ಬುಧವಾರ, ಅಕ್ಟೋಬರ್ 5, 2022
27 °C

ತೌಳವ ನೆಲದ ಅಬ್ಬಕ್ಕ: ಸ್ವಾತಂತ್ರ್ಯ, ಸ್ವಾಭಿಮಾನದ ‘ಅಪ್ಪೆ’

ಸತೀಶ್ ಕೊಣಾಜೆ Updated:

ಅಕ್ಷರ ಗಾತ್ರ : | |

Prajavani

ಮುಡಿಪು: ‘ಸಿಪಾಯಿ ದ‌ಂಗೆ’ ದೇಶದ ಪ್ರಥಮ‌ ಸ್ವಾತಂತ್ರ್ಯಹೋರಾಟ ಎಂದು ಪರಿಗಣಿಸಿದ್ದರೆ, ಅದಕ್ಕಿಂತಲೂ ಮೊದಲು ತುಳುನಾಡಿನ ವೀರರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ನಡೆಸಿದ ಹೋರಾಟವು ಯುರೋಪಿನಾದ್ಯಂತ ಸುದ್ದಿಯಾಗಿತ್ತು. ಭಾರತದಲ್ಲಿ ‘ಸ್ವಾತಂತ್ರ್ಯ’ದ ಕಿಚ್ಚಿನ ಬಗ್ಗೆ ಅವರಿಗೆ ಬಿಸಿ ಮುಟ್ಟಿಸಿತ್ತು.

1510ರಲ್ಲಿ ಗೋವಾವನ್ನು ಆಕ್ರಮಿಸಿದ ಪೋರ್ಚುಗಿಸರು, 1525ರಲ್ಲಿ ಮಂಗಳೂರಿನ ಮೇಲೆ ಆಕ್ರಮಣ ಮಾಡಿದರು.  ಉಳ್ಳಾಲದ ಬಂದರನ್ನು ವಶಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಅದಕ್ಕಾಗಿ ಇಲ್ಲಿನ ಸಮುದ್ರದ ಮೂಲಕ ವ್ಯಾಪಾರ ಮಾಡುವ ಎಲ್ಲರನ್ನೂ ಹಿಡಿತದಲ್ಲಿಡುವ ಪ್ರಯತ್ನ ಮಾಡಿದರು. ಇದು ಅಬ್ಬಕ್ಕ ರಾಣಿಗೆ ಹಿಡಿಸಲಿಲ್ಲ. ‍ಪೋರ್ಚಿಗೀಸರಿಗೆ ಕಪ್ಪ ಕಾಣಿಕೆಗಳನ್ನು ನೀಡುವುದನ್ನು ನಿರಾಕರಿಸಿ, ಅವರನ್ನು ಎದುರಿಸಲು ಸಿದ್ಧತೆ ಮಾಡಿಕೊಂಡರು.

ಅಬ್ಬಕ್ಕ ಉಳ್ಳಾಲದಲ್ಲಿ ಕೋಟೆಯನ್ನು ಕಟ್ಟಿಸಿದರು.1556 ರಲ್ಲಿ ಪೋರ್ಚುಗೀಸರು‌ ಉಳ್ಳಾಲದ ಮೇಲೆ ದಂಡೆತ್ತಿ ಬಂದಾಗ,  ಎದುರಿಸಿದರು. ಕೋಟೆ ನಾಶವಾಯಿತು. ಸಂಧಾನಕ್ಕೆ ಒಪ್ಪಿಕೊಂಡ ಅಬ್ಬಕ್ಕ, ಮತ್ತೆ ಸ್ವತಂತ್ರ ವ್ಯಾಪಾರಕ್ಕೆ ತೊಡಗಿಸಿಕೊಂಡರು. ಕ್ರಿ.ಶ.1558ರಲ್ಲಿ ಪೋರ್ಚುಗೀಸರ ಎರಡನೇ ದಾಳಿಯನ್ನು ಎದುರಿಸಿದ ರಾಣಿ ಅಬ್ಬಕ್ಕಗೆ ಸಾಕಷ್ಟು ನಷ್ಟವಾಯಿತು. ಕೊನೆಗೆ ಒಪ್ಪಂದ ಮಾಡಿಕೊಂಡು ಮತ್ತೆ ಉಳ್ಳಾಲದ ಕೋಟೆಯನ್ನು ಕಟ್ಟಿಸಿದರು ಎಂಬುದು ಪೋರ್ಚುಗೀಸ್ ಇತಿಹಾಸಕಾರ ಕುಟೋ ದಾಖಲಿಸಿದ್ದಾರೆ. 

1567ರಲ್ಲಿ ಮತ್ತೆ ಪೋರ್ಚುಗೀಸ್ ದಾಳಿ ನಡೆಸಿದಾಗ, ಅವರ ಸೇನಾಧಿಕಾರಿಯನ್ನು ರಾಣಿ ಅಬ್ಬಕ್ಕ ಕೊಂದರು.  ಇಲ್ಲಿಯ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಬಳಕೆ ಮಾಡಿಕೊಂಡು ವೈರಿಗಳನ್ನು ಹಿಮ್ಮೆಟ್ಟಿದ್ದರು. ಉಳ್ಳಾಲ ನದಿಯಿಂದ ಸಮುದ್ರಕ್ಕೆ ಹೋಗುವ ಮಾರ್ಗವನ್ನು ತಡೆಗಟ್ಟಿ ಪೋರ್ಚುಗೀಸರನ್ನು ದಿಗ್ಭಂಧಿಸಿದ್ದಲ್ಲದೇ, ಅಬ್ಬಕ್ಕ ಅವರ ಸೈನಿಕರು ಪೋರ್ಚುಗೀಸ್ ನಾವೆಗಳ ಮೇಲೆ ತೆಂಗಿನ ಸೂಟೆಗಳನ್ನು
ಎಸೆದು, ಗಲಿಬಿಲಿಗೊಳಿಸಿದರು. ವೈರಿ ಸೈನಿಕರು ಅಪಾರ ಪ್ರಮಾಣದಲ್ಲಿ ಸಾವನ್ನಪ್ಪಿದರು.

ಅಬ್ಬಕ್ಕ ಸೇನೆ ಕೈ ಮೇಲಾಗುವ ವೇಳೆಗೆ ಉಳ್ಳಾಲಕ್ಕೆ ಹೊಸ ಪೋರ್ಚುಗೀಸ್ ಸೈನಿಕ ಪಡೆ ಬಂತು. ಅಬ್ಬಕ್ಕ ತಮ್ಮ ಸೈನಿಕರೊಂದಿಗೆ ಅವಿತುಕೊಳ್ಳಬೇಕಾಗಿ ಬಂದರೂ, ಪ್ರಜೆಗಳ ಹಿತರಕ್ಷಣೆಗಾಗಿ ಮತ್ತೆ ಹೊರಬಂದು ಒಪ್ಪಂದ ಮಾಡಿಕೊಳ್ಳಬೇಕಾಯಿತು. ಪೋರ್ಚುಗೀಸರನ್ನು ಭಾರತದಿಂದ ಓಡಿಸುವ ಉದ್ದೇಶದಿಂದ ಆದಿಲ್ ಷಾಹಿ, ಕಲ್ಲಿಕೋಟೆಯ ಜಾಮೋರಿನ್ ಮತ್ತು ಇತರರ ಪ್ರಯತ್ನದಲ್ಲಿ ರಾಣಿ ಅಬ್ಬಕ್ಕ ಪಾಲ್ಗೊಂಡಿದ್ದರು. ರಾಣಿ ಅಬ್ಬಕ್ಕ ಮಲಬಾರಿ‌ನ ನೌಕದಳದ ಅಧಿಕಾರಿಯನ್ನು ಉಳ್ಳಾಲಕ್ಕೆ ಕರೆಸಿದ್ದು ಪೋರ್ಚುಗೀಸರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ವಿಚಾರ ಹಾಗೂ ಕಪ್ಪ ನಿರಾಕರಣೆಯಿಂದ ಸಿಟ್ಟಿಗೆದ್ದ ಪೋರ್ಚುಗೀಸರು ಮತ್ತೆ ದಾಳಿ ನಡೆಸಿ, ಉಳ್ಳಾಲದ ಪೇಟೆ, ಗೋದಾಮುಗಳನ್ನು ಸುಟ್ಟು ಹಾಕಿದರು.

‘ಹಲವು ಅಬ್ಬಕ್ಕ ರಾಣಿಯರು ಇದ್ದರು’ ಎಂಬ ಬಗ್ಗೆ ವಿದ್ವಾಂಸರ ನಡುವೆ ಜಿಜ್ಞಾಸೆಗಳಿವೆ. ಅಬ್ಬಕ್ಕ ವಿದೇಶಿ ಆಳ್ವಿಕೆ ವಿರೋಧಿಸಿ,  ಹೋರಾಡಿದ ಉದ್ದೇಶ ಮತ್ತು ವಿನ್ಯಾಸಗಳು ಮಾದರಿಯಾಗಿವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು