ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಕಾಂತ ವಡ್ಡು ಲೇಖನ: ಎಡಮಧ್ಯಮ ಮಾರ್ಗಿಗಳು ಮಾತಾಡುವ ಕಾಲ!

ಸರ್ವಜನಾಂಗದ ಶಾಂತಿಯ ತೋಟಕ್ಕೆ ನೀರು-– ಗೊಬ್ಬರ ಹಾಕುವವರಾರು?
Last Updated 19 ಏಪ್ರಿಲ್ 2022, 19:37 IST
ಅಕ್ಷರ ಗಾತ್ರ

ಹಿಜಾಬ್ ವಿವಾದದ ನಂತರ ಕೆಲವು ಹಿಂದೂ ಸಂಘಟನೆಗಳು ಕರ್ನಾಟಕದ ಮುಸಲ್ಮಾನ ಸಮುದಾಯದ ವಿರುದ್ಧ ಸಾರಿದ ಸರಣಿ ಬಹಿಷ್ಕಾರಗಳ ಕಾವು ಆರುವ ಮೊದಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಗಲಭೆಯ ಉರಿ ಧಗಧಗಿಸಿದೆ. ಶಾಂತಿ ಕದಡಲು ಪಣತೊಟ್ಟ ಎರಡೂ ಕಡೆಯ ದುಷ್ಟಶಕ್ತಿಗಳು ತಮ್ಮ ಪೂರ್ವಯೋಜಿತ ಕಾರ್ಯಸೂಚಿ ಜಾರಿಗೆ ನಿತ್ಯ ನೆಪ ಹುಡುಕುವಂತೆ ವರ್ತಿಸುತ್ತಿವೆ. ಹೋರಾಟ, ಪ್ರತಿಭಟನೆ ಮತ್ತು ದುಷ್ಕೃತ್ಯಗಳ ನಡುವಿನ ವ್ಯತ್ಯಾಸ ಅಳಿಸಿರುವ ಈ ಸಂಘರ್ಷವು ಸಮಾಜವನ್ನು ಎಲ್ಲಿಗೆ ಒಯ್ದು ಮುಟ್ಟಿಸುತ್ತದೆ ಎಂಬ ಆತಂಕ ಎಲ್ಲಾ ಆರೋಗ್ಯವಂತ ಮನಸ್ಸುಗಳನ್ನು ಕಲಕುತ್ತಿದೆ.

‘ಇದು ಹೀಗೇಕೆ?’ ಎಂಬ ಪ್ರಶ್ನೆಗೆ ತಾಕಲಾಟದ ಮುಂಚೂಣಿಯಲ್ಲಿರುವವರ ನೇರ ಉತ್ತರ: ‘ಇದು ಹಿಂದೂಗಳ ಕ್ರಿಯೆಯಲ್ಲ, ಪ್ರತಿಕ್ರಿಯೆ ಮಾತ್ರ!’ ಇದೇ ಧಾಟಿಯ ಮಾತುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ನೇತೃತ್ವದ ಸರ್ಕಾರದ, ಪಕ್ಷದ ಅನೇಕರ ಬಾಯಿಯಲ್ಲಿ ಪುನರಾವರ್ತನೆಯಾಗಿವೆ. ಆದರೆ ಇವರ ಈ ವಾದ ಹುಬ್ಬಳ್ಳಿ ಪ್ರಕರಣದಲ್ಲಿ ಮುಗ್ಗರಿಸಿದೆ.

ಅಷ್ಟಕ್ಕೂ ಮುಸಲ್ಮಾನರ ಯಾವ ಕ್ರಿಯೆಗೆ ಸರಣಿ ಬಹಿಷ್ಕಾರ, ಗುಂಪುದಾಳಿ ಪ್ರತಿಕ್ರಿಯೆಯಾಗಿದೆ? ಇತ್ತೀಚೆಗಿನ ಕಾಲಘಟ್ಟವನ್ನು ಪರಿಗಣಿಸಿದರೆ, ಇದು ಆರಂಭವಾಗಿದ್ದು ಹಿಜಾಬ್ ವಿವಾದದಿಂದ. ಶಾಲೆಯ ಸಮವಸ್ತ್ರ ನಿಯಮ, ಧಾರ್ಮಿಕ ಆಚರಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ ಈ ವಿಷಯದಲ್ಲಿ ಹಿಂದುತ್ವದ ವಕ್ತಾರರು ಮಧ್ಯೆ ಪ್ರವೇಶಿಸುವ ಅಗತ್ಯವೇ ಇರಲಿಲ್ಲ. ಆದರೆ ಆ ಸಂದರ್ಭ ಅಂತಿಮವಾಗಿ ಹಿಜಾಬು-ಕೇಸರಿಶಾಲು ಸಂಘರ್ಷವಾಗಿ, ಜೈ ಶ್ರೀರಾಮ್- ಅಲ್ಲಾಹು ಅಕ್ಬರ್ ಘೋಷಣೆಗಳಾಗಿ, ರಾಜಕೀಯ ಪಕ್ಷಗಳ ಬೇಳೆ ಬೇಯುವಿಕೆಗೆ ಕುದಿನೀರಾಗಿ ಪರಿಣಮಿಸಿದ್ದು ಆಕಸ್ಮಿಕ ವಿಸ್ಮಯದಂತೆ ಗೋಚರಿಸಿದರೂ ಒಳಗಿನ ತಳಮಳಕ್ಕೆ ಸಾಲು ಕಾರಣಗಳಿದ್ದವು.

ಉಡುಪಿಯ ಹುಡುಗಿಯರ ಹೇಳಿಕೆ, ವಿವಿಧೆಡೆ ಕಾಲೇಜುಗಳ ಬಹಿಷ್ಕಾರ, ಕೋರ್ಟ್ ಎದುರಿಗಿರಿಸಿದ ಕೋರಿಕೆ, ತೀರ್ಪು ವಿರೋಧಿಸಿದ ಬಂದ್ ಕರೆ ಇತ್ಯಾದಿ ಬೆಳವಣಿಗೆಗಳು ಒಂದು ಬದಿಯ ರಾಜಕೀಯ ಹಿತಾಸಕ್ತಿಗಳಿಗೆ ಆಹಾರವಾದರೆ, ಮಂಡ್ಯದ ಬಾಲೆಯ ‘ಅಲ್ಲಾಹು ಅಕ್ಬರ್’ ಘೋಷಣೆಯಲ್ಲಿ ಮತ್ತೊಂದು ಪಂಗಡ ತನ್ನ ಲಾಭಾಂಶ ಹುಡುಕತೊಡಗಿತು. ಬೀಸಿದ ಗಾಳಿಯಲ್ಲಿ ಮನದಣಿಯೆ ತೂರಿಕೊಂಡು ಮುಂದಿನ ಚುನಾವಣೆಗೆ ಕಾಳು ಸಂಗ್ರಹಿಸಿತು ಅಧಿಕಾರಸ್ಥ ಬಿಜೆಪಿ. ವಿರೋಧಪಕ್ಷ ಕಾಂಗ್ರೆಸ್ಸಿಗೆ ಅರೆ ತಟಸ್ಥ ನಿಲುವಿನಲ್ಲಿ ವಿಲಿವಿಲಿ ಒದ್ದಾಡುವ ಸ್ಥಿತಿ. ಜೆಡಿಎಸ್ ಪಕ್ಷದ್ದು ಎಂದಿನಂತೆ ಜೋಕಾಲಿ ಆಟ. ಅಮಾಯಕ ಬಾಲಕಿಯ ಪ್ರಕರಣ ಅಂತರರಾಷ್ಟ್ರೀಯ ಮಹತ್ವ ಪಡೆದು ಅಲ್‌ಕೈದಾ ಉಗ್ರನ ವಿಡಿಯೊ ಸಂದೇಶಕ್ಕೂ ಕಾರಣವಾಗಿದ್ದು ಮತ್ತೊಂದು ಮಜಲು.

ಸಾಮಾನ್ಯವಾಗಿ ಕೋಮುವಾದಿ ಶಕ್ತಿಗಳಿಗೆ ಝಳಪಿಸುವ ಕತ್ತಿಯಾಗಿ, ರಕ್ಷಿಸುವ ಗುರಾಣಿಯಾಗಿ ಒದಗಿಬರುವುದು ಭಾವೋದ್ವೇಗದ ಸಂಗತಿಗಳು. ಆದರೆ ಇತ್ತೀಚೆಗೆ ಸರಣಿ ವಿವಾದಗಳನ್ನು ಸೃಷ್ಟಿಸುವಾಗ ಈ ಗುಂಪುಗಳು ತರ್ಕಬದ್ಧ ಪ್ರಶ್ನೆಗಳನ್ನು ಎತ್ತಿ ತಮ್ಮ ಹೋರಾಟಕ್ಕೆ ತಾತ್ವಿಕ ಆಯಾಮ ಕಂಡುಕೊಳ್ಳಲು ಯತ್ನಿಸಿದ್ದು ಹೊಸದು.

ಒಂದು ಧರ್ಮದ ಸಂಪ್ರದಾಯವಾದ ಹಲಾಲ್ ಕ್ರಿಯೆಯನ್ನು ಇನ್ನೊಬ್ಬರು ಏಕೆ ಒಪ್ಪಿಕೊಳ್ಳಬೇಕು? ‘ಅಲ್ಲಾ ಹೊರತಾಗಿ ಬೇರೆ ದೇವರಿಲ್ಲ’ ಎಂಬ ಕೂಗನ್ನು ಅನ್ಯ ಧರ್ಮೀಯರು ಪ್ರತಿನಿತ್ಯ ಹೇಗೆ ಸಹಿಸಿಕೊಳ್ಳಬೇಕು? ಮೂರ್ತಿಪೂಜೆಯಲ್ಲಿ ನಂಬಿಕೆಯಿಲ್ಲದವರಿಗೆ ವಿಗ್ರಹ ತಯಾರಿಸಲು, ದೇವಸ್ಥಾನ-ಜಾತ್ರೆಗಳಲ್ಲಿ ಮಾರಾಟ ಮಾಡಲು ನೈತಿಕತೆ ಹೇಗೆ ಬರುತ್ತದೆ? ತಮ್ಮ ಧಾರ್ಮಿಕ ಗುರುಗಳೇ ‘ಹರಾಮ್’ ಎಂದು ಕರೆಯುವ ಕಾರ್ಯಗಳಲ್ಲಿ ತೊಡಗುವುದು ಧರ್ಮಭ್ರಷ್ಟತೆಯಲ್ಲವೇ? ಮೇಲ್ನೋಟಕ್ಕೆ ಎಂತಹ ವಿರೋಧಿಗಳಿಗೂ ಹೌದೆನ್ನಿಸಬಹುದಾದ ಈ ತರ್ಕಸರಣಿ ಎರಡು ಅಲಗಿನ ಖಡ್ಗವಿದ್ದಂತೆ. ಇದರ ಮೊದಲ ಬಲಿ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಹಿಷ್ಣುತೆ. ನಂತರ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ, ಸಾಮುದಾಯಿಕ ಏಳಿಗೆಯ ಸಂಹಾರ.

ಯಾವುದೇ ಧಾರ್ಮಿಕ ಸಮುದಾಯ, ರಾಜಕೀಯ ಸಿದ್ಧಾಂತವು ದೇಶಕಾಲದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದರೆ, ಅಸ್ತಿತ್ವದಲ್ಲಿ ಉಳಿಯಬೇಕಾದರೆ ಬದಲಾವಣೆಗೆ ಒಡ್ಡಿಕೊಳ್ಳುವುದು ಅನಿವಾರ್ಯ. ಕಾಲಕ್ರಮೇಣ ಅರ್ಥ ಕಳೆದುಕೊಂಡು ಅಂಧಾಚರಣೆಯಾಗಿ ಚಾಲ್ತಿಯಲ್ಲಿರುವ ನಂಬಿಕೆಗಳ ಬಗ್ಗೆ ಆಯಾ ಸಮುದಾಯದೊಳಗೆ ಆಂತರಿಕ ವಿಮರ್ಶೆ ಏರ್ಪಡುವುದು ಅಪೇಕ್ಷಣೀಯ. ಇಂತಹ ಅವಲೋಕನಕ್ಕೆ ಒಡ್ಡಿಕೊಳ್ಳದ ಹಟಮಾರಿ ಧೋರಣೆಯೇ ಮುಸ್ಲಿಂ ಮೂಲಭೂತವಾದದ ರೂಪದಲ್ಲಿ ಅವತರಿಸುವುದು. ಇದು ಯಾವುದೇ ಸೆಕ್ಯುಲರ್ ಸಮುದಾಯಕ್ಕೆ ಅಪಾಯಕಾರಿಯಷ್ಟೇ ಅಲ್ಲ, ಜೊತೆಗಾರ ಧಾರ್ಮಿಕ ಸಮುದಾಯಗಳ ಹಾದಿಯನ್ನೂ ತಪ್ಪಿಸಬಲ್ಲದು. ಒಂದು ಧರ್ಮದ ಕಠೋರ ಧಾರ್ಮಿಕ ಅಂಧಾಚರಣೆಗಳು, ಪ್ರತಿಪಾದನೆಗಳು, ಪೈಪೋಟಿಗಳು ಇನ್ನೊಂದು ಧರ್ಮದ ಉದಾರವಾದಿ ಮನಸ್ಸು
ಗಳನ್ನೂ ವಿಚಲಿತಗೊಳಿಸಿ ಪ್ರಚೋದಿಸಬಹುದಾದ ವಿದ್ಯಮಾನವಿದು. ನಶೆ ಯಾವ ಮೂಲಭೂತವಾದದ್ದಾದರೂ ಸಾಮಾಜಿಕ ಶಾಂತಿ, ಸೌಹಾರ್ದಕ್ಕೇ ಏಟು.

ಸೌಹಾರ್ದದ ಸಂವೇದನೆ ಹೊರಡಿಸುವಪದಪುಂಜಗಳೆಲ್ಲಾ ಆದರ್ಶದ ನೆಲೆಯಲ್ಲಿ ಅಗದಿ ಚಂದ ಕಾಣಿಸುತ್ತವೆ. ಆದರೆ ಸಮುದಾಯದೊಳಗೆ ಅನ್ವಯಿಸಲು ಹೊರಟಾಗ ಹೊಮ್ಮುವ ಘಾಟು ನಿವಾರಿಸಿಕೊಳ್ಳುವುದು ಸರಳವಲ್ಲ. ಇಂತಹ ಕಾರ್ಯಕ್ಕೆ ಕೈಹಾಕಿದವರು ಎರಡೂ ಕೋಮುಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಎರಡೂ ಬದಿಯವರು ಪರಸ್ಪರ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿಗೆ ಸೌಹಾರ್ದ ಪ್ರತಿಪಾದಕರೇ ಉತ್ತರದಾಯಿಗಳಾಗಿ ಸಮಯ, ಸಂಯಮ, ವಿವೇಕ ವಿನಿಯೋಗಿಸಬೇಕು.

ಕೋಮು ದ್ವೇಷವನ್ನು ವ್ಯವಸ್ಥಿತವಾಗಿ, ಉದ್ದೇಶ ಪೂರ್ವಕವಾಗಿ ಹರಡುವವರ ಮನಃಪರಿವರ್ತನೆ ಕಾರ್ಯ ವ್ಯರ್ಥ. ಆದರೆ ತಪ್ಪು ತಿಳಿವಳಿಕೆಯಿಂದ, ಮಾಹಿತಿ ಕೊರತೆಯಿಂದ, ಹಾದಿತಪ್ಪಿಸುವವರ ದೆಸೆಯಿಂದ ಅನ್ಯ ಕೋಮಿನವರನ್ನು ಅನುಮಾನಿಸುತ್ತಿರುವ ಬಹುದೊಡ್ಡ ಸಂಖ್ಯೆಯ ಸಾಮಾನ್ಯ ಜನರನ್ನು ಖಂಡಿತವಾಗಿ ತಿದ್ದಲು ಸಾಧ್ಯ; ಅದು ಅಗತ್ಯವಾಗಿ ಆಗಬೇಕಾದ ಕೆಲಸ. ಆದರೆ ಅವರಿಗೆ ತಿಳಿ ಹೇಳುವವರ ಬಗ್ಗೆ ವಿಶ್ವಾಸವಿರಬೇಕು. ಅಂತಹ ವಿಶ್ವಾಸ ಮೂಡಿಸುವ ನಿಷ್ಪಕ್ಷಪಾತ ವರ್ತನೆ, ಧೋರಣೆಯನ್ನು ಪ್ರಗತಿಪರರು ಎಂದು ಗುರುತಿಸಿಕೊಳ್ಳುವವರು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ.

ಆದರೆ ವಿಚಾರವಾದಿಗಳು, ಪ್ರಗತಿಪರರು ಎಂದರೆ ಒಂದು ಕೋಮನ್ನು ಓಲೈಸುವವರು, ಆ ಧರ್ಮದ ಹುಳುಕು-ಊನಗಳ ಕುರಿತು ಮಾತಾಡದವರು, ಕಾಂಗ್ರೆಸ್ ಒಲವುಳ್ಳವರು ಎಂಬ ವ್ಯಾಪಕ ಅಸಮಾಧಾನ ಇದೆ. ತಳಮಟ್ಟದಲ್ಲಿ ಹೆಚ್ಚೇನೂ ಪ್ರಭಾವಶಾಲಿಯಲ್ಲದ ಈ ಗುಂಪು ಅನೇಕ ಬಾರಿ ಉದ್ದೇಶಕ್ಕೆ ತದ್ವಿರುದ್ಧವಾಗಿ ಕೋಮುವಾದಿಗಳ ಧ್ರುವೀಕರಣಕ್ಕೆ ಕಾರಣವಾಗುವುದು ವಿಪರ್ಯಾಸ.

ಸೌಹಾರ್ದದ, ಶಾಂತಿಯ ಪಾಠಗಳು ನಮಗೇ ಏಕೆ? ಎಲ್ಲಾ ಸನ್ನಿವೇಶಗಳಲ್ಲಿ ನಿಷ್ಪಕ್ಷಪಾತವಾಗಿ, ನಿಷ್ಠುರವಾಗಿ ಏಕೆ ಮಾತನಾಡುವುದಿಲ್ಲ? ನಡೆದ ಕೊಲೆಗಳಿಗಿಂತ ಒಡೆದ ಕಲ್ಲಂಗಡಿ ದೊಡ್ಡದೇಕೆ ಆಗಬೇಕು? ಗಲಭೆಕೋರ ಗುಂಪು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸುವುದು ಏನನ್ನು ತೋರಿಸುತ್ತದೆ? ಇಂತಹ ಅನೇಕ ಪ್ರಶ್ನೆಗಳನ್ನು ಹಿಂದುತ್ವವಾದಿಗಳು ಎತ್ತುತ್ತಾರೆ. ಅಸಹಾಯಕರ, ದುರ್ಬಲರ, ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಲ್ಲುವುದು ಯಾವುದೇ ಮಾನವೀಯ ಗುಣದ ಪ್ರಾಥಮಿಕ ಲಕ್ಷಣ. ಹಾಗೆಯೇ ಒಟ್ಟು ಸಮಾಜದ ಸಾಮರಸ್ಯದ ದೃಷ್ಟಿಯಿಂದ ತಪ್ಪು-ಒಪ್ಪನ್ನು ನಿಷ್ಠುರವಾಗಿ ಹೇಳುವ ನಡೆ ಇಲ್ಲದಿದ್ದರೆ ಅಪನಂಬಿಕೆಗೆ ಗುರಿಯಾಗಬೇಕಾಗುತ್ತದೆ. ಅಪನಂಬಿಕೆ ಮಿತಿಮೀರಿದಾಗ ಕೆಮ್ಮಿದ್ದು ಕೂಡ ಕ್ಯಾಕರಿಸಿದಂತೆ ಕೇಳಿಸುತ್ತದೆ.

ಈಗ ಧಾರ್ಮಿಕ ನೆಲೆಯಲ್ಲಿ ಮತ್ತು ಸಿದ್ಧಾಂತದ ಪರಿಧಿಯಲ್ಲಿ ವೈಚಾರಿಕತೆ ಕಳೆದುಕೊಂಡವರ ಆರ್ಭಟ ಜೋರಾಗಿ ಕೇಳುತ್ತಿರಬಹುದು. ವಾಸ್ತವದಲ್ಲಿ ಈ ಎರಡೂ ಪಂಗಡಗಳ ಪ್ರತಿಪಾದಕರು, ಅನುಯಾಯಿಗಳ ಸಂಖ್ಯೆ ಅತ್ಯಂತ ಕಡಿಮೆ. ಆದರೆ ತೀವ್ರ ಪಂಥಾಂಧರಲ್ಲಿ ಕಣ್ಮರೆಯಾಗಿರುವ ವಿವೇಕ, ಸಂಯಮ, ಸಭ್ಯತೆ, ವಾಸ್ತವಿಕತೆ, ಸಮಚಿತ್ತ, ನಿಷ್ಠುರತೆ, ಭವಿಷ್ಯದ ನೋಟ ಹೊಂದಿರುವ ಬಹುದೊಡ್ಡ ‘ಎಡಮಧ್ಯಮ ಮಾರ್ಗಿ’ ಸಮುದಾಯ ನಮ್ಮ ನಡುವೆಯೇ ಇದೆ. ಎಡಬಿಡಂಗಿಗಳು ಎಂಬ ಮೂದಲಿಕೆಗೆ ಗುರಿಯಾಗಿರುವ ಈ ವರ್ಗ ಮಾತನಾಡಿ ಸಮಾಜದಲ್ಲಿ ವಿಶ್ವಾಸ ಮೂಡಿಸುವ ತುರ್ತು ಈಗ ಉದ್ಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT