ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವದ ಹೊತ್ತಿನಲ್ಲಿ ಹೀಗೊಂದು ಧ್ಯಾನ: ಕನ್ನಡದ ನಾಳೆಗಳು...

Last Updated 29 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಕನ್ನಡದ ನಾಳೆಗಳು ಹೇಗಿದ್ದಾವು? ಅದು ಮುಂದೆಯೂ ಅನ್ನದ ಭಾಷೆಯಾಗಿ ಉಳಿಯಲಿದೆಯೇ? ನಿಜಕ್ಕೂ ನಮ್ಮ ಭಾಷೆಯ ಮುಂದಿರುವ ಸವಾಲುಗಳು ಯಾವುವು? ರಾಜ್ಯೋತ್ಸವದ ಹೊತ್ತಿನಲ್ಲಿ ಹೀಗೊಂದು ಕನ್ನಡದ ಧ್ಯಾನ.

***

ಕನ್ನಡ ನುಡಿಯ ಇಂದು ನಾಳೆಗಳನ್ನು ವಿವರಿಸಲು ಮುಂದಾಗುವವರಲ್ಲಿ ಕಳೆದ ಮೂರು ದಶಕಗಳಿಂದ ಆತಂಕಗಳು ಮನೆಮಾಡಿವೆ. ಈ ಅವಧಿಯಲ್ಲಿ ಆತಂಕದ ಪ್ರಮಾಣ ಮತ್ತು ಆತಂಕದ ಕಾರಣಗಳು ಮಾತ್ರ ಬದಲಾಗುತ್ತಾ ಬಂದಿವೆ. ಕರ್ನಾಟಕ ಎಂಬ ಆಡಳಿತಾತ್ಮಕ ನೆಲೆಗೆ ಇರುವ ಹಲವು ಗುರುತುಗಳಲ್ಲಿ ಕನ್ನಡ ನುಡಿಯೂ ಒಂದು. ಈ ಗುರುತನ್ನೇ ಮುಂದು ಮಾಡಿಕೊಂಡು ಈ ರಾಜ್ಯ ರಚನೆಯಾದದ್ದು. ಕಳೆದ ಆರೂವರೆ ದಶಕಗಳಲ್ಲಿ ಕನ್ನಡವೆಂಬ ಗುರುತನ್ನು ಮುಂದಿರಿಸಿಕೊಂಡು ಕನ್ನಡ ನುಡಿಯನ್ನಾಡುವವರ ಏಳಿಗೆಯನ್ನು ಕಟ್ಟಲೆಂದು ರೂಪಿಸಿದ ಯೋಜನೆಗಳು ತಲುಪಬೇಕಾದ ಗುರಿಯನ್ನು ತಲುಪಲು ಆಗಿಲ್ಲ. ಮತ್ತೆ ಮತ್ತೆ ಹಿಂಜರಿತವನ್ನೇ ಕಾಣುತ್ತಾ ಬಂದಿವೆ. ಇದಕ್ಕೆ ಇಂಡಿಯಾದ ಮತ್ತು ಲೋಕದ ರಾಜಕಾರಣ, ಸಾಮಾಜಿಕ ಬದಲಾವಣೆಗಳು, ನ್ಯಾಯವಿತರಣೆಯ ಪದ್ಧತಿ, ಆಡಳಿತದ ನೆಲೆ, ಆರ್ಥಿಕ ನೆಲೆಗಳಲ್ಲಿ ಆಗಿರುವ ಪಲ್ಲಟಗಳು- ಇವೆಲ್ಲವೂ ಒಂದಿಲ್ಲ ಒಂದು ಬಗೆಯಲ್ಲಿ ಕಾರಣವಾಗಿವೆ. ಈ ಎಲ್ಲ ಸಂಗತಿಗಳನ್ನು ಸದ್ಯ ಬದಿಗಿರಿಸಿ ಕನ್ನಡದ ಈಗಿನ ಆತಂಕದ ನೆಲೆಗಳನ್ನು ತಿಳಿಯುವ ಅಗತ್ಯವಿದೆ.

ಈ ಆತಂಕಗಳು ಯಾವುವು ಎಂಬುದನ್ನು ಕಂಡುಕೊಂಡು ವಿವರಿಸುವವರು ಒಂದು ಕಡೆ ಇದ್ದರೆ, ಈ ಆತಂಕಗಳ ಪರಿಣಾಮಗಳನ್ನು ಎದುರಿಸುವವರು ಇನ್ನೊಂದು ಕಡೆ ಇದ್ದಾರೆ. ಮತ್ತೊಂದು ಕಡೆ ಈ ಎರಡೂ ವಲಯಗಳನ್ನು ತಮ್ಮ ನಿರ್ಧಾರಗಳು ಮತ್ತು ವರ್ತನೆಗಳ ಮೂಲಕ ಪ್ರಭಾವಿಸುವ ಅಧಿಕಾರ ಕೇಂದ್ರಗಳಿವೆ; ಸಮೂಹ ಮಾಧ್ಯಮಗಳಿವೆ. ಹೀಗಾಗಿ ಕನ್ನಡದ ಇಂದಿನ ಆತಂಕಗಳನ್ನು ವಿವರಿಸುವಾಗ ಯಾರ ದೃಷ್ಟಿಕೋನದಿಂದ ವಿವರಿಸುತ್ತಿದ್ದೇವೆ ಎಂಬುದನ್ನು ಮರೆತು ಮಾತನಾಡುವುದು ಸರಿಯಾಗಲಾರದು.

ಮೊದಲ ಗುಂಪಿನಲ್ಲಿ ಹಲವು ಬಗೆಯವರು ಇದ್ದಾರೆ. ನುಡಿಗಳು ಎದುರಿಸುವ ಆತಂಕಗಳನ್ನು ವಿವರಿಸಲು ಇರುವ ಮಾನದಂಡಗಳನ್ನು ಅರಿತವರು ಇದ್ದಾರೆ. ರಾಜಕೀಯ ಮತ್ತು ಸಾಮಾಜಿಕ ಚಲನಶೀಲತೆಯ ನೆಲೆಯಲ್ಲಿ ವಿವರಿಸುವವರೂ ಇದ್ದಾರೆ. ‘ಸತ್ತಂತಿಹರನು ಬಡಿದೆಚ್ಚರಿಸುವ’ ಇರಾದೆ, ಉಮೇದುಗಳು ಇರುವವರೂ ಸೇರಿದ್ದಾರೆ. ಇವರೆಲ್ಲರೂ ಹೇಳುವ ಮಾತುಗಳಲ್ಲಿ ಕೆಲವು ಸಮಾನ ಅಂಶಗಳಿವೆ. ಅದರಂತೆ ಕನ್ನಡ ನುಡಿ ನಿಧಾನವಾಗಿ ತನ್ನ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ. ಸಾರ್ವಜನಿಕ ಬಳಕೆಯ ವಲಯಗಳೆಂದು ಪರಿಗಣಿಸಲಾಗಿರುವ ಆಡಳಿತ, ನ್ಯಾಯಾಂಗ, ಶಿಕ್ಷಣ ವ್ಯವಸ್ಥೆ, ಸಮೂಹ ಮಾಧ್ಯಮ ಮುಂತಾದವುಗಳಲ್ಲಿ ಇದು ಗೋಚರಿಸುತ್ತದೆ ಎಂದು ಗುರುತಿಸುತ್ತಾರೆ. ಈ ವಲಯಗಳಲ್ಲಿ ಕನ್ನಡ ತನಗಿರುವ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ, ಇಲ್ಲವೇ ಇನ್ನೊಂದು ನುಡಿಯ ಜೊತೆಗೆ ಪೈಪೋಟಿ ಮಾಡಬೇಕಾದ ಸ್ಥಿತಿಯಲ್ಲಿದೆ. ಈ ವಿವರಣೆಯನ್ನು ಒಪ್ಪದೇ ಇರುವವರು ಬೇರೊಂದು ಬಗೆಯ ವಾದವನ್ನು ಮಂಡಿಸುತ್ತಾರೆ. ಕನ್ನಡಕ್ಕೆ ಮೊದಲ ಮಣೆಯನ್ನು ಹಾಕಬೇಕೆಂಬ ಸರ್ಕಾರದ ನಿರ್ಧಾರಗಳ ಸರಣಿಯನ್ನು ಎದುರಿಗೆ ಇರಿಸುತ್ತಾರೆ. ಸರಿಯೇ ಸರಿ. ಆದರೆ ನೀತಿನಿರೂಪಣೆಯ ನೆಲೆ ಮತ್ತು ಅವುಗಳನ್ನು ಜಾರಿಗೊಳಿಸುವ ನೆಲೆ ಇವುಗಳಲ್ಲಿ ಇರುವ ಕಂದರವನ್ನು ಗಮನಿಸುವುದು ಅಗತ್ಯ.

ಹಾಗೆ ನೋಡಿದರೆ ಸರ್ಕಾರದ ನಡಾವಳಿಗಳೇ ಕಾರಣವಾಗಿ ಕನ್ನಡದ ಬಳಕೆ ಎಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಆಗುತ್ತಿದೆ ಎಂಬುದನ್ನು ಒಪ್ಪೋಣ. ಹೀಗೆ ಕನ್ನಡ ಹೆಚ್ಚು ಬಳಕೆಯಾಗುತ್ತಿರುವುದರಿಂದ ಜನರಿಗೆ ಆಡಳಿತವು ಉತ್ತರದಾಯಿಯಾಗುವ ಪ್ರಮಾಣ ಹೆಚ್ಚಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಸರ್ಕಾರದ ಉತ್ತರದಾಯಿತ್ವದ ಪ್ರಮಾಣ ಹೆಚ್ಚಾಗುವುದಿರಲಿ ಎಂದಿಗಿಂತಲೂ ಕಡಿಮೆಯೇ ಆಗುತ್ತಿದೆ ಎಂಬುದನ್ನು ಗ್ರಹಿಸಲು ಹೆಚ್ಚಿನ ಪುರಾವೆಗಳು ಬೇಕಿಲ್ಲ. ಆಡಳಿತಗಾರರು (ಸಚಿವರು, ಅಧಿಕಾರಿಗಳು) ತೆಗೆದುಕೊಳ್ಳುವ ನಿರ್ಣಯಗಳು, ಆ ನಿರ್ಣಯಗಳನ್ನು ಜಾರಿಗೊಳಿಸುವ ಬಗೆ ಇವೆಲ್ಲವನ್ನೂ ಗಮನಿಸಿದರೆ ಸಾಕು. ಅಂದರೆ ಕನ್ನಡವು ಆಡಳಿತದಲ್ಲಿ ಬಳಕೆಯಾಗುವುದಕ್ಕೂ ಆಡಳಿತವು ಜನರಿಗೆ ಉತ್ತರದಾಯಿಯಾಗುವುದಕ್ಕೂ ನೇರವಾದ ನಂಟು ಇಲ್ಲವೆಂಬುದು ಗೊತ್ತಾಗುತ್ತದೆ.

ಕಳೆದ ಒಂದೆರಡು ದಶಕಗಳಿಗೆ ಹೋಲಿಸಿದರೆ ಕನ್ನಡ ನುಡಿಯು ಸಾರ್ವಜನಿಕ ವಲಯಗಳಲ್ಲಿ ಹೆಚ್ಚು ಹೆಚ್ಚು ಕಾಣಿಸುತ್ತಿದೆ; ಕೇಳಿಸುತ್ತಿದೆ. ಇದಕ್ಕೆ ಮಾರುಕಟ್ಟೆಯ ರೀತಿನೀತಿಗಳು ಮತ್ತು ತಂತ್ರಜ್ಞಾನದ ಬೆಳವಣಿಗೆಗಳು ಕಾರಣವಾಗಿವೆ. ಮಾರುಕಟ್ಟೆಯು ಯೋಜಿತವಾಗಿ ತನ್ನ ಗ್ರಾಹಕ ವಲಯದ ವಿಸ್ತರಣೆಗಾಗಿ ಕನ್ನಡ ನುಡಿಯನ್ನು ಬಳಸಿಕೊಳ್ಳುತ್ತಿದೆ. ಕನ್ನಡದ ಬಳಕೆಗಾಗಿ ಒತ್ತಡ ಹೇರುವ ಗುಂಪುಗಳು ತಮ್ಮ ಒತ್ತಾಯದಿಂದ ಮಾರುಕಟ್ಟೆಯ ವರ್ತನೆಯಲ್ಲಿ ಬದಲಾವಣೆ ಆಗಿದೆ ಎಂದು ವಾದಿಸುತ್ತವೆ. ಈ ಒತ್ತಾಯಗಳ ಜೊತೆಗೆ ಗ್ರಾಹಕರ ವಲಯಗಳಲ್ಲಿ ಕನ್ನಡದ ಜೊತೆಗೆ ಇನ್ನೊಂದು ನುಡಿಯನ್ನು ಬಲ್ಲವರ ಸಂಖ್ಯೆ ಮೊದಲಿಗಿಂತ ಕಡಿಮೆಯಾಗಿ ಕನ್ನಡವನ್ನಷ್ಟೇ ಬಲ್ಲವರು ಹೆಚ್ಚಾಗುತ್ತಿರುವುದರಿಂದ, ಅವರನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲು ಕನ್ನಡವನ್ನು ಹೆಚ್ಚು ಬಳಸುವುದು ಮಾರುಕಟ್ಟೆಗೆ ಅಗತ್ಯವಾಗಿದೆ. ಇದನ್ನು ಜಾರಿಗೆ ಕೊಡುವಾಗ ಇಂಗ್ಲಿಷನ್ನು ಬಿಟ್ಟುಕೊಡದೆ ಅದರ ಜೊತೆಗೆ ಕನ್ನಡವನ್ನು ಬಳಸುವ ತಂತ್ರವನ್ನು ಬಳಸಲಾಗುತ್ತಿದೆ. ಇದರ ಪರಿಣಾಮದಿಂದ ಕನ್ನಡಕ್ಕೆ ಜಾಗ ಸಿಕ್ಕಿದಂತಾಯಿತೇ ಹೊರತು, ಕನ್ನಡವು ಏನನ್ನಾದರೂ ನಿರ್ದೇಶಿಸುವ ಬಲವನ್ನು ಪಡೆದುಕೊಂಡಿದೆಯೇ ಎಂಬುದನ್ನು ಮತ್ತಷ್ಟು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ. ಗ್ರಾಹಕ ಸೇವೆಗಾಗಿ ಮೀಸಲಾದ ಫೋನ್‌ ವ್ಯವಸ್ಥೆಯಲ್ಲಿ ಇಂಗ್ಲಿಶ್‌ ಜೊತೆಗೆ ಕನ್ನಡವನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ನೋಡಿದರೆ ಇದು ಗೊತ್ತಾಗುತ್ತದೆ. ಕನ್ನಡಕ್ಕೆ ಜಾಗ ಇದೆ. ಇದು ಪರಿಹಾರವನ್ನು ಪಡೆದುಕೊಳ್ಳಲು ನೆರವನ್ನು ನೀಡುತ್ತದೆ. ಆದರೆ ಮಾರುಕಟ್ಟೆಯ ಮೇಲೆ ಕನ್ನಡ ನುಡಿಯೇ ನೇರವಾಗಿ ಯಾವ ಪ್ರಭಾವವನ್ನೂ ಬೀರಲಾರದು.

ಇನ್ನು ತಂತ್ರಜ್ಞಾನವು ಯೋಜಿತವಲ್ಲದ ಬಗೆಯಲ್ಲಿ ಕನ್ನಡ ಕಾಣುವ ಮತ್ತು ಕೇಳುವ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಈಗ ಕನ್ನಡ ಬಳಕೆಗೆ ಮೊದಲಿಗಿಂತ ಹೆಚ್ಚಾಗಿ ಅನುವನ್ನು ಮಾಡಿಕೊಟ್ಟಿವೆ. ಯೂನಿಕೋಡ್‌ ಅಳವಡಿಕೆಯಿಂದಾಗಿ ಯಾವುದೇ ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್‌ ಫೋನ್‌ನಲ್ಲಿ ಕೂಡಾ ಸಲೀಸಾಗಿ ಯಾವುದೇ ಅಡೆತಡೆಗಳಿಲ್ಲದೆ (ಸೀಮ್‌ಲೆಸ್‌) ಕನ್ನಡದ ಹರಿವು ಸಾಧ್ಯವಾಗಿದೆ. ಫೇಸ್‌ಬುಕ್‌, ಟ್ಟಿಟರ್‌,‌ ಇನ್‌ಸ್ಟಾಗ್ರಾಮ್ ಮುಂತಾದ ವೇದಿಕೆಗಳಲ್ಲೂ ಕನ್ನಡವನ್ನು ಕಾಣುವುದು ಸುಲಭವಾಗಿದೆ. ಇಲ್ಲೆಲ್ಲಾ ಕನ್ನಡವನ್ನು ತುಂಬುತ್ತಿರುವವರ ಪ್ರಮಾಣವೂ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗುತ್ತಲೇ ಹೋಗುತ್ತಿದೆ. ಇವೆಲ್ಲವೂ ಒಂದು ಯೋಜನೆಗೆ ಅನುಗುಣವಾಗಿ ನಡೆಯುತ್ತಿರುವ ಚಟುವಟಿಕೆಗಳಲ್ಲ. ತಂತ್ರಜ್ಞಾನ ಹುಟ್ಟುಹಾಕಿದ ತೆರಪನ್ನು ತುಂಬಲು ತಂತಾನೇ ನಡೆಯುತ್ತಿರುವ ಚಟುವಟಿಕೆಗಳು.

ಇದಲ್ಲದೆ ಕೇಳುವ ಕನ್ನಡದ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯೂಟ್ಯೂಬ್‌ ಮೊದಲಾಗಿ ಹಲವು ವೇದಿಕೆಗಳಲ್ಲಿ ಬಗೆಬಗೆಯಲ್ಲಿ ಕನ್ನಡ ಕೇಳಲು ಸಿಗುತ್ತಿದೆ. ಮಾಹಿತಿ, ಮನರಂಜನೆ, ತಿಳಿವಳಿಕೆ, ವಾಗ್ವಾದಗಳು ಇವೇ ಮುಂತಾದ ವಲಯಗಳಲ್ಲಿ ಗಂಟೆಗಟ್ಟಲೆ ಕನ್ನಡ ಸೇರ್ಪಡೆಯಾಗುತ್ತಲೇ ಇದೆ. ಇದಲ್ಲದೆ ಒಂದೆರಡು ವರ್ಷಗಳಿಂದ ಬೇರೆ ನುಡಿಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್‌ ಮಾಡಲು ಅನುವು ದೊರೆತ ಮೇಲಂತೂ ನೆರೆಯ ನಾಡುಗಳ ನುಡಿಯ ಸಿನಿಮಾಗಳು, ಕೆಲವು ಅನ್ಯ ನುಡಿಯ ದೃಶ್ಯ ಸರಣಿಗಳು ಕನ್ನಡ ದನಿಯಲ್ಲಿ ಕೇಳಲು ಒದಗುತ್ತಿವೆ. ಮೊದಲೂ ಇಂತಹ ಪ್ರಯತ್ನಗಳು ನಡೆಯುತ್ತಿದ್ದವು. ಆದರೂ ಈಗಣ ಪ್ರಯತ್ನಗಳು ಹೆಚ್ಚು ತರಬೇತಿ ಪಡೆದವರ ಮೂಲಕ ನಡೆಯುತ್ತಿದೆ. ಗೂಗಲ್‌ ಟ್ರಾನ್ಸ್‌ಲೇಟ್‌ ಒದಗಿಸಿರುವ ಸೌಲಭ್ಯದಿಂದ ಇದೆಲ್ಲವೂ ಹೆಚ್ಚು ವೇಗವಾಗಿ ನಡೆಯುವುದು ಸಾಧ್ಯವಾಗುತ್ತಿದೆ. ಗೂಗಲ್‌ ಟ್ರಾನ್ಸ್‌ಲೇಟ್‌ ಅನ್ನು ಎಷ್ಟೇ ಗೇಲಿ ಮಾಡಿದರೂ ಅದಕ್ಕಾಗಿ ಸಿದ್ಧಪಡಿಸಿರುವ ಚೌಕಟ್ಟು ದಿನೇದಿನೇ ಪರಿಷ್ಕಾರಗೊಳ್ಳುತ್ತಲೇ ಇದೆ. ಈ ನೆಲೆಯ ಪ್ರಯತ್ನಗಳೆಲ್ಲ ಯೋಜಿತ ಮತ್ತು ನಿಯಂತ್ರಿತ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಗೂಗಲ್‌ ಮೊದಲಾದ ಸರ್ಚ್‌ ಎಂಜಿನ್‌ಗಳು ಕನ್ನಡದ ಮೂಲಕ ಹುಡುಕಲು ಅವಕಾಶ ನೀಡುತ್ತವೆ. ಯೂಟ್ಯೂಬ್‌ ಕೂಡಾ ಈ ಅವಕಾಶವನ್ನು ಒದಗಿಸಿದೆ. ಆದರೆ ಅದರ ಮೂಲಕ ನಮಗೆ ದೊರಕುವ ಮಾಹಿತಿ ಮಾತ್ರ ನಮ್ಮ ನಿಯಂತ್ರಣದಿಂದ ಹೊರಗಿರುವ ಅಲ್ಗಾರಿದಂನಿಂದ ನಿರ್ದೇಶಿತವಾಗುತ್ತದೆ.

ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಬೇಕಾಗಿರುವ ಪದನೆರಿಕೆಯನ್ನು (ಕಾರ್ಪಸ್)‌ ಬೆಳೆಸಲು ಚಾಲನೆಗೆ ಕೊಟ್ಟಿರುವ ವ್ಯವಸ್ಥೆಯು, ಕನ್ನಡದ ಎಲ್ಲ ಒಳನುಡಿಗಳಿಗೂ ತೆರೆದುಕೊಂಡಿರುವ ಸಾಧ್ಯತೆಗಳು ಕಡಿಮೆ ಎಂದು ತೋರುತ್ತದೆ. ಬಳಕೆಯ ಕನ್ನಡದ ಎಲ್ಲ ಮಾದರಿಗಳಿಂದ ಪದಗಳು, ಪದ ಸಂಯೋಜನೆಗಳು, ಪದಸಂಸರ್ಗಗಳು ಅದಕ್ಕೆ ಸೇರ್ಪಡೆಯಾಗುತ್ತಿಲ್ಲ. ಒಂದು ಗೊತ್ತಾದ ಮಾದರಿಯ (ಹಲವರು ಶುದ್ಧ‌ ಮತ್ತು ಶಿಷ್ಟ ಎಂದು ಪ್ರತಿಪಾದಿಸುವ) ಕನ್ನಡಕ್ಕೆ ಮಾತ್ರ ಅದು ತೆರೆದುಕೊಂಡಂತೆ ತೋರುತ್ತದೆ. ಸಿನಿಮಾಗಳನ್ನು ಡಬ್‌ ಮಾಡುವಾಗ ಮೂಲದ ಮಾತುಗಳನ್ನು ಕನ್ನಡಕ್ಕೆ ಅನುವಾದಿಸುವವರು ಮತ್ತು ಅದನ್ನು ನುಡಿಯುವವರು ಕನ್ನಡದ ಸಾಧ್ಯತೆಗಳೆಲ್ಲಕ್ಕೂ ಇನ್ನೂ ತೆರೆದುಕೊಂಡಿಲ್ಲ. ಒಂದೋ ಇದು ಅನುವಾದಕರ ಮಿತಿ ಇಲ್ಲವೇ ಮಾತುಗಳನ್ನು ನುಡಿಯುವವರ ಮಿತಿ ಎಂಬಂತಿದೆ. ಇದು ಹೆಚ್ಚು ಪರಿಷ್ಕಾರಗೊಳ್ಳಲು ಅವಕಾಶಗಳಿವೆ.

ಕಾಣುವ ಕನ್ನಡ ಮತ್ತು ಕೇಳುವ ಕನ್ನಡ ಹೀಗೆ ವಿಸ್ತಾರವನ್ನು ಪಡೆದುಕೊಳ್ಳುತ್ತಿರುವಾಗಲೇ ಗಮನಿಸಬೇಕಾದ ಸಂಗತಿ ಒಂದಿದೆ. ಅದೆಂದರೆ ಈ ಕನ್ನಡಗಳಿಗೆ ಜೀವಾವಧಿ ಅಷ್ಟೇ ತೀವ್ರವಾಗಿ ಕಡಿಮೆಯಾಗುತ್ತಿದೆ. ಮಿಂಚಿ ಮರೆಯಾಗುವಂತೆ ಈ ಕನ್ನಡಗಳು ಆಯಾ ಹೊತ್ತಿನ ಆಚೆಗೆ ಉಳಿದುಕೊಳ್ಳುವ, ದೊರಕುವ ಅವಕಾಶಗಳು ಕಡಿಮೆಯಾಗುತ್ತಿವೆ. ಈ ಕನ್ನಡವನ್ನು ಕಾಣುತ್ತಿರುವವರು ಮತ್ತು ಕೇಳುತ್ತಿರುವವರರು ಯಾರೂ ಈ ‘ನಶ್ವರತೆ’ಗೆ ತಲೆಕಡೆಸಿಕೊಳ್ಳುತ್ತಿಲ್ಲ. ಈ ಪ್ರಮಾಣದ ಕನ್ನಡವನ್ನು ಸೃಷ್ಟಿಸುತ್ತಿರುವವರಿಗೆ ತಮ್ಮ ಸೃಷ್ಟಿಯ ಮೇಲಿನ ಹಕ್ಕುಗಳನ್ನು ಸಾಧಿಸುವ ಇರಾದೆಯಾಗಲೀ ಅವಕಾಶವಾಗಲೀ ಇಲ್ಲವಾಗಿದೆ.

ಈ ಪರಿಸ್ಥಿತಿಯಲ್ಲಿ ಹೀಗೆ ಕನ್ನಡದ ಬಳಕೆಯ ಹೆಚ್ಚಳವಾಗುತ್ತಿರುವುದು ಕನ್ನಡವನ್ನು ಬಲಗೊಳಿಸುತ್ತಿದೆಯೇ? ಕನ್ನಡ ನುಡಿಯನ್ನು ಆಡುವವರಿಗೆ ವಿಶೇಷ ಕಸುವನ್ನು ತುಂಬುತ್ತಿದೆಯೇ? ಕನ್ನಡ ನುಡಿಯನ್ನು ಆಡುವವರು ಇದರಿಂದ ನಿರಾಳತೆಯನ್ನು ಅನುಭವಿಸುವಂತೆ ತೋರುತ್ತಿಲ್ಲ. ಹಾಗಿದ್ದಲ್ಲಿ ಆತಂಕಕ್ಕೆ ಬೇರೆ ನೆಲೆಗಳು ಇವೆಯೆಂದು ತೋರುತ್ತದೆ. ಈಗ ಮೊದಲಿಗಿಂತಲೂ ಹೆಚ್ಚಾಗಿ ಚರ್ಚೆಗೆ ಬರುತ್ತಿರುವ ವಿಷಯಗಳು ಎರಡು 1. ಕನ್ನಡಕ್ಕೆ ಇತರ ನುಡಿಗಳಿಂದ ಇರುವ ಅಪಾಯಗಳು 2. ಕನ್ನಡಿಗರಿಗೆ ದುಡಿಯುವ ಅವಕಾಶಗಳು ಕುಗ್ಗುತ್ತಿರುವುದು. ಇವೆರಡೂ ಮೇಲುನೋಟಕ್ಕೆ ಬೇರೆ ಬೇರೆ ಸಂಗತಿಗಳೆಂದು ತೋರಿದರೂ ಒಳಪದರದಲ್ಲಿ ಇವುಗಳ ನಡುವೆ ನಂಟು ಇದೆ. ಕೆಲವು ದಶಕಗಳವರೆಗೆ ಕನ್ನಡ ನುಡಿಯು ಸಂಸ್ಕೃತ ಮತ್ತು ಇಂಗ್ಲಿಷ್‌ ನುಡಿಗಳೊಡನೆ ಪೈಪೋಟಿ ನಡೆಸಬೇಕಿದೆ ಎಂಬ ನಿಲುವುಗಳು ಪ್ರಬಲವಾಗಿದ್ದವು. ಸಂಸ್ಕೃತವು ಕನ್ನಡಿಗರ ದುಡಿಯುವ ಅವಕಾಶಗಳನ್ನು ಕುಗ್ಗಿಸುವ ನುಡಿಯಲ್ಲ. ಆದರೆ ಇಂಗ್ಲಿಷ್‌ ಕನ್ನಡಿಗರಿಗೆ ದುಡಿಯುವ ಅವಕಾಶಗಳನ್ನು ಹೆಚ್ಚಿಸುವ ನುಡಿ ಎಂಬ ನಂಬಿಕೆ ಬಹಳ ಗಾಢವಾಗಿ ಜನರಲ್ಲಿ ಬೇರೂರಿದೆ. ಮತ್ತು ಅದನ್ನು ದೃಢಪಡಿಸುವ ನಡೆಗಳು ಹಲವು ವಲಯಗಳಲ್ಲಿ ಕಂಡುಬಂದಿವೆ.

ಈಚಿನ ದಿವಸಗಳಲ್ಲಿ ಹಿಂದಿಯು ಕನ್ನಡಿಗರ ದುಡಿಯುವ ಅವಕಾಶಗಳನ್ನು ಹೆಚ್ಚಿಸುವುದಕ್ಕಿಂತ ಕಸಿದುಕೊಳ್ಳುವ ನೆಲೆಯನ್ನು ಹುಟ್ಟುಹಾಕಿದೆ ಎಂಬ ನಿಲುವುಗಳು ಮಂಡಿತವಾಗುತ್ತಿವೆ. ಯಾವುದೇ ನುಡಿಗೆ ಅವಕಾಶಗಳನ್ನು ಸೃಷ್ಟಿಸುವ ಇಲ್ಲವೇ ಕಸಿದುಕೊಳ್ಳುವ ಕಸುವು ತನ್ನಿಂದ ತಾನೇ ಇರುವುದಿಲ್ಲ. ಸಂಸ್ಕೃತ ಮತ್ತು ಇಂಗ್ಲಿಷ್‌ ನುಡಿಗಳನ್ನು ಮೊದಲ ನುಡಿಗಳನ್ನಾಗಿ ಆಡುವವರು ಕನ್ನಡಕ್ಕೆ ಎಂದೂ ಸವಾಲಾಗಿ ಇರಲಿಲ್ಲ. ಆದರೆ, ಈಗ ಹಿಂದಿ ನುಡಿಯನ್ನು ಆಡುವವರ ಪರವಾಗಿ ರಾಜಕೀಯ ಒತ್ತಾಸೆಗಳು ಬಲವಾಗುತ್ತಿರುವುದರಿಂದ ಒಂದೋ ಕನ್ನಡಿಗರು ಹಿಂದಿಯ ಮೂಲಕ ದುಡಿಯುವ ಅವಕಾಶಗಳನ್ನು ಪಡೆದುಕೊಳ್ಳಬೇಕು ಇಲ್ಲವೇ ಹಿಂದಿ ಮಾತನಾಡುವವರಿಗೆ ತಮ್ಮ ಅವಕಾಶಗಳನ್ನು ಬಿಟ್ಟುಕೊಡಬೇಕು ಎಂಬ ನೆಲೆಗೆ ದಾಟುತ್ತಿದ್ದೇವೆ. ಅಥವಾ ಹಾಗಾಗುತ್ತದೆಂದು ಕನ್ನಡಿಗರು ಒಪ್ಪುವಂತೆ ಮಾಡಲಾಗುತ್ತಿದೆ.

ಕೊಂಚ ಈ ಪರಿಸ್ಥಿತಿಯನ್ನು ಬೇರೆಬೇರೆ ನೆಲೆಗಳಲ್ಲಿ ನೋಡೋಣ. ಕಳೆದ ಒಂದೆರಡು ದಶಕಗಳಲ್ಲಿ ಕನ್ನಡ ನುಡಿಯನ್ನು ಆಡುವವರಿಗೆ ದುಡಿಯುವ ಅವಕಾಶಗಳು ದೊರಕುತ್ತಿರುವ ಬಗೆಯಲ್ಲಿ ಬದಲಾವಣೆಗಳಾಗಿವೆ. ಕಲಿತು ಉದ್ಯೋಗಗಳನ್ನು ಹಿಡಿದು ನಿಯತವಾಗಿ ದುಡಿಯುತ್ತಿರುವವರು ಒಂದು ಕಡೆ. ಕಲಿತರೂ ನಿಯತವಾದ ಆದಾಯವಿಲ್ಲದೆ ದುಡಿಯುತ್ತಿರುವವರು ಇನ್ನೊಂದು ಕಡೆ. ಕಲಿಕೆಯಿಂದ ವಂಚಿತರಾಗಿದ್ದರೂ ಬದುಕಿನ ನಿರ್ವಹಣೆಗಾಗಿ ದೈಹಿಕ ಶ್ರಮದ ದುಡಿಮೆಯಲ್ಲಿ ತೊಡಗಿರುವವರು ಮತ್ತೊಂದು ಕಡೆ. ಈ ಮೂರೂ ಗುಂಪುಗಳವರು ಬೇರೊಂದು ನುಡಿಯನ್ನು ಆಡುವವರೊಡನೆ ಪೈಪೋಟಿಯನ್ನು ಎದುರಿಸುತ್ತಲೇ ಇದ್ದಾರೆ. ಖಾಸಗೀ ವಲಯದಲ್ಲಿ ಈ ಪೈಪೋಟಿ ಹೆಚ್ಚು; ಸರ್ಕಾರಿ ವಲಯದಲ್ಲಿ ಕಡಿಮೆ. ಏನೇ ಇರಲಿ ಆಯಾ ದುಡಿಯುವ ವಲಯದಲ್ಲಿ ಕನ್ನಡ ನುಡಿಯ ಬಳಕೆ ಎಂಬುದು ಕನಿಷ್ಠ ಪ್ರಮಾಣದಲ್ಲಿರುತ್ತದೆ; ಕೆಲವೊಮ್ಮೆ ಇರುವುದೇ ಇಲ್ಲ. ಅದರಲ್ಲೂ ಅನಿಯತ ಆದಾಯದ ವಲಯದಲ್ಲಿ, ವಲಸೆ ಬಂದ ಅನ್ಯ ನುಡಿಯನ್ನು ಆಡುವವರು ಬಗೆಬಗೆಯ ಸವಾಲುಗಳನ್ನು ಒಡ್ಡುತ್ತಿದ್ದಾರೆ. ದುಡಿಮೆಯ ಮಾರುಕಟ್ಟೆಯ ನಿಯಮಗಳು ಕೆಲವೊಮ್ಮೆ ಕನ್ನಡ ನುಡಿಯನ್ನು ಆಡುವವರಿಗೆ ಪೂರಕವಾಗಿ ನಿಲ್ಲುವುದಿಲ್ಲ. ವಲಸೆಗಾರರು ಈಗ ಬೆಂಗಳೂರಿನಂತಹ ಮಹಾನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಡಿನ ಹಲವು ಕಡೆಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಹರಡಿಕೊಂಡಿದ್ದಾರೆ. ಸರ್ಕಾರವು ಕೈಗೊಳ್ಳುವ ಯಾವುದೇ ನಿರ್ಧಾರವವೂ ಕನ್ನಡಿಗರಿಗೆ ಅವಕಾಶವನ್ನು ಹೆಚ್ಚಿಸಲು ಸಮರ್ಥವಾಗುವುದಿಲ್ಲ. ಮಾರುಕಟ್ಟೆಯ ಪ್ರವೃತ್ತಿಗಳು ಆ ನಿರ್ಧಾರಗಳು ಜಾರಿಯಾಗದಂತೆ ಅಡ್ಡಿಗಳನ್ನು ಒಡ್ಡುತ್ತಲೇ ಇರುತ್ತವೆ. ಹಾಗಾಗಿ ಕನ್ನಡವು ಅನ್ನದ (ರೊಟ್ಟಿಯ ಇಲ್ಲವೇ ಅಂಬಲಿಯ) ನುಡಿಯಾಗಬೇಕು ಎನ್ನುವುದು ಒಂದು ಹೇಳಿಕೆಯಾಗಿ ನಿಲ್ಲುವುದೇ ಹೊರತು ಸದ್ಯದ ಚಿತ್ರವನ್ನು ತಿದ್ದಲಾರದು.

ಇದು ಹತಾಶೆಯ ಮಾತಲ್ಲ. ಇದಕ್ಕೆ ಮಾರುಕಟ್ಟೆಯ ಶಕ್ತಿಗಳು ಮಾತ್ರ ಕಾರಣವಲ್ಲ. ನಾವು ಒಪ್ಪಿಕೊಂಡ ಆಡಳಿತ ಕ್ರಮದಲ್ಲೇ ನೆಲೆಗೊಂಡಿರುವ ಅಖಿಲ ಭಾರತ ಸೇವೆಗಳ ವ್ಯವಸ್ಥೆ ಇದೆ. ಇದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೈಕೋರ್ಟ್‌ಗಳಿಗೆ ದೇಶದ ಯಾವ ಮೂಲೆಯಿಂದಲಾದರೂ ನ್ಯಾಯಮೂರ್ತಿಗಳು ನೇಮಕಗೊಳ್ಳಲು ಇರುವ ಸಾಧ್ಯತೆ ಇದೆ. ಇವೆಲ್ಲವೂ ಕನ್ನಡ ನುಡಿಯನ್ನು ಆಡುವವರ ಬದುಕನ್ನು ನಿಯಂತ್ರಿಸುವ ನೆಲೆಯಲ್ಲಿವೆ. ಇದೆಲ್ಲದರ ಜೊತೆಗೆ ಈಗ ರಾಷ್ಟ್ರವ್ಯಾಪಿಯಾಗಿ ಒಂದೇ ಚೌಕಟ್ಟಿನಲ್ಲಿ ಪರೀಕ್ಷೆಗಳನ್ನು ನಡೆಸಿ ಆಯ್ಕೆಗಳನ್ನು ಮಾಡುವ ಹಲವು ಪದ್ಧತಿಗಳು ಜಾರಿಗೆ ಬಂದಿರುವುದರಿಂದ ಈ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಇದು ಕನ್ನಡ ನುಡಿಯ ಆತಂಕವಲ್ಲ; ಕನ್ನಡ ನುಡಿಯನ್ನು ಆಡುವವರು, ಅದರಲ್ಲೂ ಬದುಕುವ ದಾರಿಗಾಗಿ ತಮ್ಮ ನಾಡಿನ ಗಡಿಗಳನ್ನು ದಾಟಲಾಗದವರು ಎದುರಿಸುತ್ತಿರುವ ಬಿಕ್ಕಟ್ಟು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಕೊಡಲು ಉತ್ಸುಕರಾಗಿರುವವರು ಕನ್ನಡ ನುಡಿಯು ಹಿಂದೆಂದೂ ಇಲ್ಲದಷ್ಟು ಅವಕಾಶಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಕಲಿಕೆಯ ಮೊದಲ ಹಂತದಿಂದ ಹಿಡಿದು ಅತ್ಯುನ್ನತ ಹಂತದವರೆಗೂ ಕನ್ನಡದ ಮೂಲಕ ಕಲಿಯುವ ಅವಕಾಶ ದೊರೆಯಲಿದೆ ಎನ್ನಲಾಗಿದೆ. ಇದು ನಿಜವಾದರೆ ಮುಂದಿನ ಎರಡು ದಶಕಗಳಲ್ಲಿ ಚಿತ್ರವೇ ಬದಲಾಗಬೇಕು. ಆದರೆ ವಾಸ್ತವವು ಬೇರೆಯೇ ಆಗಲಿದೆ. ಕನ್ನಡವನ್ನು ಕಲಿಯುವುದು ಮತ್ತು ಕನ್ನಡದ ಮೂಲಕ ಕಲಿಯುವುದು ಇವೆರಡೂ ಬೇರೆ ಬೇರೆ ಬಗೆಯಲ್ಲಿ ಪರೀಕ್ಷೆಗೆ ಒಳಗಾಗಲಿವೆ. ಹಿಂದೆ ಹೇಳಿದಂತೆ ಕಲಿಯುವವರು, ಅದರಲ್ಲೂ ಉನ್ನತ ಹಂತದ ಕಲಿಕೆಗೆ ಬರುವವರು, ಕನ್ನಡ ನುಡಿಯನ್ನು ಆಡುವವರು ಮಾತ್ರವೇ ಆಗಿರುವುದಿಲ್ಲ. ಬೇರೆ ಬೇರೆ ನುಡಿಗಳನ್ನಾಡುವವರೂ ಇರುತ್ತಾರೆ. ಅವರು ಕರ್ನಾಟಕದಲ್ಲಿ ಇರುವವರಾಗಿರಬಹುದು ಇಲ್ಲವೇ ಕಲಿಕೆಗಾಗಿಯೇ ಹೊರ ನಾಡುಗಳಿಂದ ಬಂದವರಾಗಿರಬಹುದು. ಅವರಿಗೆ ಕನ್ನಡವನ್ನು ಕಲಿಸುವ ನಡೆಯು ನ್ಯಾಯಾಂಗದ ಸಮ್ಮತಿಯನ್ನು ಪಡೆಯಲು ಆಗಿಲ್ಲ. ಪದವಿ ತರಗತಿಗಳಲ್ಲಿ ಹೀಗೆ ಕನ್ನಡವನ್ನು ಕಲಿಸಲು ಹೊರಟದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದವರು ಕನ್ನಡ ನುಡಿಯನ್ನು ಆಡುವವರೇ ಆಗಿದ್ದಾರೆ. ತಮ್ಮ ದುಡಿಯುವ ಅವಕಾಶಗಳಿಗೆ ಕನ್ನಡವು ಕುತ್ತು ತರಲಿದೆ ಎನ್ನುವುದು ಅವರ ತಕರಾರು. ನ್ಯಾಯಾಂಗವು ಸಂವಿಧಾನದಲ್ಲಿ ಅಡಕವಾಗಿರುವ ಅವಕಾಶವನ್ನು ಬಳಸಿ ಕನ್ನಡವನ್ನು ನುಡಿಯನ್ನಾಗಿ ಕಲಿಸುವ ನಡೆಗೆ ತಡೆಯನ್ನು ನೀಡಿತು. ಇನ್ನು ಕನ್ನಡದ ಮೂಲಕ ಕಲಿಯುವ ಅವಕಾಶಗಳಿಗೆ ಬೇರೆ ಬಗೆಯಲ್ಲೂ ಅಡ್ಡಿಗಳು ಬರಲಿವೆ. ಕನ್ನಡದ ಮೂಲಕ ಕಲಿಯುವುದು ಒಂದು ಆಯ್ಕೆ ಮಾತ್ರ ಆಗಿರುವುದೆಂದು ಈಚೆಗೆ ವಿವರಣೆಯನ್ನು ನೀಡಲಾಗುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಇಂಗ್ಲಿಷ್‌ ನುಡಿಯ ಕಾರಣವಾಗಿ ಕನ್ನಡಿಗರಿಗೆ ಎದುರಾಗಿದ್ದ ಸವಾಲು ಈಗ ಹಿಂದಿಯ ಮೂಲಕ ತಲೆ ಎತ್ತಲಿದೆ. ಇಂಗ್ಲಿಷ್‌ ನುಡಿಯು ಕನ್ನಡ ನುಡಿಯನ್ನು ಆಡುತ್ತಿದ್ದ ವಿದ್ಯಾರ್ಥಿಗಳಲ್ಲೇ ತಾರತಮ್ಯವನ್ನು ಹುಟ್ಟುಹಾಕುತ್ತಿತ್ತು. ಈಗ ಕನ್ನಡ ಮತ್ತು ಹಿಂದಿ ಮಾತನಾಡುವ ವಿದ್ಯಾರ್ಥಿಗಳ ನಡುವೆ ತಾರತಮ್ಯ ತಲೆ ಎತ್ತುವ ಸಾಧ್ಯತೆಗಳು ಹೆಚ್ಚಾಗಲಿವೆ. ಇದು ಹೇಗಾಗುತ್ತದೆ ಎಂದು ಕಣಿ ಹೇಳುವುದು ಈಗ ಸಾಧ್ಯವಿಲ್ಲ. ಆದರೂ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ನೀತಿಗಳು ಇಂತಹದೊಂದು ಪರಿಸ್ಥಿತಿಗೆ ಕಾರಣವಾದರೆ ಅಚ್ಚರಿ ಪಡಬೇಕಾಗಿಲ್ಲ.

ಒಟ್ಟಾರೆ ಇಂದಿನ ಆತಂಕಗಳು ಕನ್ನಡ ನುಡಿಯ ಅಳಿವು ಉಳಿವುಗಳಿಗೆ ಸಂಬಂಧಪಡುವುದಕ್ಕಿಂತ ಹೆಚ್ಚಾಗಿ, ಕನ್ನಡಿಗರ ದುಡಿಯುವ ಅವಕಾಶಗಳು ಸಂಕುಚಿತಗೊಳ್ಳುತ್ತಿರುವುದಕ್ಕೆ ಸಂಬಂಧಿಸಿವೆ. ಅದರಲ್ಲೂ ದೈಹಿಕ ಶ್ರಮದ ದುಡಿಮೆಗಿಂತ ತಜ್ಞತೆಯ ನೆಲೆಯ ದುಡಿಮೆಗಳಿಗೆ ಇದು ಹೆಚ್ಚು ಅನ್ವಯವಾಗಲಿದೆ. ಬರಲಿರುವ ದಿನಗಳು ಈ ಸಂಗತಿಯನ್ನು ದಿಟಗೊಳಿಸಲಿವೆ ಎಂದು ತೋರುತ್ತದೆ. ಇದನ್ನು ಕನ್ನಡಿಗರು ಹೇಗೆ ನಿಭಾಯಿಸಬೇಕಿದೆ ಎಂಬುದು ಬರಲಿರುವ ದಿನಗಳಲ್ಲಿ ಮುಖ್ಯ ಸವಾಲಾಗಲಿದೆ.

(ಲೇಖಕ: ಕನ್ನಡದ ಹಿರಿಯ ವಿದ್ವಾಂಸರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT