ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಿತಾ ಬನ್ನಾಡಿ ಬರಹ: ಒಳ್ಳೆಯ ಸುದ್ದಿಗಾಗಿ ಕಾತರಿಸಿದೆ ಮನ

ದ್ವೇಷ ಎಂಬ ಅಗ್ನಿಯು ಹಬ್ಬುತ್ತಾ ತನ್ನ ಮನೆಯನ್ನೇ ಸುಡುತ್ತದೆ ಎಂಬ ಅರಿವು ನಾಶವಾಗದಿರಲಿ
Last Updated 14 ಏಪ್ರಿಲ್ 2022, 20:15 IST
ಅಕ್ಷರ ಗಾತ್ರ

‘ಅರಗಿನ ಅರಮನೆಗೆ ಹಾಕಿದ ಬೆಂಕಿಯು ಬೀಜವಾಗಿ, ವಿಷದ ಲಡ್ಡುಗೆಯನ್ನು ತಿನ್ನಿಸಿದ್ದು ಮೊಳಕೆಯಾಗಿ, ಕಪಟ ಜೂಜಿನಲ್ಲಿ ಚಿಗುರಾಗಿ, ದ್ರೌಪದಿಯ ಸೀರೆ ಸೆಳೆದಾಗ ಹೂವಾಗಿ ವೈರವೆಂಬುದು ಬೆಳೆದು ಇಂದು ಮರವಾಗಿರುವಾಗ ಮುಂದೆ ಅದು ಕೌರವನ ಕಿರೀಟವನ್ನು ಪುಡಿಯಾಗಿಸುವ ಮತ್ತು ತೊಡೆಗಳನ್ನು ಮುರಿಯುವ ಫಲಗಳನ್ನು ಕೊಡದೆ ಇರುತ್ತದೆಯೇ? ವಿಷವೃಕ್ಷವು ವಿಷದ ಹಣ್ಣನ್ನೇ ಬಿಡುತ್ತದೆಯಲ್ಲವೇ’ ಇದು ರನ್ನನ ಗದಾಯುದ್ಧದಲ್ಲಿ ಬರುವ ಭೀಷ್ಮರ ಮಾತು. ಯುದ್ಧ ಬಿಟ್ಟು ಸಂಧಿ ಮಾಡಿಕೊಳ್ಳಲು ಹೇಳಿದಾಗ ಆತ ಒಪ್ಪದೇ ಹೋದಾಗ ಅವರು ಮನಸ್ಸಿನಲ್ಲೇ ಅಂದುಕೊಳ್ಳುವ ಮಾತು. ಸ್ವತಃ ಅವರೇ ಇದೇ ಕೌರವನ ಪಡೆಯಲ್ಲಿ ಸೇನಾಧಿಕಾರಿಯಾಗಿ ಯುದ್ಧ ಮಾಡಿ ಪಾಂಡವ ಪಡೆಯ ಸಾವಿರಾರು ಜನರ ಹತ್ಯೆ ನಡೆಸಿದ ನಂತರದಲ್ಲಿ ಶರಶಯ್ಯೆಯಲ್ಲಿರುವಾಗ ಹೀಗೆ ಅಂದುಕೊಳ್ಳುತ್ತಾರೆ.

ಅಜ್ಜನಾಗಿ ಮೊಮ್ಮಕ್ಕಳನ್ನು ತಡೆಯಲು ಇವರಿಗೆ ಸಾಧ್ಯವಾಗದೇ ಹೋದ ದುರಂತವೇ ಇದು? ಅಥವಾ ಈ ಮಾತನ್ನು ಓದುಗರ ವಿವೇಕ ಹೆಚ್ಚಿಸಲು ಕವಿ ಬರೆದಿರುವುದೇ? ಕವಿಗಳ ಈ ಮಾತು ಕೇಳಿಸಿಕೊಳ್ಳುವ ಕಿವಿಗಳು ಇವೆಯೇ? ಇರಲಿ, ಬಿಡಲಿ, ಮಾನವತೆಯನ್ನು ಎದೆಯಲ್ಲಿ ಹೊತ್ತವರು ಹೇಳುವುದನ್ನು ಎಂದಿಗೂ ಬಿಡಲಾರರು. ಅದು ತಮ್ಮ ಲಾಭಕ್ಕಾಗಿ ಅಲ್ಲ, ಲೋಕದ ಒಳಿತಿಗಾಗಿ. ಕೌರವನೆಂಬ ರಾಜನಿಗೆ ಭೀಷ್ಮ, ದ್ರೋಣರೆಂಬ ಹಿರಿಯರೂ ಗುರುಗಳೂ ತಕ್ಕ ಸಮಯದಲ್ಲಿ ಇಂತಹ ಮಾತನ್ನು ಹೇಳಲು ಹೆದರಿದರೇ? ಅದಕ್ಕಾಗಿ ಯುದ್ಧ ನಡೆದು ಲಕ್ಷಾಂತರ ಸೈನಿಕರು ಸಾಯುವಂತಾಯಿತೇ? ಯುದ್ಧ ಬೇಡ ಎಂದ ಕೃಷ್ಣನ ಮಾತನ್ನೇ ಆತ ಕೇಳದೇ ಹೋದ ನಿಜ. ಆದರೆ ಇವರೆಲ್ಲರೂ ಯಾಕೆ ಅವನನ್ನೇ ಬೆಂಬಲಿಸಿದರು? ಬಹುಸಂಖ್ಯಾತರ ಬೆಂಬಲ ಇದ್ದದ್ದು ಕೌರವನಿಗೇ ವಿನಾ ಪಾಂಡವರಿಗಲ್ಲ. ಎಲ್ಲ ದುರಂತಗಳಾಚೆಗೆ ಗೆಲುವು ಸಿಕ್ಕಿದ್ದು ಪಾಂಡವರಿಗೇ ವಿನಾ ಕೌರವರಿಗಲ್ಲ. ಇದೇ ಸಂಕಟ. ನಡುವಿನ ದುರಂತಗಳೆಲ್ಲವೂ ಕೌರವನಂತಹ ಆಳುವವರ ಅವಿವೇಕದಿಂದ ನಡೆದುಹೋಗುತ್ತವೆ.

ನಮ್ಮ ಸುತ್ತಲಿನ ಕೆಲವು ಘಟನೆಗಳು, ಮಾತುಗಳು ಇಂತಹ ವೈರದ ಬೀಜವನ್ನು ಬಿತ್ತುತ್ತಿವೆ. ಸನ್ಯಾಸಿಯೆಂದು ಕಾವಿ ತೊಟ್ಟಿರುವವರೊಬ್ಬರಿಂದ ತಮ್ಮ ಧರ್ಮದ ಹೆಣ್ಣುಮಕ್ಕಳಿಗೆ ಕೀಟಲೆ ಮಾಡಿದರೆ ಅನ್ಯ ಧರ್ಮದ ಮಗಳು, ಸೊಸೆಯಂದಿರನ್ನು ತಾನೇ ಅತ್ಯಾಚಾರ ಮಾಡುವುದಾಗಿ ಹೇಳಿಕೆ ಬಂದಿದೆ. ಕೀಟಲೆ ಯಾರು ಮಾಡಿದರೂ ಶಿಕ್ಷೆಗೆ ಗುರಿಯಾಗುವುದಾಗಿ ಹೇಳಲಿ. ಆದರೆ ಇದೆಂಥ ಮಾತು? ಇದರರ್ಥ ಏನು? ತನ್ನದೇ ಧರ್ಮದವರು ಕೀಟಲೆ ಮಾಡಿದರೆ ಸರಿಯೇ? ಒಬ್ಬ ಸನ್ಯಾಸಿಯೆನಿಸಿ ಕೊಂಡವನು ತಾನೇ ಅತ್ಯಾಚಾರ ಮಾಡುವುದಾಗಿ ಹೇಳುವುದು ತನ್ನದೇ ಧರ್ಮಕ್ಕೆ ಮಾಡುವ ಅವಮಾನ ಅಲ್ಲವೇ? ದ್ವೇಷ, ಅಸೂಯೆಗಳನ್ನು ನೀರು, ಗೊಬ್ಬರ ಹಾಕಿ ಬೆಳೆಸಿದರೆ ಮತ್ತು ಹಾಗೆ ಬೆಳೆಸುತ್ತಿರುವುದನ್ನು ನೋಡಿಯೂ ತಮಗೆ ಅದರೊಳಗೇ ಒಂದು ಹುದ್ದೆಯೋ ಅನುಕೂಲವೋ ಇದ್ದರೆ ಸಾಕು ಬಿಡು ಎಂದುಕೊಂಡು ಆ ಆಡಳಿತದ ಭಾಗವಾದವರು ಮೌನವಾಗಿದ್ದರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ದ್ರೌಪದಿಯ ಪ್ರಸಂಗಕ್ಕಿಂತ ದೊಡ್ಡ ಪಾಠ ಯಾವುದೂ ಇಲ್ಲ. ಇದು ನಮ್ಮೊಳಗನ್ನು ಸದಾ ಎಚ್ಚರವಾಗಿಡಬೇಕು. ಆಕೆ ಸ್ವತಃ ತಮಗೆ ಸೊಸೆಯಾಗಿರುವವಳು ಎಂಬುದೂ ಈ ದ್ವೇಷಕ್ಕೆ ಮುಖ್ಯವಾಗುವುದೇ ಇಲ್ಲ. ಕಣ್ಣಿಲ್ಲದ ಧೃತರಾಷ್ಟ್ರ ಮತ್ತು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕುರುಡಾದ ಗಾಂಧಾರಿ ಇಡೀ ವ್ಯವಸ್ಥೆಯ ರೂಪಕಗಳು. ಕಣ್ಣಿಲ್ಲದವರ ಸಾಮ್ರಾಜ್ಯದಲ್ಲಿ ಕೆಲವರು ಹೀಗೆ ಪಟ್ಟಿ ಕಟ್ಟಿಕೊಂಡು ಕೃತಕ ಕುರುಡಿನಲ್ಲಿ ಸುಖವನ್ನು ಹುಡುಕುತ್ತಾರೆ. ಕಣ್ಣಿರುವವರು ಪಾಪಿಗಳೆನಿಸಿಕೊಳ್ಳುತ್ತಾರೆ. ಕಾಶ್ಮೀರದ ಪಂಡಿತರು ಮತ್ತು ಕಾಶ್ಮೀರದ ಅಸಂಖ್ಯಾತ ಇತರ ಜಾತಿ, ಧರ್ಮದವರು, ಭಾರತವನ್ನು ಬೆಂಬಲಿಸುವ ಮುಸ್ಲಿಮರುಗಳೆಲ್ಲಾ ಮೂಲಭೂತವಾದಿ ಮತ್ತು ಪ್ರತ್ಯೇಕತಾವಾದಿಗಳ ಅಟ್ಟಹಾಸಕ್ಕೆ ಬಲಿಯಾದರು. ಇಲ್ಲಿ ಅನ್ಯ ದೇಶ ಮತ್ತು ಅಲ್ಲಿನ ಇಸ್ಲಾಂ ಭಯೋತ್ಪಾದಕರ ಅಮಾನವೀಯ ಆಕ್ರಮಣ ಇದೆ. ಆದರೆ, ಇನ್ನೊಂದೆಡೆ ನಮ್ಮದೇ ಖೈರ್ಲಾಂಜಿ ಮತ್ತು ಇಂತಹುದೇ ಅಸಂಖ್ಯ ಪ್ರಕರಣಗಳಲ್ಲಿ ದೇಶೀಯರೇ, ತಮ್ಮ ಧರ್ಮದವರೇ ಆಗಿದ್ದರೂ ಅವರ ಮೇಲೆ ಇಂತಹದೇ ಅಟ್ಟಹಾಸ ಮೆರೆಯುವುದು ಏನನ್ನು ಸೂಚಿಸುತ್ತದೆ? ಖೈರ್ಲಾಂಜಿಯ ದಲಿತ ಹೆಣ್ಣುಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ್ದು ದ್ವೇಷದ ಪರಾಕಾಷ್ಠೆಯು ಮುಟ್ಟುವ ಅಧಃಪತನವಲ್ಲವೇ?

ಇತ್ತೀಚೆಗೆ ದಕ್ಷಿಣ ಕನ್ನಡದ ಭೂತಕೋಲವೊಂದನ್ನು ನೋಡಲು ಹೋಗಿದ್ದ ಮಲೆನಾಡಿನ ಹುಡುಗನಿಗೆ ಆದ ಅನುಭವವೊಂದನ್ನು ಹೇಳಬಯಸುತ್ತೇನೆ. ಅಲ್ಲಿ ಊಟಕ್ಕೆಂದು ಸಿದ್ಧತೆ ನಡೆಯುವಾಗ ಒಂದಿಷ್ಟು ಹುಡುಗರು ಬಹುಶ್ರಮ ವಹಿಸಿ ಹೊರಗಿನ ಕೆಲಸ ಮಾಡುತ್ತಿದ್ದರು. ಅವರಲ್ಲಿ ಒಬ್ಬ ನೀರು ಕುಡಿಯಲೆಂದು ಮುಂದುಗಡೆ ಇದ್ದ ನೀರಿನ ಪಾತ್ರೆಯನ್ನು ಬಳಸಲು ಬಂದ. ಆಗ ಅಲ್ಲಿಗೆ ಬಂದ ಮರಿ ನಾಯಕನೊಬ್ಬ, ‘ಏನು ನೀನು ಇಲ್ಲೆಲ್ಲಾ ಬರುವುದಾ?’ ಎಂದು ಝಂಕಿಸಿದ. ಈತ ತಡವರಿಸುತ್ತಾ ಏನೋ ಅಂದ. ಇವನೂ ಕೇಸರಿ ಶಾಲೇ ಹಾಕಿದ್ದ. ಆದರಿವನು ತಳಜಾತಿಯವನಾಗಿದ್ದ. ತಳಜಾತಿಯವನು ಎಷ್ಟೇ ಮೇಲಕ್ಕೆ ಚಲಿಸಿದರೂ ಅವರ ಅಧೀನದಲ್ಲೇ ಇರಬೇಕು. ವಿರೋಧಿಸಿದಾಗಲೇ ಬಿಸಿ ಮುಟ್ಟುವುದು. ಇಂದು ಅನ್ಯಧರ್ಮೀಯರ ಮೇಲೆ ನಡೆಯುವುದು ಅಲ್ಲಿನ ಟಾರ್ಗೆಟ್ ಮುಗಿದ ಮೇಲೆ ಎಲ್ಲಿಗೆ ಹೋಗುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸೂಚನೆ ಬೇಕಿಲ್ಲ. ಆದರೆ ಇಂದು ಅವರ ಟಾರ್ಗೆಟ್ ಮುಗಿಸಲು ಇವರೆಲ್ಲಾ ಅಸ್ತ್ರಗಳಾಗಿ ಬಹಳ ಸಂತೋಷದಿಂದ, ಉನ್ಮಾದದಿಂದ ಕೆಲಸ ಮಾಡುತ್ತಿದ್ದಾರೆ. ಈ ಉನ್ಮಾದಕ್ಕೆ ಮಹಿಳೆಯರೂ ಸಿಲುಕಿದ್ದಾರೆ. ಮರಿ ನಾಯಕರಾಗಿದ್ದವರು ಇವರಿಂದಾಗಿ ಮುಂದೆ ದೊಡ್ಡ ನಾಯಕರಾಗುತ್ತಾರೆ. ಅದಕ್ಕಾಗಿಯೇ ಈ ವಿಭಜನೆಗಳನ್ನು ಪೋಷಿಸುತ್ತಲೇ ಇರುತ್ತಾರೆ. ನಮ್ಮ ಸುತ್ತಲೂ ಇದುವರೆಗೂ ‘ಸಭ್ಯ’ರಂತೆ ಮುಖವಾಡ ತೊಟ್ಟವರನೇಕರು ಇಂದು ತಮ್ಮ
ನಿಜಮುಖಗಳನ್ನು ತೋರಿಸತೊಡಗಿದ್ದಾರೆ. ಮರಿ ನಾಯಕರಾಗುವ ಅತುಲ ಉತ್ಸಾಹದಲ್ಲಿದ್ದಾರೆ.

ಜಗತ್ತನ್ನು ಕಾಡುತ್ತಲೇ ಇರಬೇಕಾದ ಹಿಟ್ಲರ್‌ತನವನ್ನು ಆಗಾಗ ಎಚ್ಚರಿಸುವ ಕೆಲಸವನ್ನು ಎಲ್ಲ ಪ್ರಾಜ್ಞರೂ ಮಾಡುತ್ತಲೇ ಬಂದಿದ್ದಾರೆ. ಹಾಗೆ ಹೇಳಿದಾಗ, ‘ನೀವೆಲ್ಲಾ ಇಲ್ಲದೇ ಇರುವುದನ್ನು ಹೇಳುತ್ತಿದ್ದೀರಿ’ ಎನ್ನುವವರೇ ಈಗ ನಡೆಯುತ್ತಿರುವುದೇನು? ಯಹೂದಿಗಳನ್ನು
ಪ್ರತ್ಯೇಕಿಸಿದಂತೆಯೇ ಇಂದು ನಮ್ಮ ಕರ್ನಾಟಕದಲ್ಲಿ ಮುಸ್ಲಿಮರ ಹೊಟ್ಟೆಪಾಡುಗಳ ಮೇಲೆ ಆಕ್ರಮಣ ಮಾಡುತ್ತಿರುವುದು ಯಾವುದರ ಸೂಚನೆ? ನಾವಿಲ್ಲಿ ಆಂತರಿಕವಾಗಿ ಘರ್ಷಣೆಗೆ ತೊಡಗುವುದು ಬಾಹ್ಯರು ತಲೆತೂರಿಸಲು ಅವಕಾಶ ಮಾಡಿಕೊಡುವುದಿಲ್ಲವೇ? ನಾವು ಸಬಲ ಭಾರತವನ್ನು ಕಟ್ಟಬೇಕಾಗಿದೆಯಲ್ಲವೇ? ನಮಗೆ ಮಾದರಿಗಳು ಯಾರು? ಕೊಳಕು ಭಯೋತ್ಪಾದಕರೇ? ಅವರದೇ ದಾರಿಗಳನ್ನು ನಾವು ಅನುಸರಿಸಬೇಕಾಗಿದೆಯೇ? ನಮ್ಮದೇ ದೇಶದಲ್ಲಿ ಹಿಂದೆ ಎಷ್ಟೆಲ್ಲಾ ಒಳ್ಳೆಯ ಮಾರ್ಗಗಳು ಆವಿಷ್ಕಾರಗೊಂಡಿದ್ದುವಲ್ಲ? ಅದೆಲ್ಲ ಬಿಟ್ಟು ಹಿಟ್ಲರ್ ಮಾದರಿಯ ಹಿಂದೇಕೆ ಹೋಗುತ್ತಿದ್ದೇವೆ? ಹಿಟ್ಲರ್‌ನ ನೆನಪನ್ನು ಹಿಂದಿಕ್ಕಿ, ಸಿರಿಯಾದ ನಿರಾಶ್ರಿತರಿಗೆ ಆಶ್ರಯ ಕೊಟ್ಟೂ, ಕೋವಿಡ್ ಕಾಲದಲ್ಲೂ ಆರ್ಥಿಕ ಸ್ಥಿರತೆ ಹೊಂದಿ ಜನಾಂಗ ದ್ವೇಷವಿಲ್ಲದೆ ಹದಿನಾರು ವರ್ಷ ಆಡಳಿತ ಮಾಡಿ ತಾನೇ ಅಧಿಕಾರವನ್ನು ತ್ಯಜಿಸಿದ ಏಂಜೆಲಾ ಮರ್ಕೆಲ್‍ರಂತಹವರು ಕಟ್ಟಿದ ಜರ್ಮನಿ ನಮಗಿಂದು ನೆನಪಾಗಬೇಕು. ಸಂತೃಪ್ತ, ಸುಶಿಕ್ಷಿತ, ಮಾನವತೆಯ ಆಗರವಾದ, ವಿಷಮುಕ್ತ ಪರಿಸರ ಮತ್ತು ಆಹಾರವನ್ನು ನೀಡುವ ಜಗತ್ತಿನ ಅಪರೂಪದ ದೇಶ ಭಾರತವಾಗಿದೆ ಎಂಬ ಒಳ್ಳೆಯ ಸುದ್ದಿಯೊಂದನ್ನು ಕೇಳುವ ಕಾತರದಲ್ಲಿ ನನ್ನ ಕಿವಿಗಳಿವೆ. ಈ ಸುದ್ದಿ ನೀಡಲು ಕಾರಣರಾಗುವವರು ಯಾರೇ ಆದರೂ ಅವರಿಗೊಂದು ಸೆಲ್ಯೂಟ್‍ ಅನ್ನು ಈಗಲೇ ಹೇಳುವೆ.

ಕೃಷ್ಣ, ತನ್ನ ಧರ್ಮದಲ್ಲಿದ್ದೇ ಪಾಪದ ಕೆಲಸ ಮಾಡಿದ ಕೌರವನಿಗೆ ಬುದ್ಧಿಮಾತು ಹೇಳಿದಾಗ, ಆತ ‘ದನ ಕಾಯುವ ಜಾತಿಯವನು’, ‘ಈಗಷ್ಟೇ ದಾಸಿಯ ಮನೆಯ (ವಿದುರ) ಕೂಳು ತಿಂದು ಬಂದವನು’ ಎಂದು ಟ್ರೋಲ್ ಮಾಡುತ್ತಾನೆ! ಇಂದು ಬುದ್ಧಿಜೀವಿಗಳೂ ಹೀಗೇ ಅನ್ನಿಸಿಕೊಳ್ಳಬೇಕಾದ ಕಾಲದಲ್ಲಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT