ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ನೆನಪುಗಳ ತೀನ್‌ ಮೂರ್ತಿ ಭವನ: ನೆಹರೂ ಬದುಕಿನ ಸವಿನೆನಪುಗಳ ಆಗರ

Last Updated 21 ಆಗಸ್ಟ್ 2022, 0:00 IST
ಅಕ್ಷರ ಗಾತ್ರ

ದೇಶ, ವಿದೇಶದ ಘನ ವಿದ್ವಾಂಸರ ಮಹಾಕೃತಿಗಳ ಸಂಗ್ರಹವಿರುವ ಗ್ರಂಥಾಲಯ, ಇತಿಹಾಸದ ವೈಭವಕ್ಕೆ ಸಾಕ್ಷಿಯಾಗಿರುವ ವಸ್ತು ಸಂಗ್ರಹಾಲಯ, ಪ್ರಾಂಗಣದಲ್ಲಿ ಅರಳಿರುವ ಹೂಗಳ ಕಂಪು ಮತ್ತು ಸಂಜೆಯಾದರೆ ಅಂಜಿಕೆಯಿಲ್ಲದೆ ಅಡ್ಡಾಡುವ ನವಿಲುಗಳು ತೀನ್‌ ಮೂರ್ತಿ ಭವನದ ಹೆಗ್ಗುರುತುಗಳಾಗಿವೆ.

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಬದುಕಿನ ಸವಿನೆನಪುಗಳನ್ನು ಸಾರುವ ತೀನ್ ಮೂರ್ತಿ ಭವನದಲ್ಲಿ ಅಡ್ಡಾಡುವಾಗ ಆಗುವ ಅನುಭೂತಿ ವರ್ಣಿಸಲಸದಳ. ಭವನದೊಳಗೆ ಹೆಜ್ಜೆ ಹಾಕುತ್ತಾ ಮುಂದುವರಿಯುತ್ತಿದ್ದಂತೆಯೇ ಚಿಕ್ಕ ಬಾಲಕ ನೆಹರೂ, ಸ್ಫುರದ್ರೂಪಿ ಯುವಕನಾಗಿ, ಶ್ರೇಷ್ಠ ನಾಯಕನಾಗಿ ಬೆಳೆದ ಹಾದಿಯ ಚಿತ್ರಗಳು ಒಂದೊಂದಾಗಿ ಎದುರಾಗುತ್ತಾ ಸಾಗುತ್ತವೆ.

ದೇಶ, ವಿದೇಶದ ಘನ ವಿದ್ವಾಂಸರ ಮಹಾಕೃತಿಗಳ ಸಂಗ್ರಹವಿರುವ ಗ್ರಂಥಾಲಯ, ಇತಿಹಾಸದ ವೈಭವಕ್ಕೆ ಸಾಕ್ಷಿಯಾಗಿರುವ ವಸ್ತು ಸಂಗ್ರಹಾಲಯ, ಪ್ರಾಂಗಣದಲ್ಲಿ ಅರಳಿರುವ ಹೂಗಳ ಕಂಪು ಮತ್ತು ಸಂಜೆಯಾದರೆ ಅಂಜಿಕೆಯಿಲ್ಲದೆ ಅಡ್ಡಾಡುವ ನವಿಲುಗಳು ತೀನ್‌ ಮೂರ್ತಿ ಭವನದ ಹೆಗ್ಗುರುತುಗಳಾಗಿವೆ.

ಮರದ ನೆರಳಿನಲ್ಲಿ ವಿದ್ಯುತ್ ಬೆಳಕಿಗೆ ಹೊಳೆಯುವ ನೆಹರೂ, ಇಂದಿರಾ ಮತ್ತು ರಾಜೀವ್‌ ಗಾಂಧಿ ಅವರ ಸ್ಮಾರಕಗಳು, ಕಲ್ಲುಗಳಲ್ಲಿ ಕೆತ್ತಲಾದ ಅವರ ಜನಪ್ರಿಯ ಭಾಷಣದ ತುಣುಕುಗಳು ಕಾಲ ಸರ‍್ರನೇ ಅರ್ಧ ಶತಮಾನ ಹಿಂದಕ್ಕೆ ಸರಿಯುವಂತೆ ಮಾಡುತ್ತವೆ.

ಯುವಕ ನೆಹರೂ, ವಕೀಲರಾಗಿದ್ದ ತಂದೆ ಮೋತಿಲಾಲ್‌ ನೆಹರೂ ಅವರೊಂದಿಗೆ ಒಂದೇ ರೀತಿಯ ಡಿನ್ನರ್ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡ ಚಿತ್ರ, ಅಚ್ಚುಮೆಚ್ಚಿನ ತಾಣವಾದ ಕಾಶ್ಮೀರದಲ್ಲಿ ಕುದುರೆ ಸವಾರಿ ಮಾಡುತ್ತಾ, ತಮ್ಮ ಸಹೋದರಿಯರೊಂದಿಗೆ ಗಹನಚರ್ಚೆಯಲ್ಲಿ ತೊಡಗಿರುವ ಚಿತ್ರ ಒಂದೊಂದಾಗಿ ಹಿಂದೆ ಸರಿಯುತ್ತಾ ಹರೆಯದ‌ ದಿನಗಳಲ್ಲಿನ ಅವರ ವ್ಯಕ್ತಿತ್ವ ಹೇಗಿತ್ತು ಎಂಬ ಝಲಕ್‌ಗಳನ್ನು ಪರಿಚಯಿಸುತ್ತಾ ಹೋಗುತ್ತವೆ.

ಮ್ಯೂಸಿಯಂನಲ್ಲಿ ನೆಹರೂ ಅವರ ಮನೆಯ ಲಿವಿಂಗ್‌ ರೂಮ್‌, ಬೆಡ್ ರೂಮ್‌ ಮತ್ತು ಸ್ಟಡಿ ಟೇಬಲ್‌ಗಳನ್ನು ಕಾಣಬಹುದು. ಚಾಚಾ ನೆಹರೂ ಧರಿಸಿದ್ದ ಕೋಟು ಹಾಗೂ ಅದರ ಜೇಬಿನಲ್ಲಿದ್ದ ಹೂವು ಇಂದಿಗೂ ಮಕ್ಕಳ ಪಾಲಿಗೆ ನೆಚ್ಚಿನ ದಿರಿಸು. ಅವುಗಳೊಂದಿಗೆ ನೆಹರೂ ಬಳಸಿದ್ದ ಇತರ ಪರಿಕರಗಳೂ ಇಲ್ಲಿವೆ. ಜೊತೆಗೆ, ಅವರಿಗೆ ದೊರೆತ ಭಾರತರತ್ನ ಪ್ರಶಸ್ತಿಯೂ ಹೊಳೆಯುತ್ತಿದೆ. ಅವರ ಕಾಲದಲ್ಲಿ ನಡೆದ ಭಾರತ-ಚೀನಾ ಯುದ್ಧದ ಚಿತ್ರಗಳು ಅಲ್ಲಿ ಹರಡಿಕೊಂಡಿವೆ. ಅವರ ಅದ್ಭುತ ಭಾಷಣಗಳ ಸಾರಗಳೆಲ್ಲವೂ ಅಲ್ಲಿ ಬಿಂಬಿತವಾಗಿದ್ದು, ಅವರ ವ್ಯಕ್ತಿತ್ವದ ಚಿತ್ರಣವನ್ನು ಕಟ್ಟಿಕೊಡುತ್ತಿವೆ.

ಪತ್ರ ಬರೆಯುವ ಪ್ರವೃತ್ತಿಗೆ ಜನಪ್ರಿಯವಾಗಿದ್ದ ನೆಹರೂ ಅವರಿಗೆ ಇತರ ದೇಶದ ನಾಯಕರು ಬರೆದ ಪತ್ರಗಳು, ಅವರು ಜೈಲಿನಲ್ಲಿದ್ದಾಗ, ಅವರ ಸಹೋದರಿ ಬರೆದ ಪತ್ರಗಳು ಹಾಗೂ ನೆಹರೂ ಅವರೇ ಇತರರಿಗೆ ಬರೆದ ಪತ್ರಗಳ ಸ್ಕ್ಯಾನ್ ಮಾಡಿರುವ ಪ್ರತಿಗಳು ಅವರ ವಿದ್ವತ್ತಿಗೆ ಕನ್ನಡಿ ಹಿಡಿಯುತ್ತವೆ. ನೆಹರೂ ಅವರು ಕೊನೆಯುಸಿರು ಎಳೆದಾಗ, ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿರುವುದು ಹಾಗೂ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿರುವ ದೃಶ್ಯಗಳನ್ನು ಇಲ್ಲಿ ಬೃಹತ್ ಪರದೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಭಾರತ ಮಾತೆ ತನ್ನ ಹೆಮ್ಮೆಯ ಪುತ್ರನ ಅಗಲಿಕೆಯಿಂದ ಅನುಭವಿಸಿದ ನೋವನ್ನು ಅದು ಕಟ್ಟಿಕೊಡುತ್ತದೆ. ಸಂವಿಧಾನ ರಚನಾ ಪ್ರಕ್ರಿಯೆಯನ್ನು ಇನ್ನಷ್ಟು ಆಸಕ್ತಿಕರವಾಗಿ ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ.

ಕಪ್ಪು ಹಲಗೆಯ ಮೇಲೆ ಎಲ್ಇಡಿ ಬೆಳಕಿನ ಬಿಳಿ ಅಕ್ಷರಗಳು ಗಮನ ಸೆಳೆಯುತ್ತವೆ. ಸಂವಿಧಾನ ರಚನೆಯ ಹಂತಗಳು, ಚರ್ಚೆಗಳು ಮತ್ತು ಪ್ರಕ್ರಿಯೆಗಳನ್ನು ಆಸಕ್ತಿದಾಯಕವಾಗಿ ಕಟ್ಟಿಕೊಡಲಾಗಿದೆ. ಸಂವಿಧಾನದ ಕುರಿತು ದೇಶದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಸಂದೇಶದ ಪ್ರತಿಯೊಂದಿಗೆ, ಆ ಪ್ರತಿಗೆ ಅವರೇ ಸಹಿ ಹಾಕುತ್ತಿರುವ ನೋಟ ಜೀವ ಪಡೆದು ಬಂದಂತೆ ತೋರುತ್ತದೆ. ಸಂವಿಧಾನದ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಷಣದ ತುಣುಕುಗಳನ್ನು ಕೂಡ ಇಲ್ಲಿ ಕಣ್ತುಂಬಿಕೊಳ್ಳಬಹುದು.

ಭಾರತ ಹಲವು ಭಾಷೆಗಳ ನೆಲೆವೀಡು. ಇಲ್ಲಿನ ಸಂವಿಧಾನ ಕೂಡ ಆಯಾ ಪ್ರಾಂತ್ಯಗಳಿಗೆ ಆಯಾ ಭಾಷೆಗಳಲ್ಲಿ ಲಭ್ಯವಿದೆ. ಕನ್ನಡವೂ ಸೇರಿದಂತೆ ಭಾರತದ ಯಾವುದೇ ಭಾಷೆಯಲ್ಲಿ ಸಂವಿಧಾನವನ್ನು ಇಲ್ಲಿ ಪರದೆ ಮೇಲೆ ಓದಬಹುದು.

ಈ ಸುಂದರ ಕಟ್ಟಡವನ್ನು ನಿರ್ಮಿಸಿದ್ದು ದೆಹಲಿಯ ಕನ್ಹಾಟ್ ಪ್ಲೇಸ್ ಹಾಗೂ ಪಟೌಡಿ ಪ್ಯಾಲೇಸ್ ಅನ್ನು ನಿರ್ಮಿಸಿದ ಬ್ರಿಟಿಷ್‌ ಸೇನಾನಿ ರಾಬರ್ಟ್ ಟೋರ್ ರಸೆಲ್. ಹಿಂದೆ ಅದನ್ನು ‘ಫ್ಲಾಗ್ ಸ್ಟಾಫ್‌ ಹೌಸ್‌’ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಅವರ ಅಧಿಕೃತ ನಿವಾಸ ಇದಾಗಿತ್ತು. ವಿಕ್ಟೋರಿಯಾ ಹಾಗೂ ಫ್ರೆಂಚ್ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ಕಟ್ಟಡವನ್ನು ಕಲ್ಲು ಮತ್ತು ಸಿಮೆಂಟ್ ಬಳಸಿ ನಿರ್ಮಿಸಲಾಗಿದೆ.

ಕಟ್ಟಡಕ್ಕೆ ಎರಡನೇ ಮಹಾಯುದ್ಧದಲ್ಲಿ ಸಿರಿಯಾ, ಪ್ಯಾಲೆಸ್ಟೀನ್ ಮತ್ತು ಸಿನಾಯ್‌ನಲ್ಲಿ ಪರಾಕ್ರಮ ಮೆರೆದ ಜೋಧಪುರ, ಹೈದರಾಬಾದ್ ಮತ್ತು ಮೈಸೂರು ಲ್ಯಾನ್ಸರ್‌ಗಳ ಗೌರವಾರ್ಥ ‘ತೀನ್‌ಮೂರ್ತಿ ಭವನ’ ಎಂದು ನಾಮಕರಣ ಮಾಡಲಾಯಿತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮತ್ತೊಂದು ಘಟಕವನ್ನು ಸೇರಿಸಿದ ಬಳಿಕ ಇದನ್ನು ‘ಪ್ರಧಾನಮಂತ್ರಿ ಸಂಗ್ರಹಾಲಯ’ ಎಂದು 2022ರ ಏಪ್ರಿಲ್‌ನಲ್ಲಿ ಮರು ನಾಮಕರಣ ಮಾಡಲಾಯಿತು.

ತೀನ್‌ ಮೂರ್ತಿ ಭವನದಲ್ಲಿ ಒಟ್ಟು 43 ಗ್ಯಾಲರಿಗಳಿವೆ. ಎರಡು ಕಟ್ಟಡಗಳ ಒಟ್ಟು ವಿಸ್ತೀರ್ಣ 15,619 ಚದರ ಮೀಟರ್‌. ಹೊಸದಾಗಿ ನಿರ್ಮಾಣವಾಗಿರುವ ವಸ್ತು ಸಂಗ್ರಹಾಲಯವನ್ನು ₹306 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೆಹರೂ ನೆಲೆಸಿದ್ದ ತೀನ್‌ ಮೂರ್ತಿ ಭವನವನ್ನು ಬ್ಲಾಕ್‌ 1 ಎಂದು ಹೆಸರಿಸಲಾಗಿದೆ. ಹೊಸ ಕಟ್ಟಡಕ್ಕೆ ಬ್ಲಾಕ್‌ 2 ಎಂದು ಹೆಸರಿಡಲಾಗಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಭಾರತದ ಪ್ರಧಾನಮಂತ್ರಿ ತೀನ್‌ ಮೂರ್ತಿ ಭವನದಲ್ಲಿ ನೆಲೆಸಬೇಕೆಂದು ನಿರ್ಧರಿಸಲಾಯಿತು. ನೆಹರೂ ಅವರು ಪ್ರಧಾನಿಯಾಗಿದ್ದ 16 ವರ್ಷಗಳ ಕಾಲವೂ ಇದೇ ಮನೆಯಲ್ಲಿ ವಾಸವಾಗಿದ್ದರು. ಸ್ವಾತಂತ್ರ್ಯದ ನಂತರದ ನವ ಭಾರತ ನಿರ್ಮಾಣಕ್ಕೆ ಈ ಮನೆಯಲ್ಲೇ ನೆಹರೂ ಕನಸು ಕಂಡರು. ಅದಕ್ಕೆ ತಕ್ಕ ಯೋಜನೆಗಳನ್ನು ರೂಪಿಸಿದರು.

1947ರಿಂದ ಭಾರತ ಬೆಳೆದುಬಂದ ಚಿತ್ರಣವನ್ನು ಪ್ರಧಾನಮಂತ್ರಿ ವಸ್ತುಸಂಗ್ರಹಾಲಯವು ತೋರಿಸುತ್ತಿದೆ. ಎಲ್ಲ ಮಾಜಿ ಪ್ರಧಾನಿಗಳ ಸಾಧನೆಗಳ ಕುರಿತ ವಿವರಗಳು ಗ್ಯಾಲರಿಯಲ್ಲಿವೆ. ಉದಯಿಸುತ್ತಿರುವ ಭಾರತ, ಅದರ ನಾಯಕರಿಂದ ಆಕಾರ ಪಡೆದ ಹಾಗೂ ರೂಪುಗೊಂಡ ಕಥೆಯ ಸ್ಫೂರ್ತಿಯೊಂದಿಗೆ ಮ್ಯೂಸಿಯಂ ಕಟ್ಟಡವನ್ನು ವಿನ್ಯಾಸ ಮಾಡಲಾಗಿದೆ. ದೇಶ ಮತ್ತು ಪ್ರಜಾಪ್ರಭುತ್ವವನ್ನು ಬಿಂಬಿಸುವ ಚಕ್ರವನ್ನು ಹಿಡಿದ ಜನರ ಕೈಗಳನ್ನು ಕಟ್ಟಡದ ಚಿಹ್ನೆ ಸಂಕೇತಿಸುತ್ತದೆ.

ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಸುಲಭವಾಗಿ ಮತ್ತು ಆಸಕ್ತಿಕರ ರೀತಿಯಲ್ಲಿ ಮಾಹಿತಿಗಳನ್ನು ನೀಡುವ ಪ್ರಯತ್ನವಾಗಿದೆ. ಇದಕ್ಕಾಗಿ ಹಾಲೋಗ್ರಾಮ್, ವರ್ಚ್ಯುವಲ್ ರಿಯಾಲಿಟಿ, ಬಹು ಸ್ಪರ್ಶ, ಬಹು-ಮಾಧ್ಯಮ, ಪ್ರತಿಕ್ರಿಯಾತ್ಮಕ ಕಿಯಾಸ್ಕ್‌, ಕಂಪ್ಯೂಟರೀಕೃತ ಕೈನೆಟಿಕ್ ಕೆತ್ತನೆಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು, ಇಂಟರಾಕ್ಟೀವ್ ಪರದೆಗಳನ್ನು ಬಳಸಲಾಗಿದೆ.

ಹೊಸ ಕಟ್ಟಡದಲ್ಲಿ ಪ್ರಮುಖ ಆಕರ್ಷಣೆಯೆಂದರೆ, ಎಲ್ಲ ಪ್ರಧಾನಿಗಳ ಭಾವಚಿತ್ರ, ವಿವರ ನೀಡುವ ಬೃಹತ್‌ ಗ್ಯಾಲರಿ. ಇದರಲ್ಲಿ ಸಾಗುತ್ತಿದ್ದಂತೆ, ಅದು ನಿಮ್ಮನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಮಾಜಿ ಪ್ರಧಾನ ಮಂತ್ರಿಗಳ ಭಾವಚಿತ್ರ ಹಾಗೂ ಸಾಧನೆಗಳ ವಿವರಗಳಿವೆ.

ಹೊಸ ಕಟ್ಟಡದಲ್ಲಿ ಮೊದಲಿಗೆ ಸಿಗುವುದು 1965ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಿದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಗ್ಯಾಲರಿ. ಶಾಸ್ತ್ರಿ ಅವರ ‘ಜೈ ಜವಾನ್‌ ಜೈ ಕಿಸಾನ್‌’ ನೀತಿಯ ವಿವರಗಳು ಹಾಗೂ ಅವರು ಆಲ್‌ ಇಂಡಿಯಾ ರೇಡಿಯೊಗಾಗಿ ಮಾತನಾಡುತ್ತಿರುವ ಪ್ರತಿಕೃತಿಯನ್ನು ಕಾಣಬಹುದು. ನಮ್ಮೆದುರೇ ನಿಂತು ಅವರು ಮಾತನಾಡುತ್ತಿರುವಂತೆ ಅದನ್ನು ಕಟ್ಟಿ ಕೊಡಲಾಗಿದೆ.

ಇಂದಿರಾಗಾಂಧಿ ಅವರು 1971ರ ಯುದ್ಧದ ವೇಳೆ ತೆಗೆದುಕೊಂಡ ನಿರ್ಧಾರಗಳು, ಪೋಖ್ರಾನ್‌ 1 ಹಾಗೂ ಪಂಜಾಬ್ ಮತ್ತು ಅಸ್ಸಾಂನಲ್ಲಿನ ಅರಾಜಕತೆ, ತುರ್ತು ಪರಿಸ್ಥಿತಿಯ ಘೋಷಣೆ ಸಂದರ್ಭದ ದಾಖಲೆಗಳನ್ನು ಸಂಗ್ರಹಿಸಿಡಲಾಗಿದೆ. ಮೊರಾರ್ಜಿ ದೇಸಾಯಿ ಅವರ ವಿಭಾಗದಲ್ಲಿ ಜನತಾ ಮೋರ್ಚಾದ ಸ್ಥಾಪನೆ, ಶಾ ಆಯೋಗ ರಚನೆಯಲ್ಲಿ ಅವರ ಮುಂದಾಳತ್ವ, ಲೋಕಪಾಲ್ ಮಸೂದೆಯ ಮಂಡನೆಯ ಕುರಿತ ವಿವರಗಳಿವೆ. ಲೋಕಪಾಲ್ ಮಸೂದೆ ಕುರಿತ ಸಂಪೂರ್ಣ ಕಡತವನ್ನು ಸ್ಕ್ಯಾನ್ ಮಾಡಿದ ಪ್ರತಿಯಲ್ಲಿ ಪ್ರೊಜೆಕ್ಟರ್ ಮೂಲಕ ನೋಡುವ ಅವಕಾಶವನ್ನು ಕೂಡ ಇಲ್ಲಿ ಕಲ್ಪಿಸಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ಗ್ಯಾಲರಿಯಲ್ಲಿ ಆಪರೇಷನ್ ಶಕ್ತಿ, ಲಾಹೋರ್‌ಗೆ ಬಸ್‌ ಯಾತ್ರೆ, ಅವರ ಕಾಲದಲ್ಲಿನ ರಾಷ್ಟ್ರೀಯ
ಹೆದ್ದಾರಿ ಅಭಿವೃದ್ಧಿಗಳ ಕುರಿತ ಸಾಧನೆಗಳನ್ನು ವಿವರಿಸಲಾಗಿದೆ. ಮನಮೋಹನ್‌ ಸಿಂಗ್‌ ಗ್ಯಾಲರಿಯಲ್ಲಿ, ಅವರ ಕಾಲದಲ್ಲಿ ಜಾರಿಗೆ ತಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಆಂಧ್ರ ಪ್ರದೇಶದ ಪುನರ್‌ ರಚನೆ ಹಾಗೂ ಭಾರತ– ಅಮೆರಿಕ ಅಣು ಒಪ್ಪಂದದ ವಿವರಗಳಿವೆ.

ರಾಜೀವ್‌ ಗಾಂಧಿ ಗ್ಯಾಲರಿಯಲ್ಲಿ ಕಂಪ್ಯೂಟರ್ ಹಾಗೂ ದೂರ ಸಂಪರ್ಕ ಕ್ಷೇತ್ರದಲ್ಲಿನ ಸಾಧನೆಗಳು, ಬೋಫೋರ್ಸ್ ವಿವಾದ ಮತ್ತು ಪಂಜಾಬ್, ಅಸ್ಸಾಂ ಮತ್ತು ಮಿಜೋ ಶಾಂತಿ ಒಪ್ಪಂದಗಳ ಬಗ್ಗೆ ಮಾಹಿತಿಗಳಿವೆ. ಕಿರು ಅವಧಿಗೆ ಪ್ರಧಾನಿಗಳಾಗಿದ್ದ ಎಚ್.ಡಿ. ದೇವೇಗೌಡ, ಇಂದ್ರಕುಮಾರ್ ಗುಜ್ರಾಲ್, ಚಂದ್ರಶೇಖರ್, ಚರಣ್ ಸಿಂಗ್ ಅವರ ಕುರಿತ ವಿವರಗಳೂ ಇಲ್ಲಿವೆ. ಇದನ್ನೆಲ್ಲ ನೋಡಿಕೊಂಡು ಹೊರಕ್ಕೆ ಬರುವಾಗ ಸಂಜೆಯಾಗಿರುತ್ತದೆ. ಮ್ಯೂಸಿಯಂ ಹೊರಗೆ ಜನರ ಸಮೀಪದಲ್ಲೇ ಅಡ್ಡಾಡುವ ನವಿಲುಗಳು ಮನಕ್ಕೆ ಮುದ ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT