯ ಸ್ಥಾನಮಾನಕ್ಕೆ ಒಯ್ಯುವುದನ್ನು ಬಿಟ್ಟು ಸಂಸ್ಕೃತ ಭೂಯಿಷ್ಠವಾದ ಮೇಲ್ವರ್ಗದ ಭಾಷೆಯನ್ನು ಅನುಕರಿಸುವ ಸಾಧ್ಯತೆಯನ್ನು ತಳ್ಳಿಹಾಕಲಾದೀತೇ?

ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಭಾಷೆಗೆ ಭಾಷಾ ವಿಜ್ಞಾನ ಸಂಬಂಧಿ ಚರ್ಚೆಗಳಾಚೆಗೂ ಅಸ್ತಿತ್ವವಿದೆ ಎಂಬುದನ್ನು ನಾವು ಮರೆಯಬಾರದು. ಕನ್ನಡವೆಂದರೇನು ಎಂಬ ಪ್ರಶ್ನೆಗೆ ಕವಿ ಗೋಪಾಲಕೃಷ್ಣ ಅಡಿಗರು, ‘ನಾನು ನೀನು ಅವರು’ ಎಂದು ಉತ್ತರಿಸಿ ದ್ದಾರೆ. ಕನ್ನಡದ ಸುಧಾರಣೆಯೆಂದರೆ ನಮ್ಮೆಲ್ಲರ, ಒಟ್ಟಾರೆ ಸಮಾಜದ ಸುಧಾರಣೆಯಾಗಿದೆ. ಕನ್ನಡ ಅನ್ನದ ಭಾಷೆಯಾದಾಗ ಮಾತ್ರ ನಿಜಾರ್ಥದಲ್ಲಿ ಕನ್ನಡದ ಉದ್ಧಾರವಾಗುತ್ತದೆ.

– ಡಾ. ಟಿ.ಎನ್‌.ವಾಸುದೇವಮೂರ್ತಿ

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT