ಸೋಮವಾರ, ಅಕ್ಟೋಬರ್ 26, 2020
20 °C

PV Web Exclusive| ದಗಾಕೋರರ ದಂಧೆಯಲ್ಲಿ ಅಗ್ಗವಾದ ಗೌರವ ಡಾಕ್ಟರೇಟ್‌

ರಾಘವೇಂದ್ರ ಕೆ ತೊಗರ್ಸಿ Updated:

ಅಕ್ಷರ ಗಾತ್ರ : | |

‘ಡಾಕ್ಟರ್’‌ ಎನ್ನಿಸಿಕೊಳ್ಳಬೇಕೆಂಬ ಹಂಬಲ ಇದ್ದವರಿಗೆ ಇದು ಸುಗ್ಗಿಕಾಲ. ಓದಿದ್ದೀರೋ ಇಲ್ಲವೋ, ಸಜ್ಜನರೋ ದುರ್ಜನರೋ, ಪಾತಕಿಗಳೋ ಪಾಪದ ಜೀವಗಳೋ ಏನೇ ಆಗಿದ್ದರೂ ದುಡ್ಡು ಕೊಟ್ಟರೆ ಯಾರಾದರೂ ರಾಜ್ಯ, ಅಂತರರಾಜ್ಯ, ಅಂತರದೇಶಿಯ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರ್ ಪದವಿಯನ್ನು ಪಡೆಯಬಹುದು. 

ಹೆಸರಿನ ಮುಂದೆ ಪದವಿಗಳ ಸರಪಳಿಯನ್ನು ಪೋಣಿಸಿಕೊಳ್ಳುವ ಹಪಹಪಿಯಂತೆಯೇ ಹೆಸರಿನ ಹಿಂದೆ ‘ಡಾ.’ ಎಂದು ಹಾಕಿಕೊಳ್ಳುವ ಖಯಾಲಿ ಹೆಚ್ಚಾಗಿದೆ. ಇದರಿಂದಲೇ ಡಾಕ್ಟರ್‌ ಮತ್ತು ಗೌರವ ಡಾಕ್ಟರ್‌ ವ್ಯಾಪಾರದ ಅಂಗಡಿಗಳು ಜಗತ್ತಿನಗಲ ವ್ಯಾಪಿಸಿವೆ. ಅನೇಕ ವಿದೇಶಿ ವಿಶ್ವವಿದ್ಯಾಲಯಗಳು ಕೂಡ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿಯೂ ತಮ್ಮ ವ್ಯಾಪಾರದ ಏಜೆಂಟರನ್ನು ನೇಮಿಸಿಕೊಂಡಿವೆ. 

ಸಾಮಾನ್ಯವಾಗಿ ವೈದ್ಯರು ತಮ್ಮ ಎಂಬಿಬಿಎಸ್‌ ಪದವಿ ನಂತರ ವಿದೇಶದಲ್ಲಿ ಯಾವುದಾದರೂ ಪಿಜಿ ಡಿಪ್ಲೊಮಾ ಮಾಡಿದ್ದರೆ ಅದರ ಜೊತೆ ಆ ದೇಶದ ಹೆಸರನ್ನೂ ಕಂಸದಲ್ಲಿ ಹಾಕಿಕೊಳ್ಳುತ್ತಿದ್ದರು. ಅದರಂತೆಯೇ ಸಾಹಿತಿಯೊಬ್ಬರು ಇಂಗ್ಲಿಷ್‌ ಎಂಎ (ಲಂಡನ್‌) ಎಂದು ಕಾರ್ಡ್‌ ಮಾಡಿಸಿದ್ದರು. ಬಿಎ, ಎಂಎ ಎಂದು ವಿಜಿಟಿಂಗ್‌ ಕಾರ್ಡ್‌ ಮಾಡಿಸಿದ ಉಪನ್ಯಾಸಕರೂ ಇದ್ದಾರೆ. ಹೀಗೆ ವಿವಿಧ ಪದವಿಗಳನ್ನು ನಾಮದ ಮುಂದೆ ಹಾಕಿಸಿ ತಮ್ಮ ಓದಿನ ಸಾಧನೆಯನ್ನು ತೋರಿಸಲಾಗುತ್ತದೆ. ಶರಣರು ಸಾರಿದ ‘ಕಾಯಕವೇ ಕೈಲಾಸ’ ಎಂಬ ಮಾತಿನ ಹಿನ್ನೆಲೆಯಲ್ಲೇ ನೋಡಿದರೆ ಒಬ್ಬ ವಿದ್ಯಾರ್ಥಿ ತನ್ನ ಶೈಕ್ಷಣಿಕ ಅವಧಿಯಲ್ಲಿ ಓದುವುದು ಆತನ ಕೆಲಸ. ಅದರ ಪ್ರತಿಫಲವಾಗಿ ಯಾವುದೋ ಒಂದು ಪದವಿಯನ್ನು ನೀಡುತ್ತಾರೆ. ಅದರಲ್ಲಿ ಯಾವ ಹೆಚ್ಚುಗಾರಿಕೆ ಇದೆ ಎಂದು ತಮ್ಮ ಹೆಸರಿನೋತ್ತರವಾಗಿ ಪದವಿಯನ್ನು ಪೋಣಿಸಿಕೊಳ್ಳಬೇಕು. ಓದುವುದು ಒಬ್ಬ ವಿದ್ಯಾರ್ಥಿ ಕೆಲಸವಾದರೆ, ದುಡಿಯುವ ಜನರ ಶ್ರಮವೂ ಕೆಲಸವೇ. ಹಾಗೆಂದ ಮೇಲೆ ಅವರಿಗೆ ತಮ್ಮ ಹೆಸರಿನ ಮುಂದೆ ಪದವಿ ಪೋಣಿಸಿಕೊಳ್ಳುವ ಭಾಗ್ಯ ಏಕಿಲ್ಲ? ಕಾಯಕವೇ ಕೈಲಾಸ ಅಂದ ಮೇಲೆ ಒಬ್ಬ ಹಮಾಲ, ರೈತ, ಗೇಣಿದಾರ, ಕೂಲಿ– ಕಾರ್ಮಿಕ, ಮಾಲಿ, ಚಮ್ಮಾರ, ಜಾಡಮಾಲಿ... ಸೇರಿದಂತೆ ಹಲವಾರು ವೃತ್ತಿ ಕೌಶಲ್ಯ ಪರಿಣತರು ತಮ್ಮ ಹೆಸರಿನ ಮುಂದೆ ಯಾವ ಕ್ವಾಲಿಫೀಕೇಷನ್‌ ವಿಶೇಷಣಗಳನ್ನು ಹಾಕಿಕೊಳ್ಳಬೇಕು.

ಈ ಎಲ್ಲದನ್ನೂ ಮೀರಿದ ಹಾವಳಿ ‘ಡಾಕ್ಟರ್‌’ಗಳದ್ದಾಗಿದೆ. ಪಿಎಚ್‌.ಡಿ ಎಂದು ಹೇಳಿಕೊಳ್ಳುವುದೇ ಕೆಲವರಿಗೆ ಖಯಾಲಿ. ಸಹಿಯಲ್ಲಿಯೂ ‘ಡಾ’ ಎಂದು ಬರೆದು ರುಜುವಾತು ಪಡಿಸುವವರೂ ಇದ್ದಾರೆ. ಅದು ಅಷ್ಟೊಂದು ಗ್ರೇಟಾ? ಅಕ್ಷರಸ್ಥರು ಎಂಬ ಅಂತರವನ್ನು ಸೃಷ್ಟಿಸುವ ಈ ವರ್ಗೀಕರಣದ ಹೆಚ್ಚುಗಾರಿಕೆಯ ಮನೋಭಾವವೇ ಗೌರವ ಡಾಕ್ಟರೇಟ್‌ ಅಂಗಡಿಗಳನ್ನು ಸೃಷ್ಟಿಸಿದಂತಿದೆ. ಅಶಿಕ್ಷಿತರಿಗಿಂತ ಶಿಕ್ಷಿತರು ಏನೋ ಮಹಾಸಾಧನೆ ಮಾಡಿದ್ದಾರೆ ಎಂಬ ಅಹಂಕಾರದ ಪ್ರದರ್ಶನ ಇಲ್ಲಿ ಎದ್ದು ಕಾಣಿಸುತ್ತದೆ. ಅವಕಾಶ ವಂಚಿತ ಅಶಿಕ್ಷಿತರು ಅನ್ಯಾಯ ಅನಾಚಾರ ಮಾಡದೆ ಬದುಕಿದರೂ ಅವರಿಗೆ ವಿಶೇಷ ಪದವಿಗಳ ಮನ್ನಣೆ ಇಲ್ಲ. ‘ರಾಷ್ಟ್ರಕವಿ’ ಎಂಬ ಬಿರುದಾವಳಿಯಂತೆ ‘ರಾಷ್ಟ್ರ ನಟ’ ‘ರಾಷ್ಟ್ರ ರೈತ’ ‘ರಾಷ್ಟ್ರ ಜಾಡಮಾಲಿ’ ಏಕಿಲ್ಲ ಎನ್ನುವ ಪ್ರಶ್ನೆ ಇಂತಹ ಆಧುನಿಕ ವರ್ಗೀಕರಣದ ಹಂದರದೊಳಗೆ ತೂರಿಬರುತ್ತದೆ.  

ಗೌರವ ‘ಡಾಕ್ಟರೇಟ್‌’ ಡಾಕ್ಟರ್‌ ಅಲ್ಲ

ಇತ್ತೀಚೆಗೆ ಗೌರವ ಡಾಕ್ಟರೇಟ್ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೈಸೂರಿನಲ್ಲಿ ಇಬ್ಬರನ್ನು ಬಂಧಿಸಿದ್ದರು. ಇದರಿಂದ ನೂರಾರು ಮಂದಿ ಗೌರವ ಡಾಕ್ಟರೇಟ್‌ನಿಂದ ಇರುಸು ಮುರುಸನ್ನು ಅನುಭವಿಸಿದ್ದಾರೆ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ಸುಮಾರು 350 ಡಾಕ್ಟರೇಟ್‌ ಪದವಿಗಳು ಬಿಕರಿಯಾಗಿದ್ದ ಬಗ್ಗೆ ವರದಿಯಾಗಿತ್ತು. ಮಾತ್ರವಲ್ಲ, ಅಂತಹ ಕರಾಳ ದಂಧೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ದೂರು, ದೂರಿಗೆ ಪ್ರತಿಯಾಗಿ ಅದನ್ನು ಪರಿಶೀಲಿಸಬೇಕೆಂಬ ಆದೇಶವೂ ಹೈಕೋರ್ಟ್ ನೀಡಿತ್ತು. ಹೀಗಿದ್ದೂ ಈ ವರ್ಷ ಕೊರೊನಾ ಸಂಕಷ್ಟದ ದಿನಗಳಲ್ಲಿಯೂ ಪದವಿ ಮಾರಾಟವಾಗುತ್ತಿವೆ. 

ಊರಿನ ವೃತ್ತ (ಸರ್ಕಲ್‌), ಬಸ್‌ ನಿಲ್ದಾಣಗಳಲ್ಲಿ ಫ್ಲಕ್ಸ್‌ ಹಾಕಿ ಶುಭಕೋರುವ ಸ್ವಯಂಘೋಷಿತ ‘ಸಮಾಜ ಸೇವಕ’ರೂ ಗೌರವ ಡಾಕ್ಟರೇಟ್‌ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅಂತವರಿಗೆ ಸಿಕ್ಕಿದೆ ಅಂದರೆ ನಾನೇನು ಕಮ್ಮಿ ಅಂತ ಪ್ರಭಾವ ಬಳಸುವ ಶಕ್ತಿವಂತರು, ಹಣ ನೀಡುವ ಹಣವಂತರೂ ಯಾವುದಕ್ಕೂ ಒಂದು ಇರಲಿ ಎಂದು ಡಾಕ್ಟರೇಟ್‌ ತೆಗೆದುಕೊಳ್ಳುತ್ತಾರೆ. ಗೌರವಪೂರ್ವಕವಾಗಿ ಸಿಗುವ ಯಾವುದೇ ಪ್ರಶಸ್ತಿ ಪುರಸ್ಕಾರವನ್ನು ವೈಭವಿಕರಿಸಬಾರದು. ಆ ನೈತಿಕತೆಯನ್ನು ಮೀರಿ ತಮ್ಮ ಹೆಸರಿನ ಹಿಂದೆ ಗೌರವ ಡಾಕ್ಟರ್‌ಗಳೂ ‘ಡಾ...’ ಎಂದು ಹಾಕಿಕೊಳ್ಳುತ್ತಾರೆ. ಅಂದರಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ‘ನಾಡೋಜ’  ಗೌರವವನ್ನು ಹೆಸರಿನ ಹಿಂದೆ ತಮ್ಮ ನಾಮಬಲದ ಅಲಂಕಾರದಂತೆ ಬಳಸುವುದನ್ನು ನೋಡಬಹುದು. ಪದ್ಮಶ್ರೀ– ಪದ್ಮಭೂಷಣದಂತಹ ರಾಷ್ಟ್ರೀಯ ಪುರಸ್ಕಾರ ನಾಮ ಅಲಂಕಾರದಿಂದ ಹೊರತಾಗಿಲ್ಲ. 

ಸಾಮಾನ್ಯವಾಗಿ ಗೌರವ ಡಾಕ್ಟರ್‌ ಕಲೆ, ಸಾಹಿತ್ಯ, ಕೃಷಿ, ಸಮಾಜ ಸೇವೆ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ವಿಶ್ವವಿದ್ಯಾಲಯಗಳು ಗುರುತಿಸಿ ಗೌರವಿಸುವ ಸಂಬಂಧ ನೀಡುತ್ತಿದ್ದವು. ಪ್ರದೇಶವಾರು, ವಿಷಯವಾರು ವಿಶ್ವವಿದ್ಯಾಲಯಗಳು ಹೆಚ್ಚಾದಂತೆ ಡಾಕ್ಟರೇಟ್‌ ನೀಡುವ ಕೇಂದ್ರಗಳೂ ಹೆಚ್ಚಾದವು. ವಿವಿಗಳ ಸಂಪ್ರದಾಯದ ಅನುಸಾರ ಅರ್ಹ ಅನೇಕ ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು, ರಾಜಕಾರಣಿಗಳು, ಸಂಘಟಕರು, ಪತ್ರಕರ್ತರು, ಸಾಹಿತಿಗಳು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಕೆಲವರು ಅದಕ್ಕಾಗಿ ವಿಶ್ವವಿದ್ಯಾಲಯಗಳ ಸಿಡಿಕೇಟ್‌ ಸದಸ್ಯರು ಕುಲಸಚಿವರು– ಉಪಕುಲಪತಿಗಳು ಸೇರಿದಂತೆ ಸಚಿವರಿಂದ ಶಿಫಾರಸ್ಸು ಮಾಡಿಸಿ ಪದವಿ ಪಡೆಯುವ ಚಾಳಿಯೂ ಬೆಳೆಯಿತು. ಇಂತಹ ಪೈಪೋಟಿಯ ಬೇಡಿಕೆಯನ್ನು ಮನಗಂಡು ದೇಶ– ವಿದೇಶಗಳ ವಿವಿಗಳು ತಮ್ಮ ಡಾಕ್ಟರೇಟ್‌ ಅಂಗಡಿಯನ್ನು ತೆರೆದುಕೊಂಡಿವೆ.  

ಗೌರವ ಡಾಕ್ಟರೇಟ್‌ ಅಷ್ಟಕ್ಕೆ ನಿಲ್ಲುವುದಿಲ್ಲ. ಅದಕ್ಕೊಂದು ಅಭಿನಂದನಾ ಸಮಾರಂಭ ಇರುತ್ತದೆ. ಗೌರವಕ್ಕೆ ಪಾತ್ರರಾದವರ ಅಭಿಮಾನಿ ಬಳಗ ಹೆಸರನಲ್ಲಿ ಅಭಿನಂದನಾ ಕಾರ್ಯಕ್ರಮವೂ ನಡೆಯುತ್ತದೆ. ಅದಕ್ಕೊಂದಿಷ್ಟು ಪ್ರಚಾರ ಮಾಡಿ ಆಹ್ವಾನಿತರಿಗೆಲ್ಲ ಚಿಕ್ಕ ಔತಣ ನೀಡಿ ಸಂತಸಗೊಳಿಸಿ ಒಂದಿಷ್ಟು ಜನರಿಂದ ಹೊಗಳಿಸಿಕೊಳ್ಳುವ ಮಟ್ಟಕ್ಕೂ ಮುಂದುವರಿದಿದೆ. 

ಸಂಶೋಧನಾ ಡಾಕ್ಟರೂ ಹೊರತಲ್ಲ

ಆರಂಭದಲ್ಲಿ ಹೇಳಿದಂತೆ ಸಂಶೋಧನ ಪ್ರೌಢ ಪ್ರಬಂಧಕ್ಕೆ ಡಾಕ್ಟರ್‌ ಆಫ್‌ ಫಿಲಾಸಫಿ ತುಂಬ ಘನತೆಯಿಂದ ಕೂಡಿರುತ್ತದೆ ಎಂದೇನೂ ಇಲ್ಲ. ಯುಜಿಸಿ ಕೆಲವೊಂದು ಅರ್ಹತಾ ಮಾನದಂಡವನ್ನು ವಿಧಿಸಿದೆ. ಅದರಲ್ಲಿ ಪಿಎಚ್‌ಡಿ ಕೂಡ ಒಂದು. ಅದರಿಂದ ಅಕಾಡಮಿಕ್‌ ಆಗಿ ಕರ್ತವ್ಯ ನಿರ್ವಹಿಸುವರಿಗೆ ಭಡ್ತಿ, ವೇತನ ಪರಿಷ್ಕರಣೆ ಆಗುತ್ತದೆ. ಇನ್ನೂಕೆಲಸಕ್ಕೆ ಅಲೆಯುವ ನಿರುದ್ಯೋಗಿಗಳಿಗೆ ಕೆಪಿಎಸ್‌ಸಿಯಲ್ಲಿ ಸಂದರ್ಶನಕ್ಕೆ ಹಾಜರಾದರೆ 5 ಅಂಕ ಹೆಚ್ಚಿಗೆ ಸಿಗುತ್ತದೆ. ಇದನ್ನು ಬಿಟ್ಟರೆ ಯುಜಿಸಿ ಆಯೋಜಿಸುವ ಎನ್‌ಇಟಿ ಪರೀಕ್ಷೆ ಕೂಡ ಅವರಿಗೆ ವಿನಾಯಿತಿ ಸಿಗುತ್ತದೆ. ಇದನ್ನು ಬಿಟ್ಟು ಅಂತಹ ಮಹತ್ವದ ಬದಲಾವಣೆ ಏನೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಈಗಿದೆ. ಈ ಸೌಲಭ್ಯ ಪಡೆಯುವ ಉದ್ದೇಶಕ್ಕೆ 99% ಮಹಾಪ್ರಬಂಧಗಳು ಸಿದ್ಧಗೊಳ್ಳುತ್ತಿವೆ. ಅದಕ್ಕಾಗಿ ‘ಒಂದು ಅಧ್ಯಯನ’ ‘ಸಂಸ್ಕೃತಿ ಅಧ್ಯಯನ’ ಎಂಬ ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಆದರೆ ಅವುಗಳ ಗುಣಮಟ್ಟದ ಬಗ್ಗೆ ವಿಮರ್ಶಾವಲಯ ಮಾತ್ರ ಅಸಮಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಕೃತಿಚೌರ್ಯ, ಅನುಕರಣೆ, ಛಾಯಾನುಕರಣೆಯ ಪ್ರಬಂಧಗಳು ರಚನೆಯಾಗುತ್ತಲೇ ಇವೆ. ಮಹಾಪ್ರೌಢ ಪ್ರಬಂಧ ರೂಪಿಸಿದ ಕೆಲವರಿಗೆ ‘ಅ’ ಮತ್ತು ‘ಹ’ಕಾರದ ಅಂತರ ಸ್ಪಷ್ಟವಾಗಿರುವುದಿಲ್ಲ. ಇದರ ಜೊತೆ ಮಾರ್ಗದರ್ಶಕರು ತಮ್ಮ ವಿದ್ಯಾರ್ಥಿಗಳನ್ನು ದುರುಪಯೋಗ ಮಾಡಿಕೊಂಡರು ಎನ್ನುವ ಆರೋಪವೂ ಇದೆ. ಕೆಲವೊಂದು ಲೈಂಗಿಕ ದೌರ್ಜನ್ಯದ ದೂರುಗಳು ಈ ಹಿಂದೆ ಕೇಳಿ ಬಂದಿದ್ದು ಮರೆಯುವಂತಹದ್ದಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು