ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಗ.ಜಗದೀಶ್‌ ಬರಹ: ಬಿಟ್‌ಕಾಯಿನ್ ವಿಶ್ವರೂಪ- ಯಾರಿಗೆ ತಾಪ?

‘ಆಡಿಸುವಾತ’ನ ಕೈಚಳಕದಲಿ ಎಲ್ಲ ಅಡಗಿದೆ...!
Last Updated 15 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಸ್ವಯಂ ಪ್ರಮಾದವೋ ನಾಯಕರಲ್ಲಿ ತುಂಬಿಕೊಂಡಿರುವ ಅಧಿಕಾರದ ಹಪಹಪಿಯೋ ಕರ್ನಾಟಕದಲ್ಲಿ ಕಮಲಪಡೆ ಆಡಳಿತ ಚುಕ್ಕಾಣಿ ಹಿಡಿದಾಗಲೆಲ್ಲ, ತೂತುಬಿದ್ದ ದೋಣಿಯು ಕಡಲೊಳಗೆ ಸಿಕ್ಕಿ ಪತರಗುಟ್ಟುವಂತೆ ಪರಿತಪಿಸುವುದು ಮಾಮೂಲಾಗಿದೆ. ಪೂರ್ಣ ಜನಾದೇಶ ಪಡೆಯದೇ ಅಡ್ಡದಾರಿಯಿಂದ ಗದ್ದುಗೆಗೇರಿದ ಎರಡೂ ಅವಧಿಯಲ್ಲಿ ಸದಾ ‘ಪದ ಕುಸಿಯುವ’ ಭೀತಿಯೊಳಗೆ ಆಡಳಿತದ ಬಂಡಿಯನ್ನು ಹಗ್ಗದ ಮೇಲಿನ ನಡಿಗೆಯಂತೆ ಮುನ್ನಡೆಸುವ ಸ್ಥಿತಿ ಸರ್ಕಾರವನ್ನು ಮುನ್ನಡೆಸುವವರ ಹೆಗಲೇರುತ್ತದೆ

ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿದ ತರುವಾಯ, ಎಲ್ಲ ಲೆಕ್ಕಾಚಾರಗಳನ್ನು ಮೀರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಆಸ್ಥೆ ವಹಿಸಿ ಆ ಗಾದಿಗೆ ತಂದವರು ಪ್ರಧಾನಿ ನರೇಂದ್ರ ಮೋದಿ. ಅದಾನಿಯಂತಹ ಉದ್ಯಮಿಗಳ ವಕಾಲತ್ತು, ವ್ಯವಹಾರದ ನೆಂಟಸ್ತನ ಎಲ್ಲವನ್ನೂ ಬದಿಗೆ ಸರಿಸಿದ ಮೋದಿ, ಬೊಮ್ಮಾಯಿ ಅವರಿಗೆ ಘನ ಹುದ್ದೆ ಕೊಟ್ಟರು.

ಸರ್ಕಾರವು ನೂರು ದಿನ ಪೂರೈಸಿದ ಸಡಗರದಲ್ಲಿ ತಮ್ಮ ಸಾಧನೆ ಬಿಂಬಿಸಿಕೊಳ್ಳುವ ತವಕದಲ್ಲಿ ಬೊಮ್ಮಾಯಿ ಇದ್ದರು.‍ಪ್ರಶಾಂತ ಕೊಳಕ್ಕೆ ಬಿದ್ದ ‘ಬಿಟ್‌ಕಾಯಿನ್‌’ ವಿಚ್ಛಿದ್ರ ತರಂಗ ಎಬ್ಬಿಸಿದೆ. ಏನೂ ಆಗೇ ಇಲ್ಲ ಎಂದು ಸಚಿವರು ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತಿದ್ದಾರೆ. ಏನೂ ಇಲ್ಲವೆಂದ ಮೇಲೆ ಯುದ್ಧಕಾಲದಲ್ಲಿ ತೋರುವ ಗಡಿಬಿಡಿಗೆ ಬಿಜೆಪಿ ಸಚಿವರು, ಶಾಸಕರು ಬಿದ್ದಿರುವುದೇಕೆ?

‘ಬಿಟ್‌ಕಾಯಿನ್‌’ ಸದ್ದು ಮಾಡುತ್ತಿದ್ದಂತೆ ಎದ್ದು ಕುಳಿತ ಕಾಂಗ್ರೆಸ್‌ನವರು ಸಮರ ಸೇನಾನಿಗಳಂತೆ ಅಖಾಡಕ್ಕೆ ಇಳಿದಿದ್ದಾರೆ. ಎರಡೂ ಪಕ್ಷಗಳವರಲ್ಲಿ ಪರಸ್ಪರರನ್ನು ಹಣಿಯುವ ಯುದ್ಧೋನ್ಮಾದ ಇದೆ ವಿನಾ ಜನರಿಗೆ ಸತ್ಯ ತಿಳಿಸಬೇಕೆಂಬ ನೈಜ ನಾಯಕತ್ವದ ಗುಣ ಮಾತ್ರ ತೋರುತ್ತಿಲ್ಲ. ಬೊಮ್ಮಾಯಿ ಆದಿಯಾಗಿ ಬಿಜೆಪಿಯವರೆಲ್ಲರೂ ‘ಈ ಹಗರಣ ಕಾಂಗ್ರೆಸ್‌ನವರ ಅವಧಿಯಲ್ಲಿ ನಡೆದಿದೆ; ನಮ್ಮವರು ಯಾರೂ ಇಲ್ಲ, ಅವರಿಗೆ ತಿರುಗುಬಾಣವಾಗಲಿದೆ’ ಎಂದು ಬೊಬ್ಬಿರಿಯುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳೇ ಇವೆ. ಸಿಬಿಐ, ಇ.ಡಿ, ‘ರಾ’, ಆದಾಯ ತೆರಿಗೆ ಇಲಾಖೆ ಹೀಗೆ ಸಕಲ ಸಂಸ್ಥೆಗಳೂ ಅವರ ಬಳಿ ಇವೆ. ಕಾಂಗ್ರೆಸ್‌ನವರೇ ಇದರಲ್ಲಿ ಶಾಮೀಲಾ ಗಿರುವುದು ನಿಜವಾದರೆ, ಅವರನ್ನು ಬಗ್ಗುಬಡಿದು, ನೇರದಾರಿಯಲ್ಲಿ ತಮ್ಮ ಏಕಸ್ವಾಮ್ಯ ಸಾಧಿಸಲು ಇದಕ್ಕಿಂತ ಸುವರ್ಣಾವಕಾಶ ಮತ್ತೊಮ್ಮೆ ಸಿಗಲಿದೆಯೇ? ಹೀಗೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಸರ್ಕಾರ ನಡೆಸುತ್ತಿರುವವರು ಸಿಕ್ಕಿಕೊಂಡಿದ್ದರೆ, ಅಬ್ಬರಿಸಿ ಕಾಂಗ್ರೆಸ್‌ ನವರನ್ನು ಹೆದರಿಸುವ ಜಾಣ್ಮೆ ಜಾಸ್ತಿ ದಿನ ಬಿಜೆಪಿಯವರ ನೆರವಿಗೆ ಬರಲಾರದು. ಜನರೂ ನಂಬಲಾರರು.

ತನಿಖಾ ಹಂತದಲ್ಲಿ ಆಗಿರುವ ಗೊಂದಲಗಳನ್ನು ಹಾಗೆಯೇ ಉಳಿಸಿ ಸಂಶಯಗಳಿಗೆ ದಾರಿ ಮಾಡಿ ಕೊಡುವ ಬದಲು, ತನಿಖೆಯ ಪಾರದರ್ಶಕತೆಯನ್ನು ಜನರ ಮುಂದಿಡುವ ಧೈರ್ಯವನ್ನು ಮುಖ್ಯಮಂತ್ರಿ ತೋರಬೇಕು.

ಬಿಟ್‌ಕಾಯಿನ್‌ ಹಗರಣದ ತನಿಖೆಯಲ್ಲೇ ಕೆಲವು ಗೊಂದಲಗಳು, ಅಂತರರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧನ–ಬಿಡುಗಡೆಯ ನಾಟಕದ ಬಗ್ಗೆಯೂ ಅನುಮಾನಗಳು ಹುತ್ತಗಟ್ಟುತ್ತಲೇ ಇವೆ. ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ, ನ್ಯಾಯಾಲಯಕ್ಕೆ ಸಲ್ಲಿಸಿರುವ 757 ಪುಟಗಳ ದೋಷಾರೋಪ ಪಟ್ಟಿಯು ಕೇವಲ ‘ಹೇಳಿಕೆ’ಗಳನ್ನು ಆಧರಿಸಿದ ಕಾಗದವಷ್ಟೆ. ಭಾರತದ ಕಾನೂನುಗಳ ಅನುಸಾರ ನ್ಯಾಯಯುತವಾಗಿ ತನಿಖೆ ನಡೆಸಿದ ಕುರುಹುಗಳು ದೋಷಾರೋಪ ಪಟ್ಟಿಯಲ್ಲಿ ಕಾಣುವುದೇ ಇಲ್ಲ. ಏನನ್ನೋ ಮುಚ್ಚಿಟ್ಟು ಮತ್ತೇನನ್ನೋ ಬಚ್ಚಿಟ್ಟು ತೇಪೆ ಸಾರಿಸುವ ಕೆಟ್ಟ ಮಾದರಿಯೊಂದನ್ನು ಸಿಸಿಬಿ ತೋರಿಸಿದೆ. ಇದು ರಾಜ್ಯದ ಪೊಲೀಸ್ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನೇ ಬುಡಮೇಲು ಮಾಡುವಂತಿದೆ.

ಕರ್ನಾಟಕ ಸರ್ಕಾರದ ಸಾರ್ವಜನಿಕ ಸಂಗ್ರಹಣಾ ವ್ಯವಸ್ಥೆಯನ್ನು (ವಿವಿಧ ಇಲಾಖೆಗಳ ಟೆಂಡರ್‌ ನಿರ್ವಹಿಸುವ) ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ಅಲ್ಲಿ ಗುತ್ತಿಗೆದಾರರು ಇಟ್ಟಿದ್ದ ಟೆಂಡರ್‌ ಇಎಂಡಿಯ ಬಹುಕೋಟಿ ಲಪಟಾಯಿಸಿದ್ದ. ಇದರ ಬಗ್ಗೆ ಸಿಐಡಿ ತನಿಖೆ ಕೈಗೊಂಡಿದ್ದರೂ ಅದಕ್ಕೆ ತಾರ್ಕಿಕ ಅಂತ್ಯವನ್ನೇ ನೀಡಿಲ್ಲ. ‘ಬಿಟ್‌ಕಾಯಿನ್‌ ಹ್ಯಾಕಿಂಗ್‌’ನ ಲಾಭ ಪಡೆದವರು ಇದರ ಹಿಂದೆ ಇದ್ದಾರೆಯೇ ಎಂಬ ಶಂಕೆಯನ್ನೂ ಈ ನಡೆ ಹುಟ್ಟು ಹಾಕುತ್ತದೆ. ಇವೆಲ್ಲವನ್ನೂ ನಿವಾರಿಸಬೇಕಿರುವುದು ಸರ್ಕಾರ ನಡೆಸುವವರ ಜವಾಬ್ದಾರಿಯೇ ವಿನಾ ಅದಕ್ಕೆ ದಾಖಲೆ ಕೊಡುವುದು ಕಾಂಗ್ರೆಸ್‌ನ ಹೊಣೆಗಾರಿಕೆಯಲ್ಲ.

ತನಿಖಾ ಹಂತದಲ್ಲಿ ಸಿಸಿಬಿ, ಸಿಐಡಿ ಪೊಲೀಸರು ಎಡವಿದ್ದೇ ಇಷ್ಟೆಲ್ಲ ಪ್ರಮಾದಕ್ಕೆ ಕಾರಣ. ‘ವಿದೇಶಿ ಹಣಕಾಸು ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳ ವೆಬ್‌ಸೈಟ್ ಹ್ಯಾಕ್ ಮಾಡಿ, ಅಲ್ಲಿಂದ ಹಣ ಎತ್ತಿದ್ದೆ’ ಎಂಬ ಶ್ರೀಕಿ ಸ್ವಯಂ ಹೇಳಿಕೆಯನ್ನು ಸಿಸಿಬಿ ದಾಖಲಿಸಿಕೊಂಡಿದೆ. ಶ್ರೀಕಿ ಹೇಳಿಕೆಯನ್ನು ಆಧರಿಸಿ, ಅವನು ಹೇಳಿದ್ದ ಸಂಸ್ಥೆಗಳಿಂದ ಮಾಹಿತಿಯನ್ನು ನೇರವಾಗಿ ಪಡೆದು ತನಿಖೆಯನ್ನು ವಿಸ್ತಾರಗೊಳಿಸುವ, ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ತನಿಖಾ ಸಂಸ್ಥೆಗಳು ಮಾಡಬೇಕಿತ್ತು. ‘ವಿದೇಶಿ ಸಂಸ್ಥೆಗಳು ಯಾವುದೇ ಕೋರಿಕೆ ಸಲ್ಲಿಸಿಲ್ಲ’ ಎಂದು ತನಿಖಾ ತಂಡದ ನೇತೃತ್ವ ವಹಿಸಿದ್ದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಲಿಖಿತ ಹೇಳಿಕೆ ಕೊಟ್ಟಿದ್ದಾರೆ. ಶ್ರೀಕಿ ಎಂಬೊಬ್ಬ ಹ್ಯಾಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಕನಸು ವಿದೇಶಿ ಸಂಸ್ಥೆಗಳಿಗೆ ಬೀಳುತ್ತದೆಯೇ ಎಂಬ ಸಾಮಾನ್ಯ ಜ್ಞಾನವೂ ಕಮಿಷನರ್‌ಗೆ ಹೊಳೆಯಲಿಲ್ಲವೇ? ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್‌ ಎಂಬುದು ತನಿಖಾ ಹಂತದಲ್ಲೇ ಅಂದರೆ 2020ರ ನವೆಂಬರ್‌ನಲ್ಲೇ ಗೊತ್ತಾದ ಮೇಲೆ, ಅದನ್ನು ಸಿಬಿಐನ ಇಂಟರ್ ಪೋಲ್‌ಗೆ, ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಬೇಕಾದ ಹೊಣೆಗಾರಿಕೆ ರಾಜ್ಯ ಸರ್ಕಾರಕ್ಕೆ ಇತ್ತಲ್ಲವೇ? ಅಂತರರಾಷ್ಟ್ರೀಯ ಹ್ಯಾಕರ್ ಎಂಬುದು ದೃಢಪಟ್ಟ ಆರು ತಿಂಗಳ ಮೇಲೆ ಇಂಟರ್‌ಪೋಲ್‌, ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ. ಪತ್ರ ಬರೆದ ನಂತರ ಏನಾಗಿದೆ ಎಂಬುದನ್ನು ಸರ್ಕಾರ ಈವರೆಗೆ ಬಹಿರಂಗಪಡಿಸಲಿಲ್ಲ. ಯಾವಾಗ ಬಿಟ್‌ಕಾಯಿನ್ ಸದ್ದು ಜೋರಾಯಿತೋ ಆವಾಗ ಈ ದಾಖಲೆಗಳನ್ನು ಬಿಡುಗಡೆ ಮಾಡಿದ್ದು ಕೂಡ ಸರ್ಕಾರದ ನಡೆಯನ್ನೇ ಶಂಕೆಯ ಕಡಲಿಗೆ ದೂಡುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದ ಐಎಂಎ ಹಗರಣದ ರೀತಿಯಲ್ಲೇ ಬಿಟ್‌ಕಾಯಿನ್ ಕೂಡ ಈಗ ದೊಡ್ಡದಾಗಿ ಅಬ್ಬರಿಸುತ್ತಿರುವುದಂತೂ ಸತ್ಯ.

ಬಿಟ್‌ಕಾಯಿನ್ ಹಗರಣದ ಬಗ್ಗೆ ಸಚಿನ್ ಮಾಮನಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಅನೇಕರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಈ ಪತ್ರವು ಪ್ರಧಾನಿ ಕಚೇರಿಗೆ ತಲುಪಿದೆಯೇ ಎಂಬುದು ಖಚಿತವಿಲ್ಲ. ‘ಚೌಕಿದಾರ’– ‘ಪ್ರಧಾನ ಸೇವಕ’ ಎಂದು ಸ್ವಯಂ ಘೋಷಿಸಿಕೊಂಡ ನರೇಂದ್ರ ಮೋದಿ ಅವರು ತಮ್ಮ ವಿಳಾಸಕ್ಕೆ ಬರೆದ ಪತ್ರದಲ್ಲಿ ಸತ್ಯವಿದೆಯೇ ಎಂಬುದನ್ನು ದೇಶದ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಂಶಯ ವಿಶ್ವರೂಪ ತಳೆದು, ಪತ್ರದಲ್ಲಿರುವ ನಾಯಕರು ಅಂಟಿಸಿ ಕೊಂಡಿರುವ ಮಸಿ, ಪ್ರಧಾನ ಸೇವಕರ ಕೈಯನ್ನು ಕಪ್ಪಾಗಿ ಸುವ ಸಾಧ್ಯತೆಯೂ ಇದೆ.‌

ಹಗರಣದ ವ್ಯಾಪ್ತಿಯು ಕರ್ನಾಟಕದಿಂದ ಶುರುವಾಗಿ ವಿಶ್ವದಾದ್ಯಂತ ಹರಡಿಕೊಂಡಿರುವ ಮಾಹಿತಿಗಳು ಹರಿದಾಡುತ್ತಿವೆ. ಸತ್ಯ ಈಚೆ ಬಂದರೆ ಕೆಳಹಂತದಿಂದ ಅತ್ಯುನ್ನತ ಹಂತದವರೆಗೆ ಹಲವರ ತಲೆದಂಡ ಆಗುವುದು ಖಚಿತ. ಆದರೆ, ಅದು ಆಗುತ್ತದೆಯೇ ಎಂಬುದು ಸಂದೇಹಾಸ್ಪದ. ‘ಆಡಿಸುವಾತ’ನಿಗೆ ಎಲ್ಲವೂ ಗೊತ್ತಿದೆ. ಆತನ ಕೈಯಲ್ಲೇ ಎಲ್ಲವೂ ಅಡಗಿದೆ ಎಂಬುದಂತೂ ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT