ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮೆಸ್ಸಿ, ಕಿಲಿಯನ್: ಯಾರು ಚಾಂಪಿಯನ್?

ದಿಗ್ಗಜರ ಸತ್ವಪರೀಕ್ಷೆಯ ವೇದಿಕೆಯಾದ ಫಿಫಾ ವಿಶ್ವಕಪ್
Last Updated 16 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ
ADVERTISEMENT

‘ಪೆಲೆ ಮತ್ತು ಮರಡೋನಾ ಅವರಲ್ಲಿ ಯಾರು ಶ್ರೇಷ್ಠರು ಎಂದು ಜನ ಯಾವಾಗಲೂ ಚರ್ಚಿಸುತ್ತಾರೆ. ಆದರೆ ಡಿ ಸ್ಟಿಫಾನೊ ಮಾತ್ರ ಶ್ರೇಷ್ಠರು. ಅವರು ಹೆಚ್ಚು ಪರಿಪೂರ್ಣರು...’

– ಬ್ರೆಜಿಲ್ ದಿಗ್ಗಜ ಮತ್ತು ಮೂರು ಬಾರಿ ವಿಶ್ವಕಪ್ ವಿಜೇತ ಫುಟ್‌ಬಾಲ್ ಆಟಗಾರ ಪೆಲೆ ಹೇಳಿದ ಮಾತು ಇದು. ಅರ್ಜೆಂಟೀನಾದ ಮಾಜಿ ಆಟಗಾರ ಅಲ್ಫ್ರೆಡ್‌ ಡಿ ಸ್ಟಿಫಾನೊ 1947ರಿಂದ 1962ರವರೆಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ಪೆಲೆಯಿಂದ ಮೊದಲ್ಗೊಂಡು ಇಂದಿನ ಕಿಲಿಯನ್ ಎಂಬಾಪೆ ಅವರ ಪೀಳಿಗೆಗಳ ಆಟಗಾರರಿಗೆ ಪ್ರೇರಣೆಯಾಗಿದ್ದಾರೆ. ಅವರ ನಿವೃತ್ತಿಯ ನಂತರ ಅರ್ಜೆಂಟೀನಾ ಎರಡು ಬಾರಿ ವಿಶ್ವಕಪ್ ಜಯಿಸಿತು. ಇದೀಗ ಮೂರನೇ ಪ್ರಶಸ್ತಿ ಗೆಲುವಿನ ಹೊಸ್ತಿಲಲ್ಲಿದೆ.

1978ರಲ್ಲಿ ಮಾರಿಯೊ ಕ್ಯಾಂಪೆಸ್ ಮತ್ತು 1986ರಲ್ಲಿ ಡಿಯೆಗೊ ಮರಡೋನಾ ಮಾಡಿದ್ದ ಚಮತ್ಕಾರವನ್ನು ಈ ಸಲ ಲಯೊನೆಲ್ ಮೆಸ್ಸಿ ಅವರಿಂದ ನಿರೀಕ್ಷಿಸಲಾಗುತ್ತಿದೆ. ಅವರಿಗೂ ಈಗ ಅರ್ಜೆಂಟೀನಾ ಪಾಲಿನ ಮಹಾತಾರೆ ಆಗುವ ಸುವರ್ಣಾವಕಾಶ ಒದಗಿಬಂದಿದೆ.

ಏಕೆಂದರೆ ಕತಾರ್‌ನಲ್ಲಿ ನಡೆಯುತ್ತಿರುವ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯ ಆರಂಭಿಕ ಹಂತದಲ್ಲಿಯೇ ಅರ್ಜೆಂಟೀನಾ ಆಘಾತ ಅನುಭವಿಸಿತ್ತು. 25 ದಿನಗಳ ಹಿಂದೆ ಲುಸೈಲ್ ಕ್ರೀಡಾಂಗಣದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾವು ಫುಟ್‌ಬಾಲ್ ಲೋಕದ ‘ಶಿಶು’ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಸೌದಿ ತಂಡ ಮತ್ತು ಅಭಿಮಾನಿಗಳು ವಿಶ್ವಕಪ್ ಗೆದ್ದಷ್ಟೇ ಸಂಭ್ರಮಿಸಿದ್ದರು. ದಿಗ್ಗಜ ಮೆಸ್ಸಿ ಇರುವ ತಂಡವನ್ನು ಸೋಲಿಸಿದ್ದು ಕಮ್ಮಿ ಸಾಧನೆಯೇನೂ ಅಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ‘ಮೆಸ್ಸಿ ಬರೀ ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ದುಡ್ಡಿಗಾಗಿ ಆಡುತ್ತಾರೆ’ ಎಂಬ ಟೀಕೆಗಳು ವ್ಯಕ್ತವಾದವು.

ಆದರೆ ಅವೆಲ್ಲವೂ ಈಗ ‘ರಿಸೈಕಲ್ ಬಿನ್‌’ ಸೇರಿವೆ. ಹಿಂದಿನ ಮೂರು ವಾರಗಳಲ್ಲಿ ಅರ್ಜೆಂಟೀನಾದ ಪಾಲಿಗೆ ಮೆಸ್ಸಿ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರು ಈ ಟೂರ್ನಿಯಲ್ಲಿ ಗಳಿಸಿರುವ ಐದು ಗೋಲುಗಳು ಮತ್ತು ಮೂರು ಅಸಿಸ್ಟ್‌ಗಳು (ಪಾಸ್) ಇದಕ್ಕೆ ಕಾರಣ. ಅರ್ಜೆಂಟೀನಾ ಮಾತ್ರವಲ್ಲ, ಭಾರತವೂ ಸೇರಿದಂತೆ ಬಹಳಷ್ಟು ದೇಶಗಳಲ್ಲಿರುವ ಮೆಸ್ಸಿ ಅಭಿಮಾನಿಗಳೂ ಈಗ ಅರ್ಜೆಂಟೀನಾದ ಜಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಅರ್ಜೆಂಟೀನಾ ತಂಡವು ಹಾಲಿ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧದ ಫೈನಲ್‌ನಲ್ಲಿ ಗೆದ್ದರೆ ಹೊಸದೊಂದು ಇತಿಹಾಸ ನಿರ್ಮಾಣವಾಗುವುದು ಖಚಿತ. ಮೆಸ್ಸಿಗೆ ಇದು ಐದನೇ ವಿಶ್ವಕಪ್ ಟೂರ್ನಿ. ಅವರ ಮನೆಯಲ್ಲಿರುವ ಭವ್ಯವಾದ ಗಾಜಿನ ಕಪಾಟಿನಲ್ಲಿ ಬಹುತೇಕ ಎಲ್ಲ ಪ್ರತಿಷ್ಠಿತ ಟೂರ್ನಿಗಳ ಟ್ರೋಫಿಗಳೂ ಇವೆ. ಆದರೆ ಚಿನ್ನದ ಹೊಳಪಿನ ವಿಶ್ವಕಪ್ ಮಾತ್ರ ಇಲ್ಲ. ಈ ಬಾರಿ ಆ ಕೊರತೆ ನೀಗುವುದೇ?

ಆದರೆ ಫ್ರಾನ್ಸ್‌ ವಿರುದ್ಧ ಜಯಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ತಮ್ಮ ಬಾಲ್ಯದಿಂದಲೂ ಪೋರ್ಚುಗಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ನೋಡುತ್ತಲೇ ಫುಟ್‌ಬಾಲ್ ಪ್ರೀತಿ ಬೆಳೆಸಿಕೊಂಡ ಕಿಲಿಯನ್ ಎಂಬಾಪೆ ಎಂಬ ಪ್ರತಿಭಾವಂತ ಆಟಗಾರ ಮೆಸ್ಸಿಗೆ ಪೈಪೋಟಿಯೊಡ್ಡಲು ಸಿದ್ಧರಾಗಿದ್ದಾರೆ. 2018ರಲ್ಲಿಯೂ ಚಿನ್ನದ ಬೂಟು ಗೆದ್ದಿದ್ದ ಕಿಲಿಯನ್ ಈ ಸಲವೂ ಸ್ಪರ್ಧೆಯಲ್ಲಿದ್ದಾರೆ. ಅಲ್ಲದೆ ಅವರು ಮೆಸ್ಸಿ ಜೊತೆಗೆ ಪ್ಯಾರಿಸ್‌ ಸೇಂಟ್ ಜರ್ಮನ್ (ಪಿಎಸ್‌ಜಿ) ಫುಟ್‌ಬಾಲ್ ಕ್ಲಬ್‌ನಲ್ಲಿ ಜೊತೆಯಾಗಿ ಆಡುತ್ತಾರೆ. ಇವರಿಬ್ಬರಲ್ಲಿ ಯಾರಿಗೆ ಕಿರೀಟ ಒಲಿಯುವುದೋ ನೋಡಲು ಭಾನುವಾರ ರಾತ್ರಿಯವರೆಗೂ ಕಾಯಬೇಕು. ಅಂದಹಾಗೆ ಇವರಿಬ್ಬರ ಪೋಷಾಕು ಸಂಖ್ಯೆಯೂ 10.

ಆದರೆ ಈ ಟೂರ್ನಿಯ ನಂತರವೂ ಫುಟ್‌ಬಾಲ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿಯುವಂತಹ ಹತ್ತಾರು ವಿಶೇಷಗಳು ಈಗಾಗಲೇ ದಾಖಲಾಗಿವೆ. ಅರ್ಜೆಂಟೀನಾವನ್ನು ಸೌದಿ ಅರೇಬಿಯಾ ಸೋಲಿಸಿದ ರೀತಿಯಲ್ಲಿಯೇ ಇನ್ನೂ ಕೆಲವು ಪುಟ್ಟ ರಾಷ್ಟ್ರಗಳು ದಿಗ್ಗಜ ತಂಡಗಳಿಗೆ ಆಘಾತ ನೀಡಿದವು.

ನಾಲ್ಕು ಸಲ ವಿಶ್ವಕಪ್ ಗೆದ್ದಿರುವ ಜರ್ಮನಿ ಮತ್ತು ಸ್ಪೇನ್ ತಂಡಗಳ ಎದುರು ಜಪಾನ್, ವೇಲ್ಸ್‌ ಎದುರು ಇರಾನ್, ಪೋರ್ಚುಗಲ್‌ ವಿರುದ್ಧ ದಕ್ಷಿಣ ಕೊರಿಯಾ, ಫ್ರಾನ್ಸ್‌ ಎದುರು ಟ್ಯುನೀಷಿಯಾ, ಬ್ರೆಜಿಲ್‌ ಎದುರು ಕ್ಯಾಮರೂನ್ ಹಾಗೂ ಬೆಲ್ಜಿಯಂ ವಿರುದ್ಧ ಮೊರೊಕ್ಕೊ ತಂಡಗಳು ಜಯಿಸಿದವು. ಅದರಲ್ಲೂ ಅಶ್ರಫ್ ಹಕೀಮಿ ನೇತೃತ್ವದ ಮೊರೊಕ್ಕೊ 16ರ ಘಟ್ಟದಲ್ಲಿ ಸ್ಪೇನ್ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಪೋರ್ಚುಗಲ್‌ಗೆ ಆಘಾತ ನೀಡಿ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತು.

ಮೊರೊಕ್ಕೊ ತಂಡದ ವಿಜಯವು ಪೋರ್ಚುಗಲ್ ತಂಡದ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತು. 37 ವರ್ಷದ ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಟೂರ್ನಿ ಎನ್ನಲಾಗಿದೆ. ಒಂದೊಮ್ಮೆ ಪೋರ್ಚುಗಲ್‌ ಫೈನಲ್‌ ಪ್ರವೇಶಿಸಿದ್ದರೆ ಸಮಕಾಲೀನ ದಿಗ್ಗಜರಾದ ಮೆಸ್ಸಿ ಮತ್ತು ರೊನಾಲ್ಡೊ ಅವರಿಬ್ಬರ ಹಣಾಹಣಿ ಕಣ್ತುಂಬಿಕೊಳ್ಳುವ ಅವಕಾಶ ಇತ್ತು.

ಪೋರ್ಚುಗಲ್ ತಂಡದ ಆಂತರಿಕ ವಿಷಯಗಳು ಸೋಲಿಗೆ ಕಾರಣವಾಗಿವೆ ಎನ್ನಲಾಗಿದೆ. ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ರೊನಾಲ್ಡೊ ಅವರನ್ನು ಬೆಂಚ್‌ನಲ್ಲಿ ಕೂರಿಸಿದ ತಂಡದ ಮ್ಯಾನೇಜರ್ ಫರ್ನಾಂಡೊ ಸಾಂತೋಸ್ ಸುದ್ದಿಯಾದರು. ಆ ಪಂದ್ಯದಲ್ಲಿ ಪೋರ್ಚುಗಲ್, ರೊನಾಲ್ಡೊ ಇಲ್ಲದೆಯೂ ಸ್ವಿಟ್ಜರ್‌ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಸಾಂತೋಸ್ ಕ್ರಮವನ್ನು ಖಂಡಿಸಿ ರೊನಾಲ್ಡೊ ಬಾಳಸಂಗಾತಿ ಜಾರ್ಜಿನಾ ರಾಡ್ರಿಗೇಜ್ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಯಿತು. ಕ್ವಾರ್ಟರ್‌ಫೈನಲ್‌ನ ಮೊದಲಾರ್ಧದಲ್ಲಿ ರೊನಾಲ್ಡೊ ಬೆಂಚ್‌ನಲ್ಲಿದ್ದರು. ನಂತರ ಕಣಕ್ಕೆ ಇಳಿದರೂ ಅವರಿಂದ ಚಮತ್ಕಾರ ನಡೆಯಲಿಲ್ಲ. ಮೊರೊಕ್ಕೊ ತಂಡದ ಎದುರು ಪೋರ್ಚುಗಲ್‌ ಸೋತಿತು. ರೊನಾಲ್ಡೊ ಕಣ್ಣೀರಿಡುತ್ತ ಮೈದಾನದಿಂದ ನಿರ್ಗಮಿಸಿದರು. ಕ್ರೀಡಾಲೋಕದ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ಆಟಗಾರ ರೊನಾಲ್ಡೊ ಅವರ ಅಂತರರಾಷ್ಟ್ರೀಯ ಫುಟ್‌ಬಾಲ್ ಜೀವನಕ್ಕೆ ಬಹುತೇಕ ತೆರೆಬಿದ್ದಿದೆ. ಬಡ ಕುಟುಂಬದಲ್ಲಿ ಹುಟ್ಟಿ ಈ ಎತ್ತರಕ್ಕೆ ಬೆಳೆದು ಹಲವು ಯುವಪ್ರತಿಭೆಗಳಿಗೆ ಪ್ರೇರಣೆಯಾಗಿರುವ ರೊನಾಲ್ಡೊಗೆ ವಿಶ್ವಕಪ್‌ ಜಯಿಸದ ಕೊರತೆಯು ಜೀವನಪೂರ್ತಿ ಉಳಿಯುವುದು ಖಚಿತ.

ಅವರಂತೆಯೇ ಕ್ರೊವೇಷ್ಯಾದ 37 ವರ್ಷದ ಲೂಕಾ ಮಾಡ್ರಿಚ್ ಅವರಿಗೂ ವಿಶ್ವಕಪ್ ಕೊರಗು ಕಾಡಬಹುದು. ಹೋದ ಬಾರಿ ರನ್ನರ್ಸ್‌ ಅಪ್ ಆಗಿದ್ದ ತಂಡವು ಈ ಬಾರಿ ಅರ್ಜೆಂಟೀನಾ ಮುಂದೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಮಾಡ್ರಿಚ್ ಕ್ರೊವೇಷ್ಯಾದಲ್ಲಿ ಫುಟ್‌ಬಾಲ್ ಕ್ರಾಂತಿಗೆ ಕಾರಣರಾದವರು. ಬಾಲ್ಯವನ್ನು ನಿರಾಶ್ರಿತರ ಶಿಬಿರದಲ್ಲಿ ಕಳೆದು, ಅಲ್ಲಿಯೇ ಫುಟ್‌ಬಾಲ್ ಕಲಿತು ಈ ಮಟ್ಟಕ್ಕೆ ಬೆಳೆದವರು. ಸರ್ಬಿಯಾ ಸೈನಿಕರಿಂದ ತನ್ನ ಅಜ್ಜ ಹತ್ಯೆಗೊಳಗಾಗಿದ್ದನ್ನು ಕಣ್ಣಾರೆ ಕಂಡಿದ್ದವರು ಮಾಡ್ರಿಚ್. ಇದೀಗ ಅವರ ಪ್ರೇರಣೆಯಿಂದಾಗಿ ದೇಶದ ಹಲವು ಯುವಕರು ಹಿಂಸೆಯ ಮಾರ್ಗ ಬಿಟ್ಟು ಕಾಲ್ಚೆಂಡಿನತ್ತ ಧಾವಿಸುತ್ತಿದ್ದಾರೆ. ಆ ಮಟ್ಟಿಗೆ ಮಾಡ್ರಿಚ್ ವಿಜಯಿಯೇ ಹೌದು.

ಫುಟ್‌ಬಾಲ್ ವಿಶ್ವಕಪ್ ಇತಿಹಾಸದ ಪುಟಗಳನ್ನು ತಿರುವಿದರೆ ಇಂತಹ ಹತ್ತಾರು ಸ್ಫೂರ್ತಿದಾಯಕ ಸಂಗತಿಗಳು ಸೆಳೆಯುತ್ತವೆ. ಈ ಸಲ ಕತಾರ್ ಸುಮಾರು ₹ 16 ಲಕ್ಷ ಕೋಟಿ ಖರ್ಚು ಮಾಡಿ ಟೂರ್ನಿಯನ್ನು ಆಯೋಜಿಸಿದೆ. ಆದರೆ ವಲಸೆ ಕಾರ್ಮಿಕರ ಸಾವು ನೋವಿನ ಕಳಂಕ ಹೊತ್ತಿದೆ. ಆದರೆ ಕಾಕತಾಳೀಯ ನೋಡಿ. ಫೈನಲ್‌ನಲ್ಲಿ ಮುಖಾಮುಖಿಯಾಗಲಿರುವ ಮೆಸ್ಸಿ ಮತ್ತು ಎಂಬಾಪೆಯ ಪೂರ್ವಜರು ಕೂಡ ವಲಸಿಗರೇ. ಈಗ ಅವರಿಬ್ಬರೂ ತಮಗೆ ಆಶ್ರಯ ನೀಡಿದ ದೇಶಗಳ ಖ್ಯಾತಿಯನ್ನು ಉತ್ತುಂಗಕ್ಕೇರಿಸಿದ್ದಾರೆ. ಫೈನಲ್‌ನಲ್ಲಿ ಆಡುವ ಎರಡು ತಂಡಗಳಲ್ಲಿ ಒಂದು ವಿಜಯಿಯಾಗುತ್ತದೆ. ಅದೆಲ್ಲದರಾಚೆ ಮೆಸ್ಸಿ, ರೊನಾಲ್ಡೊ, ನೇಮರ್, ಮಾಡ್ರಿಚ್ ಮತ್ತು ಎಂಬಾಪೆ ಅವರು ಅಲ್ಫ್ರೆಡ್‌ ಡಿ ಸ್ಟಿಫಾನೊ ಅವರಂತೆ ಯುವಪೀಳಿಗೆಗೆ ಮಾದರಿಯಾದರೆ ಫುಟ್‌ಬಾಲ್ ಕ್ರೀಡೆ ಗೆಲ್ಲುತ್ತದೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT