ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆ

ಜಗತ್ತಿನ ಎಲ್ಲ ದೇಶಗಳ ಶಕ್ತಿಯ ಅಗತ್ಯವನ್ನು ಪೂರೈಸಬಲ್ಲ ಇದನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವೇ?
Last Updated 7 ನವೆಂಬರ್ 2021, 21:30 IST
ಅಕ್ಷರ ಗಾತ್ರ

ನಮ್ಮ ದೇಶದ ಯಾವುದೇ ಭಾಗದಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು ದೇಶದ ಇನ್ನಾವುದೇ ಭಾಗದಲ್ಲಿ ಬಳಸಬಹುದು. ಇದು ಸಾಧ್ಯವಾಗುವುದು ನಮ್ಮ ದೇಶದಲ್ಲಿರುವ ಅಧಿಕ ವೋಲ್ಟೇಜ್ ವಿದ್ಯುತ್ ಪ್ರಸರಣದ ಐದು ಪ್ರಾದೇಶಿಕ ಮತ್ತು ಒಂದು ರಾಷ್ಟ್ರೀಯ ವಿದ್ಯುತ್ ಜಾಲದ (ನ್ಯಾಷನಲ್ ಗ್ರಿಡ್) ಮೂಲಕ. ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ನೇಪಾಳವೂ ನಮ್ಮ ರಾಷ್ಟ್ರೀಯ ಜಾಲದೊಂದಿಗೆ ಸಂಪರ್ಕ ಹೊಂದಿವೆ.

ದೇಶದ ಹಂತದಲ್ಲಿನ ಈ ವ್ಯವಸ್ಥೆಯಂತೆಯೇ, ನವೀಕರಿಸಬಹುದಾದ ಸೌರವಿದ್ಯುತ್‍ಗೆ ಸಂಬಂಧಿಸಿದಂತೆ ಪ್ರಪಂಚದ ಎಲ್ಲ ದೇಶಗಳನ್ನೂ ಜೋಡಿಸುವ ಜಾಗತಿಕ ವಿದ್ಯುತ್ ಜಾಲವೊಂದನ್ನು ರೂಪಿಸುವುದು ಸಾಧ್ಯವಾದರೆ, ಅದು ಸೌರಶಕ್ತಿಯ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲದು. ನಮ್ಮ ಭೂಮಿಯ ಅರ್ಧ ಭಾಗದಲ್ಲಿ ಸೂರ್ಯ ಇರುವ ಹಗಲಿನಲ್ಲಿ ಉತ್ಪಾದಿಸಿದ ಸೌರಶಕ್ತಿಯನ್ನು, ಸೂರ್ಯನಿಲ್ಲದ ರಾತ್ರಿಯ ಭೂಮಿಯ ಇನ್ನೊಂದು ಭಾಗಕ್ಕೆ ರವಾನಿಸಬಹುದು. ಹೀಗಾಗಿ ಹಗಲು- ರಾತ್ರಿಗಳೆನ್ನದೇ ದಿನದ 24 ಗಂಟೆಗಳೂ ಸೌರವಿದ್ಯುತ್ ಉತ್ಪಾದನೆ ಸಾಧ್ಯವಾಗಿ, ರಾತ್ರಿಯ ಬಳಕೆಗೆ ವಿದ್ಯುತ್ತನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿಡುವುದನ್ನೂ ಕಡಿಮೆ ಮಾಡಬಹುದು.

ಇಂತಹದೊಂದು ದೂರದರ್ಶಿತ್ವದ, ಅತ್ಯಂತ ಮಹತ್ವಾಕಾಂಕ್ಷೆಯ ‘ಒಂದು ಸೂರ್ಯ- ಒಂದು ಪ್ರಪಂಚ- ಒಂದು ಜಾಲ’ ಎಂಬ ಹೆಸರಿನ, ಜಾಗತಿಕ ವಿದ್ಯುತ್ ಜಾಲದ ಯೋಜನೆಯನ್ನು ಇಂಗ್ಲೆಂಡ್‍ನೊಡನೆ ಸೇರಿ, ಗ್ಲಾಸ್ಗೊದ ಶೃಂಗಸಭೆಯಲ್ಲಿ ಭಾರತ ಅನಾವರಣಗೊಳಿಸಿದೆ. ಸೂರ್ಯನಿಂದ ಪ್ರತಿನಿತ್ಯ ಭೂಮಿಗೆ ದೊರೆಯುವ ಒಟ್ಟು ಶಕ್ತಿಯ ಶೇಕಡ 0.1ರಷ್ಟನ್ನು ನಾವು ಬಳಸಿಕೊಂಡರೂ ಪ್ರಪಂಚದ ಎಲ್ಲ ದೇಶಗಳ ಒಟ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸಬಹುದು. ಜಾಗತಿಕ ಯೋಜನೆ ಈ ದಿಕ್ಕಿನಲ್ಲಿ ಮೊದಲ ಪ್ರಮುಖ ಹೆಜ್ಜೆ.

ಜಾಗತಿಕ ವಿದ್ಯುತ್ ಜಾಲದ ಪರಿಕಲ್ಪನೆ ಮೂಡಿ ಬಂದದ್ದು 2018ರಲ್ಲಿ ದೆಹಲಿಯಲ್ಲಿ ನಡೆದ ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ದ (ಇಂಟರ್‌ನ್ಯಾಷನಲ್ ಸೋಲಾರ್ ಅಲಯನ್ಸ್) ಮೊದಲ ಮಹಾಸಭೆಯಲ್ಲಿ ಪ್ರಧಾನಿ ಮಾಡಿದ ಆಶಯ ಭಾಷಣದಲ್ಲಿ. ಶುದ್ಧ, ನವೀಕರಿಸಬಹುದಾದ ಸೌರವಿದ್ಯುತ್‍ಗೆ ಸಂಬಂಧಿಸಿದ ಆಧಾರ ರಚನೆಗಳ ನಿರ್ಮಾಣ, ವಿದ್ಯುದುತ್ಪಾದನೆ, ಬಳಕೆ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಜ್ಞಾನ ಸೃಷ್ಟಿ, ಮಾಹಿತಿ ವಿನಿಮಯ, ಪರಸ್ಪರ ಸಹಕಾರಗಳಿಗಾಗಿ, ಭಾರತದ ಪ್ರಾಥಮಿಕ ಪ್ರಯತ್ನಗಳಿಂದ 2015ರಲ್ಲಿ ಅಸ್ತಿತ್ವಕ್ಕೆ ಬಂದ ಈ ಒಕ್ಕೂಟದಲ್ಲಿ ಇಂದು 99 ದೇಶಗಳಿವೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ, ಈ ಒಕ್ಕೂಟದ ಅಡಿಯಲ್ಲಿ ಜಾಗತಿಕ ವಿದ್ಯುತ್ ಜಾಲಕ್ಕೆ ಸಂಬಂಧಪಟ್ಟಂತೆ ಮೂರು ಮುಖ್ಯ ಕೆಲಸಗಳು ನಡೆದಿವೆ. ಮೊದಲನೆಯದಾಗಿ, ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ದೇಶಗಳ ಪ್ರತಿನಿಧಿಗಳ ಚಾಲನಾ ಸಮಿತಿ ಈ ಯೋಜನೆ ಕಾರ್ಯಗತವಾಗಲು ಅಗತ್ಯವಾದ ನಂಬಿಕೆ, ವಿಶ್ವಾಸಗಳನ್ನು ದೇಶ ದೇಶಗಳ ನಡುವೆ ಬೆಳೆಸುವ ಪ್ರಯತ್ನ ಮಾಡಿದೆ. ಎರಡನೆಯದಾಗಿ, ಪರಿಣತರ ತಂಡವೊಂದು ಜಾಗತಿಕ ವಿದ್ಯುತ್ ಜಾಲದ ನಿರ್ಮಾಣಕ್ಕೆ ಬೇಕಾದ ಸರ್ವ ಸಮಸ್ತ ಅಗತ್ಯಗಳನ್ನೂ ಪಟ್ಟಿ ಮಾಡಿ, ಅವುಗಳನ್ನು ಪೂರೈಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲಸ ಮಾಡಿದೆ. ಮೂರನೆಯದಾಗಿ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಶ್ವಬ್ಯಾಂಕ್‍ನ ಪರಿಣತರ ತಂಡ ಈ ಯೋಜನೆಯನ್ನು ಕಾರ್ಯಗತಗೊಳಿಸುವುದರಲ್ಲಿ ಎದುರಾಗುವ ಆರ್ಥಿಕ, ತಾಂತ್ರಿಕ, ಸಾಂಸ್ಥಿಕ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸುವತ್ತ ಗಮನಹರಿಸಿದೆ.

ಕಳೆದ ತಿಂಗಳ 18-21ರ ನಡುವೆ ನಡೆದ ಅಂತರರಾಷ್ಟ್ರೀಯ ಸೌರ ಒಕ್ಕೂಟದ ನಾಲ್ಕನೆಯ ಮಹಾಸಭೆಯಲ್ಲಿ ಈ ಇಡೀ ಯೋಜನೆಯನ್ನು ಅತ್ಯಂತ ಕಟ್ಟುನಿಟ್ಟಾದ ಕಂಪ್ಯೂಟರ್ ಮಾದರೀಕರಣ (ಮಾಡೆಲಿಂಗ್) ಮತ್ತು ಮೌಲ್ಯಮಾಪನಕ್ಕೆ ಒಳಪಡಿಸಿದ ಪರಿಣತರ ತಂಡವು ಯೋಜನೆ ಆರ್ಥಿಕವಾಗಿ, ತಾಂತ್ರಿಕವಾಗಿ ಕಾರ್ಯಸಾಧ್ಯ
ವೆಂಬುದನ್ನು ಖಚಿತಪಡಿಸಿದೆ. ಅಂತರರಾಷ್ಟ್ರೀಯ ಸೌರ ಒಕ್ಕೂಟ, ನ್ಯೂಯಾರ್ಕ್‍ನಲ್ಲಿರುವ ಬ್ಲೂಂಬರ್ಗ್ ಫಿಲಾಂತ್ರಫೀಸ್ ಮತ್ತು ಗ್ಲೋಬಲ್ ಎನರ್ಜಿ ಅಲಯನ್ಸ್ ಫಾರ್ ಪೀಪಲ್ ಆ್ಯಂಡ್ ಪ್ಲಾನೆಟ್ ಸಂಸ್ಥೆಗಳು, 2030ರ ವೇಳೆಗೆ ಈ ಯೋಜನೆಯಲ್ಲಿ ಒಂದು ಟ್ರಿಲಿಯನ್ ಡಾಲರ್‌ಗಳಷ್ಟು (ಸುಮಾರು ₹ 74 ಲಕ್ಷ ಕೋಟಿ) ಬಂಡವಾಳವನ್ನು ಹೂಡುವಂತೆ ಮಾಡುವ ಕ್ರಮಗಳನ್ನು ಕೈಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮಹಾಸಭೆಯಲ್ಲಿ ಚರ್ಚೆಯಾದ ನಂತರ ಗ್ಲಾಸ್ಗೊ ಶೃಂಗಸಭೆಯಲ್ಲಿ ಜಾಗತಿಕ ವಿದ್ಯುತ್ ಜಾಲದ ಘೋಷಣೆ ಮಾಡಲಾಗಿದೆ.

ಜಾಗತಿಕ ವಿದ್ಯುತ್ ಜಾಲವನ್ನು ನನಸುಗೊಳಿಸಬೇಕಾದರೆ ದೇಶ ದೇಶಗಳ ನಡುವೆ, ಖಂಡಗಳ ನಡುವೆ, ವಿವಿಧ ಕಾಲವಲಯಗಳ (ಟೈಮ್ ಝೋನ್) ನಡುವೆ ಅಧಿಕ ವೋಲ್ಟೇಜಿನ ವಿದ್ಯುತ್ ಪ್ರಸರಣ ಸಾಧ್ಯವಾಗಬೇಕು. ಈ ದಿಕ್ಕಿನಲ್ಲಿ ಹಲವಾರು ಯೋಜನೆಗಳು ಪ್ರಾರಂಭವಾಗಿವೆ.

ಸಿಂಗಪುರ ಮತ್ತು ಆಸ್ಟ್ರೇಲಿಯಾ ನಡುವೆ ಇಂತಹ ಒಂದು ಯೋಜನೆಯ ಕೆಲಸ ನಡೆಯುತ್ತಿದೆ. ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ನಗರದಿಂದ 800 ಕಿ.ಮೀ.ಗಳ ದೂರದಲ್ಲಿ 12,000 ಹೆಕ್ಟೇರ್ ಪ್ರದೇಶದಲ್ಲಿ ಸೌರವಿದ್ಯುತ್ ಸ್ಥಾವರವೊಂದು ನಿರ್ಮಾಣವಾಗುತ್ತಿದೆ. ಇಲ್ಲಿ 17ರಿಂದ 20 ಗಿಗಾವಾಟ್‍ಗಳಷ್ಟು ವಿದ್ಯುತ್ತನ್ನು ಉತ್ಪಾದಿಸಲಿದ್ದು, ಅದರಲ್ಲಿ 3.2 ಗಿಗಾವಾಟ್ ವಿದ್ಯುತ್ತನ್ನು ಸಾಗರ ತಳದಲ್ಲಿ ಹಾಕಲಾಗುವ 4,200 ಕಿ.ಮೀ.ಗಳಷ್ಟು ಉದ್ದದ, ಅಧಿಕ ವೋಲ್ಟೇಜ್‍ನ ಡಿ.ಸಿ ಕೇಬಲ್ ಮೂಲಕ ಸಿಂಗಪುರಕ್ಕೆ ತರಲಾಗುತ್ತದೆ. ಇದು ಸಿಂಗಪುರದ ವಾರ್ಷಿಕ ಬೇಡಿಕೆಯ ಶೇ 15 ಭಾಗದ ವಿದ್ಯುತ್ತನ್ನು ಪೂರೈಸಿ, 30 ಲಕ್ಷ ಮನೆಗಳಿಗೆ ಒಂದು ವರ್ಷಕ್ಕೆ ಅಗತ್ಯವಾದ ವಿದ್ಯುತ್ ಒದಗಿಸಲಿದೆ. ಇದೇ ರೀತಿ ಇಂಗ್ಲೆಂಡ್ ಮತ್ತು ಬೆಲ್ಜಿಯಂ ನಡುವೆ, 21 ಸ್ಕ್ಯಾಂಡಿನೇವಿಯನ್ ದೇಶಗಳ ನಡುವೆ ಸೌರವಿದ್ಯುತ್ ವಿತರಣೆಯ ಜಾಲವಿದೆ. 2035ರ ವೇಳೆಗೆ ಏಷ್ಯಾ, ಯುರೋಪ್ ಮತ್ತು ಆಫ್ರಿಕಾದ ಹಲವಾರು ದೇಶಗಳನ್ನು ಸೇರಿಸುವ ಸೌರವಿದ್ಯುತ್ ಜಾಲವೊಂದನ್ನು ರೂಪಿಸುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ.

ಜಾಗತಿಕ ಸೌರವಿದ್ಯುತ್ ಜಾಲ, ತಾತ್ವಿಕವಾಗಿ ಇಡೀ ಜಗತ್ತಿನ ಎಲ್ಲ ದೇಶಗಳ ಶಕ್ತಿಯ ಅಗತ್ಯವನ್ನು ಪೂರೈಸಬಲ್ಲ ಸಾಮರ್ಥ್ಯವಿರುವ ಪರಿಕಲ್ಪನೆ, ನಿಜ. ಆದರೆ ವ್ಯಾವಹಾರಿಕವಾಗಿ ಇದನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವೇ? ಯೋಜನೆಯನ್ನು ಸಾಕಾರಗೊಳಿಸಲು ಎಲ್ಲ ದೇಶಗಳೂ ಸೌರ ವಿದ್ಯುತ್ ಉತ್ಪಾದನೆ, ಸಂಗ್ರಹಣೆ, ಸಾಗಣೆಯ
ಕ್ಷೇತ್ರಗಳಲ್ಲಿ ಬಹಳಷ್ಟು ಬಂಡವಾಳ ತೊಡಗಿಸಬೇಕು. ದೇಶಗಳ ಗಡಿ ದಾಟಿ, ಖಂಡಾಂತರ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ರೂಪಿಸಬೇಕು.

ಸಾಗರ ತಳದ ಕೇಬಲ್‍ಗಳ ಮೂಲಕ ಸೌರ ವಿದ್ಯುತ್ತನ್ನು ಸಾಗಿಸುವುದು ಬಹು ದುಬಾರಿ. ಅದು ಸಾಧ್ಯವಾಗದಿದ್ದಾಗ ತಂತಿಗಳ ಮೂಲಕ ಸಾಗಿಸಬೇಕು. ಅಕ್ಕಪಕ್ಕದ ದೇಶಗಳ ನಡುವೆ ಗಡಿ ಸಮಸ್ಯೆ, ವೈಮನಸ್ಯ, ಅಪನಂಬಿಕೆ, ವೈರತ್ವಗಳಿದ್ದಾಗ ವಿದ್ಯುತ್ ಪ್ರಸರಣ ಅಸಾಧ್ಯವಾಗುತ್ತದೆ. ಜಾಗತಿಕ ಜಾಲದಿಂದ ಸೌರವಿದ್ಯುತ್ ವಿತರಣೆಗೆ ದೇಶ ದೇಶಗಳ ನಡುವೆ ವ್ಯಾಪಾರ, ವಹಿವಾಟಿನ ಒಪ್ಪಂದಗಳಾಗಬೇಕು. ಈ ಒಪ್ಪಂದಗಳು ಪಾರದರ್ಶಕವಾಗಿದ್ದು ಯಾವುದೇ ರೀತಿಯ ಶೋಷಣೆಗೆ ಅವಕಾಶವಿರಬಾರದು. ವ್ಯಾಜ್ಯ ಪರಿಹಾರ ವ್ಯವಸ್ಥೆಯಿರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ದೇಶಗಳಿಗೆ ನಾಗರಿಕ ಸಮಾಜದ ನೀತಿ ಸಂಹಿತೆ, ಕಾನೂನುಬದ್ಧ ನಡವಳಿಕೆ, ನ್ಯಾಯಾಲಯದ ತೀರ್ಪನ್ನು ಗೌರವಿಸುವ ಮನೋಭಾವವಿರಬೇಕು. ಪ್ರಪಂಚದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ಎಲ್ಲವೂ ಬಹಳ ಆದರ್ಶಪ್ರಾಯವಾದ ನಿರೀಕ್ಷೆಗಳೆಂಬ ಭಾವನೆಯಿದೆ.

ಡಾ. ಎಚ್.ಆರ್.ಕೃಷ್ಣಮೂರ್ತಿ
ಡಾ. ಎಚ್.ಆರ್.ಕೃಷ್ಣಮೂರ್ತಿ

ಜಾಗತಿಕ ವಿದ್ಯುತ್ ಜಾಲವನ್ನು ಕಾರ್ಯಗತಗೊಳಿಸುವ ಉದ್ದೇಶವಿರುವ ಅಂತರರಾಷ್ಟ್ರೀಯ ಸೌರ ಒಕ್ಕೂಟದ ದೇಶಗಳಿಗೆ ಈ ಎಲ್ಲ ಸಮಸ್ಯೆಗಳ ಪರಿಚಯ ವಿದೆ. ನಿಧಾನವಾಗಿಯಾದರೂ ಈ ಎಲ್ಲ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಬಹುದೆಂಬ ವಿಶ್ವಾಸವಿದೆ. ಜಾಗತಿಕ ವಿದ್ಯುತ್ ಜಾಲದತ್ತ ಹಂತ ಹಂತವಾಗಿ ಮುನ್ನಡೆಯುವ ಜಾಣ್ಮೆಯಿದೆ. ಸೌರವಿದ್ಯುತ್ ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದ ಕರಡು ಒಪ್ಪಂದ ರೂಪುಗೊಳ್ಳುತ್ತಿದೆ. ಅಂತರರಾಷ್ಟ್ರೀಯ ಸೌರ ಒಕ್ಕೂಟದ ಮಹಾನಿರ್ದೇಶಕ ಅಜಯ್ ಮಾಥುರ್ ಅವರ ಹೇಳಿಕೆ ಯಂತೆ, ವಿವಿಧ ಖಂಡಗಳಲ್ಲಿರುವ ದೇಶಗಳ ವಿದ್ಯುತ್ ಜಾಲವನ್ನು ಪ್ರಾಯೋಗಿಕವಾಗಿ ಜೋಡಿಸುವ ಪ್ರಯತ್ನ ಮುಂದಿನ ವರ್ಷದ ಮೊದಲರ್ಧದಲ್ಲಿ ಪ್ರಾರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT