ಮಂಗಳವಾರ, ಜೂನ್ 15, 2021
25 °C
ಬಿಬಿಎಂಪಿ ಕಾಯ್ದೆ 2020– ರಚನಾತ್ಮಕ ಸುಧಾರಣೆ ಜಾರಿಯಾಗಲಿ * ನೂತನ, ಸಮಗ್ರ ಕಾಯ್ದೆ ತುರ್ತು ಅಗತ್ಯ

ಮೇಯರ್‌, ವಾರ್ಡ್‌ ಸಮಿತಿ ಪ್ರಾಧಿಕಾರ ಆಗಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ಕಾಯ್ದೆ –2020’ರಲ್ಲಿ ಪಾಲಿಕೆ ಪ್ರಾಧಿಕಾರಗಳ ಸಂರಚನೆ, ಕಾರ್ಯನಿರ್ವಹಣೆಗಾಗಿ ಕೆಲವು ರಚನಾತ್ಮಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪರಿಣಾಮಕಾರಿ, ಜನಸ್ನೇಹಿ ಆಡಳಿತವನ್ನು ಸುಸೂತ್ರವಾಗಿ ನಡೆಸುವುದು ಕಷ್ಟಸಾಧ್ಯವಾಗಬಹುದು. 

ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 3ರಡಿಯಲ್ಲಿ ಕಾಯ್ದೆಯ ಉಪಬಂಧಗಳನ್ನು ಕಾರ್ಯಗತಗೊಳಿಸಲು ಮೇಯರ್‌, ವಾರ್ಡ್‌ ಸಮಿತಿಗಳು ಮತ್ತು ಪ್ರದೇಶ ಸಮಿತಿಗಳನ್ನು ಪಾಲಿಕೆಯ ಪ್ರಾಧಿಕಾರಗಳು ಎಂದು ಗೊತ್ತುಪಡಿಸಲಾಗಿದೆ. ಇದು ಅನವಶ್ಯಕ.

ಮೇಯರ್ ಅಧಿಕಾರ: ಬಿಬಿಎಂಪಿ ಕೌನ್ಸಿಲ್‌ನ ಪರವಾಗಿ  ಮೇಯರ್‌ ಸಂವಿಧಾನದ ಅನುಚ್ಚೇದ 243-ಎಸ್‌ ಅಡಿ ಸಾಮೂಹಿಕ ಅಧಿಕಾರವನ್ನು ಚಲಾಯಿಸಲು ಉಪಬಂಧವನ್ನು ಕಲ್ಪಿಸಬಹುದು. ಇಂತಹ ಆಡಳಿತಾತ್ಮಕ ಅಧಿಕಾರವನ್ನು ಅವರು ವೈಯುಕ್ತಿಕವಾಗಿ ಚಲಾಯಿಸಲು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 59 (4)ರಲ್ಲಿ ಸ್ಪಷ್ಟಪಡಿಸಿಲ್ಲ. ಸೆಕ್ಷನ್‌ 59(4)ರಂತೆ ಮೇಯರ್‌ ಪರಿವೀಕ್ಷಣೆಯ ಸಾಮಾನ್ಯ ಅಧಿಕಾರಗಳನ್ನು ಹೊಂದಿರುತ್ತಾರೆ. ಪಾಲಿಕೆಯ ಕಾರ್ಯಗಳನ್ನು ನಿರ್ವಹಿಸಲು ಅಥವಾ ಪಾಲಿಕೆಯ ಅಥವಾ ಸ್ಥಾಯಿ ಸಮಿತಿಯ ಯಾವುದೇ ನಿರ್ಣಯವನ್ನು ಜಾರಿಗೆ ತರುವುದಕ್ಕೆ ಮುಖ್ಯ ಆಯುಕ್ತರಿಗೆ ನಿರ್ದೇಶನವನ್ನು ಕೊಡಬಹುದಾಗಿರುತ್ತದೆಯೇ ವಿನಹ ಕಾಯ್ದೆಯಡಿಯಲ್ಲಿ ಅವರಿಗೆ ಯಾವುದೇ ನೇರವಾದ ಆರ್ಥಿಕ ಅಧಿಕಾರವಿಲ್ಲ. ಗುತ್ತಿಗೆ ಅನುಮೋದನೆಯ ಅಧಿಕಾರ ಪ್ರತ್ಯಾಯೋಜನೆಯನ್ನೂ ನಿಗದಿಪಡಿಸಿಲ್ಲ. ಈ ಉಪಬಂಧಗಳು ಮೇಯರ್‌ ಅವರನ್ನು ಪಾಲಿಕೆ ಪ್ರಾಧಿಕಾರವನ್ನಾಗಿಸಲು ಪುಷ್ಟಿಕರಿಸಿದಂತಾಗುವುದಿಲ್ಲ. 

ಮೇಯರ್ ಅಧಿಕಾರಾವಧಿ: ಬಿಬಿಎಂಪಿ ಕಾಯ್ದೆ ಪ್ರಕಾರ ಮೇಯರ್‌ ಅಧಿಕಾರಾವಧಿ ಎರಡೂವರೆ ವರ್ಷಗಳು. ಹೆಚ್ಚು ಜನಸ್ನೇಹಿ ಆಡಳಿತಕ್ಕೆ ಅವರನ್ನು ಹೊಣೆಗಾರರನ್ನಾಗಿಸಲು ಮತ್ತು ಸಾರ್ವಜನಿಕ ಆಡಳಿತಕ್ಕೆ ಅವರ ಸ್ಪಂದನೆ ಮತ್ತು ಉತ್ತರದಾಯಿತ್ವ ಖಾತರಿಪಡಿಸಲು ಮೇಯರ್‌ಗೆ ಮರುಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬಹುದು.

1964ರ ಕರ್ನಾಟಕ ಪೌರಸಭೆಗಳ ಕಾಯ್ದೆಯಲ್ಲಿ ಪೌರಸಭೆಯ ಅಧ್ಯಕ್ಷರನ್ನು ಅವಿಶ್ವಾಸ ಮಂಡನೆಯ ಮೂಲಕ ತೆಗೆದುಹಾಕುವ ತತ್ವದಂತೆ, ಮೇಯರ್ ಅವರನ್ನು ಪ್ರಜಾಸತ್ತಾತ್ಮಕವಾಗಿ ಅವಿಶ್ವಾಸ ನಿರ್ಣಯದ ಮೂಲಕ ತೆಗೆದು ಹಾಕಲು ಬಿಬಿಎಂಪಿ ಕಾಯ್ದೆಯಲ್ಲೂ ಉಪಬಂಧ ಕಲ್ಪಿಸಿದ್ದಲ್ಲಿ ಈ ಹುದ್ದೆಯ ವಿಶ್ವಾಸಾರ್ಹತೆ ಹೆಚ್ಚಲಿದೆ.

ಮುಖ್ಯ ಆಯುಕ್ತರು: ಮುಖ್ಯ ಆಯುಕ್ತರ ಅಧಿಕಾರ ಮತ್ತು ಕಾರ್ಯಗಳನ್ನು ಸೆಕ್ಷನ್‌ 64ರಲ್ಲಿ ಗೊತ್ತುಪಡಿಸಲಾಗಿದೆ. ಸೆಕ್ಷನ್‌ 64 (3)ರಲ್ಲಿ ವಲಯ ಆಯುಕ್ತ ತನಗೆ ಉಲ್ಲೇಖಿಸಿದ ಅಂತರ್‌ ವಲಯಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ತೀರ್ಮಾನಿಸುವ ಅಧಿಕಾರವನ್ನು ನಿರ್ದಿಷ್ಟಪಡಿಸಿರುವುದು ಸರಿಯಲ್ಲ. ಅಂತರ್‌ ವಲಯಗಳ ಸಮನ್ವಯ, ರಸ್ತೆ ಅಭಿವೃದ್ಧಿ, ಯೋಜನೆಗಳು, ನೀರು ಮತ್ತು ಇತರ ಭೌತಿಕ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ, ಮೂಲಸೌಲಭ್ಯಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇತ್ಯಾದಿ ಒಳಗೊಂಡಂತೆ ಸಮಾನ ಹಿತಾಸಕ್ತಿಯ ವಿಷಯಗಳನ್ನು ಸಂಬಂಧಪಟ್ಟ ವಲಯ ಸಮಿತಿಗಳ ಸಲಹೆ ಸೂಚನೆಗಳ ಮೇರೆಗೆ, ಮುಖ್ಯ ಆಯುಕ್ತ ಬಿಬಿಎಂಪಿ ಕೌನ್ಸಿಲ್‌ ಮುಂದೆ ಮಂಡಿಸಿ ತೀರ್ಮಾನ ಪಡೆಯುವುದು ಒಳ್ಳೆಯದು. ಬಿಬಿಎಂಪಿ ಕೌನ್ಸಿಲ್‌ನ ನಿರ್ಣಯಗಳ ಅನುಷ್ಠಾನಕ್ಕೆ ಮುಖ್ಯ ಆಯುಕ್ತರು ಮತ್ತು ಸಂಬಂಧಪಟ್ಟ ವಲಯ ಆಯುಕ್ತರು ಬದ್ಧರಾಗಿರುತ್ತಾರೆ ಎಂದು ನಿರ್ದಿಷ್ಟಪಡಿಸಿಕೊಳ್ಳುವುದು ಹಾಗೂ ಬಿಬಿಎಂಪಿ ಕಾಯ್ದೆಯಲ್ಲಿ ಅದಕ್ಕಾಗಿ ನೇರವಾದ ಉಪಬಂಧಗಳನ್ನು ಕಲ್ಪಿಸಿಕೊಳ್ಳುವುದು ಸೂಕ್ತ. 

ವಲಯ ಸಮಿತಿಗಳು: ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 3 ರಲ್ಲಿ ವಲಯ ಸಮಿತಿಯನ್ನು ಪಾಲಿಕೆ ಪ್ರಾಧಿಕಾರವನ್ನಾಗಿ ನಿಗದಿಪಡಿಸಲಾಗಿದೆ. ವಲಯ ಸಮಿತಿಯನ್ನು ಸಂವಿಧಾನದ ಅನುಚ್ಚೇದ 243-ಎಸ್‌ ಅನುಸಾರ ವಾರ್ಡುಗಳ ಸಮಿತಿಯೆಂದು ಪರಿಭಾವಿಸಬಹುದು. ಆದ್ದರಿಂದ, ವಲಯ ಸಮಿತಿಗೆ ಆಡಳಿತಾತ್ಮಕ ಮತ್ತು ಆರ್ಥಿಕ ವೆಚ್ಚದ ಅಧಿಕಾರ ಪ್ರತ್ಯಾಯೋಜನೆಯನ್ನು ನೀಡಿರುವುದು ಸಮರ್ಥನೀಯ. 

ವಾರ್ಡ್‌ ಸಮಿತಿಗಳು: ಪಾಲಿಕೆ ಸದಸ್ಯರೇ ಆಯಾ ವಾರ್ಡ್‌ ಸಮಿತಿಯ ಅಧ್ಯಕ್ಷರು. ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 94ರಡಿ ಪಾಲಿಕೆ ಸದಸ್ಯರ ಅಧಿಕಾರವನ್ನು ಗೊತ್ತುಪಡಿಸಲಾಗಿದೆ. ಅವರು ಪಾಲಿಕೆಯ ಕಾರ್ಯ ನಿರ್ವಹಣೆಯಲ್ಲಿನ ಯಾವುದೇ ನಿರ್ಲಕ್ಷ್ಯದ ಬಗ್ಗೆ ಹಾಗೂ ಪಾಲಿಕೆಯ ಸ್ವತ್ತಿನ ಯಾವುದೇ ಪೋಲು ಕುರಿತಂತೆ ಅಥವಾ ಯಾವುದೇ ಪ್ರದೇಶದ (ವಾರ್ಡಿನ ಭಾಗದ) ಅಗತ್ಯಗಳ ಬಗ್ಗೆ ಸಂಬಂಧಪಟ್ಟ ಪಾಲಿಕೆಯ ಪ್ರಾಧಿಕಾರಿಯ ಗಮನ ಸೆಳೆಯಬಹುದು. ತಾವು ಅಪೇಕ್ಷಣೀಯವೆಂದು ಪರಿಗಣಿಸುವ ಸುಧಾರಣೆಗಳನ್ನು ಸೂಚಿಸಬಹುದೆಂದು ತಿಳಿಸಲಾಗಿದೆ. ವಲಯ ಸಮಿತಿಯಲ್ಲಿ ಆಯಾ ವಲಯದ ಪ್ರತಿ ಕಾರ್ಪೊರೇಟರ್‌ಗಳೂ ಸದಸ್ಯರಾಗಿರುವುದರಿಂದ, ವಲಯ ಸಮಿತಿಗೆ ಆರ್ಥಿಕ ವೆಚ್ಚದ ಮತ್ತು ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ನಿಗದಿಪಡಿಸಬಹುದು. ಆದರೆ, ವಾರ್ಡ್‌ ಸಮಿತಿಯ ಇತರ ಸದಸ್ಯರು ಪಾಲಿಕೆಯ ಸದಸ್ಯರಲ್ಲ. ಹಾಗಾಗಿ ವಾರ್ಡ್‌ ಸಮಿತಿಯನ್ನು ಪಾಲಿಕೆಯ ಪ್ರಾಧಿಕಾರವೆಂದು ನಿಗದಿಪಡಿಸುವುದು ಸಮಂಜಸವಲ್ಲ.

ಒಟ್ಟಾರೆಯಾಗಿ ಈ ಕಾಯ್ದೆಯು ಬಿಬಿಎಂಪಿಯ ಸಾಂಸ್ಥಿಕ ಸಂರಚನೆ ಮತ್ತು ಶಾಸನಾತ್ಮಕ ಚೌಕಟ್ಟಿನ ವಿಷಯದಲ್ಲಿ ಅಸಮರ್ಪಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮುನಿಸಿಪಲ್‌ ಮತ್ತು ಮೆಟ್ರೋಪಾಲಿಟನ್‌ ಆಡಳಿತಕ್ಕೆ ಸಂಬಂಧಪಟ್ಟಂತೆ ಒಂದು ನೂತನ ಹಾಗೂ ಸಮಗ್ರ ಕಾಯ್ದೆಯ ಬಗ್ಗೆ ಬೆಂಗಳೂರು ನಾಗರೀಕರ ನಿರೀಕ್ಷೆಯು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಈ ಬಗ್ಗೆ ತೆಗೆದುಕೊಳ್ಳಬೇಕಾದ ಶಾಸನಾತ್ಮಕ ಕ್ರಮಗಳನ್ನು ಸಾಧ್ಯವಾದಷ್ಟು ಬೇಗ ಸರಿಯಾದ ರೀತಿಯಲ್ಲಿ ರಾಜ್ಯ ಸರ್ಕಾರವು ಶ್ರದ್ಧೆಯಿಂದ ಪ್ರಯತ್ನಿಸಿದರೆ ಒಳ್ಳೆಯದು. 


ಪಿ. ಜಿ. ಶೆಣೈ


ಸಿ. ಆರ್.‌ ರವೀಂದ್ರ

– ಲೇಖಕರು: ಪಿ. ಜಿ. ಶೆಣೈ ಹಾಗೂ ಸಿ. ಆರ್.‌ ರವೀಂದ್ರ

(ಲೇಖಕರು ಸೆಂಟರ್‌ ಫಾರ್‌ ಅರ್ಬನ್‌ ಗವರ್ನೆನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್ ಸಂಸ್ಥೆಯ ನಿರ್ದೇಶಕರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು