ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಸೇತು | ಸೌಹಾರ್ದವೆಂಬುದು ಬರಿ ಪದವಲ್ಲ!

Last Updated 16 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕಲ್ಲಂಗಡಿ ನೆಲಕ್ಕ ಎಸೆದ್ರಲ್ಲ... ಆಗ ಅದೇತಾನೆ ತೆಲಿ ಒಡದು ರಕ್ತ ಸುರಿದ್ಹಂಗ, ರಕ್ತದ ಕಣ ಸಿಡಿದ್ಹಂಗ ಹಣ್ಣಿನ ಚೂರು ಬಿದ್ದಿದ್ವು. ನನಗ ನಬೀಸಾಬರ ಕಣ್ಣಾಗ ಅದೆಂಥ ಅಸಹಾಯಕತನ ಕಂಡಿತ್ತಂದ್ರ... ನಿನಗೂ ಆಣೆ ರಂಗಾ, ನನಗೂ ಆಣೆ ಅಂತ ಕೇಳಿದ್ಹಂಗ.

ನಾವು ಸಣ್ಣೋರಿದ್ದಾಗ ನಮ್ಮನಿಗೆ ಒಬ್ರು ಸೇಬು ಮಾರಾಕ ಬರ್ತಿದ್ರು. ಅವರ ಹೆಸರು ಏನಂತ ಗೊತ್ತಿಲ್ಲ. ನಾವೆಲ್ಲ ಅವರಿಗೆ ಕರೀತಿದ್ದುದ್ದೇ ಚಾಚಾ ಅಂತ. ಅವರು ಬಂದ ಕೂಡಲೇ ಮುನ್ನಿ ಕೊ ಕೌನ್‌ಸಾ ಸೇಬ್‌ ದೂಂ (ಮುನ್ನಿಗೆ ಯಾವ ಸೇಬು ಕೊಡಲಿ) ಅಂತ ಕೇಳೋರು.

ಅಗ್ದಿ ಕಾಶ್ಮೀರಿಯ ಸಣ್ಣ ಸೇಬಿನಿಂದ ಹಿಡಿದು, ಕೆಂಬಣ್ಣದ ದೊಡ್ಡ ಸೇಬಿನವರೆಗೂ ಹಲವಾರು ಬಗೆಯ ಸೇಬು ತರಿಸೋರು ಅವರು. ತಳ್ಳುಗಾಡಿಯೊಳಗ ಕಟ್ಟಗಿ ಪೆಟ್ಗಿಯೊಳಗ ಭತ್ತದ ಹುಲ್ಲಿನಾಗ ಈ ಸೇಬು ಭದ್ರ ಇರ್ತಿದ್ವು. ಒಂದು ಸಣ್ಣ ಚಾಕು ಜೊತಿಗೆ ಇರ್ತಿತ್ತು. ಸಣ್ಣ ಬಕೀಟಿನಾಗ ನೀರು, ಒಂದು ಕೆಂಬಣ್ಣದ ಅಂಗವಸ್ತ್ರ ಸದಾ ಅವರ ಜೊತಿಗೆ ಇರ್ತಿದ್ವು. ಹುಡುಗರಿಗೆ ನೋಡಿದ ಕೂಡಲೇ ಒಂದು ಸೇಬು ಆ ನೀರಾಗ ಅದ್ದಿ, ಅಂಗವಸ್ತ್ರದಿಂದ ಸ್ವಚ್ಛ ವರಸಿ, ಆ ಚಾಕುದಿಂದ ಹೆಚ್ಚಿ ಕೊಟ್ರ ನಮಗ ಅದೇನೋ ಖುಷಿ ಆಗ್ತಿತ್ತು.

ನಮ್ಮೊಳಗೆ ಸಣ್ಣದೊಂದು ಪೈಪೋಟಿನೂ ಇರ್ತಿತ್ತು. ಚಾಚಾ... ಉಸೆ ಬಡಾ ಪೀಸ್‌ ಕ್ಯೂಂ ದಿಯಾ? ಮುಝೆ ತೊ ಬಿಲ್ಕುಲ್‌ ಛೋಟಾ ದಿಯಾ ಹೈ ಅಂತ. ಯಾರಿಗೆ ಸಣ್ಣ ಪಾಲು ಸಿಗ್ತಿತ್ತೋ ಅವರಿಗೆ, ಎಲ್ಲಾರಿಗೂ ಕೊಟ್ಮೇಲೆ ಉಳಿದ ಹಣ್ಣು ಕೊಡ್ತಿದ್ರು. ನಮ್ಮ ಕೂಡ ನಕ್ಕೊಂತ ಇರ್ತಿದ್ದ ಚಾಚಾ, ಯಾವಾಗಲೂ ಮೂರು ಪ್ರಶ್ನೆ ಕೇಳೋರು.

ಖೂನ್‌ ಬನಾನೆವಾಲಾ ಸೇಬ್‌ ದೂಂ? ಹಡ್ಡಿ ಬನಾನೆವಾಲಾ? ಜೋ ಸಚ್‌ ಬೋಲೆಗಾ ವೋ ಬಲವಾನ್‌ ಬನೇಗಾ... ಕೌನ್‌ ಹೈ ವೊ... ಅನ್ನೂತ್ಲೆ ನಾವು ಕೈ ಎತ್ತತಿದ್ವಿ. ಒಂದ್ಸಲೆ ನಾನು.. ಯಾವಾಗೂ ನನಗ ಚಿಯಾ ಅಂತ ಕರೀತಿದ್ರು. ಇಲ್ಲಾ ಗುಡಿಯಾ ಅಂತಿದ್ರು. ಒಂದಿನ ಚಾಚಾ ಮುಝೆ ನಾ ಆಪ್‌ ಗೋಷ್‌ ಬನ್‌ನೆವಾಲಾ ಸೇಬ್‌ ದೊ ಅಂತ ಕೇಳಿದ್ದೆ.

ಅದಕ್ಕ ಅವರು ಜೋರೆ ನಕ್ಕು ಒಂದು ಹಣ್ಣು ಕೊಟ್ಟಿದ್ರು. ಆಲುಭುಕಾರಾ ಮಾರಾಕ ಬರ್ತಿದ್ರು. ಹುಳಿಮಧುರ ಇರುವ ಆ ಹಣ್ಣು ನನಗ ಸೇರತಿರಲಿಲ್ಲ. ಆಲೂ ಕೊ ಬುಖಾರ್‌ ಆಕೆ ಖಟ್ಟಾ ಹೋಗಯಾ ಅಂತಿದ್ದೆ (ಆಲುಗಡ್ಡೆಗೆ ಜ್ವರ ಬಂದು ಹುಳಿ ಆಯ್ತಾ ಅಂತ ಕೇಳ್ತಿದ್ದೆ). ಅರೆ... ಹಂಗಲ್ಲ ಮುನ್ನಿ, ಸವಿಯ ಜೊತಿಗೆ ಹುಳಿನೂ ತಿಂದ್ರ ಸಿಹಿಯ ಸವಿ ಗೊತ್ತಾಗೂದು ಅಂತ್ಹೇಳೋರು.

ಕುಂಕುಮ ಮಾರುವ ಅಂಗಡಿಯೂ ಮುಸ್ಲಿಂ ಬಾಂಧವರಿಗೇ ಸೇರಿತ್ತು. ಅವರ ಹೆಸರೂ ಗೊತ್ತಿಲ್ಲ ನನಗ. ನಾವೆಲ್ಲ ಅವರಿಗೆ ಮಾಮು ಅಂತಿದ್ವಿ (ಅರಿಷಿಣ ಕುಂಕುಮ ತವರಿನ ಭಾಗ್ಯ ಹಂಗಾಗಿ ಅಲ್ಲಿರೋರೆಲ್ಲ ಸೋದರ ಮಾವಂದಿರೇ ಆಗಿರ್ತಿದ್ರು). ಯಾವಾಗಲೂ ಅಮ್ಮ ಹೋದಾಗ ಅವರ ಜೊತಿಗೆ ಹೋಗ್ತಿದ್ದೆ. ನನಗರೇ ಬಣ್ಣಬಣ್ಣದ ಆ ಗುಡ್ಡೆ ನೋಡಿ ಖುಷಿ ಆಗ್ತಿತ್ತು. ಆ ಹಸಿರು, ನೀಲಿ, ಕಿತ್ತಲೆ ಬಣ್ಣದ್ದೆಲ್ಲ ಯಾಕ ಹಣೀಗೆ ಇಟ್ಕೊಳ್ಳೂದಿಲ್ಲ ಅಂತ ಪ್ರಶ್ನೆ. ಇಲ್ಲವಾ ಅವೆಲ್ಲ ಬರೇ ಬಣ್ಣಗಳು. ಹಣಿಗೆ ಕುಂಕುಮಾನ ಇಡಬೇಕು. ಅರಿಶಿಣದಿಂದಲೇ ಮಾಡಿದ ಕುಂಕುಮ ಇಡಬೇಕು ಅನ್ನೋರು. ಹಣಿಗೊಂದು ಚುಕ್ಕಿ ಇಟ್ಕೊಳ್ಳಾಕೂ ನನಗ ಬ್ಯಾಸರಿತ್ತು. ಖರೇಯಂದ್ರ ಬರೇಹಣಿ ಏನೇನೂ ಛೊಲೊ ಕಾಣೂದಿಲ್ಲ. ಸಣ್ಣದೊಂದು ಟೀಕಾ ಇಟ್ಕೊ ಅಂತ ಹೇಳಿದ್ದು ಅವರೇನೆ.

ನಮ್ಮೂರಾಗ ಕ್ವಾಲಿಟಿ ಬೇಕ್ರಿ ಅಂದ್ರ ಸಾಕು, ಅಲ್ಲಿದ್ದದ್ದೆಲ್ಲ ಬೇಕ್ರಿ ಅನ್ನೂದೆ ನಮ್ಮ ಕೆಲಸ ಆಗ್ತಿತ್ತು. ಅವರೂ ಹಂಗೇ ಕಾಕಾರ ಪ್ರೀತಿನೇ ತೋರಿದವರು. ಅಲ್ಲಿಯ ಬಿಸಿ ಬ್ರೆಡ್‌, ರಸ್ಕ್‌ ಮತ್ತು ಖಾರಿ ತಿಂಗಳ ಮೊದಲ ವಾರದ ಖರೀದಿ ಆಗಿರ್ತಿತ್ತು. ಅಕಸ್ಮಾತ್‌ ಬರೇ ಬ್ರೆಡ್‌ ಖರೀದಿ ಮಾಡಿದ್ರ, ಮನ್ಯಾಗ ಎಲ್ಲಾ ಅರಾಮದಾರಲ್ಲ, ಸಬ್‌ ಖೈರಿಯತ್‌ ಅಂತ ಕೇಳೋರು.

ಈಗ ಆರಿಫ್‌ ಭಾಯ್‌ ಅದಾರ. ಅವರದ್ದು ಶಾಲಿಮಾರ್‌ ಪಾನ್‌ ಅಂಗಡಿ. ಒಂದು ನೂರು ಬಗೆಯ ಬೀಡಾ ಮಾಡಿಕೊಡ್ತಾರ. ಅಗ್ದಿ ಮಧುರ ರಸ ಬಾಯ್ತುಂಬ. ಹಂಗೇ ಮಾತುನೂ. ಪ್ರತಿ ರಮ್‌ಜಾನ್‌ನಾಗೂ ದೀದಿ, ಹಬ್ಬಕ್ಕ ಬಾ ಅಂತ ಕರೀತಾರ. ಯಾವಾಗ ಹೋದ್ರೂ ಹಬ್ಬದಡಗಿ ಇದ್ದೇ ಇರ್ತದ. ಹಬ್ಬ ಆಗಿ ಯಾವ ಕಾಲ ಆಯ್ತು. ಯಾಕೀಗ ಅಂದ್ರ... ನೀವು ಬರೂದೆ ಹಬ್ಬ. ಹಬ್ಬ ಇದ್ದಾಗ ನಿಮಗ ಆಗೂದಿಲ್ಲಲ್ಲ ಅಂತ ಬಾಯ್ತುಂಬ ನಗ್ತಾರ. ದೀದಿ... ನೀವೆಲ್ಲ ಬೆನ್ಹಿಂದ ಅದೀರಲ್ಲ, ಅದೇ ಧೈರ್ಯ ನಮಗ ಅಂತಾರ.

ನಂಗ ಖಾತ್ರಿಯದ ನಮ್ಮ ನಬೀಸಾಬ್‌ರ ಹಿಂದುನೂ ಇಂಥ ಹಲವಾರು ಕುಟುಂಬಗಳಿರಬಹುದು. ಇಲ್ಲಾಂದ್ರ ಹನುಮಪ್ಪಗ ನೋಡಾಕ ಬಿಡ್ರಿ ಅಂತ ಕೇಳ್ತಿರಲಿಲ್ಲ. ಪ್ರಾಣವಾಯುವಿನ ಗುಡಿಮುಂದ ಹಿಂಗ ಉಸಿರುಕಟ್ಟಿಸುವ ಕೆಲಸ ಆಗಬಾರದಿತ್ತು.

ನಮಗ, ಹೆಸರು, ಧರ್ಮ, ಜಾತಿ ಮುಖ್ಯ ಅಂತನಿಸಲೇ ಇಲ್ಲ. ಬೆಳದಿದ್ದೇ ಬೀದರ್‌ನ ಕೆಂಬಣ್ಣದ ಮಣ್ಣಿನಾಗ. ಅಲ್ಲಿಯ ಮಣ್ಣಿನ ಗುಣವೇ ಸೌಹಾರ್ದ. ಸಂಯಮ ಮತ್ತು ಅಂತಃಕರಣ. ಧಾರವಾಡದ ಮಣ್ಣಿನಾಗೂ ಇಂಥದ್ದೇ ಅರಿವು ಅದ. ಯಾಕಂದ್ರ ಇಲ್ಲಿಯ ಗಾಳಿಯೊಳಗ ವೆಂಕಟೇಶ್‌ ಕುಮಾರ್‌ ಅವರ ಧ್ವನಿಯಷ್ಟೇ ಮಾಧುರ್ಯ ಬಾಲೇಖಾನ್‌ ಕುಟುಂಬದ ಸಿತಾರಿನ ನಾದದ್ದೂ ಅದ. ಮತ್ತದು ಹುಸಿ ಹೋಗೂದಿಲ್ಲ.

ಯಾಕಿಷ್ಟೆಲ್ಲ ನೆನಪಾಗ್ತಾವ ನನಗ ಅಂದ್ರ ಯಾವತ್ತಿದ್ದರೂ ನನಗ ಇವರೆಲ್ಲ ಮೊಮ್ಮಾ, ಫೈಜಾ ಅಮ್ಮಿ, ಚಿಚ್ಚಾ, ತಾಯಾ, ಅಮೀರಣ್ಣ, ಅಜ್ಮತ್‌, ಚಾಚಾ... ಹಿಂಗ ಸಂಬಂಧ ಸೂಚಕಗಳು, ಬಾಂಧವ್ಯ, ಆ ಬಾಂಧವ್ಯದ ಸವಿ, ಇವಷ್ಟೇ ನೆನಪಾಗ್ತಾವ. ಎಂದಿಗೂ ಧರ್ಮ, ಜಾತಿಗಳು ನೆನಪಾಗೂದೆ ಇಲ್ಲ.

ಯಾಕಂದ್ರ ನಾನು ತಿಂದುಂಡ ಅನ್ನದ ಅಗುಳಿಗೆ ಜಾತಿ, ಧರ್ಮ ಇರಲಿಲ್ಲ. ಶೀರ್‌ಖುರ್ಮಾಕ್ಕ ಬೆಳೆದ ಒಣಹಣ್ಣು, ಸಕ್ಕರೆಗೂ ಯಾವುದೇ ಜಾತಿ ಧರ್ಮಗಳಿರಲಿಲ್ಲ. ನಾ ಕೇಳಿದ ನುಸ್ರತ್‌ ಫತೇ ಅಲಿಖಾನ್‌, ಮೆಹ್ದಿ ಹಸನ್‌ ಇವರ ಧ್ವನಿಗೆ ಧರ್ಮದ ಲೇಪನ ಇರಲಿಲ್ಲ. ಕೈಫಿ ಆಜ್ಮಿ, ಮಿರ್ಜಾ ಗಾಲಿಬ್‌, ಅಮೀರ್‌ ಖುಸ್ರೊ ಅವರ ಪದಗಳಿಗೂ ಜಾತಿ ಧರ್ಮದ ಮೆಹಕು ಇರಲಿಲ್ಲ. ನಮ್ಮನಿಗೆ ಬೀಸಿದ ಗಾಳಿಗೆ, ನಮ್ಮನಿಯಂಗಳದೊಳಗ ಇಣುಕಿದ ಚಂದ್ರನ ತಿಂಗಳ ಬೆಳಕಿಗೆ, ಸೂರ್ಯನ ಬೆಳಕಿನ ರೇಕುವಿಗೂ ಧರ್ಮ, ಜಾತಿ ಇರಲಿಲ್ಲ.. ಇನ್ನ ಈ ಜೀವಕ್ಕ ಜಾತಿ, ಧರ್ಮ ಅನ್ನೂದು ಬದುಕಿನಾಗ ಜೀವ ಅಗ್ಗ ಆಗುವಷ್ಟು ನುಸುಳ್ತದ ಅಂದ್ರ ನಾ ಹೆಂಗ ನಂಬಲಿ? ಯಾಕ ನಂಬಲಿ?

ಮಾತಾಡೋರು ನೂರೆಂಟು ಮಾತಾಡಲಿ. ಸೌಹಾರ್ದ ಮತ್ತೊಮ್ಮೆ ಬದುಕಿ ತೋರಿಸುವ ಅಂತಃಕರಣ ಇಲ್ಲಿಯೋರಿಗೂ ಅದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT