ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಭರವಸೆಯೆಂಬ ಬಣ್ಣದ ಬಲ್ಬು ಹೊತ್ತಿಕೊಂಡಾಗ...

ಹಳೆ ಹಳಿಗೆ ಮರಳುತ್ತಿರುವ ಫ್ಯಾಷನ್‌ ಉದ್ಯಮ
Last Updated 16 ಸೆಪ್ಟೆಂಬರ್ 2020, 6:57 IST
ಅಕ್ಷರ ಗಾತ್ರ
ADVERTISEMENT
""
""
""

ಕೋವಿಡ್‌ನಿಂದಾಗಿ ತೀವ್ರ ಸಂಕಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಫ್ಯಾಷನ್‌ ಉದ್ಯಮವೂ ಒಂದು. ವಾರಾಂತ್ಯಗಳಲ್ಲಿ ಹಾಗೂ ಋತು ಆಧರಿತವಾಗಿ ನಡೆಯುತ್ತಿದ್ದ ಅದ್ಧೂರಿ ಫ್ಯಾಷನ್‌ ಶೋಗಳಿಗೆ ಕೊರೊನಾ ಅಡ್ಡಗಾಲು ಹಾಕಿತು. ಕಣ್ಣುಕುಕ್ಕುವ ವಿನ್ಯಾಸದ ವಸ್ತ್ರಗಳನ್ನು ಧರಿಸಿ, ಝಗಮಗಿಸುವ ವಿದ್ಯುತ್‌ದೀಪಗಳ ಅಡಿಯಲ್ಲಿ ನಿಂತು ಆತ್ಮವಿಶ್ವಾಸದ ನಗು ತುಳುಕಿಸುತ್ತಿದ್ದ ರೂಪದರ್ಶಿಗಳ ಬದುಕಿನಲ್ಲಿ ಮಂದ ಬೆಳಕು ಆವರಿಸಿಕೊಂಡಿತು. ಈಗ ದೇಶದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಜಾರಿಯಲ್ಲಿದೆ. ಎಲ್ಲ ಉದ್ಯಮಗಳಂತೆ ಫ್ಯಾಷನ್‌ ಕ್ಷೇತ್ರದಲ್ಲೂ ಚಟುವಟಿಕೆಗಳು ಗರಿಗೆದರಿವೆ. ರೂಪದರ್ಶಿಗಳು, ವಸ್ತ್ರವಿನ್ಯಾಸಕರ ಬದುಕಿನಲ್ಲೂ ಈಗ ಭರವಸೆಯೆಂಬ ಬಣ್ಣದ ಬಲ್ಬ್‌ಗಳು ಒಂದೊಂದಾಗಿ ಹೊತ್ತಿಕೊಳ್ಳತೊಡಗಿವೆ!

---

ಸಿನಿಮಾ ಹಾಗೂ ಫ್ಯಾಷನ್ ಈ ಎರಡೂ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ಕನ್ನಡತಿ ದೀಪ್ತಿ ಮೋಹನ್‌. ನಿರ್ದೇಶಕ ರಘು ಎಸ್‌.ಪಿ. ಅವರ ‘ಗಿಫ್ಟ್‌ ಬಾಕ್ಸ್‌’ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದ ದೀಪ್ತಿ, ಆ ಸಿನಿಮಾದ ನಂತರ ಬೇರೊಂದು ಪಾತ್ರವನ್ನು ಒಪ್ಪಿಕೊಂಡಿಲ್ಲ. ‘ಗಿಫ್ಟ್‌ ಬಾಕ್ಸ್’ ಚಿತ್ರದಲ್ಲಿ ನಿರ್ವಹಿಸಿದಂತಹ ಗಟ್ಟಿ ಪಾತ್ರವೇ ಮುಂದಿನ ಚಿತ್ರದಲ್ಲೂ ಇರಬೇಕು ಎಂಬ ಆಸೆ ಅದಕ್ಕೆ ಕಾರಣವಂತೆ!

ಕಾಲೇಜು ದಿನಗಳಿಂದಲೇ ಫ್ಯಾಷನ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದೀಪ್ತಿ, ಈಗ ಸೂಪರ್‌ ಮಾಡೆಲ್‌ ಆಗಿ ಹೊರಹೊಮ್ಮಿದ್ದಾರೆ. ಜನಪ್ರಿಯ ವಸ್ತ್ರ ವಿನ್ಯಾಸಕರಅನೇಕ ಶೋಗಳಲ್ಲಿ ಶೋ ಸ್ಟಾಪರ್‌ ಆಗಿ ಮಿಂಚಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಸ್ತಬ್ಧಗೊಂಡಿದ್ದ ಫ್ಯಾಷನ್‌ ಕ್ಷೇತ್ರದಲ್ಲಿ ಇಂದು ನಿಧಾನವಾಗಿ ಚಟುವಟಿಕೆಗಳು ಗರಿಗೆದರುತ್ತಿವೆ. ಫ್ಯಾಷನ್‌ ತವರೂರಾದ ಮುಂಬೈ ಮತ್ತು ದೆಹಲಿಯಲ್ಲಿ ಆನ್‌ಲೈನ್‌ ಶೋಗಳು ನಡೆಯುತ್ತಿವೆ.

ಬೆಂಗಳೂರಿನಲ್ಲೂ ಅದೇ ಮಾದರಿ ಬರುವ ನಿರೀಕ್ಷೆ ಇದೆ. ಸುರಕ್ಷಿತ ಅಂತರ ಕಾಯ್ದುಕೊಂಡು ಫೋಟೊ ಶೂಟ್‌ಗಳು, ಕಮರ್ಷಿಯಲ್‌ ಆ್ಯಡ್‌ ಶೂಟಿಂಗ್‌ಗಳು ನಡೆಯುತ್ತಿವೆ. ಇಂತಹ ಬಿಡಿ ಬಿಡಿಯಾದ ಚಟುವಟಿಕೆಗಳು ರೂಪದರ್ಶಿಗಳ ಬದುಕಿನಲ್ಲಿ ಹೊರ ಭರವಸೆ ಮೂಡಿಸಿವೆ. ಫ್ಯಾಷನ್‌ ಕ್ಷೇತ್ರದ ಹಳೆ ವೈಭವವನ್ನು ಮರಳಿ ತರುವ ಶಕ್ತಿ ಇಂತಹ ಚಿಕ್ಕ ಚಿಕ್ಕ ‘ಹಾಯಿದೋಣಿ’ಗಳಿಗೆ ಇದೆ ಎಂಬುದು ದೀಪ್ತಿ ಅಭಿಮತ. ಈ ಕುರಿತು ಅವರು ಮಾತನಾಡಿದ್ದಾರೆ...

* ಕೋವಿಡ್‌ನಿಂದಾಗಿ ಫ್ಯಾಷನ್‌ ಉದ್ಯಮದ ಮೇಲೆ ಆದ ಒಟ್ಟಾರೆ ಪರಿಣಾಮ ಏನು?

ಫ್ಯಾಷನ್‌ ಕ್ಷೇತ್ರದ ಮೇಲೆ ಕೋವಿಡ್‌ ಗದಾಪ್ರಹಾರವನ್ನೇ ನಡೆಸಿತು. ಹೊಸ ಪ್ರತಿಭೆಗಳ ಹರಿವು ನಿಂತಿತು. ಸಾಕಷ್ಟು ನಷ್ಟ ಸಂಭವಿಸಿತು. ಫ್ಯಾಷನ್‌ ಇಂಡಸ್ಟ್ರಿ ಒಬ್ಬರು ಅಥವಾ ಇಬ್ಬರಿಂದ ನಡೆಯುವ ಕ್ಷೇತ್ರ ಅಲ್ಲ. ಒಂದು ಫ್ಯಾಷನ್‌ ಶೋ ಅಂತ ಬಂದಾಗ ಅದರ ಹಿಂದೆ ನೂರಾರು ಜನರ ಶ್ರಮ ಇರುತ್ತದೆ. ಒಬ್ಬರಿಗೊಬ್ಬರು ಬೆರೆತು ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ, ಕೋವಿಡ್‌ ಕಾರಣದಿಂದಾಗಿ ಎಲ್ಲ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡವು. ಫ್ಯಾಷನ್‌ ಕ್ಷೇತ್ರದ ‘ಎಕಾನಮಿ’ ಮಕಾಡೆ ಮಲಗಿಕೊಂಡಿತು.

* ರೂಪದರ್ಶಿಗಳು, ಡಿಸೈನರ್‌ಗಳು ಎದುರಿಸಿದ ಕಷ್ಟಗಳ ಬಗ್ಗೆ ಹೇಳಿ...

ಫ್ಯಾಷನ್‌ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದವರಿಗೆ ಹೆಚ್ಚಿನ ಕಷ್ಟ ಎದುರಾಗಲಿಲ್ಲ. ಆದರೆ, ಉದಯೋನ್ಮುಖ ರೂಪದರ್ಶಿಗಳು ಹಾಗೂ ವಸ್ತ್ರವಿನ್ಯಾಸಕರಿಗೆ ಕೋವಿಡ್‌ನಿಂದಾಗಿ ತುಂಬ ತೊಂದರೆ ಆಯಿತು. ಹೊಸಬರಿಗೆ ಮುಂದಿನ ಅವಕಾಶಗಳು ಸಿಗುವುದು ಅವರ ವರ್ಕ್‌ ಪ್ರೊಫೈಲ್‌ನಿಂದಲೇ. ಆದರೆ, ಈ ವರ್ಷ ಉದ್ಯಮಕ್ಕೆ ಕಾಲಿಟ್ಟಿದ್ದ ಅನೇಕರಿಗೆ ಆರಂಭದಲ್ಲೇ ವಿಘ್ನ ಎದುರಾಯಿತು. ಅವರಿಗೆ ಅವಕಾಶಗಳನ್ನು ಮೊಗೆದು ಕೊಡಬಹುದಾಗಿದ್ದ ಹೊಸ ಪ್ರಾಜೆಕ್ಟ್‌ಗಳೆಲ್ಲವೂ ನಿಂತೇಹೋದವು. ಹೀಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಬಂದಿದ್ದ ಅನೇಕ ಹೊಸ ಪ್ರತಿಭೆಗಳಿಗೆ ಕೊರೊನಾ ಕೈ ಕೊಟ್ಟಿತು. ಎಲ್ಲ ಸರಿಹೋಗುತ್ತದೆ ಎಂಬ ನಂಬಿಕೆಯಿಂದಲೇ ಈಗ ಮತ್ತೆ ಕೆಲಸ ಆರಂಭಿಸಬೇಕಿದೆ.

* ಲಾಕ್‌ಡೌನ್‌ ಸಮಯದಲ್ಲಿ ರೂಪದರ್ಶಿಗಳ ದಿನಚರಿ ಹೇಗಿತ್ತು?

ಮಾಡೆಲ್‌ಗಳೆಂದರೆ ಪ್ರತಿದಿನವೂ ನೂರಾರು ಜನರ ಜತೆಗೆ ಬೆರೆತು ಕೆಲಸ ಮಾಡಬೇಕಾಗುತ್ತದೆ. ಆದರೆ, ಕೊರೊನಾ ಲಾಕ್‌ಡೌನ್‌ ಎಂಬುದು ನಮ್ಮನ್ನು ಕಟ್ಟಿಹಾಕಿದಂತಹ ಭಾವ ಮೂಡಿಸಿತು. ಆದರೂ, ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ನನ್ನಂತೆ ನನ್ನ ಸ್ನೇಹಿತರು ಕೂಡ ಒಂದಿಲ್ಲೊಂದು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಲಾಕ್‌ಡೌನ್‌ ಅವಧಿಯಲ್ಲಿ ತುಂಬ ಜನರು ಪಾಕಕಲೆಯಲ್ಲಿ ಪ್ರಾವೀಣ್ಯತೆ ಸಾಧಿಸಿದರು. ನಾನೂ ಸಹ ವಿವಿಧ ಬಗೆಯ ತಿನಿಸುಗಳನ್ನು ಮಾಡುವುದನ್ನು ಕಲಿತೆ. ಹಾಡಲು ಕಲಿತೆ. ಸಾಂಗ್‌ ರೆಕಾರ್ಡಿಂಗ್‌ನಲ್ಲೂ ತೊಡಗಿಸಿಕೊಂಡಿದ್ದೆ. ಮೊದಲಿನಿಂದಲೂ ಪೇಂಟಿಂಗ್‌ ಬಗ್ಗೆ ಒಲವಿತ್ತು. ಲಾಕ್‌ಡೌನ್‌ ಸಮಯದಲ್ಲಿ ಆ ಕಲೆಗೆ ಇನ್ನೂ ಬಲ ಬಂತು. ಬೇಡಿಕೆ ಮೇರೆಗೆ ಸಾಕಷ್ಟು ಚಿತ್ರಗಳನ್ನು ರಚಿಸಿ, ಮಾರಾಟ ಕೂಡ ಮಾಡಿದೆ.

* ಅನ್‌ಲಾಕ್‌ ನಂತರ ಫ್ಯಾಷನ್‌ ಉದ್ಯಮದಲ್ಲಿ ಆದ ಬೆಳವಣಿಗೆಗಳು ಏನು?

ಅನ್‌ಲಾಕ್‌ ನಂತರದ ದಿನಗಳಲ್ಲಿ ರೂಪದರ್ಶಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ. ಫೋಟೊ ಶೂಟ್‌ಗಳು, ಕಮರ್ಷಿಯಲ್ ಜಾಹೀರಾತುಗಳು ಆರಂಭಗೊಳ್ಳುತ್ತಿವೆ. ನಾನು ಕೂಡ ಜನಪ್ರಿಯ ಬ್ರ್ಯಾಂಡ್‌ ಒಂದರ ಫೋಟೊಶೂಟ್‌ನಲ್ಲಿ ಭಾಗವಹಿಸಿದ್ದೇನೆ.

ಫ್ಯಾಷನ್‌ ಕ್ಷೇತ್ರದಲ್ಲಿ ಚಟುವಟಿಕೆ ನಡೆಸಲು ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೆಲಸಗಳು ನಡೆಯುತ್ತಿವೆ. ನಿಧಾನವಾಗಿಯಾದರೂ ಉದ್ಯಮ ಹಳೆ ಹಳಿಗೆ ಮರಳುತ್ತಿರುವುದು ಖುಷಿ ಕೊಡುತ್ತಿದೆ. ಅನ್‌ಲಾಕ್‌ ನಂತರ ಮಾಸ್ಕ್‌ ಫ್ಯಾಷನ್‌ ಟ್ರೆಂಡ್‌ ಆಗಿದ್ದು, ಡಿಸೈನರ್‌ ಮಾಸ್ಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

* ಉದ್ಯಮದ ಈಗಿನ ಸ್ಥಿತಿ ಬಗ್ಗೆ ಹೇಳಿ? ಫ್ಯಾಷನ್‌ ಕ್ಷೇತ್ರ ಮೊದಲಿನಂತಾಗಲು ಇನ್ನೂ ಎಷ್ಟು ಸಮಯ ಬೇಕಾಗಬಹುದು?

ಲಾಕ್‌ಡೌನ್‌ನಿಂದಾಗಿ ಫ್ಯಾಷನ್‌ ಎಕಾನಮಿ ಸಂಪೂರ್ಣ ಕುಸಿದಿದೆ. ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮೊದಲಿನಂತೆ ಜನ ಜಂಗುಳಿಯಿಂದ ಕೂಡಿದ ಫ್ಯಾಷನ್‌ ಶೋಗಳು, ಫ್ಯಾಷನ್‌ ವೀಕ್‌ಗಳು ನಡೆಯಬೇಕೆಂದರೆ ಒಂದರಿಂದ ಒಂದೂವರೆ ವರ್ಷ ಬೇಕಾಗಬಹುದು ಎಂಬುದು ನನ್ನ ಅಂದಾಜು.

ಫ್ಯಾಷನ್‌ ತವರೂರಾದ ಮುಂಬೈ ಮತ್ತು ದೆಹಲಿಯಲ್ಲಿ ಈಗ ಆನ್‌ಲೈನ್‌ ಶೋಗಳು ನಡೆಯುತ್ತಿವೆ. ಡಿಸೈನರ್‌ಗಳ ಔಟ್‌ಫಿಟ್ಸ್‌ಗಳನ್ನು ಈಗ ಆನ್‌ಲೈನ್‌ನಲ್ಲಿ ಮಾತ್ರ ನೋಡಲು ಅವಕಾಶವಿದೆ. ಲಾಕ್‌ಡೌನ್‌ ಲಿಫ್ಟ್‌ ಆಗಿದ್ದರೂ; ಕೋವಿಡ್‌ ಇನ್ನೂ ನಮ್ಮ ದೇಶ ಬಿಟ್ಟು ಹೋಗಿಲ್ಲ. ಕೊರೊನಾಗೆ ಲಸಿಕೆ ಬರುವವರೆಗೆ ಯಾರೂ ರಿಸ್ಕ್‌ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಬದಲಾವಣೆಗಳಿಗೆ ಒಗ್ಗಿಕೊಳ್ಳುವ ಶಕ್ತಿ ಎಲ್ಲರಿಗೂ ಇರುತ್ತದೆ. ಅಂತೆಯೇ, ಫ್ಯಾಷನ್‌ ಕ್ಷೇತ್ರದಲ್ಲೂ ಜಡತ್ವ ಕಳೆದು ಚಲನಶೀಲತೆ ಆವರಿಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT