ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಸರಕು, ತಲೆ ಮೇಲೆ ಸಾಲ: ನೆರೆಯ ದೇಶಗಳಿಗೆ ಚೀನಾದ ಶೂಲ! ಗಿರೀಶ್ ಲಿಂಗಣ್ಣ ಲೇಖನ

ಚೀನಾದ ಕುತಂತ್ರದಿಂದ ಬಳಲುತ್ತಿರುವ ದೇಶಗಳು
Last Updated 8 ಜನವರಿ 2022, 7:53 IST
ಅಕ್ಷರ ಗಾತ್ರ

ಚೀನಾ ಉತ್ಪನ್ನಗಳು ಕಳಪೆ ಗುಣಮಟ್ಟದವು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಹಲವಾರು ದೇಶಗಳು ಗುಣಮಟ್ಟವಿಲ್ಲದ ಉತ್ಪನ್ನಗಳ ಪೂರೈಕೆಯನ್ನು ತಿರಸ್ಕರಿಸಲು ಮತ್ತು ಆಕ್ಷೇಪಣೆಗಳನ್ನು ಎತ್ತಲು ಪ್ರಾರಂಭಿಸಿವೆ.

ಆರಂಭದಲ್ಲಿ ಶ್ರೀಲಂಕಾ ದೇಶವು ಚೀನಾದ ಉತ್ಪನ್ನವನ್ನು ತಿರಸ್ಕರಿಸಿತು, ಈಗ ನೇಪಾಳದ ಸರದಿ. ಅದು ಚೀನಾದಲ್ಲಿ ತಯಾರಿಸಲಾಗಿದ್ದ ಆರು ವಿಮಾನಗಳನ್ನು ಕೆಳಗಿಳಿಸಿದೆ. ಆದರೆ ಕೆಲವು ದೇಶಗಳು ಇನ್ನೂ ಪಾಠ ಕಲಿತಿಲ್ಲ ಅನ್ನಿಸುತ್ತಿದೆ.
ಚೀನಾದಿಂದ ತರಿಸಿದ್ದ ಆರು ವಿಮಾನಗಳು ತನಗೆ ಹೊರೆಯಾಗುತ್ತಿವೆ ಎನ್ನುವ ಕಾರಣಕ್ಕೆ ನೇಪಾಳ ಅವುಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.

ಎರಡು XIAN MA 60 ವಿಮಾನಗಳು ಮತ್ತು ನಾಲ್ಕು ಹಾರ್ಬಿನ್ Y 12 ವಿಮಾನಗಳನ್ನು ಹಾರಾಟದಿಂದ ಮುಕ್ತಗೊಳಿಸಲಾಗಿದೆ. ಹಿಮಾಲಯದ ತಪ್ಪಲಿನ ಈ ದೇಶವು 2014ರಲ್ಲಿ ಈ ವಿಮಾನಗಳನ್ನು ಖರೀದಿಸಿತ್ತು. ಆಗಿನಿಂದಲೂ ಅವು ನಷ್ಟವನ್ನೇ ತಂದೊಡ್ಡುತ್ತಿವೆ. ನೇಪಾಳವು 2018ರಲ್ಲಿ ಏಳು ವಿಮಾನಗಳನ್ನು ಖರೀದಿಸಿತ್ತು. ಅವುಗಳಲ್ಲಿ ಒಂದನ್ನು ಕಳೆದ ವರ್ಷ ಮಾರ್ಚ್ 2021ರಲ್ಲಿ ನಡೆದ ಅಪಘಾತದಲ್ಲಿ ಕಳೆದುಕೊಂಡಿತು. ಇನ್ನೊಂದು ವಿಮಾನವು ರನ್‌ವೇಗಿಂತ 60 ಮೀಟರ್ ಮೊದಲೇ ಕೆಳಗಿಳಿಯಿತು.

ಹಾಗಾದರೆ, ಈ ನಿಟ್ಟಿನಲ್ಲಿ ನೇಪಾಳ ಏರ್‌ಲೈನ್ಸ್ ಏನು ಮಾಡಿದೆ? ಎಂಬ ವಿಚಾರ ಮುಂದಿದೆ. ಮುಂದಿನ ಸೂಚನೆಯ ತನಕ ಈ ವಿಮಾನಗಳ ಹಾರಾಟವನ್ನು ನಡೆಸದಿರಲು ನಿರ್ಧರಿಸಿರುವುದುಒಂದು ಸಂವೇದನಾಶೀಲ ಕ್ರಮ ಎಂದೇ ಪರಿಭಾವಿಸಲಾಗಿದೆ. ನೇಪಾಳದ ವಿಮಾನಯಾನ ಸಂಸ್ಥೆಯು ದೂರುಗಳ ಸುದೀರ್ಘ ಪಟ್ಟಿಯನ್ನೇ ಹೊಂದಿದೆ. ಕಾರ್ಯಾಚರಣೆಯಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳು, ವಿಮಾನದ ಲಾಜಿಸ್ಟಿಕಲ್ ಸಮಸ್ಯೆಗಳು ಮತ್ತು ಬಿಡಿಭಾಗಗಳ ಅಲಭ್ಯತೆ, ನಿರ್ವಹಣೆಗೆ ಭಾರಿ ವೆಚ್ಚ ಮತ್ತು ಈ ವಿಮಾನಗಳ ಹಾರಾಟವನ್ನು ನಿರ್ವಹಿಸಬಲ್ಲ ಪೈಲಟ್‌ಗಳ ಕೊರತೆ,ಇತ್ಯಾದಿ.

ಈ ವಿಮಾನಗಳು ವಿರಳವಾಗಿದ್ದು, ಹಾರಾಟವನ್ನು ನಡೆಸಲು ಮತ್ತು ನಿರ್ವಹಿಸಲು ವಿಭಿನ್ನ ರೀತಿಯ ತರಬೇತಿ ಅಗತ್ಯವಿರುತ್ತದೆ.
ಈ ವಿಮಾನಗಳನ್ನು ಯಾರೂ ಬಳಸುವುದಿಲ್ಲ. ಕಾಠ್ಮಂಡು ಖರೀದಿಸಿದ್ದ ವರ್ಷದಲ್ಲೇ ಬಾಂಗ್ಲಾದೇಶ ಈ ವಿಮಾನಗಳನ್ನು ತಿರಸ್ಕರಿಸಿತು. ಕೆಟ್ಟ ಉತ್ಪನ್ನದ ಬಗ್ಗೆ ನೇಪಾಳವು ತುಂಬ ಬೇಸರ ಪಟ್ಟುಕೊಂಡಿದೆ. ವಿಮಾನಗಳ ನಿರ್ವಹಣೆಯ ವಿಚಾರದಲ್ಲಿ ಸಹಾಯ ಮಾಡುವಂತೆ ಚೀನಾವನ್ನು ಕೋರಿದ್ದರೂ ಈವರೆಗೂ ಯಾವುದೇ ನೆರವನ್ನು ಪಡೆದಿಲ್ಲ ಎಂಬುದು ನೇಪಾಳದ ಅಳಲು.

ಬದಲಿಗೆ ಚೀನಾ ಕೊಟ್ಟಿದ್ದೇನು?

ಈ ವಿಮಾನಗಳನ್ನು ಖರೀದಿಸಲು ಎರವಲು ಪಡೆದ 35.1 ಮಿಲಿಯನ್ ಡಾಲರ್ ಸಾಲವನ್ನು ನೇಪಾಳವು ಮರುಪಾವತಿಸಬೇಕು ಎಂದು ನೋಟಿಸ್ ನೀಡಿದೆ. ಒಪ್ಪಂದದ ಪ್ರಕಾರ, ನೇಪಾಳವು ಈ ಸಾಲವನ್ನು 1.5% ಬಡ್ಡಿದರ, 0.4 % ಸೇವಾ ಶುಲ್ಕ ಮತ್ತು ಪಾಯಿಂಟ್ 0.4% ಆಡಳಿತಾತ್ಮಕ ವೆಚ್ಚಗಳೊಂದಿಗೆ ಮರುಪಾವತಿ ಮಾಡಬೇಕು.

ಇದೇನೂ ತುಂಬ ಹೆಚ್ಚಾಯಿತೆಂದು ಅನ್ನಿಸುವುದಿಲ್ಲ. ಆದರೆ, ಇದು ತನಗೆ ನಷ್ಟಕಾರಕ ಒಪ್ಪಂದವಾಗಿದೆ ಎಂದು ನೇಪಾಳವು ಹೇಳುತ್ತದೆ. ವಾಸ್ತವಿಕವಾಗಿ, ಈ ವಿಮಾನಗಳಿಂದ ನೇಪಾಳ ಯಾವುದೇ ಆದಾಯ ಗಳಿಸಿಲ್ಲ. ಬದಲಿಗೆ ಸಾಕಷ್ಟು ವೆಚ್ಚಗಳನ್ನೇ ತಂದೊಡ್ಡುತ್ತಿದೆ. ಆದ್ದರಿಂದ, ಕಾಠ್ಮಂಡು ಒಂದೋ ಅವುಗಳನ್ನು ಗುತ್ತಿಗೆಗೆ ಕೊಡಬೇಕು ಅಥವಾ ಮಾರಾಟ ಮಾಡಬೇಕು. ಇವೆರಡೂ ಕಷ್ಟಕರವಾದ ಪ್ರಸ್ತಾಪಗಳು. ಚೀನಾದ ವಿಮಾನಗಳಿಗೆ ಖರೀದಿದಾರರೇ ಇಲ್ಲ ಎಂಬುದು ಗಮನಾರ್ಹ.

ನೇಪಾಳದ ಮಾಜಿ ನಾಗರಿಕ ವಿಮಾನಯಾನ ಸಚಿವರು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತ, ಈ ವೈಫಲ್ಯವು ದೇಶಕ್ಕೆ ಒಂದು ಪಾಠವಾಗಬೇಕು. ನಾವು ಏನು ಖರೀದಿಸುತ್ತಿದ್ದೇವೆ? ಎಂಬುದನ್ನು ಸರಿಯಾಗಿ ಪರಿಶೀಲಿಸದೆ ಒಪ್ಪಂದಗಳನ್ನು ಮಾಡಿಕೊಳ್ಳಬಾರದೆಂಬ ಪಾಠ ಇದಾಗಿದೆ ಎಂದು ಹೇಳಿದರು.

ನೇಪಾಳಕ್ಕೆ ಇದು ಒಂದು ಪಾಠ. ನಾವು ಯಾವುದೇ ವಲಯದಲ್ಲಿ ಯಾವುದೇ ರೀತಿಯ ಖರೀದಿಗೆ ಮುಂದಾದರೆ, ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ನಾವು ಆ ವ್ಯವಹಾರದ ಕುರಿತು ಸ್ಪಷ್ಟವಾದ ಯೋಜನೆಯನ್ನು ಹೊಂದಿರಬೇಕು. ಹಾಗಿದ್ದರಷ್ಟೇ, ನಾವು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಖರೀದಿಯ ಸಂದರ್ಭದಲ್ಲಿ ಅದನ್ನು ಪೂರ್ಣವಾಗಿ ಅನುಸರಿಸಿರಲಿಲ್ಲ. ಮತ್ತು ಇದೇ ಕಾರಣಕ್ಕಾಗಿ ಎನ್ಎಸ್ಇ ಈವರೆಗೂ ಆ ನಾಲ್ಕು, ಅಥವಾ ಎಲ್ಲ ಆರು ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ.

ಹೌದು. ಈಗ ಇರುವ ಏಕೈಕ ಆಯ್ಕೆಯೆಂದರೆ ನಾವು ಸಾಲದ ಬಡ್ಡಿಯ ಮೇಲಿನ ಬಡ್ಡಿಯನ್ನು ಪಾವತಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಸಲು ಮೊತ್ತ ಹಾಗೆಯೇ ಇದೆ. ಆದಾಯವಿಲ್ಲ, ನಾವು ಕಾರ್ಯಾಚರಣೆಯಲ್ಲಿ ಇಲ್ಲದಿರುವುದರಿಂದ ಆದಾಯ ಬರುತ್ತಿಲ್ಲ. ಎಲ್ಲ ರೀತಿಯಿಂದ ನೋಡಿದರೂ ನಾವು ನಷ್ಟವನ್ನೇ ಅನುಭವಿಸುತ್ತಿದ್ದೇವೆ ಎಂದು ವಿವರಿಸಿದರು.

ನೇಪಾಳವೇನೋ ತನ್ನ ಪಾಠವನ್ನು ಕಲಿಯುತ್ತಿದೆ. ಆದರೆ ಕಷ್ಟ ಪಡುತ್ತಿದ್ದರೂ ಪಾಕಿಸ್ತಾನವು ಪಾಠ ಕಲಿಯುತ್ತಲೇ ಇಲ್ಲ. ಸುಮಾರು ಐದು ವರ್ಷಗಳ ಹಿಂದೆ LY 80 (ಭೂಮಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ ವ್ಯವಸ್ಥೆಗಳು) ಎಂಬ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಾಕಿಸ್ತಾನವು ಚೀನಾದಿಂದ ಖರೀದಿಸಿತು; ಭಾರತ- ಪಾಕಿಸ್ತಾನದ ಗಡಿಯಲ್ಲಿ ಕನಿಷ್ಠ ಒಂಬತ್ತು ಸ್ಥಳಗಳಲ್ಲಿ ಅವುಗಳನ್ನು ನಿಯೋಜಿಸಲಾಗಿತ್ತು. ಈ ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವು ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿವೆ ಎಂದು ಕಳೆದ ವರ್ಷದ ವರದಿ ತಿಳಿಸಿದೆ!

ಒಂದೆರಡಲ್ಲ, ಎಲ್ಲ ಐದು! ಸರಿಪಡಿಸುವುದಕ್ಕಾಗಿ ಅವುಗಳನ್ನು ನಿಯೋಜಿಸಿದ್ದ ಎಲ್ಲ ಒಂಬತ್ತು ತಾಣಗಳಿಗೆ ಚೀನಾದ ಎಂಜಿನಿಯರ್‌ಗಳು ಭೇಟಿ ನೀಡಬೇಕಾಯಿತು.

ಮುಂದೆ, ಶ್ರೀಲಂಕಾದ ವಿಚಾರ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಇತ್ತೀಚೆಗೆ ಅದು ನಿಷೇಧಿಸಿತು. ಹೀಗಾಗಿ, ಸಾವಯವ ಗೊಬ್ಬರಗಳನ್ನು ಪೂರೈಸುವಂತೆ ಅದು ಚೀನಾವನ್ನು ಕೇಳಿತು. ಚೀನಾ 20,000 ಮೆಟ್ರಿಕ್ ಟನ್ ಸರಕನ್ನು ಕಳುಹಿಸಿತು. ಆ ಸರಕು ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡಿದ್ದಾಗಿತ್ತು. ಈ ಸಂಬಂಧ ಕೊಲಂಬೊ ಬೀಜಿಂಗ್‌ಗೆ ದೂರು ನೀಡಿದ್ದು ಮಾತ್ರವಲ್ಲದೆ, ಚೀನಾದ ಉನ್ನತ ಪೂರೈಕೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿದೆ.

ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಈ ಮೂರೂ ದೇಶಗಳು ಸಾಮಾನ್ಯವಾಗಿ ಹೊಂದಿರುವ ಅಂಶ ಯಾವುದು? ಚೀನಾದಿಂದ ಪಡೆದಿರುವ ಸಾಲ ಮತ್ತು ಕಳಪೆ ದರ್ಜೆಯ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಈ ಎಲ್ಲ ದೇಶಗಳೂ ಬಳಲುತ್ತಿವೆ.

–ಲೇಖಕರು

ಗಿರೀಶ್ ಲಿಂಗಣ್ಣ
ವ್ಯವಸ್ಥಾಪಕ ನಿರ್ದೇಶಕರು
ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ
(ಇಂಡೋ -ಜರ್ಮನ್ ರಕ್ಷಣಾ ಸಾಮಗ್ರಿ ಪೂರೈಕೆ ಸಂಸ್ಥೆ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT