ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪಶ್ಚಿಮದ ವಿರುದ್ಧ ಸೈದ್ಧಾಂತಿಕ ಯುದ್ಧ

ಕೊರೊನಾ ಸಾಂಕ್ರಾಮಿಕವು ಚೀನೀಯರ ಆಲೋಚನಾ ಕ್ರಮವನ್ನು ಬದಲಿಸಿತೇ?
Last Updated 28 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೀಜಿಂಗ್‌ನ ಕಲಾವಿದರೊಬ್ಬರು 2098ರಲ್ಲಿ ಜಗತ್ತು ಹೇಗಿರುತ್ತದೆ ಎಂಬುದನ್ನು ಚಿತ್ರಿಸಿದ್ದಾರೆ. ಆ ಹೊತ್ತಿನಲ್ಲಿ ಚೀನಾ ಹೈಟೆಕ್‌ ಆಗಿಯೂ ಸೂಪರ್‌ಪವರ್‌ ರಾಷ್ಟ್ರವಾಗಿಯೂ ಬದಲಾಗಿರುತ್ತದೆ. ಅಮೆರಿಕವು ಕುಗ್ಗಿಹೋಗಿರುತ್ತದೆ. ಅಮೆರಿಕನ್ನರು ಕಮ್ಯುನಿಸಂ ಅನ್ನು ಒಪ್ಪಿಕೊಂಡಿರುತ್ತಾರೆ, ಅಮೆರಿಕದ ಮ್ಯಾನ್‌ಹಟನ್‌ ಪ್ರದೇಶವು ‘ಪೀಪಲ್ಸ್ ಯೂನಿಯನ್‌ ಆಫ್ ಅಮೆರಿಕ’ ಎಂಬ ಹೆಸರಿರುವ ಕಮ್ಯುನಿಸ್ಟ್ ಧ್ವಜಗಳನ್ನು ಹೊದ್ದುಕೊಂಡು, ಪ್ರವಾಸಿ ತಾಣವಾಗಿರುತ್ತದೆ.

ವಿಜಯಭಾವವನ್ನು ಉದ್ದೀಪಿಸುವ, ಭವಿಷ್ಯ ಹೀಗಿರುತ್ತದೆ ಎಂದು ಹೇಳುವ ಈ ಚಿತ್ರಣವು ಚೀನೀಯರ ಮನಸ್ಸನ್ನು ಆವರಿಸಿದೆ. ಫ್ಯಾನ್ ವೆನ್ನಾನ್ ಹೆಸರಿನ ಕಲಾವಿದ ಬಿಡಿಸಿದ ಈ ಡಿಜಿಟಲ್ ಚಿತ್ರವು ಈಚಿನ ತಿಂಗಳುಗಳಲ್ಲಿ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಚೀನಾದ ಸರ್ವಾಧಿಕಾರಿ ವ್ಯವಸ್ಥೆಯು ಪಾಶ್ಚಿಮಾತ್ಯ ಜಗತ್ತಿನ ಪ್ರಜಾತಂತ್ರಕ್ಕಿಂತ ಪೂರ್ತಿಯಾಗಿ ಭಿನ್ನವಾಗಿಲ್ಲ; ಬದಲಿಗೆ, ಅದಕ್ಕಿಂತ ಹೆಚ್ಚಿನದೇ ನನ್ನೋ ಹೊಂದಿದೆ ಎಂದು ಕಮ್ಯುನಿಸಂ ಬೆಂಬಲಿಗರು ಹೇಳುತ್ತಿದ್ದಾರೆ. ಈ ಸಂಕಥನ ಬಹಳ ದೊಡ್ಡದಿದೆ. ಆದರೆ, ಸಾಂಕ್ರಾಮಿಕ ತಡೆಯುವ ವಿಚಾರದಲ್ಲಿ ಚೀನಾ ಕಂಡುಕೊಂಡ ಯಶಸ್ಸು ಈ ಸಂಕಥನಕ್ಕೆ ತೀವ್ರತೆ ತಂದು ಕೊಟ್ಟಿದೆ.

‘ದಶಕಗಳಿಂದ ಚಿತ್ರಿಸಿರುವಂತೆ ಅಮೆರಿಕವು ಸ್ವರ್ಗ ಸಮಾನ ದೇಶವೇನೂ ಅಲ್ಲ’ ಎಂದು 20ರ ಹರೆಯದ ಫ್ಯಾನ್ ಹೇಳುತ್ತಾರೆ. ಚೀನಾ ದೇಶವು ತನ್ನ ಪಾಶ್ಚಿಮಾತ್ಯ ಎದುರಾಳಿ ದೇಶಗಳಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದುವ ಹಾದಿಯಲ್ಲಿದೆ ಎಂಬ ವಾದವನ್ನು ಚೀನಾದ ಕಮ್ಯುನಿಸ್ಟ್ ಪಕ್ಷವು ಹರಿಯಬಿಟ್ಟಿದೆ. ಪಾಶ್ಚಿಮಾತ್ಯ ಪ್ರಜಾತಂತ್ರ ವ್ಯವಸ್ಥೆ ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಚೀನಾವು ಕೊರೊನಾ ವೈರಾಣುವನ್ನು ಹೊಸಕಿಹಾಕಿತು ಎಂಬ ಸಂದೇಶವನ್ನೂ ಈ ಸಂಕಥನ ಪಸರಿಸುತ್ತಿದೆ. ಸುರಕ್ಷತೆಯ ವಿಚಾರದಲ್ಲಿ ಪ್ರಶ್ನೆಗಳು ಇದ್ದರೂ ಚೀನಾ ತನ್ನ ಹತ್ತು ಲಕ್ಷಕ್ಕೂ ಹೆಚ್ಚಿನ ಪ್ರಜೆಗಳಿಗೆ ತನ್ನಲ್ಲೇ ಲಸಿಕೆ ಸಿದ್ಧಪಡಿಸಿದೆ. ಸಾಂಕ್ರಾಮಿಕದ ಪರಿಣಾಮವಾಗಿ ಅರ್ಥವ್ಯವಸ್ಥೆ ಬಹಳ ದೊಡ್ಡ ಏಟು ತಿನ್ನುತ್ತದೆ ಎಂಬ ಕಳವಳ ವ್ಯಕ್ತವಾಗಿತ್ತಾದರೂ, ಚೀನಾದ ಅರ್ಥವ್ಯವಸ್ಥೆ ಚೇತರಿಕೆ ಕಂಡು ಕೊಂಡಿದೆ.

‘ಈ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಜಯ ಗಳಿಸುವವರು, ಸೋಲುವವರು ಎಂಬ ಎರಡು ಗುಂಪುಗಳಿರುತ್ತವೆ. ನಾವು ವಿಜಯ ಸಾಧಿಸಿದವರು. ಅಮೆರಿಕನ್ನರು ಇನ್ನೂ ಸಮಸ್ಯೆಯಲ್ಲೇ ಇದ್ದಾರೆ. ಬಹುಶಃ ಅವರು ಸೋಲುಣ್ಣಬಹುದು’ ಎಂದು ಚೀನಾದ ನಿವೃತ್ತ ಕರ್ನಲ್ ವ್ಯಾಂಗ್‌ ಷಿಂಗ್‌ಸುಯಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಈಗ ಬೀಜಿಂಗ್‌ನ ವಿಶ್ವವಿದ್ಯಾಲಯವೊಂದರಲ್ಲಿ ಪಾಠ ಮಾಡುತ್ತಿದ್ದಾರೆ. ಷಿ ಜಿನ್‌ಪಿಂಗ್‌ ಅವರ ಗಟ್ಟಿ ನಾಯಕತ್ವದ ಕಾರಣದಿಂದಾಗಿ ಚೀನಾಕ್ಕೆ ಯಶಸ್ಸು ಸಿಕ್ಕಿದೆ ಎಂದು ಅಲ್ಲಿನ ಪತ್ರಿಕೆಗಳು, ಟಿ.ವಿ. ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಹೇಳುತ್ತಿವೆ.

ಸರ್ಕಾರಿ ಸ್ವಾಮ್ಯದ ‘ಚೀನಾ ಶಿಕ್ಷಣ ಸುದ್ದಿ’ಯಲ್ಲಿ ಈಚೆಗೆ, ‘ಪಾಶ್ಚಿಮಾತ್ಯ ವ್ಯವಸ್ಥೆಗಳ ಬಗ್ಗೆ ಹೊಂದಿರುವ ಕುರುಡು ನಂಬಿಕೆಯಿಂದ ಹೊರಬರಲು ಇದು ಸಕಾಲ’ ಎಂದು ಹೇಳಲಾಗಿದೆ. ಚೀನಾ ಈಗ ತೋರುತ್ತಿರುವ ದರ್ಪದ ವರ್ತನೆಯು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡನ್ ಅವರಿಗೆ ತಲೆಬಿಸಿ ತರಬಹುದು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಚೀನಾಕ್ಕೆ ಅಮೆರಿಕದ ಮೇಲಿರುವ ಅನುಮಾನ ಕಡಿಮೆ ಆಗಿಲ್ಲ ಎಂದು ಉದ್ಯಮಿ ಲಿಯು ಜಿಯಾಂಕ್ಯು ಹೇಳುತ್ತಾರೆ. ಈ ಸಾಂಕ್ರಾಮಿಕವು ತನ್ನ ಆಲೋಚನಾ ಕ್ರಮವನ್ನು ಬದಲಿಸಿತು ಎಂದು 40 ಹರೆಯದ ಲಿಯು ಹೇಳುತ್ತಾರೆ. ‘ಪಾಶ್ಚಾತ್ಯ ವ್ಯವಸ್ಥೆಗಳು ನನ್ನ ನಿರೀಕ್ಷೆಗಿಂತ ಬಹಳ ಭಿನ್ನ ವಾಗಿ ಇದನ್ನು ನಿಭಾಯಿಸಿದವು. ಅಮೆರಿಕದ ವ್ಯವಸ್ಥೆಯು ನಮಗಿಂತ ಚೆನ್ನಾಗಿ ಇಲ್ಲ ಎಂಬುದು ಸಾಬೀತಾಗಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

2008ರ ಬೀಜಿಂಗ್‌ ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲಿ ಚೀನಾದಲ್ಲಿ ‘ರಾಷ್ಟ್ರ ಪ್ರಜ್ಞೆ’ಯೊಂದು ಜಾಗೃತವಾಗಿತ್ತು. 1999ರಲ್ಲಿ ಯುಗೋಸ್ಲಾವಿಯಾದಲ್ಲಿನ ಚೀನಾದ ರಾಯಭಾರ ಕಚೇರಿಯ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದಾಗಲೂ ಇದೇ ರೀತಿ ಆಗಿತ್ತು. ಪಶ್ಚಿಮದ ಶಕ್ತಿಶಾಲಿ ದೇಶಗಳು ಕುಸಿಯುತ್ತಿವೆ, ಈ ಕುಸಿತಕ್ಕೆ ತಡೆಯಿಲ್ಲ, ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಯು ಚೀನಾದ ಏಳ್ಗೆಯನ್ನು ಸಾಬೀತು ಮಾಡಿದೆ ಎಂಬ ಭಾವನೆ ಅಲ್ಲಿ ತೀವ್ರವಾಗಿದೆ.

‘ಚೀನೀಯರ ಪೈಕಿ ತೀರಾ ಸಾಮಾನ್ಯರು ಈ ಹಿಂದೆ ಅಮೆರಿಕದ ಬಗ್ಗೆ ಆದರಣೀಯ ಭಾವನೆ ಹೊಂದಿದ್ದರು. ಆದರೆ ಅವರಿಗೆ ಈಗ ಚೀನಾದ ವ್ಯವಸ್ಥೆಯಲ್ಲಿನ ಪ್ರಯೋಜನಗಳು ಸ್ಪಷ್ಟ ವಾಗಿವೆ’ ಎಂದು ಬೀಜಿಂಗ್‌ನ ರೆನ್‌ಮಿನ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವಿಚಾರಗಳ ಪ್ರಾಧ್ಯಾಪಕ ಜಿನ್ ಕ್ಯಾನ್‌ರಾಂಗ್‌ ಹೇಳಿದರು.

ಚೀನಾಕ್ಕೆ ಕದನ ಬೇಕಿಲ್ಲ. ಆದರೆ, ಟೀಕೆಗಳನ್ನು ಎದುರಿಸಿ ನಿಲ್ಲುವ ಚೀನಾದ ಶಕ್ತಿಯನ್ನು ಇತರ ದೇಶಗಳ ಸರ್ಕಾರಗಳು ಉಪೇಕ್ಷಿಸುವಂತೆ ಇಲ್ಲ ಎಂದು ಚೀನಾದ ಸಚಿವ ಲಿ ಯುಚೆಂಗ್‌ ಈಚೆಗೆ ಹೇಳಿದ್ದಾರೆ. ಚೀನಾದಲ್ಲಿ ಅಭಿಪ್ರಾಯ ರೂಪಿಸುವ ಸ್ಥಾನಗಳಲ್ಲಿ ಇರುವವರು ಇತಿಹಾಸವನ್ನೂ ಕೆದಕಿ, ಈಗಿನ ಸ್ಥಿತಿಗೆ ಸೂಕ್ತವಾದ ವಿವರಣೆ ಅಲ್ಲಿ ಸಿಗುತ್ತದೆಯೇ ಎಂಬುದನ್ನು ಪರಿಶೀಲಿಸಿ ದ್ದಾರೆ. ಹಿಂದಿನ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಕುಸಿದಂತೆ ಈಗ ಅಮೆರಿಕದ ಸಾಮ್ರಾಜ್ಯ ಕುಸಿಯುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು, ಅಮೆರಿಕ ವನ್ನು ಚೀನಾದ ಮಿಂಗ್ ಪ್ರಭುತ್ವದ ಜೊತೆ ಹೋಲಿಸುತ್ತಿದ್ದಾರೆ. ಮಿಂಗ್ ಪ್ರಭುತ್ವವು ಭ್ರಷ್ಟಾಚಾರ, ದಾಳಿಯಿಂದಾಗಿ ಕುಸಿದುಬಿತ್ತು. ಆನ್‌ಲೈನ್‌ ಮೂಲಕ ಹರಿಬಿಟ್ಟಿರುವ ಈ ವಾದದಲ್ಲಿ ಹೇಳಿರುವುದು, ಚೀನಾವು ಮಿಂಗ್‌ ಪ್ರಭುತ್ವವನ್ನು ಹೊಸಕಿಹಾಕಿದ ಮಂಚು ಸೈನಿಕರಂತೆ ವರ್ತಿಸಬೇಕು ಎಂದು. ಆಧುನಿಕ ಸಂದರ್ಭದಲ್ಲಿ ಚೀನಾ ಪ್ರಭುತ್ವವು ಮಂಚು ಸೈನಿಕರಂತೆ ವರ್ತಿಸಬೇಕು, ಚೀನಾವು ತನ್ನ ಸುತ್ತಲಿನ ಸಮುದ್ರ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಬೇಕು ಎಂದು ಅವರು ಹೇಳುತ್ತಿದ್ದಾರೆ.

ಕ್ರಿಸ್‌ ಬಕ್ಲಿ

ಇತಿಹಾಸದ ಘಟನೆಗಳ ಜೊತೆ ಇಂದಿನ ವಿದ್ಯಮಾನ ಗಳನ್ನು ಹೋಲಿಸಿಕೊಳ್ಳುವ ಪ್ರಕ್ರಿಯೆಯು ಚೀನಾದಲ್ಲಿ ರುವ ಆತಂಕಗಳನ್ನು ಪ್ರತಿನಿಧಿಸುತ್ತದೆ ಎಂದು ಜೆರಿಮಿ ಆರ್. ಬಾರ್ಮ್‌ ಹೇಳುತ್ತಾರೆ. ಅವರು ಚೀನಾ ಕುರಿತು ಬಹಳಷ್ಟು ಅಧ್ಯಯನ ಮಾಡಿದವರು, ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ‘ಚೀನಾ ದೇಶವು ಕಮ್ಯುನಿಸ್ಟ್‌ ಪಕ್ಷದ ಆಡಳಿತದಲ್ಲಿ ನೈತಿಕವಾಗಿ ಇತರ ದೇಶಗಳಿಗಿಂತ ಮೇಲ್ಮಟ್ಟ ದಲ್ಲಿ ಇದೆ. ಏಕೆಂದರೆ, ಅಮೆರಿಕದಲ್ಲಿ ಇರುವ ಯಾವ ಲೋಪಗಳೂ ನಮ್ಮಲ್ಲಿ ಇಲ್ಲ’ ಎಂಬುದು ಈ ವಾದಗಳ ಹಿಂದೆ ಇರುವ ನೆಲೆಗಟ್ಟು ಎಂದು ಅವರು ವಿಶ್ಲೇಷಿಸಿದರು.

ಅಮೆರಿಕ ಕುಸಿಯುತ್ತಿದೆ ಎಂಬ ಈಚಿನ ವಾದಗಳ ಬಗ್ಗೆ ಚೀನಾದ ನಾಯಕ ಷಿ ಅವರು ಯಾವ ಮಾತನ್ನೂ ಆಡಿಲ್ಲ. ಆದರೆ, ಚೀನಾ ಮತ್ತು ಅಮೆರಿಕ ಸೈದ್ಧಾಂತಿಕ ಯುದ್ಧವೊಂದರಲ್ಲಿ ತೊಡಗಿವೆ ಎಂದು ಅವರು ನಂಬಿದ್ದಾರೆ. ಚೀನಾದ ಶಾಲೆಗಳು, ಪಠ್ಯಕ್ರಮಗಳು, ವೆಬ್‌ಸೈಟ್‌ಗಳು ಚೀನಾದ ಯುವಕರನ್ನು ಪಾಶ್ಚಿಮಾತ್ಯ ಮೌಲ್ಯಗಳಿಗೆ ತೆರೆದುಕೊಳ್ಳದಂತೆ ತಡೆಯಬೇಕು ಎಂದು ಷಿ ಅವರು 2012ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒತ್ತಾಯಿಸುತ್ತಿದ್ದಾರೆ. ಪಾಶ್ಚಿಮಾತ್ಯ ಮೌಲ್ಯಗಳಿಗೆ ಅವರು ತೆರೆದುಕೊಂಡರೆ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಧಕ್ಕೆ ಆಗಬಹುದು, ದೇಶದ ‘ಸಾಂಸ್ಕೃತಿಕ ಆತ್ಮವಿಶ್ವಾಸ’ಕ್ಕೆ ಏಟು ಬೀಳಬಹುದು ಎಂಬುದು ಅವರಲ್ಲಿನ ಆತಂಕ.

ಚೀನಾದ ಆಕ್ರೋಶಕ್ಕೆ ಗುರಿಯಾಗಿರುವ ದೇಶ ಅಮೆರಿಕವೊಂದೇ ಅಲ್ಲ. ಚೀನಾವನ್ನು ಟೀಕಿಸಿದ್ದಕ್ಕಾಗಿ, ಚೀನಾ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವ ಯತ್ನ ಗಳನ್ನು ನಡೆಸದಂತೆ ಕಾನೂನು ರೂಪಿಸಿದ್ದಕ್ಕಾಗಿ, ಕೊರೊನಾ ವೈರಾಣುವಿನ ಮೂಲ ಯಾವುದು ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿ ಆಸ್ಟ್ರೇಲಿಯಾ ಕೂಡ ಚೀನಾದ ವಿರೋಧ ಕಟ್ಟಿಕೊಂಡಿದೆ.

-ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT