ಭಾನುವಾರ, ಜನವರಿ 24, 2021
19 °C
ಅನುಭವ ಮಂಟಪ

ಗುತ್ತಿಗೆ ಕೃಷಿ ಕಾಯ್ದೆ: ಅರಿವಿನ ಕೊರತೆಯೇ ಆತಂಕಕ್ಕೆ ಕಾರಣ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Agriculture

ಕೃಷಿಕರ ಆದಾಯವನ್ನು 2022ರೊಳಗೆ ದ್ವಿಗುಣ ಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದನ್ನು ಸಾಕಾರಗೊಳಿಸಲು ಕೃಷಿಯಲ್ಲಿ ಖಾಸಗಿ ಬಂಡವಾಳವನ್ನು ಆಕರ್ಷಿಸಿ ಉತ್ಪಾದಕತೆ ಹೆಚ್ಚಿಸುವುದಕ್ಕಾಗಿ ಮತ್ತು ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗುವಂತೆ ಮಾಡುವುದಕ್ಕಾಗಿ ಕೃಷಿ ಸುಧಾರಣೆಯ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಲ್ಲಿ ‘ರೈತರ (ಸಬಲೀಕರಣ ಮತ್ತು ಸುರಕ್ಷತೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ-2020’ ಕೂಡ ಒಂದು.

ನೂತನ ತಂತ್ರಜ್ಞಾನಗಳ ಪ್ರಯೋಜನ ಪಡೆಯುವುದು, ಖಾಸಗಿ ಬಂಡವಾಳ ಹೂಡಿಕೆಗೆ ಅನುಕೂಲ ಕಲ್ಪಿಸುವುದು ಮತ್ತು ಮಾರುಕಟ್ಟೆಯಲ್ಲಾಗುವ ವಿಪರೀತ ಬೆಲೆ ಏರಿಳಿತದ ಅನಿಶ್ಚಿತತೆಯ ಹೊರೆಯನ್ನು ರೈತರಿಂದ ಕಂಪನಿಗಳಿಗೆ ವರ್ಗಾಯಿಸುವುದು ಈ ಕಾಯ್ದೆಯ ಉದ್ದೇಶ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಬೆಳೆಯುವ ಉತ್ಪನ್ನಗಳನ್ನು ಮುಂಚಿತವಾಗಿಯೇ ಒಪ್ಪಿದ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಅಂಶವೂ ಕಾಯ್ದೆಯಲ್ಲಿ ಇದೆ. ಸಾರಿಗೆ ವೆಚ್ಚ ಕಡಿತಗೊಳಿಸುವುದು ಮತ್ತು ರೈತರು ನಿರ್ಧರಿಸುವ ಬೆಲೆಗೆ ಉತ್ಪನ್ನಗಳು ಮಾರಾಟವಾಗುವಂತೆ ಅನುಕೂಲ ಕಲ್ಪಿಸುವ ಆಶಯವೂ ಈ ಕಾಯ್ದೆಗೆ ಇದೆ. ಒಟ್ಟಾರೆ ರೈತರ ಆದಾಯ ಹೆಚ್ಚಾಗಿ, ಜೀವನ ಉತ್ತಮಗೊಳ್ಳಲಿ ಎಂಬ ಉದ್ದೇಶದಿಂದ ಈ ಗುತ್ತಿಗೆ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ರೈತರಿಗಿದೆ ರಕ್ಷಣೆ

ಬಿತ್ತನೆ ಬೀಜಗಳನ್ನು ಉತ್ಪಾದಿಸುವುದಾದರೆ, ಉತ್ಪನ್ನ ವಿಲೇವಾರಿ ಮಾಡುವಾಗ ಒಪ್ಪಂದದಲ್ಲಿ ಉಲ್ಲೇಖಿಸಿದ ಒಟ್ಟು ಮೊತ್ತದ ಶೇ 66ರಷ್ಟನ್ನು ಪಾವತಿಸಬೇಕು. ಅದು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ್ದಾದರೆ ಪೂರ್ಣ ಮೊತ್ತ ಪಾವತಿಸಬೇಕು. ಇದು ಕಾಯ್ದೆಯಲ್ಲಿರುವ ನಿಯಮಗಳು. ಇದರಿಂದ ಕೃಷಿ ಉತ್ಪನ್ನಗಳು ಮಾರಾಟವಾದ ತಕ್ಷಣವೇ ಹಣ ರೈತರ ಕೈಸೇರುತ್ತದೆ. ಎಪಿಎಂಸಿ ಮಾರುಕಟ್ಟೆಯಂತೆ ತಿಂಗಳುಗಟ್ಟಲೆ ಹಣಕ್ಕಾಗಿ ಕಾಯಬೇಕಿಲ್ಲ.

ರೈತರು ಮತ್ತು ಕಂಪನಿಗಳ ನಡುವೆ ಒಪ್ಪಂದ ಜಾರಿಯಲ್ಲಿದ್ದಾಗಲೇ ವ್ಯಾಜ್ಯಗಳು ಸೃಷ್ಟಿಯಾದರೆ ಅವುಗಳನ್ನು ಇತ್ಯರ್ಥಪಡಿಸಲು ರೈತರು ಮತ್ತು ಕಂಪನಿ ಪ್ರತಿನಿಧಿಗಳನ್ನೊಳಗೊಂಡ ಸಂಧಾನ ಮಂಡಳಿ ಸ್ಥಾಪಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಇಲ್ಲಿ ವ್ಯಾಜ್ಯಗಳು ಇತ್ಯರ್ಥವಾಗದಿದ್ದರೆ ಕಕ್ಷಿದಾರ ಮುಂದಿನ ಕ್ರಮಕ್ಕಾಗಿ ಉಪ-ವಿಭಾಗೀಯ ನ್ಯಾಯಾಧಿಕಾರಿಗೆ (ಎಸ್‌ಡಿಎಂ), ನಂತರ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಬಹುದು.

ಕಂಪನಿಗಳು ನಿಗದಿತ ಬೆಲೆ ಅಥವಾ ವಿವಾದದಲ್ಲಿರುವ ಮೊತ್ತ ಪಾವತಿಸದಿದ್ದರೆ ಒಟ್ಟು ಮೊತ್ತದ ಜೊತೆಗೆ ಅದರ ಒಂದೂವರೆ ಪಟ್ಟು ದಂಡ ಮತ್ತು ಬಡ್ಡಿ ಸಮೇತ ವಸೂಲಿಗೆ ಆದೇಶಿಸಲು ಉಪ-ವಿಭಾಗೀಯ ನ್ಯಾಯಾಧಿಕಾರಿಗೆ ಅಧಿಕಾರವಿದೆ. ಇದರಿಂದಾಗಿ ಕಂಪನಿಗಳು ರೈತರಿಗೆ ಮೋಸಮಾಡುವ ಸಾಧ್ಯತೆಗಳು ಬಹಳ ಕಡಿಮೆ. ಒಂದು ವೇಳೆ ರೈತರು ಇಂತಹ ಮೊತ್ತವನ್ನು ಪಾವತಿಸದಿದ್ದರೆ ಯಾವುದೇ ದಂಡವಿಲ್ಲದೆ ಕಂಪನಿಗಳು ಮಾಡಿದ ವೆಚ್ಚವನ್ನು ಮಾತ್ರ ರೈತರಿಂದ ವಸೂಲಿ ಮಾಡಬಹುದು.

ಯಾವುದೇ ನೈಸರ್ಗಿಕ ವಿಕೋಪದಿಂದಾಗಿ ಒಪ್ಪಂದದ ಪ್ರಕಾರ ಗುಣಮಟ್ಟದ ಕೃಷಿ ಉತ್ಪನ್ನಗಳ ಪೂರೈಕೆ ಸಾಧ್ಯವಾಗದಿದ್ದರೆ ರೈತರಿಂದ ಹಣವನ್ನು ಹಿಂಪಡೆಯುವಂತೆ ಆದೇಶಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಇಲ್ಲಿ ಕಂಪನಿಗಳಿಗಿಂತ ರೈತರ ಹಿತಾಸಕ್ತಿ ರಕ್ಷಣೆಗೆ ಆದ್ಯತೆ ನೀಡಲಾಗಿದೆ.

ಎಫ್‌ಪಿಒಗಳಿಂದ ಅರಿವು

ಹೊಸ ಕಾಯ್ದೆ ಬಗ್ಗೆ ಮಾಹಿತಿ ಕೊರತೆಯಿಂದಾಗಿ, ರೈತರಲ್ಲಿ ಹಲವು ರೀತಿಯ ಭಯ, ಆತಂಕ ಉಂಟಾಗುತ್ತಿದೆ. ರೈತರ ಆದಾಯ ಹೆಚ್ಚಿಸುವ ಸಲುವಾಗಿ ಈ ಕಾಯ್ದೆಯನ್ನು ಜಾರಿಮಾಡಲಾಗಿದೆ. ಇದು ಏಕಾಏಕಿ ಜಾರಿಯಾಗಿಲ್ಲ. ಈ ಕಾಯ್ದೆಯ ಸಾಧಕ– ಬಾಧಕಗಳ ಬಗ್ಗೆ ಬಹಳ ವರ್ಷಗಳಿಂದ ವಿಷಯ ತಜ್ಞರು ಚರ್ಚೆ ನಡೆಸಿದ್ದಾರೆ. ಇವೆಲ್ಲದರ ನಂತರ ತಜ್ಞರು ನೀಡಿದ ಶಿಫಾರಸು ಆಧರಿಸಿ ಈ ಕಾಯ್ದೆಯನ್ನು ರೂಪಿಸಿ, ಜಾರಿಗೊಳಿಸಲಾಗಿದೆ.

ಇಂಥ ರೈತಪರ ಕಾಯ್ದೆಯ ಬಗ್ಗೆ ಜನರಲ್ಲಿರುವ ಭಯ ಮತ್ತು ಆತಂಕವನ್ನು ಹೋಗಲಾಡಿಸಬೇಕು. ಅದಕ್ಕಾಗಿ ಪ್ರತಿ ಗ್ರಾಮದಲ್ಲಿ ಕೃಷಿ ಉತ್ಪಾದಕ ಸಂಘಗಳನ್ನು (ಎಫ್‌ಪಿಒ/ಎಫ್‌ಪಿಸಿ) ಆರಂಭಿಸಿ, ಕಾಯ್ದೆಯಲ್ಲಿನ ನಿಯಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಗ್ರಾಮದಲ್ಲಿ ಸಾಗುವಳಿಗೆ ಯೋಗ್ಯವಾಗಿಲ್ಲದ ಹಿಡುವಳಿಗಳಿದ್ದರೆ, ಕೃಷಿ ಉತ್ಪಾದಕ ಸಂಘಗಳ ಮೂಲಕ ಅವುಗಳನ್ನು ಒಟ್ಟುಗೂಡಿಸಿ ದೊಡ್ದ ಪ್ರಮಾಣದ ಗುತ್ತಿಗೆ ಕೃಷಿಗೆ ಅವಕಾಶ ಕಲ್ಪಿಸಬೇಕು.

ಸೇವಾ ಪೂರೈಕೆದಾರ

ರೈತ ಉತ್ಪಾದಕ ಸಂಘ ಅಥವಾ ಕಂಪನಿಗಳು, ಕಂಪನಿಗಳು (ಪ್ರಾಯೋಜಕರು) ಮತ್ತು ರೈತರ ನಡುವೆ ಅಗ್ರಿಗೇಟರ್ ಅಥವಾ ಕೃಷಿ ಸೇವಾ ಪೂರೈಕೆದಾರ (ಫಾರ್ಮ್ ಸರ್ವೀಸ್ ಪ್ರೊವೈಡರ್) ಆಗಿ ಕೆಲಸ ಮಾಡುತ್ತವೆ. ಹೀಗಾಗಿ ಎಫ್‌ಪಿಒಗಳು, ತಮ್ಮ ತಮ್ಮ ಗ್ರಾಮಗಳಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಸಂಗ್ರಹಣೆ, ಶೈತ್ಯಾಗಾರ, ನಿರಂತರ ವಿದ್ಯುತ್‌ ಪೂರೈಕೆಯಂತಹ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಈ ಮೂಲಕ, ಬೇಗ ಕೆಡುವ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ವೇಗದ ಸಾರಿಗೆ ವ್ಯವಸ್ಥೆ ರೂಪಿಸಿ, ಸಕಾಲದಲ್ಲಿ ಉತ್ಪನ್ನಗಳ ಪೂರೈಕೆಗೆ ಆದ್ಯತೆ ನೀಡಬೇಕು.
ಇದರಿಂದ ರೈತರು ತಮಗೆ ಬೇಕಾದ ಮತ್ತು ಲಾಭದಾಯಕವಾದ ಬೆಳೆಗಳನ್ನು ಬೆಳೆದು, ಉತ್ತಮವಾದ ಬೆಲೆಗೆ ಮಾರಾಟಮಾಡಲು ಸಮರ್ಥರಾಗುತ್ತಾರೆ.

ಇಷ್ಟೆಲ್ಲ ಆದ ಮೇಲೆ ಕಾಯ್ದೆಯಲ್ಲಿ ಏನಾದರೂ ನ್ಯೂನತೆ ಇದೆ ಎಂದು ಕಂಡು ಬಂದರೆ, ರೈತರು, ಕೇಂದ್ರ ಅಥವಾ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ, ಇತ್ಯರ್ಥ ಮಾಡಿಕೊಳ್ಳಬಹುದು. ಈ ಮೂಲಕ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು. ಇದರಿಂದ ರೈತರ ಜೀವನ ಇನ್ನಷ್ಟು ಉತ್ತಮಗೊಳ್ಳಲಿದೆ.

ಏನೇನಿದೆ ಈ ಕಾಯ್ದೆಯಲ್ಲಿ?

l ಗುತ್ತಿಗೆ ಕೃಷಿ ಅಥವಾ ಒಪ್ಪಂದದ ಕೃಷಿಗೆ ಅವಕಾಶ ಕಲ್ಪಿಸುವುದು ಈ ಕಾಯ್ದೆಯ ಪ್ರಮುಖ ಅಂಶ. ಕೃಷಿಕರು ಭವಿಷ್ಯದಲ್ಲಿ ಬೆಳೆಯುವ ಉತ್ಪನ್ನಗಳನ್ನು ಮುಂಚಿತವಾಗಿಯೇ ತಮ್ಮ ಇಚ್ಛೆಯಂತೆ ಯಾವುದೇ ಕಂಪನಿ, ರಫ್ತುದಾರರೊಂದಿಗೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಬಹುದು.

l ಕೃಷಿ ಉತ್ಪನ್ನದ ಪೂರೈಕೆ, ಗುಣಮಟ್ಟ, ದರ್ಜೆ, ಬೆಲೆ ಮತ್ತು ಪ್ರಾಯೋಜಕರು ಪೂರೈಸುವ ಸೇವೆಗಳ ಕುರಿತಾಗಿ ಒಪ್ಪಂದ ಮಾಡಿಕೊಳ್ಳವುದರಿಂದ ಯಾವುದೇ ತಕರಾರುಗಳು ಉಂಟಾಗುವುದಿಲ್ಲ.

l ನಿರ್ಧರಿಸಿರುವ ಬೆಲೆಯಲ್ಲಿ ಅನಿರೀಕ್ಷಿತವಾಗಿ ತುಂಬಾ ಏರಿಳಿತವಾದರೆ, ಆಗ ಎಷ್ಟು ಬೆಲೆಯ ಖಾತರಿ ನೀಡಬೇಕೆಂದು ಒಪ್ಪಂದದಲ್ಲಿ ಕಡ್ಡಾಯವಾಗಿ ತಿಳಿಸಬೇಕು. ಅಷ್ಟೇ ಅಲ್ಲದೆ, ಖಾತರಿ ಬೆಲೆಗಿಂತ ಹೆಚ್ಚಿನ ಬೆಲೆ ಅಥವಾ ಬೋನಸ್‌ ಕೊಡುವುದರ ಕುರಿತು ಒಪ್ಪಂದದಲ್ಲಿ ಅವಶ್ಯವಾಗಿ ಪ್ರಸ್ತಾಪಿಸಬೇಕು.

l ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವಾಗ ಎಪಿಎಂಸಿ ಮಾರುಕಟ್ಟೆ, ವಿದ್ಯುನ್ಮಾನ ವ್ಯಾಪಾರ ಮತ್ತು ವ್ಯವಹಾರ ವೇದಿಕೆ ನಿಗದಿಪಡಿಸುವ ಬೆಲೆ ಅಥವಾ ಯಾವುದಾದರೂ ಒಂದು ಸೂಕ್ತ ಬೆಂಚ್‌ಮಾರ್ಕ್ ಬೆಲೆಯನ್ನು ಅಧಾರವಾಗಿಟ್ಟುಕೊಂಡು ಬೆಲೆ ನಿರ್ಣಯ ಮಾಡಲು ಆವಕಾಶವಿದೆ. ಇದರಿಂದ ಬೆಲೆ ನಿರ್ಣಯದಲ್ಲಿ ರೈತರಿಗೆ ಯಾವುದೇ ಗೊಂದಲ ಮತ್ತು ಮೋಸವಾಗುವುದಿಲ್ಲ.

l ಕೃಷಿ ಉತ್ಪನ್ನ ತಯಾರಾಗುವ ಸ್ಥಳದಿಂದಲೇ ಉತ್ಪನ್ನಗಳು ಖರೀದಿಯಾಗುವುದರಿಂದ ರೈತರಿಗೆ ಸಾಗಾಟ ವೆಚ್ಚ ಉಳಿಯುತ್ತದೆ.ಅಷ್ಟೇ ಅಲ್ಲ, ರೈತ ಪರವಾಗಿರುವ ಉತ್ಪಾದಕರ ಸಂಘಗಳೂ ಈ ಒಪ್ಪಂದದಲ್ಲಿ ಭಾಗಿಯಾಗಲು ಅವಕಾಶವಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ.

– ಲೇಖಕರು: ಡಾ. ಆರ್. ಆರ್. ಬಿರಾದಾರ

(ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ, ಕರ್ನಾಟಕ ಯೋಜನಾ ಮಂಡಳಿ ಸದಸ್ಯ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು