ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ‘ಕೈ’ಚಳಕಕ್ಕಾಗಿ ಕಾದಿದೆ ಹಡಗು

ನೆಹರೂ–ಗಾಂಧಿ ಕುಟುಂಬದವರಲ್ಲದವರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಏಕೆ ಅಗತ್ಯ?
Last Updated 7 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷವು ಮುಳುಗುವ ಹಡಗೇನಲ್ಲ. ಭಯಂಕರ ಬಿರುಗಾಳಿಗೆ ಸಿಲುಕಿರುವ ಹಡಗು ಅದು. ತೀವ್ರತರ ಹೊಡೆತಗಳನ್ನು ಅನುಭವಿಸುತ್ತಿದೆ. ಆದರೆ ಇನ್ನೂ ಛಿದ್ರವಾಗಿಲ್ಲ, ಕುಸಿದುಬೀಳುತ್ತಿಲ್ಲ. ಸಿಲುಕಿರುವ ಬಿರುಗಾಳಿಯಿಂದ ಕಾಪಾಡಿ ಮುಂದಕ್ಕೆ ಕೊಂಡೊಯ್ಯುವ ಒಬ್ಬ ‘ಟಾಟಾ’ಗಾಗಿ ಕಾದಿರುವ ಜರ್ಜರಿತ ‘ಏರ್ ಇಂಡಿಯಾ’ದಂತಾಗಿದೆ ಅದು.

ಹಡಗಿನ ‘ಹೊಸ ಕ್ಯಾಪ್ಟನ್’, ನೆಹರೂ– ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯಾಗಬಹುದು ಅಥವಾ ರಾಹುಲ್ ಗಾಂಧಿಯವರದೇ ಪುನರುತ್ಥಾನವೂ ಆಗಬಹುದು. ಇದು ಸಾಧ್ಯವಾಗುತ್ತದೆ ಎಂದು ಭಾವಿಸಿದಲ್ಲಿ ಮತದಾರರು, ಪಕ್ಷದ ಸಂಘಟನೆ ಹಾಗೂ ಕಿರಿಯರು, ಹಿರಿಯರು ಎಂಬ ಭೇದವಿಲ್ಲದೆ ಪಕ್ಷದ ನಾಯಕರ ಜೊತೆಗೆ ಆಳವಾಗಿ, ವಿಸ್ತೃತವಾಗಿ ತೊಡಗಿಕೊಳ್ಳುವ ನೆಲೆಯ ಮರುಹುಟ್ಟಾಗಿರ
ಬೇಕಾಗುತ್ತದೆ ಅದು. ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್‌ನ ಒಳ್ಳೆಯದಕ್ಕೆ ನೆಹರೂ– ಗಾಂಧಿ ಕುಟುಂಬದ ಹೊರಗಿನ ಕಾಂಗ್ರೆಸ್ಸಿಗರೊಬ್ಬರು ನೇತೃತ್ವ ವಹಿಸಬೇಕು. ಅವರು ಕಿರಿಯ ಅಥವಾ ಹಿರಿಯ ವಯಸ್ಸಿನವರಾಗಿದ್ದಿರಬಹುದು. ವಯಸ್ಸಿನ ಕಾರಣದಿಂದಾಗಿ ನೇತಾರರನ್ನು ಮತದಾರರು ತಿರಸ್ಕರಿಸುವುದಿಲ್ಲ. ನರೇಂದ್ರ ಮೋದಿ ಅವರಿಗೆ 70ರ ವಯಸ್ಸು ಮೀರಿದೆ. ಅಧ್ಯಕ್ಷರನ್ನಾಗಿ ಜೋ ಬೈಡನ್ ಅವರನ್ನು ಅಮೆರಿಕನ್ನರು ಆಯ್ಕೆ ಮಾಡಿದಾಗ ಅವರ ವಯಸ್ಸು 78 ಆಗಿತ್ತು.

ಆಗಸ್ಟ್‌ಗೆ ನಿಗದಿಯಾಗಿರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸಬಾರದು. ವ್ಯಕ್ತಿಗಳಿಗಿಂತ ಪಕ್ಷವೇ ಮುಖ್ಯವೆಂದು ಭಾವಿಸುವುದರಿಂದ ಪಕ್ಷಕ್ಕಾಗಿ ತಾವು, ರಾಹುಲ್ ಹಾಗೂ ಪ್ರಿಯಾಂಕಾ ಯಾವುದೇ ‘ತ್ಯಾಗ’ಕ್ಕೆ ಸಿದ್ಧರಿರುವುದಾಗಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ. ಅವರ ಕುಟುಂಬವು ಈ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಈ ಕುಟುಂಬದ ಹೊರಗಿನವರು ಅಧ್ಯಕ್ಷರಾದಲ್ಲಿ ಅವರು ಯಾವ ರೀತಿಯವರಾಗಿರಬಹುದು? ಅವರು ಪಕ್ಷದ ಪ್ರಧಾನಿ ಅಭ್ಯರ್ಥಿ ಆಗುವಂತಹವರೇ? ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಪಕ್ಷದ ಸಂಘಟನೆಯ ಪುನರುಜ್ಜೀವನದ ಕೆಲಸಕ್ಕೆ ಮಾತ್ರ ನಿಯೋಜಿತರಾದ, ಹೆಚ್ಚಿನ ಸಂಘಟನಾ ಸಾಮರ್ಥ್ಯ ಇರುವ ವ್ಯಕ್ತಿ ಮಾತ್ರ ಆಗಿರುವರೇ? ಇನ್ನೊಂದು ರೀತಿ ಹೇಳುವುದಾದಲ್ಲಿ, ಅವರು ನರೇಂದ್ರ ಮೋದಿಯಂತಹವರು ಆಗಿರುವರೇ? ಅಥವಾ ಅಮಿತ್ ಶಾ ಅಂತಹವರು? ಪಕ್ಷ ಮತ್ತು ನೆಹರೂ– ಗಾಂಧಿ ಕುಟುಂಬ ಪರಿಹರಿಸಿಕೊಳ್ಳಬೇಕಿರುವ ಅತ್ಯಂತ ಕ್ಲಿಷ್ಟ ಪ್ರಶ್ನೆ ಇದು.

ನೆಹರೂ– ಗಾಂಧಿ ಕುಟುಂಬವು ಹೊರಗಿನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಅವಕಾಶ ಕೊಟ್ಟರೂ ತಮಗೆ ನಿಷ್ಠರಾಗಿರುವ, ತಮ್ಮದೇ ಬದಲಿ ಪ್ರತಿನಿಧಿ ಎನಿಸಿಕೊಳ್ಳುವವರನ್ನು ಬಿಟ್ಟು ಪಕ್ಷವನ್ನು ತಮ್ಮ ಹಿಡಿತದಿಂದ ತಪ್ಪಿಸುವಂತಹವರನ್ನು ಒಪ್ಪಿಕೊಳ್ಳುವುದು
ಸಾಧ್ಯವಿಲ್ಲ ಎಂಬುದು ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಭಾವನೆ. ಇಂದಿರಾ ಗಾಂಧಿ ಮಾಡಿದ್ದೂ ಅದನ್ನೇ. ಮೋದಿ ಅವರೂ ತಮಗೆ ಪೂರ್ಣ ನಿಷ್ಠರಾದ ಅಮಿತ್ ಶಾ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿಸಿದ್ದರು. ಹೀಗಿದ್ದೂ ಇದು ಹೊಸದಲ್ಲ ಎಂದಾದರೂ ಪಕ್ಷಕ್ಕೀಗ ಇದು ಸೂಕ್ತವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ, ನೆಹರೂ– ಗಾಂಧಿ ಕುಟುಂಬದವರದ್ದೇ ಬದಲಿ ಪ್ರತಿನಿಧಿಯಾಗಿರದಂತಹ, ಆ ಕುಟುಂಬಕ್ಕೆ ಸೇರಿರದ, ಅಸಾಧಾರಣ ಸಂಘಟನಾತ್ಮಕ ಸಾಮರ್ಥ್ಯವಿರುವ ನಾಯಕ ಅಥವಾ ನಾಯಕಿಯ ಅಗತ್ಯವಿದೆ. ಆ ವ್ಯಕ್ತಿ, ನಿರ್ಧಾರ ಕೈಗೊಳ್ಳುವ ಸಂದರ್ಭಗಳಲ್ಲಿ ನೆಹರೂ– ಗಾಂಧಿ ಕುಟುಂಬ ಹಾಗೂ ಪಕ್ಷದ ಹಿರಿಯರನ್ನು (ಜಿ-23 ಮತ್ತಿತರರು) ಸಮಾನ ನೆಲೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಇಂತಹ ಭರವಸೆಯನ್ನು ಹುಟ್ಟಿಸುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇ ಆದಲ್ಲಿ ಅದು ಪಕ್ಷಕ್ಕೆ ಹೊಸ ತಿರುವು ನೀಡಬಲ್ಲದು.

ನೆಹರೂ– ಗಾಂಧಿ ಕುಟುಂಬವು ಅಧಿಕಾರ ಹಿಡಿದಿದ್ದಲ್ಲಿ, ಪಕ್ಷದ ಇತರ ನಾಯಕರು ಏನೂ ಅಲ್ಲವೆಂಬಂತೆ ಆಗಿಬಿಡುತ್ತಾರೆ. ಹೊರಗಿನವರು ಅಧ್ಯಕ್ಷರಾದಲ್ಲಿ, ನೆಹರೂ– ಗಾಂಧಿ ಕುಟುಂಬದವರು ಏನೂ ಅಲ್ಲವೆಂಬಂತೆ ಆಗಿಬಿಡುತ್ತಾರೆ. ಇದು ಯಾಕೆ ಹೀಗಾಗಬೇಕು? ಅಧ್ಯಕ್ಷ ಹುದ್ದೆ ಹೊಂದಿಲ್ಲದಾಗಲೂ ಪ್ರಭಾವಿ ಪಾತ್ರಗಳನ್ನು ನೆಹರೂ– ಗಾಂಧಿ ಕುಟುಂಬವು ನಿರ್ವಹಿಸಬಹುದು. ಇಂದು ಅಥವಾ ನಾಳೆ ಪ್ರಧಾನಿ ಅಭ್ಯರ್ಥಿಗಳಾಗಬಹುದಾದ ಹಲವು ನಾಯಕರ ಮಧ್ಯೆ ರಾಹುಲ್ ಗಾಂಧಿಯವರೂ ಒಬ್ಬರಾಗಿರುತ್ತಾರೆ.

ಕಾಂಗ್ರೆಸ್ ಪಕ್ಷಕ್ಕೆ ನೆಹರೂ– ಗಾಂಧಿ ಕುಟುಂಬ ಮುಖ್ಯ. ನೆಹರೂ ಕುಟುಂಬದ ಹಿಡಿತದಲ್ಲಿ ನಾಯಕತ್ವ ಇರುವ ಕಾರಣದಿಂದಾಗಿಯೇ ಹಲವು ದಶಕಗಳಿಂದ ಪಕ್ಷಕ್ಕೆ ಗಣನೀಯ ಪ್ರಮಾಣದ ಮತಗಳು ಲಭಿಸುತ್ತಿವೆ ಎಂಬುದು ನಿಜ. ಆಳ್ವಿಕೆ ನಡೆಸುವ ವಂಶವನ್ನು ಆರಾಧಿಸುವುದು ಊಳಿಗಮಾನ್ಯ ಯುಗದ ಮೌಲ್ಯವಾಗಿದ್ದು ನಮ್ಮ ಯುಗದಲ್ಲೂ ಉಳಿದುಕೊಂಡು ಬಂದಿದೆ. ಎಲ್ಲರೂ ಆ ರೀತಿ ಯೋಚಿಸುವುದಿಲ್ಲ, ಆದರೂ ರಾಜ್ಯಭಾರ ನಡೆಸುವುದು ರಾಜನ ಉತ್ತರಾಧಿಕಾರಿಗಳಿಗೆ ಮಾತ್ರ ತಿಳಿದಿರುತ್ತದೆ ಎಂದು ಬಹುಸಂಖ್ಯೆಯ ಜನರು ಈಗಲೂ ನಂಬುತ್ತಾರೆ. ಪಕ್ಷದ ಪರ ಪ್ರಚಾರದ ನೇತೃತ್ವ ವಹಿಸಿದ್ದ ರಾಹುಲ್‌ ಅವರಿಂದಾಗಿ, 2014 ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 11 ಕೋಟಿ ಮತಗಳನ್ನು ಗಳಿಸಿತ್ತು ಎಂಬುದನ್ನು ಕಡೆಗಣಿಸಲಾಗದು.

ವಂಶವೆಂಬುದು ಕಾಂಗ್ರೆಸ್‌ಗೆ ಆಸ್ತಿಯಾಗಿರುವಂತೆಯೇ ಹೊರೆಯೂ ಆಗಿದೆ. ನೆಹರೂ– ಗಾಂಧಿ ವಂಶಕ್ಕೆ ಸೇರದವರು ಅಧ್ಯಕ್ಷರಾಗಿ ಆಯ್ಕೆಯಾದರೆ ಆಸ್ತಿಯ ಆಯಾಮವನ್ನು ಉತ್ತಮವಾಗಿ ನಿರ್ವಹಿಸಬಹುದು. ‘ಸಾಮುದಾಯಿಕ, ಎಲ್ಲರನ್ನೂ ಒಳಗೊಳ್ಳುವ ನಾಯಕತ್ವ’ ಎಂಬಂಥ ಜಿ-23 ಗುಂಪಿನ ಸಲಹೆ ಸೂಕ್ತವಾದ ಮದ್ದು. ಪಕ್ಷದ ಹಿರಿಯ ನಾಯಕರುಗಳಿಲ್ಲದೆ ನೆಹರೂ– ಗಾಂಧಿ ಕುಟುಂಬವೂ ನಿರ್ವಹಿಸಲಾಗದು. ಹಾಗೆಯೇ ನೆಹರೂ– ಗಾಂಧಿ ಕುಟುಂಬವಿಲ್ಲದೆ ಪಕ್ಷದ ಹಿರಿಯ ನಾಯಕರೂ ನಿರ್ವಹಿಸಲಾಗದು. ಆದರೆ, ಕಾಂಗ್ರೆಸ್‌ನಲ್ಲಿರುವ ಬಿಕ್ಕಟ್ಟು ಬರೀ ನಾಯಕತ್ವಕ್ಕೆ ಸಂಬಂಧಿಸಿದ್ದಲ್ಲ. ಇದು ಸಿದ್ಧಾಂತ, ಸಾಮಾಜಿಕ ಎಂಜಿನಿಯರಿಂಗ್ ಹಾಗೂ ಸಂಘಟನೆಗೂ ಸಂಬಂಧಿಸಿದ್ದು. ನಾಯಕತ್ವ ವಿಸ್ತೃತ ನೆಲೆಯದ್ದಾಗಿದ್ದರೂ ನಾಯಕರು ಯಾವುದರ ಬಗ್ಗೆ ಮಾತನಾಡುತ್ತಾರೆ ಎಂಬುದು ಮುಖ್ಯ. ‘ಕಾಂಗ್ರೆಸ್ ಆಡಳಿತದಲ್ಲಿ ನಿರಾಕರಿಸಲಾಗಿದ್ದ ನ್ಯಾಯ ಹಾಗೂ ವೈಭವವನ್ನು ಗಳಿಸಿಕೊಡುವುದರ’ ಕುರಿತಾದ ಮಾತುಗಳು, ಕಾನೂನುಗಳು ಹಾಗೂ ಕ್ರಿಯೆಗಳಿಂದ ಬಿಜೆಪಿಯು ಸೆರೆ ಹಿಡಿದುಕೊಂಡಿರುವ ಭಾರಿ ಸಂಖ್ಯೆಯ ಹಿಂದೂಗಳ ಹೃದಯಗಳನ್ನು ಕಾಂಗ್ರೆಸ್ ಹೇಗೆ ಮರಳಿ ಗೆದ್ದುಕೊಳ್ಳುತ್ತದೆ?

ಇದನ್ನು ಬಿಜೆಪಿಯು ಮನಸ್ಸುಗಳ ಯುದ್ಧವನ್ನಾಗಿಸಿದೆ. ಮನಸ್ಸುಗಳೊಳಗಿನ ಈ ಯುದ್ಧವನ್ನು ಕಾಂಗ್ರೆಸ್ ಮಣಿಸದಿದ್ದಲ್ಲಿ, ಮತಗಳಿಗಾಗಿ ನಡೆಯುವ ಯುದ್ಧದಲ್ಲಿ ಮಣಿಸುವ ಭರವಸೆಯನ್ನು ಇಟ್ಟುಕೊಳ್ಳಲಾಗದು.

ಸಾಮಾಜಿಕ ಎಂಜಿನಿಯರಿಂಗ್‌ನಲ್ಲಿ ಕಾಂಗ್ರೆಸ್‌ನ ಬಿಕ್ಕಟ್ಟು ಅದರದ್ದೇ ಮತಬ್ಯಾಂಕ್ ಆಗಿದ್ದ ಬಡವರ ಮೇಲೆ ಬಿಜೆಪಿ ಸಾಧಿಸುತ್ತಿರುವ ಹಿಡಿತದಿಂದ ಸೃಷ್ಟಿಯಾಗುತ್ತದೆ. ಉದಾಹರಣೆಗೆ, ಉತ್ತರಪ್ರದೇಶದಲ್ಲಿ ಯಾದವೇತರ ಹಿಂದುಳಿದ ಜಾತಿಗಳು ಹಾಗೂ ಜಾಟವೇತರ ಪರಿಶಿಷ್ಟ ಜಾತಿಗಳ ಯಶಸ್ವಿ ಕೂಟವನ್ನು ಬಿಜೆಪಿಯು ಕಟ್ಟಿದೆ. ಪ್ರಬಲ ಹಿಂದುಳಿದ ಜಾತಿಯಾದ ಯಾದವರು ಆಕ್ರಮಿಸಿಕೊಂಡಿದ್ದ ಮಂಡಲ್ ಕೂಟವನ್ನು ಮಣಿಸುವುದಕ್ಕಾಗಿಕಟ್ಟಿದ ‘ಮಂಡಲೋತ್ತರ ಕೂಟ’ ಎಂದು ಇದನ್ನು ಕರೆಯಬಹುದು. ತನ್ನ ನಿಷ್ಠೆಯ ಮತದಾರರಾಗಿದ್ದ ಬಡ ಜಾತಿಗಳನ್ನು ಮರಳಿ ತನ್ನೆಡೆಗೆ ಸೆಳೆದುಕೊಳ್ಳಬೇಕಾದ ಭಾರಿ ಸವಾಲನ್ನು ಕಾಂಗ್ರೆಸ್ ಎದುರಿಸುತ್ತಿದೆ.

ಕಾಂಗ್ರೆಸ್ ಸಂಘಟನೆಯೊಳಗಿನ ಬಿಕ್ಕಟ್ಟು ಆಳವಾದುದು. ಬೇರುಮಟ್ಟದ ಜಾಲವನ್ನು ಕಟ್ಟಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಾ ಆರ್‌ಎಸ್ಎಸ್ ಸಂಘಟನೆಯ ಬೆಂಬಲವನ್ನೂ ಹೊಂದಿರುವ ಬಿಜೆಪಿ ಜೊತೆಗಿನ ಹೋಲಿಕೆಯಲ್ಲಿ ಕಾಂಗ್ರೆಸ್ ಸಂಘಟನೆ ಎಲ್ಲೂ ನಿಲ್ಲದು. ಆದರೆ, ಸಂಘಟನೆಯನ್ನು ಕಟ್ಟುವುದೆಂದರೆ, ಭರವಸೆಯನ್ನು ಹುಟ್ಟಿಸುವ ವಿಸ್ತೃತ ನೆಲೆಯ ನಾಯಕತ್ವ ಹಾಗೂ ಪರ್ಯಾಯ ನೋಟದೊಂದಿಗೆ ಹಿಂದೂಗಳನ್ನು ಮರಳಿ ಗೆದ್ದುಕೊಳ್ಳುವ ರಾಜಕೀಯ ಸಿದ್ಧಾಂತವನ್ನು ಹೊಂದುವುದು. ಕಾಂಗ್ರೆಸ್ ನಾಯಕತ್ವ ಹಾಗೂ ಸಿದ್ಧಾಂತದಿಂದ ಜನ ಆಕರ್ಷಿತರಾದರೆ ಮಾತ್ರ, ಬೇರುಮಟ್ಟದಲ್ಲಿ ಸದಸ್ಯರು ಹಾಗೂ ಕಾರ್ಯಕರ್ತರನ್ನು ನಿಯೋಜಿಸಿಕೊಳ್ಳುವ ಭರವಸೆಯನ್ನು ಪಕ್ಷ ಹೊಂದಬಹುದು.

ಅರುಣ್ ಸಿನ್ಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT