ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಕ್ಕಳ ಆರೈಕೆಯ ವೆಚ್ಚ ದುಪ್ಪಟ್ಟು!

Last Updated 7 ಅಕ್ಟೋಬರ್ 2020, 6:01 IST
ಅಕ್ಷರ ಗಾತ್ರ

ಕೋವಿಡ್‌–19 ತಂದಿಟ್ಟ ಅವಾಂತರಗಳು ಒಂದೆರಡಲ್ಲ. ಪ್ರತಿಯೊಂದು ರಾಷ್ಟ್ರಗಳ ಮೇಲೆ, ಕುಟುಂಬಗಳ ಮೇಲೆ, ಜನರ ಮೇಲೆ ಕೋವಿಡ್‌ ಬೀರಿದ ಪ್ರಭಾವ ಸಾಮಾನ್ಯದ್ದಲ್ಲ. ಇದೀಗ ಮಕ್ಕಳ ಆರೈಕೆಯ ವೆಚ್ಚ ದುಪ್ಪಟ್ಟಾಗಿದ್ದು, ಕುಟುಂಬದ ಒಟ್ಟಾರೆ ಸ್ವಾಸ್ಥ್ಯದ ಮೇಲೆ ಇದು ಪರಿಣಾಮ ಬೀರುತ್ತಿದೆ.

ಕೋವಿಡ್‌–19 ಪರಿಣಾಮ ಮಕ್ಕಳ ಆರೈಕೆಯ ವೆಚ್ಚ ದುಪ್ಪಟ್ಟಾಗಿರುವುದರಿಂದ ಕಂಗಾಲಾಗಿರುವ ಪೋಷಕರು ಒಂದೆಡೆ ಕೌಟುಂಬಿಕ ಖರ್ಚುಗಳನ್ನು ಗಣನೀಯವಾಗಿ ಕಡಿತಗೊಳಿಸುತ್ತಿದ್ದರೆ, ಇನ್ನೊಂದೆಡೆ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕೌಟುಂಬಿಕ ಉಳಿತಾಯದ ಪ್ರಮಾಣವೂ ಕುಸಿಯುತ್ತಿದೆ.

ದುಡಿಯುವ ಪೋಕರಿಗೆ ಮಕ್ಕಳ ಆರೈಕೆಯ ಸವಾಲುಮೊದಲಿನಿಂದಲೂ ಇದ್ದಿದ್ದೇ, ಆದರೆ ಈಗ ಈ ಸಮಸ್ಯೆಯ ಸ್ವರೂಪ ಮತ್ತೊಂದು ರೂಪ ತಾಳಿದೆ. ಗಂಡ–ಹೆಂಡತಿ ದುಡಿಯುವಾಗ ಮಕ್ಕಳ ಪಾಲನೆಗೆ ಮನೆಯಲ್ಲಿ ಆಯಾಗಳನ್ನು ನೇಮಿಸುತ್ತಿದ್ದರು, ಕೆಲವೊಮ್ಮೆ ಡೇಕೇರ್‌ಗಳೂ ನೆರವಿಗೆ ಆಗುತ್ತಿದ್ದವು. ‘ಆದರೆ ಈಗ ಮನೆಗೆ ಆಯಾಗಳು ಬರಲು ಹಿಂದೇಟು ಹಾಕುತ್ತಿದ್ದಾರೆ, ಡೇಕೇರ್‌ಗಳಲ್ಲಿ ಶುಲ್ಕ ದುಪ್ಪಟ್ಟಾಗಿದೆ, ಇತ್ತ ಸಂಬಳದಲ್ಲಿ ಕಡಿತ ಉಂಟಾಗಿದ್ದು, ನಿರ್ವಹಣೆ ಕಷ್ಟವಾಗಿದೆ…’ ಎನ್ನುವ ಗೋಳು ಪೋಷಕರದ್ದು. ‘ಕಡಿಮೆ ಸಂಖ್ಯೆಯ ಮಕ್ಕಳಿಗೆ ಮಾತ್ರ ಪ್ರವೇಶ ಕೊಡಬೇಕು, ಕೋಣೆಗಳನ್ನು ಪ್ರತಿದಿನ ಸ್ಯಾನಿಟೈಸರ್‌ ಮಾಡಬೇಕು, ಮಕ್ಕಳ ನಡುವೆ ಅಂತರ ಕಾಪಾಡಬೇಕು… ಹೊಣೆಗಾರಿಕೆ ಹೆಚ್ಚಿದೆ. ಹೀಗಾಗಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ’ ಎನ್ನುವ ಸಮಜಾಯಿಶಿ ಡೇಕೇರ್‌ ಕೇಂದ್ರಗಳದ್ದು.

ಮೇಲ್ವರ್ಗದ ಕುಟುಂಬಗಳಲ್ಲಿ, ಲಕ್ಷ–ಲಕ್ಷ ರೂಪಾಯಿ ಸಂಬಳ ಪಡೆಯುವ ದಂಪತಿಗಳ ಲೆಕ್ಕಾಚಾರ ಒಂದು ತೆರನಾದರೆ,ಗಂಡ–ಹೆಂಡತಿ ದುಡಿದರೂ ಸಂಸಾರ ಸಾಗಿಸಲು ಹೆಣಗಾಡುವ, ಮಧ್ಯಮ ಮತ್ತು ಬಡ ದಂಪತಿಗಳ ಪಾಡು ಇನ್ನೊಂದು ಬಗೆಯದು. ಉತ್ತಮ ಸಂಬಳ ಇರುವ ದಂಪತಿಗಳು ಒಬ್ಬರ ಸಂಬಳವನ್ನು ಮನೆಯ ಖರ್ಚು–ವೆಚ್ಚಕ್ಕೆ ಇಟ್ಟರೆ ಇನ್ನೊಬ್ಬರ ಸಂಬಳವನ್ನು ಉಳಿತಾಯ ಮಾಡುತ್ತಿದ್ದರು. ಅನಂತರದ ದಿನಗಳಲ್ಲಿ ಒಬ್ಬರ ಸಂಬಳದಲ್ಲಿ ಅರ್ಧ ಸಂಬಳ ಮಾತ್ರ ಉಳಿತಾಯದ ಖಾತೆ ಸೇರುತ್ತಿತ್ತು. ಕೋವಿಡ್‌–19ನ ಈ ಸಂದಿಗ್ಧ ಸಮಯದಲ್ಲಿ ಒಂದೆಡೆ ಗಂಡ–ಹೆಂಡತಿಯ ಸಂಬಳದಲ್ಲಿ ಕಡಿತ ಉಂಟಾಗಿದ್ದು, ಜೀವನ ನಿರ್ವಹಣಾ ವೆಚ್ಚವೂ ಅಧಿಕವಾಗಿದೆ. ಇದರ ನಡುವೆ ಮಕ್ಕಳ ಆರೈಕೆಯ ವೆಚ್ಚ ದ್ವಿಗುಣಗೊಂಡಿದೆ. ಇದರ ಪರಿಣಾಮ ಉಳಿತಾಯದ ಪ್ರಮಾಣ ಕುಸಿಯುತ್ತಿದೆ ಎನ್ನುವುದು ಅನೇಕ ಕುಟುಂಬಗಳ ಅಳಲು.

ಇತ್ತ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಸ್ಥಿತಿ ಇನ್ನೂ ಗಂಭೀರ. ಮೊದಲೇ ಅಷ್ಟಿಷ್ಟು ಉಳಿತಾಯ ಮಾಡುತ್ತಿದ್ದವರು ಈಗ ದುಡಿದದ್ದನ್ನೆಲ್ಲ ಮನೆಯ ಖರ್ಚಿಗೇ ಸುರಿಯುತ್ತಿದ್ದಾರೆ. ಅದರಲ್ಲಿ ಮಕ್ಕಳ ಪಾಲನೆ–ಪೋಷಣೆ–ಶಿಕ್ಷಣದ ಪಾಲೇ ದೊಡ್ಡದಿದೆ. ಈ ವರ್ಗದ ಜನ ಕೋವಿಡ್‌–19 ಪರಿಣಾಮವನ್ನು ಎದುರಿಸಲಾಗದೇ ಮಕ್ಕಳನ್ನು ತಮ್ಮ ಪಾಲಕರು ಇರುವ ಊರುಗಳಿಗೆ ಕಳುಹಿಸುತ್ತಿರುವುದೂ ಉಂಟು.

ಇದು ಬರೀ ಭಾರತದ ಕತೆಯಲ್ಲ, ದುಂದುವೆಚ್ಚಕ್ಕೆ ಹೆಸರಾದ, ಉಳಿತಾಯಕ್ಕಿಂತಲೂ ಖರ್ಚಿನ ಪಾಲೇ ಹೆಚ್ಚಿರುವ ಅಮೆರಿಕದಂತಹ ದೇಶಗಳಲ್ಲೂ ಕುಟುಂಬಗಳು ಮಕ್ಕಳ ಆರೈಕೆಯ ವೆಚ್ಚಕ್ಕೆ ದಂಗಾಗಿವೆ. ಹೆಚ್ಚುತ್ತಿರುವ ಮಕ್ಕಳ ಆರೈಕೆಯ ವೆಚ್ಚದಿಂದಾಗಿ ಹಣಕಾಸಿನ ಒತ್ತಡದ ಜೊತೆಗೆ, ಕೌಟುಂಬಿಕ ಸಂಬಂಧಗಳಲ್ಲೂ ಉದ್ವಿಗ್ನತೆ ಉಂಟಾಗುತ್ತಿದೆ ಎಂದು ಸಮೀಕ್ಷೆಯೊಂದರಲ್ಲಿ ಅಲ್ಲಿನ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಗುಣಮಟ್ಟದ ಕುಟುಂಬ ಆರೈಕೆಯನ್ನು ಕಂಡುಹಿಡಿಯುವ ಮತ್ತು ನಿರ್ವಹಿಸುವ ಪ್ರಮುಖ ವೇದಿಕೆಯಾದ ಕೇರ್.ಕಾಮ್, ಕೋವಿಡ್‌–19 ಸಾಂಕ್ರಾಮಿಕ ರೋಗದ ಪರಿಣಾಮ ಮಕ್ಕಳ ಪಾಲನೆಯ ವೆಚ್ಚದಲ್ಲಿ ಉಂಟಾದ ಬದಲಾವಣೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮಕ್ಕಳ ಪಾಲನೆ ಕುಟುಂಬಗಳ ಹೊರೆಯಾಗಿ ಪರಿಣಮಿಸುತ್ತಿದೆ ಎನ್ನುತ್ತದೆ ಅಧ್ಯಯನ.

ಶೇ 70ರಷ್ಟು ಕುಟುಂಬಗಳು ಶಕ್ತಿಮೀರಿ ಮಕ್ಕಳ ಆರೈಕೆಯ ದರವನ್ನು ಪಾವತಿಸುತ್ತಿವೆ. ಸುಮಾರು ಅರ್ಧದಷ್ಟು ಕುಟುಂಬಗಳು ತಮ್ಮ ಆದಾಯದ ಶೇ 15ಕ್ಕಿಂತ ಹೆಚ್ಚಿನ ಹಣವನ್ನು ಮಕ್ಕಳ ಆರೈಕೆಗಾಗಿ ಖರ್ಚು ಮಾಡುತ್ತಿವೆ. ಇದು ಬರೀ ಆರ್ಥಿಕ ಹೊರೆಯಷ್ಟೇ ಅಲ್ಲ, ಅದರ ವಿಸ್ತರಿತ ರೂಪವಾಗಿ ಕೌಟುಂಬಿಕ ಸಂಬಂಧಗಳ ಮೇಲೂ, ಕುಟುಂಬದ ಒಟ್ಟಾರೆ ಆರ್ಥಿಕ ಯೋಜನೆಯ ಮೇಲೂ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲ, ಶೇ 39ರಷ್ಟು ದಂಪತಿಗಳು ಇದರಿಂದಾಗಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಹಂಬಲವಿದ್ದರೂ ಆ ಆಸೆಯನ್ನು ಕೈಬಿಡುತ್ತಿದ್ದಾರೆ.

ಮಕ್ಕಳ ಆರೈಕೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವ ಹಾಗೂ ಇರುವ ವ್ಯವಸ್ಥೆಯನ್ನು ಬಳಸಿಕೊಳ್ಳಲು ಆತಂಕ ಇರುವ ಕಾರಣ ಪೋಷಕರ, ಅದರಲ್ಲೂ ಅಮ್ಮಂದಿರ ವೃತ್ತಿ/ಭವಿಷ್ಯವೂ ಡೋಲಾಯಮಾನವಾಗುತ್ತಿದೆ. ಮಕ್ಕಳ ಪಾಲನೆಯ ಜವಾಬ್ದಾರಿಯು ಅವರ ವೃತ್ತಿ ನಿರ್ಧಾರಗಳನ್ನು ಪ್ರಭಾವಿಸುತ್ತಿದೆ. ಮಕ್ಕಳ ಪಾಲನೆಯ ಜವಾಬ್ದಾರಿಯಿಂದಾಗಿ ಕೆಲವು ಅಮ್ಮಂದಿರು ವೃತ್ತಿ ಬದಲಾವಣೆ ಮಾಡಿಕೊಂಡರೆ, ಇನ್ನೂ ಕೆಲವರು ಇನ್‌ಕ್ರೀಮೆಂಟ್‌–ಪ್ರಮೋಶನ್‌ಗಳನ್ನು ಕೈಬಿಟ್ಟಿದ್ದಾರೆ. ಮಕ್ಕಳನ್ನು ಬೆಳೆಸಲು ಮನೆಯ ಹಿರಿಯರ ಸಹಾಯ–ಸಹಕಾರ ಸಿಗದ ಕಾರಣ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದರೂ ರಾಜೀನಾಮೆ ನೀಡಿ ಹೊರಬಂದವರೂ ಇದ್ದಾರೆ. ಏಕೆಂದರೆ ಮಕ್ಕಳ ಪೋಷಣೆ ಕೆಲವು ತಿಂಗಳು ಅಥವಾ ವರ್ಷಗಳ ಪ್ರಕ್ರಿಯೆ ಅಲ್ಲ. ಅದೊಂದು ನಿರಂತರವಾದ, ಸಾಕಷ್ಟು ಶ್ರಮ ಬೇಡುವ ಜವಾಬ್ದಾರಿ. ಮಕ್ಕಳು ಬೆಳೆದಂತೆ ಪೋಷಣೆಯ ಜವಾಬ್ದಾರಿಯೂ ಹೆಚ್ಚುತ್ತದೆಯೇ ಹೊರತು ಕಡಿಮೆಯಂತೂ ಆಗುವುದಿಲ್ಲ. ಮಕ್ಕಳು ಸ್ವತಂತ್ರರಾಗುವವರೆಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಶಾಶ್ವತ ಪರ್ಯಾಯವನ್ನು ಕಂಡುಕೊಳ್ಳುವುದುದುಡಿಯುವ ಪೋಷಕರ ಬಹುದೊಡ್ಡ ಸವಾಲೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT