ಶುಕ್ರವಾರ, ಸೆಪ್ಟೆಂಬರ್ 30, 2022
26 °C
ತನ್ನ ಶಾಸಕರನ್ನು ಕಳೆದುಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್‌ ಕೊರಗಬೇಕಿಲ್ಲ, ಖುಷಿಪಡಬೇಕಿದೆ

ಅನುರಣನ: ಶಾಸಕರನ್ನು ಖರೀದಿಸುತ್ತಿರುವುದಲ್ಲ, ಕದಿಯುತ್ತಿರುವುದು

ನಾರಾಯಣ ಎ. Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಷೇರು ಮಾರುಕಟ್ಟೆ, ಕೃಷಿ ಮಾರುಕಟ್ಟೆ, ಜಾನುವಾರು ಮಾರುಕಟ್ಟೆ ಇತ್ಯಾದಿಗಳು ಇರುವಂತೆಯೇ ಶಾಸಕರ ಅರ್ಥಾತ್ ಎಂಎಲ್ಎ ಮಾರುಕಟ್ಟೆಯೂ ಇದೆಯಷ್ಟೆ. ವಾಸ್ತವದಲ್ಲಿ ಇದನ್ನು ಮಾರುಕಟ್ಟೆ ಅಂತ ಕರೆಯುವುದು ಸೂಕ್ತವಲ್ಲ. ಆ ವಿಚಾರಕ್ಕೆ ಮತ್ತೆ ಬರೋಣ. ಭಾರತವನ್ನು ವಿಶ್ವಗುರುವಾಗಿಸುವ ಪ್ರಯತ್ನದ ಭಾಗವಾಗಿ ಇತರ ಎಲ್ಲಾ ಮಾರುಕಟ್ಟೆಗಳು ವಿಶೇಷವಾದ ಉತ್ತೇಜನವನ್ನು ಪಡೆಯುತ್ತಿರುವಂತೆಯೇ ವಾರ್ಷಿಕ ಕೋಟಿ ಕೋಟಿ ವಹಿವಾಟು ಇರುವ ಶಾಸಕರ ಮಾರುಕಟ್ಟೆಯ ವ್ಯವಹಾರಗಳು ಕೂಡ ಏಳೆಂಟು ವರ್ಷಗಳಿಂದ ಉಚ್ಛ್ರಾಯ ಸ್ಥಿತಿಯಲ್ಲಿವೆ.

ಈ ಮಾರುಕಟ್ಟೆಯಲ್ಲಿ ಹೋದ ವಾರ ಗೋವಾ ರಾಜ್ಯದ ಎಂಟು ಮಂದಿ ಕಾಂಗ್ರೆಸ್ ಶಾಸಕರ ಸಗಟು ಖರೀದಿ ನಡೆದದ್ದು ಒಂಥರಾ ಕೆಲವು ಉದ್ಯಮಪತಿಗಳು ನಡೆಸುವ ಕಾರ್ಪೊರೇಟ್ ಟೇಕ್ಓವರ್‌ಗಳ ರೀತಿ ದೊಡ್ಡ ಸುದ್ದಿಯಾಗಿ, ಅದರ ಬಗ್ಗೆ ಮಾಧ್ಯಮ ಚರ್ಚೆಗಳು ಇನ್ನೂ ಮುಗಿದಿಲ್ಲ.

ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳನ್ನೇ ಒಂದು ಕ್ಷಣ ಅವಾಕ್ಕಾಗಿಸುವಂತಹ ವ್ಯವಹಾರ ಈ ಶಾಸಕರ ಮಾರುಕಟ್ಟೆಯದ್ದು. ಯಾಕೆಂದರೆ, ಯಾವುದೇ ವಾಣಿಜ್ಯ ವ್ಯವಹಾರವನ್ನು ಮಾರಾಟ ಅಂತ ಕರೆಯಬೇಕಾದರೆ ಅಲ್ಲಿ ಒಬ್ಬ ಮಾರಾಟಗಾರ ಇರಬೇಕು, ಓರ್ವ ಖರೀದಿದಾರ ಇರಬೇಕು ಮತ್ತು ಸರಕುಗಳು ಇರಬೇಕು.

ಈಗ ಈ ಶಾಸಕರ ಸಗಟು ಅಥವಾ ಚಿಲ್ಲರೆ ಮಾರಾಟದ ವಿಷಯಕ್ಕೆ ಬರೋಣ. ಇಲ್ಲಿ ಶಾಸಕರನ್ನು ಖರೀದಿಸುವ ಪಕ್ಷ ಯಾವುದು ಅಂತ ಎಲ್ಲರಿಗೂ ಗೊತ್ತಿರುತ್ತದೆ. ಹಾಗಾಗಿ ಖರೀದಿದಾರ ಯಾರು ಅಂತ ಸ್ಪಷ್ಟವಾಯಿತು. ಸರಕುಗಳು ಯಾವುವು ಅಂತಲೂ ಗೊತ್ತು. ಮಾರಾಟವಾಗುವ ಶಾಸಕರನ್ನು ಸರಕುಗಳು ಅಂತ ಗುರುತಿಸಬಹುದು. ಆದರೆ ಮಾರಾಟ ಮಾಡಿದ್ದು ಯಾರು? ಇಲ್ಲಿ ಮಾರಾಟಗಾರರೇ ಇಲ್ಲವಲ್ಲ.

ಒಂದು ರಾಜಕೀಯ ಪಕ್ಷವು ಇನ್ನೊಂದು ರಾಜಕೀಯ ಪಕ್ಷದ ಶಾಸಕರನ್ನು ಖರೀದಿಸುತ್ತದೆ. ಆದರೆ ಆ ಇನ್ನೊಂದು ರಾಜಕೀಯ ಪಕ್ಷ ತನ್ನ ಶಾಸಕರನ್ನು ಮಾರಿಲ್ಲ. ಒಂದು ರಾಜಕೀಯ ಪಕ್ಷವು ಮಾರದೇ ಇರುವ ಸರಕುಗಳನ್ನು ಇನ್ನೊಂದು ಪಕ್ಷವು ಖರೀದಿಸಿದ್ದು ಹೇಗೆ? ಕಾನೂನು ಪ್ರಕಾರ, ಮತ್ತೊಬ್ಬರಿಗೆ ಸೇರಿದ ಸರಕನ್ನು ಸರಕಿನ ಮಾಲೀಕರ ಸಮ್ಮತಿ ಇಲ್ಲದೆ ಯಾರೋ ತಮ್ಮದಾಗಿಸಿ
ಕೊಂಡಿದ್ದಾರೆ ಎಂದರೆ ಅದು ಕಳ್ಳತನ ಎಂದಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಶಾಸಕರ ಮಾರಾಟದಲ್ಲಿ ನಡೆಯುವುದು ಖರೀದಿಯಲ್ಲ, ಇದು ಅಪ್ಪಟ ಕಳ್ಳತನ. ಆದರೆ, ಇದು ದುಡ್ಡು ನೀಡಿ ಕದಿಯಬೇಕಾದ ವಿಲಕ್ಷಣ ಕಳ್ಳತನ. ಹಾಗಾಗಿ ಶಾಸಕರ ಮಾರುಕಟ್ಟೆಯಲ್ಲಿ ನಡೆಯುವ ಯಾವತ್ತೂ ವ್ಯವಹಾರವನ್ನು ಪಕ್ಷಾಂತರ ಅಂತ ಕರೆಯುವುದಾಗಲೀ ಶಾಸಕರ ಖರೀದಿ ಅಂತ ಕರೆಯುವುದಾಗಲೀ ಮಾಡಿದರೆ ಅದು ವಸ್ತುಸ್ಥಿತಿಯನ್ನು ತಪ್ಪಾಗಿ ವ್ಯಾಖ್ಯಾನಿಸಿದ ಹಾಗೆ ಆಗುತ್ತದೆ.

ಸರಿಯಾದ ಪದಪ್ರಯೋಗ ಮಾಡಿ ಹೇಳುವುದಾದರೆ, ಎಂಟು ವರ್ಷಗಳಿಂದ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಶಾಸಕರನ್ನು ಕದಿಯುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ. ಇದು ಭಾರತದ ಹೊಸ ರಾಜಕೀಯ ಸಂಸ್ಕೃತಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು, ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ ಅಂತ ಹೇಳುವವರು ಮಾಡುತ್ತಿರುವ ಅರ್ವಾಚೀನ ರಾಜಕೀಯ.

ಶಾಸಕರು ತಮ್ಮನ್ನು ತಾವೇ ಮಾರಿಕೊಳ್ಳುತ್ತಿರುವ ವ್ಯವಹಾರ ಇದಾಗಿರುವುದರಿಂದ ಇಲ್ಲಿ ಮಾರಾಟಗಾರರೇ ಇಲ್ಲ ಎಂದು ಹೇಗೆ ಹೇಳುವುದು ಅಂತ ಕೆಲವರು ಸವಾಲು ಹಾಕಬಹುದು. ಅದಕ್ಕೆ ಹೀಗೆ ಉತ್ತರಿಸಬಹುದು. ಯಾವುದೇ ಸರಕು ತನ್ನನ್ನು ತಾನೇ ಮಾರಿಕೊಳ್ಳಲು ಆಗುವುದಿಲ್ಲ. ತನ್ನನ್ನು ತಾನೇ ಮಾರಿಕೊಳ್ಳಲು ಸಾಧ್ಯ ಅಂತ ಒಪ್ಪಿಕೊಂಡರೂ, ಇಲ್ಲಿ ಶಾಸಕರು ಅರ್ಥಾತ್ ಚುನಾಯಿತ ಪ್ರತಿನಿಧಿಗಳು ಎಂದರೆ ಅವರು ಸ್ವತಂತ್ರ ಸರಕುಗಳಲ್ಲ. ಅವರು ಯಾವ ಪಕ್ಷದ ಅಭ್ಯರ್ಥಿಗಳಾಗಿ ಚುನಾವಣೆ ಗೆದ್ದರೋ ಆ ಪಕ್ಷದ ಸ್ವಾಮಿತ್ವಕ್ಕೆ ಸೇರಿದವರು. ಅದೇ ವೇಳೆ ಅವರನ್ನು ಒಂದು ಪಕ್ಷದ ಅಭ್ಯರ್ಥಿಗಳು ಅಂತ ಗುರುತಿಸಿ ಮತ ನೀಡಿದ ಮತದಾರರ ಸ್ವಾಮಿತ್ವಕ್ಕೆ ಸೇರಿದವರು. ಆದುದರಿಂದ ಪ್ರಜಾತಂತ್ರ ರಾಜಕೀಯದ ಸೂಕ್ಷ್ಮ ನಿಯಮಗಳನ್ನು ಅನ್ವಯಿಸಿ ವಿಶ್ಲೇಷಣೆ ಮಾಡಿದ್ದೇ ಆದಲ್ಲಿ, ಯಾವುದೇ ಪಕ್ಷದ ಚುನಾಯಿತ ಸದಸ್ಯ ಏಕ
ಕಾಲಕ್ಕೆ ಆ ಪಕ್ಷದ ಮತ್ತು ಚುನಾಯಿಸಿದ ಮತದಾರರ ಸಂಯುಕ್ತ ಸ್ವಾಮಿತ್ವಕ್ಕೆ ಸೇರಿದವರಾಗಿರುತ್ತಾರೆ. ಈ ಈರ್ವರು ಸ್ವಾಮಿತ್ವದಾರರ ಅನುಮತಿ ಇಲ್ಲದೆ ಇವರನ್ನು ಇನ್ನೊಂದು ಪಕ್ಷ ತನ್ನದಾಗಿಸಿಕೊಳ್ಳುವ ಪ್ರಕ್ರಿಯೆಯನ್ನು ಕಳ್ಳತನ ಎನ್ನದೆ ವಿಧಿಯಿಲ್ಲ.

ಇವು ಶಾಸಕರ ಮಾರುಕಟ್ಟೆಗೆ ಸಂಬಂಧಿಸಿದ ವಾಣಿಜ್ಯ ಶಾಸ್ತ್ರೀಯ ಮತ್ತು ಪ್ರಜಾತಾಂತ್ರಿಕ ಆಯಾಮಗಳಾದರೆ, ಇದರ ರಾಜಕೀಯ ಆಯಾಮವನ್ನು ಕೂಡಾ ಸ್ವಲ್ಪ ಭಿನ್ನವಾಗಿ ನೋಡುವ ಅಗತ್ಯವಿದೆ.

ಸದ್ಯ ದೇಶದ ಶಾಸಕರ ಮಾರುಕಟ್ಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಶಾಸಕರ ಖರೀದಿ ಭರ್ಜರಿಯಾಗಿ ನಡೆಯುತ್ತಿರುವುದರಿಂದ ಆ ಪಕ್ಷಕ್ಕೆ ಭಾರಿ ಹಿನ್ನಡೆ ಆಗುತ್ತಿದೆ ಎನ್ನುವಂತಹ ಅಭಿಪ್ರಾಯಗಳು ಕೇಳಿಬರುತ್ತಿವೆ. ಅದೇ ರೀತಿ ಆ ಪಕ್ಷದ ಬಗ್ಗೆ ಕೆಲವರು ತೀರಾ
ಮರುಕಪಡುತ್ತಿದ್ದಾರೆ. ಆದರೆ ನಿಜಕ್ಕೂ ಕಾಂಗ್ರೆಸ್ಸಿಗೆ (ಅಥವಾ ಈ ರೀತಿ ಶಾಸಕರನ್ನು ಕಳೆದುಕೊಳ್ಳುವ ಯಾವುದೇ ಪಕ್ಷಕ್ಕೆ) ಇದೊಂದು ಹಿನ್ನಡೆಯಲ್ಲ. ಕಾಂಗ್ರೆಸ್ ಸಂಭ್ರಮಿಸಬೇಕಾದ ಬೆಳವಣಿಗೆ ಇದು. ಬಿಟ್ಟುಹೋದ ಶಾಸಕರು ತಮ್ಮ ಪ್ರತಿಸ್ಪರ್ಧಿ ಪಕ್ಷವನ್ನು ಸೇರಿಕೊಳ್ಳು
ತ್ತಿದ್ದಾರೆ ಎನ್ನುವ ವಿಚಾರವಾಗಿ ಆ ಪಕ್ಷ ಇನ್ನಷ್ಟು ಸಂಭ್ರಮಿಸಬೇಕು. ಯಾಕೆಂದರೆ, ಯಾವುದೇ ಒಂದು ಪಕ್ಷದ ವತಿಯಿಂದ ಗೆದ್ದ ನಂತರ ಅದರಿಂದ ವಲಸೆ ಹೋಗುವ ಶಾಸಕರು ಎಂತಹವರೆಂದರೆ, ಅವರಿಗೆ ಪಕ್ಷವನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ. ಅವರೆಲ್ಲಾ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಸ್ವಂತ ಬಲದಿಂದ ಗೆದ್ದು ಬರಬಲ್ಲ ಪ್ರಭಾವಿ ಸ್ಥಳೀಯ ಸಾಮಂತರು. ಪಕ್ಷಕ್ಕೆ ಅವರ ಮೇಲೆ ಯಾವುದೇ ರೀತಿಯ ನಿಯಂತ್ರಣವೂ ಇಲ್ಲ.

ಈ ರೀತಿ ಪಕ್ಷದ ಹಂಗಿಲ್ಲದ, ಪಕ್ಷದಿಂದ ನಿಯಂತ್ರಿಸಲಾ ಗದ ಶಾಸಕರನ್ನು ಹೊಂದಿರುವುದು ಪಕ್ಷವೊಂದು ತೀರಾ ದುರ್ಬಲವಾಗಿರುವುದರ ಸಂಕೇತ. ಒಂದು ರಾಜಕೀಯ ಪಕ್ಷ ನಿಜಕ್ಕೂ ರಾಜಕೀಯ ಪಕ್ಷ ಅಂತ ಕರೆಸಿಕೊಳ್ಳಬೇಕಾದರೆ, ಆ ಪಕ್ಷ ತನ್ನ ಯೋಚನೆ, ಯೋಜನೆ, ತತ್ವಗಳ ಮೂಲಕ ಜನರನ್ನು ಪ್ರಭಾವಿಸಿ ತನ್ನ ಬಲದಿಂದ ತಾನು ಆರಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ತಾಕತ್ತನ್ನು ಹೊಂದಿರಬೇಕು. ತಾನು ಗೆಲ್ಲಲು ಪ್ರಬಲ ಸ್ಥಳೀಯ ಅಭ್ಯರ್ಥಿಗಳ ಪ್ರಭಾವವನ್ನು ಬಳಸಿಕೊಂಡರೆ ಅಥವಾ ಯಾವುದೋ ಒಬ್ಬ ನಾಯಕನ ವರ್ಚಸ್ಸನ್ನು ನಂಬಿಕೊಂಡರೆ ಅಂತಹ ಪಕ್ಷಗಳು ನಿಜವಾದ ರಾಜಕೀಯ ಪಕ್ಷಗಳೇ ಅಲ್ಲ. ಅಂತಹ ಪಕ್ಷಗಳಿದ್ದಲ್ಲಿ ಪ್ರಜಾತಂತ್ರಕ್ಕೆ ಅರ್ಥವೂ ಇಲ್ಲ.

ದುರದೃಷ್ಟವಶಾತ್ ಭಾರತದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಈ ದೌರ್ಬಲ್ಯದಿಂದ ಬಳಲುತ್ತಿವೆ. ಪಕ್ಷ ರಾಜಕಾರಣದಲ್ಲಿ ದೇಹವು ಬಾಲವನ್ನು ಅಲ್ಲಾಡಿಸುವ ಬದಲಿಗೆ ಬಾಲವೇ ದೇಹವನ್ನು ಅಲ್ಲಾಡಿಸುವ ಸ್ಥಿತಿ ಇದೆ. ಹಾಗಾಗಿ ಇಂತಹವರೆಲ್ಲಾ ಕಾಂಗ್ರೆಸ್ಸನ್ನು ಬಿಟ್ಟು ಹೋಗುತ್ತಿರುವುದು ಆ ಪಕ್ಷಕ್ಕೆ ನಿಜವಾದ ಅರ್ಥದಲ್ಲಿ ರಾಜಕೀಯ ಪಕ್ಷವಾಗಿ ಬೆಳೆಯಲು ಒದಗಿಬಂದ ಒಂದು ಅವಕಾಶ. ಈ ದೇಶದಲ್ಲಿ ಪ್ರತಿಯೊಂದು ಮತಕ್ಷೇತ್ರದಲ್ಲೂ ತನ್ನ ಪ್ರಭಾವವನ್ನು ಸ್ಥಾಪಿಸಿ, ತನ್ನ ನಿಯಂತ್ರಣದಲ್ಲಿರುವ ಅಭ್ಯರ್ಥಿಗಳನ್ನು ಬೆಳೆಸಿ ಗೆಲ್ಲಿಸುವ ಸಾಧ್ಯತೆಯೊಂದನ್ನು ಅನ್ವೇಷಿಸಲು ಒದಗಿಬಂದ ಅವಕಾಶ. ಕಾಂಗ್ರೆಸ್ ಅಥವಾ ಕಾಂಗ್ರೆಸ್ಸಿನಂತೆಯೇ ಶಾಸಕರನ್ನು ಕಳೆದುಕೊಳ್ಳುತ್ತಿರುವ ಪಕ್ಷಗಳು ಈ ರೀತಿ ಯೋಚಿಸದೇ ಹೋದರೆ ಅವುಗಳಿಗೆ ರಾಜಕೀಯ ಪಕ್ಷಗಳೆಂದು ಕರೆಸಿಕೊಳ್ಳುವ ಯೋಗ್ಯತೆಯೇ ಇಲ್ಲ ಅಂತ ಭಾವಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಹಂತದಲ್ಲಾದರೂ ತನ್ನನ್ನು ತಾನು ನಿಜವಾದ ಅರ್ಥದ ರಾಜಕೀಯ ಪಕ್ಷ ಎನ್ನುವಂತೆ ಮುರಿದುಕಟ್ಟುವ ಉಮೇದೇನಾದರೂ ಇದ್ದರೆ ಅದು, ಬಿಟ್ಟು ಹೋಗಲು ಬಯಸುವ ಶಾಸಕರು ಮತ್ತು ಸಂಸದರಿಗೆ ‘ದಯಮಾಡಿ ಆದಷ್ಟು ಬೇಗ ಹೋಗಿ’ ಅಂತ ಕರೆ ನೀಡುವ ಅಗತ್ಯವಿದೆ. ಕಾಂಗ್ರೆಸ್ಸಿಗೆ ಇದು ಅಗತ್ಯವಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಎಲ್ಲಾ ಪಕ್ಷಗಳು ಈ ರೀತಿ ಯೋಚಿಸುವುದು ಈ ದೇಶದ ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಕೂಡಾ ಅಗತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು