ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬೊಮ್ಮಾಯಿ: ನೆನಪಾಗಬೇಕಿರುವುದು ಹೇಗೆ?

ರಾಜ್ಯದಲ್ಲಿ ಬಿಜೆಪಿಯಿಂದ ಈ ಹಿಂದೆ ಸಿ.ಎಂ. ಆದವರು ಕೋಮುವಾದದ ಜೊತೆ ಸರಸವಾಡಲಿಲ್ಲ
Last Updated 4 ಮೇ 2022, 19:31 IST
ಅಕ್ಷರ ಗಾತ್ರ

ಕವಿ ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬಣ್ಣಿಸಿದ್ದರು. ಆದರೆ ರಾಜ್ಯವು ಅವರು ಬಣ್ಣಿಸಿದಂತೆ ಉಳಿದಿಲ್ಲ. ಕೋಮು ಸೌಹಾರ್ದವು ಕದಡಿದೆ. ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆಯು ರಾಷ್ಟ್ರ ಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಳಾಗಿದೆ.

2008ರ ನಂತರ ಬಿಜೆಪಿಯು ರಾಜ್ಯದಲ್ಲಿ ಆಗಾಗ ಆಡಳಿತ ನಡೆಸಿದೆ. ಆದರೆ, ಇನ್ನೊಂದು ಕೋಮು ಪ್ರಯೋಗಶಾಲೆಯಾಗಿ ಕರ್ನಾಟಕವು ಬದಲಾಗುವ ಪ್ರಕ್ರಿಯೆ ಶುರುವಾಗಿದ್ದು ಮಾತ್ರ ಕೆಲವು ತಿಂಗಳುಗಳ ಹಿಂದೆ, ಬಸವರಾಜ ಬೊಮ್ಮಾಯಿ ಅವರು ಹಿಂದಿನ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ. ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಅವರೂ ಬಿಜೆಪಿ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಆದರೆ ಇವರು ಕೋಮುವಾದದ ಬೆಂಕಿಯೊಡನೆ ಸರಸವಾಡಲಿಲ್ಲ.

ಈಗ ರಾಜ್ಯದ ಎಲ್ಲೆಡೆ ದ್ವೇಷದ ವಾತಾವರಣ ನಿರ್ಮಿಸುತ್ತಿರುವುದು ಏಕೆ? ರಾಜಕೀಯ ಲಾಭಕ್ಕಾಗಿ – ತಮ್ಮ ಉಳಿವಿಗಾಗಿ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭಕ್ಕಾಗಿ– ಬೊಮ್ಮಾಯಿ ಅವರು ಉದ್ದೇಶಪೂರ್ವಕವಾಗಿ ಸಮಾಜವನ್ನು ಒಡೆಯುತ್ತಿದ್ದಾರೆಯೇ? ಅಥವಾ ಪಕ್ಷ ಮತ್ತು ಪರಿವಾರದಲ್ಲಿನ ಕಟ್ಟರ್‌ವಾದಿಗಳ ಕೈಗೊಂಬೆ ಅವರಾಗಿದ್ದಾರೆಯೇ? ಸತ್ಯ ಏನೇ ಇದ್ದರೂ, ಹಿಂದುತ್ವವಾದಿ ಸಂಘಟನೆಗಳನ್ನು ನಿಯಂತ್ರಣದಲ್ಲಿ ಇರಿಸುವಲ್ಲಿನ, ಕೋಮುಸೌಹಾರ್ದ ಮರುಸ್ಥಾ‍ಪಿಸುವಲ್ಲಿನ ವೈಫಲ್ಯದ ಕಾರಣದಿಂದಾಗಿ ಬೊಮ್ಮಾಯಿ ಅವರು ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿಗಳ ಪೈಕಿ ಒಬ್ಬರಾಗಿದ್ದಾರೆ.

ಎಂಜಿನಿಯರಿಂಗ್ ಪದವೀಧರ ಆಗಿರುವ ಬೊಮ್ಮಾಯಿ, ಸಮಾಜವಾದಿ ಹಿನ್ನೆಲೆಯವರು. ತಮ್ಮ ತಂದೆ, ಖ್ಯಾತ ರಾಜಕಾರಣಿ ಎಸ್.ಆರ್. ಬೊಮ್ಮಾಯಿ ಅವರ ನೆರಳಿನಲ್ಲೇ ಬೆಳೆದ ಬಸವರಾಜ ಬೊಮ್ಮಾಯಿ ಯಾವಾಗಲೂ ‍ಪ್ರಬುದ್ಧ ಹಾಗೂ ಅಂತಃಕರಣದ ರಾಜಕಾರಣಿಯಾಗಿ ಕಂಡವರು. ಹಿಂದಿನ ವರ್ಷದ ನವೆಂಬರ್‌ನಲ್ಲಿ, ಸಂವಿಧಾನ ದಿನಾಚರಣೆ ವೇಳೆ ಅವರು, ‘ಎಲ್ಲರನ್ನೂ ಒಂದಾಗಿಸಿರುವ ಮಾನವೀಯತೆಯನ್ನು ಆಧಾರವಾಗಿಸಿಕೊಂಡು ನಮ್ಮ ಸಂವಿಧಾನ ನಿಂತಿದೆ. ಯಾವುದೇ ದೇಶದ ಅಭಿವೃದ್ಧಿಗೆ ಮಾನವೀಯ ಮೌಲ್ಯಗಳು ಮುಖ್ಯ’ ಎಂದಿದ್ದರು. ಆದರೆ, ಮಾತು ಹಾಗೂ ಕೃತಿಗಳ ನಡುವೆ ದೊಡ್ಡ ಅಂತರವಿದೆ. ಜನತಾ ಪರಿವಾರದಲ್ಲಿ ಬೆಳೆದ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದ್ದು 2008ರಲ್ಲಿ. ಪಕ್ಷ ಅಧಿಕಾರದಲ್ಲಿದ್ದಾಗ ಮುಖ್ಯ ಖಾತೆಗಳನ್ನು ನಿಭಾಯಿಸಿದ್ದರು, ಸಮರ್ಥ ಸಚಿವರಾಗಿ ಹೆಸರು ಮಾಡಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾದಾಗ ಬೊಮ್ಮಾಯಿ ಅವರಿಗೆ ಇನ್ನೊಂದು ಮುಖವಿದೆ ಎಂಬುದನ್ನು ಜನ ಭಾವಿಸಲಾರಂಭಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಪ್ರದರ್ಶಿಸಿದ ನಾಟಕವೊಂದಕ್ಕೆ ಸಂಬಂಧಿಸಿದಂತೆ ಶಿಕ್ಷಕರೊಬ್ಬರನ್ನು ಹಾಗೂ ವಿದ್ಯಾರ್ಥಿಯ ತಾಯಿಯನ್ನು ಬಂಧಿಸಿದಾಗ ಅದನ್ನು ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು. ಅದು ಅವರ ಇನ್ನೊಂದು ಮುಖ ಕಂಡ ಮೊದಲ ನಿದರ್ಶನವಾಗಿತ್ತು. ಹೈಕೋರ್ಟ್‌ ಈ ಪ್ರಕರಣವನ್ನು ರದ್ದುಪಡಿಸಿದ್ದು ಮಾತ್ರವಲ್ಲದೆ, ಕೈಯಲ್ಲಿ ಬಂದೂಕು ಇರಿಸಿಕೊಂಡು ಮಕ್ಕಳನ್ನು ವಿಚಾರಣೆಗೆ ಒಳ‍ಪಡಿಸಿದ್ದಕ್ಕಾಗಿ ಪೊಲೀಸರ ವಿರುದ್ಧ ಕಟುವಾಗಿ ಮಾತನಾಡಿತು. ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದ ನಾಟಕವೊಂದನ್ನು ಆಡಿದಾಗ ಅದೇ ಗೃಹ ಸಚಿವರು ಬೇರೆ ರೀತಿ ವರ್ತಿಸಿದ್ದರು.

ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು, ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಸುಳ್ಳು ಆರೋಪಗಳ ಟೂಲ್‌ಕಿಟ್ ಪ್ರಕರಣದಲ್ಲಿ ಬಂಧಿಸಿದಾಗ, ದಿಶಾ ಅವರ ಸಹಾಯಕ್ಕೆ ಬರುವಲ್ಲಿ ಬೊಮ್ಮಾಯಿ ವಿಫಲರಾಗಿದ್ದರು. ಹಲವು ದಿನಗಳ ನಂತರ ದಿಶಾ ಅವರ ಬಿಡುಗಡೆ ಆಯಿತು. ದಿಶಾ ವಿರುದ್ಧ ತೃಣಮಾತ್ರದ ಸಾಕ್ಷ್ಯವನ್ನು ಹಾಜರು ಪಡಿಸುವಲ್ಲಿಯೂ ಪೊಲೀಸರು ವಿಫಲರಾಗಿದ್ದಾರೆ ಎಂದು ದೆಹಲಿ ನ್ಯಾಯಾಲಯ ಹೇಳಿತ್ತು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಬೊಮ್ಮಾಯಿ ಅವರು ದಕ್ಷಿಣ ಕನ್ನಡದಲ್ಲಿನ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸಿಕೊಂಡಿದ್ದರು. ಆಘಾತಕಾರಿಯಾದಂತಹ ಅನೈತಿಕ ಪೊಲೀಸ್‌ಗಿರಿ ಪ್ರಕರಣವನ್ನು ಬೊಮ್ಮಾಯಿ ಅವರು ‘ಕೆಲವು ಕ್ರಿಯೆಗಳಿಗೆ ಪ್ರತಿಕ್ರಿಯೆ’ ಎಂದು ಕರೆದು, ಹಿಂದುತ್ವವಾದಿ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ, ಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಏನು ಮಾಡಬಹುದು ಹಾಗೂ ಏನು ಮಾಡಬಾರದು ಎಂಬುದನ್ನು ಈ ಸಂಘಟನೆಗಳು ಹೇಳುವುದಕ್ಕೆ ಅಧಿಕೃತ ಅನುಮೋದನೆ ನೀಡಿದ್ದರು.

ಬೊಮ್ಮಾಯಿ ನೇತೃತ್ವದ ಸರ್ಕಾರವು ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಂಡಿತು. ಅದಕ್ಕೂ ಮೊದಲು ಸರ್ಕಾರವು, ಕ್ರೈಸ್ತ ಪಾದ್ರಿಗಳು, ಅವರ ದೂರವಾಣಿ ಸಂಖ್ಯೆಗಳು, ಅವರ ಚರ್ಚುಗಳು ಹಾಗೂ ಪ್ರಾರ್ಥನಾ ಸ್ಥಳಗಳ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿತು. ಇದು ಕ್ರೈಸ್ತ ಸಮುದಾಯವನ್ನು ಬೆದರಿಸುವ ನಡೆಯಾಗಿತ್ತು. ರಾಜ್ಯದ ಹಲವು ಕಡೆಗಳಲ್ಲಿ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಗಳು ನಡೆದವು. ಕ್ರಿಸ್ಮಸ್ ದಿನವೂ ದಾಳಿ ನಡೆಯಿತು. ಮುಖ್ಯಮಂತ್ರಿಯವರು ಎಚ್ಚರಿಕೆಯಿಂದ, ಉದ್ದೇಶ ಪೂರ್ವಕವಾಗಿ ಮೌನ ವಹಿಸಿದ್ದರು.

ಹಿಜಾಬ್ ವಿವಾದದ ಮೂಲಕ ಅಧಿಕಾರಸ್ಥರ ಗಮನವು ಮುಸ್ಲಿಮರ ಮೇಲೆ ದಾಳಿ ನಡೆಸುವುದರತ್ತ ತಿರುಗಿತು. ಮುಖ್ಯಮಂತ್ರಿಯವರು ಮುತ್ಸದ್ದಿತನ ಪ್ರದರ್ಶಿಸಿದ್ದರೆ ಈ ವಿವಾದವನ್ನು ಸ್ಥಳೀಯವಾಗಿ, ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು. ಆದರೆ, ಇದು ಹಿಂದೂ–ಮುಸ್ಲಿಂ ವಿವಾದದ ರೂಪ ಪಡೆಯಲು ಅವಕಾಶ ನೀಡಲಾಯಿತು. ಇದಾದ ನಂತರದಲ್ಲಿ, ದೇವಸ್ಥಾನಗಳ ಜಾತ್ರೆಗಳ
ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ಹಾಕುವ ತಾತ್ಕಾಲಿಕ ಅಂಗಡಿಗಳನ್ನು ವಿರೋಧಿಸಿ ಅಭಿಯಾನ ನಡೆಯಿತು. ಹಿಂದೂಗಳಲ್ಲದವರು ಪಾಲ್ಗೊಳ್ಳುವುದನ್ನು ಕಾನೂನು ನಿರ್ಬಂಧಿಸಿದೆ ಎಂದು ಹೆಚ್ಚಿನವರಿಗೆ ಗೊತ್ತೇ ಇರದಿದ್ದ ನಿಯಮವೊಂದನ್ನು ಸರ್ಕಾರವು ಹೊರಗೆ ಎಳೆದುತಂದಿತು.

ಅಲ್ಲಿಗೇ ಎಲ್ಲವೂ ನಿಲ್ಲಲಿಲ್ಲ. ಧ್ರುವೀಕರಣದ ಯತ್ನಗಳು ಸ್ಥಗಿತವಾಗುವ ಯಾವ ಲಕ್ಷಣಗಳೂ ಇಲ್ಲ. ಹಲಾಲ್ ಮಾಂಸದ ವಿಚಾರವಾಗಿ ಅನಗತ್ಯ ವಿವಾದವೊಂದನ್ನು ಸೃಷ್ಟಿಸಲಾಯಿತು. ಹಲಾಲ್ ಮಾಂಸದ ವಿಚಾರದಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾದ ‘ಗಂಭೀರ ಆಕ್ಷೇಪ’ಗಳ ಬಗ್ಗೆ ಗಮನಹರಿಸುವುದಾಗಿ ಬೊಮ್ಮಾಯಿ ಅವರು ಭರವಸೆ ನೀಡಿದರು. ಆದರೆ, ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಧಾರ್ಮಿಕ ಕಂದರ ಹೆಚ್ಚಾಗುತ್ತಿರುವುದನ್ನು ತಡೆಯಬೇಕು ಎಂದು ಬೊಮ್ಮಾಯಿ ಅವರನ್ನು ಬಹಿರಂಗವಾಗಿ ಒತ್ತಾಯಿಸಿದರು. ರಾಜ್ಯದ ಎಲ್ಲರ ಆರ್ಥಿಕ ಬೆಳವಣಿಗೆ ಆಗಬೇಕು ಎಂದು ಆಗ್ರಹಿಸಿದರು. ಆಗ ಬೊಮ್ಮಾಯಿ ಅವರು ಹಿಂದಕ್ಕೆ ಸರಿದು, ಹೊಂದಾಣಿಕೆಯ ನಿಲುವು ತಳೆದರು. ಇದಾದ ನಂತರದಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದರ ಸುತ್ತ ಕೂಡ ವಿವಾದ ಸೃಷ್ಟಿಯಾಗಿದೆ.

ತಮ್ಮ ನೇತೃತ್ವದಲ್ಲಿ ಸರ್ಕಾರವು ದೊಡ್ಡದೇನನ್ನೋ ಸಾಧಿಸಿದೆ ಎಂದು ತೋರಿಸಲು ಬೊಮ್ಮಾಯಿ ಅವರ ಬಳಿ ಏನೂ ಇಲ್ಲ. ಚುನಾವಣೆ ವೇಳೆಗೆ ಏನಾದರೂ ಸಾಧಿಸಬಹುದು ಎಂಬ ವಿಶ್ವಾಸ ಅವರಲ್ಲಿ ಇಲ್ಲವೆನಿಸುತ್ತದೆ. ಜನನಾಯಕನಾಗಿ ಅವರು ಯಡಿಯೂರಪ್ಪ ಅವರ ಮಟ್ಟಕ್ಕೆ ಬರುವುದಿಲ್ಲ. ಬರುವ ಚುನಾವಣೆಯಲ್ಲಿ ಗೆಲ್ಲಲಿಕ್ಕೆ, ಅಧಿಕಾರದಲ್ಲಿ ಉಳಿಯಲಿಕ್ಕೆ ಇರುವ ಅತ್ಯುತ್ತಮ ಮಾರ್ಗ ಧ್ರುವೀಕರಣವನ್ನು ಮುಂದುವರಿಸಿಕೊಂಡು ಹೋಗುವುದು ಎಂದು ಬೊಮ್ಮಾಯಿ ತೀರ್ಮಾನಿಸಿರಬೇಕು.

ಎಂ. ಗೌತಮ್‌ ಮಾಚಯ್ಯ
ಎಂ. ಗೌತಮ್‌ ಮಾಚಯ್ಯ

ಒತ್ತಡಗಳು ಏನೇ ಇದ್ದಿರಬಹುದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಿದರೂ, ಈ ಅಪಾಯಕಾರಿ ಆಟಕ್ಕೆ ತಡೆ ಹಾಕದೆ ಇದ್ದರೆ ಇತಿಹಾಸವು ತಮ್ಮ ಬಗ್ಗೆ ಮೃದು ಧೋರಣೆ ತಾಳುವುದಿಲ್ಲ ಎಂಬುದನ್ನು ಬೊಮ್ಮಾಯಿ ಅರಿಯಬೇಕು. ಕರ್ನಾಟಕಕ್ಕೆ ಇನ್ನಷ್ಟು ಹೆಚ್ಚುಗಾರಿಕೆಗಳನ್ನು ತಂದುಕೊಟ್ಟ ವ್ಯಕ್ತಿಯನ್ನಾಗಿ ಜನ ತಮ್ಮನ್ನು ನೆನಪಿಸಿಕೊಳ್ಳಬೇಕೋ ಅಥವಾ ದ್ವೇಷ, ಧರ್ಮಾಂಧತೆಯು ಕರ್ನಾಟಕದ ಆತ್ಮವನ್ನು ನಾಶಮಾಡುತ್ತಿದ್ದಾಗಲೂ ಸುಮ್ಮನೆ ಕುಳಿತಿದ್ದ ವ್ಯಕ್ತಿಯನ್ನಾಗಿ ನೆನಪಿಸಿಕೊಳ್ಳಬೇಕೋ ಎಂಬುದನ್ನು ಮುಖ್ಯಮಂತ್ರಿಯವರು ತೀರ್ಮಾನಿಸಬೇಕು.

ಲೇಖಕ: ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT