ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್-‌19: ಕಳಪೆ ನಿರ್ವಹಣೆ‌ಗೆ ಯಾರು ಹೊಣೆ?

Last Updated 30 ಏಪ್ರಿಲ್ 2021, 19:58 IST
ಅಕ್ಷರ ಗಾತ್ರ

ಎಲ್ಲರ ಊಹೆ ಅಥವಾ ಲೆಕ್ಕಾಚಾರವನ್ನೂ ಮೀರಿ ಕೋವಿಡ್‌–19 ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚುತ್ತಿವೆ. ಬೆಂಗಳೂರು ನಗರದಲ್ಲಿಯೇ ಶೇ 70ರಷ್ಟು ಪ್ರಕರಣಗಳು ದೃಢಪಡುತ್ತಿವೆ. ಸತತ ಮೂರು ದಿನಗಳಿಂದ ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ವರದಿಯಾಗಿವೆ. ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅವುಗಳ ಪೈಕಿ ಶೇ 10ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇದೆ. 30 ಸಾವಿರ ಮಂದಿ ಈಗ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 18 ಸಾವಿರ ಮಂದಿ ಬೆಂಗಳೂರಿನ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಲೆಕ್ಕಾಚಾರಗಳು ತಪ್ಪಿದ್ದು ಎಲ್ಲಿ? ಕೋವಿಡ್‌ ಕಾರ್ಯಪಡೆಯು ಕರ್ನಾಟಕ ಸರ್ಕಾರಕ್ಕೆ ನೀಡಿದ ಅಂದಾಜು ಸರಿ ಇರಲಿಲ್ಲವೇ? ಕಾರ್ಯಪಡೆಯು ಕೋವಿಡ್‌ ಹರಡುವಿಕೆ ಪ್ರಮಾಣವನ್ನು ಕಡಿಮೆಯಾಗಿ ಅಂದಾಜು ಮಾಡಿತೇ ಎಂಬುದು ನಿಗೂಢ. ಒಟ್ಟು ಪರಿಸ್ಥಿತಿಯನ್ನು ಕೆಟ್ಟದಾಗಿ ನಿಭಾಯಿಸಿದ್ದರ ಹೊಣೆಯನ್ನು ಈಗ ವಹಿಸಿಕೊಳ್ಳುವವರು ಯಾರು? ಜನರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾಯುವುದು ನೋಡುವಾಗ ಹೃದಯ ಒಡೆದು ಹೋಗುತ್ತದೆ. ಕೆಲವರಿಗೆ ಆಸ್ಪತ್ರೆಗೆ ದಾಖಲಾಗುವುದಕ್ಕೂ ಸಾಧ್ಯವಾಗುತ್ತಿಲ್ಲ.

ಕೋವಿಡ್‌ ಎರಡನೇ ಅಲೆಯ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಯುವಜನರೇ ಸೋಂಕು ಮತ್ತು ಆರೋಗ್ಯ ತೊಂದರೆಗಳಿಗೆ ಹೆಚ್ಚು ಹೆಚ್ಚು ಒಳಗಾಗುತ್ತಿರುವುದು. ಅವರಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಅವರ ಸ್ಥಿತಿ ಅತ್ಯಂತ ವೇಗವಾಗಿ ಹದಗೆಡುತ್ತಿದೆ. ಐಸಿಯು ಹಾಸಿಗೆಗಳ ಬೇಡಿಕೆ ಹತ್ತು ಪಟ್ಟು ಹೆಚ್ಚಳವಾಗಿದೆ. ಅಂದರೆ, ಐಸಿಯುನಲ್ಲಿ ಆರೈಕೆ ಅಗತ್ಯ ಇರುವ ಹತ್ತು ಮಂದಿಯಲ್ಲಿ ಒಬ್ಬರಿಗೆ ಮಾತ್ರ ಆ ಸೌಲಭ್ಯ ಸಿಗುತ್ತಿದೆ ಎಂದು ಅರ್ಥ. ಉಳಿದ ಶೇ 90ರಷ್ಟು ರೋಗಿಗಳಿಗೆ ಎಲ್ಲಿ ಆರೈಕೆ ಮಾಡೋಣ? ಸರ್ಕಾರ ಮತ್ತು ಕೋವಿಡ್‌ ಕಾರ್ಯಪಡೆ ಈ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕು ಮತ್ತು ಅದು ಅಸಾಧ್ಯ.

ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಸಂಖ್ಯೆ ಹೆಚ್ಚಿಸುವುದು ಸುಲಭವಲ್ಲ. ಮೂಲಸೌಕರ್ಯ ಅಷ್ಟೇ ಅಲ್ಲ, ಅದನ್ನು ನಿರ್ವಹಿಸುವ ಮಾನವ ಸಂಪನ್ಮೂಲವನ್ನು ಹೊಂದಿಸುವುದು ದೊಡ್ಡ ಸವಾಲು. ಸರ್ಕಾರವು ಕೆಲವು ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಿದೆ. ಆರು ತಿಂಗಳು ಸಮಯ ಇದ್ದಾಗ ಅವುಗಳನ್ನು ಅಳವಡಿಸುವ ಮತ್ತು ಅಗತ್ಯ ಮಾನವ ಸಂಪನ್ಮೂಲ ಹೊಂದಿಸುವ ಕೆಲಸ ಮಾಡಿಲ್ಲ? ಸರ್ಕಾರದ ಅಸಡ್ಡೆ ಮತ್ತು ಹೊಣೆಗೇಡಿತನದಿಂದಾಗಿ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸಮಯ ಜಾರುತ್ತಿದೆ, ಸಂಬಂಧಪಟ್ಟ ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡಿ ಹಾನಿಯನ್ನು ಕನಿಷ್ಠಗೊಳಿಸಲು ಶ್ರಮಿಸಬೇಕಿದೆ.‌

ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಬಾರೂಡ್‌ಮಾಡಿದ ಅತ್ಯುತ್ತಮ ಕೆಲಸವನ್ನು ನೋಡಿದರೆ ಹೃದಯ ತುಂಬಿ ಬರುತ್ತದೆ. ಆ ಜಿಲ್ಲೆಯಲ್ಲಿ 1,200 ಐಸಿಯು ಹಾಸಿಗೆಗಳು, 5,000 ಪ್ರತ್ಯೇಕವಾಸದ ಹಾಸಿಗೆಗಳು ಮತ್ತು ಎರಡು ಆಮ್ಲಜನಕ ಘಟಕಗಳನ್ನು ಸ್ಥಾಪಿಸಿದ್ದಾರೆ. ಅಲ್ಲಿ ಹಾಸಿಗೆಗಾಗಲಿ, ಆಮ್ಲಜನಕಕ್ಕಾಗಲಿ ಕೊರತೆ ಇಲ್ಲ. ಲಸಿಕೆ ಕಾರ್ಯಕ್ರಮವೂ ಅತ್ಯುತ್ತಮವಾಗಿ ನಡೆದಿದೆ. ಈ ಮಾದರಿಯು ಸರ್ಕಾರದ ಕಣ್ಣು ತೆರೆಸಬೇಕು.

ಮುಂದಿನ ದಾರಿ ಏನು? ಬೆಂಗಳೂರಿನ ವಿಕ್ಟೋರಿಯಾ ಮತ್ತು ಬೌರಿಂಗ್‌ ಆಸ್ಪತ್ರೆಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ಈ ವರೆಗೆ ಆ ಕೆಲಸ ಆಗಿಲ್ಲ. ಅಲ್ಲಿನ ಪಿಎಂಎಸ್‌ಎಸ್‌ವೈ ವಿಭಾಗದಲ್ಲಿ 50 ಐಸಿಯು ಹಾಸಿಗೆಗಳನ್ನು ಗೋದಾಮಿನಲ್ಲಿಟ್ಟು ಬೀಗ ಹಾಕಲಾಗಿದೆ. ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿನ ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸಿ. ಸುಲಭವಾಗಿ 10 ಸಾವಿರ ಐಸಿಯು ಹಾಸಿಗೆಗಳು ದೊರೆಯುತ್ತವೆ. ಈ ಕಾಲೇಜುಗಳಲ್ಲಿ ಅಪಾರ ಮಾನವ ಸಂಪನ್ಮೂಲವೂ ಇದೆ. ಇಲ್ಲಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಸರ್ಕಾರ ನೀಡಬೇಕು. ಈ ಕೇಂದ್ರಗಳನ್ನು ನಿಭಾಯಿಸಲು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಬೇಕು ಮತ್ತು ಹೊಣೆಗಾರಿಕೆ ನಿಗದಿ ಮಾಡಬೇಕು.

ಐಸಿಯು ಮತ್ತು ಎಚ್‌ಡಿಯು (ಹೆಚ್ಚು ಅವಲಂಬನೆಯ ಘಟಕ) ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಖಾಸಗಿ ಕ್ಷೇತ್ರಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಆಮ್ಲಜನಕ ವ್ಯವಸ್ಥೆ ಇಲ್ಲದ ಹಾಸಿಗೆಗಳ ಅಗತ್ಯ ಈಗ ಇಲ್ಲ. ಎಲ್ಲ ಹಾಸಿಗೆಗಳನ್ನು ಎಚ್‌ಡಿಯು ಹಾಸಿಗೆಗಳಾಗಿ ಪರಿವರ್ತಿಸಬೇಕು. ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯ ಹೆಚ್ಚಳಕ್ಕೆ ನೆರವಿನ ಅಗತ್ಯ ಇದೆ.

ಆಮ್ಲಜನಕ ತಯಾರಿಕಾ ಘಟಕಗಳ ಸ್ಥಾಪನೆ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. ಈಗ ಪ್ರತಿ ದಿನ 1,400 ಟನ್‌ ಆಮ್ಲಜನಕ ಬೇಕು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ ನಮಗೆ ಹಂಚಿಕೆ ಮಾಡಿರುವುದು 800 ಟನ್‌ ಮಾತ್ರ.

ನರ್ಸ್‌ಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಖಾಸಗಿ ಆಸ್ಪತ್ರೆಗಳಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳೂ ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಕೊನೆಯದಾಗಿ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸಿ, ಲಸಿಕಾ ಅಭಿಯಾನಕ್ಕೆ ವೇಗ ತುಂಬಬೇಕಾಗಿದೆ. ಅತ್ಯಂತ ವೇಗವಾಗಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ತಲುಪಬೇಕು. ಲಸಿಕಾ ಅಭಿಯಾನದ ಜತೆಗೆ, ಸೋಂಕಿನ ಸರಣಿಯನ್ನು ಮುರಿಯಲು ಕಟ್ಟುನಿಟ್ಟಾದ ಲಾಕ್‌ಡೌನ್‌ ಅನ್ನು ಜಾರಿ ಮಾಡಬೇಕು. ಗಂಭೀರವಲ್ಲದ, ಈ ಅರೆ ಲಾಕ್‌ಡೌನ್‌ಗಳು ಹಾಸ್ಯಾಸ್ಪದ.

ಒಂದು ಜವಾಬ್ದಾರಿಯುತ ಸಂಘಟನೆಯಾಗಿ ‘ಫನಾ’, ಶೇ 50ರಷ್ಟು ಬೆಡ್‌ಗಳನ್ನು ಎಸ್‌ಎಎಸ್‌ಟಿ ಅಡಿ ಸರ್ಕಾರ ಸೂಚಿಸಿದ ರೋಗಿಗಳಿಗೆ ಹಂಚಿಕೆ ಮಾಡಲು ಬದ್ಧವಾಗಿದೆ. ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ; ಖಾಸಗಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಆಮ್ಲಜನಕ ಹಾಗೂ ರೆಮ್‌ಡಿಸಿವಿರ್‌ ಔಷಧವು ರೋಗಿಗಳಿಗೆ ಸರಿಯಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರಕ್ಕೆ ನೆರವು ನೀಡಲಾಗುತ್ತಿದೆ.

ಎಲ್ಲಾ ವರ್ಗಗಳಲ್ಲಿ ಹಾಸಿಗೆ ಲಭ್ಯತೆಯ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನು ನೀಡಲು ಶೀಘ್ರದಲ್ಲೇ ಫನಾ ಒಂದು ಪೋರ್ಟಲ್‌ ಆರಂಭಿಸಲಿದೆ. ಇದರಿಂದ ಹಾಸಿಗೆಯ ಹುಡುಕಾಟದಲ್ಲಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಬಹುದು.

ಡಾ. ಎಚ್‌.ಎಂ. ಪ್ರಸನ್ನ,ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ಹೋಮ್‌ಗಳ ಸಂಘದ ಫನಾ) ಅಧ್ಯಕ್ಷ
ಡಾ. ಎಚ್‌.ಎಂ. ಪ್ರಸನ್ನ,ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ಹೋಮ್‌ಗಳ ಸಂಘದ ಫನಾ) ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT