ಭಾನುವಾರ, ಅಕ್ಟೋಬರ್ 25, 2020
22 °C
ಜ್ಞಾನಸೃಷ್ಟಿಯು ದೇಶವೊಂದರ ಅನೇಕ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಅರಿಯುವುದೆಂದು?

ಶಿಕ್ಷಣದ ಸೂತ್ರ: 3 ಎಚ್‌, 4 ಸಿ

ಡಾ. ನೆಲ್ಲುಕುಂಟೆ ವೆಂಕಟೇಶ್ Updated:

ಅಕ್ಷರ ಗಾತ್ರ : | |

ನಮ್ಮ ಸಮಾಜದಲ್ಲಿ ಮೂಲಭೂತವಾದ ಕೆಲವು ಕಾಯಿಲೆಗಳಿವೆ ಎಂದು ಹೆಚ್ಚಿನವರು ತೀರ್ಮಾನಕ್ಕೆ ಬಂದಿದ್ದಾರೆ. ಜಾತಿಯಿಂದ ಹಿಡಿದು ಭ್ರಷ್ಟಾಚಾರದವರೆಗೆ ಕಾಯಿಲೆಗಳನ್ನು ಅವರು ಪಟ್ಟಿ ಮಾಡುತ್ತಾರೆ. ಸೂಕ್ಷ್ಮವಾಗಿ ನೋಡಿದರೆ, ನಮ್ಮ ದೊಡ್ಡ ಸಮಸ್ಯೆ ಶಿಕ್ಷಣ ವ್ಯವಸ್ಥೆಯಲ್ಲಿದೆ.

ಶಿಕ್ಷಣವು ಜಾತಿ ಮತ್ತು ಲಿಂಗ ತಾರತಮ್ಯದಷ್ಟೇ ಭೀಕರವಾದ ರಾಜಕಾರಣ. ಅದು ಆಳದಲ್ಲಿ ‘ಈಗೋ’ವನ್ನು ಸೃಷ್ಟಿಸುತ್ತಿದೆ. ಜಾತಿಯು ಮನುಷ್ಯ– ಮನುಷ್ಯರ ನಡುವೆ ‘ಎಕ್ಸ್‌ಕ್ಲೂಸಿವ್’ ರಾಜಕಾರಣದ ಮೂಲಕ ಪ್ರತ್ಯೇಕವಾಗಿ ಉಳಿಯಲು ಮಾಡುವ ಪ್ರಯತ್ನ ದಂತೆಯೇ ಶಿಕ್ಷಣ ವ್ಯವಸ್ಥೆಯಲ್ಲೂ ಶ್ರಮವಿರೋಧಿ ಪ್ರಮೇಯಗಳು ಬಹಳ ಹಿಂದಿನಿಂದಲೂ ಕ್ರಿಯಾಶೀಲ ವಾಗಿವೆ. ಶಿಕ್ಷಣಕ್ಕೆ ವೈಚಾರಿಕ, ಮಾನವೀಯ ಮತ್ತು ಉದಾರವಾದಿ ಗುಣಗಳು ಇಲ್ಲದಿದ್ದರೆ ಅದು ಕೇವಲ ಯಾಂತ್ರಿಕ ಪ್ರಕ್ರಿಯೆಯ ಭಾಗವಾಗುತ್ತದೆ.

ನಮ್ಮಲ್ಲಿ ನೈತಿಕ ಶಿಕ್ಷಣವೆನ್ನುವುದನ್ನು ಮಂತ್ರದಂತೆ ಮಾತ್ರ ಪಠಿಸಲಾಗುತ್ತದೆ. ಯುರೋಪು ನೈತಿಕ ಶಿಕ್ಷಣಕ್ಕಿಂತ ವಿಮರ್ಶಾತ್ಮಕ ಚಿಂತನೆಯನ್ನು (ಕ್ರಿಟಿಕಲ್‌ ಥಿಂಕಿಂಗ್‌) ಬೆಳೆಸುವ ಕಡೆಗೆ ಒತ್ತು ನೀಡಿದೆ. ವಿಮರ್ಶಾತ್ಮಕವಾದ ಯೋಚನೆಯಲ್ಲಿ ಕುತೂಹಲ, ಹುಡುಕಾಟ ಮತ್ತು ನಾಗರಿಕ ಪ್ರಜ್ಞೆ ಜಾಗೃತವಾಗಿರುತ್ತವೆ. ನಮ್ಮ ಶಿಕ್ಷಣ ವಿಧಾನವು ಬಾಯಿಪಾಠಕ್ಕೆ ಒತ್ತು ನೀಡುತ್ತಿದೆ. ಯೋಚಿಸಿ ಪ್ರಯೋಗಿಸುವುದನ್ನು ಕಡೆಗಣಿಸಲಾಗುತ್ತಿದೆ.

ಪೌಲೋ ಫ್ರೈರೆ ರೀತಿಯ ವಿದ್ವಾಂಸರು, ‘ಹಿಂದುಳಿದ ದೇಶಗಳ ಶಿಕ್ಷಣವು ಶಿಕ್ಷಕ ಕೇಂದ್ರಿತವಾಗಿದೆ. ಶಿಕ್ಷಕನಿಗೆ ಎಲ್ಲ ಗೊತ್ತಿದೆ, ವಿದ್ಯಾರ್ಥಿಗೆ ಏನೂ ಗೊತ್ತಿಲ್ಲ ಎನ್ನುವ ನೆಲೆಯಲ್ಲಿ ಶಿಕ್ಷಣ ತತ್ವಗಳು ಬಂದಿಯಾಗಿವೆ’ ಎನ್ನುತ್ತಾರೆ. ಇಂಥ ಹಲವು ಏಕಮುಖಿ ಚಿಂತನೆಗಳು ಶಿಕ್ಷಣ ವ್ಯವಸ್ಥೆಯನ್ನು ಅಧ್ವಾನ ಮಾಡಿಟ್ಟಿವೆ. ಉಪನಿಷತ್ ಮತ್ತು ಬೌದ್ಧಗುರುಗಳ ಕಲಿಕೆಯರಿಮೆಗಳನ್ನು ಅನೇಕ ಮೀಮಾಂಸಕರು ನೆನಪಿಸಿಕೊಳ್ಳುತ್ತಾರೆ. ಉಪನಿಷತ್ ಅಂದರೇನೆ ಹತ್ತಿರ ಕೂತು ತಿಳಿಯುವುದು ಎಂದರ್ಥ. ಬೌದ್ಧರ ಕಲಿಕೆಗಳು ಸಹ ಪ್ರಜಾಪ್ರಭುತ್ವೀಯ ವಿಧಾನದಲ್ಲಿ ನಡೆಯುತ್ತಿದ್ದವೆಂಬುದಕ್ಕೆ ಉಲ್ಲೇಖಗಳಿವೆ. ಲೋಕ ಸಂಗತಿಗಳ, ದೃಷ್ಟಾಂತಗಳ ಮೂಲಕ ದರ್ಶನಗಳನ್ನು ಮಿಂಚಿನಂತೆ ಸೃಷ್ಟಿಸುವ ಅದ್ಭುತ ವಿಧಾನಗಳನ್ನು ಉಪನಿಷತ್ಕಾರರು ಮತ್ತು ಬೌದ್ಧರು ಅಳವಡಿಸಿಕೊಂಡಿದ್ದರು.

ಶಿಕ್ಷಣ ವಿಧಾನಗಳ ಮುಖ್ಯ ವ್ಯತ್ಯಾಸವನ್ನು ಎರಡು ನಾಗರಿಕತೆಗಳು ನದಿಗಳನ್ನು ನಿರ್ವಹಿಸುತ್ತಿರುವ ರೀತಿಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ನಮ್ಮ ನಗರಗಳಿಗಿಂತ ಹೆಚ್ಚಿನ ಜನಸಂದಣಿ ಇರುವ ಲಂಡನ್ನಿನಲ್ಲಿ ಹರಿಯುವ ಥೇಮ್ಸ್ ನದಿಯ ನಿರ್ವಹಣೆ ಮತ್ತು ಗಂಗೆ ಸೇರಿದಂತೆ ನಮ್ಮಲ್ಲಿ ಹರಿಯುವ ನದಿಗಳನ್ನು ಹೋಲಿಸಿ ನೋಡಿದರೆ ವ್ಯತ್ಯಾಸ ಹೊಳೆಯುತ್ತದೆ. ಯುರೋಪಿಯನ್ನರಿಗೆ ನದಿ ನಿರ್ವಹಣೆಯಲ್ಲಿ ಧರ್ಮದಾಚೆಗಿನ ಆಯಾಮಗಳು ಪ್ರಧಾನ ಪಾತ್ರ ವಹಿಸುತ್ತವೆ. ವೈಜ್ಞಾನಿಕತೆ, ವೈಚಾರಿಕತೆ ಮತ್ತು ನಾಗರಿಕ ಪ್ರಜ್ಞೆಯ ಮೂಲಕ ನದಿಗಳನ್ನು ಜನ ಅಲ್ಲಿ ಜೀವಂತವಾಗಿ ಕಾಪಾಡುತ್ತಿದ್ದಾರೆ.

ಹಿರಿಯರನ್ನು ಗೌರವಿಸಬೇಕು, ನದಿಗಳು ದೇವರೂಪಿಯವು ಎಂದು ಕಲಿತ ಅಸಂಖ್ಯಾತ ಜನ, ಹೆಣ ಸುಟ್ಟ ಬೂದಿಯನ್ನು, ಪಿಂಡವನ್ನು, ಸೂಕ್ಷ್ಮ ಜಲರಕ್ಷಕ ಜೀವಿಗಳಿಗೆ ಮಾರಕವಾಗುವ ಎಣ್ಣೆಯನ್ನು ನದಿಗಳಿಗೆ ನಿರ್ಭೀತಿಯಿಂದ, ಮುಗ್ಧತೆಯಿಂದ ಸುರಿದು ಕೊಲ್ಲುತ್ತಿದ್ದಾರೆ. ಮಾತೃರೂಪಿಯೆನ್ನುವ ನದಿಗಳು ಅವೈಜ್ಞಾನಿಕ, ಅವೈಚಾರಿಕ ಆಚರಣೆಗಳಿಂದಾಗಿ ಕೊಳೆತು ಹೋಗುತ್ತಿವೆ.

ಜ್ಞಾನಸೃಷ್ಟಿಯು ದೇಶವೊಂದರ ಅನೇಕ ಸಮಸ್ಯೆ ಗಳಿಗೆ ಪರಿಹಾರ ಎಂಬುದನ್ನು ಅಮೆರಿಕ ಬೇಗ ಕಂಡು ಕೊಂಡಿತು. 20ನೇ ಶತಮಾನಕ್ಕೆ ಅಡಿಯಿಡುವ ಹೊತ್ತಿಗೆ ಭೀಕರ ಬಿಕ್ಕಟ್ಟಿನಲ್ಲಿದ್ದ ಅಮೆರಿಕವು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳನ್ನು ಮಾರ್ಗದರ್ಶಿಯಾಗಿಟ್ಟುಕೊಂಡು ಪ್ರತಿಷ್ಠಿತವೆನ್ನಿಸುವ ವಿಶ್ವವಿದ್ಯಾಲಯಗಳನ್ನು ತೆರೆಯಿತು. ಹಿಂದೆ ಇದ್ದ ವಿಶ್ವವಿದ್ಯಾಲಯಗಳಿಗೆ ಅವರು ಹೊಸ ರೂಪ ಕೊಟ್ಟರು. ಸರ್ಕಾರಗಳು ದೊಡ್ಡ ಮಟ್ಟದ ಅನುದಾನಗಳನ್ನು ನೀಡಿ ಪ್ರತಿಭಾವಂತರನ್ನು ಅಲ್ಲಿಗೆ ಸೆಳೆದವು. ಆ ನಂತರ ಆ ದೇಶದ ಹಣೆಬರಹವೇ ಬದಲಾಗಿ ಹೋಯಿತು. ವಿಶ್ವವಿದ್ಯಾಲಯಗಳು ಸರಿಯಾಗಿದ್ದರೆ ಸಮಾಜವೊಂದು ತಲೆ ಎತ್ತಿ ಬದುಕುವಂತಿರುತ್ತದೆ ಎಂಬುದಕ್ಕೆ ಅಮೆರಿಕದ ಪ್ರಯೋಗಗಳೆ ಉದಾಹರಣೆಗಳು.‌

ವಿಶ್ವವಿದ್ಯಾಲಯಗಳಿಗೆ ಗೆದ್ದಲು ಹತ್ತಿದರೆ ಏನಾಗ ಬಹುದು ಎಂಬುದಕ್ಕೆ ಪ್ರಸ್ತುತ ನಮ್ಮ ಸಮಾಜವೇ ಸಾಕ್ಷಿ. ಅಪಾರ ಶ್ರಮದಿಂದ ಏಣಿ ಹತ್ತುವ ಹಾವು ಆಯ ತಪ್ಪಿ ಧೊಪ್ಪನೆ ಬೀಳುವಂತೆ ಸಮಾಜ ಅವನತ ಮುಖಿಯಾಗುತ್ತದೆ. ಶಿಕ್ಷಣದಲ್ಲಿ ಕಷ್ಟಪಟ್ಟು ಸರೀಕ ದೇಶಗಳ ಎದುರಿಗೆ ತಲೆ ಎತ್ತಿ ನಿಲ್ಲಬೇಕೆಂಬ ಹಂಬಲದಲ್ಲಿ, ಕಟ್ಟಡ ಮುಂತಾದ ಮೂಲ ವ್ಯವಸ್ಥೆಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಅತ್ಯುತ್ತಮ ಮೇಷ್ಟ್ರುಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ ಕೊಠಡಿ ಗಳು, ಹೊಳೆಯುವ ಲ್ಯಾಬುಗಳಿಗಿಂಥ ಹೃದಯವಂತ ಮೇಷ್ಟ್ರುಗಳು, ಕುತೂಹಲದ ರೆಕ್ಕೆಗಳನ್ನು ಕತ್ತರಿಸಿಕೊಳ್ಳದ ವಿದ್ಯಾರ್ಥಿಗಳು ಇಂದಿನ ಅಗತ್ಯ. ನಮ್ಮ ಶಿಕ್ಷಣದ ಮೊದಲ ತರಗತಿಗಳು ಶುರುವಾಗುವುದೇ ‘ರೈನ್ ರೈನ್ ಗೋ ಅವೇ’ ಎಂದು. ನಿಸರ್ಗದ ಕುರಿತಾದ ಎಲ್ಲ ಕುತೂಹಲಗಳು ಸತ್ತ ಮೇಲೆ ಮಕ್ಕಳು ಬಾಯಿಪಾಠದ ಮೂಲಕ ಅಂಕ ಗಳಿಕೆಯ ಯಂತ್ರಗಳಾಗುತ್ತಾರೆ.

ಗಾಂಧೀಜಿ ‘3 ಎಚ್’ ಸೂತ್ರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಲೆ (ಮೆದುಳು), ಹೃದಯ, ಕೈಗಳು ಶಿಕ್ಷಣ ದಲ್ಲಿ ಬಹಳ ಮುಖ್ಯ. ಬುದ್ಧಿ, ಕರುಣೆ, ಕೌಶಲ ಮುಪ್ಪುರಿ ಗೊಂಡಾಗ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದಿದ್ದಾರೆ. ನಮ್ಮಲ್ಲಿ ಅನೇಕರಿಗೆ ತಲೆಯೇ ಎಲ್ಲ. ಎಲ್ಲೋ ಕೆಲವು ಬಾರಿ ಮಾತ್ರ ಬುದ್ಧಿಯ ಜೊತೆಗೆ ಕೌಶಲ ಸೇರಿಕೊಳ್ಳುತ್ತದೆ. ಕರುಣೆ, ಮಮತೆ ಸೇರಿ ಕಲಿವ ವಾತಾವರಣ ನಮ್ಮಲ್ಲಿ ಇಲ್ಲವಾಗಿದೆ. ಜಾತಿ, ಮತ, ಲಿಂಗದ ವಿಷಯದಲ್ಲಿ ನಡೆವ ಹಿಂಸೆಗೆ ತಣ್ಣಗೆ ಸಹಕರಿಸುವ, ಸಾಧ್ಯವಾದರೆ ಭಾಗಿ ಯಾಗುವ ಕ್ರೌರ್ಯ ನಮ್ಮದಾಗಿದೆ. ಇದನ್ನೇ ಕಲಿಕೆಯ ‘ಅಮಾನವೀಕರಣ’ ಎನ್ನುವುದು.

ಪಶ್ಚಿಮದಲ್ಲಿ ‘4ಸಿ’ಗಳ ಮೂಲಕ ಶಿಕ್ಷಣವನ್ನು ನೀಡ ಲಾಗುತ್ತಿದೆ. ‘ಕ್ರಿಟಿಕಲ್ ಥಿಂಕಿಂಗ್, ಕಮ್ಯುನಿಕೇಷನ್, ಕೊಲ್ಯಾಬೊರೇಷನ್, ಕ್ರಿಯೇಟಿವಿಟಿ’ ಎಂದು ಇದನ್ನು ಗುರುತಿಸುತ್ತಾರೆ. ವಿವೇಚನಾ ಶಕ್ತಿ (ಕುವೆಂಪು ಇದನ್ನು ನಿರಂಕುಶಮತಿ ಎಂದಿದ್ದಾರೆ), ಅದನ್ನು ದಾಟಿಸುವ ವಿಧಾನ, ಇತರರೊಂದಿಗೆ ಸೇರಿ ಕಲಿಯುವುದು ಮತ್ತು ಇವುಗಳೆಲ್ಲದರ ಮೂಲಕ ದಕ್ಕುವ ಸೃಜನಶೀಲ ಗುಣಗಳು ಉದಾರವಾದಿ ವ್ಯಕ್ತಿತ್ವವನ್ನೂ ಮಾನವಂತ ಸಮಾಜವನ್ನೂ ಕಟ್ಟಲು ನೆರವಾಗುತ್ತವೆ.

ಕುಶಲಕರ್ಮಿ ಜಾತಿಗಳ ಅವನತಿಯು ದೇಶದ ಅವನತಿಯೂ ಆಗಿದೆ. ಪ್ರತ್ಯೇಕತೆ, ಶ್ರೇಷ್ಠತೆ, ಕಡಿಮೆ ಶ್ರಮದ ಮೂಲಕ ದಕ್ಕುವ ಹೆಚ್ಚು ಗೌರವವು ಸಾರ್ವಕಾಲಿಕ ವಾಗುತ್ತಾ ಹೋಯಿತು. ಈ ಶ್ರಮವಿರೋಧಿತನ ವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಈಗಲೂ ಪೋಷಿಸುತ್ತಿದೆ. ಉದ್ಯೋಗ ಮಾರುಕಟ್ಟೆ ಇಂದು ಎಲ್ಲರಿಗೆ ಬೇಕಾದ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಪದವೀಧರರು ತಾವು ನಿರುಪಯುಕ್ತರಾಗಿಬಿಟ್ಟೆವೇನೋ ಎಂದು ಸಂಕಟಪಡುತ್ತಿ ದ್ದಾರೆ. ಬರೀ ಅಂಕಗಳನ್ನು ನಂಬಿಕೊಂಡು ಸಾಮಾನ್ಯ ಜ್ಞಾನ, ಕೌಶಲ, ಸೃಜನಶೀಲಗುಣ ಇಲ್ಲದೆ ಒಣಗಿದ ಬಾಳೆಗಿಡದಂತಾಗಿದ್ದಾರೆ. ಹಳೆಬೀಡು, ಬೇಲೂರಿನ ಶಿಲ್ಪವನ್ನು ಕೆತ್ತಿದವನಿಗೆ ಗಣಿತದ ಎಲ್ಲ ಪಟ್ಟುಗಳು ರಕ್ತಗತವಾಗಿರಲೇಬೇಕು. ಅವನ ಮೊಮ್ಮಗನಿಗೇ, ಮೂಳು ಮಗನಿಗೇ ಗಣಿತವನ್ನು ಉರುಹಚ್ಚಿ ಕಲಿಯಲಾಗುತ್ತಿಲ್ಲ. ಗಣಿತ ಕಷ್ಟ ವೆಂದು ಇತಿಹಾಸ ಓದಲು ಹೋಗುತ್ತಾನೆ. ಅಂದರೆ, ಕುಶಲಕರ್ಮಿಗಳ ಮಕ್ಕಳಲ್ಲಿ, ರೈತ ಮಕ್ಕಳಲ್ಲಿ ಕೈಯ ಸ್ಪರ್ಶದಲ್ಲಿರುವ ಗಣಿತವು ತರಗತಿಗೆ ಬಂದ ಕೂಡಲೇ ಕಷ್ಟವಾಗಲು ಕಾರಣವೇನು? ಕಲಿಸುವ ವಿಧಾನದಲ್ಲಿ ಸಮಸ್ಯೆ ಇರಬೇಕಲ್ಲವೇ?

ಒಂದು, ಕಲಿಯುವ ಭಾಷೆಯಲ್ಲಿರುವ ಸಮಸ್ಯೆಯಾದರೆ, ಮತ್ತೊಂದು, ಕೈಯನ್ನು ಬಳಸದೆ ಬರೀ ಬಾಯಿ ಮಾತಿನ ಮೂಲಕ ಬೋಧಿಸುವ ಕೃತಕ ವಿಧಾನ. ಈ ಎರಡೂ ಕೂಡಿ ಭಾರತದ ಸೃಜನಶೀಲತೆಯನ್ನು ಬುಡಸಮೇತ ಕೊಂದುಹಾಕುತ್ತಿವೆ. ಎಲ್ಲಿಯವರೆಗೆ ಸಮುದಾಯಗಳು ವಿಜ್ಞಾನದ ಭಾಷೆಯನ್ನು ಮಾತೃ ಭಾಷೆಯಲ್ಲಿ ಕಲಿಸಲಾಗದೋ ಅಲ್ಲಿಯವರೆಗೂ ಗೆಲಿಲಿಯೊ, ಐನ್‌ಸ್ಟೀನ್‌ ಅಂತಹವರನ್ನು ಸೃಷ್ಟಿಸಲಾಗದು.

ನಮ್ಮ ವಿಶ್ವವಿದ್ಯಾಲಯಗಳನ್ನು ಸುಧಾರಿಸಬೇಕು. ತುಕ್ಕು ಹಿಡಿದವರನ್ನು ಬೇರೆಡೆಗೆ ಸ್ಥಳಾಂತರಿಸಿ, ನಿಜ ವಾಗಿಯೂ ಹಂಬಲ, ಉತ್ಸಾಹ, ಸೃಜನಶೀಲತೆ ಯುಳ್ಳವರನ್ನು ಆಯ್ದು ವಿಶ್ವವಿದ್ಯಾಲಯಗಳಿಗೆ ಕಳಿಸ ಬೇಕು. ಆಯ್ಕೆಗೆ ಇರುವ ಜಡರೂಪಿ ನಿಲುವುಗಳನ್ನು ಸರಿ ಮಾಡಬೇಕು. ಇಲ್ಲದಿದ್ದರೆ ಅಸಂಖ್ಯಾತ ‘ಬೆಂತರ’ಗಳನ್ನು ಹೊತ್ತುಕೊಂಡು ನಾಗರಿಕತೆಗಳು ಬಸವಳಿದು ಇಲ್ಲವಾಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು