ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಎಸ್‌ಡಿಎಂಸಿ ಮತ್ತು ಪರಿಣತಿಯ ಅಗತ್ಯ

ಪಕ್ಷಬದ್ಧ ರಾಜಕೀಯವು ಶಿಕ್ಷಣ ಕ್ಷೇತ್ರವನ್ನು ಪ್ರಭಾವಿಸುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ
Last Updated 1 ಮಾರ್ಚ್ 2022, 21:45 IST
ಅಕ್ಷರ ಗಾತ್ರ

ಶಾಲಾ ಕಾಲೇಜುಗಳನ್ನು ಸ್ಥಳೀಯವಾಗಿ ನಿರ್ವಹಿಸಲು ಶಾಲಾಭಿವೃದ್ಧಿ ಮತ್ತು‌ ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ), ಕಾಲೇಜಿನಲ್ಲಾದರೆ ಕಾಲೇಜು ಅಭಿವೃದ್ಧಿ ಸಮಿತಿಯಂತಹ ಸಮಿತಿಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆಡಳಿತ ವಿಕೇಂದ್ರೀಕರಣದ ನೆಲೆಯಲ್ಲಿ ಈ ಸಮಿತಿಗಳಿಗೆ ಮಹತ್ವ ಜಾಸ್ತಿ ಇದೆ. ಶಾಲಾ ಸನ್ನಿವೇಶದ ಅಗತ್ಯಗಳಲ್ಲಿ ಸ್ಥಳೀಯ ವಿಷಯಗಳು ಜಾಸ್ತಿ ಇರುತ್ತವೆ. ಅವುಗಳಿಗೆ ತಕ್ಷಣ ಸ್ಪಂದನೆ ಸಿಗಲು ಈ ರೀತಿಯ ಸಮಿತಿಗಳಿಂದ ಸಹಾಯವಾಗುತ್ತದೆ. ಅಲ್ಲದೆ ಶಿಕ್ಷಕರ ನೇಮಕಾತಿ ರಾಜ್ಯವ್ಯಾಪ್ತಿಯದ್ದಾದಾಗ ಸ್ಥಳೀಯ ಪರಿಸರದ ಶಿಕ್ಷಕರ ಕೊರತೆ ಇರುತ್ತದೆ ಎಂಬ ನೆಲೆಯಲ್ಲಿ ಇಂತಹ ಸಮಿತಿಗಳಿಗೆ ಮಹತ್ವವಿದೆ.

ಆದರೆ ಸಮಿತಿಗಳಿಂದ ಶಿಕ್ಷಕರ ಕಾರ್ಯನಿರ್ವಹಣೆಗೆ ತೊಂದರೆಯಾಗುವ ಆರೋಪಗಳು ಬಹು ಹಿಂದಿನಿಂದಲೂ ಇವೆ. ಇತ್ತೀಚೆಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂಬ ವಾದವೂ ಬಂದಿದೆ. ಹೀಗಾಗಿ, ಸಮಿತಿಗಳ ಉತ್ತಮೀಕರಣದ ಚರ್ಚೆ ಅಗತ್ಯವಾಗಿದೆ.

ಸರ್ವಶಿಕ್ಷಣ ಅಭಿಯಾನ ಆರಂಭವಾಗುವುದಕ್ಕೆ ಮೊದಲು ‘ಶಿಕ್ಷಕ-ಪೋಷಕ ಸಂಘ’ಗಳ ಮಾದರಿಯ ಸಂಘಗಳು ಇದ್ದವು. ಅವು ಶಾಸನಾತ್ಮಕವಾಗಿ ಸಶಕ್ತವಾಗಿರಲಿಲ್ಲ ಮತ್ತು ಶಾಲೆಗಳಿಗೆ ಹಣಕಾಸು ಒದಗಣೆ, ಸೌಕರ್ಯಗಳೆಲ್ಲ ತೀರಾ ಅಲ್ಪವಿದ್ದಾಗ ಬಹಳ ಬಲಿಷ್ಠವಾದ ಸ್ಥಳೀಯ ಸಮಿತಿಗಳ ಅಗತ್ಯವೂ ಇರಲಿಲ್ಲ. ಆದರೆ ಬೃಹತ್ ಅನುದಾನವುಳ್ಳ ಸರ್ವಶಿಕ್ಷಣ ಅಭಿಯಾನವು ಶಾಲೆಗಳಿಗೆ ಅನುದಾನ ಹೆಚ್ಚಿಸಿದ್ದಲ್ಲದೆ, ಬಿಸಿಯೂಟ ಯೋಜನೆಯಂಥ ಕೊಡುಗೆಗಳನ್ನೂ ಹೆಚ್ಚಿಸಿ ಶಾಲೆಗಳಲ್ಲಿ ಕಾರ್ಯ ಒತ್ತಡ
ಗಳನ್ನು ಜಾಸ್ತಿ ಮಾಡಿತು. ಆದರೆ ಹೆಚ್ಚಾದ ಕೆಲಸದ ನಿರ್ವಹಣೆಗಾಗಿ ಶಿಕ್ಷಕೇತರ ಕಾಯಂ ಸಿಬ್ಬಂದಿಯ ನೇಮಕ ಮಾಡಲಿಲ್ಲ. ಆಗ ಸ್ಥಳೀಯವಾಗಿ ಸಶಕ್ತ ಸಮಿತಿಗಳ ಅಗತ್ಯ ಉಂಟಾಯಿತು. ಶಾಲೆಯು ಸಮುದಾಯದ ಆಸ್ತಿ. ಆಗ ಶಾಲಾ ನಿರ್ವಹಣೆಗೆ ಸಮುದಾಯವನ್ನು ಪ್ರತಿನಿಧಿಸಬಲ್ಲವರು ಬೇಕಾಗುತ್ತಾರೆ. ಸಮುದಾಯದ ‍ಪ್ರಾತಿನಿಧ್ಯ ಎಂದಾಗ ಸ್ವಾಭಾವಿಕವಾಗಿ ವಿದ್ಯಾರ್ಥಿಗಳ ಪಾಲಕರ ಪ್ರತಿನಿಧಿಗಳು ಮತ್ತು‌ ಜನಪ್ರತಿನಿಧಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ಸಮಿತಿಗಳಲ್ಲಿ ಸೇರುತ್ತಾರೆ.

ಜನಪ್ರತಿನಿಧಿಗಳಲ್ಲಿ ಎರಡು ವಿಧ. ಕೇಂದ್ರ ಮತ್ತು ರಾಜ್ಯ ಶಾಸನಸಭೆಯ ಚುನಾಯಿತ ಸದಸ್ಯರು ಶಾಸನವನ್ನು ರಚಿಸುವವರು ಮತ್ತು ಸರ್ಕಾರವನ್ನು ನಿಯಂತ್ರಿಸುವವರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರು ಸರ್ಕಾರದಿಂದ ಕೊಡಮಾಡಿದ ಅಧಿಕಾರವನ್ನು ಚಲಾಯಿಸುವವರು. ಈ ಎರಡೂ ನೆಲೆಯ ಜನಪ್ರತಿನಿಧಿಗಳು ಶಾಲಾ ಸಮಿತಿಗಳಲ್ಲಿ ಇರುತ್ತಾರೆ ಅಥವಾ ಅವರ ಅನುಯಾಯಿಗಳು ಇರುತ್ತಾರೆ. ಸ್ವಾಭಾವಿಕವಾಗಿ ಶಾಸಕರು ಇದ್ದಾಗ ಶಾಸಕರಿಗೆ ಜಾಸ್ತಿ ಮಹತ್ವ ಇರುತ್ತದೆ. ನಿಜವಾಗಿ ಇಂತಹ ಸಮಿತಿಗಳಲ್ಲಿ ಶಾಸಕರು ನಿರ್ವಹಿಸುವುದು ಶಾಸನಾತ್ಮಕವಾದ ಕಾರ್ಯಗಳನ್ನಲ್ಲ. ಕಾರ್ಯಾಂಗೀಯ ಜವಾಬ್ದಾರಿಗಳನ್ನು.

ಶಾಸಕರ ಕಾರ್ಯ ಶಾಸನಾತ್ಮಕವೇ ಇದ್ದರೂ ಅವರಿಗೆ ಕಾರ್ಯಾಂಗೀಯ ಜವಾಬ್ದಾರಿಗಳನ್ನು ವಹಿಸಬಾರದೆಂದು ಸಂವಿಧಾನವು ಹೇಳುವುದಿಲ್ಲ. ಆದ್ದರಿಂದ ಶಾಸಕರನ್ನು ಕಾರ್ಯಾಂಗೀಯ ಜವಾಬ್ದಾರಿಗೆ ನಿಯೋಜಿಸುವ ಕಾರ್ಯವು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ನಡೆಯುತ್ತಾ ಬಂದಿದೆ. ಬಹಳಷ್ಟು ಸಂದರ್ಭಗಳಲ್ಲಿ ಸರ್ಕಾರದಿಂದ ಶಾಲೆಗಳಿಗೆ ಬೇಕಾದ್ದನ್ನು ಮಂಜೂರು ಮಾಡಿಸುವುದರಲ್ಲಿ, ಸ್ಥಳೀಯವಾಗಿ ಸಮಸ್ಯೆಗಳು ಬಂದಾಗ ಬಗೆಹರಿಸುವುದರಲ್ಲಿ ಶಾಸಕರ ಪಾತ್ರ ಗಣನೀಯವಾಗಿ ಕೆಲಸ ಮಾಡಿದೆ.

ಆದರೆ ಸಮಿತಿಯಲ್ಲಿ‌ ಜನಪ್ರತಿನಿಧಿಗಳಿದ್ದಾಗ ಶಾಲಾ ನಿರ್ವಹಣಾ ನಿರ್ಧಾರಗಳ ಮೇಲೆ ರಾಜಕೀಯ ದೃಷ್ಟಿಕೋನಗಳು ಪ್ರಭಾವವನ್ನು ಬೀರುತ್ತವೆ ಎನ್ನುವುದು ಆರೋಪಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರವನ್ನು ರಚಿಸುವವರು ಮತ್ತು ಸರ್ಕಾರ ಏನು ಮಾಡಬೇಕೆಂದು ಶಾಸನಾತ್ಮಕ ನಿರ್ದೇಶನವನ್ನು ನೀಡುವ ಶಾಸಕರು ಸರ್ಕಾರದಿಂದ ಸಿಕ್ಕಿದ ಅಧಿಕಾರವನ್ನು ಚಲಾಯಿಸಬಾರದು ಎಂಬುದು ಮಹತ್ವ ಪಡೆಯುವ ವಿಷಯವಲ್ಲ. ಆದರೆ ಶೈಕ್ಷಣಿಕ ನಿರ್ವಹಣೆಯಲ್ಲಿ ರಾಜಕೀಯ ದೃಷ್ಟಿಕೋನ ಪ್ರಭಾವಿಸುತ್ತದೆ ಎನ್ನುವುದು ಸಮಂಜಸವಾದ ತರ್ಕವಾಗಿದೆ. ತಾಂತ್ರಿಕವಾಗಿ ರಾಜಕಾರಣಿಗಳು ಸಮಿತಿಗಳಲ್ಲಿ ಇಲ್ಲದೆ ಇದ್ದಾಗಲೂ ಪರೋಕ್ಷವಾಗಿ ಸಮಿತಿಗಳಲ್ಲಿ ರಾಜಕೀಯ ದೃಷ್ಟಿಕೋನದ ಪ್ರಭಾವ ಇದ್ದೇ ಇರುತ್ತದೆ.

ಶೈಕ್ಷಣಿಕ ಆಡಳಿತದಲ್ಲಿ ರಾಜಕೀಯ ದೃಷ್ಟಿಕೋನದ ಪ್ರಭಾವದ ಕುರಿತಾಗಿ ಎರಡು ವಾದಗಳಿಗೂ ಪ್ರಾಮುಖ್ಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ತೀರಾ ಸಹಜ, ಎಲ್ಲ ಕಡೆಯೂ ರಾಜಕೀಯವಿಲ್ಲದೆ ಪ್ರಜಾಪ್ರಭುತ್ವ ಇಲ್ಲ ಎನ್ನುವುದು ಸರಿಯಾದ ವಾದವೇ ಆಗಿದೆ. ಶಿಕ್ಷಣದ ಮೇಲೆ ರಾಜಕೀಯ ಪ್ರಭಾವ ಇರಬಾರದು ಎನ್ನುವುದೂ ಸರಿಯಾದ ವಾದವೇ. ಇಲ್ಲಿ ಸಮಸ್ಯೆಯಾಗುತ್ತಿರುವುದು ರಾಜಕೀಯ ಅಲ್ಲ. ರಾಜಕೀಯದ ಅರಿವು ಶಿಕ್ಷಣದ ಮೂಲಕ ಬೆಳೆಯಬೇಕು. ಸಮಸ್ಯೆಯ ಸೃಷ್ಟಿಯು ಶಿಕ್ಷಣ ಕ್ಷೇತ್ರವನ್ನು ಪಕ್ಷಬದ್ಧ ರಾಜಕೀಯವು ಪ್ರಭಾವಿಸುವುದರಿಂದ ಆಗುತ್ತದೆ. ಆದ್ದರಿಂದ ಇಡೀ ದೇಶವೇ ರಾಜಕೀಯದ ಮೂಲಕ ನಡೆಯುವಾಗ ಶಾಲಾ ಸಮಿತಿಗಳಲ್ಲಿ ಜನಪ್ರತಿನಿಧಿಗಳು ಇರಬಾರದು ಎನ್ನುವುದು ಸಮಂಜಸವಲ್ಲ. ಬದಲು ಜನಪ್ರತಿನಿಧಿಗಳು ಪಕ್ಷಬದ್ಧವಲ್ಲದ ರೀತಿಯಲ್ಲಿ ಶಾಲಾ ಸಮಿತಿಗಳಲ್ಲಿ ತೊಡಗಿಕೊಳ್ಳಬೇಕು. ಇದು ಆಗಬೇಕಾದರೆ ಸಮಿತಿಗಳಲ್ಲಿ ಜಾತಿ, ಲಿಂಗ, ಧರ್ಮ, ಸ್ಥಳೀಯ ಸಂಸ್ಥೆಗಳನ್ನು ಆಧರಿಸಿದ ಪ್ರತಿನಿಧಿತ್ವ ಸಾಲುವುದಿಲ್ಲ. ತಜ್ಞ ಪ್ರತಿನಿಧಿತ್ವ ಬೇಕಾಗುತ್ತದೆ.

ಮೊದಲು ಶಿಕ್ಷಕರದ್ದು ಉದ್ಯೋಗವಲ್ಲ, ವೃತ್ತಿ ಎಂಬುದನ್ನು ಅರಿತುಕೊಳ್ಳಬೇಕು. ಅವರು ಶೈಕ್ಷಣಿಕ ಶಾಸ್ತ್ರದಲ್ಲಿ ತರಬೇತಿ ಪಡೆದ ಪರಿಣತರಾಗಿರುತ್ತಾರೆ. ಹಾಗಿರುವಾಗ ಶಿಕ್ಷಕರು ಸಮಿತಿ ಹೇಳಿದ ಕೆಲಸವನ್ನು ಮಾಡಲು ಮಾತ್ರ ಇರುವವರು ಎಂಬಂತೆ ಸಮಿತಿಯ ಸದಸ್ಯರು ಭಾವಿಸಬಾರದು. ಶಿಕ್ಷಕರು ಶೈಕ್ಷಣಿಕ ಸಂದರ್ಭಕ್ಕೆ ಸಲಹೆಯನ್ನು ನೀಡಲು ಇರುವ ಪರಿಣತರೂ ಹೌದು. ಸದ್ಯಕ್ಕೆ ಇಂತಹ ಸಮಿತಿಗಳಲ್ಲಿ ಮುಖ್ಯೋಪಾಧ್ಯಾಯರನ್ನು ಬಿಟ್ಟರೆ ಉಳಿದ ಶಿಕ್ಷಕರಿಗೆ ಗಮನಾರ್ಹ ಪಾತ್ರವಿಲ್ಲ. ಅಂದರೆ ಪಾಠ ಬೋಧನೆಯೇ ಜವಾಬ್ದಾರಿಯಾಗಿರುವವರ ಅನುಭವಕ್ಕೆ ಮಹತ್ವವಿಲ್ಲ. ಶಿಕ್ಷಕರ ಅನುಭವಕ್ಕೆ ಈ ಸಮಿತಿಯಲ್ಲಿ ಮಹತ್ವ ಸಿಗಬೇಕು.

ಸ್ಥಳೀಯ ನಿವೃತ್ತ ಶಿಕ್ಷಕರನ್ನು ತಜ್ಞರು ಎಂದು ಪರಿಗಣಿಸಿ ಎಸ್‌ಡಿಎಂಸಿಗೆ ಸೇರಿಸಲಾಗುತ್ತದೆ. ಆದರೆ ತಜ್ಞರು, ಅಂಗನವಾಡಿ ಕಾರ್ಯಕರ್ತೆಯರು, ಎನ್‌ಜಿಒ ಪ್ರತಿನಿಧಿಗಳು ಎಂದೆಲ್ಲ ಹೇಳಲಾಗಿದ್ದರೂ ಇವರದ್ದೆಲ್ಲ ಸಾಂಕೇತಿಕ ಅಸ್ತಿತ್ವವಾಗಿ ಇರುತ್ತದೆ. ನಿರ್ವಹಣೆಯಲ್ಲಿ ಇವರು ಸಶಕ್ತರಲ್ಲ. ಶೈಕ್ಷಣಿಕ ಅನುಭವ ಇರುವವರಿಗೆ, ಶೈಕ್ಷಣಿಕ ಮನಃಶಾಸ್ತ್ರವನ್ನು ಬಲ್ಲವರಿಗೆ, ಶಾಲೆಗಳಲ್ಲಿ‌ ಮಕ್ಕಳ ತಜ್ಞರಿಗೆ, ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಹದಿಹರೆಯದ ತಜ್ಞರಿಗೆ ಸಮಿತಿಗಳಲ್ಲಿ ಸ್ಥಾನವನ್ನು ಕಲ್ಪಿಸಬೇಕು. ಇವರಿಂದ ಬರುವ ತಿಳಿವಳಿಕೆಗಳು ಸಮಿತಿಗಳ ಮೇಲೆ ಪ್ರಭಾವವನ್ನು ಉಂಟು ಮಾಡುತ್ತಾ ಹೋದ ಹಾಗೆ ರಾಜಕೀಯವೊಂದೇ ನಿರ್ಧಾರಕ
ವಾಗುವುದು ಕಡಿಮೆಯಾಗುತ್ತದೆ.

ಎರಡನೆಯದಾಗಿ, ಶಾಲಾ ಸನ್ನಿವೇಶದಲ್ಲಿ ಶೈಕ್ಷಣಿಕ ಗಾಂಭೀರ್ಯ ಹೊರಟು ಹೋಗಿರುವುದೂ ಅನಗತ್ಯ ಕಿರುಕುಳ ಮತ್ತು ಆಡಳಿತಾತ್ಮಕ ಸಮಿತಿಗೆ ಅತಿಯಾದ ಮಹತ್ವಕ್ಕೆ ಕಾರಣವಾಗಿದೆ. ಶಾಲೆಗಳಲ್ಲಿನ ಕೆಲಸ ಕಾರ್ಯಗಳು ಜಾಸ್ತಿಯಾಗಿರುವುದರಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಭಾಗಗಳನ್ನು ಪ್ರತ್ಯೇಕ ಮಾಡಿ, ಅಗತ್ಯವಿರುವ ಬೋಧಕೇತರ ಸಿಬ್ಬಂದಿಯನ್ನು ಕಾಯಂ ನೆಲೆಯಲ್ಲಿ ನೇಮಿಸಬೇಕು. ಕಾಯಂ ಸಿಬ್ಬಂದಿಯಾದಾಗ ಇಲಾಖೆಗೆ ಅವರ ಮೇಲೆ ನಿಯಂತ್ರಣ ಜಾಸ್ತಿ ಇರುತ್ತದೆ. ತಾತ್ಕಾಲಿಕ ಸಿಬ್ಬಂದಿಯಾದಾಗ ಅವರನ್ನು ನಿರ್ವಹಿಸಲು ಸ್ಥಳೀಯ ಸಮಿತಿಗಳ ಪಾಲುದಾರಿಕೆ ಜಾಸ್ತಿಯಾಗುತ್ತದೆ.

ವ್ಯಾವಹಾರಿಕವಾಗಿ ಇಲಾಖೆಗೆ ತಾತ್ಕಾಲಿಕ ಸಿಬ್ಬಂದಿಯ ಮೇಲೆ ನಿಯಂತ್ರಣ ಕಡಿಮೆಯಾಗಿ ಸ್ಥಳೀಯ ಸಮಿತಿಗಳಲ್ಲಿ ಸಶಕ್ತರಾಗಿರುವವರ ಬೆಂಬಲ, ವಿರೋಧಗಳಂತಹವು ಆ ನೌಕರರ ಕಾರ್ಯದ ಮೇಲೆ ಪ್ರಭಾವ ಉಂಟು ಮಾಡುತ್ತವೆ. ಅಲ್ಲದೆ ಶೈಕ್ಷಣಿಕ ಮತ್ತು ಆಡಳಿತ ವಿಭಾಗಗಳು ಬೇರೆಬೇರೆಯಾದಾಗ ಕಾರ್ಯ ಒತ್ತಡ ಕಡಿಮೆಯಾಗಿ ಕಲಿಕಾ ಪ್ರಕ್ರಿಯೆಗೆ ಮಹತ್ವ ಬರುತ್ತದೆ.

ಕಲಿಕೆ, ಕಲಿಕಾ ತಂತ್ರ, ಬೋಧನಾ ಸ್ವರೂಪಗಳಿಗೆಲ್ಲ ಪ್ರಾಮುಖ್ಯ ಬಂದ ಹಾಗೆ ಆಡಳಿತಾತ್ಮಕ ಕಿರುಕುಳಗಳು ಕಡಿಮೆಯಾಗುತ್ತವೆ. ಅದರಿಂದಾಗಿ ಆಡಳಿತಾತ್ಮಕ ಸಮಿತಿಗಳೂ ಶೈಕ್ಷಣಿಕ ನೆಲೆಗಳಲ್ಲಿ ಹೆಚ್ಚು ಯೋಚಿಸುತ್ತವೆ. ಸಮಿತಿಯ ಚಿಂತನಾ ಸಾಮರ್ಥ್ಯದ ಉನ್ನತೀಕರಣವು ಶಾಲಾ ಕಾಲೇಜುಗಳನ್ನು ಪಕ್ಷಬದ್ಧ ರಾಜಕೀಯದಿಂದ ಹೊರತರಬಲ್ಲದು.

ಅರವಿಂದ ಚೊಕ್ಕಾಡಿ
ಅರವಿಂದ ಚೊಕ್ಕಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT