ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್-‌19: ಆರೋಗ್ಯ ಸೇವೆ ವ್ಯವಹಾರ ಅಲ್ಲ

ರಾಜ್ಯದಲ್ಲಿ ಕೊರೊನಾ ‍ಪರಿಸ್ಥಿತಿ ನಿಭಾಯಿಸಲು ವೈದ್ಯಕೀಯ ತುರ್ತು ಪರಿಸ್ಥಿತಿ ಹೇರುವ ಅಗತ್ಯ ಇದೆಯೇ?
Last Updated 30 ಏಪ್ರಿಲ್ 2021, 19:55 IST
ಅಕ್ಷರ ಗಾತ್ರ

ಫೆಬ್ರವರಿ ಮೊದಲ ವಾರದಿಂದೀಚೆಗೆ ಕೊರೊನಾ ಪ್ರಕರಣಗಳ ಎರಡನೇ ಅಲೆ ಏರುಗತಿ ಕಾಣತೊಡಗಿದ ಬಳಿಕ, ಸಾರ್ವಜನಿಕವಾಗಿ ಎದ್ದಿರುವ ಎರಡು ಮಹತ್ವದ ಸವಾಲು ಗಳೆಂದರೆ ಚಿಕಿತ್ಸೆಯ ಲಭ್ಯತೆ ಮತ್ತು ಅದರ ವೆಚ್ಚ. ಬಹಳಸೀಮಿತವಾದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ, ಒಂದು ಮೇಲ್ಮಿತಿ ದಾಟಿದ ಬಳಿಕ ವ್ಯವಸ್ಥೆಸಂಪೂರ್ಣವಾಗಿ ಹದಗೆಡುವುದು ನಿರೀಕ್ಷಿತ. ಕೊರೊನಾದ ಈ ಎರಡನೇ ಅಲೆ ಕ್ಷಿಪ್ರ ಗತಿಯಲ್ಲಿ ಮೇಲ್ಮುಖವಾಗಿರುವುದರಿಂದ,ದೇಶದ ಹಲವೆಡೆ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸಾಲುಸಾಲು ವರದಿಗಳು ಕಾಣಿಸಿಕೊಳ್ಳುತ್ತಿವೆ. ಇಂತಹದೊಂದುಅಭೂತಪೂರ್ವ ಸನ್ನಿವೇಶದಲ್ಲಿ ಜನರ ಜೀವ ಉಳಿಸುವುದಕ್ಕೆ ಏನು ಮಾಡಬೇಕಿತ್ತು?

ಕೊರೊನಾ ನೂರಕ್ಕೆ ನೂರು ಮಾರಣಾಂತಿಕ ರೋಗವೇನಲ್ಲ. ಭಾರತದಲ್ಲಿ ಈವತ್ತಿನ ತನಕ, ಸರ್ಕಾರಿ ಲೆಕ್ಕಾಚಾರಗಳಪ್ರಕಾರ ಕೊರೊನಾ ರೋಗಿಗಳ ಸಾವಿನ ಪ್ರಮಾಣ ಶೇ 1.12 ಮಾತ್ರ. ವಾಸ್ತವ ಅಂಕಿಸಂಖ್ಯೆಗಳು ಇದಕ್ಕಿಂತಲೂಹೆಚ್ಚಿರಬಹುದು. ಆದರೆ, ಸವಾಲಿರುವುದು ದೇಶದ ಜನಸಂಖ್ಯೆ ಮತ್ತು ಅದಕ್ಕನುಗುಣವಾದ ಗಾತ್ರದ್ದಾಗಿರದ ಆರೋಗ್ಯ ರಕ್ಷಣಾವ್ಯವಸ್ಥೆಯದು. ಆರೋಗ್ಯ ರಕ್ಷಣಾ ವ್ಯವಸ್ಥೆಯ ಮಿತಿಯನ್ನು ಮೀರಿ ರೋಗಿಗಳ ಒಳಹರಿವು ಆರಂಭ ಆದಾಗ, ಬದುಕಿಸಬಹುದಾಗಿದ್ದ ಹಲವು ಜೀವಗಳು ಇಲ್ಲದಾಗುತ್ತವೆ ಎಂಬುದೇ ಕೊರೊನಾ ಜಗನ್ಮಾರಿಯ ಕುರಿತ ಆತಂಕಕ್ಕೆ ಮೂಲ ಕಾರಣ ಮತ್ತದು ನಿಜ ಎಂಬುದು ದೇಶದ ಹಲವೆಡೆ ಕಳೆದೊಂದು ವಾರದಿಂದ ಸಾಬೀತಾಗತೊಡಗಿದೆ. ಹೀಗಾದಾಗ ಅದುಆರೋಗ್ಯ ತುರ್ತುಸ್ಥಿತಿ ಎಂದೇ ಪರಿಗಣಿತ ಆಗಬೇಕು.

ಸಂವಿಧಾನದ ಏಳನೇ ಪರಿಚ್ಛೇದದ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ, ಶುಚಿತ್ವ, ಆಸ್ಪತ್ರೆಗಳು ರಾಜ್ಯಪಟ್ಟಿಯಲ್ಲಿ ಬರುತ್ತವೆ.ಜಗನ್ಮಾರಿಯ ಸನ್ನಿವೇಶದಲ್ಲಿ ಇದಕ್ಕೆ ಒಂದು ಒಕ್ಕೂಟ ವ್ಯವಸ್ಥೆಯ ಭಾಗವಾಗಿ, ಕೇಂದ್ರದ ಸಹಾಯಹಸ್ತ ಬೇಕಾಗಬಹುದು.ಆದರೆ, ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ತಾಳಕ್ಕೆ ರಾಜ್ಯಗಳು ಕುಣಿಯತೊಡಗಿರುವುದು, ಸದ್ಯದ ಎಲ್ಲಗೊಂದಲಗಳಿಗೆ ಮೂಲ ಕಾರಣ ಅನ್ನಿಸುತ್ತಿದೆ. ಭಾರತದಂತಹ ವಿಸ್ತಾರವಾದ, ವೈವಿಧ್ಯಗಳಿಂದೊಡಗೂಡಿದ ದೇಶದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ‘ಒಂದು ದೇಶ ಒಂದು ನಿಯಮ’ ಅಪಾಯಕಾರಿ. ಲಾಕ್‌ಡೌನ್, ಕಾರ್ಮಿಕರ ವಲಸೆ,ಆರ್ಥಿಕತೆಯ ಸಂರಕ್ಷಣೆ, ಆಸ್ಪತ್ರೆ ಸೇವೆ ಸೇರಿದಂತೆ ಎಲ್ಲ ರಂಗಗಳಲ್ಲೂ ಇದು ಮತ್ತೆ ಮತ್ತೆ ಸಾಬೀತಾಗಿದೆ. ಜಗತ್ತಿನ ಹಲವುಸಣ್ಣ ದೇಶಗಳೂ ಇದನ್ನು ಕೊರೊನಾ ನಿಯಂತ್ರಣದಲ್ಲಿ ಯಶಸ್ಸಿನ ಮೂಲಕ ಸಾಬೀತು ಮಾಡಿ ತೋರಿಸಿವೆ. ಆದರೆ ಅದರಿಂದ ಪಾಠ ಕಲಿಯಲು ನಮಗಿನ್ನೂ ಸಾಧ್ಯವಾಗಿಲ್ಲ.

ಕಳೆದ ವರ್ಷ ಮೊದಲ ಅಲೆಯ ವೇಳೆ, ತಯಾರಿಯಲ್ಲಿ ಕೊರತೆಗೆ ಹೊರತಾಗಿಯೂ, ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ತನ್ನ ಸುಪರ್ದಿಗೆ ಪಡೆದಿತ್ತು. ಅಲೆಯ ತೀವ್ರತೆ ಕಂಠಮಟ್ಟ ಮಾತ್ರ ಬಂದಿದ್ದುದರಿಂದ, ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಎದ್ದುಕಾಣುವ ಸಮಸ್ಯೆಗಳೇನೂ ತೋರಿಬರಲಿಲ್ಲ. ಆದರೆ ಈ ಬಾರಿ, ಅಲೆಯ ತೀವ್ರತೆಯಿಂದಾಗಿ ರಾಜ್ಯದ ಹಲವು ನಗರಗಳಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ, ಆರಂಭದಲ್ಲೇ ಅವ್ಯವಸ್ಥೆ ಎದ್ದು ಕಾಣತೊಡಗಿದೆ.ಜನಸಾಮಾನ್ಯರು ಆರೋಗ್ಯ ಸೇವೆಯಿಂದ (ಅದು ಖಾಸಗಿಯಿರಲಿ-ಸರ್ಕಾರಿ ಇರಲಿ) ನಿರೀಕ್ಷಿಸುವುದು ಕನಿಷ್ಠ ಸ್ಪಂದನೆ-ಸಾಂತ್ವನವನ್ನು. ಅದೂ ದೊರೆಯದಿದ್ದಾಗ ಹಾಹಾಕಾರ ಖಚಿತ. ಅದೇ ಈಗ ಆಗುತ್ತಿರುವುದು. ಬೆಂಗಳೂರಿನಲ್ಲೇ, ಬೃಹತ್‌ ಬೆಂಗಳೂರು ಮಹಾನಗರ‍ಪಾಲಿಕೆ ಕೊಡಬೇಕಾಗಿರುವ ನಂಬರ್ ಪಡೆಯುವುದರಿಂದ ಆರಂಭಿಸಿ, ಬೆಡ್ ಸಿಗುವುದು, ಆಕ್ಸಿಜನ್ ಸಿಗುವುದು, ವೈದ್ಯರ ನಿಕಟನಿಗಾಸಿಗುವುದು, ವೆಂಟಿಲೇಟರ್ ಸಿಗುವುದು, ಔಷಧಿ ಸಿಗುವುದು… ಹೀಗೆ, ಆರೋಗ್ಯ ಸೇವೆಯ ಪ್ರತಿಯೊಂದು ಹಂತದಲ್ಲೂಅಡಚಣೆಗಳು ಕಾಣಿಸಿಕೊಳ್ಳುತ್ತಿವೆ.

ಆರೋಗ್ಯ ಎಂಬುದು ‘ಸೇವೆ’. ಅದು ಒಂದು ‘ವ್ಯವಹಾರ’ ಅಲ್ಲ. ಯಾವುದೇ ಸೇವೆ ಖಾಸಗೀಕರಣಗೊಳ್ಳುವಾಗ, ಅದರಸಮರ್ಥಕರ ಆಶಯ ಇರುವುದು, ಆ ಸೇವೆಯ ಮೊನಚು ಹೆಚ್ಚಿಸಬೇಕೆಂಬುದು. ಅದಕ್ಕೆ ಆರೋಗ್ಯವೂ ಹೊರತಲ್ಲ. ಆದರೆ ಆರೋಗ್ಯವನ್ನು ಖಾಸಗೀಕರಿಸಿ, ಶುದ್ಧ ವ್ಯವಹಾರವಾಗಿ ನೋಡತೊಡಗಿದಾಗ, ಸರ್ಕಾರವೂ ಅದಕ್ಕೆ ಪೂರಕವಾಗಿ ವರ್ತಿಸತೊಡಗಿದಾಗ, ಸಾಂವಿಧಾನಿಕವಾದ ಬದುಕುವ ಹಕ್ಕೂ ಆತಂಕಕ್ಕೊಳಗಾಗುತ್ತದೆ. ಬಹಳ ಸರಳವಾಗಿ, ಜಗನ್ಮಾರಿ ಅಲೆಯ ಹೊಡೆತ ಮುಗಿಯುವ ತನಕ ಎಲ್ಲ ಆಸ್ಪತ್ರೆ ಸೇವೆಗಳು ಸರ್ಕಾರದ ವಶದಲ್ಲಿರುತ್ತವೆಎಂದು ರಾಜ್ಯ ಸರ್ಕಾರ ಪ್ರಕಟಿಸಿದ್ದರೆ, ಇವತ್ತು ಕಾಣಿಸುತ್ತಿರುವ ತಳಮಟ್ಟದ ಹೆಚ್ಚಿನ ಸಮಸ್ಯೆಗಳು ಇಷ್ಟು ತೀವ್ರವಾಗಿ ಇರುತ್ತಿರಲಿಲ್ಲ. ಕೊರೊನಾ ಮತ್ತು ಕೊರೋನೇತರ ಚಿಕಿತ್ಸೆಗಳೆರಡನ್ನೂ ಸರ್ಕಾರ ತನ್ನ ನಿಗಾದಡಿಯಲ್ಲೇ ತಕ್ಕಮಟ್ಟಿಗೆಸುಸೂತ್ರವಾಗಿ ನಿಭಾಯಿಸಬಹುದಿತ್ತು; ವೈದ್ಯರುಗಳನ್ನೂ ಆವಶ್ಯಕತೆ ಇರುವೆಡೆಗೆ ಹರಡಿ ಹಂಚಬಹುದಿತ್ತು. ಇಡಿಯ ವ್ಯವಸ್ಥೆಗೆ ಅದರ ಮಿತಿಯೊಳಗೇ ಒಂದು ಸಂತುಲನ ಬರುತ್ತಿತ್ತು.

ಈಗೇನಾಗುತ್ತಿದೆ?ಸರ್ಕಾರಿ ವ್ಯವಸ್ಥೆಯಲ್ಲಿ ಕಾಲುಭಾಗಕ್ಕಿಂತಲೂ ಹೆಚ್ಚು ವೈದ್ಯರು ಚಿಕಿತ್ಸೆ ನೀಡುವ ಬದಲು, ಕೊರೊನಾದ ಆಡಳಿತಾತ್ಮಕಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ, ಮೊದಲೇ ಮಾನವ ಸಂಪನ್ಮೂಲ ಕೊರತೆ ಇರುವ ಸರ್ಕಾರಿ ಆರೋಗ್ಯವ್ಯವಸ್ಥೆ ಶಿಥಿಲಗೊಂಡಿದೆ. ಖಾಸಗಿಯಲ್ಲಿ 30ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಅಂದಾಜು 483 ಆಸ್ಪತ್ರೆಗಳಲ್ಲಿ, ಶೇ 80ರಷ್ಟು ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಕಾಯ್ದಿರಿಸಲು ಸರ್ಕಾರ ಸೂಚಿಸಿದ್ದು, ಅದಕ್ಕೆ ರೆಫರಲ್ ಸಿಸ್ಟಂನಂತಹ ಲೇವಾದೇವಿವಿಧಿಸುವ ಮೂಲಕ ಅನಗತ್ಯ ವ್ಯವಹಾರಗಳಿಗೆ, ಔಷಧಿಗಳ ಕಾಳಸಂತೆಗೆ ದಾರಿ ಮಾಡಿಕೊಡಲಾಗಿದೆ.ರೆಫರಲ್ ವಿಧಾನದಿಂದಾಗಿ, ಹಲವೆಡೆ ಆರೋಗ್ಯ ಸೇವೆಯ ನಿಯತ್ತಿನ ಪ್ರಶ್ನೆಗಳು ಉದ್ಭವವಾಗತೊಡಗಿವೆ. ಖಾಸಗಿವ್ಯವಸ್ಥೆಯಲ್ಲಿ, ಸರ್ಕಾರಿ ರೆಫರೆನ್ಸ್ ಇಲ್ಲದೆ ನೇರವಾಗಿ ಬಂದ ಕೊರೊನಾ ರೋಗಿಗಳ ಚಿಕಿತ್ಸೆ ಖಾಸಗಿಯವರ ಪಾಲಿಗೆಅತ್ಯಂತ ಲಾಭದಾಯಕ ಮತ್ತು ನಿರಪಾಯಕಾರಿ ಎಂಬುದು ಕಳೆದ ಅಲೆಯ ವೇಳೆ ಸಾಬೀತಾಗಿದೆ. ಖಾಸಗಿ ಆಸ್ಪತ್ರೆಗಳುರೂಢಿಸಿಕೊಂಡಿರುವ ‘ಸೇವೆ’ಯ ಅಪಾರದರ್ಶಕ ಮಾಡೆಲ್‌ನ ಕಾರಣದಿಂದಾಗಿ, ರೋಗಿಯ ಆರೈಕೆದಾರರು-ಕುಟುಂಬಿಕರಿಗೆಯಾವುದೂ ಗೋಚರ ವಿರುವುದಿಲ್ಲ. ಇದನ್ನೇ ಬಳಸಿಕೊಂಡು, ಅಲ್ಪಸ್ವಲ್ಪ ರೋಗಲಕ್ಷಣಗಳಿರುವವರನ್ನು ಗುಡ್ಡೆಹಾಕಿ ಕೊಂಡು,ಪಿಪಿಇ ಕಿಟ್ ಇತ್ಯಾದಿ ಹೆಸರಿನಲ್ಲಿ ಸಮೃದ್ಧ ಫಸಲು ತೆಗೆದ ಹಲವಾರು ಪ್ರಕರಣಗಳು ಕಳೆದಬಾರಿ ಜನಸಾಮಾನ್ಯರಲ್ಲಿಕೊರೊನಾ ಚಿಕಿತ್ಸೆಯ ಬಗ್ಗೆಯೇ ಅಪನಂಬಿಕೆಗಳನ್ನು ಹುಟ್ಟಿಸಿದ್ದವು.

ಇದರ ಬದಲು, ರಾಜ್ಯ ಸರ್ಕಾರ ಎಲ್ಲ ಸರ್ಕಾರಿ-ಖಾಸಗಿ ಆಸ್ಪತ್ರೆಗಳ ಉಸ್ತುವಾರಿಯನ್ನು ತಾನೇ ಹೊತ್ತಿದ್ದಲ್ಲಿ, ಈ ರೀತಿಯಅಪಸವ್ಯಗಳು ಉಂಟಾಗುತ್ತಿರಲಿಲ್ಲ. ಶೇ 80ರಷ್ಟನ್ನು ನಿಭಾಯಿಸುವ ಧೈರ್ಯ ಇರುವವರಿಗೆ, ಮತ್ತೊಂದು ಶೇ 20ರಷ್ಟು ಹೆಚ್ಚಲ್ಲ. ಒಂದುವೇಳೆ ಈಹಂತದಲ್ಲೂ, ರಾಜ್ಯಸರ್ಕಾರ ಇಂತಹದೊಂದು ನಿರ್ಧಾರ ಕೈಗೊಂಡರೆ, ಖಾಸಗಿ ಆಸ್ಪತ್ರೆಗಳು ಅಬ್ಬಬ್ಬಾ ಎಂದರೆ, ತಮ್ಮಆರು ತಿಂಗಳ ಆದಾಯದಲ್ಲಿ ಕೆಲವಂಶ ಕಳೆದುಕೊಂಡಾವು; ಅಷ್ಟೇ. ಕನಿಷ್ಠ ಜಗನ್ಮಾರಿ ಹಿಡಿತಕ್ಕೆ ಬರುವ ತನಕ, ನಾಡಿನಜನರ ಜೀವಗಳು ಸುರಕ್ಷಿತವಾಗುವ ತನಕ, ಆರೋಗ್ಯವು ‘ಸೇವೆ’ ಆಗಿ ಉಳಿಯಬೇಕಾದುದು,ವೈದ್ಯರು ತಮ್ಮ ಹಿಪೊಕ್ರೆಟಿಕ್ಪ್ರತಿಜ್ಞೆಗೆ ಬದ್ಧರಾಗಿರಬೇಕಾದುದು ಅನಿವಾರ್ಯ. ಅದಕ್ಕಾಗಿ ಯಾವುದೇ ಬೆಲೆ ತೆರುವುದಕ್ಕೆರಾಜ್ಯ ಸರ್ಕಾರಸನ್ನದ್ಧವಾಗಬೇಕು. ಖಾಸಗಿ ವ್ಯವಸ್ಥೆಯೂ ನಾಡಿನ,ದೇಶದ ಹಿತದೃಷ್ಟಿಯಿಂದ ಜಗನ್ಮಾರಿಯ ವಿರುದ್ಧದ ಈ ಯುದ್ಧಕಾಲದಲ್ಲಿ ಜನಪರವಾಗಿ ಕೈಜೋಡಿಸ ಬೇಕು. ಇಲ್ಲದಿದ್ದಲ್ಲಿ ಮೇ ಅಂತ್ಯದ ಹೊತ್ತಿಗೆ, ಪರಿಸ್ಥಿತಿ ಕೈಮೀರಿದರೆ ಗಂಡಾಂತರವಾದೀತು, ಮತ್ತದು ಹಾಗಾದಲ್ಲಿ, ಒಟ್ಟು ಆರೋಗ್ಯ ವ್ಯವಸ್ಥೆಯ ಮೇಲೆ ಅಳಿಸಲಾಗದ ಶಾಶ್ವತ ಕಪ್ಪುಚುಕ್ಕಿಯಾದೀತು.

ರಾಜಾರಾಂ ತಲ್ಲೂರು,ಸಾಮಾಜಿಕ ವಿಶ್ಲೇಷಕ
ರಾಜಾರಾಂ ತಲ್ಲೂರು,ಸಾಮಾಜಿಕ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT