ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಶಾಲೆ: ಸುರಕ್ಷೆ ಖಾತರಿಗೆ ಸೂತ್ರ

ಶಾಲೆಗೆ ಮರಳಿದ ಮಕ್ಕಳ ಸುರಕ್ಷತೆಯ ಖಾತರಿಗಾಗಿ ಸಮಗ್ರವಾಗಿ ಸನ್ನದ್ಧಗೊಳ್ಳಬೇಕಾಗುತ್ತದೆ
Last Updated 24 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಕೋವಿಡ್ ಸಾಂಕ್ರಾಮಿಕದ ಸೋಂಕು ಹಾಗೂ ಸಾವಿನ ಪ್ರಕರಣಗಳು ಪ್ರತಿದಿನ ಕಡಿಮೆಯಾಗುತ್ತಾ ಇಳಿಮುಖವಾಗುತ್ತಿರುವಂತೆಯೇ ಬದುಕು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಚಿಣ್ಣರಿಗೆ ಶಾಲಾಪೂರ್ವ ತರಗತಿಗಳೂ ಸೇರಿದಂತೆ ಎಲ್ಲಾ ಹಂತಗಳ ಶಾಲೆಗಳು ಆರಂಭವಾಗಿರುವುದು ಇದಕ್ಕೆ ಸೂಚಕ.

ಆನ್‌ಲೈನ್ ಕಲಿಕೆಯ ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೇ ಶಾಲೆಗಳ ಪುನರಾರಂಭವನ್ನು ಅನೇಕ ಪೋಷಕರು ಸ್ವಾಗತಿಸಿದ್ದಾರೆ. ಆದರೆ, ಇಷ್ಟು ದೀರ್ಘಾವಧಿಯ ನಂತರ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಹಲವು ಸಾರ್ವಜನಿಕ ಆರೋಗ್ಯ ಸವಾಲುಗಳು ಸೃಷ್ಟಿಯಾಗುತ್ತವೆ. ಇವುಗಳಲ್ಲಿ ಮುಖ್ಯವಾದದ್ದು ಮುಂಜಾಗ್ರತಾ ಆರೋಗ್ಯ ಅಭ್ಯಾಸಗಳು, ಪೌಷ್ಟಿಕ ಆಹಾರ ಹಾಗೂ ಮಾನಸಿಕ ಯೋಗಕ್ಷೇಮ. ಶಾಲೆಗೆ ಮರಳಿದ ಮಕ್ಕಳ ಸುರಕ್ಷತೆಯ ಖಾತರಿಗಾಗಿ ಸಮಗ್ರವಾಗಿ ಸನ್ನದ್ಧಗೊಳ್ಳಬೇಕಾದುದೂ ಮುಖ್ಯ.

ಮೊದಲನೆಯದಾಗಿ, ಮೂಲಭೂತವಾದ ಸುರಕ್ಷತಾ ನಿಯಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಎಂದರೆ… ಮಾಸ್ಕ್ ಧರಿಸುವುದು, ಕೈತೊಳೆಯುವುದು ಹಾಗೂ ಸಾಧ್ಯವಾದರೆ ದೈಹಿಕ ಅಂತರ ಕಾಪಾಡಿಕೊಳ್ಳುವುದು. ನೀರು ಸರಬರಾಜು, ಸ್ವಚ್ಛತಾ ಸೌಲಭ್ಯಗಳು ಸರಿಯಾಗಿ ಕೆಲಸ ಮಾಡುತ್ತಿರುವುದರ ಬಗ್ಗೆ ಶಾಲೆಗಳೂ ಖಚಿತಪಡಿಸಿಕೊಳ್ಳಬೇಕು. ತರಗತಿಗಳ ಪೀಠೋಪಕರಣ
ಗಳನ್ನು ಸಮರ್ಪಕವಾಗಿ ಜೋಡಿಸಿರಬೇಕು. ಜೊತೆಗೆ, ಮಕ್ಕಳಲ್ಲಿ ಜ್ವರ, ಕೆಮ್ಮಿನಂತಹ ಯಾವುದಾದರೂ ಲಕ್ಷಣಗಳಿವೆಯೇ ಎಂಬ ಬಗ್ಗೆ ನಿಯಮಿತವಾಗಿ ನಿಗಾ ಇರಿಸುವ ವ್ಯವಸ್ಥೆಯನ್ನು ರೂಪಿಸಬೇಕು.

ಎರಡನೆಯದು, ಶಾಲೆಯ ಪೌಷ್ಟಿಕ ಆಹಾರ ಕಾರ್ಯಕ್ರಮವು ಪೂರ್ಣವಾಗಿ ಕೆಲಸ ನಿರ್ವಹಿಸುವಂತಿರುವುದನ್ನು ಶಾಲೆಗಳು ಖಾತರಿಪಡಿಸಿಕೊಳ್ಳಬೇಕು. ಮಕ್ಕಳ ಪೌಷ್ಟಿಕತೆಯ ಸ್ಥಿತಿಗತಿ ಮೇಲೆ ಈ ಸಾಂಕ್ರಾಮಿಕವು ಬಹಳಷ್ಟು ದುಷ್ಪರಿಣಾಮ ಬೀರಿರುವುದನ್ನು ಜಾಗತಿಕ ಅಂಕಿಅಂಶಗಳು ತೋರಿಸಿಕೊಟ್ಟಿವೆ. ಭಾರತದಂತಹ ಕಡಿಮೆ ವರಮಾನದ ರಾಷ್ಟ್ರಗಳಲ್ಲಂತೂ ಇದು ಅಪೌಷ್ಟಿಕತೆಯ ಗಂಭೀರ ಬಿಕ್ಕಟ್ಟಿಗೆ ಕಾರಣವಾಗಿದೆ. ಸಾಂಕ್ರಾಮಿಕದ ಮುಂಚೆಯೇ, ಭಾರತದ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇತ್ತು. ಅಪೌಷ್ಟಿಕತೆಯ ಅಲ್ಪ ಹಾಗೂ ದೀರ್ಘಾವಧಿ ದುಷ್ಪರಿಣಾಮಗಳನ್ನು ತಗ್ಗಿಸುವುದಕ್ಕಾಗಿಯೇ ಸರ್ಕಾರವು 2001ರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು (ಮಿಡ್‌ಡೇ ಮೀಲ್ ಸ್ಕೀಮ್- ಎಂಡಿಎಂಎಸ್) ರಾಷ್ಟ್ರದಾದ್ಯಂತ ವಿಸ್ತರಿಸಿತು. ರಾಷ್ಟ್ರದಾದ್ಯಂತ ಸರ್ಕಾರಿ ಶಾಲೆಗಳ 12 ಕೋಟಿ ಮಕ್ಕಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.

ಮಕ್ಕಳ ಪೌಷ್ಟಿಕತೆಗೆ ನೆರವಾಗಲು ಹಲವು ಚಟುವಟಿಕೆಗಳನ್ನು ಶಾಲೆಗಳು ಹಮ್ಮಿಕೊಳ್ಳಬಹುದು:

* ಎಲ್ಲಾ ಮಕ್ಕಳ ಎತ್ತರ ಹಾಗೂ ತೂಕವನ್ನು ಅಳೆದು ಅದನ್ನು ಡಬ್ಲ್ಯುಎಚ್‌ಒ 2017ರ ಬೆಳವಣಿಗೆ ನಕ್ಷೆ (ಚಾರ್ಟ್) ಜೊತೆ ಹೋಲಿಸಿ ನೋಡಬಹುದು. ಅಪಾಯದಲ್ಲಿರುವ ಮಕ್ಕಳನ್ನು ತಕ್ಷಣ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ. ತೀರಾ ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಬೇಕು.

* ಲಭ್ಯವಿರುವ ಎಂಡಿಎಂಎಸ್ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಪ್ರೋಟೀನ್ ಹೆಚ್ಚಿರುವ ಆಹಾರ, ಹಣ್ಣು, ತರಕಾರಿ ಒದಗಿಸಬೇಕು. ಇತರ ಆಹಾರ ಗುಂಪುಗಳೂ ಮುಖ್ಯ. ಶೇಂಗಾ (ಉದಾಹರಣೆಗೆ ಚಿಕ್ಕಿ), ಮೊಳಕೆ ಹೆಸರುಕಾಳು ಅಥವಾ ಸ್ಥಳೀಯ ಸಿರಿಧಾನ್ಯ (ರಾಗಿ, ಜೋಳ), ಬಾಳೆ, ಸೀಬೆ, ಪರಂಗಿ ಅಥವಾ ಋತುಮಾನಕ್ಕೆ ಅನುಸಾರವಾಗಿ ಯಾವುದಾದರೂ ಹಣ್ಣುಗಳು ಹಾಗೂ ಸ್ಥಳೀಯವಾಗಿ ಅಗ್ಗವಾಗಿ ಲಭ್ಯವಿರುವ ಯಾವುದಾದರೂ ತರಕಾರಿಗಳು.

* ಶಾಲೆಯಿಂದ ಹೊರಗಿರುವ ಎಲ್ಲಾ ಮಕ್ಕಳು, ವಿಶೇಷವಾಗಿ ಹೆಣ್ಣು ಮಕ್ಕಳು ಮರಳಿ ಶಾಲೆಗೆ ಬರುವಂತೆ ಮಾಡಬೇಕು. ಜೀವನೋಪಾಯ ನಷ್ಟ ಮತ್ತಿತರ ಸಾಮಾಜಿಕ, ಆರ್ಥಿಕ ಕಾರಣಗಳಿಂದಾಗಿ ಅನೇಕ ದೊಡ್ಡ ಮಕ್ಕಳು ವರಮಾನ ತರುವ ಚಟುವಟಿಕೆ ಅಥವಾ ಗೃಹಕೃತ್ಯಗಳಲ್ಲಿ ತೊಡಗಿಕೊಂಡು ಶಾಲೆಗೆ ವಾಪಸ್ ಬರುವುದು ಕಷ್ಟವಾಗಿರಬಹುದು. ಮಕ್ಕಳನ್ನು ಶಾಲೆಗೆ ವಾಪಸ್ ಕರೆತರಲು ಮಧ್ಯಾಹ್ನದ ಬಿಸಿಯೂಟವು ಬಲವಾದ ಪ್ರೇರಕವಾಗಲಿದೆ.

ಕಡೆಗೆ, ಶಾಲೆಗೆ ಮರಳಿ ಬರುವ ಮಕ್ಕಳನ್ನು ಬರಮಾಡಿಕೊಳ್ಳುವಲ್ಲಿ ಸೂಕ್ಷ್ಮತೆ ಅಳವಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ದುರ್ಘಟನೆಗಳು ಹಾಗೂ ಬದುಕಿನಲ್ಲಿ ಕಂಡುಂಡ ತುರ್ತು ಸಂದರ್ಭಗಳು, ಮನಃಸ್ಥಿತಿ ಹಾಗೂ ನಡವಳಿಕೆ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ವಲ್ಪ ದೊಡ್ಡ ಮಕ್ಕಳಲ್ಲಿ ಮಾದಕವಸ್ತು ವ್ಯಸನ ಹಾಗೂ ಆತ್ಮಹತ್ಯೆ ಪ್ರವೃತ್ತಿಗಳಿಗೂ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ.

ಪ್ರೊ. ಶ್ರೀಲತಾ ರಾವ್ ಶೇಷಾದ್ರಿ
ಪ್ರೊ. ಶ್ರೀಲತಾ ರಾವ್ ಶೇಷಾದ್ರಿ

ಸಾಂಕ್ರಾಮಿಕವು ಅಂದಾಜು 23 ಕೋಟಿ ಹೆಚ್ಚುವರಿ ಭಾರತೀಯರನ್ನು ಬಡತನಕ್ಕೆ ದೂಡಿದೆ ಎಂಬುದನ್ನು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ‘ದಿ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2021 ವರದಿ’ ತೋರಿಸಿಕೊಟ್ಟಿದೆ. ಇದರಿಂದಾಗಿ ಉಂಟಾದ ದುಃಖ, ಭಯ, ಅನಿಶ್ಚಿತತೆ, ಸಾಮಾಜಿಕವಾಗಿ ಹೊರಗುಳಿಯುವಿಕೆ, ಟಿ.ವಿ, ಕಂಪ್ಯೂಟರ್ ಮುಂದೆ ಹೆಚ್ಚಿನ ಸಮಯ ಕಳೆಯುವಿಕೆ, ಮಕ್ಕಳ ಪೋಷಣೆಯಲ್ಲಿ ಅತಿಯಾದ ತೊಡಗಿಕೊಳ್ಳುವಿಕೆಯಿಂದ ಉಂಟಾಗುವ ಪೋಷಕರಲ್ಲಿನ ಸುಸ್ತು- ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಲವು ಮಕ್ಕಳು, ವಿಶೇಷವಾಗಿ ಅಂಚಿಗೆ ಸರಿದ ಕಡುಬಡ ಕುಟುಂಬಗಳ ಮಕ್ಕಳು ಹಲ ಬಗೆಯ ಕ್ಲೇಶಭರಿತ ಸನ್ನಿವೇಶಗಳನ್ನು ಅನುಭವಿಸಿರುತ್ತಾರೆ.

ಶಾಲೆಗಳು, ಶಿಕ್ಷಕರು ಹಾಗೂ ಪೋಷಕರು ಅಳವಡಿಸಿಕೊಳ್ಳಬಹುದಾದ ಕೆಲವು ಕ್ರಮಗಳು:

* ಶಾಲೆಗೆ ವಾಪಸಾಗುವ ಕುರಿತಾದ ಭೀತಿ, ಆತಂಕ ನಿವಾರಿಸುತ್ತಾ ಸರಳವಾಗಿ, ಪ್ರಾಮಾಣಿಕವಾಗಿ, ಶಾಂತರೀತಿಯಿಂದ ಸಂವಹನ ಮಾಡುವುದು.

* ವೈರಸ್ ಸೋಂಕಿನ ಬಗ್ಗೆ ವ್ಯಾಪಕವಾಗಿ ಹರಡಿಕೊಂಡ ಮಿಥ್ಯೆಗಳು, ತಪ್ಪು ಮಾಹಿತಿಗಳನ್ನು ಬಿಡಿಸಿ, ವಿವರಿಸಿ ಹೇಳುವುದು

* ಕೌಟುಂಬಿಕ ದೌರ್ಜನ್ಯ, ಹಿಂಸೆಗೆ ಸಾಕ್ಷಿಯಾದ ಅಥವಾ ತಾವೇ ಸ್ವತಃ ಗುರಿಯಾಗಿರಬಹುದಾದ ಮಕ್ಕಳೊಂದಿಗೆ ಸೂಕ್ಷ್ಮತೆ ಅಗತ್ಯ. ಅಂತಹ ಮಕ್ಕಳು ದುಃಖಿತರಾಗಿರಬಹುದು ಅಥವಾ ವಿಚಿತ್ರ ಸ್ವಭಾವ ಪ್ರಕಟಿಸಬಹುದು. ಅವರೊಂದಿಗೆ ವಿಶ್ವಾಸದ ಬಂಧುತ್ವ ಬೆಸೆಯುವುದು ಮುಖ್ಯ. ಅಗತ್ಯ ಬಿದ್ದಲ್ಲಿ ಮಕ್ಕಳ ಸಹಾಯವಾಣಿ ಅಥವಾ ಪೊಲೀಸ್ ನೆರವಿನಂತಹ ವೃತ್ತಿಪರ ನೆರವು ಪಡೆದುಕೊಳ್ಳಬೇಕು.

* ಆನ್‌ಲೈನ್‌ನಲ್ಲಿರುವುದು ಎಲ್ಲರಿಗೂ ಬದುಕಿನ ರೀತಿಯಾಗಿ ಹೋಗಿದೆ. ಇದಕ್ಕೆ ಮಕ್ಕಳೂ ಹೊರತಲ್ಲ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವುದು ಹೇಗೆಂಬುದರ ಬಗ್ಗೆ ಮಕ್ಕಳಿಗೆ ಅರಿವಿರಬೇಕು.

* ಪರಸ್ಪರ ಸಹಾನುಭೂತಿ ಹಾಗೂ ಅಂತಃಕರಣದ ಮನಃಸ್ಥಿತಿಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸುವುದು ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಬಹು ಮುಖ್ಯ.

ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಅರ್ಹತೆ ಪಡೆದುಕೊಂಡಿರದ ಚಿಕ್ಕ ಮಕ್ಕಳನ್ನು ಶಾಲೆಗೆ ಮರಳಿ ಕಳಿಸಲು ಒಂದಿಷ್ಟು ಆತಂಕ ಕೆಲವರಲ್ಲಿದೆ. ಇಂತಹ ಸಂದರ್ಭದಲ್ಲಿ 12ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ‘ಕೋರ್ಬೆವ್ಯಾಕ್ಸ್’ ಲಸಿಕೆ ನೀಡಲು ಭಾರತೀಯ ಔಷಧ ಮಹಾನಿಯಂತ್ರಕರ ಕಚೇರಿಯು ಅಂಗೀಕಾರ ನೀಡಿರುವ ಪ್ರಕಟಣೆ ಸ್ವಾಗತಾರ್ಹ ಸುದ್ದಿಯಾಗಿದೆ. ಸಹಜ ಸ್ಥಿತಿಗೆ ತಲುಪುವ ಯತ್ನದಲ್ಲಿ ಹಲವು ತಪ್ಪು ಆರಂಭಗಳು ಹಾಗೂ ಪರಿಷ್ಕರಣೆಗಳನ್ನು ಎದುರುಗೊಳ್ಳಲೇ ಬೇಕಾಗುತ್ತದೆ. ಇಂತಹ ಪರಿಸ್ಥಿತಿ ಕುರಿತಂತೆ ಸಾಮುದಾಯಿಕ ಜಾಗತಿಕ ಗ್ರಹಿಕೆಯಿಂದ ಕಂಡುಕೊಂಡಿರುವ ಕೆಲವು ಸರಳ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮುಖಾಂತರ, ಮಕ್ಕಳನ್ನು ಸುರಕ್ಷಿತವಾಗಿ, ಆರೋಗ್ಯಕರವಾಗಿ ಶಾಲೆಗೆ ಮರಳಿ ತರುವ ಯತ್ನದಲ್ಲಿ ಯಶಸ್ವಿಯಾಗುವ ಪ್ರಮಾಣವನ್ನು ನಾವು ಹೆಚ್ಚಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT