ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪರಿಸರ ಬದ್ಧತೆಯ ಹಿತ್ತಲ ಹಣತೆ

ಕಾನೂನು, ಆಡಳಿತ ಹಾಗೂ ಯೋಜನೆಗಳೆಲ್ಲ ಸೋಲುತ್ತಿರುವಾಗ, ಸಮುದಾಯ ಪ್ರಯತ್ನಗಳೇ ಆಶಾಕಿರಣ!
Last Updated 4 ಜೂನ್ 2021, 19:31 IST
ಅಕ್ಷರ ಗಾತ್ರ

ಕೋವಿಡ್-19 ಲಾಕ್‌ಡೌನ್‌ನಿಂದ ನಾಡು ಪರಿತಪಿಸುತ್ತಿರುವ ಈ ಸಂದರ್ಭದಲ್ಲಿ, ಮಲೆನಾಡಿನ ಹಳೆಸೊರಬ ಹಳ್ಳಿಯಲ್ಲಿ ನಡೆದ ಈ ಘಟನೆಯು ನಮ್ಮ ಕಣ್ಣು ತೆರೆಸಬೇಕು. ಸಾಂಕ್ರಾಮಿಕಕ್ಕೆ ಬೆದರಿ ಊರು ಸೇರಿದ್ದ ಕೆಲವರೊಡನೆ ಬೆರಳೆಣಿಕೆಯ ಸ್ಥಳೀಯರೂ ಜೊತೆಯಾಗಿ, ಶತಮಾನಗಳಿಂದ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ರಕ್ಷಿಸಿ ಕೊಂಡು ಬಂದಿದ್ದ ನಿತ್ಯಹರಿದ್ವರ್ಣ ದೇವರಕಾಡಿನ ಹಲವು ಬಲಿತ ಮರಗಳನ್ನು ರಾತ್ರೋರಾತ್ರಿ ಕಡಿದುರುಳಿಸಿ ದರು. ದೇವದಾರು, ಬಿಲಕಂಬಿ, ಹೆಬ್ಬಲಸಿನಂಥ ವಿನಾಶದಂಚಿನ ಪ್ರಭೇದಗಳ ಭಾರಿ ಗಾತ್ರದ ನೂರಾರು ಗಗನಚುಂಬಿ ಮರಗಳು ಧರೆಗುರುಳಿದವು!

ಈ ಕಾಲದ ಪರಿಸರ ತುರ್ತುಪರಿಸ್ಥಿತಿಗೆ ಕಾರಣ ತಿಳಿಸಬಲ್ಲ ಕೈಗನ್ನಡಿಯಾಗಬಲ್ಲ ಘಟನೆಯಿದು. ತಲೆಮಾರುಗಳಿಂದ ತಮ್ಮವರಿಂದಲೇ ಪೂಜಿಸಲ್ಪಡು ತ್ತಿರುವ ದೇವರಕಾಡಿನ ಮರ ಕಡಿಯುವುದನ್ನು ಸಮುದಾಯದ ನೈತಿಕಪ್ರಜ್ಞೆಯೂ ಆ ದುಷ್ಕರ್ಮಿಗಳನ್ನು ತಡೆಯಲಿಲ್ಲ. ಸಕಾಲದಲ್ಲಿ ತಡೆಯೊಡ್ಡಬೇಕಿದ್ದ ಅರಣ್ಯ ಇಲಾಖೆಗೆ ವೃತ್ತಿನಿಷ್ಠೆ, ಕಾರ್ಯ ತತ್ಪರತೆ ಸಾಕಾಗಲಿಲ್ಲ. ಅರಣ್ಯ ಸಂರಕ್ಷಣೆಯ ಕಾನೂನು, ನಿಯಮಗಳೂ ಸರ್ಕಾರದ ಕಾರ್ಯಾಚರಣೆಗೆ ಬಲ ತರಲಿಲ್ಲ.

ತಂತ್ರಜ್ಞಾನದ ಬಲದಿಂದ ತನ್ನ ಕ್ಷಮತೆ ಹೆಚ್ಚಿಸಿಕೊಳ್ಳುವ ಚರ್ಚೆಗಳಲ್ಲೇ ಅರಣ್ಯ ಇಲಾಖೆ ಮುಳುಗಿದ್ದರೆ, ಅತ್ತ ಕಾಡುಗಳ್ಳರು ಮೊಬೈಲ್ ಸಂಪರ್ಕ ಹಾಗೂ ವಿದ್ಯುತ್‌ಚಾಲಿತ ಯಂತ್ರಗಳ ಸಹಾಯದಿಂದ ತಮ್ಮ ಕೈಚಳಕ ತೋರಿಸುತ್ತಿದ್ದಾರೆ! ಕಾನೂನು, ಆಡಳಿತಶಾಹಿ, ಅನುದಾನ, ಯೋಜನೆಗಳು, ಅಂತಿಮವಾಗಿ ಪರಿಸರ ರಕ್ಷಣೆಯ ಪಾರಂಪರಿಕ ಮೌಲ್ಯ- ಎಲ್ಲವೂ, ನಿಸರ್ಗಸಂಪತ್ತಿನ ಮೋಹದ ದಾಹಕ್ಕೆ ಬಲಿಯಾಗುತ್ತಿವೆಯಲ್ಲವೇ?

ಪರಿಸರನಾಶದ ಸಂಕಷ್ಟಗಳು ಯಾರೂ ಅರಿಯದವೇನಲ್ಲ. ಹಿಮಾಲಯದ ನೀರ್ಗಲ್ಲ ಸ್ಫೋಟ, ಸಮುದ್ರಗಳ ಭಾರಿ ಚಂಡಮಾರುತ, ಸಹ್ಯಾದ್ರಿಯ ಭೂಕುಸಿತ, ಒಣಗು ತ್ತಿರುವ ನದಿ-ಕೆರೆಗಳು, ಕಣ್ಮರೆಯಾಗುತ್ತಿರುವ ಕಾಡು-ಗೋಮಾಳ, ಹೆಚ್ಚುತ್ತಿರುವ ಕಾಡುಪ್ರಾಣಿ-ಮಾನವ ಸಂಘರ್ಷ, ನೆರೆ, ಬರ ಅಬ್ಬಾ! ವಾತಾವರಣದ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣವಂತೂ ಸುರಕ್ಷತೆಯ ಮಿತಿ ದಾಟಿ 420ಪಿಪಿಎಂ ತಲುಪಿ, ತಾಪಮಾನ ಹೆಚ್ಚಿಸುತ್ತಲೇ ಇದೆ. ವಾಯುಮಾಲಿನ್ಯದಿಂದಾಗಿ, ಇನ್ನು ಎರಡೇ ದಶಕ ಗಳಲ್ಲಿ ಉಸಿರಾಟದ ಮಾಸ್ಕ್ ಧರಿಸಿ ಓಡಾಡುವುದು
ಅನಿವಾರ್ಯವಾಗಬಹುದೆಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ!

ಈ ವಿಷಮ ಪರಿಸ್ಥಿತಿಯಾದರೂ ನಮ್ಮ ಅಂತಃಸಾಕ್ಷಿಯನ್ನು ಕೆಣಕಬೇಕಲ್ಲವೇ? ಮುಂದಿನ ತಲೆಮಾರು ಬಿಡಿ, ವರ್ತಮಾನದ ಬದುಕೇ ಇನ್ನಷ್ಟು ನರಕವಾಗದಿರಲು ಕನಿಷ್ಠ ಜವಾಬ್ದಾರಿಯನ್ನಾದರೂ ತೋರಬೇಕಿದೆ. ಈ ವರ್ಷದ ‘ವಿಶ್ವ ಪರಿಸರ ದಿನಾಚರಣೆ’ಯ (ಜೂನ್ 5) ‘ಪರಿಸರ ವ್ಯವಸ್ಥೆಗಳ ಪುನರುಜ್ಜೀವನ’ ಘೋಷವಾಕ್ಯವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಬೇಕಿದೆ. ಕಾಡು, ಗೋಮಾಳ, ನದಿ, ಕೆರೆ, ಕೃಷಿಭೂಮಿ, ವಸತಿ ಪ್ರದೇಶಗಳು- ಈ ಒಂದೊಂದೂ ಪರಿಸರ ವ್ಯವಸ್ಥೆಯನ್ನು ನಿಸರ್ಗಸ್ನೇಹಿಯಾಗಿ ಪುನಶ್ಚೇತನಗೊಳಿಸಬೇಕಾದ ಕಾರ್ಯವದು. ಇದನ್ನು ಸಾಧಿಸುವುದು ಹೇಗೆ? ಸರ್ಕಾರಗಳು, ಆಡಳಿತ ವ್ಯವಸ್ಥೆ, ಕಾನೂನು, ಯೋಜನೆಗಳು ಎಲ್ಲವೂ ವಿಫಲವಾಗುತ್ತಿರುವಾಗ, ಮುನ್ನಡೆಸಬಲ್ಲ ಶಕ್ತಿ ಯಾವುದು?

ಅಂಗಳದ ತೋರಿಕೆಯ ಬೊಕ್ಕಸ ಬರಿದಾದಾಗಲೆಲ್ಲ, ಹಿತ್ತಲಿನ ಸಂಪತ್ತೇ ಮನೆ ಮುನ್ನಡೆಸಬೇಕು. ಆಡಳಿತ ವ್ಯವಸ್ಥೆ ಬೆತ್ತಲಾಗಿರುವಾಗ, ಶತಮಾನಗಳಿಂದ ಬದುಕು ರೂಪಿಸುತ್ತಿರುವ ಸಮುದಾಯಗಳ ವಿವೇಕಕ್ಕೆ ಶರಣಾಗಬೇಕಿದೆ. ಸಂಪ್ರದಾಯವೇ ಶ್ರೇಷ್ಠವೆಂಬ ಹಳ ಹಳಿಕೆ ಅದಲ್ಲ. ದೇಶಕಾಲದ ಅಗತ್ಯಕ್ಕಾಗಿ ಹಳೆಯ ಕುಶಲತೆಗಳ ಬೇರಿನ ಜೊತೆ, ಹೊಸ ಜ್ಞಾನಕ್ಷೇತ್ರಗಳ ಚಿಗುರನ್ನು ಮರುಜೋಡಿಸಿಕೊಳ್ಳುವ ಸಮಷ್ಟಿಪ್ರಜ್ಞೆ ಅದು. ಈ ಸಂಕ್ರಮಣದಲ್ಲಿಯೂ ನೆಲ-ಜಲ ಸಂರಕ್ಷಣೆಗಾಗಿ ವಿವಿಧೆಡೆ ಕಾಣುವ ಸಮುದಾಯ ಪ್ರಯತ್ನಗಳೇ ಇದಕ್ಕೆ ಸಾಕ್ಷಿ. ಅವನ್ನು ಗುರುತಿಸಿ, ಅಗತ್ಯವಿದ್ದೆಡೆ ಸೂಕ್ತವಾಗಿ ಪರಿಷ್ಕರಿಸಿ ಬಳಸಿಕೊಳ್ಳುವುದೇ ಇಂದಿನ ಸವಾಲುಗಳಿಗೆ ಪರಿಹಾರವಾಗಬಲ್ಲದು.

ಮೂರು ದಶಕಗಳ ಹಿಂದೆಯೇ ‘ರಾಷ್ಟ್ರೀಯ ಅರಣ್ಯ ನೀತಿ’ಯು (1988), ದೇಶದ ಶೇ 33ರಷ್ಟು ಭಾಗ ದಲ್ಲಾದರೂ ಅರಣ್ಯದ ಹೊದಿಕೆಯಿರಬೇಕೆಂದು ತರ್ಕಪೂರ್ಣವಾಗಿ ಆಶಿಸಿತ್ತು. ಆದರೆ, ಕಾಡು ಕರಗುತ್ತಲೇ ಸಾಗಿದೆ. ರಾಜ್ಯದಲ್ಲಿ ಶೇ 20ರಷ್ಟು ಅರಣ್ಯವಿದೆಯೆಂದು ಸರ್ಕಾರ ಹೇಳಿದರೂ ನೈಜಕಾಡು ಶೇ 10ಕ್ಕಿಂತಲೂ ಕಡಿಮೆಯಾಗಿರುವುದನ್ನು ಅಧ್ಯಯನಗಳು ತೋರಿಸುತ್ತಿವೆ.

ಅರಣ್ಯ ನಾಶವು ನಿತ್ಯಸಂಗತಿಯಾಗಿರುವ ಈ ನಿರಾಶಾ ದಾಯಕ ಗಳಿಗೆಯಲ್ಲೂ ತಮ್ಮ ಸಾಮೂಹಿಕ ಪರಿಶ್ರಮದಿಂದಲೇ ಕಾನನವನ್ನು ಕಾಪಿಟ್ಟುಕೊಂಡಿರುವ ಹಲವು ಗ್ರಾಮಗಳು ನಾಡಿನಲ್ಲಿವೆ. ಅದಕ್ಕೊಂದು ಉದಾಹರಣೆ, ಮಲೆನಾಡಿನ ಶಾಲ್ಮಲಾ ಕಣಿವೆಯ ಅಗಸಾಲ- ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ. ಸರ್ಕಾರಿ ಇಲಾಖೆಗಳ ಹಾಗೂ ಗ್ರಾಮಸ್ಥರೆಲ್ಲರ ಸಹಭಾಗಿತ್ವದೊಂದಿಗೆ ಒತ್ತುವರಿ, ಮರಕಡಿತಗಳನ್ನೆಲ್ಲ ನಿಯಂತ್ರಿಸಿ, ತಮ್ಮ ವ್ಯಾಪ್ತಿಯಲ್ಲಿ ಜೀವವೈವಿಧ್ಯಭರಿತ ದಟ್ಟಕಾಡನ್ನು ಪೋಷಿಸುತ್ತಿರುವ ಈ ಹಳ್ಳಿಗರ ಕಾಳಜಿಯು ನಾಡಿಗೊಂದು ಮಾದರಿಯೇ ಸರಿ.

ರಾಜ್ಯ ಕರಾವಳಿಯ ಸುಮಾರು 320 ಕಿ.ಮೀ. ಉದ್ದನೆಯ ಸಮುದ್ರತೀರ, ಕಾಂಡ್ಲಾಕಾಡು, ಅಳಿವೆಗಳೆಲ್ಲ ಅಪಾಯಕ್ಕೆ ಸಿಲುಕಿವೆ. ಗರಿಷ್ಠ ಉಬ್ಬರರೇಖೆಯ ಮಿತಿ ಯೊಳಗಿನ ಸಮುದ್ರತಟದಲ್ಲಿ ವಿನಾಶಕಾರಿ ಕಾಮಗಾರಿ ಹಮ್ಮಿಕೊಳ್ಳಬಾರದೆಂದು ‘ಪರಿಸರ ಸಂರಕ್ಷಣಾ ಕಾಯ್ದೆ’ಯ (1986) ‘ಕರಾವಳಿ ನಿರ್ವಹಣಾ ನಿಯಮ’ ಸ್ಪಷ್ಟಪಡಿಸಿದ್ದರೂ ಅಲ್ಲಿನ ಪರಿಸರ ನಾಶ ನಿಲ್ಲುತ್ತಿಲ್ಲ. ಸಹ್ಯಾದ್ರಿಯೊಡಲಲ್ಲಿ ಹುಟ್ಟಿ ಸಾಗರ ಸೇರುವ ನದಿಗಳಲ್ಲಿ ಸಿಹಿನೀರ ಹರಿವು ಕಡಿಮೆಯಾಗಿ, ಪೋಷಕಾಂಶ ಕೊರತೆಯಿಂದ ಸಮುದ್ರದಲ್ಲೇ ಮತ್ಸ್ಯಕ್ಷಾಮವಾಗಿ, ಮೀನುಗಾರರ ಸಂಕಷ್ಟಕ್ಕೆ ಎಣೆಯಿಲ್ಲದಾಗುತ್ತಿದೆ.

ಸಮುದ್ರಕೊರೆತ ತಡೆಯಬಲ್ಲ ಸಿರಿಹೊನ್ನೆ, ಹಿಪ್ಪೆ, ಹೊಂಗೆ, ಸಮುದ್ರಫಲ ವೃಕ್ಷಗಳ ಹಸಿರುಗೋಡೆಯ ಬದಲಾಗಿ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದ್ರದಡದಲ್ಲಿ ತಡೆಗೋಡೆಗಾಗಿ ಕಲ್ಲು ಸುರಿಯುವ ಬಂದರು ಇಲಾಖೆಯ ಕೃತ್ಯವಂತೂ ಮುಂದುವರಿದೇ ಇದೆ! ಈ ವಿಷಮ ಪರಿಸ್ಥಿತಿಯಲ್ಲೂ ಕುಂದಾಪುರ ತಾಲ್ಲೂಕಿನ ಪಂಚಗಂಗಾ ನದಿಗಳು ಸಮುದ್ರ ಸೇರುವ ಗಂಗೊಳ್ಳಿ ಪ್ರದೇಶದ ಮೀನುಗಾರರು, ಅಲ್ಲಿನ ಅಳಿವೆ ಹಾಗೂ ಕಾಂಡ್ಲಾಕಾಡನ್ನು ರಕ್ಷಿಸುತ್ತಲೇ ತಮ್ಮ
ಜೀವನೋಪಾಯವನ್ನೂ ಸಾಧಿಸಿಕೊಳ್ಳುತ್ತಿರುವ ಪರಿಯು ದೇಶಕ್ಕೇ ಮಾದರಿ ಎನ್ನಬೇಕು.

ರಾಜ್ಯದ 5,728 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ, 33,000ಕ್ಕೂ ಮೇಲ್ಪಟ್ಟು ಸಣ್ಣಕೆರೆಗಳಿವೆ. ಕಿರು ನೀರಾವರಿ ಇಲಾಖೆಯ ಬಳಿ ಸುಮಾರು ನಾಲ್ಕು ಸಾವಿರ ದೊಡ್ಡಕೆರೆಗಳಿವೆ. ಇವುಗಳಲ್ಲಿ ಬಹುಪಾಲನ್ನು ಒತ್ತುವರಿ, ಹೂಳು ಹಾಗೂ ಮಾಲಿನ್ಯವು ಉಸಿರುಗಟ್ಟಿಸುತ್ತಿವೆ. ನ್ಯಾಯಾಲಯದ ಆದೇಶಗಳು, ಸರ್ಕಾರಿ ಯೋಜನೆಗಳು, ಇದಕ್ಕೆಂದೇ ರಚಿತವಾದ ‘ಕೆರೆ ಅಭಿವೃದ್ಧಿ ಪ್ರಾಧಿಕಾರ’- ಯಾವುದೂ ಪರಿಸ್ಥಿತಿಯನ್ನು ನಿಯಂತ್ರಿಸ ಲಾಗದಿರುವುದು ವಾಸ್ತವ! ಇಂಥ ಸಂದರ್ಭದಲ್ಲೂ ಸ್ವಂತ ಪರಿಶ್ರಮದಿಂದಲೇ ಹೂಳು ತೆಗೆದ, ಮಾಲಿನ್ಯ ಹಾಗೂ ಅತಿಕ್ರಮಣ ತಡೆದ ಸಮುದಾಯ ಪ್ರಯತ್ನಗಳು ನಾಡಿನೆಲ್ಲೆಡೆ ನಡೆಯುತ್ತಿವೆ. ಉದಾಹರಣೆಗೆ, ಬೆಂಗಳೂರು ಹೊರವಲಯದ ಜಕ್ಕೂರು ಕೆರೆಯನ್ನು ಸ್ಥಳೀಯ ನಿವಾಸಿಗಳ ಸಮುದಾಯವು ಯಶಸ್ವಿಯಾಗಿ ನಿರ್ವಹಿಸುತ್ತಿರುವ ರೀತಿಯು ದೇಶಕ್ಕೊಂದು ಆದರ್ಶ.

ನದಿಗಳ ಪರಿಸ್ಥಿತಿಯಂತೂ ಹೇಳತೀರದು. ಜಲಮೂಲಗಳ ನಾಶ, ನದಿಯಂಚಿನ ಕಾಡಿನ ಕಣ್ಮರೆ, ಅತಿಕ್ರಮಣ, ಮರಳುಗಣಿಗಾರಿಕೆಗಳು ಅವನ್ನು ಬರಡಾಗಿಸುತ್ತಿವೆ. ರಾಜ್ಯದ 17 ಪ್ರಮುಖ ನದಿಗಳ ನೀರು ಬಳಸಬಾರದಷ್ಟು ಕಲುಷಿತಗೊಂಡಿದೆಯೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳಿದೆ! ಇಷ್ಟಾಗ್ಯೂ ನದಿಗಳ ಅವೈಜ್ಞಾನಿಕ ನಿರ್ವಹಣೆಯ ಸರ್ಕಾರಿ ನಡವಳಿಕೆ ಬದಲಾಗಿಲ್ಲ. ಈ ನಡುವೆಯೂ ನದಿಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ಹಳ್ಳಿಗಳಿವೆ. ಜಲಾನಯನ ಪ್ರದೇಶದ ಹಸಿರು ಹಾಗೂ ನೀರಿನ ಹರಿವನ್ನು ಕಾಯ್ದುಕೊಂಡು ನದಿಯನ್ನು ಜೀವಂತವಾಗಿಟ್ಟಿರುವ, ಪಶ್ಚಿಮಘಟ್ಟದ ತಪ್ಪಲಿನ ಅಘನಾಶಿನಿ ಕಣಿವೆಯ ಸಮುದಾಯಗಳು ದೇಶಕ್ಕೇ ಅನುಸರಣೀಯವಾದ ಒಂದು ಉದಾಹರಣೆ.

ಹಳೆಸೊರಬದ ಕಾಡುನಾಶದಂಥ ಕಿಡಿಗೇಡಿಕೃತ್ಯ ಕಾಳ್ಗಿಚ್ಚಾಗದಿರಲಿ. ಸಮುದಾಯ ಕಾಳಜಿಯ ಹಣತೆಗಳು ಹೆಚ್ಚಿ ಜೀವಪರಿಸರದ ಸುರಕ್ಷತೆ ಬೆಳಗಲಿ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT