ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಲೇಖನ: ದೇವರ ದೇವರು ಜನರ ಬೆವರು

ಬಹುತ್ವದ ಒಕ್ಕೂಟ ರೂಪಕವಾದ ಬೆವರು, ಸಮತೆಯ ತವರಿಗಾಗಿ ತವಕಿಸುತ್ತಿದೆ
Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ದೇವರ ಬಗ್ಗೆ ನಂಬಿಕೆಯಿಲ್ಲದ ದೇಶವಿಲ್ಲ. ಹೀಗೆಂದ ಕೂಡಲೇ ಕಮ್ಯುನಿಸ್ಟ್ ದೇಶಗಳಲ್ಲಿ ದೇವರ ಕುರಿತು ನಂಬಿಕೆ ಇದೆಯೆ ಎಂದು ಹುಬ್ಬೇರಬಹುದು. ಕಮ್ಯುನಿಸ್ಟ್ ಸರ್ಕಾರಗಳನ್ನು ಹೊಂದಿದ ದೇಶಗಳು ನಾಸ್ತಿಕವಾದ ವನ್ನು ಪ್ರತಿಪಾದಿಸಿದರೂ ದೇವರ ಬಗೆಗಿನ ಜನರ ನಂಬಿಕೆಯನ್ನು ಸಂಪೂರ್ಣ ನಿಷೇಧಿಸಿಲ್ಲ. ಕ್ರಾಂತಿಕಾರಿ ಲೆನಿನ್ ತಮ್ಮ ಪಕ್ಷದಲ್ಲಿ ಧಾರ್ಮಿಕ ನಂಬಿಕೆಯುಳ್ಳವರಿಗೂ ಅವಕಾಶ ನೀಡಿದ್ದರು. ಮುಂದೆ ಬ್ರೆಜ್ನೇವ್, ಕ್ರುಶ್ಚೋವ್ ಕಾಲದಲ್ಲಿ ಜನರು ಅವರವರ ನಂಬಿಕೆಯಲ್ಲಿ ಬದುಕುವ ಆಶಯ ಮತ್ತು ಅವಕಾಶಗಳು ವಿಸ್ತರಣೆಗೊಂಡವು.

ಚೀನಾದಲ್ಲಿ ಅಂಗೀಕರಿಸಿದ 1971ರ ಸಂವಿಧಾನದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ’ವನ್ನು ಕೊಡಲಾಗಿದೆ. ಆದರೆ ಕಮ್ಯುನಿಸ್ಟ್ ಸರ್ಕಾರಗಳು ನೇರವಾಗಿ ಧರ್ಮ, ದೇವರು ಗಳನ್ನು ಪ್ರೋತ್ಸಾಹಿಸುವುದಿಲ್ಲ. ಅಂದರೆ ಧರ್ಮ, ದೇವರ ಬಗೆಗಿನ ನಂಬುಗೆಯು ಖಾಸಗಿಯಷ್ಟೇ. ಈ ವಿವರಣೆಯ ಮೂಲಕ ನಾವು ಅರ್ಥ ಮಾಡಿಕೊಳ್ಳಬೇಕಾದ ವಾಸ್ತವವೆಂದರೆ- ವಿಶ್ವದಲ್ಲಿ ಸಂಪೂರ್ಣ ನಾಸ್ತಿಕ ವಾಗಿರುವ ದೇಶಗಳಿಲ್ಲ ಎಂಬುದು. ಆದರೆ ಆಸ್ತಿಕವಾದೀ ನಂಬಿಕೆಯ ನೆಪದಲ್ಲಿ ದೇವರು ಮತ್ತು ಧರ್ಮಗಳನ್ನು ಜನರ ಶೋಷಣೆಗೆ ಸಾಧನವಾಗಿಸಿಕೊಳ್ಳುವುದು ಮತ್ತು ವೋಟಿನ ಬ್ಯಾಂಕ್ ಆಗಿ ದುರುಪಯೋಗ ಮಾಡುವುದು ಅಕ್ಷಮ್ಯವಷ್ಟೇ ಅಲ್ಲ, ಧರ್ಮ ಮತ್ತು ದೇವರ ಕುರಿತು ಜನರಲ್ಲಿರುವ ನಂಬಿಕೆಗೆ ಮಾಡುವ ಮೋಸ.

ದೇವರ ಅಸ್ತಿತ್ವದ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ ಸಾಧ್ಯವಲ್ಲ. ದೇವರನ್ನು ಕುರಿತಂತೆ ಬುದ್ಧ ಗುರುವಿನ ‘ಮೌನ’ದೊಳಗೆ ಅಸಂಖ್ಯ ಮಾತುಗಳಿವೆ. ಈ ಮೌನವೂ ಮಹಾನ್ ವ್ಯಾಖ್ಯಾನದ ಶಕ್ತಿ ಪಡೆದಿದೆ. ಈಗ ನಾಸ್ತಿಕ ಮತ್ತು ಆಸ್ತಿಕ ವಾದಗಳಾಚೆಗೆ ನಿಂತು ನೋಡ ಬೇಕಾದ ಸಾಮಾಜಿಕ– ಆರ್ಥಿಕ ಸತ್ಯಗಳು ಸಾಕಷ್ಟಿವೆ. ಜನಸಾಮಾನ್ಯರ ಬೆವರಿನಿಂದಲೇ ಈ ಸಮಾಜ ಮತ್ತು ಸಂಸ್ಕೃತಿಗಳು ನಿರ್ಮಾಣಗೊಂಡಿರುವುದು ಅಂತಹ ಒಂದು ಚಾರಿತ್ರಿಕ ಸತ್ಯ. ಈ ಸತ್ಯದ ಆಧಾರದ ಮೇಲೆ ರೂಸೋ ಹೀಗೆ ಹೇಳಿದ್ದರು: ‘ಯಾರನ್ನು ನಾವು ನಿರ್ಲಕ್ಷಿಸಿದ್ದೇವೆಯೊ, ಯಾರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆಯೊ, ಯಾರು ತುಳಿತಕ್ಕೊಳಗಾಗಿದ್ದಾರೆಯೊ ಆ ಶ್ರೀಸಾಮಾನ್ಯರೇ ಸಾಮಾಜಿಕ ಕ್ರಮಬದ್ಧತೆಯ ನಿಜವಾದ ನಿರ್ಮಾತೃಗಳು. ಯಾರನ್ನು ನಾವು ಬಡವರು ಎನ್ನುತ್ತೇವೆಯೊ, ಯಾರಿಗೆ ಈ ಸಮಾಜದಲ್ಲಿ ಸ್ಥಾನವಿಲ್ಲವೊ ಅವರೇ ನಿಜಸಮಾಜದ ಬೆನ್ನೆಲುಬು, ರಾಷ್ಟ್ರದ ಸತ್ಯಸಾರ’.

ಅಂಬೇಡ್ಕರ್ ಮತ್ತು ಗಾಂಧೀಜಿ ಕಟ್ಟಕಡೆಯ ಮನುಷ್ಯರಿಗಾಗಿ ಮಿಡಿದರು; ದುಡಿದರು. ನೆಹರೂ ‘ಜನರ ಬೆವರು, ಕಣ್ಣೀರು ಮತ್ತು ದುಡಿಮೆಯಿಂದ ಇತಿಹಾಸವು ನಿರ್ಮಾಣಗೊಂಡಿದೆ’ ಎಂದರು.

ಸಂಸ್ಕೃತಿಯ ರೂಪಧಾರಣೆಯಲ್ಲೂ ಈ ಬೆವರಿನ ಜನರ ಪಾತ್ರವೇ ಪ್ರಮುಖವಾಗಿದೆ. ಮಾನವಶಾಸ್ತ್ರಜ್ಞರಾದ ಹರ್‍ಸ್ಕೂವಿಟ್ಸ್ ಹೇಳಿದಂತೆ, ‘ಸಂಸ್ಕೃತಿಯು ಪರಿಸರದ ಮಾನವ ನಿರ್ಮಿತ ಭಾಗ’. ವೈಲ್ಡ್ ಅವರ ಪ್ರಕಾರ, ‘ಮನುಷ್ಯರ ಶ್ರಮವು ಎಷ್ಟೆಷ್ಟು ವಿನಿಯೋಗ ವಾಗುವುದೋ ಅಷ್ಟಷ್ಟು ಸಂಸ್ಕೃತಿಯ ವಿಸ್ತರಣೆಯಾಗುತ್ತದೆ’. ಅಂದರೆ ಜನಸಾಮಾನ್ಯರು ಬೆವರು ಬಸಿದು ಈ ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟುತ್ತಾ ಇತಿಹಾಸ ನಿರ್ಮಿಸಿದರು.

ನಮ್ಮಲ್ಲಿ ವೇದಕಾಲೀನ ಸಮಾಜವೆಂದು ಕರೆಯುವ, ಕೆಲವು ಸಮಾಜ ವಿಜ್ಞಾನಿಗಳು ಪ್ರಾಚೀನ ಸಮತಾವಾದದ ಕಾಲವೆಂದು ನಿರ್ವಚಿಸಿರುವ, ಆಗಿನ ಅವಧಿಯಲ್ಲಿದ್ದ ಜನರಲ್ಲಿ, ಸ್ವಂತ ಆಸ್ತಿಯೆಂಬ ಕಲ್ಪನೆಯೇ ಇರಲಿಲ್ಲ. ಅವರೆಲ್ಲರೂ ಒಟ್ಟಿಗೇ ಬೆವರು ಹರಿಸಿ ಬದುಕು ಕಟ್ಟಿಕೊಳ್ಳುತ್ತ ಬಂದರು; ಮರದ ಪೊಟರೆ, ಗುಹೆ ಮುಂತಾದ ತಾಣಗಳಲ್ಲಿ ಆಶ್ರಯ ಪಡೆದಿದ್ದವರು ಕೆಲ ಕಾಲಾನಂತರದಲ್ಲಿ ಗುಡಿಸಲು ಕಟ್ಟಿದರು. ಈ ಗುಡಿಸಲೇ ಮುಂದೊಮ್ಮೆ ಮಣ್ಣಿನ ಹೆಂಟೆಗಳ ಮನೆಯಾಯಿತು; ಇಟ್ಟಿಗೆಯ ಕಟ್ಟಡವಾಯಿತು. ಹೀಗೆ ವಾಸಸ್ಥಳಗಳು ವಿಕಾಸಗೊಂಡ ವಿನ್ಯಾಸಗಳಲ್ಲೇ ‘ಬೆವರು’ ವಹಿಸಿದ ಪಾತ್ರವನ್ನು ಗುರುತಿಸ ಬಹುದು. ಇಲ್ಲಿ ಬೆವರಿನಲ್ಲೇ ಬಲವೂ ಇತ್ತು; ಬುದ್ಧಿಯೂ ಇತ್ತು. ಬರಬರುತ್ತ ಬಲ ಮತ್ತು ಬುದ್ಧಿಗಳು ಬೆವರಿನಿಂದ ಬೇರ್ಪಟ್ಟು ತಮ್ಮದೇ ಹಿತಾಸಕ್ತಿಯ ವಲಯಾಧಿಪತಿಗಳಾದವು. ಆದರೆ ಮೂಲ ನಿರ್ಮಾಣ ಶಕ್ತಿಯಾದ ಬೆವರಿನ ಪಾತ್ರವನ್ನು ಗೌಣ ಮಾಡುವಂತಿಲ್ಲ. ಯಾಕೆಂದರೆ, ಗುರಿಯಿಲ್ಲದೆ ಹರಿಯುತ್ತಿದ್ದ ನೀರಿಗೆ ಕಟ್ಟೆ ಕಟ್ಟಿ ಕೆರೆ ಕುಂಟೆಗಳನ್ನು ನಿರ್ಮಿಸಿದ್ದು, ಬೆಟ್ಟ ಗುಡ್ಡಗಳ ನಡುವೆ ವಾಸದ ತಾಣಗಳನ್ನು ಹಸನು ಮಾಡಿಕೊಂಡಿದ್ದು, ಕಾಡು ಮೇಡುಗಳ ನಡುವೆ ಬೆಳೆ ಬೆಳೆಯಲು ಹೊಲದ ವಲಯಗಳನ್ನು ರೂಪಿಸಿಕೊಂಡಿದ್ದು, ಎಲ್ಲರೊಟ್ಟಾಗಿ ಬದುಕನ್ನು ರೂಪಿಸಿಕೊಳ್ಳತೊಡಗಿದ್ದು- ಈ ಎಲ್ಲದರ ಮೂಲ ಜನಸಾಮಾನ್ಯರ ಬೆವರು. ಇದೇ ಬೆವರಿನ ಜನರು ಗುಡಿಗೋಪುರ, ಕೋಟೆ ಕೊತ್ತಲಗಳನ್ನು ಕಟ್ಟಿದರು. ರಸ್ತೆ, ರಹದಾರಿಗಳನ್ನು ನಿರ್ಮಿಸಿದರು. ರೈತರಾದರು, ಕಾರ್ಮಿಕರಾದರು, ಕೂಲಿಗಾರರಾದರು, ಕಲಾಕಾರ ರಾದರು. ಬೆವರಿನ ಮೂಲಕ ಬೆಳಕು ಕಟ್ಟುತ್ತಾ ಕತ್ತಲಲ್ಲಿ ಕಟ್ಟಿಹಾಕಲ್ಪಟ್ಟರು!

ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

‘ದೇವರು’ ಎಂದು ಕರೆಯುತ್ತಿರುವ ಅಗೋಚರ ಶಕ್ತಿಯ ಕಲ್ಪನೆಯೂ ಈ ಬೆವರಿನ ಮೂಲದಿಂದಲೇ ಹುಟ್ಟಿರಬೇಕೆಂದು ಊಹಿಸಬಹುದಾಗಿದೆ. ನಿಸರ್ಗದ ನಿಗೂಢತೆಯಲ್ಲಿ ದೇವರ ನಂಬಿಕೆಯ ಆರಂಭಿಕ ಹಂತವನ್ನು ಗುರುತಿಸಬಹುದು. ಕಾಡು, ಮೇಡು, ಗುಹೆ ಮುಂತಾದ ಕಡೆಗಳಲ್ಲಿ ವಾಸಿಸುತ್ತಿದ್ದ ಜನರು ಮಳೆಯನ್ನು ಕಂಡರು, ಮೋಡದೊಳಗಿನ ಗುಡುಗನ್ನು ಕೇಳಿ ಬೆಚ್ಚಿದರು. ಸಿಡಿಲಿಗೆ ಭಯಪಟ್ಟರು, ಬಿರುಗಾಳಿಯಿಂದ ಬೆದರಿದರು. ಸೂರ್ಯನ ಹಗಲು- ಬಿಸಿಲು ಮತ್ತು ಚಂದ್ರನ ರಾತ್ರಿ- ಬೆಳದಿಂಗಳ ವಿಶೇಷ ಅನುಭವ ಪಡೆದರು. ಈ ಕತ್ತಲು- ಬೆಳಕಿನ ಸ್ಥಿತ್ಯಂತರಗಳು ಪ್ರಶ್ನೆಗಳಾದವು. ನಿಸರ್ಗದ ನಿಗೂಢ ನಡೆಗಳು ಕಾಡಿಸ ತೊಡಗಿದವು. ಆಗ ಜನರಿಗೆ ತಮ್ಮಿಂದ ಅತೀತವಾದ ಯಾವುದೋ ‘ಶಕ್ತಿ’ಯಿದ್ದು ಅದರ ಮೂಲಕ ಈ ಎಲ್ಲವೂ ಸಂಭವಿಸುತ್ತಿವೆ ಎನ್ನಿಸಿರಬೇಕು. ಈ ಶಕ್ತಿಯೇ ಮುಂದೆ ಆರಾಧಿಸುವ ದೇವರಾಗಿರಬಹುದು. ಸೂರ್ಯದೇವ, ವಾಯುದೇವ, ವರುಣದೇವ, ಮೇಘರಾಜ- ಹೀಗೆ ಹೆಸರಾಗಿರಬಹುದು. ಆದ್ದರಿಂದ ನಿಸರ್ಗದ ಜೊತೆ ಹೋರಾಡುತ್ತಲೇ ಒಗ್ಗಿಸಿಕೊಳ್ಳುವ ಹೊಂದಾಣಿಕೆಯ ಭಾಗವಾಗಿ ಗೋಚರಾತ್ಮಕ ಸಮಾಜ, ಸಂಸ್ಕೃತಿ ಮತ್ತು ಅಗೋಚರಾತ್ಮಕ ಶಕ್ತಿರೂಪಗಳು ಹುಟ್ಟುತ್ತ, ಬೆಳೆಯುತ್ತ ಬಂದಿವೆ ಎಂದು ನಿರ್ಣಯಿಸಬಹುದು.

ಈಗಿನ ವಾಸ್ತವವೆಂದರೆ, ಸಮಾಜ ಮತ್ತು ಸಂಸ್ಕೃತಿಗಳ ಸೃಷ್ಟಿರೂಪವಾದ ‘ಬೆವರು’ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತ ಬಂದಿದೆ. ‘ಬಲ’ ಮತ್ತು ‘ಬುದ್ಧಿ’ಗಳು ತಮ್ಮದೇ ವರ್ಗ ಹಿತಾಸಕ್ತಿಯನ್ನು ಬೆಳೆಸಿಕೊಂಡಿವೆ; ‘ಬಲ’ವು ಆಳುವ ವರ್ಗವಾಗಿ ಬಂಡವಾಳಶಾಹಿಯ ಹಿತಾಸಕ್ತಿಯನ್ನು ರಕ್ಷಿಸುತ್ತಿದ್ದರೆ, ‘ಬುದ್ಧಿ’ಯು ಶಿಕ್ಷಣ ಹಾಗೂ ಸಂಸ್ಕೃತಿಯ ಮೂಲ ಗುತ್ತಿಗೆ ದಾರನಾಗಿ ಪ್ರಭಾವ ಬೀರುತ್ತಿದೆ. ಬೆವರಿನಿಂದ ಬುದ್ಧಿ- ಬಲಗಳಿಗೆ ಸ್ಥಳಾಂತರಗೊಂಡವರು ಕೂಡ ಬೆವರಿನ ಮೂಲವನ್ನು ಮರೆಯುತ್ತಿದ್ದಾರೆ. ನಿಸರ್ಗದ ನಿಗೂಢತೆಯ ಕಾಡುವಿಕೆಯಿಂದ ‘ಬೆವರು’ ಕಂಡುಕೊಂಡ ಅಗೋಚರ ಶಕ್ತಿಗಳು ಈಗ ಅಭೌತಿಕ ಮಾತ್ರವಾಗಿ ಉಳಿಯದೆ ಭೌತಿಕ ಲಾಭದ ಸಾಧನವಾಗಿಬಿಟ್ಟಿವೆ. ‘ಬಲ’ ಮತ್ತು ‘ಬುದ್ಧಿ’ ರೂಪಕಗಳು ಬೆವರನ್ನು ಶೋಷಣೆ ಮಾಡುತ್ತಿವೆ.

ಸಮಾಜ ಮತ್ತು ಸಂಸ್ಕೃತಿಗಳ ಇತಿಹಾಸವನ್ನೇ ನಿರ್ಮಿಸಿದ ಜನರ ಬೆವರು, ದೇವರ ದೇವರೆಂದು ದೇಶಕ್ಕೆ ದೇಶವೇ ಭಾವಿಸಬೇಕಾಗಿದೆ. ‘ಬೆವರು’ ಎಂಬ ರೂಪಕದಲ್ಲಿ ಶ್ರಮ, ಸಮುದಾಯ, ಸಮಾಜ, ಸಂಸ್ಕೃತಿ- ಎಲ್ಲವೂ ಇವೆ. ಬೆವರಿಗೆ ಏಕ ದೈವವಿಲ್ಲ. ಏಕ ಧರ್ಮವಿಲ್ಲ, ಏಕ ಸಂಸ್ಕೃತಿಯಿಲ್ಲ, ಬೆವರೆಂಬುದು ಬಹುತ್ವದ ಒಕ್ಕೂಟ ರೂಪಕ. ಇಂತಹ ಬೆವರು ಇಂದು ಸಮತೆಯ ತವರಿಗಾಗಿ ತವಕಿಸುತ್ತಿದೆ. ನಾವು ಬೆವರನ್ನೇ ಉಸಿರಾಗಿಸಿಕೊಂಡು ಬುದ್ಧಿ ಬಲಗಳ ಪ್ರಭುತ್ವಪ್ರಜ್ಞೆಯನ್ನು ವಿಮರ್ಶಿಸುತ್ತ, ಪ್ರಶ್ನಿಸುತ್ತ ಪ್ರಜಾಪ್ರಜ್ಞೆಗೆ ಬೆಲೆ ತರಬೇಕಾಗಿದೆ. ಆಗ
ಪ್ರಜಾಪ್ರಭುತ್ವ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT