ಬುಧವಾರ, ಮಾರ್ಚ್ 29, 2023
23 °C
ಎಲ್ಲರಲ್ಲಿರುವುದು ಒಬ್ಬನೇ ಭಗವಂತ ಎಂದು ಶಂಕರರು ಘೋಷಿಸಿದಾಗಲೇ ಜಾತಿ ಸಾಯಬೇಕಿತ್ತು

ವಿಶ್ಲೇಷಣೆ: ಜಾತಿ: ಏಕೆ ಇಂದಿಗೂ ಜೀವಂತ?

ಅರುಣ್ ಸಿನ್ಹಾ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಅವರು ಈಚೆಗೆ, ‘ಜಾತಿಯನ್ನು ಸಮಾಧಿ ಮಾಡೋಣ’ ಎಂಬ ಅರ್ಥದಲ್ಲಿ ಕರೆ ನೀಡಿದ್ದಾರೆ. ‘ಜಾತಿ ಸತ್ತುಹೋಗಿದೆಯೇ? ಯಾವಾಗ ಸತ್ತಿದೆ?’ ಎಂಬ ಪ್ರಶ್ನೆಗಳನ್ನು ನಾವು ಅವರಿಗೆ ಕೇಳಬೇಡವೇ?

ಎಲ್ಲರಲ್ಲಿಯೂ ಇರುವುದು ಒಬ್ಬನೇ ಭಗವಂತ, ಇದನ್ನು ಅರಿಯದ ಕಾರಣದಿಂದಾಗಿ ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವ ಕೆಟ್ಟ ಕೆಲಸ ಆಗುತ್ತಿದೆ ಎಂದು ಆದಿ ಶಂಕರರು ಎಂಟನೆಯ ಶತಮಾನದಲ್ಲಿ ಘೋಷಿಸಿದಾಗಲೇ ಜಾತಿ ಸತ್ತುಹೋಗಬೇಕಿತ್ತು. ಆದರೆ ಅದು ಉಳಿದುಕೊಂಡಿತು. ಭಕ್ತಿ ಚಳವಳಿಯ ಸಂತರು, ಮನುಷ್ಯ ಮತ್ತು ದೇವರು ಒಬ್ಬನೇ ಎಂಬ ಭಜನೆಗಳನ್ನು 13ನೆಯ ಶತಮಾನದಿಂದ 16ನೆಯ ಶತಮಾನದವರೆಗೆ ಹಾಡುತ್ತಿದ್ದಾಗ, ಜಾತಿ ಸಾಯುವ ನಿರೀಕ್ಷೆ ಇತ್ತು. ಆದರೂ ಅದು ಬೆಳೆಯಿತು.

ಸಮಾಜ ಸುಧಾರಕರಾದ ರಾಜಾರಾಮಮೋಹನ ರಾಯ್ ಮತ್ತು ಭೀಮರಾವ್ ಅಂಬೇಡ್ಕರ್ ಅವರು 19 ಮತ್ತು 20ನೆಯ ಶತಮಾನದಲ್ಲಿ ನಡೆಸಿದ ಹೋರಾಟಗಳ ಪರಿಣಮವಾಗಿ ಜಾತಿ ಮರೆಯಾಗುವ ನಿರೀಕ್ಷೆ ಇತ್ತು. ಆದರೆ ತೀರಾ ಚಿಕ್ಕಪುಟ್ಟ ಗಾಯಗಳೊಂದಿಗೆ ಅದು ಉಳಿದುಕೊಂಡಿತು. ದೇಶದ ಸಂವಿಧಾನವು ಇಲ್ಲಿ ಎಲ್ಲರೂ ಸಮಾನರು ಎಂದು ಘೋಷಿಸಿದಾಗ ಜಾತಿ ಅಂತ್ಯವಾಗಬೇಕಿತ್ತು. ಆದರೆ ಅದು ಉಳಿದುಕೊಂಡಿತು.

ನಮ್ಮೆದುರು ಗಹಗಹಿಸಿ ನಗುತ್ತಿರುವ ದೈತ್ಯನ ರೀತಿಯಲ್ಲಿ ನಿಂತಿರುವ ಜಾತಿಯನ್ನು ನಾವು ಸಮಾಧಿ ಮಾಡುವುದು ಹೇಗೆ? ಅದನ್ನು ಸಮಾಧಿ ಮಾಡುವ ಮೊದಲು ಕೊಲ್ಲಬೇಕು. ಆದರೆ, ನಮ್ಮ ಕಾಲದ ಯಾವುದೇ ನಾಯಕ ಅಥವಾ ಯಾವುದೇ ಸಂಘಟನೆಯು– ಅದರಲ್ಲಿ ಭಾಗವತ್ ಮತ್ತು ಅವರ ಆರ್‌ಎಸ್‌ಎಸ್‌ ಕೂಡ ಸೇರಿದೆ– ಜಾತಿಯ ಎದೆಯನ್ನು ಸೀಳುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗುತ್ತದೆ. ವಾಸ್ತವದಲ್ಲಿ ಜಾತಿಗೆ ಎಲ್ಲರೂ ನೀರೆರೆದಿದ್ದಾರೆ.

ಗಾಂಧೀಜಿ ಅವರಿಂದಲೇ ಆರಂಭಿಸೋಣ. ರಾಜಕೀಯ ಮತ್ತು ಸಾಮಾಜಿಕ ನೆಲೆಯಲ್ಲಿ ಅವರು ಕ್ರಾಂತಿಕಾರಿ ಆಗಿದ್ದರು.ವರ್ಣಾಶ್ರಮದ ವಿಚಾರದಲ್ಲಿ ಅವರು ಅತಿಯಾದ ಸಂಪ್ರದಾಯವಾದಿ ಆಗಿದ್ದರು. ಹಿಂದೂ ಸಮಾಜವನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಿರುವುದು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ) ಆದರ್ಶಪ್ರಾಯವಾದ ಸಾಮಾಜಿಕ ವ್ಯವಸ್ಥೆ. ತಮ್ಮ ಪೂರ್ವಿಕರ ವೃತ್ತಿಯನ್ನು ಪಾಲಿಸಿಕೊಂಡು ಬಂದವರು ಅದರಲ್ಲಿ ಸಂತೃಪ್ತಿ ಹೊಂದಿದ್ದರು. ಈ ವ್ಯವಸ್ಥೆಯಲ್ಲಿ ದುರಾಸೆ, ಸ್ಪರ್ಧೆ ಮತ್ತು ಹೊಟ್ಟೆಕಿಚ್ಚಿಗೆ ಅವಕಾಶವೇ ಇಲ್ಲ. ವರ್ಣಾಶ್ರಮ ವ್ಯವಸ್ಥೆಯನ್ನು ವಿಶ್ವದ ಇತರ ರಾಷ್ಟ್ರಗಳು ಕೂಡ ತಮ್ಮ ಅನುಕೂಲಕ್ಕಾಗಿ ಅನುಕರಣೆ ಮಾಡಬಹುದು ಎಂದು ಗಾಂಧೀಜಿ ಹೇಳಿದ್ದರು!

ಎಲ್ಲ ಜಾತಿಗಳನ್ನೂ ಸಮಾನವಾಗಿ, ಗೌರವದಿಂದ ಕಾಣಬೇಕು ಎಂದು ಗಾಂಧೀಜಿ ಬಯಸಿದ್ದರು. ವೃತ್ತಿಯನ್ನು ಪೂರ್ವಿಕರಿಂದ ಬಳುವಳಿಯಾಗಿ ಪಡೆಯುವುದನ್ನು ಗಾಂಧೀಜಿ ಸಮರ್ಥಿಸಿಕೊಂಡಿದ್ದರೂ,ವೃತ್ತಿಯಲ್ಲಿ ಮೇಲು–ಕೀಳು ಎಂಬ ವಾದವನ್ನು ಒಪ್ಪುತ್ತಿರಲಿಲ್ಲ. ಜಾತಿ ಆಧಾರಿತ ಅಸಮಾನತೆ ಮತ್ತು ಅಸ್ಪೃಶ್ಯತೆಯು ಅವರ ಪ್ರಕಾರ ವರ್ಣಾಶ್ರಮ ವ್ಯವಸ್ಥೆಯ ವಿಕಾರ ರೂಪವಾಗಿತ್ತು. ಇದನ್ನು ತೊಡೆದುಹಾಕಿ ಆದರ್ಶಪ್ರಾಯವಾದ ವ್ಯವಸ್ಥೆಯನ್ನು ಮತ್ತೆ ಕಟ್ಟಬೇಕು ಎಂಬುದು ಅವರ ನಿಲುವಾಗಿತ್ತು. ಚುಟುಕಾಗಿ ಹೇಳಬೇಕು ಎಂದಾದರೆ, ಗಾಂಧೀಜಿ ಅವರಿಗೆ ಆರಂಭದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲವಾಗುವುದು ಬೇಕಿರಲಿಲ್ಲ; ಅದರಲ್ಲಿ ಸುಧಾರಣೆ ಆಗುವುದು ಬೇಕಿತ್ತು.

ಜಾತಿ ಇಲ್ಲವಾಗಬೇಕು ಎಂದು ನೆಹರೂ ತಾತ್ವಿಕವಾಗಿ ಬಯಸಿದ್ದರು. ಆದರೆ ಪ್ರಧಾನಿಯಾಗಿ ಒಂದಿಷ್ಟು ರಾಜಿ ಮಾಡಿಕೊಂಡು, ಜಾತಿ ಆಧಾರಿತ ಮೀಸಲಾತಿಗೆ ಅವಕಾಶ ಕೊಟ್ಟರು. ಮೀಸಲಾತಿಯು ಆರ್ಥಿಕ ಮಾನದಂಡ ಆಧರಿಸಿ ಇರಬೇಕು ಎಂದು ಅಂದಿನ ಉದಾರವಾದಿ ಬುದ್ಧಿಜೀವಿ ವರ್ಗ ಹೇಳಿತ್ತಾದರೂ, ನೆಹರೂ ಅವರು ಖಚಿತ ನಿಲುವು ತಾಳಲಿಲ್ಲ. ಹಿಂದುಳಿದ ವರ್ಗಗಳಿಗೆ ಎಲ್ಲ ವಲಯಗಳಲ್ಲಿಯೂ ಶೇ 60ರಷ್ಟು ಮೀಸಲಾತಿ ಕಲ್ಪಿಸಿ ಎಂದು ಲೋಹಿಯಾ ಹೇಳಿದ ಮಾತು ಕೊನೆಗೆ ಮಂಡಲ ರಾಜಕಾರಣದಲ್ಲಿ ಪರ್ಯವಸಾನ ಕಂಡಿತು. ಇದನ್ನು ಸಮಾಜಶಾಸ್ತ್ರಜ್ಞ ಜಿ.ಎಸ್. ಘುರ್ಯೆ ಅವರು ‘ಜಾತಿ ದೇಶಭಕ್ತಿ’ ಎಂದು ಕರೆದಿದ್ದಾರೆ.

ಜಾತಿ ಇಂದು ಕಾರ್ಮಿಕ ಸಂಘಟನೆಗಳ ರೀತಿಯಲ್ಲಿಯೇ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ. ಜಾತಿಯ ನಿರ್ಮೂಲನೆ ಇಂದು ಸಾಧ್ಯವಿಲ್ಲ. ಅಂಬೇಡ್ಕರ್‌
ವಾದಿ ಮತ್ತು ಮಂಡಲ್ ರಾಜಕೀಯ ಪಕ್ಷಗಳ ಜೀವನಾಡಿ ಜಾತಿ. ಜಾತಿಗಳ ಆಧಾರದಲ್ಲಿನ ಮೀಸಲಾತಿಯನ್ನು ನಿಲ್ಲಿಸುವುದಕ್ಕೆ ಅವುಗಳ ಸಹಮತ ಇಲ್ಲ. ಈ ವಿಚಾರವಾಗಿ ಭಾಗವತ್ ಅವರು ದೊಡ್ಡ ಅನುಭವ ಹೊಂದಿದ್ದಾರೆ. 2015ರ ಬಿಹಾರ ವಿಧಾನಸಭಾ ಚುನಾವಣೆ ವೇಳೆ ಅವರು ಮೀಸಲಾತಿ ಇಲ್ಲವಾಗಿಸುವ ಸಂದರ್ಭ ಇದು ಎಂದು ಹೇಳಿದ್ದರು. ಆಗ ಬಿಜೆಪಿ ವಿರೋಧಿ ಮತಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದವು.

ಭಾಗವತ್ ಮತ್ತು ಆರ್‌ಎಸ್‌ಎಸ್‌ ‘ಜಾತಿ ವ್ಯವಸ್ಥೆ ಕೊನೆಗೊಳ್ಳಬೇಕು’ ಎಂದು ಹೇಳಿದಾಗಲೆಲ್ಲ, ಆ ಮಾತು ದುರ್ಬಲ ಜಾತಿಗಳನ್ನು ಉದ್ದೇಶಿಸಿರುತ್ತದೆ. ಈ ಮಾತನ್ನು ಅವರು ‍ಪ್ರಬಲ ಜಾತಿಗಳನ್ನು ಉದ್ದೇಶಿಸಿ ಹೇಳುವುದಿಲ್ಲ. ದುರ್ಬಲ ಜಾತಿಗಳು ಪ್ರಬಲ ಜಾತಿಗಳ ವಿರುದ್ಧ ನಿಲ್ಲುತ್ತಿವೆ, ಇದು ಹಿಂದೂ ಕುಟುಂಬವನ್ನು ಒಡೆಯುತ್ತಿದೆ, ಹಿಂದೂ ಕುಟುಂಬವು ಮತ್ತೆ ಒಂದಾಗಬೇಕು ಎಂಬ ನೆಲೆಯಲ್ಲಿ ಅವರು ಮಾತನಾಡುತ್ತಾರೆ. ಜಾತಿಯನ್ನು ಸಮಾಧಿ ಮಾಡಬೇಕು ಎಂದು ಭಾಗವತ್ ಹೇಳಿದ ಮಾತಿನ ಅರ್ಥ ದಲಿತರು ಮತ್ತು ಹಿಂದುಳಿದ ವರ್ಗಗಳು ಹಿಂದೂ ತೆಕ್ಕೆಗೆ ಮರಳಬೇಕು ಎಂದೇ ಆಗಿದೆ. ಅಸಮಾನ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ನಾಶ ಮಾಡಿ, ಅದನ್ನು ಸಮಾನತೆಯ ನೆಲೆಯಲ್ಲಿ ಕಟ್ಟುವುದು ಆರ್‌ಎಸ್‌ಎಸ್‌ ಗುರಿ ಅಲ್ಲ. ಆರ್‌ಎಸ್‌ಎಸ್‌ ಕೂಡ ಅಸ್ಪೃಶ್ಯತೆಯನ್ನು ‘ವಿಕಾರ’ವೆಂದಷ್ಟೇ ಭಾವಿಸುತ್ತದೆ. ಇಂತಹ ವಿಕಾರಗಳು ಇಲ್ಲವಾಗಬೇಕು ಎಂದು ಆರ್‌ಎಸ್‌ಎಸ್‌ ಬಯಸುತ್ತದೆ. ಗಾಂಧಿ ಅವರಿಗೆ ಮಾನವ ಸಮಾನತೆಯ ಸ್ಥಾಪನೆಗೆ ಇದು ನಿರ್ಮೂಲವಾಗಬೇಕಿತ್ತು. ಆದರೆ ಆರ್‌ಎಸ್‌ಎಸ್‌ಗೆ, ಇಸ್ಲಾಮಿಕ್ ಮತ್ತು ಕ್ರೈಸ್ತ ಮಿಷನರಿಗಳು ನಡೆಸುವ ಮತಾಂತರ ಎದುರಿಸಲು ಹಿಂದೂ ಭ್ರಾತೃತ್ವವನ್ನು ಸ್ಥಾಪಿಸಲು ಇದು ಬೇಕಾಗಿದೆ.

ದಲಿತರನ್ನು ‘ಹಿಂದೂ ಕುಟುಂಬ’ದೊಳಗೆ ಸೇರಿಸಿಕೊಳ್ಳಲು ಆರ್‌ಎಸ್‌ಎಸ್‌ ದಶಕಗಳಿಂದ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ದಲಿತರು ದೇವಸ್ಥಾನ ಪ್ರವೇಶಿಸಲು ಆರ್‌ಎಸ್‌ಎಸ್‌ನ ಸ್ಥಳೀಯ ಘಟಕಗಳು ಹಲವೆಡೆ ಕೆಲಸ ಮಾಡುತ್ತಿವೆ. ದಲಿತರ ಜೊತೆ ಸಹಭೋಜನವನ್ನು ಆರ್‌ಎಸ್‌ಎಸ್‌ ಪ್ರೋತ್ಸಾಹಿಸು
ತ್ತಿದೆ. ಭಾಗವತ್ ಅವರು ಒಂದು ಪ್ರಶ್ನೆಯನ್ನು ತಮಗೇ ಕೇಳಿಕೊಳ್ಳಬೇಕು: ಸರಿಸುಮಾರು ಶತಮಾನದಿಂದ ನಡೆಯುತ್ತಿರುವ ಆರ್‌ಎಸ್‌ಎಸ್‌ ಕಾರ್ಯದಿಂದ ಜಾತಿ ದೂರವಾಗಿದೆಯೇ? ಹೋಗಿಲ್ಲವೆಂದಾದರೆ, ಏಕೆ?

ನಾಲ್ಕು ಕಾರಣಗಳಿಂದಾಗಿ ಅದು ದೂರ ಹೋಗಿಲ್ಲ. ಒಂದು: ಜಾತಿಯ ಬೇರಿನ ಮೇಲೆ ಆರ್‌ಎಸ್‌ಎಸ್‌ ಯಾವತ್ತೂ ದಾಳಿ ನಡೆಸಿಲ್ಲ. ಪವಿತ್ರವೆಂದು ಹೇಳಲಾಗಿ
ರುವ ಕೆಲವು ಹಿಂದೂ ಪಠ್ಯಗಳಲ್ಲಿ ಜಾತಿಗೆ ಅನುಮತಿ ನೀಡ
ಲಾಗಿದೆ. ಈ ಪಠ್ಯಗಳನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿಲ್ಲ.

ಎರಡು: ಈ ಅನುಮತಿಗಳ ಕಾರಣದಿಂದಾಗಿ ಬ್ರಾಹ್ಮಣರು ಮಾತ್ರ ಅರ್ಚಕರಾಗಬಹುದು. ಅರ್ಚಕ ವೃತ್ತಿಯು ಒಂದು ಸೇವೆಯಂತೆ ಪರಿಗಣಿತವಾಗಬೇಕು,
ಎಲ್ಲ ಜಾತಿಗಳ ಜನರಿಗೂ ಇದನ್ನು ಕೈಗೆತ್ತಿಕೊಳ್ಳಲು ಅವಕಾಶವಿರಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಜಾತಿ ವ್ಯವಸ್ಥೆಯ ಹೃದಯ ಭಾಗದಲ್ಲಿರುವುದು ಬ್ರಾಹ್ಮಣರಿಗೆ ಮಾತ್ರ ಈ ಅವಕಾಶ ಎಂಬ ನಿಯಮ. ಅರ್ಚಕರಾಗಲು ಎಲ್ಲರಿಗೂ ಅವಕಾಶ ಕಲ್ಪಿಸಿದರೆ, ಜಾತಿ ವ್ಯವಸ್ಥೆ ಕುಸಿಯುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಆರ್‌ಎಸ್‌ಎಸ್‌ ಇದಕ್ಕೆ ಯಾವತ್ತೂ ಬೆಂಬಲ ನೀಡಿಲ್ಲ.

ಮೂರನೆಯದು: ದುರ್ಬಲ ಜಾತಿಗಳು ‘ಹಿಂದೂ ಕುಟುಂಬ’ದಿಂದ ಏಕೆ ದೂರವಾಗುತ್ತಿವೆ ಎಂಬುದನ್ನು ಆರ್‌ಎಸ್‌ಎಸ್‌ ಯಾವತ್ತೂ ತನ್ನ ಧಾರ್ಮಿಕ ಕನ್ನಡಕ ತೆಗೆದಿರಿಸಿ ಗಮನಿಸಿಲ್ಲ. ಶೋಷಣೆ, ತುಳಿತ, ಹಿಂಸೆಗೆ ದುರ್ಬಲ ಜಾತಿಗಳು ಯಾವಾಗಲೂ ತುತ್ತಾಗುತ್ತಿವೆ. ಅವ
ರನ್ನು ಪ್ರಬಲ ಜಾತಿಗಳಿಗೆ ಸೇರಿದವರು ತಮ್ಮ ಸಹೋದರ
ರಂತೆ ಕಂಡಿದ್ದರೆ ಜಾತೀಯತೆಯೇ ಇರುತ್ತಿರಲಿಲ್ಲ.

ನಾಲ್ಕನೆಯದು: ಪ್ರಬಲ ಜಾತಿಗಳ ಜಾತೀಯತೆಗೆ ಪ್ರತಿಯಾಗಿ ಅಂಬೇಡ್ಕರ್‌ವಾದಿಗಳು ಮತ್ತು ಮಂಡಲ್‌ ಪಕ್ಷಗಳ ಜಾತೀಯತೆ ಚಾಲ್ತಿಗೆ ಬಂತು. ಆರ್‌ಎಸ್‌ಎಸ್ ತನ್ನ ಸಂಘಟನಾ ಬಲವನ್ನು ಬಳಸಿ ‍ಪ್ರಬಲ ಜಾತಿಗಳ ಜಾತೀಯತೆಯ ವಿರುದ್ಧ ಹೋರಾಡದಿದ್ದರೆ, ಜಾತಿಯನ್ನು ಕೊನೆಗಾಣಿಸಬೇಕು ಎಂದು ಅದು ನೀಡುವ ಕರೆ
ಬೂಟಾಟಿಕೆಯದ್ದಾಗಿ ಕಾಣುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು