ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ರೈತರ ಚುನಾವಣಾ ರಾಜಕೀಯ

ಪಕ್ಷ ರಾಜಕಾರಣ ತಮಗೆ ಹೇಳಿ ಮಾಡಿಸಿದ್ದಲ್ಲ ಎಂಬುದು ರೈತರಿಗೆ ಅರ್ಥವಾಗಿದ್ದಿದ್ದರೆ...
Last Updated 27 ಜನವರಿ 2022, 19:30 IST
ಅಕ್ಷರ ಗಾತ್ರ

ಪಂಚ ರಾಜ್ಯಗಳ ಚುನಾವಣೆಯ ಚರ್ಚೆಗಳಲ್ಲಿ ಕೆಲವು ಕಥನಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ರೈತರು ಚುನಾವಣೆಯ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿಲುವುಗಳು ಸರ್ಕಾರವನ್ನು ಬದಲಾಯಿಸಬಲ್ಲವೇ? ಅಥವಾ ರೈತ ಸಂಘಟನೆಗಳು ಪಕ್ಷವನ್ನು ಕಟ್ಟಿ ಚುನಾವಣಾ ಕಣದಲ್ಲಿ ಭಾಗಿಯಾದರೆ ಅದು ಸಫಲವಾಗಬಲ್ಲದೇ? ರೈತ ಚಳವಳಿಗಳು ರಾಜಕೀಯರಹಿತ ಆಗಿರಬೇಕೇ? ಜಾತಿ ರಾಜಕಾರಣವನ್ನು ವರ್ಗ ರಾಜಕಾರಣವನ್ನಾಗಿ ಬದಲಾಯಿಸಬಹುದೇ ಎಂಬಿತ್ಯಾದಿ. ಈ ಕಥನಗಳು ಹೊಸವೇನಲ್ಲ. 1980ರ ದಶಕದಲ್ಲಿ ಆರಂಭಗೊಂಡ ಇಂತಹ ಕಥನಗಳು ಈಗಲೂ ಚಾಲ್ತಿಯಲ್ಲಿವೆ. ಇವತ್ತಿನ ಸಂದರ್ಭದಲ್ಲಿ ಅದಕ್ಕೆ ಮಹತ್ವ ಬಂದಿರುವುದಕ್ಕೆ ಎರಡು ಕಾರಣಗಳಿವೆ.

ಮೊದಲನೆಯದು, ಪಂಜಾಬ್, ಉತ್ತರಪ್ರದೇಶ ಹಾಗೂ ಹರಿಯಾಣದ ರೈತರು ದೆಹಲಿಯ ಗಡಿಗಳಲ್ಲಿ ನಡೆಸಿದ ಇತ್ತೀಚಿನ ಅಭೂತಪೂರ್ವ ಯಶಸ್ವಿ ರೈತ ಚಳವಳಿ. ಈ ಚಳವಳಿಯು ಸರ್ಕಾರದ ಮೂರು ಚರ್ಚಾಸ್ಪದ ಕೃಷಿ ಕಾಯ್ದೆಗಳನ್ನು ವಾಪಸ್‌ಪಡೆದುಕೊಳ್ಳುವಷ್ಟು ಯಶಸ್ವಿಯಾಯಿತು. ಅದರಕಾವು ಕಡಿಮೆಯಾದರೂ ಅದು ಈಗಲೂ ಬೂದಿ ಮುಚ್ಚಿದ ಕೆಂಡ.

ವಾಸ್ತವವಾಗಿ ಉತ್ತರಪ್ರದೇಶದಲ್ಲಿ ರೈತರನ್ನು ರಾಜಕೀಯ ನೆಲೆಗಟ್ಟಿಗೆ ತಂದವರು ಮಾಜಿ ಪ್ರಧಾನಿ ಮತ್ತು ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ ಚರಣ್ ಸಿಂಗ್. ರೈತರ ಬಗ್ಗೆ ಆಳವಾದ ಜ್ಞಾನವಿದ್ದ ಅವರು ತಮ್ಮ ಅದ್ಭುತ ಕೃತಿಗಳು (ಅಬಾಲಿಶನ್ ಆಫ್ ಜಮೀನ್ದಾರಿ– 1947, ಜಾಯಿಂಟ್ ಫಾರ್ಮಿಂಗ್ ಎಕ್ಸ್‌ರೇಯ್ಡ್‌ –1959, ಇಂಡಿಯಾಸ್ ಪಾವರ್ಟಿ ಆ್ಯಂಡ್ ಇಟ್ಸ್ ಸಲ್ಯೂಶನ್ –1964, ಇಂಡಿಯಾಸ್ ಎಕನಾಮಿಕ್ ಪಾಲಿಸಿ– 1978) ಮತ್ತು ರೈತ ಸಮ್ಮೇಳನಗಳ ಮೂಲಕ ರೈತರನ್ನು ರಾಜಕೀಯಕ್ಕೆ ಪರಿಚಯಿಸಿ
ದರಲ್ಲದೆ ಸಾರ್ವಜನಿಕ ವಲಯದಲ್ಲಿ ಜಾತಿಯನ್ನು ಮೀರಿದ ವರ್ಗವಾಗಿ ನಿರೂಪಿಸಿದರು. ಉತ್ತರಪ್ರದೇಶದಲ್ಲಿ ಜಮೀನ್ದಾರಿ ಪದ್ಧತಿಯನ್ನು ಕೊನೆಗೊಳಿಸಿದ ಕೀರ್ತಿ ಅವರದು.

ದುರಂತವೆಂದರೆ, ಅವರ ರಾಜಕೀಯದ ನೆಲೆಗಟ್ಟುಗಳು ಉತ್ತರಪ್ರದೇಶದ ಪಶ್ಚಿಮ ಭಾಗಕ್ಕೆ, ಅದರಲ್ಲೂ ನೀರಾವರಿ ಮತ್ತು ವಾಣಿಜ್ಯ ಬೆಳೆಗಳ ಪ್ರದೇಶಕ್ಕೆ ಸೀಮಿತವಾದವು. ಚರಣ್‌ ಸಿಂಗ್‍ ಅವರು ಒಮ್ಮೆಕರ್ನಾಟಕದ ಚಳವಳಿಯೊಂದಿಗೆ ಸಂಬಂಧವನ್ನು ಕುದುರಿ
ಸಲು ಯತ್ನಿಸಿದ್ದರು ಮತ್ತು ಅದನ್ನು ‘ಗಂಗಾ- ಕಾವೇರಿ ಸಂಗಮ’ ಎಂದು ಕರೆದಿದ್ದರು. ಆ ಯತ್ನ ಸಫಲವಾಗಲಿಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಅವರು ಸಂಘಟಿಸಿದರೂ ಅಂತಿಮವಾಗಿ ಅದರ ಲಾಭವನ್ನು ಪಡೆದವರು ಮಾರುಕಟ್ಟೆ ಆಧಾರಿತ ‘ಕುಲಕ್’ ಅಥವಾ ಬಲಿತ ರೈತರು. ಕಾಂಗ್ರೆಸ್‍ನಿಂದ ಬೇರ್ಪಡೆಗೊಂಡು ಚರಣ್ ಸಿಂಗ್ ಸ್ಥಾಪಿಸಿದ ಭಾರತೀಯ ಕ್ರಾಂತಿದಳವನ್ನು ‘ಯಶಸ್ವಿ ಶ್ರೀಮಂತರ ಪಕ್ಷ’ ಎಂದು ಕರೆಯಲಾಗುತ್ತಿತ್ತು.

ಈ ಸಂದರ್ಭದಲ್ಲಿ ರೈತರ ಪ್ರತಿಭಟನೆ, ರಾಜಕೀಯ ನಿರ್ಧಾರಗಳನ್ನು ಒಂದು ಚೌಕಟ್ಟಿನೊಳಗೆ ನೋಡಬೇಕು- ವ್ಯವಸ್ಥೆ ಒಂದು ಕಡೆ ಹಸಿರು ಕ್ರಾಂತಿಯ ಮೂಲಕ ಕೃಷಿಯಲ್ಲಿ ಬದಲಾವಣೆಯನ್ನು ತಂದರೂ ಕೃಷಿಯಲ್ಲಿ ಹುಟ್ಟಿಕೊಂಡ ತೀವ್ರತರ ವೈರುಧ್ಯ, ಸಂಘರ್ಷಗಳನ್ನು ಪರಿಹರಿಸಲು ಪ್ರಯತ್ನ ಮಾಡಲಿಲ್ಲ. ಅದಕ್ಕೆ ರೈತರು ಸಾಮಾನ್ಯ ಜೀವಿಗಳಾಗಿ ಕಂಡುಬಂದರೇ ವಿನಾ ರಾಜಕೀಯವಾಗಿ ಶಕ್ತಿಶಾಲಿ ವರ್ಗವಾಗಿ ಅಲ್ಲ. ತಮಗೆ ಸಿಗುವುದು ವ್ಯವಸ್ಥೆಯು ನಿರ್ಮಿಸಿದ ಕೃತಕ ಸಾಲಗಳು ಮತ್ತು ನಕಾರಾತ್ಮಕ ಸಬ್ಸಿಡಿ ಎಂದರೂ ರೈತರು ಒಪ್ಪಿಕೊಳ್ಳಲಿಲ್ಲ. ಕೃಷಿಯಲ್ಲಿ ಬಂಡವಾಳದ ಹೂಡಿಕೆ ಹೆಚ್ಚಾಗುತ್ತಿದೆ ಎಂಬ ಮಿಥ್ಯೆಯನ್ನು ವ್ಯವಸ್ಥೆಯು ಮತ್ತೆ ಮತ್ತೆ ನಿರ್ಮಿಸುತ್ತಾ ಹೋಯಿತು. ಕೃಷಿ ವಾಸ್ತವವಾಗಿ ಸೋತುಹೋದ ಮತ್ತು ಮಾತು ನಿಂತ ಚೌಕಟ್ಟು ಆಯಿತು.

ಚರಣ್ ಸಿಂಗ್ ನಂತರ ರಾಜಕೀಯ ಮತ್ತು ಚಳವಳಿಯ ವಾರಸುದಾರಿಕೆಯನ್ನು ಅಜಿತ್ ಸಿಂಗ್ ಮುಂದುವರಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ.ಇವುಗಳ ನಡುವೆ ಹುಟ್ಟಿದ ಭಾರತೀಯ ಕಿಸಾನ್ ಯೂನಿಯನ್ ಪಕ್ಷೇತರ ಸಂಘಟನೆಯಾಗಿ ಈ ವಾರಸು
ದಾರಿಕೆಯನ್ನು ತನ್ನದಾಗಿಸಿಕೊಂಡಿತು. ಮಹೇಂದ್ರ ಸಿಂಗ್ ಟಿಕಾಯತ್ ಇದರ ವಾರಸುದಾರರಾದರು. ಆದರೆ ಅವರು ಮಾಡಿದ ತಪ್ಪೆಂದರೆ, ರೈತರನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸದಿದ್ದುದು. ಪಕ್ಷೇತರ ನಿಲುವಿನ ನಡುವೆ ಹೊಂದಾಣಿಕೆ ರಾಜಕೀಯವು ರೈತ ಚಳವಳಿಯ ನೆಲೆಗಟ್ಟುಗಳನ್ನು ಅಭದ್ರಗೊಳಿಸಿತು. ರಾಕೇಶ್ ಟಿಕಾಯತ್ ಇದರ ಮುಂದುವರಿದ ಇನ್ನೊಂದು ಭಾಗ.

ದುರಂತವೆಂದರೆ, ಉತ್ತರಪ್ರದೇಶದಲ್ಲಿ ರೈತರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಚುನಾವಣಾ ರಾಜಕಾರಣ
ದಲ್ಲಿ ಹರಿದು ಹಂಚಿಹೋಗಿರುವುದು ದಿಟ. ಈ ಸಲದ ಚುನಾವಣೆಯಲ್ಲಿ ರೈತ ಚಳವಳಿಯು ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದರೂ ರಾಕೇಶ್ ಟಿಕಾಯತ್‍ರ ‘ನಾವು ಯಾವುದೇ ನಿರ್ದಿಷ್ಟ ಪಕ್ಷದ ವಿರೋಧಿಗಳಲ್ಲ, ಆದರೆ ಸರ್ಕಾರದ ನೀತಿಗಳ ವಿರೋಧಿಗಳಷ್ಟೇ’ ಎಂಬ ಮಾತು ಮತ್ತೊಮ್ಮೆ ರೈತರನ್ನು ಗೊಂದಲಕ್ಕೀಡು ಮಾಡುವುದರಲ್ಲಿ ಸಂಶಯವಿಲ್ಲ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲೂ ಈ ರೀತಿಯ ಯತ್ನಗಳು ನಡೆದಿದ್ದವು. ಮಹಾರಾಷ್ಟ್ರದಲ್ಲಿ ರೈತ ಚಳವಳಿಯು ಶರದ್ ಜೋಶಿ ಅವರ ನೇತೃತ್ವದಲ್ಲಿ ಸ್ವತಂತ್ರ ಭಾರತ್ ಪಕ್ಷವನ್ನು ಹುಟ್ಟುಹಾಕಿ ಚುನಾವಣಾ ರಾಜಕೀಯದಲ್ಲಿ ಧುಮುಕಿತ್ತು. ಇದರ ಪೂರ್ವದಲ್ಲಿ ಜನತಾ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೂ ಯಶಸ್ವಿಯಾಗಲಿಲ್ಲ.

ವಾಸ್ತವವಾಗಿ ಕರ್ನಾಟಕದಲ್ಲಿ ಚರಣ್ ಸಿಂಗ್‍ ಅವರ ವ್ಯಕ್ತಿತ್ವಕ್ಕೆ ಸರಿಸಮಾನರಾಗಿದ್ದವರು ಪ್ರೊ. ಎಂ.ಡಿ. ನಂಜುಂಡಸ್ವಾಮಿ. ದುರಂತವೆಂದರೆ, ಅವರೊಬ್ಬ ಸೋತು ಹೋದ ಮುತ್ಸದ್ದಿ ರೈತ ರಾಜಕಾರಣಿ. ಕರ್ನಾಟಕದಲ್ಲಿ ರೈತ ಚಳವಳಿ ಆರಂಭದಲ್ಲಿ ಸರ್ಕಾರಕ್ಕೆ ದೊಡ್ಡ ದುಃಸ್ವಪ್ನವಾಗಿತ್ತು, ರೈತರಿಗೆ ರಾಜಕೀಯದಲ್ಲಿ ಅಸ್ಮಿತೆಯನ್ನು ನೀಡಿತ್ತು ಎಂಬುದು ದಿಟ.

1983ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಸೋತುಹೋಗಲು ರೈತ ಚಳವಳಿ ಒಂದು ಕಾರಣ. ತದನಂತರ ಮತದಾರರ ವೇದಿಕೆಯ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಅದರ ಎಲ್ಲಾ ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡದ್ದು ಇತಿಹಾಸ ಸತ್ಯ. ತದನಂತರ ಚಳವಳಿ ಸ್ವಂತ ಪಕ್ಷವನ್ನು ಕಟ್ಟಿಕೊಂಡಿತ್ತು ಮತ್ತು ಬೇರೆ ಸಂಘಟನೆಗಳೊಂದಿಗೆ ಸೇರಿ ಚುನಾವಣಾ ರಾಜಕೀಯದಲ್ಲಿ ಪ್ರಯೋಗಗಳನ್ನು ಮಾಡಿತ್ತು. ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದಕ್ಷೇತ್ರಗಳಲ್ಲಿ ಸಫಲವಾಗಲಿಲ್ಲ.

ರೈತರ ರಾಜಕಾರಣದಲ್ಲಿ ಹೊಸ ಕಥನಕ್ಕೆ ದಾರಿ ಮಾಡಿದವರು ಪಂಜಾಬಿನ ರೈತರು. ರೈತ ಚಳವಳಿಯ ದೀರ್ಘ ಇತಿಹಾಸವಿರುವ ಪಂಜಾಬಿನ ರೈತರು ತಮ್ಮದೇ ಪಕ್ಷ ಕಟ್ಟಿ ರಾಜಕಾರಣ ಮಾಡಲಿಲ್ಲ. ರೈತರು ಈ ಬಾರಿ ದೆಹಲಿ ಚಳವಳಿಯ ಯಶಸ್ಸಿನ ನಂತರ ನೇರವಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. 22 ಸಂಘಟನೆಗಳು ಸಂಯುಕ್ತ ಸಮಾಜ್ ಮೋರ್ಚಾದಡಿಯಲ್ಲಿ ಎಲ್ಲಾ ಕ್ಷೇತ್ರ
ಗಳಲ್ಲಿ ಸ್ಪರ್ಧಿಸುತ್ತಿವೆ. ಈ ರಾಜಕಾರಣವು ರೈತರ ಜಾತಿ ಅಸ್ಮಿತೆಗಳನ್ನು ವರ್ಗ ಅಸ್ಮಿತೆಗಳನ್ನಾಗಿ ಬದಲಾಯಿಸಿದೆ. ಏಳು ಸಂಘಟನೆಗಳು ತಾತ್ವಿಕ, ಸಂವಿಧಾನಾತ್ಮಕ ಮತ್ತು ಸಂಘಟನೆಯ ಕಾರಣಗಳಿಂದ ಚುನಾವಣಾ ರಾಜಕಾರಣವನ್ನು ತಿರಸ್ಕರಿಸಿವೆ ಮತ್ತು ಈಗಲೂ ನಿರಂತರ ಚಳವಳಿಯ ರಾಜಕಾರಣವನ್ನು ಮುಂದುವರಿಸುತ್ತಿವೆ. ಕೆಲವು ಸಂಘಟನೆಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿವೆ. ಇನ್ನು ಕೆಲವು ಕ್ರಾಂತಿಕಾರಿ ರೈತ ಸಂಘಟನೆಗಳು ಪರ್ಯಾಯಗಳ ಮೇಲೆ ನಂಬಿಕೆ ಇಟ್ಟಿವೆ.

ಈ ರೀತಿಯ ಸೈದ್ಧಾಂತಿಕ ವೈರುಧ್ಯಗಳು, ಭಿನ್ನಾಭಿಪ್ರಾಯಗಳು, ರೈತರು ಮತ್ತು ಕೃಷಿ ಕಾರ್ಮಿಕರ ನಡುವಿನ ವೈರುಧ್ಯಗಳು ರೈತರ ಆಕಾಂಕ್ಷೆಗಳಿಗೆ ಸೋಲುಂಟು ಮಾಡಬಹುದು. ಇತಿಹಾಸವನ್ನು ಅವಲೋಕಿಸಿದರೆ, ರೈತರು ತಾವೇ ಸ್ಥಾಪಿಸಿದ ಪಕ್ಷಗಳೊಂದಿಗೆ ಗುರುತಿಸಿಕೊಂಡದ್ದು ಬಹಳ ಕಡಿಮೆ. ಈ ಎಲ್ಲಾ ಅಂಶಗಳ ಅರ್ಥವೆಂದರೆ, ರೈತರು ಒಂದು ವರ್ಗವಾಗಿ ಬದಲಾಗಬಹುದೇ ವಿನಾ ವರ್ಗಕ್ಕೋಸ್ಕರವಾಗಿ ಪಕ್ಷ ಮತ್ತು ಚುನಾವಣಾ ರಾಜಕಾರಣವನ್ನು ಮಾಡಲಾರರು. ಇದನ್ನು ಪ್ರೊ. ನಂಜುಂಡಸ್ವಾಮಿಯವರಾಗಲೀ ಮಹಾರಾಷ್ಟ್ರದ ಶರದ್ ಜೋಶಿಯವರಾಗಲೀ ಅರ್ಥ ಮಾಡಿಕೊಳ್ಳಲಿಲ್ಲ. ಪಂಜಾಬಿನ ರೈತರೂ ಇದರಿಂದ ಹೊರತಾಗಿಲ್ಲ. ಬಹುಶಃ ಅವರು ಅರ್ಥ ಮಾಡಿಕೊಳ್ಳುತ್ತಿದ್ದರೆ ರೈತರ ನಿರಂತರ ಚಳವಳಿಗಳು ರೈತರಿಗೆ ಹೊಸ ಅಸ್ಮಿತೆ ನೀಡುವುದರೊಂದಿಗೆ ಸರ್ಕಾರವನ್ನು ಅಲ್ಲಾಡಿಸುವಷ್ಟು ಬಲಶಾಲಿಯಾಗಿ ಇರುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT