ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಿತಾ ಬನ್ನಾಡಿ ಬರಹ: ಮತಿದೀವಿಗೆಯ ಮತ್ತೊಮ್ಮೆ ಹೊರುವ ಸಮಯ

ನಮ್ಮ ನೆಲದ ಚಿಂತನೆಗಳ ಸಾಗರದಿಂದ ನಾವು ಆಯ್ದುಕೊಳ್ಳದೇ ಬಿಟ್ಟಿರುವ ರನ್ನ ದೀವಿಗೆಗಳು
Last Updated 20 ಜುಲೈ 2022, 19:15 IST
ಅಕ್ಷರ ಗಾತ್ರ

ಜನ್ನನ ಯಶೋಧರ ಚರಿತೆಯಲ್ಲಿ ಅಭಯರುಚಿಯು ತಂಗಿ ಅಭಯಮತಿಗೆ ‘ಅಭೀತೆಯಾಗೆಲೆಗೆ ಮರಣದ ದೆಸೆಯೊಳ್’ ಎನ್ನುತ್ತಾನೆ. ಈ ಮಾತು ಹಲವು ಧ್ವನಿಗಳನ್ನು ಒಳಗೊಂಡಿರುವಂತಹದು.ಆಳುವ ದೊರೆಯಿಂದ ಬರಬಹುದಾದ ಅಕಾರಣವಾದ ಸಾವಿಗೆ ಹೆದರಬೇಡ ಎಂದು ಆ ಕಿರುಹರೆಯದ ಹುಡುಗ ಹೇಳುತ್ತಿರುವಾಗ, ಬದುಕಿಗೊಂದು ಮೌಲ್ಯವಿರಬೇಕು ಎಂಬ ಅರ್ಥವಿದೆ. ಮಾರಿದತ್ತನೆಂಬ ದೊರೆಯು, ಸತ್ತೆಯಿಂದ ದತ್ತವಾದ ಅಧಿಕಾರದ ಕತ್ತಿಯನ್ನು ಎತ್ತೆತ್ತ ಬೇಕಿದ್ದರೂ ಝಳಪಿಸಿದ ಠೇಂಕಾರದ ಹಿನ್ನೆಲೆಯಿದೆ. ದೊರೆತನವು ಒದಗಿಸಿರುವ ಕತ್ತಿಯು ಪ್ರಜೆಗಳನ್ನು ರಕ್ಷಿಸಲು ಮಾತ್ರ ಇರುವುದು ಎಂಬ ವಿವೇಕವನ್ನು ಕಳೆದುಕೊಂಡಾಗ, ಅದನ್ನು ಪ್ರಶ್ನಿಸುವ ಎದುರುನುಡಿಯೂ ಹುಟ್ಟಿಕೊಳ್ಳುತ್ತದೆ. ಆದರೆ ಆ ಮಾತು ಜೀವಕ್ಕೂ ಮುಳುವಾಗಬಹುದು. ಅಥವಾ ಕತೆ, ಕಾವ್ಯಗಳ ಆಶಯದಂತೆ ಕ್ರೂರಿಗಳ ಮನ ಬದಲಿಸಬಹುದು.

ಅಹಿಂಸೆಯ ದಾರಿಯಲ್ಲಿ ಸತ್ಯ, ನ್ಯಾಯಸಮ್ಮತ ಬಾಳ್ವೆಯ ತತ್ವವೆಂಬ ಧರ್ಮವಿಚಾರವನ್ನು
ಅಭಯಮತಿಯಿಂದ ಕೇಳಿದ ಮಾರಿದತ್ತ ಬದಲಾದ ಎಂದು ಕಾವ್ಯ ಹೇಳುತ್ತದೆ. ಅದು ಕಾವ್ಯದ ಆಶಾವಾದವೇ? ನಮ್ಮೆದುರಿನ ದಾರಿಯೇ?

ನಮ್ಮೆದುರಿನ ದಾರಿಯೂ ಕಠಿಣವೇ. ಆದರೂ ಪ್ರಾಜ್ಞರು ಈ ಪ್ರಯತ್ನಗಳನ್ನು ಬಿಟ್ಟಿಲ್ಲ. ಕೆಲವೇ ಕೆಲವು ಸಾಲುಗಳೇ ಆಗಿರಲಿ, ಅವು ಒಂದಿಡೀ ಸಮಾಜವನ್ನೇ ಪ್ರೇರಿಸಬಲ್ಲವು. ಬಂಡಿಗಟ್ಟಲೆ ಹೊಟ್ಟು ಮಾತು ಕಸದ ರಾಶಿಯಾಗಿ ನಾರಬಲ್ಲುದು. ಆದರೆ ಕಸವನ್ನೇ ಮೋಹಿಸುತ್ತೇವೆ ಎಂದರೆ ಯಾರೇನೂ ಮಾಡುವಂತಿಲ್ಲ. ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಎಂತೆಂತಹ ಅಮೂಲ್ಯವಾದ ಚಿಂತನೆಗಳು ಅರಳಿಕೊಂಡಿದ್ದರೂ ಆ ಕಡೆಗೆ ಕನ್ನಡಿಗರಿಗೆ ಅದೆಷ್ಟು ಆಸಕ್ತಿಯಿದೆ ಎನ್ನುವುದನ್ನು ಪುನರ್‌ಪರಿಶೀಲಿಸಬೇಕಾದ ಹೊತ್ತು ಇಂದು ಬಂದಿದೆ.

ಕಳೆದ ಶತಮಾನದ ಇಪ್ಪತ್ತರ ದಶಕದ ನಂತರದ ಭಾರತದಲ್ಲಿ, ಒಂದು ಸ್ವಾಯತ್ತ ಭಾರತ ಕಟ್ಟುವ ಉತ್ಸಾಹ ಮತ್ತು ಮೇರು ಚಿಂತನೆಗಳು ಮುನ್ನೆಲೆಗೆ ಬಂದುವು. ಪ್ರಜಾಪ್ರಭುತ್ವದೆಡೆಗೆ ಹೆಜ್ಜೆ ಹಾಕುವ ತಯಾರಿಯಲ್ಲಿ, ಪ್ರತೀ ಪ್ರಜೆಗೂ ಇರುವ ಜವಾಬ್ದಾರಿಯನ್ನು ನೆನಪಿಸುವ, ಹೇಳುವ ರೀತಿಯಲ್ಲಿ ಈ ಚಿಂತನೆಗಳು ಇರುವುದನ್ನು ಗಮನಿಸಬಹುದು. ಇವೆಲ್ಲದರ ಪ್ರತಿನಿಧಿ ರೂಪದಲ್ಲಿ ಕುವೆಂಪು ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ನಲವತ್ತರ ದಶಕದಲ್ಲಿ ಮಾಡಿದ ಭಾಷಣದ ಲೇಖನ ರೂಪ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ಯನ್ನು ಗಮನಿಸಬಹುದು. ರಾಜಪ್ರಭುತ್ವ, ಮತಪ್ರಭುತ್ವಗಳಡಿಯಲ್ಲಿ ರೂಪುಗೊಳ್ಳುವ ಗುಲಾಮಿ ಮತಿಸ್ಥಿತಿಯಾಚೆಗೆ
ಹುಟ್ಟಬೇಕಾಗಿರುವ ಎಲ್ಲ ಜಾತಿ, ಜನರ ಪ್ರಬುದ್ಧ ಮತಿಯೆಡೆಗೆ ಇದು ಯೋಚಿಸುತ್ತದೆ. ಇದನ್ನು ಸ್ಪಷ್ಟಪಡಿಸಲು ಅವರು, ‘ನಿರಂಕುಶಮತಿತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ನಿರಂಕುಶಮತಿ’ ಎನ್ನುತ್ತಾರೆ.‌‌‌‌‌ಇಂತಹ ಮತಿಯನ್ನು ನಿಸ್ತೇಜಗೊಳಿಸಿರುವ ಕೆಲವು ಅಂಶಗಳನ್ನು ಅವರು ಹೇಳುತ್ತಾ, ಮತವನ್ನು ಹೇಗೆ ಮೂಢಮತಿಯನ್ನು ಹುಟ್ಟುಹಾಕಲು ಬಳಸಿಕೊಳ್ಳಲಾಗಿದೆ ಎನ್ನುವೆಡೆಗೆ ಗಮನಸೆಳೆ
ಯುತ್ತಾರೆ. ‘ಸರ್ವಮತಗಳಿಗಿಂತಲೂ ಶುದ್ಧಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು.

ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಈಶ್ವರನು ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ. ಮತಿಯನ್ನು ತಿರಸ್ಕರಿಸಿದರೆ ಈಶ್ವರನ ಜ್ಯೋತಿಯನ್ನು ತಿರಸ್ಕರಿಸಿದಂತಾಗುತ್ತದೆ. ಹಾಗೆ ಮಾಡುವವನೇ ನಿಜವಾಗಿಯೂ ನಾಸ್ತಿಕನು. ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಿಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ’ (ಕುವೆಂಪು ಸಮಗ್ರ ಗದ್ಯ; ಸಂ:2, ಪ್ರಸಾರಾಂಗ; ಕನ್ನಡ ವಿ.ವಿ).

ಇಷ್ಟು ಸ್ಪಷ್ಟವಾಗಿ ದಾರ್ಶನಿಕ ಕವಿ ಹೇಳಿದ ಮಾತು ಎಪ್ಪತ್ತೈದರ ಸ್ವಾತಂತ್ರ್ಯಾಚರಣೆಯ ಸಂದರ್ಭದಲ್ಲಿ ಎಲ್ಲಿಗೆ ಹೋಗಿದೆ? ಇದನ್ನು ಕಾರ್ಯರೂಪಕ್ಕೆ ತರಬೇಕಾಗಿದ್ದ ಪ್ರಜಾಪ್ರಭುತ್ವದ ಅಂಗಸಂಸ್ಥೆಗಳು ಎಷ್ಟರಮಟ್ಟಿಗೆ ಇದನ್ನು ಅರ್ಥಮಾಡಿಕೊಂಡಿವೆ? ಪ್ರಚುರಗೊಳಿಸಿವೆ? ಜಾಗತೀಕರಣ ನಂತರದ ಭಾರತದ ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿಯೇ ಇದರ ವಿರುದ್ಧ ಚಲನೆ ವೇಗವಾಗಿದ್ದು ನವಗುಲಾಮಿತನವನ್ನು ಗಟ್ಟಿಗೊಳಿಸುವ ಭಾಗವಾಗಿಯೇ ಇದೆಯಲ್ಲದೆ ಇನ್ನೇನೂ ಅಲ್ಲ. ನಾನು ಗಮನಿಸಿದಂತೆ, ಉನ್ನತ ಶಿಕ್ಷಣ ಪಡೆದರೂ ಹಲವು ಯುವಜನರು ದುರ್ಬಲ ಮನಸ್ಕರಾಗಿ, ಅಧೀರರಾಗಿ, ಯಾರು ಏನು ಹೇಳಿದರೂ ಕುರುಡಾಗಿ ನಂಬುವ, ಮಾತಿಗೊಮ್ಮೆ ‘ಟಚ್‍ವುಡ್’ ಎಂದು ಬೆದರುವ, ಭೌತಿಕ ಸವಲತ್ತಿಗೆ ಮಾತ್ರ ವೈಯಕ್ತಿಕವಾಗಿ ಕಿತ್ತಾಡುವ, ಸದಾ ಅನಿಶ್ಚಿತತೆಯಲ್ಲಿ ಒದ್ದಾಡುವ ‘ಸಾಕುಪ್ರಾಣಿ’ಗಳಾಗಿದ್ದಾರೆ.

ಜಾಗತೀಕರಣ ನಂತರದ ನಮ್ಮ ಎಲ್ಲ ಶೈಕ್ಷಣಿಕ ವ್ಯವಸ್ಥೆಗಳು ಹಣವೊಂದನ್ನೇ ಮೌಲ್ಯವಾಗಿಸಿ, ಸದೃಢ ಮನೋಭಿತ್ತಿಯನ್ನು ರೂಪಿಸುವಲ್ಲಿ ವಿಫಲವಾಗಿವೆ. ಸವಲತ್ತು ಮತ್ತು ಮನರಂಜನೆಯ ಸಾಧನಗಳ ಒಡೆಯರಾಗುವ ಗುರಿಯನ್ನು ಸಾಧಿಸಿದ ನಂತರ ಕ್ರಮೇಣ ಮನದ ಟೊಳ್ಳು ಮುನ್ನೆಲೆಗೆ ಬಂದು ನಂತರ ರೆಡಿಮೇಡ್ ಅಧ್ಯಾತ್ಮ ‘ಗುರು’ಗಳ ಮೊರೆ ಹೋಗುವ ದುಃಸ್ಥಿತಿಯಲ್ಲಿ ಮುಕ್ಕಾಲುವಾಸಿ ಜನ ಬಳಲುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಳ್ಳಲು ಮಾಧ್ಯಮಗಳು, ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಎಲ್ಲವೂ ಇತರ ವ್ಯಾಪಾರಿ ಕ್ಷೇತ್ರಗಳ ಜೊತೆಗೆ ಪೈಪೋಟಿಗಿಳಿದಿವೆ. ಇಲ್ಲಿ ಮತಿಯ ಮೇಲಿನ ಆಕ್ರಮಣದ ನವ ನವ ವಿಧಾನಗಳೇ ಮೊದಲ ತೊದಲ ಹೆಜ್ಜೆಗಳಾಗುತ್ತವೆ.

ನಮ್ಮ ಕರ್ನಾಟಕ ನಮ್ಮ ಚಿಂತಕರ ಚಿಂತನೆಯ ನೆಲವನ್ನು ರೂಪಿಸದೇ ಹೋದುದರ ಸ್ಪಷ್ಟ ನಿದರ್ಶನ ನಮಗಿಂದು ಢಾಳಾಗಿ ಕಾಣತೊಡಗಿದೆ. ಈಚೆಗೆ ಒಬ್ಬರು ‘ವಾಸ್ತು ಗುರು’ ಎನಿಸಿಕೊಂಡವರ ಸಾವಿನ ನಂತರ ಫೇಸ್‍ಬುಕ್‍ನಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ಕಾಣಿಸಿದವು. ಅದರಲ್ಲಿ ಮುಖ್ಯವೆನಿಸಿದ್ದು, ಇಪ್ಪತ್ತು ವರ್ಷಗಳ ಹಿಂದೆ ತಾವುಗಳು ಯಾವುದೇ ವಾಸ್ತುವನ್ನು ಪಾಲಿಸುತ್ತಿರಲಿಲ್ಲ, ನಂಬುತ್ತಿರಲಿಲ್ಲ. ಆದರೆ ಕ್ರಮೇಣ ಇರುವುದನ್ನು ಒಡೆದು ವಾಸ್ತುವಿನ ಹಿಂದೆ ಹೋದೆವು. ಹಾಗೆ ಹೋದ ಕೂಡಲೇ ಎಲ್ಲವೂ ಸರಿಯೇನೂ ಆಗದಿದ್ದರೂ ಅದನ್ನು ಅನುಸರಿಸುವುದನ್ನು ಬಿಡಲಿಲ್ಲ ಎಂದು ಕೆಲವರು ಹೇಳಿದರೆ, ತಮ್ಮ ಬದುಕಿನ ಏರಿಳಿತ
ಗಳಲ್ಲೂ ತಾವದನ್ನು ನಂಬದೆ ಮುನ್ನಡೆದೆವು ಎಂದು ಇನ್ನು ಕೆಲವರು ಹೇಳಿದರು. ಆದರೆ, ಮೂಢಮತಿಗಳ ದೊಡ್ಡಬಣವೇ ಮುನ್ನೆಲೆಗೆ ಬಂದಿದ್ದು, ಅವರಲ್ಲಿ ಒಂದು ರೀತಿಯ ಒಗ್ಗೂಡುವಿಕೆ ಎಲ್ಲೆಡೆ ಗೋಚರಿಸುತ್ತಿದೆ. ಇದು ಒಟ್ಟು ಸಮಾಜದ ಅವನತಿಗೆ ಮೊದಲ ಕಲ್ಲು ಎಂಬುದರಲ್ಲಿ ಅನುಮಾನವೇ ಇಲ್ಲ.

ಕುವೆಂಪು ಎಪ್ಪತ್ತರ ದಶಕದಲ್ಲಿ ಪುನಃ ಯುವ ಲೇಖಕರನ್ನುದ್ದೇಶಿಸಿ ಮಾತನಾಡುವಾಗ, ಎಲ್ಲ ಧರ್ಮದ ಪುರೋಹಿತಶಾಹಿ ಹುಲಿಯಂತೆ ಎಂದು ವಿವರಿಸುತ್ತಾ, ಅದನ್ನು ಎದುರಿಸಲು, ‘ಮೊದಲ ಗುಂಡು ತಗುಲಬೇಕಾದದ್ದು ಹುಲಿಯ ತಲೆಗಲ್ಲ, ನಿಮ್ಮ ತಲೆಗೇ! ತಲೆ... ತಲೆ... ತಲೆ, ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು, ಅವರಿಗಲ್ಲ. ಆ ಪುರೋಹಿತ ವರ್ಗದವರಿಗಲ್ಲ. ನಿಮಗೆ!’ ಎನ್ನುತ್ತಾರೆ. ನಾವು ಇಂತಹ ಮಾತುಗಳನ್ನು ಸಂಪೂರ್ಣ ನಿರ್ಲಕ್ಷಿಸಿ, ‘ಅವರು’ ನಮ್ಮ ಮೆದುಳನ್ನು ‘ಕ್ಲೀನ್’ ಮಾಡುತ್ತಿರುವ ಸಮಾಜವನ್ನು ನಿರ್ಮಿಸಿದ್ದೇವೆ. ಹೀಗೆ ಕ್ಲೀನ್ ಅಗಿರುವವರು, ಬಸವಣ್ಣ, ಕುವೆಂಪು, ಕನಕ, ನಾರಾಯಣ ಗುರು, ಅಂಬೇಡ್ಕರ್ ಮೊದಲಾದವರನ್ನು ತಿಳಿದುಕೊಳ್ಳದೇ ಅವರ ಚಿಂತನೆಗಳನ್ನು ಹಂಚದೇ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು, ಇವರನ್ನೆಲ್ಲಾ ತಮ್ಮ ಜಾತಿಯವರು ಎಂಬ ಕಾರಣಕ್ಕೆ ಮಾತ್ರ ಸುಪರ್ದಿಗೆ ತೆಗೆದುಕೊಂಡಿರುವ ತಮಾಷೆಗಳು ನಡೆಯುತ್ತಿವೆ.

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ?
ಕಡೆ ನಡುವೆಂದೇನೊ ಮೃಡನ ಹಾಡುವಂಗೆ?
ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ?
ತಲೆಕಾಲೆಂದೇನೊ ಮಾಯೆಯ ಬಲೆಯ ನುಸುಳಿದವಂಗೆ?

ಎಂದ ವಚನಕಾರ ಹಡಪದ ಅಪ್ಪಣ್ಣನ ಅಂದಿನ ಮಾತಿನ ಸಾರವನ್ನು ಇಂದಿನ ಮತಭ್ರಾಂತಿಯ ಮತಿಗೆ ಹೇಳುವವರಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT