ಗುರುವಾರ , ಆಗಸ್ಟ್ 18, 2022
24 °C
ರಾಜ್ಯದಲ್ಲಿ ನೈಜ ವಿರೋಧ ಪಕ್ಷದ ಕರ್ತವ್ಯವನ್ನು ಕಾಂಗ್ರೆಸ್ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ

ಬಿಜೆಪಿಗೆ ಸುಡು ತಾಪ: ಕಾಂಗ್ರೆಸ್‌ಗೆ ಹುರುಪು

ವೈ.ಗ.ಜಗದೀಶ್‌ Updated:

ಅಕ್ಷರ ಗಾತ್ರ : | |

‘ಅಧಿಕಾರದಲ್ಲಿದ್ದಾಗಷ್ಟೆ ಸಕ್ರಿಯ, ಉಳಿದಾಗ ನಿಷ್ಕ್ರಿಯ’... ಇದು ಕಾಂಗ್ರೆಸ್‌ಗೆ ಲಾಗಾಯ್ತಿನಿಂದ ಇರುವ ಅಪವಾದ. ದೇಶ–ರಾಜ್ಯಗಳಲ್ಲಿ ಅಧಿಕಾರ ಅನುಭವಿಸುತ್ತಲೇ ಅನೇಕ ದಶಕ ಕರಗಿಸಿದ ‘ಕೈ’ ನಾಯಕರು–ಕಾರ್ಯಕರ್ತರಿಗೆ ಈ ಥರದ ಸೋಮಾರಿತನ ಅಂಟುಜಾಡ್ಯ.\

‘ಕಾಂಗ್ರೆಸ್‌ಮುಕ್ತ ಭಾರತ’ ಘೋಷಣೆ ಮುಂದಿಟ್ಟು ಕೊಂಡು ನರೇಂದ್ರ ಮೋದಿ– ಅಮಿತ್ ಶಾ ಜೋಡಿ ಯಾವಾಗ ‘ಯುದ್ಧ’ಕ್ಕೆ ಹೊರಟಿತೋ ಆಗ ಕಾಂಗ್ರೆಸ್‌ ಎಂಬ ಆಲದಮರದ ಎಲೆ, ರೆಂಬೆ, ಕೊಂಬೆ, ಬಿಳಲು ಎಲ್ಲವೂ ಉದುರಿ, ಕಾಂಡವೇ ಮಗುಚಿ ಬಿದ್ದಿತು. ಕೊನೆಗೆ ‘ಕಾಂಗ್ರೆಸ್‌’ ಕಾಡೇ ಕರಗಿ ‘ಕಮಲ’ ಬಿರಿಯಲು ತೊಡಗಿತು. ಬುಡಮಟ್ಟ ಮಲಗಿದ ಮೇಲೂ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷ ಪುನಶ್ಚೇತನದ ದಾರಿ ಹುಡುಕುವತ್ತ, ಸಂಘಟನೆಗೆ ಹೊಸ ಕಸುವು ತುಂಬುವತ್ತ ಆಲೋಚಿಸಲೇ ಇಲ್ಲ.

ಇತಿಹಾಸದ ಚಕ್ರ ಎಲ್ಲೋ ಒಂದು ಕಡೆ ಹೂತು ನಿಲ್ಲುವುದಿಲ್ಲ. ಅಲ್ಪಕಾಲದ ನಿಶ್ಚಲ ಸ್ಥಿತಿ ಬಳಿಕ ಚಕ್ರ ಮುಂಚಲಿಸಬೇಕು. 70ರ ದಶಕದಲ್ಲಿನ ಇಂದಿರಾ ಗಾಂಧಿ ಅವರ ಸರ್ವಾಧಿಕಾರದ ದಿನಗಳು ಮರುಕಳಿಸುವ ಲಕ್ಷಣಗಳು ಈಗ ಗೋಚರಿಸುತ್ತಿವೆ. ಯಶಸ್ಸಿನ ಕಿರೀಟ ಹೊತ್ತುಕೊಂಡೇ ನಡೆದಿದ್ದ ಬಿಜೆಪಿಯ ಸರ್ವಾಧಿಕಾರಿ ಕೋಟೆಯಲ್ಲಿ ಬಿರುಕುಗಳು ಎದ್ದು ಕಾಣಿಸತೊಡಗಿವೆ.

ರಾಷ್ಟ್ರಮಟ್ಟದಲ್ಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಕ್ಕಟ್ಟು ಬಿಗಡಾಯಿಸುತ್ತಿದೆ. ಇಂದಿರಾ ಅವರ ಮಂಡಳಿ ಮಾಡಿದ್ದ ತಪ್ಪನ್ನು ‘ಮಂದಿರ’ದ ಮಾಂಡಲೀಕರು ಮಾಡುತ್ತಿದ್ದಾರೆ. ‘ರಾಜ್ಯದ ಮುಖ್ಯ
ಮಂತ್ರಿಗಳೆಲ್ಲ ಸಾಮಂತರಂತೆ ಇರಬೇಕೆಂಬ ಇಂದಿರಾ ಕಾಲದ ನಿಲುವಿಗೆ ಆತುಕೊಂಡಂತಿದ್ದ ಮೋದಿ– ಶಾ ಜೋಡಿಯು ಪ್ರತಿರೋಧ ಎದುರಿಸುತ್ತಿದೆ. ಮೋದಿ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಉತ್ತರ
ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಹೇಳಿದ್ದನ್ನು ಕೇಳುತ್ತಾರೆ ಎಂದು ಅವರೇ ನಂಬಿದ್ದ ಬಿ.ಎಸ್‌.ಯಡಿಯೂರಪ್ಪ ತಿರುಗಿ ಬಿದ್ದಿದ್ದಾರೆ.

ಬಿಜೆಪಿಗೆ ಒಂದರ್ಥದಲ್ಲಿ ಆರ್‌ಎಸ್‌ಎಸ್‌ ‘ಹೈಕಮಾಂಡ್’. ಕೋಮುವಾದಿ ನಿಲುವು, ಹಿಂದೂ ರಾಷ್ಟ್ರ ನಿರ್ಮಾಣದಂತಹ ಎಲ್ಲರೂ ಒಪ್ಪಲಾಗದ ನಿಲುವು ಗಳನ್ನೂ ಅದು ಪಾಲಿಸುತ್ತಿದೆ. ಅದರಾಚೆಗೆ, ಭ್ರಷ್ಟಾಚಾರ– ವಂಶಪಾರಂಪರ್ಯ ರಾಜಕಾರಣಕ್ಕೆ ವಿರೋಧ, ಸೇವಾ ಕೈಂಕರ್ಯ, ಎಲ್ಲರನ್ನೂ ಒಳಗೊಳ್ಳುವಿಕೆಯೇ ತಮ್ಮ ಆಶಯ ಎಂದು ಆರ್‌ಎಸ್‌ಎಸ್‌ ಹೇಳಿಕೊಂಡು ಬಂದಿದೆ. ಆರ್‌ಎಸ್‌ಎಸ್‌ ಈಗ ತನ್ನ ಮಾರ್ಗ ಬದಲಿಸಿದೆಯೇ? ಏಕೆಂದರೆ, ಸಂಘ ಹೇಳಿದ ಮಾತನ್ನು ಬಿಜೆಪಿ ನಾಯಕರು ಪಾಲಿಸುತ್ತಿಲ್ಲ. ಅಧಿಕಾರ ರಾಜಕಾರಣದ ಹಪಹಪಿಯ ಸಿಕ್ಕುಗಳಲ್ಲಿ ಬಿಕ್ಕುತ್ತಿರುವ ಬಿಜೆಪಿಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸೈದ್ಧಾಂತಿಕ ಲವಲೇಶವೂ ಇಲ್ಲದ ‘ಆಪರೇಷನ್ ಕಮಲ’... ಇವನ್ನೆಲ್ಲ ಮೈಗೂಡಿಸಿಕೊಂಡು ಬೇರೆ ಪಕ್ಷಗಳಿಗಿಂತ ಭಿನ್ನವಲ್ಲವೆಂದು ತೋರಿಸಿದೆ.

ಬಿಜೆಪಿಯೊಳಗೆ ಪರ್ಯಾಯವನ್ನೇ ಹುಟ್ಟುಹಾಕ
ಬಲ್ಲ ಶಕ್ತಿ ತಮಗಿದೆ ಎಂದು ತೋರಿಸಿಕೊಳ್ಳುತ್ತಿದ್ದ ಸಂಘದ ಮಂದಿ, ಈಗ ‘ಸಂಘ ದಕ್ಷ– ಸಂಘ ಆಶ್ರಮ’
ಎನ್ನುವಷ್ಟಕ್ಕೇ ಏದುಸಿರು ಬಿಡುತ್ತಿದ್ದಾರೆ. ಏಳು ವರ್ಷದ ಸುದೀರ್ಘ ಅವಧಿಯಲ್ಲಿ ತನ್ನ ಕೈಸನ್ನೆಯಂತೆ ಕೇಂದ್ರದಲ್ಲಿ ಆಡಳಿತ ನಡೆಸುವ ಅವಕಾಶ ಇದ್ದಾಗ, ವ್ಯವಸ್ಥೆಯನ್ನು ಸರಿದಾರಿಗೆ ತರುವ ಋಜುಮಾರ್ಗ ಅನುಸರಿಸಲು ಆರ್‌ಎಸ್‌ಎಸ್‌ಗೆ ಸಾಧ್ಯವಿತ್ತು. ಆದರೆ, ಅದನ್ನು ಬಿಟ್ಟುಕೊಟ್ಟು ಅಧಿಕಾರ ರಾಜಕಾರಣವನ್ನೇ ನಿರ್ಲಜ್ಜೆಯಿಂದ ಮುನ್ನಡೆಸಲು ಅವಕಾಶ ಕೊಟ್ಟ ಸಂಘದ ನಾಯಕರು, ಈಗ ಪಾಕಿಸ್ತಾನ, ಭಯೋತ್ಪಾದನೆ,
ತುಷ್ಟೀಕರಣದಂತಹ ಹಳಸಲು ರಿವಾಜುಗಳಿಗೆ ಜೋತು ಬಿದ್ದು, ತಮ್ಮ ಜವಾಬ್ದಾರಿಯನ್ನು ಮರೆತುಬಿಟ್ಟರೇ?

ಈ ಹೊತ್ತಿನೊಳಗೆ ಕಾಂಗ್ರೆಸ್ ಭಿನ್ನ ಹೆಜ್ಜೆ ಇಡುತ್ತಿದೆ. ಅಧಿಕಾರ ಕಳೆದುಕೊಂಡು ‘ಸರ್ವಾಧಿಕಾರದ ವೈಧವ್ಯ’ ಅನುಭವಿಸುತ್ತಿರುವ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಪೂರ್ಣ ಹೊಣೆ ಕೊಟ್ಟಿದೆ. ಹಾಗಿದ್ದರೂ ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ನೆಲಕಚ್ಚಿದ ಸ್ಥಿತಿಯೇ ಮುಂದುವರಿದಿದೆ. ಆದರೆ, ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೋಡಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸತೊಡಗಿದೆ. ನಾಯಕತ್ವ– ಭಿನ್ನ ಮತದ ಬಿಕ್ಕಟ್ಟಿನಲ್ಲಿ ಸೊರಗುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ, ತಮ್ಮ ಕ್ರಿಯೆಗಳ ಮೂಲಕವೇ ನಿಜದ ಹಾದಿ ತೋರಿಸತೊಡಗಿದೆ.

ವಿರೋಧ ಪಕ್ಷ ಹಾಗೂ ಅದರ ನಾಯಕರು ಬಲಿಷ್ಠರು, ಜನಪರ ಕಾಳಜಿಯವರು ಹಾಗೂ ದೂರದರ್ಶಿತ್ವ ಹೊಂದಿದವರಾಗಿದ್ದರೆ, ಹಾದಿ ತಪ್ಪಿದ ಸರ್ಕಾರವನ್ನು ಸರಿದಾರಿಗೆ ತರಲು ಸಾಧ್ಯ. ಹಾಗಾದಾಗ, ಜನರ ಕ‌ಷ್ಟಗಳು ನೀಗತೊಡಗುತ್ತವೆ.

ವರ್ಷದ ಹಿಂದೆ ಬರಸಿಡಿಲಿನಂತೆ ಕೋವಿಡ್ ಎರಗಿದಾಗ ಜನ ದಿಕ್ಕಾಪಾಲಾಗಿ ಊರಿಗೆ ಹೊರಟಿದ್ದರು. ಕಾರ್ಮಿಕರಿಗೆ ಪ್ರಯಾಣಕ್ಕೆ ಸರ್ಕಾರ ವ್ಯವಸ್ಥೆ ಮಾಡಿರಲಿಲ್ಲ. ಆಗ, ಕಾರ್ಮಿಕರ ಪ್ರಯಾಣ ವೆಚ್ಚಕ್ಕಾಗಿ ₹1 ಕೋಟಿ ಚೆಕ್‌ ಕಳಿಸಿದ ಡಿ.ಕೆ.ಶಿವಕುಮಾರ್, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ತರಕಾರಿ–ಹಣ್ಣು ಬೆಳೆದವರು ಲಾಕ್‌ಡೌನ್‌ನಿಂದ ಅದನ್ನು ಸಾಗಿಸಲಾಗದೆ ಹೊಲದಲ್ಲೇ ಬಿಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಆಗ ಹೊಲಗಳಿಗೆ ಹೋಗಿ ಖರೀದಿ ಆರಂಭಿಸಿದ ಕಾಂಗ್ರೆಸ್ ನಾಯಕರು, ಶಾಸಕರು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಸರ್ಕಾರವೂ ಅದೇ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಕೋವಿಡ್ ನಿರ್ವಹಣೆಗಾಗಿ ಔಷಧ, ಯಂತ್ರೋಪಕರಣ ಖರೀದಿ, ಸೌಲಭ್ಯ ಕಲ್ಪಿಸುವಲ್ಲಿನ ಭ್ರಷ್ಟಾಚಾರವನ್ನು ಸಿದ್ದರಾಮಯ್ಯ ಸತತ ಬಯಲು ಮಾಡಿದರು. ಶಾಸಕ ಎಚ್.ಕೆ.ಪಾಟೀಲ ಜತೆ ಸೇರಿದರು. ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿದರು. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೇ ಇರಬಹುದು. ಆದರೆ, ಎರಡನೇ ಅಲೆ ಬಂದಾಗ ಭ್ರಷ್ಟಾಚಾರದ ಅಡಾವುಡಿಗೆ ಸಚಿವರು ಕೈಹಾಕುವ ಧೈರ್ಯ ಮಾಡದೇ ಇರಲು ಇದು ಕಾರಣವಾಯಿತು.

ಎರಡನೇ ಅಲೆಯ ವೇಳೆ ಆರೋಗ್ಯ ವ್ಯವಸ್ಥೆ ಸುಧಾರಣೆ, ಪ್ಯಾಕೇಜ್‌ಗಳಿಗೆ ಆಗ್ರಹಿಸುತ್ತಲೇ ಬಂದ ಕಾಂಗ್ರೆಸ್ ನಾಯಕರು, ಸರ್ಕಾರದ ನಿರ್ಧಾರಗಳನ್ನು ಸಕಾಲಕ್ಕೆ ವಿಮರ್ಶೆಗೆ ಗುರಿಪಡಿಸುತ್ತಲೇ ಬಂದರು. ಜನರಿಗೆ ಸುಲಭದಲ್ಲಿ ಲಸಿಕೆ ಸಿಗುವುದಿಲ್ಲ ಎಂದು ಗೊತ್ತಾಗಿದ್ದೇ ತಡ, ಶಾಸಕರ ನಿಧಿಯಿಂದ ₹1 ಕೋಟಿ ಬಳಸಲು ಅನುಮತಿ ಕೊಡಿ; ಪಕ್ಷದಿಂದ ₹10 ಕೋಟಿ ಸೇರಿಸಿ ₹100 ಕೋಟಿಯಲ್ಲಿ ಲಸಿಕೆ ಖರೀದಿಸುತ್ತೇವೆ ಎಂಬ ಬೇಡಿಕೆಯನ್ನು ಸಿದ್ದರಾಮಯ್ಯ– ಶಿವಕುಮಾರ್ ಮುಂದಿಟ್ಟರು. ಇದಕ್ಕೆ ಮುಖ್ಯಮಂತ್ರಿ ಒಪ್ಪುವುದಿಲ್ಲ ಎಂಬುದು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಇದೊಂದು ಹೋರಾಟದ ಕಾರ್ಯತಂತ್ರವಾಗಿತ್ತು. ಈ ಬೇಡಿಕೆ ಈಡೇರಿಸುವ ಬದಲು ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಲು ₹843 ಕೋಟಿ ಅನುದಾನ ನೀಡುವ ಘೋಷಣೆ ಮಾಡಬೇಕಾದ ಇಕ್ಕಟ್ಟಿಗೆ ಸರ್ಕಾರ ಸಿಲುಕಿತು. ಸರ್ಕಾರ ಮಾಡಲೇಬೇಕಾದ ಕೆಲಸವನ್ನು ಅದರ ಮೂಗು ಹಿಡಿದು ಮಾಡಿಸುವ ನೈಜ ವಿರೋಧ ಪಕ್ಷದ ಕರ್ತವ್ಯವನ್ನು ಕಾಂಗ್ರೆಸ್ ಮಾಡಿತು.

ಪೆಟ್ರೋಲ್– ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಹೊಸ ರೂಪದ ಹೋರಾಟ, ಜನಾಕ್ರೋಶದ ಅಭಿವ್ಯಕ್ತ ರೂಪ. ಹಾಗಂತ, ಸಿದ್ದರಾಮಯ್ಯ– ಡಿ.ಕೆ.ಶಿವಕುಮಾರ್‌ ಮಧ್ಯೆ ನಾಯಕತ್ವಕ್ಕಾಗಿ ಪೈಪೋಟಿ ಇಲ್ಲವೆಂದಲ್ಲ. ಭವಿಷ್ಯದ ಸ್ಪರ್ಧೆಯನ್ನು ಬದಿಗಿಟ್ಟ ಇಬ್ಬರೂ ನಾಯಕರು, ಜನರ ಕಷ್ಟಗಳಿಗೆ ಬಾಯಾಗುವತ್ತ, ಹೋರಾಟಕ್ಕೆ ಕಸುವಾಗುವತ್ತ
ಹೆಜ್ಜೆಯನ್ನಿಟ್ಟಿದ್ದಾರೆ. ಶಿವಕುಮಾರ್ ಕೂಡ ತಮ್ಮ ಹಮ್ಮು ಬಿಟ್ಟು ಎಲ್ಲ ನಾಯಕರ ಮನೆಗೂ ಎಡತಾಕುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಪಕ್ಷವಲ್ಲ, ಕಾಯಕರ್ತರ ಪಕ್ಷವೆಂದು ಮರುನಿರೂಪಿಸುವ ಕಾಯಕದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ನ ಈ ಹೋರಾಟದ ಹಿಂದೆ ಅಂತಿಮವಾಗಿ ರಾಜಕೀಯ ಮರುಹುಟ್ಟಿನ ಅಪೇಕ್ಷೆ ಇದ್ದರೂ, ಆಳದಲ್ಲಿ ಜನಪರ ಕಾಳಜಿಯೇ ಕಾಣಿಸುತ್ತಿದೆ. ಆಡಳಿತ ಪಕ್ಷದ ಬಿಕ್ಕಟ್ಟಿನಿಂದಾಗಿ ನಾಡಿನ ಜನ‌, ಅಭಿವೃದ್ಧಿಯ ಮೇಲೆ ಬೀಳುತ್ತಿರುವ ಮರ್ಮಾಘಾತದ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವ ಪ್ರತಿಪಕ್ಷದ ನೈಜ ಜವಾಬ್ದಾರಿಯನ್ನು ಕಾಂಗ್ರೆಸ್ ಮಾಡುತ್ತಿರುವುದು ಸದ್ಯಕ್ಕಂತೂ ಆಶಾದಾಯಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು