ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರೀಶ ದೊಡ್ಡಮನಿ ಬರಹ: ದೇಶಕ್ಕಾಗಿ ಆಡುವ ಪಾಠ

ಫ್ರ್ಯಾಂಚೈಸಿ ಕ್ರಿಕೆಟ್‌ ರಂಗು, ಹಣದ ಝಣಝಣವಷ್ಟೇ ಕ್ರಿಕೆಟ್ ಅಲ್ಲ
Last Updated 17 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಪೋರ್ಚುಗಲ್‌ನ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ತಾವು ಒಪ್ಪಂದ ಮಾಡಿಕೊಂಡಿರುವ ಫ್ರ್ಯಾಂಚೈಸಿಗಳಿಂದ ಪಡೆಯುವ ಆದಾಯ ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಅವರಷ್ಟೇ ಅಲ್ಲ, ಅರ್ಜೆಂಟಿನಾದ ಲಯೊನೆಲ್ ಮೆಸ್ಸಿ, ಬ್ರೆಜಿಲ್‌ನ ನೇಯ್ಮರ್ ಸೇರಿದಂತೆ ಇನ್ನೂ ಹಲವಾರು ಫುಟ್‌ಬಾಲ್ ದಿಗ್ಗಜರು ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಮಿಂಚುತ್ತಾರೆ. ಅಪಾರ ಹಣ ಗಳಿಸುತ್ತಾರೆ.

ಆದರೆ, ತಮ್ಮ ದೇಶದ ತಂಡಗಳಿಗೆ ಆಡುವ ಸಂದರ್ಭ ಬಂದಾಗ ಹಣ, ಖ್ಯಾತಿಗಳನ್ನು ಮೈದಾನದ ಹೊರಗಿಟ್ಟು ಕಣಕ್ಕಿಳಿಯುತ್ತಾರೆ. ಬೆವರು ಸುರಿಸಿ ತಂಡದ ಗೆಲುವಿಗೆ ಶ್ರಮಿಸುತ್ತಾರೆ. ಸೋತರೂ ಇತಿಹಾಸದ ಪುಟಗಳಲ್ಲಿ ರೋಚಕ ಹೋರಾಟದ ಹೆಜ್ಜೆಗುರುತು ಮೂಡಿಸುತ್ತಾರೆ. ದೇಶಕ್ಕಾಗಿ ಆಡುವಾಗ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಭಾರತದ ಕ್ರಿಕೆಟಿಗರು ಇಂತಹ ಬದ್ಧತೆಯನ್ನು ತೋರುವಲ್ಲಿ ಎಡವುತ್ತಿದ್ದಾರೆಯೇ?

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಭಾರತ ತಂಡ ಇಂತಹದ್ದೊಂದು ಟೀಕೆಗೆ ಒಳಗಾಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವಾಗ ತೋರುವ ಆಸಕ್ತಿಯನ್ನು ವಿಶ್ವಕಪ್ ಹಂತದ ಟೂರ್ನಿಗಳಲ್ಲಿ ತೋರುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ‘ಭಾರತದ ಕ್ರಿಕೆಟಿಗರು ರಾಷ್ಟ್ರೀಯ ತಂಡಕ್ಕಾಗಿ ಆಡುವುದಕ್ಕೆ ಪ್ರಾಶಸ್ತ್ಯ ನೀಡಬೇಕು. ಆದರೆ ದೇಶಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆದ್ಯತೆ ಕೊಟ್ಟರೆ ಏನಾಗುತ್ತದೆ ಎನ್ನುವುದನ್ನು ಈಗ ನೋಡಿದ್ದೇವೆ. ದೇಶಕ್ಕಾಗಿ ಆಡುವುದು ದೊಡ್ಡ ಹೆಮ್ಮೆ ಎನ್ನುವುದನ್ನು ಆಟಗಾರರು ತಿಳಿಯಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

ಇದು ಭಾರತ ತಂಡದ ‘ಕೋಟ್ಯಧೀಶ’ ಆಟಗಾರರು ಗಂಭೀರವಾಗಿ ಪರಿಗಣಿಸಬೇಕಾದ ಹೇಳಿಕೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಈ ಬಗ್ಗೆ ವೃತ್ತಿಪರ ಬದ್ಧತೆಯನ್ನು ತೋರಲು ಇದು ಸಕಾಲ. ಮಂಡಳಿಯು ಮೊದಲು ‘ಕ್ರಿಕೆಟ್ ಇಂಡಿಯಾ’ ಆಗಿ ಬದಲಾಗುವ ಅವಶ್ಯಕತೆ ಈಗ ಕಾಣುತ್ತಿದೆ.

ಏಕೆಂದರೆ, ಐಪಿಎಲ್‌ ಎರಡನೇ ಹಂತದ ಟೂರ್ನಿ ಮುಕ್ತಾಯವಾದ ಒಂದು ವಾರದ ನಂತರ ವಿಶ್ವಕಪ್ ಟೂರ್ನಿ ಆರಂಭವಾಗಿತ್ತು. ಈ ವರ್ಷದ ಜೂನ್ 3ರಿಂದ ದೇಶದಿಂದ ಹೊರಗಿದ್ದ ತಂಡವು ನಿರಂತರವಾಗಿ ಜೀವಸುರಕ್ಷಾ ವಲಯದಲ್ಲಿತ್ತು (ಬಯೋಬಬಲ್). ಇದು ಆಟಗಾರರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೈರಾಣ ಮಾಡಿದ್ದನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಇದನ್ನು ಮೊದಲೇ ಅರಿತು ಐಪಿಎಲ್ ಎರಡನೇ ಹಂತವನ್ನು, ವಿಶ್ವಕಪ್ ಟೂರ್ನಿಯ ನಂತರ ಆಯೋಜಿಸುವತ್ತ ಮನಸ್ಸು ಮಾಡಬೇಕಿತ್ತು. ವಿಶ್ವಕಪ್‌ನಲ್ಲಿ ಆಡುವ 16 ಆಟಗಾರರ ತಂಡವನ್ನು ಐಪಿಎಲ್ ಆರಂಭದ ಹೊತ್ತಿಗೆ ಪ್ರಕಟಿಸಲಾಗಿತ್ತು. ಅವರೆಲ್ಲರೂ ಐಪಿಎಲ್‌ನಿಂದ ಹೊರಗುಳಿದು ಅಭ್ಯಾಸ ನಡೆಸಬಹುದಿತ್ತು. ಇಂಗ್ಲೆಂಡ್‌, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಕೆಲವು ಆಟಗಾರರು ಇದೇ ರೀತಿ ಮಾಡಿದ್ದರಲ್ಲವೇ?

‘ವಿಶ್ವಕಪ್ ಟೂರ್ನಿಗೆ ಐಪಿಎಲ್ ಪೂರ್ವಭಾವಿ ಅಭ್ಯಾಸದ ವೇದಿಕೆಯಾಗುತ್ತದೆ’ ಎಂದು ಹೇಳಿದ್ದವರೂ ಇದ್ದರು. ಆದರೆ, ಇದೀಗ ಭಾರತ ತಂಡದ ಸೋಲಿನಿಂದ ಬಿಸಿಸಿಐ ಪಾಠ ಕಲಿಯಬೇಕಿದೆ. ಐಪಿಎಲ್‌ನಿಂದ ಬರುವ ಆದಾಯ, ಹೊಸ ಫ್ರ್ಯಾಂಚೈಸಿಗಳ ಸೇರ್ಪಡೆ, ಮೆಗಾ ಹರಾಜು ಪ್ರಕ್ರಿಯೆಗೆ ತೋರುವ ಆಸಕ್ತಿಯನ್ನು ವಿಶ್ವಕಪ್ ಜಯಿಸುವ ತಂಡ ಕಟ್ಟುವತ್ತಲೂ ಗಮನ ಹರಿಸಬೇಕಿದೆ. ವೆಸ್ಟ್ ಇಂಡೀಸ್ ತಂಡದ ಆಟಗಾರರು ತಮ್ಮ ದೇಶಕ್ಕಿಂತಲೂ ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಆಡುವುದಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದರ ಪರಿಣಾಮ ಈಗ ಕಣ್ಣಿಗೆ ರಾಚುತ್ತಿದೆ. ನಾಲ್ಕು ದಶಕಗಳ ಹಿಂದೆ ಕೆರಿಬಿಯನ್ ತಂಡವೆಂದರೆ ಎಲ್ಲರಿಗೂ ಮೈನಡುಕ ಹುಟ್ಟುತ್ತಿತ್ತು. 2016ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡ ಈ ಬಾರಿ ನೆಲಕಚ್ಚಿದ ರೀತಿ ಅಚ್ಚರಿ ಮೂಡಿಸುವಂತಹದ್ದು. ಐಪಿಎಲ್, ಕರಾಚಿ ಪ್ರೀಮಿಯರ್ ಲೀಗ್, ಕೆರಿಬಿಯನ್ ಲೀಗ್ ಇತ್ಯಾದಿ ಟೂರ್ನಿಗಳಲ್ಲಿ ವಿಂಡೀಸ್ ಆಟಗಾರರ ಅಬ್ಬರ ಮೇರೆ ಮೀರುತ್ತದೆ. ಆದರೆ ದೇಶಕ್ಕಾಗಿ ಆಡುವಾಗ ಆ ಹುರುಪು ಮಾಯವಾಗಿರುತ್ತದೆ. ಕನಿಷ್ಠ ಹೋರಾಟವೂ ಕಂಡುಬರುತ್ತಿಲ್ಲ. ಅಲ್ಲಿಯ ಕ್ರಿಕೆಟ್ ಆಡಳಿತದ ವೈಫಲ್ಯ ಇದರ ಹಿಂದಿದೆ. ದುಡ್ಡಿಗಾಗಿ ಆಟಗಾರರು ಲೀಗ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಆದರೆ, ಕ್ರಿಕೆಟ್ ಲೋಕದ ದೊಡ್ಡಣ್ಣನಾಗಿ ಬೆಳೆದಿರುವ ಬಿಸಿಸಿಐಗೆ ಇಂತಹ ಸಮಸ್ಯೆಯಿಲ್ಲ. ಬರೀ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವ ಚೇತೇಶ್ವರ್ ಪೂಜಾರ ಅವರಂತಹವರೂ ಕೋಟಿ ಕೋಟಿ ಗಳಿಸುತ್ತಾರೆ. ದೇಶಿ ಟೂರ್ನಿಗಳಲ್ಲಿ ಆಡುವವರಿಗೂ ಕೈತುಂಬಾ ಆದಾಯ. ಈ ಸಮೃದ್ಧಿ ಮುಂದುವರಿಯಲು ಐಪಿಎಲ್‌ನ ಆದಾಯವೂ ಬೇಕು ನಿಜ. ಆದರೆ ಅದೇ ಮುಖ್ಯವಾಗಬಾರದು. ಅದರ ಮೇಲೆ ಅವಲಂಬಿತವಾದರೆ ಮುಂದೊಂದು ದಿನ ಫ್ರ್ಯಾಂಚೈಸಿಗಳ ಕೈಗೆ ಇಡೀ ಕ್ರಿಕೆಟ್ ಆಡಳಿತ ಸಿಲುಕುವ ಅಪಾಯವೂ ಇದೆ.

ಆದ್ದರಿಂದ ದೇಶಕ್ಕಾಗಿ ಆಡುವುದಕ್ಕೆ ಆದ್ಯತೆ ನೀಡಲು ತಾರಾ ವರ್ಚಸ್ಸಿನ ಆಟಗಾರರೇ ಮುಂದಾಗಲು ಇದು ಸಕಾಲ. ದೇಶದ ಹಿತಕ್ಕಾಗಿ ಆಡುವುದರಿಂದ ಎಂತಹ ಗೌರವಾದರಗಳು ಲಭಿಸುತ್ತವೆ ಎನ್ನುವುದಕ್ಕೆ ಈ ಟೂರ್ನಿಯಲ್ಲಿ ಮಿಂಚಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಉದಾಹರಣೆಯಾಗುತ್ತಾರೆ. ವಾರ್ನರ್ ಇಂಡಿಯನ್ ಪ್ರೀಮಿಯರ್‌ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಒಂದು ಬಾರಿ ಪ್ರಶಸ್ತಿ ಗೆದ್ದುಕೊಟ್ಟ ನಾಯಕ. ಆದರೆ, ಕಳೆದ ಆವೃತ್ತಿಯಲ್ಲಿ ಅವರನ್ನು ನಾಯಕ ಪಟ್ಟದಿಂದ ದಿಢೀರ್ ಕೆಳಗಿಳಿಸಿದ್ದಷ್ಟೇ ಅಲ್ಲ, ಎಂಟು ಪಂದ್ಯಗಳಲ್ಲಿ ಬೆಂಚ್‌ನಲ್ಲಿ ಕೂರಿಸಲಾಗಿತ್ತು. ಆದರೆ, ಅದೇ ವಾರ್ನರ್ ತಮ್ಮ ದೇಶದ ತಂಡಕ್ಕೆ ಟಿ20 ವಿಶ್ವಕಪ್ ಜಯದ ಕಾಣಿಕೆ ನೀಡಿದರು. 2018ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಇದೇ ವಾರ್ನರ್, ಸ್ಟೀವ್‌ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್‌ ಶಿಕ್ಷೆಗೊಳಗಾಗಿದ್ದರು. ಆಗ ಸ್ಮಿತ್ ನಾಯಕರೂ ಆಗಿದ್ದರು. ಅಲ್ಲಿಂದೀಚೆಗೆ ಆಸ್ಟ್ರೇಲಿಯಾ ತಂಡ ನಿರಾಶೆಯನ್ನೇ ಹೆಚ್ಚಾಗಿ ಅನುಭವಿಸಿತ್ತು. ಭಾರತ ತಂಡದ ಎದುರು ತನ್ನ ನೆಲದಲ್ಲಿಯೇ ಎರಡು ಬಾರಿ ಟೆಸ್ಟ್ ಸರಣಿಗಳನ್ನು ಸೋತಿತ್ತು. ವಿಶ್ವ ಟೆಸ್ಟ್ ಸರಣಿಯ ಫೈನಲ್‌ ಪ್ರವೇಶಿಸಿರಲಿಲ್ಲ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ವೈಫಲ್ಯ ಅನುಭವಿಸಿತ್ತು. ತನ್ನ ದೇಶದ ತಂಡವನ್ನು ಮತ್ತೆ ಜಯದ ಹಾದಿಗೆ ತರಲೇಬೇಕು ಮತ್ತು ತನ್ನ ಮೇಲಿನ ಕಳಂಕ ಅಳಿಸಿಕೊಳ್ಳಬೇಕು ಎಂಬ ಉತ್ಕಟ ಆಕಾಂಕ್ಷೆ ವಾರ್ನರ್ ಆಟದಲ್ಲಿ ಕಂಡುಬಂದಿದ್ದು ಸುಳ್ಳಲ್ಲ. ದೇಶಕ್ಕಾಗಿ ಆಡುವವರಿಗೆ ಇವತ್ತಲ್ಲ ನಾಳೆ ಯಶಸ್ಸು ಮತ್ತು ಖ್ಯಾತಿ ಅರಸಿ ಬಂದೇ ಬರುತ್ತವೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಐದು ಸಲ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ವೈಭವ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಸಾಂಪ್ರದಾಯಿಕ ಕ್ರಿಕೆಟ್‌ ಮೂಲಕವೇ ತಾವೂ ಬೆಳೆದು ತಂಡದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈಗ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಕ್ರಿಕೆಟ್‌ ಎಂದರೆ ಬರೀ ಐಪಿಎಲ್ ವೈಭವವಷ್ಟೇ ಅಲ್ಲ. ಹೊಡಿಬಡಿ ಆಟವಷ್ಟೇ ಅಲ್ಲ. ಆಟದಲ್ಲಿ ಸಭ್ಯತೆ, ಸಂಸ್ಕೃತಿ ಮತ್ತು ಜೀವನತತ್ವಗಳಿವೆ. ದೇಶಪ್ರೇಮವೂ ಇದೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಹೊಣೆಯೂ ಇದೆ ಎಂಬ ಮೂಲಪಾಠವನ್ನೂ ನವಯುಗದ ಆಟಗಾರರಿಗೆ ತಿಳಿಸಿ ಕೊಡುವ ಹೊಣೆ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT