ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಗೀತಾ ವಸಂತ ಬರಹ: ಅವಳ ಅರಿವು ಮತ್ತು ಲೋಕದೃಷ್ಟಿ

ಚಾರಿತ್ರಿಕ ಸ್ಥಿತಿಯಾಚೆಗಿನ ಪ್ರಾಕೃತಿಕ ಹೆಣ್ಣನ್ನು ಕಾಣಲಾಗದಷ್ಟು ಕಣ್ಕಟ್ಟುಗಳು...
Last Updated 22 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಮನುಷ್ಯ ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ ಎಂಬ ಕುವೆಂಪು ಅವರ ಮಾತನ್ನು ನಾವು ಒಂದು ಸುಂದರ ಕೋಟ್ ಎಂಬಂತೆ ಬಳಸುತ್ತೇವೆ. ಡಿಬೇಟ್ ಮಾಡುವ ನಮ್ಮ ವಿದ್ಯಾರ್ಥಿಗಳು ಇದನ್ನು ಮಾತಿನಲ್ಲಿ ಬಳಸಿ ಗೆಲ್ಲುತ್ತಾರೆ. ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ...’ ಇದೂ ಕುವೆಂಪು ಮಾತೇ. ಇದು ಆಧ್ಯಾತ್ಮಿಕ ಸತ್ಯವೂ ಹೌದು, ಸಾಮಾಜಿಕ ನ್ಯಾಯದ ತತ್ವವೂ ಹೌದು, ರಾಜಕೀಯ ಸರಿತನದ ಪ್ರತಿಪಾದನೆಯೂ ಹೌದು. ಆದರೆ, ಇದನ್ನು ಒಂದು ಸಮಗ್ರ ದರ್ಶನವಾಗಿ ಕಾಣುವ ನೋಟಕ್ರಮವನ್ನು ನಾವು ಕಲಿಯಲೇ ಇಲ್ಲ. ಅದನ್ನು ಬರಿಮಾತಾಗಿ ಗ್ರಹಿಸಿ ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸುವ ಜಾಣ್ಮೆಯನ್ನು ಮಾತ್ರ ನಾವು ರೂಢಿಸಿಕೊಂಡು
ಬಿಟ್ಟಿದ್ದೇವೆ. ಮಾತುಗಳಾಚೆಗೆ ನಾವು ಬದುಕುತ್ತಿರುವುದು ಭೇದ ರಾಜಕಾರಣದ ಪ್ರಪಂಚದಲ್ಲಿಯೇ. ಇನ್ನೊಬ್ಬ
ರನ್ನು ಆಳಬೇಕೆಂದರೆ ಅವರನ್ನು ಅಮುಖ್ಯರೆಂದು ಕಾಣಿಸುವುದು ಅನಿವಾರ್ಯ.

ಇದೇ ಮಾತುಗಳನ್ನು ಲಿಂಗಸಂಬಂಧಿ ಚರ್ಚೆಗಳಲ್ಲೂ ಅನ್ವಯಿಸಿಕೊಳ್ಳಬಹುದು. ಹೆಣ್ಣನ್ನು ಮುಖ್ಯ ತತ್ವವೊಂದಕ್ಕೆ ಅಧೀನವಾದ ತತ್ವ ಎಂದೇ ಪರಿಭಾವಿಸುವ ಸುಖವನ್ನು ಪುರುಷಪ್ರಧಾನ ವ್ಯವಸ್ಥೆ ಅನುಭವಿಸುತ್ತ ಬಂದಿರುವುದರಿಂದ ಮನುಷ್ಯ ಎಂಬ ಪರಿಕಲ್ಪನೆಯ ಹೊರಗೇ ಆಕೆ ಉಳಿದುಕೊಳ್ಳುತ್ತಾಳೆ. ಹೆಣ್ಣು ಮುಟ್ಟಾಗುವುದನ್ನು ನಮ್ಮಕಡೆ ‘ಹೊರಗಾಗುವುದು’ ಎನ್ನುತ್ತಿದ್ದರು. ದೇಹದ ಪರಿವರ್ತನೆ, ಬದಲಾವಣೆ ಎಲ್ಲವೂ ಸೃಷ್ಟಿಕ್ರಿಯೆಯ ಬಹುಮುಖ್ಯ ಭಾಗವೇ ಆಗಿದ್ದರೂ ಜೀವಸೃಷ್ಟಿಯೇ ಪ್ರಕೃತಿಯ ಪ್ರಧಾನ ತತ್ವವಾಗಿದ್ದರೂ ಅವಳು ಸಮಾಜದಿಂದ, ಕುಟುಂಬದಿಂದ, ಮನೆಯಿಂದ, ಮನದಿಂದ ಹೊರಗಾಗುತ್ತಲೇ ಉಳಿಯುತ್ತಾಳೆ. ದೇವಸ್ಥಾನದಿಂದ, ಮಸೀದಿಯಿಂದ, ಚರಿತ್ರೆಯಿಂದ, ಭಾಷೆಯಿಂದ... ಹೀಗೆ ಹೊರಗಾಗುವ ಪಟ್ಟಿ ಉದ್ದವಾಗುತ್ತದೆ.

ಒಂದು ಎರಡಾಗುವ, ಹಲವಾಗುವ, ಅನಂತ ಸಾಧ್ಯತೆಯಾಗಿ ವಿಸ್ತರಿಸುವ ಈ ಸೃಷ್ಟಿತತ್ವವನ್ನು ಅಧಿಕಾರದ ಜಡ ತತ್ವವು ಬಂಧಿಸಿರುವುದೇ ವಿಪರ್ಯಾಸ. ಏನನ್ನೂ ಮೊಳೆಸಲರಿಯದ ಈ ಅಧಿಕಾರವು ಬರೀ ಹತ್ತಿಕ್ಕುವ, ನಾಶ ಮಾಡುವ ಮೂಲಕ ವಿನಾಶಕಾರೀ ಅಹಂ ಅನ್ನು ಮಾತ್ರ ಬೆಳೆಸುತ್ತ ಹೋಗುತ್ತದೆ. ಭೂಮಿ ಎಂಬ ಸಕಲವನ್ನೂ ಧರಿಸುವ, ಮೊಳೆಯಿಸುವ, ಹಿಗ್ಗಿಸುವ ವಿಕಾಸತತ್ವವನ್ನು ಭೂಪತಿಯೆನಿಸಿಕೊಂಡ ಗಂಡು ತನ್ನ ಸ್ವತ್ತೆಂದು ಭಾವಿಸಿ, ಮುಳ್ಳುಬೇಲಿಗಳನ್ನು ಹಾಕಿಸಿ, ಆಳವಾದ ಕಂದಕಗಳನ್ನು ಕೊರೆಯಿಸಿ ತನ್ನದೆಂದು ಷರಾ ಬರೆಸುತ್ತಾನೆ. ಶಾಸನಗಳು, ಲಾಂಛನಗಳು, ಕಾವ್ಯ ಪುರಾಣಗಳನ್ನು ಅವನ ಭಾಷೆ ಸೃಷ್ಟಿಸುತ್ತದೆ. ಸೃಷ್ಟಿಶಕ್ತಿಯ ಸಾಕಾರವಾದ ಹೆಣ್ಣನ್ನು ಮದುವೆ ಎಂಬ ಬಂಧನದಲ್ಲಿ ತೊಡಗಿಸಿ, ತನ್ನ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಾಧನೆಯಲ್ಲಿ ಪುರುಷ ತೊಡಗಿದ್ದು ಇತಿಹಾಸ.

ತಾಯ್ತನವು ಅವಳ ದೇಹ, ಮನಸ್ಸುಗಳ ಆಯ್ಕೆಯಾಗಿರದೇ ಅದು ಗಂಡೆಜಮಾನಿಕೆಯನ್ನು ಸ್ಥಾಪಿಸುವ ವಂಶ ಪ್ರಜ್ಞೆಯಾಗಿ ಬೆಳೆದಾಗಲೇ ಅವಳ ಅಧೀನತೆಯ ಸ್ಥಿತಿಯೊಂದು ಜನ್ಮತಾಳಿತು. ಈ ಚಾರಿತ್ರಿಕ ಸ್ಥಿತಿಯಾಚೆಗಿನ ಪ್ರಾಕೃತಿಕ ಹೆಣ್ಣನ್ನು ಕಾಣಲಾಗದಷ್ಟು ಕಣ್ಕಟ್ಟುಗಳು ನಮ್ಮನ್ನು ಇಂದು ಆವರಿಸಿವೆ.

ಪ್ರಕೃತಿಯ ಸಹಜ ಲಯವನ್ನು ಭಂಜಿಸಿ ಮನುಷ್ಯನು ಕುಟುಂಬ, ಸಮಾಜ, ಸಂಸ್ಕೃತಿ, ರಾಜಕಾರಣ ಹಾಗೂ ಅಭಿವೃದ್ಧಿ ಮಾದರಿಗಳನ್ನು ರಚಿಸಿಕೊಂಡಿದ್ದಾನೆ. ದೇಹ ಮತ್ತು ಪ್ರಜ್ಞೆಗಿರಬಹುದಾದ ವಿಕಾಸದ ವಿನ್ಯಾಸಗಳು ಅಧಿಕಾರ ರಾಜಕಾರಣದಲ್ಲಿ ರೂಪಾಂತರಗೊಂಡಿವೆ. ಯಾವುದು ಅವಳ ಶಕ್ತಿಕೇಂದ್ರವಾಗಿದೆಯೋ ಅದೇ ಅವಳ ದೌರ್ಬಲ್ಯವೆಂಬಂತೆ ಬಿಂಬಿತವಾಗುತ್ತ ಹೋಗಿ ಸೃಷ್ಟಿಶಕ್ತಿಯ ನಿಗೂಢತೆಯ ಬಗೆಗಿದ್ದ ಭಯವೇ ಅವಳನ್ನು ನಿಯಂತ್ರಿಸಲು ಕಾರಣವಾಯಿತು. ಆರಂಭದಲ್ಲಿ ಸಲಹುವ ತಾಯ್ತನವೇ ಅಧಿಕಾರ ಕೆಂದ್ರವಾಗಿದ್ದು, ಅದು ಪಿತೃಪ್ರಧಾನತೆಯೆಡೆ ಮಗ್ಗುಲು ಬದಲಾಯಿಸಿದ ಇತಿಹಾಸವೇ ನಾಗರಿಕತೆಯ ಇತಿಹಾಸ.

ಕುಟುಂಬದ ರಚನೆಯ ಮೂಲಕ ಶ್ರಮ ವಿಭಜನೆ ಹಾಗೂ ಜವಾಬ್ದಾರಿಗಳ ಹಂಚಿಕೆಯನ್ನು ಮಾಡುವಾಗ ಅವಳ ಶಕ್ತಿಕೇಂದ್ರವಾಗಿದ್ದ ದೇಹವನ್ನೇ ಮಿತಿಯೆಂದು ಭಾವಿಸುತ್ತ ಬಂದ ಯೋಚನಾ ಕ್ರಮವು ಕಣ್ಕಟ್ಟಿನಂತೆ ಆವರಿಸಿಕೊಳ್ಳುತ್ತ ಹೋಯಿತು. ಅಧಿಕಾರಜನ್ಯವಾದ ಹಿಂಸೆಯು ಅವಳ ಶಕ್ತಿಕೇಂದ್ರವನ್ನು ಮಸುಕುಗೊಳಿಸುತ್ತ ಹೋಯಿತು. ಮದುವೆ ಎಂಬ ಅನಿವಾರ್ಯ ಚೌಕಟ್ಟಿನಲ್ಲಿ ಬಂದಿಯಾದಂತೆ ಹೊರಬರುವ ದಾರಿಗಳೇ ಮುಚ್ಚಿಹೋದವು. ವಿವಾಹದ ಪಾವಿತ್ರ್ಯ ಹಾಗೂ ಪಾಲುದಾರಿಕೆಯು ಎರಡು ಜೀವಗಳು ಒಂದನ್ನೊಂದು ಉದ್ದೀಪಿಸುತ್ತಾ ಜೊತೆಜೊತೆಯಾಗಿ ಬೆಳೆಯಬಹುದಾದ ಸಾಧ್ಯತೆಯಾಗಿ ವಿಕಾಸವಾಗಬಹುದಿತ್ತು. ಆದರೆ ಬಾಂಧವ್ಯವು ಬಂಧನವಾಗತೊಡಗಿದಂತೆಲ್ಲ ಹಿಂಸೆಯ ನಾನಾ ಸ್ವರೂಪಗಳು ಬೆಳೆಯುತ್ತ ಹೋದವು. ಕುಟುಂಬದ ಮೂಲಕ ಸಂತಾನವನ್ನು ನೆಲೆಗೊಳಿಸುವ ಆದರ್ಶ ಕಲ್ಪನೆಯು ವಂಶಪಾರಂಪರ್ಯದ ಹಕ್ಕುಸ್ಥಾಪನೆಯಡಿಯಲ್ಲಿ ನರಳಿತು. ವಾತ್ಸಲ್ಯದಲ್ಲಿ ಅರಳಬೇಕಾದ ಜೀವಗಳನ್ನು ಅಧಿಕಾರದ ಬೇಟೆಯ ಭಾಷೆಗೆ ಪಳಗಿಸಲಾಯಿತು. ಗಂಡುಮಗು ಅಧಿಕಾರದ ಮುಂದುವರಿಕೆಯಾಗಿಯೂ ಹೆಣ್ಣುಮಗು ವಂಶಾಭಿವೃದ್ಧಿಯ ಸಾಧನವಾಗಿಯೂ ರೂಪುಗೊಳ್ಳುತ್ತ ಪ್ರಜ್ಞೆಯ ವಿಕಾಸದ ಸಾಧ್ಯತೆಗಳು ಮೊಟಕಾದವು.

ಸದ್ಯ ನೋಡಿದ ‘ದ ಗ್ರೇಟ್ ಇಂಡಿಯನ್ ಕಿಚನ್’ ಎಂಬ ಮಲಯಾಳಂ ಸಿನಿಮಾ, ಮದುವೆಯೊಳಗಿನ ಅಸಹನೀಯ ಮೌನವನ್ನೂ ಅಡುಗೆ ಮನೆಯೆಂಬ ಜಗತ್ತಿನಲ್ಲಿ ಹೂತುಹೋದ ಹೆಣ್ಣಿನ ಪ್ರಜ್ಞೆಯನ್ನೂ ಧ್ವನಿಪೂರ್ಣವಾಗಿ ಕಾಣಿಸಿತು. ಕಟ್ಟಿಕೊಂಡ ಸಿಂಕಿನ ರೂಪಕವು ಹರಿವು ಕಾಣದೆ ನಾರುವ ಹೆಣ್ಣಿನ ಅಸಹಾಯ ಸಂಕಟವನ್ನು ಮಾರ್ದನಿಸಿತು. ಮದುವೆಯೆಂಬ ಅನುಕೂಲಸಿಂಧು ವ್ಯವಸ್ಥೆಯಲ್ಲಿ ತಿಂದು ಬಿಸಾಡಿದ ಕಸದಂತೆ, ಕಾಮಕ್ಕೆ ಒದಗುವ ನಿತ್ಯ ವಸ್ತುವಿನಂತೆ, ತನ್ನ ಅರಿವು ತನಗಿಲ್ಲದೆ ಕರಗುವ ಹೆಣ್ಣು ಜೀವದ ಸುಯ್ಲು ತಲ್ಲಣವನ್ನು ಉಂಟುಮಾಡುತ್ತದೆ. ಅಣೆಕಟ್ಟುಗಳನ್ನು ಕೊಚ್ಚಿಹರಿಯಬೇಕೆಂಬ ನದಿಯ ತಳಮಳ ನಮಗೆ ಹೇಗೆ ಅರಿವಾಗುವುದಿಲ್ಲವೋ ಹಾಗೇ ಮದುವೆಯೆಂಬ ಸಂಸ್ಥೆ ಶಾಶ್ವತ ಸತ್ಯವೆಂದು ಭಾವಿಸಿದ ಮನಸ್ಸುಗಳಿಗೆ ಅವಳ ಬಿಡುಗಡೆಯ ತಪನೆ ಅರ್ಥವಾಗುವುದಿಲ್ಲ. ಬಿಡುಗಡೆಯೆಂಬುದು ಬರೀ ಸ್ತ್ರೀವಾದಿ ಆಶಯವಲ್ಲ. ಅದು ಜೀವಚೈತನ್ಯವೊಂದರ ವಿಕಾಸದ ಅಸೀಮ ಹಂಬಲ. ಅವಳು ಹುಟ್ಟಿದಾಗಲೇ ಈ ವಿಕಾಸದ ಸಾಧ್ಯತೆಯೂ ಹುಟ್ಟಿಬಿಟ್ಟಿದೆ. ಅದನ್ನು ಎಷ್ಟುದಿನ ಅದುಮಿಡಲು ಸಾಧ್ಯ? ಹರಿಯುವುದೇ ಹೊಳೆಯ ಸಹಜ ಸ್ವಭಾವ. ಅಕ್ಕಮಹಾದೇವಿಯು ಮದುವೆಯನ್ನು ನಿರಾಕರಿಸುವ ನಿರ್ಧಾರದ ಹಿಂದೆ, ವ್ಯವಸ್ಥೆಯನ್ನು ಮುರಿಯುವ ಬಂಡುಕೋರತೆಗಿಂತ ಹೆಚ್ಚಾಗಿ ಇದ್ದದ್ದು ತನ್ನನ್ನು ಆ ಜಡ ಚೌಕಟ್ಟಿನಾಚೆಗೆ ಹಿಗ್ಗಿಸಿಕೊಳ್ಳುವ ಹಂಬಲ.

ವರ್ಜಿನಿಯಾ ವೂಲ್ಫ್ ‘ತನ್ನದೇ ಕೋಣೆಯ’ ರೂಪಕದಲ್ಲಿ ಬಯಸುವ ತನ್ನದೇ ಕಾಲ ಮತ್ತು ಸ್ಥಳ ಅವಳನ್ನು ಧ್ಯಾನಸ್ಥ ಏಕಾಂತದಲ್ಲಿ ಮರುರಚಿಸಿಕೊಳ್ಳುವ ಹಂಬಲದಿಂದ ಕೂಡಿದ್ದು. ಇಂದಿನ ಹೆಣ್ಣು ತನ್ನ ದುಡಿಮೆಯ ಮೂಲಕ ಬದುಕಿನ ಎಲ್ಲ ನೆಲೆಗಳನ್ನು ಕಟ್ಟಲು ಬಯಸುವುದು ತನ್ನ ಕ್ರಿಯಾಶಕ್ತಿಯನ್ನು ಅನ್ವೇಷಿಸುವ ಹಂಬಲದಿಂದ. ಆದರೆ ಅಧಿಕಾರಾರೂಢ ವ್ಯವಸ್ಥೆಗೆ ಅವಳ ಆತ್ಮವಿಶ್ವಾಸ ಅಹಂಕಾರದಂತೆಯೂ ಅವಳ ಏಕಾಂತದ ಹಂಬಲ ಸ್ವಾರ್ಥದಂತೆಯೂ ತೋರುತ್ತವೆ. ಅವಳು ಬದಲಾಗಿಬಿಟ್ಟಿದ್ದಾಳೆಂಬ ಭಯವು ಪ್ರಳಯ ಭಯಕ್ಕಿಂತಲೂ ಮಿಗಿಲಾಗಿ ಕಾಡುತ್ತಿದೆ.

ಇಂದು ರೂಪಿಸಲ್ಪಟ್ಟ ಹೆಣ್ಣು ತನ್ನ ಕಣ್ಣುಪಟ್ಟಿ ಕಳಚಿ ತನ್ನನ್ನು ನೈಜ ನೆಲೆಯಲ್ಲಿ ಮರುರಚಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವನ್ನು ಅತ್ಯಂತ ಸಹಜವಾಗಿ ಕಾಣುವ ಜ್ಞಾನಮೀಮಾಂಸೆಯ ಅಗತ್ಯವಿದೆ. ಇಚ್ಛಾಶಕ್ತಿಯೂ ಕ್ರಿಯಾಶಕ್ತಿಯೂ ಆಗಿರುವ ಅವಳು ಜ್ಞಾನಶಕ್ತಿಯೂ ಹೌದು. ಅವಳ ಅರಿವಿನಿಂದ ಮೂಡಿದ ಲೋಕದೃಷ್ಟಿಯು ಲೋಕಮೀಮಾಂಸೆಯೂ ಆದಾಗ ಧರ್ಮ, ರಾಜಕಾರಣ, ಅಭಿವೃದ್ಧಿ, ಸಾಹಿತ್ಯ, ಕಲೆ ಹಾಗೂ ಜ್ಞಾನವಲಯಗಳು ಮರುರಚನೆಗೊಳ್ಳುತ್ತವೆ. ಆದ್ದರಿಂದ ಅವಳ ಮರುರಚನೆಯಲ್ಲಿ ಲೋಕದ ಮರುರಚನೆಯೂ ಇದೆ. ಸಹಜವಿಕಾಸದ ಮುಕ್ತತೆಯಲ್ಲಿ ಮಾತ್ರ ಜೀವನಪ್ರೀತಿ ಅರಳುತ್ತದೆ. ಸೃಷ್ಟಿ ನಿರಂತರವಾಗುತ್ತದೆ.

ಲೇಖಕಿ: ಮುಖ್ಯಸ್ಥೆ, ಕನ್ನಡ ವಿಭಾಗ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT