ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ. ಎಸ್.ಬಿ. ರಂಗನಾಥ್ ಲೇಖನ – ವಿರಳ ಸಜ್ಜನ ರಾಜಕಾರಣಿ ಜಯದೇವಪ್ಪ

ಪಶುಚಿಕಿತ್ಸಾಲಯ, ಶಾಲಾ ಕಟ್ಟಡ ನಿರ್ಮಾಣಕ್ಕೆ ಕಾರಣರು
Last Updated 24 ಡಿಸೆಂಬರ್ 2021, 4:03 IST
ಅಕ್ಷರ ಗಾತ್ರ

ದಾವಣಗೆರೆ:ಎಲೆಮರೆಯ ಕಾಯಿ ಎಂಬುದು ಇಂದು ನಿಧನರಾದ ರಾಜ್ಯಸಭೆ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪ ಅವರಿಗೆ (87) ಒಪ್ಪುವ ಮಾತು. ಜೀವನವಿಡೀ ನಿರ್ವಿವಾದವಾಗಿ ಬದುಕಿದ ಅವರೊಬ್ಬ ಅಜಾತಶತ್ರು. ನನಗೆ ಜಯದೇವಪ್ಪನವರ ಪರಿಚಯವಾದದ್ದು ವಕೀಲರಾಗಿ–ಒಂದು ವಿಶಿಷ್ಟ ಸಂದರ್ಭದಲ್ಲಿ. ಆಗ ಆಗಿದ್ದ ಪರಿಚಯ, ಅನಂತರದ ನಮ್ಮ ಸತತ ಒಡನಾಟದಿಂದಾಗಿ ಗಾಢ ವಿಶ್ವಾಸವಾಗಿ ಮಾರ್ಪಟ್ಟಿತು.

ಎಸ್. ಬಂಗಾರಪ್ಪರ ಕಟ್ಟಾ ಬೆಂಬಲಿಗರಾಗಿದ್ದ ಜಯದೇವಪ್ಪ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರಾಜ್ಯಸಭಾ ಸದಸ್ಯರಾದರು. 1992ರಿಂದ 96ರವರೆಗೆ ರಾಜ್ಯಸಭಾ ಸದಸ್ಯರಾಗಿ ಅವರು ಕೈಗೊಂಡ ಸಮಾಜೋ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳು ದಾವಣಗೆರೆ ಭಾಗದ ಜನಮನದಲ್ಲಿ ಇನ್ನೂ ಹಸಿರಾಗಿವೆ. ಅವರ ಸಂಸದರ ಅನುದಾನದಲ್ಲಿ ನಿರ್ಮಾಣಗೊಂಡ ಪಶುಚಿಕಿತ್ಸಾಲಯಗಳು, ಶಾಲಾ ಕಟ್ಟಡಗಳು, ಅವರ ಸಾಮಾಜಿಕ ಕಳಕಳಿಯ ದ್ಯೋತಕವಾಗಿ ಇಂದಿಗೂ ನಮ್ಮ ಕಣ್ಮುಂದಿವೆ.

ನಾನು 1972ರಿಂದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ, ಜಯದೇವಪ್ಪ ಅವರೂ ಇತ್ತೀಚಿನವರೆಗೆ ಆಡಳಿತ ಮಂಡಳಿಯಲ್ಲಿದ್ದರು. ನಾನು ದಾವಣಗೆರೆಯಎಂ.ಎಂ. ಶಿಕ್ಷಣ ಕಾಲೇಜಿನಪ್ರಾಚಾರ್ಯನಾಗಿದ್ದ ಸಮಯದಲ್ಲಿ ಅವರು ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷರಾಗಿದ್ದರು. ಅವರು ತರಳಬಾಳು ಜಗದ್ಗುರು ಬೃಹನ್ಮಠ ಹಾಗೂತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸುತ್ತಿರುವ ಕಾರ್ಯಪಡೆಯ ಗೌರವಾನ್ವಿತ ಸದಸ್ಯರಾಗಿದ್ದರು.

ತರಳಬಾಳು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಮೆಚ್ಚಿನ ಶಿಷ್ಯರು. ಈಗಿನ ಗುರುಗಳಾದ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಅತಿ ನಂಬಿಕಸ್ಥರು. ಹಾಗಾಗಿಯೇ ಕಳೆದ ಹದಿನೆಂಟು ವರ್ಷಗಳಿಂದ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾಗಿದ್ದರು.

ಅವರಿಗೆ ಸಮಾಜ ಸೇವೆಯ ಎದುರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಹಾಗೂ ತಮ್ಮ ಆರೋಗ್ಯ ಅತ್ಯಂತ ಗೌಣ. ಸದಾ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದ ಅವರು ದಾವಣಗೆರೆಯಲ್ಲಿ ಜರುಗುವ ಬಹುತೇಕ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಎರಡು ಉದ್ದೇಶಗಳನ್ನು ಇಟ್ಟುಕೊಂಡು ವಿವಾಹ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ನೂತನ ವಧು-ವರರಿಗೆ ಶುಭ ಕೋರುವುದು ಒಂದಾದರೆ, ಸಮಾಜಕ್ಕೆ ನಿಧಿ (ಲಗ್ನದ ಫಂಡು) ಸಂಗ್ರಹಿಸುವುದು ಎರಡನೇ ಉದ್ದೇಶ.

ಭಾರತ ಸೇವಾದಳದ ಶಿಕ್ಷಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ ಜಯದೇವಪ್ಪ ಅವರದ್ದು ಆದರ್ಶ ಬದುಕು. ಕಷ್ಟ-ಸಹಿಷ್ಣುತೆ, ಅಚಲ ಆತ್ಮವಿಶ್ವಾಸ, ಶಿಸ್ತುಬದ್ಧ ಜೀವನ, ಸೌಜನ್ಯ, ಸರಳತೆ, ಸಜ್ಜನಿಕೆ ಸುಸಂಸ್ಕಾರಗಳಿಂದಾಗಿ ಜೀವನದಲ್ಲಿ ಎಂತಹ ಉನ್ನತ ಸ್ಥಾನ ಗಳಿಸಬಹುದು ಎಂಬುದಕ್ಕೆ ಉಜ್ವಲ ನಿದರ್ಶನ ಅವರ ಜೀವನ.

ಎಲ್ಲದರಲ್ಲೂ ಅತ್ಯಂತ ಶಿಸ್ತು: ಉಡುಗೆ-ತೊಡುಗೆ, ಊಟ-ತಿಂಡಿ, ಮಾತುಕತೆ ಬಹಳ ನಾಜೂಕು. ತಾವು ದೊಡ್ಡ ಸ್ಥಾನದಲ್ಲಿದ್ದರೂ ಮಾತಾಡುವವರೊಡನೆ ಅತ್ಯಂತ ವಿನಯ-ವಿವೇಕಯುತ ನಡೆ– ಎಷ್ಟೇ ಚಿಕ್ಕವರಿದ್ದರೂ ಫೋನಿನಲ್ಲಿ ‘ಈಗ ಮಾತಾಡಬಹುದೇ’ ಎಂದು ಕೇಳುವ ಸೌಜನ್ಯ. ತಾನೊಬ್ಬ ರಾಜ್ಯಸಭಾ ಮಾಜಿ ಸದಸ್ಯ ಎಂಬ ಬಿಗುಮಾನ ಎಳ್ಳಷ್ಟೂ ಇರಲಿಲ್ಲ.

ಶಿಸ್ತಿನ ಸಿಪಾಯಿಯಾಗಿದ್ದ ಅವರಿಗೆ ಸಿರಿಗೆರೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಭಾರತ ಸೇವಾದಳದ ದೀಕ್ಷೆಯಾಗಿತ್ತು. ಭಾರತ ಸೇವಾದಳದ ಕೇಂದ್ರ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾಗಿ, ಅಖಿಲಭಾರತ ಸಂಚಾಲಕರಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ. ಮಿತಭಾಷೆ – ಮೃದು ಭಾಷೆಗೆ ಅವರದೊಂದು ಪರ್ಯಾಯ ಹೆಸರು.

ಆದರ್ಶ ಶಿಕ್ಷಕರಾಗಿ, ವಕೀಲರಾಗಿ, ಶುದ್ಧಹಸ್ತ ರಾಜಕಾರಣಿಯಾಗಿ, ನಿಸ್ವಾರ್ಥ ಸಮಾಜ ಸೇವಾಕರ್ತರಾಗಿ ಇಂದಿನ ಯುವ ಪೀಳಿಗೆಗೆ ಆದರ್ಶರಾಗಿದ್ದರು.

(ಲೇಖಕರು ನಿವೃತ್ತ ಪ್ರಾಚಾರ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT