ಮಂಗಳವಾರ, ಅಕ್ಟೋಬರ್ 27, 2020
19 °C

ಅನುಭವ ಮಂಟಪ: ಸಮಾಜಮುಖಿಯಾಗಿ ‘ಸುದ್ದಿಮನೆ’

ವಾರೆನ್ ಫರ್ನಾಂಡಿಸ್ Updated:

ಅಕ್ಷರ ಗಾತ್ರ : | |

Prajavani

ವಿಶ್ವಾಸಾರ್ಹ ಪತ್ರಿಕೋದ್ಯಮವು ಜೀವಗಳನ್ನು ಉಳಿಸುತ್ತದೆ, ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ ಹಾಗೂ ಸಂಕೀರ್ಣ ಮತ್ತು ಅನಿಶ್ಚಿತ ಪ್ರಪಂಚದ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುತ್ತದೆ. ಪತ್ರಿಕೋದ್ಯಮವು ಒಳ್ಳೆಯ ಬದಲಾವಣೆಗೆ ಕಾರಣವಾಗಬಲ್ಲ ಒಂದು ಶಕ್ತಿ ಎಂಬುದನ್ನು ಸೆ.28ರಂದು ‘ವಿಶ್ವ ಸುದ್ದಿ ದಿನ’ ಆಚರಣೆ ಮೂಲಕ ನೆನಪಿಸಲಾಗುತ್ತದೆ. ಇದು ಸಂಭ್ರಮದ ದಿನಕ್ಕಿಂತ ಮಿಗಿಲಾಗಿ, ಪತ್ರಿಕೋದ್ಯಮವು ಜನರ ಜೀವನದಲ್ಲಿ ಹೇಗೆ ಬದಲಾವಣೆ ತಂದಿದೆ ಎಂಬುದನ್ನು ವಿವರಿಸಲು ಇರುವ ಒಂದು ವೇದಿಕೆಯಾಗಿದೆ.

ಟೊರಾಂಟೊದಿಂದ ತೈಪೇವರೆಗೆ, ಸ್ಪೇನ್‌ನಿಂದ ಸಿಂಗಪುರದವರೆಗೆ ಜಗತ್ತಿನ 120ಕ್ಕೂ ಹೆಚ್ಚು ಸುದ್ದಿಮನೆಗಳ ಪತ್ರಕರ್ತರು ‘ವಿಶ್ವ ಸುದ್ದಿ ದಿನ’ಕ್ಕೆ ಸಾಕ್ಷಿಯಾಗುತ್ತಿದ್ದಾರೆ. ನಮ್ಮ ಕೆಲಸದ ಬಗ್ಗೆ ಬೆನ್ನು ತಟ್ಟಿಕೊಳ್ಳುವುದಕ್ಕೆ ಈ ದಿನ ಅಲ್ಲ. ಮಿಗಿಲಾಗಿ, ಪತ್ರಿಕೆಗಳನ್ನು ಓದುವ ಜನರಿಗೆ ಸಂಬಂಧಿಸಿದ ಸುದ್ದಿಗಳನ್ನು ಪತ್ರಕರ್ತರು ಹೇಗೆ ವರದಿ ಮಾಡುತ್ತಾರೆ ಎಂಬುದರ ಮೇಲೆ ಇದು ಕೇಂದ್ರೀಕೃತವಾಗಿದೆ. ಕೋವಿಡ್ ಪ್ರಸರಣದ ಈ ಹೊತ್ತಿನಲ್ಲಿ ವೃತ್ತಿಪರ ಪತ್ರಕರ್ತರತ್ತ ಜನರು ಹಿಂದೆಂದಿಗಿಂತಲೂ ಹೆಚ್ಚು ಮುಖ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. 

ಸುರಕ್ಷಿತವಾಗಿ ಇರುವುದು ಹೇಗೆ, ತಮ್ಮ ಉದ್ಯೋಗವನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಅವರು ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಕಲ್ಪಿತ ಸುದ್ದಿಗಳಿಗೂ, ನೈಜ ಸುದ್ದಿಗಳಿಗೂ ನಡುವೆ ಪ್ರತ್ಯೇಕತೆಯನ್ನು ಬಯಸುತ್ತಿದ್ದಾರೆ. ವೈರಲ್ ಆಗುವ ಸುಳ್ಳು ಸುದ್ದಿಗಳ ಹಾವಳಿಯಲ್ಲಿ ಸತ್ಯಸುದ್ದಿಗಳೇ ಕಳೆದುಹೋಗುವ ಆಂತಕದಲ್ಲಿ ಜನರಿದ್ದಾರೆ. ನಂಬಿಕಸ್ಥ ಜನರು ಬೇಕಾಗಿದ್ದಾರೆ. ಗುಣಮಟ್ಟದ ಪತ್ರಿಕೋದ್ಯಮವೇ ಈಗಿನ ತುರ್ತು.

ವೃತ್ತಿಪರ ಪತ್ರಿಕೋದ್ಯಮದ ಸುದ್ದಿಮನೆಗಳು, ಸಮುದಾಯಗಳನ್ನು ಪ್ರತಿನಿಧಿಸಲು ಪ್ರಯತ್ನಿಸಿವೆ. ಅಂತರ್‌ರಾಷ್ಟ್ರೀಯ ಸ್ನೇಹ ಸೇತುವೆಯನ್ನು ಇದ್ದಕ್ಕಿದ್ದಂತೆ ಮುಚ್ಚಿದ್ದರಿಂದ ಪೆರುಗ್ವೆ ಹಾಗೂ ಬ್ರೆಜಿಲ್‌ನ ಜನ ಸಮುದಾಯಗಳಿಗೆ ಉಂಟಾದ ಆಘಾತದ ಕುರಿತು ಕಳೆದ ಮಾರ್ಚ್‌ನಲ್ಲಿ ಬ್ರೆಜಿಲ್‌ನ ಮಾಧ್ಯಮ ಸಂಸ್ಥೆ ‘100 ಫ್ರಾಂಟಿಯರ್ಸ್’ ವರದಿ ಮಾಡಿತ್ತು. ಸಿಯುಡಾಡ್ ಡೆಲ್ ಎಸ್ಟೆ ಹಾಗೂ ಫೋಜ್ ಡು ಇಗುವಾಸು ಪಟ್ಟಣಗಳನ್ನು ಈ ಸೇತುವೆ ಬೆಸೆದಿತ್ತು.  

ಈ ಘಟನೆಯಿಂದ ಅನೇಕ ಕುಟುಂಬಗಳು ವಿಭಜನೆಯಾಗಬೇಕಾಯಿತು. ಫೋಜ್‌ ನಿವಾಸಿಗಳ ಸಂಬಂಧಿಕರು ‌ಮತ್ತೊಂದು ಬದಿಯಲ್ಲಿದ್ದರು. ದೂರವಾಣಿಯಲ್ಲಷ್ಟೇ ಸಂಪರ್ಕ ಎಂಬ ಸ್ಥಿತಿ ನಿರ್ಮಾಣವಾಯಿತು. ತಮ್ಮವರನ್ನು ಭೇಟಿಯಾಗಲಾರದ, ಅಪ್ಪಿಕೊಳ್ಳಲಾದ ಸಂದರ್ಭವದು. ಅಪ್ಪುಗೆಗೆ ಎಷ್ಟೊಂದು ಮಹತ್ವವಿದೆ ಎಂದು ತಿಳಿದಿದ್ದೇ ಆಗ.

ಇದೇ ಅವಧಿಯಲ್ಲಿ ಜಗತ್ತಿನ ಮತ್ತೊಂದು ತುದಿಯಲ್ಲಿ ಇಂತಹದ್ದೇ ಪ್ರತ್ಯೇಕತೆಯ ಕತೆ. ವೈರಸ್ ಹರಡುವುದನ್ನು ತಡೆಯಲು ಸಿಂಗಪುರ ಹಾಗೂ ಮಲೇಷ್ಯಾ ಗಡಿಯ ಜೋಹರ್ ಬಹ್ರು ಸೇತುವೆಯನ್ನು ಮುಚ್ಚಲಾಯಿತು. ದಶಕಗಳಿಂದ ಬೆಸೆದಿದ್ದ ಕುಟುಂಬಗಳು, ಕಾರ್ಮಿಕರು, ವ್ಯವಹಾರಸ್ಥರು ಮತ್ತು ಸಮುದಾಯಗಳಲ್ಲಿ ಇದ್ದಕ್ಕಿದ್ದಂತೆ ಏನನ್ನೋ ಕಳೆದುಕೊಂಡ ಭಾವ. ಇವರ ಕತೆಗಳು ‘ಸ್ಟ್ರೈಟ್ ಟೈಮ್ಸ್‌’ನಲ್ಲಿ ಅಕ್ಷರ ರೂಪ ಪಡೆದವು. 

ಜಾಗತಿಕ ಪಿಡುಗಿನ ಈ ಕಾಲದಲ್ಲಿ, ಮಾನವೀಯತೆ, ಧೈರ್ಯ, ಭರವಸೆಯ ಕಥೆಗಳು ಅನೇಕ ಸುದ್ದಿಮನೆಗಳಲ್ಲಿ ಕಾಣಸಿಗುತ್ತಿವೆ. ಫೆಬ್ರುವರಿಯಲ್ಲಿ ಪ್ರಕಟವಾದ ‘ಆನ್‌ದಿ ಫ್ರಂಟ್‌ಲೈನ್ಸ್ ಆಫ್‌ದಿ ಕೊರೊನಾವೈರಸ್’ ಲೇಖನದಲ್ಲಿ ಸಿಂಗಪುರದಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಅಧಿಕಾರಿಗಳನ್ನು ಸ್ಮರಿಸಲಾಗಿತ್ತು. ಅದೇ ರೀತಿ ಏಪ್ರಿಲ್ ತಿಂಗಳಿನಲ್ಲಿ ಕೆನಡಾದ ಪತ್ರಿಕೆಯೊಂದು ಕೋವಿಡ್‌ ರೋಗಿಯೊಬ್ಬರ ತುರ್ತು ಚಿಕಿತ್ಸೆಯಿಂದ ಮೊದಲ್ಗೊಂಡು ಚೇತರಿಸಿಕೊಂಡು ಆತ ಮನೆಗೆ ತೆರಳುವ ಅವಧಿಯಲ್ಲಿ ಒಂದು ಜೀವ ಉಳಿಸಲು ಶ್ರಮ ಪಟ್ಟವರ ಕತೆಯನ್ನು ಚಿತ್ರಿಸಿತ್ತು.  

ಇಂತಹ ನೂರಾರು ಕತೆಗಳನ್ನು ಹೆಕ್ಕಿ, ಜಗತ್ತಿನಾದ್ಯಂತ ಇರುವ ಸುದ್ದಿಮನೆಗಳು ತಮ್ಮ ಓದುಗರಿಗೆ ಮುಟ್ಟಿಸುತ್ತಿವೆ. ಓದುಗರಿಗೆ ಮಾಹಿತಿ ನೀಡುವುದು ಅಥವಾ ಜಾಗೃತರನ್ನಾಗಿ ಮಾಡುವುದಷ್ಟೇ ಅಲ್ಲ, ಸಮುದಾಯಗಳನ್ನು ಪ್ರೇರೇಪಿಸುವುದು ಮತ್ತು ಮೇಲೆತ್ತುವುದೂ ಮುಖ್ಯ ಉದ್ದೇಶವಾಗಿದೆ.  

ಮನುಷ್ಯ ಲಘುವಾಗಿ ತೆಗೆದುಕೊಂಡಿದ್ದ ಹಲವು ವಿಚಾರಗಳನ್ನು ಈ ಪಿಡುಗು ನೆನಪಿಸಿದೆ. ಉತ್ತಮ ಆಡಳಿತದ ಅಗತ್ಯ, ಪ್ರಬಲ ನಾಯಕರು ಮತ್ತು ಸಂಸ್ಥೆಗಳ ಮೇಲಿನ ನಂಬಿಕೆ, ಕುಟುಂಬಗಳು ಮತ್ತು ಸಮುದಾಯಗಳು ಒದಗಿಸುವ ಸಾಂತ್ವನವನ್ನು ವಿವರಿಸಿದೆ. ಸಮಾಜಗಳ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ವಿಶ್ವಾಸಾರ್ಹ ಮಾಧ್ಯಮವು ವಹಿಸುವ ನಿರ್ಣಾಯಕ ಪಾತ್ರವನ್ನು ಪಿಡುಗು ನೆನಪಿಸಿದೆ.

ವಿಪರ್ಯಾಸವೆಂದರೆ, ಕೊರೊನಾ ಪಿಡುಗು, ಅನೇಕ ಸುದ್ದಿಮನೆಗಳ ಅಸ್ತಿತ್ವಕ್ಕೇ ಬಲವಾದ ಪೆಟ್ಟು ನೀಡಿದೆ. ಪತ್ರಕರ್ತರು ತಮ್ಮ ಕೆಲಸ ಮುಂದುವರಿಸುವುದು ಕಷ್ಟಕರವಾಗಿದೆ. ಇದು ಏಕೆ ಹೀಗೆ ಎಂದು ವಿಚಾರ ಮಾಡಲು ‘ವಿಶ್ವ ಸುದ್ದಿ ದಿನ’ ಒಂದು ಅವಕಾಶ ಒದಗಿಸಿದೆ. 

ಕೋವಿಡ್ ನಂತರದ ಜಗತ್ತಿನಲ್ಲಿ ಜನರ ಸ್ಥಿತಿ ಏನು ಎಂಬುದರ ಕುರಿತು ಚರ್ಚೆಗಳನ್ನು ನಡೆಸಬೇಕಾದರೆ ವಿಶ್ವಾಸಾರ್ಹ ಪತ್ರಿಕೋದ್ಯಮ ನಿರ್ಣಾಯಕವಾಗಿದೆ. ಬದಲಾವಣೆಯ ಸಮಯದಲ್ಲಿ ಸುದ್ದಿಮನೆಗಳು ಸಮುದಾಯಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತವೆ. ಸುದ್ದಿಸಂಸ್ಥೆಗಳ ನೈಜ ಸುದ್ದಿಗಳಿಂದ ಮಾತ್ರ ಸಮಾಜಗಳನ್ನು ಉತ್ತಮವಾಗಿರಲು ಸಾಧ್ಯ. ಜನರಿಗೆ ತಮ್ಮ ಸುತ್ತಲಿನ ವಾಸ್ತವ ಸ್ಥಿತಿಯನ್ನು ವಿವರಿಸುವಲ್ಲಿ ವೃತ್ತಿಪರ ಪತ್ರಕರ್ತರು ಮತ್ತು ಸುದ್ದಿಮನೆಗಳ ಪಾತ್ರ ಅತಿಮುಖ್ಯವಾಗಿದೆ.

(ಲೇಖಕ- ಎಡಿಟರ್ ಇನ್ ಚೀಫ್, ಸ್ಟ್ರೈಟ್ ಟೈಮ್ಸ್, ಸಿಂಗಪುರ)

 

ವಿಶ್ವ ಸುದ್ದಿ ದಿನ

ವಿಶ್ವ ಸುದ್ದಿ ದಿನವನ್ನು ‘ಕೆನಡಿಯನ್ ಜರ್ನಲಿಸಮ್ ಫೌಂಡೇಶನ್’ (ಸಿಜೆಎಫ್) ಮತ್ತು ‘ವಿಶ್ವ ಸಂಪಾದಕರ ವೇದಿಕೆ’ಗಳು (ಡಬ್ಲ್ಯೂಇಎಫ್) ಗೂಗಲ್ ನ್ಯೂಸ್‌ ಇನಿಷಿಯೇಟಿವ್ ಜತೆಗೂಡಿ ಪ್ರಸ್ತುತಪಡಿಸುತ್ತಿವೆ. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ನೂರಾರು ಪತ್ರಿಕಾ ಸಂಸ್ಥೆಗಳು ಈ ಬಳಗದಲ್ಲಿವೆ.

ಸಿಜೆಎಫ್: 1990ರಲ್ಲಿ ಸ್ಥಾಪನೆಯಾದ ಕೆನಡಿಯನ್ ಜರ್ನಲಿಸಮ್ ಫೌಂಡೇಶನ್, ಗುಣಮಟ್ಟದ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ಫೆಲೊಶಿಪ್‌ಗಳನ್ನು ನೀಡುತ್ತಿದೆ. ಪ್ರತಿಷ್ಠಾನವು ಪತ್ರಿಕೋದ್ಯಮ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಗೆ ಅವಕಾಶ ನೀಡುತ್ತಿದೆ. 

ಡಬ್ಲ್ಯೂಇಎಫ್: ಸುದ್ದಿ ಸಂಸ್ಥೆಗಳ ಸಂಪಾದಕರ ಪ್ರಮುಖ ಜಾಗತಿಕ ಮುಂಚೂಣಿ ವೇದಿಕೆಯೇ ‘ವಿಶ್ವ ಸಂಪಾದಕರ ವೇದಿಕೆ’. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಂಪಾದಕೀಯ ಶ್ರೇಷ್ಠತೆಯನ್ನು ಉತ್ತೇಜಿಸುವ ಬದ್ಧತೆಯ ತಳಹದಿಯ ಮೇಲೆ ಇದನ್ನು ಕಟ್ಟಲಾಗಿದೆ. ಎರಡು ದಶಕಗಳ ಹಿಂದೆ ಸ್ಥಾಪನೆಯಾದ ವೇದಿಕೆಯು, ತರಬೇತಿ, ಹೊಸತನ ಅಳವಡಿಕೆ, ಸಮಾವೇಶ, ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಮನೆಗಳ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗುತ್ತಿದೆ. 

ವ್ಯಾನ್ ಇಫ್ರಾ: ಇದು ಪತ್ರಿಕಾ ಪ್ರಕಾಶಕರ ಜಾಗತಿಕ ಸಂಘಟನೆ. ಸ್ವತಂತ್ರ ಮಾಧ್ಯಮ ಮುನ್ನಡೆಸುವ, ಜಗತ್ತಿನೆಲ್ಲೆಡೆ ವ್ಯಾಪಿಸಿರುವ ಪತ್ರಕರ್ತರು ಹಾಗೂ ಪ್ರಕಾಶಕರ ಹಕ್ಕುಗಳ ರಕ್ಷಣೆ ಇದರ ಧ್ಯೇಯ. ಇದು ತನ್ನ ಸದಸ್ಯರಿಗೆ ಡಿಜಿಟಲ್ ಜಗತ್ತಿನಲ್ಲಿ ಹೊಸತನ, ಪರಿಣಿತಿ ಮತ್ತು ಸೇವೆಗಳನ್ನು ಒದಗಿಸುತ್ತದೆ. 120 ದೇಶಗಳ 18 ಸಾವಿರಕ್ಕೂ ಹೆಚ್ಚು ಪ್ರಕಾಶಕರನ್ನು ಸಂಸ್ಥೆ ಪ್ರತಿನಿಧಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು