ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಕಾರಣವಿರಲಿ ನಿರಾಕರಣ; ಇಲ್ಲ ಅನ್ನೂದು ಸರಳಲ್ಲ

ಮನೋಮಯ
Last Updated 17 ಡಿಸೆಂಬರ್ 2020, 11:14 IST
ಅಕ್ಷರ ಗಾತ್ರ

ಇಲ್ಲವಾ.. ನನಗ ಇಲ್ಲ ಅನ್ನೂದೆ ಆಗಲಿಲ್ಲ ನೋಡು.. ದಾಕ್ಷಿಣ್ಯಕ್ಕ ಬಿದ್ದು ಹೋಗಿ ಬಂದೆ.. ಎಂಥಾ ತ್ರಾಸಾಯ್ತು ಅಂತಿ... ಆ ಗುಡ್ಡದ ರಸ್ತೆ, ಜೀಪಿನ ಸವಾರಿ, ಹೊಟ್ಟಿಯೆಲ್ಲ ತೊಳಸಿ ಬರ್ತಿತ್ತು.. ಪಾಪ.. ಕರಕೊಂಡು ಹೋದೋರಿಗೂ ಯಾಕರೆ ಕರಕೊಂಡು ಹೋದ್ವಿ ಅನ್ನೂಹಂಗ ಆಗಿತ್ತು. ನನಗೂ ಮೊದಲೆ ಇಲ್ಲ ಅನ್ಬೇಕಿತ್ತು ಅಂತನಿಸ್ತು ನೋಡು.

ಮಾಮಿ ಒಂದೇ ಸಮನೆ ಪರಿತಪಸ್ತಿದ್ರು. ಬೀಗರು ಗುಡಿಗೆ ಹೋಗೂನಂತ ಕರದಾಗ ಇಲ್ಲ ಅನ್ನಾಕ ಆಗಲ್ದೆ, ಹೋಗಿ ಬಂದು ಪಡಬಾರದ ತ್ರಾಸು ಪಟ್ಟಿದ್ದು ಹೇಳ್ತಿದ್ರು. ಅತ್ತಾಗ ಕರಕೊಂಡು ಹೋದೋರಿಗೂ ಅಷ್ಟೇ ಮುಜುಗರ ಆಗಿತ್ತು. ಯಾಕರೆ ಕರದ್ವಿ.. ಪಾಪ, ಕರೀಲಿಕ್ರ ಅರಾಮಿರ್ತಿದ್ರೊ ಏನೊ ಅಂತ. ಇರಲಿ.. ಮಾಮಿ ಮನಿ ವಿಷಯ ಒಂದ್ಕಡೆ ಇರಲಿ.

ಖರೇನೆ ಇಲ್ಲ ಅನ್ನೂದು ಅಷ್ಟು ತ್ರಾಸಿನ ಕೆಲಸೇನು? ಇಂಥದ್ದೊಂದು ಪ್ರಶ್ನೆಯನ್ನು ಲಂಡನ್ನಿನ ಮಾನಸಿಕ ಸ್ವಾಸ್ಥ್ಯ ಕೇಂದ್ರದವರು ಒಂದು ಸಮೀಕ್ಷೆ ಮಾಡಿದರು. ಅದರೊಳಗ ಬಹುತೇಕರು ಇಲ್ಲ ಅನ್ನೂದು ಅಷ್ಟು ಸರಳ ಅಲ್ಲ. ನಿರಾಕರಣೆ ಅನ್ನೂದು ಯಾವತ್ತಿದ್ದರೂ ಅಡಕತ್ತರಿಯ ವಿಷಯ ಅಂತ ಹೇಳಿದ್ರಂತ.

ಹೌದು. ಖರೇನೆ ಇಲ್ಲ ಅನ್ನೂದು ಅಷ್ಟು ಸುಲಭ ಅಲ್ಲ. ಆದ್ರ ನಾವು ಪ್ರತಿಸಲೆನೂ ಭಿಡೆಕ ಬಿದ್ದು, ದಾಕ್ಷಿಣ್ಯಕ್ಕ ಒಳಗಾಗಿ ಒಲ್ಲೆಯಾಗಿದ್ದನ್ನೂ ಮಾಡಿದ್ರ, ಎರಡೂ ಕಡೆ ಸಮಾಧಾನ ಇರೂದಿಲ್ಲ. ಆ ಸತ್ಯ ಅರ್ಥ ಆದ್ರ ಇಲ್ಲ ಅನ್ನೂದು ಸರಳ ಆಗ್ತದ.

ಹಂಗಾರ ಇಲ್ಲ ಅನ್ನೂದು ಹೆಂಗ? ಇದನ್ನ ಅರ್ಥ ಮಾಡ್ಕೊಳ್ಳುವ ಮೊದಲು, ಇಲ್ಲ ಅನ್ನೂದು ಯಾವ ಪ್ರಸಂಗದೊಳಗ ಕಷ್ಟ ಅನ್ನುದು ಪಟ್ಟಿ ಮಾಡೂನು.

* ಅಗ್ದಿ ಹತ್ತರದವರು ಊಟಕ್ಕ ಕರೀತಾರ. ಹೊಟ್ಟಿ ತುಂಬಿ ಗಂಟಲಕ್ಕ ಬಂದಿರ್ತದ. ಬಟ್ಟು ಹಾಕಿದ್ರ ತಾಕೂವಷ್ಟು ತುಂಬಿರ್ತದ. ಆದರೂ... ಇಲ್ಲ ಅನ್ನಲಾರೆವು.

* ಬೀಗರು, ಪ್ರವಾಸಕ್ಕ ಕರೀತಾರ. ನಮಗ ಎತ್ತರ ಅಂದ್ರ ಆಗೂದಿಲ್ಲ. ಬೆಟ್ಟದ ಮ್ಯಾಲಿನ ಗುಡಿ ಅವರ ಮನಿ ದೇವರು. ಹೋಗಾಕರೆ ಮನಸಿಲ್ಲ.. ಬಿಡಾಕೂ ಬರೂದಿಲ್ಲ.

* ಆಫೀಸಿನಲ್ಲಿ ರಜೆ ಕೇಳಬೇಕಿದೆ. ಈಗಾಗಲೇ ಹಲವರು ರಜೆ ಇರುವುದರಿಂದ ನಿಮ್ಮ ರಜೆಯನ್ನು ತ್ಯಾಗ ಮಾಡುವ ಪ್ರಸಂಗ ಬರಬಹುದು.

*ನಿಮ್ಮೊಂದಿಗೆ ಆತ್ಮೀಯರಾಗಿ ಇರುವವರು ಮದುವೆಯ ಪ್ರಸ್ತಾಪವಿರಿಸುತ್ತಾರೆ. ಸ್ನೇಹದಿಂದ ದಾಂಪತ್ಯದ ಬಾಂಧವ್ಯಕ್ಕೆ ಹೋಗಲು ಮನಸಿರುವುದಿಲ್ಲ. ಆದರೂ...

* ಕಚೇರಿಯಲ್ಲಿ ಸಹೋದ್ಯೋಗಿಗಳು ಒಗ್ಗೂಡಿ ಊಟಕ್ಕೆ ಹೊರಟಿದ್ದಾರೆ. ಹೋಗುವ ಮನಸಿರುವುದಿಲ್ಲ. ಆದರೆ...

ಇಂಥ ಪ್ರಸಂಗಗಳಲ್ಲಿ ಇಲ್ಲ ಎನ್ನುವುದು ಹೆಚ್ಚೂ ಕಡಿಮೆ ಅಸಾಧ್ಯವಾಗಿರುತ್ತದೆ. ಆದರೆ ಇಲ್ಲ ಅನ್ನುವುದೂ ಅನಿವಾರ್ಯವೂ. ಅಂಥ ಸಂದರ್ಭಗಳಲ್ಲಿ ಒಮ್ಮೆ ವಿವೇಚನೆಯಿಂದ ವರ್ತಿಸಿ. ತೀರ ಇಲ್ಲವೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ನಿರಾಕರಿಸುವುದು ಕಷ್ಟವೆನಿಸಬಹುದು. ಆದರೆ ಬೆಣ್ಣೆಯಿಂದ ಕೂದಲು ತೆಗೆದಂತೆ ನಾಜೂಕಾಗಿ, ಮುಳ್ಳೀನ ಮೇಲಿಂದ ಹೊಸತೊಂದು ದುಪ್ಪಟ್ಟ ಬಿದ್ದಾಗ, ಬಿಡಿಸಿಕೊಂಡಂತೆ ನಿಧಾನವಾಗಿ ಬಿಡಿಸಿಕೊಳ್ಳುವುದು ಜಾಣ್ಮೆಯ ಕೆಲಸವಾಗಿದೆ.

* ಊಟಕ್ಕ ಕರದಾಗ, ಇವೆಲ್ಲ ಸವುಡಿದ್ದಾಗ, ಅರಾಮಗೆ ಕುಂತು ಅನುಭವಿಸ್ಕೊಂತ, ಆನಂದಿಸ್ಕೊಂತ ಉಣ್ಣಬೇಕು ನೋಡ್ರಿ. ಆವಾಗ ಮಜಾ ಬರೂದು. ನನಗೀಗ ಹೊಟ್ಟಿ ತುಂಬೇದ. ಇನ್ನೊಮ್ಮೆ ನಿವಾಂತ ಕುಂತು ಉಣ್ಣೂನಂತ. ಬೇಕನಿಸಿದಾಗ ನಾನೇ ಕೇಳ್ತೇನಿ. ಒಟ್ಗೆ ಮಾಡೂನಂತ.

* ನೀವು ಕರೆದಿದ್ದು ಸಂತೋಷವಾಯಿತು. ನನಗೂ ಬರಲು ಇಷ್ಟವೇ. ಆದರೆ, ಈ ನಡುವೆ ಪ್ರವಾಸವನ್ನು ಮುಂದೂಡುತ್ತಿದ್ದೇನೆ. ಆರೋಗ್ಯದ ಸಮಸ್ಯೆಗಳಿಂದಾಗಿ ನಾನು ಬರಲಿಕ್ಕಾಗುವುದಿಲ್ಲ. ನಿಮ್ಮೊಟ್ಟಿಗೆ ಮತ್ತ ಎಲ್ಲರೆ ಬಂದ ಬರ್ತೇನಿ. ಇದೇ ಕೊನೀದೇನಲ್ಲಲ್ಲ. ಮುಂದಿನಸಲ ಒಗ್ಗೂಡಿ ಕುಟುಂಬದ ಪ್ರವಾಸಕ್ಕ ಮುದ್ದಾಂ ಹೋಗೂಣಂತ. ಈ ಸಲ ನೀವು ಹೋಗಿಬರ್ರಿ ಎಂದರೆ ನಯವಾಗಿ ನಿರಾಕರಿಸಿದಂತಾಯಿತು.

* ಈ ಸಂದರ್ಭದಲ್ಲಿ ನಾನು ರಜೆ ಬೇಡವೆಂದು ಹೇಳಬಹುದಾಗಿತ್ತು. ಆದರೆ ಅನಿವಾರ್ಯ ಆಗಿರುವುದರಿಂದ ಹಾಕಿರುವೆ. ಮುಂದೆ ಯಾವತ್ತಾದರೂ ಅನಿವಾರ್ಯವಿದ್ದಾಗ ರಜೆ ಮುಂದೂಡುವೆ. ಸದ್ಯಕ್ಕೆ ಇದು ಅತಗತ್ಯವಾಗಿದೆ. ತೀರ ಅನಿವಾರ್ಯವಾಗಿರುವುದರಿಂದ, ಈ ಸಲ ನನ್ನನ್ನು ಕ್ಷಮಿಸಿ.

* ನಿಮ್ಮೊಟ್ಟಿಗೆ ನಾನು ಸ್ನೇಹದ ವಲಯದಲ್ಲಿ ನಿಜವಾಗಿಯೂ ಖುಷಿಯಿಂದಿರುವೆ. ಈ ಸ್ನೇಹವಲಯವನ್ನು ದಾಂಪತ್ಯಕ್ಕೆ ಬದಲಿಸಿದರೆ ಹೇಗೆ ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣಗಳಿಲ್ಲ. ಸದ್ಯಕ್ಕೆ ಸಮಯ ಬೇಕು. ಆದರೆ ಈ ಕಾರಣಕ್ಕೆ ಸ್ನೇಹವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಒಂದಷ್ಟು ದಿನ ಮತ್ತೆ ಯೋಚಿಸುವ..

ಹೀಗೆ ನಿರಾಕರಣವನ್ನು ನಾಜೂಕುಗೊಳಿಸಬಹುದು. ಸಹನೀಯಗೊಳಿಸಬಹುದು. ಬಾಂಧವ್ಯ ಅನ್ನುವ ದಾರದೆಳಿಯೊಳಗ ಎಲ್ಲಿಯೂ ಗಂಟು ಮೂಡದ್ಹಂಗ ಇಲ್ಲ ಅನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT