ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ಸಿರಿಮನೆ ಬರಹ: ಪ್ರಭಾವ, ಸಂಖ್ಯಾಬಲದ ಒತ್ತಡ ನಿವಾರಣೆ ಮೀಸಲಾತಿ ಗುರಿ ಅಲ್ಲ

Last Updated 21 ಫೆಬ್ರುವರಿ 2021, 19:35 IST
ಅಕ್ಷರ ಗಾತ್ರ

ಭಾರತದಲ್ಲಿರುವಂತೆಯೇ, ಪ್ರಪಂಚದ ಅನೇಕ ದೇಶಗಳು ಮತ್ತು ಪ್ರದೇಶಗಳಲ್ಲಿ ಜಾತಿ, ವರ್ಣ, ಧರ್ಮ, ಸಾಂಸ್ಕೃತಿಕ ಹಿನ್ನೆಲೆ, ಸಾಮಾಜಿಕ ಸ್ತರ ಅಥವಾ ರಾಷ್ಟ್ರೀಯತೆಯನ್ನಾಧರಿಸಿದ ತಾರತಮ್ಯವು ಅಸ್ತಿತ್ವದಲ್ಲಿದೆ. ಅಸಮಾನತೆಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಇವು ಸೃಷ್ಟಿಸಿವೆ. ಎಲ್ಲ ಕ್ಷೇತ್ರಗಳಲ್ಲಿ ಉಂಟಾಗಿದ್ದ ಇಂತಹ ಅಂತರಗಳನ್ನು ನಿವಾರಿಸುವ ಅಗತ್ಯಬಿದ್ದದ್ದು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ದೇಶಗಳು ಒಪ್ಪಿಕೊಂಡ ನಂತರ. ಆ ಸಂದರ್ಭದಲ್ಲಿ ಮೀಸಲಾತಿ, ಸಕ್ರಿಯ ರಚನಾತ್ಮಕ ಬೆಂಬಲ, ಸಕಾರಾತ್ಮಕ ಕ್ರಿಯೆ, ಸಮಾನಾವಕಾಶಗಳ ನೀತಿಗಳು ಮುಂತಾದ ಬೇರೆ ಬೇರೆ ರೂಪಗಳಲ್ಲಿ, ಹೆಸರುಗಳಲ್ಲಿ ಅದುವರೆಗೆ ವಂಚಿತವಾಗಿದ್ದ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿ ಅವರ ನ್ಯಾಯಬದ್ಧ ಹಕ್ಕನ್ನು ದೊರಕಿಸಿಕೊಡುವ ಬಾಧ್ಯತೆಯನ್ನು ಸರ್ಕಾರಗಳು ವಹಿಸಿಕೊಳ್ಳಬೇಕಾಯಿತು; ವಹಿಸಿಕೊಂಡವು.

ಭಾರತದಲ್ಲಿ ಡಾ.ಅಂಬೇಡ್ಕರ್‌ ಮತ್ತು ಇತರ ಸಂವಿಧಾನ ಕರ್ತೃಗಳ ದೂರದೃಷ್ಟಿತ್ವ ಮತ್ತು ಸ್ವಾತಂತ್ರ್ಯ ಚಳವಳಿಯು ಸೃಷ್ಟಿಸಿದ್ದ ಸಮಾನತೆಯ ಆಶಯದ ಬಲದ ಮೇಲೆ ನಮ್ಮ ದೇಶದ ಆಳುವವರೂ ಕೂಡಾ ಪರಿಶಿಷ್ಟ ಜಾತಿ/ ಪಂಗಡಗಳಿಗೆ ಮೀಸಲಾತಿಯ ನೀತಿಯನ್ನು ಸಂವಿಧಾನದ ಭಾಗವಾಗಿ ಒಪ್ಪಿಕೊಂಡು ಪಾಲಿಸಲಾರಂಭಿಸಿದರು. ನಂತರದ ದಿನಗಳಲ್ಲಿ ಮಂಡಲ್ ವರದಿಯ ಶಿಫಾರಸು ಜಾರಿ ಮೂಲಕ ಇನ್ನೂ ಅನೇಕ ಸಮುದಾಯಗಳಿಗೆ ಮೀಸಲಾತಿ ಜಾರಿಯಾದದ್ದು ಈಗ ಇತಿಹಾಸ.

ಹೀಗೆ, ಮೀಸಲಾತಿಯೆಂಬ ಪರಿಕಲ್ಪನೆಗೂ, ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯಗಳ ಮೂಲಕ ಹೇರಲ್ಪಟ್ಟ ಸಾಮಾಜಿಕ ಅಂತರದ ವ್ಯವಸ್ಥೆಗೂ ನೇರ ಸಂಬಂಧವಿದೆ. 2000ನೇ ಇಸವಿಯಲ್ಲಿ ಆ್ಯಕ್ಷನ್ ಏಡ್ ಸಂಸ್ಥೆಯು ಭಾರತದ 11 ರಾಜ್ಯಗಳ 555 ಗ್ರಾಮಗಳಲ್ಲಿ ನಡೆಸಿದ ಅಧ್ಯಯನವೊಂದನ್ನು ಆಧರಿಸಿ ಸುಖದೇವ್ ಥೋರಟ್‍ರವರು ಕೆಲವು ಅಂಶಗಳನ್ನು ಮುಂದಿಡುತ್ತಾರೆ:‘ಶೇ 36ರಷ್ಟು ಹಳ್ಳಿಗಳಲ್ಲಿ ದಲಿತರಿಗೆ ಕೃಷಿ ಕ್ಷೇತ್ರದ ಸಾಮಾನ್ಯ ಉದ್ಯೋಗವನ್ನು ನಿರಾಕರಿಸಲಾಗಿದೆ ಅಥವಾ ಕೂಲಿಯಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ. ಗುತ್ತಿಗೆ ಕೂಲಿ ಮಾರುಕಟ್ಟೆಯಲ್ಲಿ ಪ್ರತ್ಯೇಕತೆಯನ್ನು ಜಾರಿಗೊಳಿಸುವುದರ ಮೂಲಕ ಕಡಿಮೆ ಮೊತ್ತದ ಕೂಲಿಯನ್ನು ಪಾವತಿಸಲಾಗುತ್ತಿದೆ ಅಥವಾ ಹೆಚ್ಚು ಹೊರೆಯ ಮತ್ತು ‘ಕೆಳದರ್ಜೆಯ’ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಶೇ 35ರಷ್ಟು ಹಳ್ಳಿಗಳಲ್ಲಿ ದಲಿತರು ದಿನಬಳಕೆಯ ವಸ್ತುಗಳನ್ನು ಅಥವಾ ಆಹಾರ ವಸ್ತುಗಳನ್ನು ಇತರ ಸಮುದಾಯಗಳಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಶೇ 47ರಷ್ಟು ಹಳ್ಳಿಗಳಲ್ಲಿ ದಲಿತರು ಸಹಕಾರಿ ಸಂಘಗಳಿಗೆ ಅಥವಾ ಇತರರಿಗೆ ಹಾಲು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಜಾರಿಯಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಶೇ 24ರಷ್ಟು ತಾರತಮ್ಯವನ್ನು ಅನುಸರಿಸಲಾಗಿದೆ ಎಂದು ಅಧ್ಯಯನ ತಿಳಿಸಿದರೆ, ತಮಿಳುನಾಡಿನಲ್ಲಿ ಇದು ಶೇ 31, ರಾಜಸ್ಥಾನದಲ್ಲಿ ಶೇ 52ರಷ್ಟು ತಾರತಮ್ಯ ನೀತಿಯು ಅನುಸರಣೆಯಲ್ಲಿದೆ’.

ಜಾತಿಯ ಕಾರಣಕ್ಕೆ ಶಿಕ್ಷಣ ಮತ್ತು ಉದ್ಯೋಗಾವಕಾಶ ನಿರಾಕರಣೆ, ಜಾತಿ ದೌರ್ಜನ್ಯ ಭಾರತದಲ್ಲಿ ವಿಶೇಷವಲ್ಲವೇ ಅಲ್ಲ. ಹೀಗಾಗಿ ಇಂತಹ ಸನ್ನಿವೇಶದಲ್ಲಿ ಸಮಾನತೆಯ ಹಾದಿಯ ಹುಡುಕಾಟದಲ್ಲಿ ಮೀಸಲಾತಿಯೆಂಬುದು ಕತ್ತಲಲ್ಲಿ ತಡಕಾಡುತ್ತಿರುವವರಿಗೆ ಬೇಕಿರುವ ಲೈಟುಕಂಬವಿದ್ದಂತೆಯೇ ಹೊರತು, ‘ಒಬ್ಬ ವ್ಯಕ್ತಿ, ಒಂದು ಓಟು’ ಎಂಬ ಘೋಷಣೆಯ ಹಾಗಲ್ಲ.

ಜಾತಿ-ಧರ್ಮಗಳನ್ನು ಕಾರಣವಾಗಿಟ್ಟುಕೊಂಡು, ಮನುಷ್ಯರನ್ನು ಮನುಷ್ಯರನ್ನಾಗಿಯೂ ನೋಡಲು ಸಾಧ್ಯವಾಗದಂತೆ ಪ್ರತಿಯೊಬ್ಬ ಪ್ರಜೆಯನ್ನೂ ಪರಿವರ್ತಿಸಿರುವ ಸಮಾಜದಲ್ಲಿ ಪ್ರಜಾತಂತ್ರವು ಯಶಸ್ವಿಯಾಗುವುದಿಲ್ಲ ಎಂಬುದು ಅಂಬೇಡ್ಕರ್ ಅವರ ಅನಿಸಿಕೆಯಾಗಿತ್ತು. ಅವರ ಪ್ರಕಾರ, ‘ಪ್ರಜಾತಾಂತ್ರಿಕ ಸರ್ಕಾರವು ಪ್ರಜಾತಾಂತ್ರಿಕ ಸ್ವರೂಪದ ಸಮಾಜವನ್ನು ಅಪೇಕ್ಷಿಸುತ್ತದೆ. ಸಾಮಾಜಿಕ ಪ್ರಜಾತಂತ್ರವಿಲ್ಲದಿದ್ದಲ್ಲಿ ಔಪಚಾರಿಕ ನೆಲೆಗಟ್ಟಿನ ಪ್ರಜಾತಂತ್ರಕ್ಕೆ ಬೆಲೆಯೇ ಇಲ್ಲ. ಒಂದು ಪ್ರಜಾತಾಂತ್ರಿಕ ಸಮಾಜದೊಳಗಡೆ ಐಕ್ಯತೆ, ಒಂದು ಉದ್ದೇಶಕ್ಕಾಗಿ ಒಂದಾದ ಸಮುದಾಯ, ಸಾರ್ವಜನಿಕ ಗುರಿಗಳ ಬಗ್ಗೆ ಬದ್ಧತೆ ಮತ್ತು ಪರಸ್ಪರ ಸೌಹಾರ್ದತೆಯ ಅವಶ್ಯಕತೆ ಇಲ್ಲದೆಯೂ ಇರಬಹುದು. ಆದರೆ, ಅದರಲ್ಲಿ ಎರಡು ಅಂಶಗಳು ಇರಲೇಬೇಕು. ಮೊದಲನೆಯದು ಸಹವಾಸಿಗಳ ಕುರಿತು ಗೌರವ, ಸಮಾನತೆಯ ಭಾವ; ಎರಡನೆಯದು, ಜಡ ಸಾಮಾಜಿಕ ಅಡ್ಡಗೋಡೆಗಳಿಂದ ಮುಕ್ತವಾದ ಸಾಮಾಜಿಕ ಸಂರಚನೆ. ಉಳ್ಳವರು ಮತ್ತು ಇಲ್ಲದವರೆಂಬ ವ್ಯತ್ಯಾಸಗಳನ್ನು ನಿರ್ಮಿಸುವುದರಲ್ಲಿ ಪರ್ಯವಸಾನಗೊಳ್ಳುವ ಪ್ರತ್ಯೇಕತೆ ಮತ್ತು ಹೊರದಬ್ಬುವಿಕೆಗಳಿರುವಲ್ಲಿಗೆ ಪ್ರಜಾತಂತ್ರ ಒಗ್ಗುವುದಿಲ್ಲ’.

ಮೇಲ್ಜಾತಿಗಳಿಗೂ ಶೇ 10ರಷ್ಟು ಮೀಸಲಾತಿ ಘೋಷಿಸುವ ಮೂಲಕ ಅದರ ಮೂಲ ಆಶಯಕ್ಕೇ ಗುದ್ದು ನೀಡಲಾಗಿದೆ. ಈಗ ಅದರದ್ದೇ ಬೇರೆ ಬೇರೆ ರೆಂಬೆ ಟೊಂಗೆಗಳು ಬಲಾಢ್ಯ ಸಮುದಾಯಗಳಿಗೆ ಮೀಸಲಾತಿಯ ಕೂಗಿನ ರೂಪದಲ್ಲಿ ಹುಟ್ಟಿಕೊಳ್ಳುತ್ತಿವೆ.

ಈ ವಿಚಾರ ಬಂದಾಗೆಲ್ಲ ‘ಎಲ್ಲ ಸಮುದಾಯಗಳಲ್ಲಿ ಬಡವರಿಲ್ಲವೇ’ ಎಂಬ ಸರಳೀಕೃತ ಪ್ರಶ್ನೆ ಮುಂದೆ ಬರುತ್ತದೆ. ಬಡತನ ಮತ್ತು ಒಟ್ಟಾರೆ ಅಸಮಾನತೆಯ ನಿವಾರಣೆಗೆ ಬೇಕಿರುವುದು ಸಂಪತ್ತು ಮತ್ತು ಸಂಪನ್ಮೂಲಗಳ ಸಮಾನ ವಿತರಣೆಯ ತತ್ವದ ಮೇಲೆ ನಂಬಿಕೆಯಿಟ್ಟ ಆಡಳಿತ ವ್ಯವಸ್ಥೆ. ಅದು ದೂರದ ಗುರಿಯೆಂದು ಕಂಡರೆ, ಎಲ್ಲ ಬಡವರೂ ಘನತೆಯ ಬದುಕು ನಡೆಸಲು ಬೇಕಿರುವುದು ಈಗಾಗಲೇ ಪ್ರಪಂಚದ ಹಲವು ದೇಶಗಳು ರೂಪಿಸಿಕೊಂಡಿರುವ ‘ಸರ್ವರಿಗೂ ಸಾಮಾಜಿಕ ಭದ್ರತೆ ಮತ್ತು ಮೂಲಭೂತ ಸವಲತ್ತುಗಳು’ ಎಂಬ ನೀತಿ. ಎಲ್ಲ ಜಾತಿಗಳಲ್ಲಿರುವ ಬಡವರ ಬಗೆಗಿನ ಕಾಳಜಿಯಿಂದ ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದವುಗಳ ಸಾರ್ವತ್ರೀಕರಣಕ್ಕೆ ಆಗ್ರಹಿಸುವ ಆಂದೋಲನ ಮಾತ್ರವೇ ಸಮಾಜದ ಆರೋಗ್ಯಕ್ಕೆ ಪೂರಕವಾದುದಾಗಿರುತ್ತದೆ. ಪ್ರತ್ಯೇಕತೆ ಮತ್ತು ತಾರತಮ್ಯಗಳ ಕಾರಣದಿಂದ ಉಂಟಾಗುವ ಅಂತರದ ನಿವಾರಣೆಗೆ ರಚನೆಯಾಗಿರುವ ವ್ಯವಸ್ಥೆಯೊಂದನ್ನು ಸಂಖ್ಯೆ ಮತ್ತು ಪ್ರಾಬಲ್ಯದಿಂದ ಅನುಕೂಲಕ್ಕೆ ತಕ್ಕಂತೆ ಬಗ್ಗಿಸುವ ಆಂದೋಲನ ಖಂಡಿತವಾಗಿಯೂ ಅಲ್ಲ. ಇಂತಹ ಬೆಳವಣಿಗೆಗಳು ಅನಪೇಕ್ಷಿತ.

ದನಿಯಿಲ್ಲದವರು ಮೂಲೆಗೆ...

ಈಚಿನ ಕೆಲವು ಸಂಗತಿಗಳು ಇನ್ನೂ ಮುಖ್ಯವಾದ ಒಂದಷ್ಟು ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ನಮ್ಮನ್ನು ಒತ್ತಾಯಿಸುತ್ತವೆ. ಸಾಚಾರ್ ವರದಿಯು ಭಾರತದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಅತಿಕಟುವಾದ ಅಸಮಾನತೆಯನ್ನು ಮುಂದೆ ತಂದಿತು. ಶೇ 14ರಷ್ಟು ಜನಸಂಖ್ಯೆ ಹೊಂದಿದ್ದರೂ ಅಧಿಕಾರದ ಸ್ಥಾನದಲ್ಲಿ (ಹೆಚ್ಚಾಗಿ ಕೆಳಹಂತಗಳಲ್ಲಿ) ಕೇವಲ ಶೇ 2.5ರಷ್ಟು ಮಾತ್ರವೇ ಇರುವ ಶೋಚನೀಯ ಪರಿಸ್ಥಿತಿಯನ್ನೂ ಶೈಕ್ಷಣಿಕವಾಗಿ ಕೂಡಾ ಅಪಾರ ಹಿಂದುಳಿದಿರುವಿಕೆಯನ್ನೂ ದಾಖಲಿಸಿತು. ಇದಕ್ಕಾಗಿ ‘ಸಮಾನಾವಕಾಶ ಕಮಿಷನ್’ ಒಂದನ್ನು ಸ್ಥಾಪಿಸಿ ಮೀಸಲಾತಿಯನ್ನೂ ಒಳಗೊಂಡಂತೆ ಮುಸ್ಲಿಂ ಸಮುದಾಯದ ಸಬಲೀಕರಣದ ಎಲ್ಲ ಮಾರ್ಗಗಳನ್ನೂ ತೆರೆಯಲು ಸಮಿತಿ ಶಿಫಾರಸು ಮಾಡಿತ್ತು. ಆ ಆಶಯಗಳ ಕಡೆ ಕಡೆಗಣ್ಣಿನ ನೋಟವನ್ನೂ ಆಳುವವರು ಹರಿಸಿಲ್ಲ.

ಅದರಂತೆಯೇ ಮಹಿಳಾ ಮೀಸಲಾತಿ ಕೂಡಾ. ಅಧಿಕಾರದ ಮೇಲುಹಂತಗಳಲ್ಲಿ ರಾಜಕೀಯ ಮೀಸಲಾತಿಯ ಕೂಗು ಇನ್ನೂ ಕಾಯ್ದೆಬದ್ಧಗೊಳ್ಳುವ ಯಾವ ಸೂಚನೆಯೂ ಸದ್ಯಕ್ಕೆ ಕಾಣುತ್ತಿಲ್ಲ. ಇಂತಹ ಎಲ್ಲ ಶೋಷಿತ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಿತಿ-ಗತಿ ಕಳೆದ ಕೆಲವು ವರ್ಷಗಳಲ್ಲಿ ಪ್ರತಿಗಾಮಿ ಚಿಂತನೆಗಳ ಮೇಲಬ್ಬರದ ಕಾಲದಲ್ಲಿ ಇನ್ನಷ್ಟು ಅಧೋಗತಿಗಿಳಿದಿದೆಯೆಂಬುದಕ್ಕೆ ಆಧಾರಗಳೂ, ಕಾರಣಗಳೂ ನಮಗೆ ಗೊತ್ತಿಲ್ಲದಿರುವುದೇನಲ್ಲ. ಆದರೆ, ಅವರು ಈ ಬಗ್ಗೆ ದನಿಯೆತ್ತಲಾಗುತ್ತಿಲ್ಲ. ದಲಿತ-ದಮನಿತ ಸಮುದಾಯ ಈಗಾಗಲೇ ಸಿಕ್ಕಿರುವ ಅರೆಬರೆ ಮೀಸಲಾತಿಯ ಸವಲತ್ತುಗಳ ಕಾರಣಕ್ಕೆ ಖಳರಂತೆ ಬಿಂಬಿಸಲ್ಪಟ್ಟರೆ, ಮುಸ್ಲಿಂ ಸಮುದಾಯ ಧಾರ್ಮಿಕ ಕಾರಣಗಳಿಗಾಗಿ ಸಂಪೂರ್ಣವಾಗಿ ಮೂಲೆಗೆ ತಳ್ಳಲ್ಪಟ್ಟು ಎತ್ತಲಾರದಂತಾಗಿದೆ. ಮಹಿಳೆಯರಂತೂ ಜಾತಿ-ಧರ್ಮ-ಸಾಂಸ್ಕೃತಿಕತೆಗಳ ಅನನ್ಯತೆಯಲ್ಲಿ ಛಿದ್ರಗೊಂಡು ಮಹಿಳೆಯರಾಗಿ ತಮಗೆ ದೊರಕಬೇಕಿದ್ದ ಯಾವುದೇ ಹಕ್ಕುಗಳನ್ನೂ ದಕ್ಕಿಸಿಕೊಳ್ಳಲಾರದವರಾಗಿದ್ದಾರೆ.

ಹೀಗೆ, ಸಮಾನಾವಕಾಶಗಳ ಕಡೆಗೆ ಇನ್ನೂ ವೇಗವಾಗಿ ಹೋಗಬೇಕಿದ್ದ, ನ್ಯಾಯಬದ್ಧವಾಗಿ ಮೀಸಲಾತಿಗೆ ಹಕ್ಕುದಾರರಾಗಿದ್ದ ಸಮುದಾಯಗಳಿಗೆ ದನಿಯಿಲ್ಲದಂತಾಗಿರುವ ಸಂದರ್ಭದಲ್ಲಿ, ಈಗಾಗಲೇ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯ
ವಾಗಿ ಬಲಾಢ್ಯರಾಗಿರುವ, ಸಂಖ್ಯಾಬಲದಲ್ಲೂ ಗಟ್ಟಿಯಾಗಿರುವ ಸಮುದಾಯಗಳು ಮೀಸಲಾತಿಯ ಕೂಗೆಬ್ಬಿಸುವುದು, ಅವಕ್ಕೆ ಸರ್ಕಾರ ಮಣೆಹಾಕುವ ಮನಸ್ಥಿತಿ ತೋರುವುದು, ಒಟ್ಟಾರೆ ಸಾಮಾಜಿಕವಾಗಿ ಅಸಮಾನ ಪರಿಸ್ಥಿತಿಯಲ್ಲಿರುವವರಿಗೆ ಮಾಡುವ ದುಪ್ಪಟ್ಟು ಅನ್ಯಾಯವಾಗುತ್ತದೆ.

(ಲೇಖಕಿ: ಸಾಮಾಜಿಕ ಕಾರ್ಯಕರ್ತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT