ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಜೀವಿವೈವಿಧ್ಯವೇ ಜೀವಾಳವೆಂಬ ಅಂತಿಮಸತ್ಯ

ಹೊಸ ಕಾಯಿಲೆಗಳು ಬರುತ್ತಿರುವ ವಿದ್ಯಮಾನಕ್ಕೂ ಭೂಬಿಸಿಯೇರಿಕೆಗೂ ನೇರ ಸಂಬಂಧವಿದೆ
Last Updated 15 ಅಕ್ಟೋಬರ್ 2022, 5:01 IST
ಅಕ್ಷರ ಗಾತ್ರ

ಮಲೆನಾಡಿನ ನಮ್ಮ ಪರಿಸರದಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಬೆಟ್ಟ-ಬ್ಯಾಣದ ಕಾಲುದಾರಿಗಳಲ್ಲಿ ಹೋಗಬೇಕಿತ್ತು. ಎಂಬತ್ತರ ದಶಕದಲ್ಲಿ ಕೃಷಿಯನ್ನು ಯಾಂತ್ರೀಕರಣ ಆವರಿಸಿಕೊಂಡಿರಲಿಲ್ಲ. ಗದ್ದೆ ಹೂಟಿಗೆ ಎತ್ತುಗಳನ್ನು ಬಳಸಲಾಗುತ್ತಿತ್ತು. ಅಡಿಕೆ, ಭತ್ತದ ಬೆಳೆಗಳಿಗೆ ಸಗಣಿಮಿಶ್ರಿತ ಹಸಿಗೊಬ್ಬರವೇ ಮುಖ್ಯ ಮೂಲವಾಗಿತ್ತು. ಗೊಬ್ಬರಕ್ಕಾಗಿಯೇ ಹೇರಳ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕುವ ಪರಿಪಾಟ ಆಗ ಇತ್ತು.

ರೈತನ ಮನೆಯಲ್ಲಿ ಜಾನುವಾರು ಸತ್ತರೆ, ಅದರ ಕಳೇಬರವನ್ನು ಬೆಟ್ಟದಲ್ಲಿಟ್ಟು ಬರುವುದು ಆಗಿನ ಸಹಜ ಪದ್ಧತಿಯಾಗಿತ್ತು. ಸತ್ತ ಜಾನುವಾರುಗಳನ್ನು ತಿನ್ನಲು ಭಾರಿ ಗಾತ್ರದ ರಣಹದ್ದುಗಳು ಬರುತ್ತಿದ್ದವು. ರಣಹದ್ದುಗಳ ದೊಡ್ಡ ಗುಂಪು ಒಂದೆರಡು ಗಂಟೆಗಳಲ್ಲಿ ಮಾಂಸವನ್ನು ಹಿಸಿದು ತಿಂದುಹಾಕುತ್ತಿತ್ತು. ರಣಹದ್ದುಗಳು ತಿನ್ನಲಾರದ ಭಾಗವನ್ನು, ರಾತ್ರಿ ವೇಳೆ ಬರುತ್ತಿದ್ದ ನರಿಗಳು ತಿಂದುಹಾಕುತ್ತಿದ್ದವು. ಎರಡು ದಿನ ಉರುಳುವಷ್ಟರಲ್ಲಿ ಸತ್ತ ಜಾನುವಾರುಗಳ ಗಟ್ಟಿ ಮೂಳೆಗಳು ಮಾತ್ರ ಉಳಿದಿರುತ್ತಿದ್ದವು.

ಹೈನುಗಾರಿಕೆಯು ತೀವ್ರ ಬದಲಾವಣೆಗೆ ತೆರೆದು ಕೊಂಡಿತು. ವಿದೇಶಿ ತಳಿಯ ಭಾರಿ ಗಾತ್ರದ ಹಸುಗಳು ಕೊಟ್ಟಿಗೆಗೆ ಬಂದವು. ಸ್ಥಳೀಯ ಪ್ರಭೇದಗಳು ರೈತರಿಂದ ಉಪೇಕ್ಷೆಗೊಳಗಾಗಿ ನೇಪಥ್ಯಕ್ಕೆ ಸರಿದವು. ಮಲೆನಾಡು ಗಿಡ್ಡದ ಜೊತೆ ಸಾಕುತ್ತಿದ್ದ ಎಮ್ಮೆಗಳ ಸಂಖ್ಯೆಯೂ ಕ್ರಮೇಣ ಕಡಿಮೆಯಾಯಿತು. ವಿದೇಶಿ ತಳಿಯ, ಹೆಚ್ಚು ತೂಕದ ಜಾನುವಾರು ಸತ್ತರೆ ಅದನ್ನು ಬೆಟ್ಟಕ್ಕೆ ಒಯ್ಯುವುದು ತ್ರಾಸದಾಯಕ ಅನಿಸಿತೋ ಏನೋ, ಗುಂಡಿ ತೋಡಿ ಕಳೇಬರವನ್ನು ಹುಗಿಯುವ ರೂಢಿ ಹುಟ್ಟಿಕೊಂಡಿತು. ಆಹಾರದ ಕಾರಣಕ್ಕೆ ವರ್ಷಂಪೂರ್ತಿ ದರ್ಶನ ನೀಡುತ್ತಿದ್ದ ರಣಹದ್ದುಗಳು ನಮ್ಮ ಹಳ್ಳಿಗೆ ಬರುವುದನ್ನೇ ನಿಲ್ಲಿಸಿದವು. ಸ್ಥಾನಿಕವಾಗಿ ರಣಹದ್ದುಗಳು ಅಳಿದುಹೋದವು. ಈಗ ಇಡೀ ಭಾರತದಲ್ಲಿ ಅವುಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಕುಸಿದುಹೋಗಿದೆ.

ಪಕ್ಷಿ ಪ್ರಪಂಚದಲ್ಲೇ ಅತ್ಯಂತ ನಿಪುಣ ವಾಸ್ತುಶಿಲ್ಪಿಯೆಂದು ಕರೆಯಲಾಗುವ ಗೀಜಗಗಳು ಮಲೆನಾಡಿನಲ್ಲಿ ಹೇರಳವಾಗಿದ್ದವು. ಗೂಡು ಕಟ್ಟುವುದರಲ್ಲಿ ಅವುಗಳ ನೈಪುಣ್ಯ ಬೆರಗಾಗಿಸುವಂತಹದು. ಭತ್ತದ ಹಸಿ ಎಲೆಯನ್ನು ಕತ್ತರಿಸಿ ತಂದು ಅಡಿಕೆ ಮರದ ಹಸಿ ಹೆಡದ ತುದಿಯಲ್ಲಿ ನಿರ್ಮಿತವಾಗುತ್ತಿದ್ದ ವಿಶಿಷ್ಟ ಗೂಡುಗಳವು. ಹಸಿರುಕ್ರಾಂತಿಯ ನಂತರದಲ್ಲಿ ರಸಗೊಬ್ಬರಗಳ ಬಳಕೆ ಪ್ರಾರಂಭವಾಯಿತು. ಸೊಕ್ಕಿ ಬೆಳೆದು ಹೆಚ್ಚು ಇಳುವರಿ ನೀಡುವ ತಳಿಗಳು ರೈತ ವಲಯದಲ್ಲಿ ಜನಪ್ರಿಯವಾದವು. ಹೀಗೆ ಬೆಳೆದ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು, ವಿವಿಧ ರೋಗಗಳಿಗೆ ಬಲಿಯಾದವು. ಇದನ್ನು ನಿಯಂತ್ರಿಸಲು ಮತ್ತಷ್ಟು ರಾಸಾಯನಿಕಗಳು ಬಂದವು. ಅಡಿಕೆಗೆ ಬೆಲೆ ಬರುತ್ತಿದ್ದಂತೆ, ಭತ್ತದ ಗದ್ದೆಗಳು ಮಾಯವಾಗುತ್ತಾ ಬಂದವು. 2000ನೇ ಇಸವಿಯ ಹೊತ್ತಿಗೆ ಗೀಜಗಗಳು ಸ್ಥಾನಿಕವಾಗಿ ಅಳಿದುಹೋದವು. ಕ್ಷೀರಕ್ರಾಂತಿಯೆಂಬ ಬದಲಾವಣೆ ರಣಹದ್ದುಗಳನ್ನು ಬಲಿ ತೆಗೆದುಕೊಂಡರೆ, ಗೀಜಗಗಳು ಹಸಿರುಕ್ರಾಂತಿಗೆ ಬಲಿಯಾದವು.

ಹೇರಳ ಜೀವಿವೈವಿಧ್ಯವು ಆರೋಗ್ಯವಂತ ಪರಿಸರ ವನ್ನು ಪ್ರತಿಬಿಂಬಿಸುತ್ತದೆ. ಕಾಲ ಕೆಳಗಿನ ಕಪ್ಪೆಗಳು ಸದ್ದು ಮಾಡಲಿಲ್ಲವೆಂದರೆ, ಹತ್ತಿರದಲ್ಲೊಂದು ಅಪಾಯ ಕಾದಿದೆ ಎಂದು ಗ್ರಹಿಸಲು ಅಡ್ಡಿಯಿಲ್ಲ. ಗೀಜಗನ ಗೂಡಿಗಿಂತ ಅದೆಷ್ಟೋ ಪಟ್ಟು ಸಂಕೀರ್ಣವಾದ ಪರಿಸರ ವ್ಯವಸ್ಥೆಯ ಶೇಕಡ 1ರಷ್ಟು ಕೂಡಾ ನಮ್ಮ ಅರಿವಿಗೆ ಇನ್ನೂ ಬಂದಿಲ್ಲ. ಮಾನವನ ಹಸ್ತಕ್ಷೇಪವಿಲ್ಲದ ಪರಿಸರವು ಆಯಾ ಪ್ರದೇಶಕ್ಕೆ ಏನು ಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ನೆರೆ-ಬರ ಹಾಗೂ ಕಾಡಿನ ಜೀವಿವೈವಿಧ್ಯ ಒಂದು ಅರಣ್ಯ ವ್ಯವಸ್ಥೆಯನ್ನು ಸಮರ್ಥವಾಗಿ ಕಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಸರ್ಕಾರದ ವತಿಯಿಂದ ಕಾಪಿಡಲ್ಪಟ್ಟ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಇತ್ತೀಚೆಗೆ ಅತಿಯಾದ ಮಾನವ ಹಸ್ತಕ್ಷೇಪದಿಂದ ತಮ್ಮ ಸಹಜತೆಯನ್ನು ಕಳೆದುಕೊಳ್ಳುತ್ತಿವೆ. ಹುಲಿ ಯೋಜನೆಯಡಿಯಲ್ಲಿ ನಾಗರಹೊಳೆಯ 650 ಚದರ ಕಿ.ಮೀ. ವ್ಯಾಪ್ತಿಯ ಅರಣ್ಯ ಪ್ರದೇಶವು ಬಹುಮುಖ್ಯ ಪ್ರವಾಸಿತಾಣವೂ ಆಗಿದೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ನಾಗರಹೊಳೆಯಲ್ಲಿ ಸಫಾರಿಗೆ ಅವಕಾಶ ಇದೆ. ಹಾಗೆ ಹೋದವರಲ್ಲಿ ಕೆಲವರಿಗೆ ಹುಲಿ ಕಾಣಸಿಗಬಹುದು. ಬೇಸಿಗೆಯಲ್ಲೂ ಪ್ರವಾಸಿಗರಿಗೆ ಹುಲಿ ತೋರಿಸುವ ಇಲಾಖೆಯ ಉಮೇದು ಅಲ್ಲಿನ ಒಣಗಿದ ಕೆರೆಗಳಿಗೆ ನೀರು ತುಂಬಿಸುವ ಕೃತಕ ವ್ಯವಸ್ಥೆ ಮಾಡುತ್ತದೆ. ಇದು, ನೀರಿಲ್ಲದೇ ಬದುಕಲಾರದ ಚುಕ್ಕೆಜಿಂಕೆ, ಹಂದಿಗಳ ಸಂಖ್ಯೆಗಳನ್ನು ನೈಸರ್ಗಿಕ ಸಾಂದ್ರತೆಗಿಂತ ಮೂರು ಪಟ್ಟು ಹೆಚ್ಚು ಮಾಡಿದೆ. ಈ ಕ್ರಮದಿಂದಾಗಿಯೇ ಬರದಲ್ಲೂ ಬದುಕಬಲ್ಲ ಸಾಂಬಾರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಕಾಲಕ್ರಮೇಣ ನಾಗರಹೊಳೆ ಕಾಡು ತನ್ನ ಸ್ವಾಭಾವಿಕ ಸಸ್ಯವೈವಿಧ್ಯವನ್ನು ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ಕಾಡು ಕೆಲವೇ ಸಸ್ಯವೈವಿಧ್ಯಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.

ವಿಜ್ಞಾನ, ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಕೃತಿಯನ್ನು ಬಗ್ಗಿಸಬಲ್ಲೆ ಎಂಬ ಹುಸಿಭ್ರಮೆಯಲ್ಲಿ ನವನಾಗರಿಕ ಪ್ರಪಂಚವಿದೆ. ಅರಣ್ಯ ನಾಶವೆಂದರೆ, ಅದು ಜೀವಿವೈವಿಧ್ಯಗಳ ಆವಾಸಸ್ಥಾನದ ವಿನಾಶವೂ ಆಗುತ್ತದೆಯಲ್ಲವೆ? ಜೊತೆಗೆ ವ್ಯಾಪಕ ಅರಣ್ಯನಾಶದಿಂದ ಭೂಬಿಸಿಯೇರಿಕೆ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದು ಕೊಳ್ಳುತ್ತದೆ. ಭೂಮಿ ಬಿಸಿಯಿಂದ ಹೆಚ್ಚಿನ ಜೀವಿವೈವಿಧ್ಯ ಸಮೂಹಗಳು ಸಂಕಷ್ಟಗಳನ್ನು ಎದುರಿಸುವ ಸಂದರ್ಭ ಬರುತ್ತದೆಯಾದರೂ, ಬಿಸಿ ವಾತಾವರಣ ಪೀಡೆಕೀಟಗಳ ವಂಶಾಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಅಂದರೆ, ನೊಣ, ಸೊಳ್ಳೆ, ಉಣ್ಣೆ ಇತ್ಯಾದಿ ಪೀಡೆಕೀಟಗಳು ಅತಿವೇಗವಾಗಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ.

ಕರ್ನಾಟಕವನ್ನು ಈಗ ಎರಡು ಗಂಭೀರ ಸಮಸ್ಯೆಗಳು ಕಾಡುತ್ತಿವೆ. ಜಾನುವಾರುಗಳಿಗೆ ಲಂಪಿ ಚರ್ಮ ಗಂಟುರೋಗ ವ್ಯಾಪಕವಾಗಿ ಹಬ್ಬುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಸುಮಾರು 600 ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿವೆ ಎಂಬ ವರದಿಗಳಿವೆ. ದಕ್ಷಿಣ ಆಫ್ರಿಕಾ ಮೂಲದ ಈ ಕಾಯಿಲೆ ಕರ್ನಾಟಕಕ್ಕೆ ಹೊಸದಾಗಿ ಸೇರ್ಪಡೆಯಾದ ಕಾಯಿಲೆಯಾಗಿದ್ದು, ಜಾನುವಾರುಗಳ ಸಾವಿನಿಂದ ರಾಜ್ಯಕ್ಕೆ ಆರ್ಥಿಕವಾಗಿ ದೊಡ್ಡ ಮಟ್ಟದ ನಷ್ಟವಾಗಿದೆ. ಮಲೆನಾಡಿನ ವಾಣಿಜ್ಯ ಬೆಳೆಯಾದ ಅಡಿಕೆಗೆ ಎಲೆಚುಕ್ಕಿಯೆಂಬ ರೋಗ ಬಲುವೇಗವಾಗಿ ಹರಡುತ್ತಿದೆ. ಶೃಂಗೇರಿ ಭಾಗದಲ್ಲಿ ಇಡೀ ಅಡಿಕೆ ತೋಟಕ್ಕೆ ತೋಟವೇ ರೋಗದಿಂದ ನಾಶವಾಗಿದೆ.

ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಅಚ್ಚರಿಯ ವಿಷಯವೊಂದು ಬಹಿರಂಗವಾಗುತ್ತಿದೆ. ಯಾವ ತೋಟ ದಲ್ಲಿ ಕಳೆನಾಶಕವೆಂಬ ರಾಸಾಯನಿಕವನ್ನು ಹೆಚ್ಚು ಬಳಕೆ ಮಾಡಲಾಗಿದೆಯೋ ಅಂತಹ ತೋಟಗಳೇ ಎಲೆಚುಕ್ಕಿ ರೋಗಕ್ಕೆ ಹೆಚ್ಚು ತುತ್ತಾಗುತ್ತಿವೆ. ರಾಸಾಯನಿಕರಹಿತವಾದ ತೋಟಗಳಿಗೆ ಎಲೆಚುಕ್ಕಿ ರೋಗ ಅಷ್ಟೊಂದು ಹಾನಿ ಮಾಡುತ್ತಿಲ್ಲವೆಂಬುದು ರೈತರ ಅನುಭವದ ಮಾತು. ಮಣ್ಣಿನಲ್ಲಿ ಇರುವ ಬಹುಉಪಯೋಗಿ ಸೂಕ್ಷ್ಮಾಣುಗಳು ಅಡಿಕೆ ಎಲೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ. ನೈಸರ್ಗಿಕ ಪೋಷಕಾಂಶ ಪಡೆದು ಬೆಳೆದ ಗಿಡಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಎಲೆಗಳನ್ನು ತಿಂದು ಹಾಕುವ ಫಂಗಸ್ಸುಗಳ ದಾಳಿಗೆ ಆರೋಗ್ಯವಂತ ಗಿಡಗಳು ಸುಲಭವಾಗಿ ತುತ್ತಾಗಲಾರವು.

ಈ ಹಿಂದೆ, ಸೊಳ್ಳೆಗಳಿಂದ ಹರಡುವ ಮಲೇರಿಯಾ ಎಂಬ ಮಾರಿಯನ್ನು ಸೊಳ್ಳೆಗಳನ್ನು ನಿರ್ಮೂಲನೆ ಮಾಡುವ ಮೂಲಕ ಹತ್ತಿಕ್ಕಬೇಕೆಂದು ಡಿಡಿಟಿ ಎಂಬ ರಾಸಾಯನಿಕವನ್ನು ವ್ಯಾಪಕವಾಗಿ ಬಳಸಲಾಯಿತು. ತಾಯಿಯ ಎದೆಹಾಲಿನಲ್ಲೂ ಡಿಡಿಟಿಯ ಅಂಶಗಳು

ಅಖಿಲೇಶ್‌ ಚಿಪ್ಪಳಿ
ಅಖಿಲೇಶ್‌ ಚಿಪ್ಪಳಿ

ಕಂಡುಬಂದ ಮೇಲೆ ಡಿಡಿಟಿಯನ್ನೇ ನಿಷೇಧಿಸಲಾಯಿತು ಎಂಬುದನ್ನು ಬಿಟ್ಟರೆ ಸೊಳ್ಳೆಗಳಿಂದ ಮುಕ್ತಿ ಸಿಗಲೇ ಇಲ್ಲ. ತೋಟದಲ್ಲಿ ಕಳೆಗಳಿದ್ದಲ್ಲಿ ಅದರಿಂದ ಅನೇಕ ಪ್ರಯೋಜನ ಗಳಿವೆ. ಮಣ್ಣಿನಲ್ಲಿನ ತೇವಾಂಶವನ್ನು ಸುಸ್ಥಿರ ರೀತಿಯಲ್ಲಿ ಕಾಪಾಡಿಕೊಳ್ಳಲು ಕಳೆಗಳಿರಬೇಕು ಹಾಗೂ ಕಳೆಗಳು ಸಾವಯವ ಗೊಬ್ಬರವೂ ಹೌದು. ಅನೇಕ ಉಪಯುಕ್ತ ಕೀಟ ಹಾಗೂ ಸೂಕ್ಷ್ಮಾಣುಗಳಿಗೆ ಕಳೆಗಿಡಗಳೇ ಆಧಾರ. ಇಂತಹ ಸಾವಯವ ಸತ್ಯ ಹಿಂದೆ ಸರಿದ ಕಾರಣಕ್ಕೆ ಬೆಳೆಗಳಿಗೂ ಹೊಸ ಹೊಸ ಕಾಯಿಲೆಗಳು ಅಮರಿಕೊಳ್ಳುತ್ತಿವೆ ಎಂಬುದು ಅನುಭವಸ್ಥ ರೈತರ ಅಳಲಾಗಿದೆ.

ಮಾನವನಿಗೆ, ಜಾನುವಾರುಗಳಿಗೆ, ಸಸ್ಯಗಳಿಗೆ ಹೊಸ ಹೊಸ ಕಾಯಿಲೆಗಳು ಬರುತ್ತಿರುವ ವಿದ್ಯಮಾನಕ್ಕೂ ಮಾನವನಿರ್ಮಿತ ಭೂಬಿಸಿಯೇರಿಕೆಗೂ ನೇರ ಸಂಬಂಧವಿದೆ. ಭೂಬಿಸಿಯೇರಿಕೆಯಿಂದ ಆಗುವ ಸಂಭಾವ್ಯ ಅನಾಹುತಗಳನ್ನು ತಡೆಯಲು ಇರುವ ಏಕೈಕ ಸುಲಭ ಮಾರ್ಗವೆಂದರೆ ಜೀವಿವೈವಿಧ್ಯ ಆವಾಸಸ್ಥಾನಗಳನ್ನು ಕಾಪಿಡುವುದು. ಇಲ್ಲವಾದಲ್ಲಿ ಮತ್ತಷ್ಟು ಅಪಾಯಗಳಿಗೆ ಮಣೆ ಹಾಕಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT