ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗ್ಳೂರ ವಿಜಯ ಬರಹ: ಬಲಿಷ್ಠರು ಇನ್ನೂ ಬಲಗೊಳ್ಳಲು ಬೇಕಾಗಿದೆ ಮೀಸಲು

Last Updated 21 ಫೆಬ್ರುವರಿ 2021, 19:36 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಕುರ್ಚಿಗಾಗಿ ಕಾದಾಟವನ್ನು ನಿರಂತರವಾಗಿ ನೋಡಿಕೊಂಡು ಬಂದಿದ್ದೇವೆ. ‘ಆಪರೇಷನ್ ಕಮಲ’ ಎಂಬುದನ್ನು ದೇಶಕ್ಕೆ ಪರಿಚಯಿಸಿದ್ದಕ್ಕೂ ಕನ್ನಡಿಗರು ಸಾಕ್ಷಿಗಳಾದರು.

ಈಗ ನಾವು ಹೊಸದೊಂದು ಹುಚ್ಚಾಟಕ್ಕೆ ಪ್ರೇಕ್ಷಕರಾಗುತ್ತಿದ್ದೇವೆ. ಮೀಸಲಾತಿಗಾಗಿ ನಡೆದಿರುವ ವಿವೇಚನಾರಹಿತ ಹಾರಾಟವೇ ಹೊಸ ಹುಚ್ಚಾಟ. ಬಲಿಷ್ಠರು ಅಶಕ್ತರೊಂದಿಗೆ ಊಟ ಹಂಚಿಕೊಳ್ಳಲು ನಡೆಸಿರುವ ಹವಣಿಕೆ ಇದು. ನ್ಯಾಯದ ಬಗ್ಗೆ ಕಿಂಚಿತ್ತೂ ಚಿಂತನೆ ಇಲ್ಲದೆ, ಕೇವಲ ಲಾಭಕ್ಕಾಗಿ ಹಾತೊರೆಯುವ ಹುನ್ನಾರ ಈಗ ನಡೆದಿರುವುದು. ತಮ್ಮ ವರ್ಗ/ಸಮುದಾಯದಲ್ಲೇ ಅಶಕ್ತರು, ಅವಕಾಶವಂಚಿತರು ಅನೇಕರು ಇರುವಾಗ, ಅವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದವರು, ಈಗ ಹೋರಾಟದ ಹಾದಿ ಹಿಡಿದಿದ್ದಾರೆ; ತಮ್ಮಲ್ಲೇ ಬಲಿಷ್ಠವಾಗಿರುವ ಒಂದು ವರ್ಗವನ್ನು ಇನ್ನಷ್ಟು ಬಲಗೊಳಿಸಿಕೊಳ್ಳುವ ದಾರಿ ತುಳಿದಿದ್ದಾರೆ. ಏಕೆಂದರೆ, ಪ್ರವರ್ಗ ಬದಲಾದರೂ, ಮೀಸಲಾತಿ ಪ್ರಮಾಣ ಹೆಚ್ಚಾದರೂ, ಅದರ ಪ್ರಯೋಜನ ಆಯಾ ವರ್ಗ/ಸಮುದಾಯದಲ್ಲೇ ಇರುವ ಬಲಿಷ್ಠರ ಪಾಲಾಗುವುದು ನಿಶ್ಚಿತ. ಈ ಬಲಿಷ್ಠರು ತಮ್ಮಲ್ಲೇ ಇರುವ ಮಹಿಳೆಯರ ಬಗ್ಗೆ ಎಳ್ಳಷ್ಟೂ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ ಎಂಬುದೂ ಸ್ಪಷ್ಟ.

ಈಗ ಮಂಡಿಸುತ್ತಿರುವ ಮೀಸಲಾತಿ ಬೇಡಿಕೆ ಸರ್ಕಾರಿ ಹುದ್ದೆ/ಸೀಟುಗಳಲ್ಲಿ ಪಾಲು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ್ದು. ಇಲ್ಲಿ ಪಾಲು ಸಿಕ್ಕುವುದು ನಿಜಕ್ಕೂ ಸಾಧ್ಯವಾಗುವುದು ಪ್ರತಿಯೊಂದು ವರ್ಗ/ಸಮುದಾಯಗಳಲ್ಲಿ ಸಮಾನ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರಸಾರ ಆದಾಗ. ಆದರೆ, ಈಗಾಗಲೇ ಪ್ರತಿಯೊಂದು ವರ್ಗ/ಸಮುದಾಯದಲ್ಲಿ ಬಲಿಷ್ಠರು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. ಹಾಗಾಗಿ, ಈಗಿನ ಬಹುತೇಕ ಹೋರಾಟಗಳು ಬಲಿಷ್ಠರನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವುದಕ್ಕಾಗಿ ಎನ್ನಬೇಕಾಗುತ್ತದೆ.

ಸಾಮಾಜಿಕ ನ್ಯಾಯದ ಆಶಯವು ಈ ಹೋರಾಟದಲ್ಲಿ ಪ್ರತಿಫಲಿಸುತ್ತಿಲ್ಲ. ಇದನ್ನು ಮೂಲೆಗೆ ತಳ್ಳಿ, ಕೇವಲ ದುರ್ಬಲರ ಜೊತೆ ಸೇರಿ, ಅಲ್ಲಿ ಸಿಗುವ ಹುದ್ದೆ/ಸೀಟುಗಳಲ್ಲಿ ಹೆಚ್ಚಿನವುಗಳನ್ನು ತಮ್ಮ ಪಾಲಾಗಿಸಿಕೊಳ್ಳಲು ನಡೆಸಿರುವ ಪ್ರಯತ್ನವಾಗಿ ಕಾಣುತ್ತಿರುವುದು ವಿಪರ್ಯಾಸ.

2ಎ ಪ್ರವರ್ಗದಲ್ಲಿರುವ ಕುರುಬ ಸಮುದಾಯವು ಪ.ಪಂಗಡ ಪಟ್ಟಿ ಸೇರಲು ಹಾತೊರೆಯುತ್ತಿದೆ; ಪ.ಪಂಗಡದಲ್ಲಿ ಇರುವ ವಾಲ್ಮೀಕಿ ಸಮುದಾಯದವರು ತಮ್ಮ ಪಂಗಡಕ್ಕೆ ಹೆಚ್ಚು ಪ್ರಮಾಣದ ಮೀಸಲಾತಿ ಬೇಕು ಎಂದು ಕೂಗುತ್ತಿದ್ದಾರೆ; ಪಂಚಮಸಾಲಿ ಸಮುದಾಯದವರು ತಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಹೂಂಕಾರ ಹಾಕುತ್ತಿದ್ದಾರೆ. ಒಟ್ಟಾರೆ ಮೀಸಲಾತಿಗಾಗಿ ಪೈಪೋಟಿ ನಡೆದಿದೆ.

ವಿವೇಚನೆಯಿಂದ ಪೈಪೋಟಿ ನಡೆಸುವುದು ಅಸಮರ್ಥನೀಯವೇನೂ ಅಲ್ಲ; ಆದರೆ, ಈಗಿನ ಯಾವ ವಿದ್ಯಮಾನದಲ್ಲೂ ವಿವೇಚನೆ ಕಾಣುತ್ತಿಲ್ಲ. ತಮ್ಮ ಸಮುದಾಯದ ಜನಸಂಖ್ಯೆಯನ್ನು ಮತ್ತು ಎಂಎಲ್‍ಎ ಸಂಖ್ಯೆಯನ್ನು ಬೆದರಿಕೆ ರೂಪದಲ್ಲಿ ಮುಂದಿಟ್ಟು ಸರ್ಕಾರದ ಕೈ ತಿರುಗಿಸಿ, ಬಗ್ಗಿಸಿ ತಮ್ಮ ಒತ್ತಾಯವನ್ನು ಈಡೇರಿಸಿಕೊಳ್ಳುವ ವರಸೆ ಇದು. ಹಾಗಾಗಿ, ಇಲ್ಲಿ ವಿವೇಚನೆಯ ಪೂರ್ಣ ಗೈರುಹಾಜರಿ ಎದ್ದು ಕಾಣುತ್ತಿದೆ.

ಸಂವಿಧಾನವು ಪ.ಜಾತಿ ಮತ್ತು ಪ.ಪಂಗಡಗಳಿಗೆ ಸೇರಿದವರಿಗೆ ಮಾತ್ರ ಮೀಸಲಾತಿಯನ್ನು ಒದಗಿಸಿದೆ. ಇದು, ಅನುಚ್ಛೇದ 15(4) ಮತ್ತು 16(4)ರ ಮೂಲಕ. ರಾಜ್ಯದ ಜನಸಂಖ್ಯೆಯಲ್ಲಿ ಈ ಜಾತಿ ಮತ್ತು ಪಂಗಡಗಳವರ ಜನಸಂಖ್ಯೆ ಯಾವ ಪ್ರಮಾಣದಲ್ಲಿ ಇದೆಯೊ, ಆ ಪ್ರಮಾಣದಷ್ಟು ಮೀಸಲಾತಿ ಒದಗಿಸಲು ಈ ಅನುಚ್ಛೇದಗಳು ಅವಕಾಶ ನೀಡುತ್ತವೆ. ಸಂವಿಧಾನ ಜಾರಿಗೊಂಡ ನಂತರದ ದಿನಗಳಲ್ಲಿ ಅನೇಕ ರಾಜಕೀಯ ಪಕ್ಷಗಳು ದೇಶದ ಇತರ ಹಿಂದುಳಿದ ವರ್ಗಗಳಿಗೆ (ಮತ್ತು ಮಹಿಳೆಯರಿಗೆ) ಮೀಸಲಾತಿ ಅಗತ್ಯ ಎಂದು ಆಗ್ರಹಪಡಿಸಿದವು. 1979ರಲ್ಲಿ ಜನತಾ ಸರ್ಕಾರ ಬಿ.ಪಿ.ಮಂಡಲ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು. ಇದರ ವರದಿ ಆಧಾರದಲ್ಲಿ 1989ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಇತರ ಹಿಂದುಳಿದವರಿಗೆ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಶೇ 27 ಮೀಸಲಾತಿ ಒದಗಿಸಲು ಆದೇಶಿಸಿತು.

ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದೇ ಇಂದ್ರಾ ಸಾಹ್ನಿ ಮೊಕದ್ದಮೆ. ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಿನ ತೀರ್ಪನ್ನು ನ್ಯಾ. ಬಿ.ಪಿ.ಜೀವನರೆಡ್ಡಿ ಅವರು ಬರೆದದ್ದು. ತೀರ್ಪಿನ ಪ್ಯಾರಾ 697(4) ‘ಅತಿ ಜರೂರು ಸಂದರ್ಭದಲ್ಲಿ ರಕ್ಷಣಾತ್ಮಕ ಕ್ರಮ ಮೀಸಲಾತಿ. ಇದನ್ನು ಯಾವಾಗಲೂ ಕನಿಷ್ಠ ಸಂಖ್ಯೆಯ ಅವಕಾಶಗಳಿಗೆ (ಹುದ್ದೆ/ಸೀಟು) ಅನ್ವಯಿಸಬೇಕು. ಸಂವಿಧಾನವು ಮೀಸಲಾತಿ ಪ್ರಮಾಣ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲದ್ದಿದರೂ, ಸಮಾನತೆಗೆ ಧಕ್ಕೆ ಬಾರದಂತೆ ಮೀಸಲಾತಿಯನ್ನು ಅಳವಡಿಸುವುದು ಸಾಂವಿಧಾನಿಕ ತತ್ವವಾಗಿದೆ’ ಎನ್ನುತ್ತದೆ. ಈ ಕಾರಣಕ್ಕಾಗಿ, ಒಟ್ಟು ಮೀಸಲಾತಿ ಪ್ರಮಾಣವು ಶೇ 50ಕ್ಕಿಂತ ಕಡಿಮೆ ಇರಬೇಕು ಎಂದು ನಿರ್ದೇಶಿಸಲಾಯಿತು.

ದೇಶದಲ್ಲಿ ಪ.ಜಾತಿಯವರಿಗೆ ಶೇ 15 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಇದ್ದ ಹಿನ್ನೆಲೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿ ಒದಗಿಸುವುದನ್ನು ಸುಪ್ರೀಂ ಕೋರ್ಟು ಸಮ್ಮತಿಸಿತು.

ಮೀಸಲಾತಿ ವಿಷಯವನ್ನು ರಾಜಕೀಯ ಲಾಭ ಮತ್ತು ನಷ್ಟದ ಲೆಕ್ಕಾಚಾರದ ವಿಷಯವನ್ನಾಗಿಸುವುದು ಬೇಜವಾಬ್ದಾರಿ ನಿಲುವು. ಸಮಾಜದಲ್ಲಿನ ಅತಿ ದುರ್ಬಲರಿಗೆ ಮೀಸಲಾತಿಯ ಪ್ರಯೋಜನ ಲಭ್ಯವಾಗುವಂತೆ ನೀತಿಯನ್ನು ರೂಪಿಸಬೇಕು. ಮೀಸಲಾತಿಯ ಅವಶ್ಯಕತೆ ಕಡಿಮೆ ಆಗುತ್ತಾ ಹೋಗುವಂತೆ ಸಮಾಜವನ್ನು ನಿರ್ಮಿಸುವುದು ಯಾವುದೇ ಜನಹಿತನಿಷ್ಠ ಸರ್ಕಾರದ ಗುರಿ. ಈ ದಿಸೆಯಲ್ಲಿ ಒಟ್ಟಾರೆ ಜನರಿಗೆ ಶಿಕ್ಷಣ, ವಸತಿ, ಉದ್ಯೋಗ ಅವಕಾಶಗಳನ್ನು ಮುಕ್ತವಾಗಿ ಒದಗಿಸುವ ಹೊಣೆಯನ್ನು ಸರ್ಕಾರಗಳು ಹೊತ್ತುಕೊಳ್ಳಲೇಬೇಕು.

ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ವಿಷಯ ಈಗ ಭಾರಿ ಮಹತ್ವ ಪಡೆದುಕೊಂಡಿದೆ. ಆದರೆ, ಇದು ತಾತ್ವಿಕವಾಗಿ ಸಮರ್ಥನೀಯವಲ್ಲ. ಅಲ್ಲದೆ, ಇದು ಬಹುದೂರ ಸಾಗಬೇಕಾದ ದಾರಿ. ಇಲ್ಲಿ ಹಲವು ಹತ್ತು ಬಿಕ್ಕಟ್ಟುಗಳು ಎದುರಾಗುವುದು, ಹಿತಾಸಕ್ತಿ ಘರ್ಷಣೆಗಳು ನಡೆಯುವುದು ಮತ್ತು ಸಮಾಜದಲ್ಲಿ ಅಶಾಂತಿ, ಅಪನಂಬಿಕೆ ಮೂಡುವುದು, ಸಂಬಂಧಗಳಲ್ಲಿ ಬಿರುಕು ಮೂಡುವುದು ನಿಶ್ಚಿತ.

ಮೀಸಲು ಹೆಚ್ಚಳ ಸವಾಲು

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 15 ಮತ್ತು ಪಂಗಡದವರಿಗೆ ಶೇ 3ರಷ್ಟು ಮೀಸಲಾತಿ ಈಗ ಇದೆ. ಪರಿಶಿಷ್ಟ ಪಂಗಡದವರು (ಪರಿಶಿಷ್ಟ ಜಾತಿಯವರು ಕೂಡ) ತಮ್ಮ ಈಗಿನ ಜನಸಂಖ್ಯಾ ಪ್ರಮಾಣಕ್ಕೆ ತಕ್ಕಂತೆ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಆಗ್ರಹಪಡಿಸುತ್ತಿದ್ದಾರೆ. ಇದನ್ನು ಸಾಧ್ಯವಾಗಿಸಬೇಕು ಎಂದರೆ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಒಟ್ಟು ಮೀಸಲಾತಿಯಲ್ಲಿ ಕಡಿತ ಮಾಡಬೇಕಾಗುತ್ತದೆ. ಇದು ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿರುವುದರಿಂದ ಯಾವ ಸರ್ಕಾರವೂ ಈ ಕುರಿತು ಕ್ರಮ ಕೈಗೊಳ್ಳುವುದು ದುಃಸಾಧ್ಯ.

ಮೀಸಲೇತರ ವರ್ಗಗಳಿಗೆ ಮೀಸಲಾತಿ

ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು, ಮೀಸಲೇತರ ವರ್ಗ/ಸಮುದಾಯಗಳಿಗೆ ಸೇರಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸಿದೆ. ಇದರಿಂದ ಸುಪ್ರೀಂ ಕೋರ್ಟು ವಿಧಿಸಿದ್ದ ಮಿತಿಗೆ ವ್ಯತ್ಯಯ ಉಂಟಾಗಿದೆ. ಈ ಕುರಿತು ತನ್ನ ಮುಂದಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟು ಇತ್ಯರ್ಥಪಡಿಸುವುದು ಬಾಕಿ ಇದೆ.

(ಲೇಖಕ: ಸಾಮಾಜಿಕ ಅಧ್ಯಯನಕಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT