ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘುನಾಥ ಚ.ಹ. ಬರಹ: ಹಬ್ಬಲಿ ‘ಮಾನವ ಗ್ರಂಥಾಲಯ’ ರಸಬಳ್ಳಿ

ಮನಸ್ಸಿನ ಕಾಠಿಣ್ಯ ಮತ್ತು ಧಾರ್ಮಿಕ ಅಸಹನೆಗೆ ‘ಹ್ಯೂಮನ್‌ ಲೈಬ್ರರಿ’ಗಳ ಮದ್ದು
Last Updated 11 ಏಪ್ರಿಲ್ 2022, 20:00 IST
ಅಕ್ಷರ ಗಾತ್ರ

ಸಾರ್ವಜನಿಕ ಸ್ಥಳಗಳಲ್ಲಿ ಪಾನಕ‌ ಪನಿವಾರ ನೀಡಿ ಜನರ ಹೊಟ್ಟೆ ತಣಿಸುವ ‘ರಾಮನವಮಿ’ ಬೆನ್ನಿಗಿಟ್ಟುಕೊಂಡು, ರಾಮನ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ಹೊಟ್ಟೆಗೆ ಕಿಚ್ಚಿಡುವ ಕೆಲವರ ಪ್ರಯತ್ನ ಧಾರವಾಡದಿಂದ ವರದಿಯಾದ ಸಂದರ್ಭದಲ್ಲೇ ಮನುಷ್ಯರನ್ನು ಪುಸ್ತಕ ಗಳಂತೆ ಓದಲು ಅವಕಾಶ ಕಲ್ಪಿಸುವ ಡೆನ್ಮಾರ್ಕ್‌ನಲ್ಲಿನ ‘ಹ್ಯೂಮನ್ ಲೈಬ್ರರಿ’ಗಳ ಕುರಿತ ವಿಡಿಯೊ ಕಣ್ಣಿಗೆ ಬಿತ್ತು.

‘ಹ್ಯೂಮನ್ ಲೈಬ್ರರಿ’ಗಳ ಪರಿಕಲ್ಪನೆ ಹೊಸತೇನಲ್ಲ. ಮೊದಲ ‘ಮಾನವ ಗ್ರಂಥಾಲಯ’ ಶುರುವಾದುದು ಡೆನ್ಮಾರ್ಕ್‌ನಲ್ಲಿ, 2000ನೆಯ ಇಸವಿಯಲ್ಲಿ. ಎರಡು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಸುಮಾರು ಎಂಬತ್ತು ದೇಶಗಳಿಗೆ ಹಬ್ಬಿರುವ ‘ಹ್ಯೂಮನ್‌ ಲೈಬ್ರರಿ’ ಪರಿಕಲ್ಪನೆ ಆಂದೋಲನದ ರೂಪ ಪಡೆದುಕೊಂಡಿದೆ. ಭಿನ್ನ ವರ್ಗದ ವ್ಯಕ್ತಿಗಳೊಂದಿಗೆ ಮಾತುಕತೆಗೆ ಅವಕಾಶ ಕಲ್ಪಿಸುವ ಈ ಲೈಬ್ರರಿಗಳು– ಜನ ತಮ್ಮ ಕೀಳರಿಮೆ ಮತ್ತು ಪೂರ್ವಗ್ರಹಗಳನ್ನು ಕಳೆದುಕೊಳ್ಳಲು ನೆರವಾಗುವ ಉದ್ದೇಶ ಹೊಂದಿವೆ. ದೆಹಲಿ, ಮುಂಬೈ, ಹೈದರಾಬಾದ್‌, ಇಂದೋರ್‌ ಮತ್ತು ಚೆನ್ನೈಗಳಲ್ಲಿ ‘ಮಾನವ ಗ್ರಂಥಾಲಯ’ ಗಳಿದ್ದರೂ, ಭಾರತದಲ್ಲಿನ್ನೂ ಈ ಪರಿಕಲ್ಪನೆ ಅಷ್ಟಾಗಿ ಜನಪ್ರಿಯಗೊಂಡಿಲ್ಲ.

ಡೆನ್ಮಾರ್ಕ್‌ನ ಮೊದಲ ‘ಹ್ಯೂಮನ್‌ ಲೈಬ್ರರಿ’ಯ ರೂವಾರಿಗಳು, ಡ್ಯಾನಿಶ್‌ ಯುವಜನ ಹಿಂಸಾಕೃತ್ಯಗಳಲ್ಲಿ ತೊಡಗುವುದನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಘಟನೆಯೊಂದರಲ್ಲಿ ಕೆಲಸ ಮಾಡುತ್ತಿ ದ್ದವರು. ಅಂದರೆ, ಈ ವಿಶಿಷ್ಟ ಲೈಬ್ರರಿಗಳಿಗೆ ಮನುಷ್ಯನೊಳಗಿನ ಹಿಂಸೆಯನ್ನು ಶಮನಗೊಳಿಸುವ ಆಶಯವಿದೆ. ಕರ್ನಾಟಕಕ್ಕೆ ತುರ್ತಾಗಿ ಬೇಕಿರುವುದು ಇಂಥ ಲೈಬ್ರರಿ ಗಳೇ. ಪುಸ್ತಕಾಲಯಗಳಂತೆಯೇ ‘ಮಾನವ ಗ್ರಂಥಾಲಯ’ ಗಳ ಚಳವಳಿ ಆರಂಭಗೊಳ್ಳಬೇಕಿದೆ. ಪುಸ್ತಕಗಳನ್ನು ಓದುವುದೆಂದರೆ ಮನುಷ್ಯರನ್ನು ಓದಿದಂತೆಯೇ ಎನ್ನುವ ಮಾತು ತಾತ್ವಿಕವಾಗಿ ಸರಿ. ಆದರೆ, ಇಬ್ಬರು ವ್ಯಕ್ತಿಗಳು ಎದುರಾಬದುರಾಗಿ ಕೂತು ಮನಸ್ಸು ಬಿಚ್ಚಿ ಮಾತನಾಡುವುದಿದೆಯಲ್ಲ– ಆ ಓದಿನಷ್ಟು ಪರಿಣಾಮಕಾರಿಯಾದುದು ಮತ್ತೊಂದಿಲ್ಲ. ಹೀಗೆ ಮನುಷ್ಯರನ್ನು ಓದುವ ಅವಕಾಶಗಳು ಸೀಮಿತವಾಗಿರುವುದಕ್ಕೂ ಧಾರವಾಡದಲ್ಲಿ ಕಲ್ಲಂಗಡಿಗಳನ್ನು ಚೆಂಡಾಡಿದಂಥ ಘಟನೆಗಳು ಹೆಚ್ಚುವುದಕ್ಕೂ ಸಂಬಂಧ ಇರುವಂತಿದೆ.

ಮನುಷ್ಯರನ್ನು ಓದುವುದು ಭಾರತೀಯ ಸಮಾಜಕ್ಕೆ ಹೊಸತೇನಲ್ಲ. ಸಮಾಜದೊಂದಿಗೆ ಒಡನಾಡುವುದು ಮನುಷ್ಯರನ್ನು ಓದುವ ಕ್ರಿಯೆಯೇ. ‘ದೇಶ ಸುತ್ತು ಕೋಶ ಓದು’ ಎನ್ನುವ ಮಾತಿನಲ್ಲಿನ ಸುತ್ತಾಟ ಸೂಚಿಸುವುದು ಮನುಷ್ಯರನ್ನು ಓದುವ, ಅರ್ಥಾತ್ ಅರಿಯುವ ಕ್ರಿಯೆಯನ್ನೇ. ಸಮೂಹ–ಸಮಾಜವನ್ನು ನಿಕಟವಾಗಿ ಅರಿಯುವ ಉದ್ದೇಶದಿಂದಲೇ ರಾಜರುಗಳು ಆಗಾಗ ತಂತಮ್ಮ ದಂತಗೋಪುರಗಳಿಂದ ಹೊರಬಂದು, ವೇಷ ಮರೆಸಿಕೊಂಡು ಊರು ಸುತ್ತುತ್ತಿದ್ದರು. ರಾಜನಾಗಿದ್ದಾಗ ಅರಿವಿಗೆ ಬಾರದ ಜನರ ಮನಸ್ಸು, ಅವರೊಳಗೆ
ಒಬ್ಬನಾದಾಗಷ್ಟೇ ತೆರೆದುಕೊಳ್ಳುವುದೆನ್ನುವ ಸತ್ಯ ಅರಿತ ರಾಜರಷ್ಟೇ ಜನಪರ ಆಡಳಿತ ನಡೆಸಲು ಸಾಧ್ಯವಾಗಿದೆ. ಇಂದಿನ ರಾಜಕಾರಣಿಗಳು ಜನಸಾಮಾನ್ಯರಿಂದ ದೂರವಾಗಿರುವುದಕ್ಕೂ ಆಡಳಿತ ಭ್ರಷ್ಟವಾಗಿರುವುದಕ್ಕೂ ಸಂಬಂಧವಿದೆ. ಅಧಿಕಾರಿಗಳು ಹಾಗೂ ಹಿಂಬಾಲಕ ರಿಲ್ಲದ ಜನಪ್ರತಿನಿಧಿಯನ್ನು ಪ್ರಸಕ್ತ ಸಂದರ್ಭದಲ್ಲಿ ಊಹಿಸಿಕೊಳ್ಳಲು ಸಾಧ್ಯವಿದೆಯೇ?

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಗಾಂಧೀಜಿ, ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗುವ ಮುನ್ನ ಒಂದು ವರ್ಷ ಕಾಲ ದೇಶ ಸಂಚಾರ ಕೈಗೊಂಡಿದ್ದರು. ಆ ಪರ್ಯಟನೆಯ ಮೂಲಕ ಜನರ ಮನಸ್ಸನ್ನು ಗಾಂಧಿ ಓದಲಿ ಹಾಗೂ ದೇಶದ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲಿ ಎಂದು ಅವರ ಗುರು ಗೋಪಾಲಕೃಷ್ಣ ಗೋಖಲೆ ಬಯಸಿದ್ದರು. ವಿವಿಧ‌‌ ಹಿನ್ನೆಲೆಯ ಭಾರತೀಯರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ಸಂಘಟಿಸಿದ್ದರ ಹಿನ್ನೆಲೆಯಲ್ಲಿ, ದೇಶಸಂಚಾರದ ಮೂಲಕ ಅವರು ಕಲಿತಿದ್ದ ಪಾಠಗಳ ಪಾತ್ರವೂ ಇದ್ದಿರ ಬಹುದು. ಅದು ಮಹಾತ್ಮರಮಾತಾಯಿತು. ಜನಸಾಮಾನ್ಯರಿಗೆ ಕೂಡ ಪರಸ್ಪರರನ್ನು ಓದುವ ಅವಕಾಶ ಗಳು ಭಾರತೀಯ ದೈನಿಕದಲ್ಲಿದ್ದವು. ಪಡಿತರಕ್ಕಾಗಿ ಹಚ್ಚುತ್ತಿದ್ದ ಪಾಳಿ, ಕೊಡ ನೀರಿಗಾಗಿ ಬಾವಿಕಟ್ಟೆಯೋ ಕೊಳವೆಬಾವಿಯೋ ಕೊಳಾಯಿಯ ಎದುರೋ ಕಾಯುತ್ತಿದ್ದ ಬೆಳಗು ಬೈಗುಗಳು, ಸಾರ್ವಜನಿಕ ಸಾರಿಗೆಯ ನೂಕುನುಗ್ಗಾಟ– ಇಂಥ ಸಂದರ್ಭಗಳೆಲ್ಲ ಮನುಷ್ಯ ಮನುಷ್ಯನನ್ನು ಓದುವ ಅವಕಾಶಗಳಾಗಿದ್ದವು.

ಈಗ ಮನುಷ್ಯರನ್ನು ಓದಲಿಕ್ಕೆ ಇರುವ ಅಡೆತಡೆ ಗಳೇನು? ಈಗಲೂ ಜನ ಒಟ್ಟುಗೂಡುವ ಅವಕಾಶಗಳನ್ನು ದೈನಿಕ ಕಲ್ಪಿಸುತ್ತಿದೆ. ಆದರೆ, ಅಂಥ ಅವಕಾಶ ಗಳನ್ನು ನಮ್ಮ ಹಿರಿಯರಂತೆ ನಾವು ಬಳಸಿಕೊಳ್ಳು ತ್ತಿರುವಂತೆ ಕಾಣಿಸುತ್ತಿಲ್ಲ. ಹತ್ತು ಜನ ಒಂದೆಡೆ ಸೇರಿದ್ದರೂ ಅವರ ನಡುವೆ ಮೊಬೈಲ್ ಫೋನಿನ ಗೋಡೆಯಿರುವ ಸನ್ನಿವೇಶ ಇಂದಿನದು. ಬಸ್ಸು, ರೈಲು, ವಿಮಾನ, ಆಸ್ಪತ್ರೆ– ಎಲ್ಲೆಡೆಯೂ ಜನ ಮೊಬೈಲ್‌ಗಳಲ್ಲಿ ಕಣ್ಣು ನೆಟ್ಟಿರುತ್ತಾರೆಯೇ ವಿನಾ, ಪಕ್ಕದ ವ್ಯಕ್ತಿಯ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಕುಟುಂಬದಲ್ಲಿ ಕೂಡ, ‘ಮನೆಯೊಂದು ಮೂರು ಬಾಗಿಲು’ ಎನ್ನುವ ಮಾತು ನಿಜವಾಗಿರುವುದು ಮೊಬೈಲ್‌ಗಳ ದೆಸೆಯಿಂದಾಗಿಯೇ. ಖಾಸಗಿ ಎನ್ನುವುದರ ತುತ್ತತುದಿಯಲ್ಲಿ ಮನುಷ್ಯನನ್ನು ನಿಲ್ಲಿಸಿರುವ ಮೊಬೈಲ್‌ಗಳು, ಒಬ್ಬೊಬ್ಬರನ್ನೂ ದ್ವೀಪ ಗಳನ್ನಾಗಿಸುತ್ತಿವೆ. ಮನೆಯಲ್ಲಿದ್ದಾಗ ಮಾತಿನಲ್ಲಿ ಹೇಳ ಲಾಗದ ಸಂಗತಿಯೊಂದನ್ನು ವಾಟ್ಸ್‌ಆ್ಯಪ್‌ ಮೂಲಕ ದಾಟಿಸುವುದು ಅನೇಕರಿಗೆ ಸುಲಭವಾಗುತ್ತಿದೆ ಹಾಗೂ ಅಂಥ ಸಂವಹನ ಅಸಹಜವೆನ್ನಿಸುತ್ತಿಲ್ಲ.

ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಬೆರಳ ತುದಿಯಲ್ಲಿ ತೆರೆದುಕೊಳ್ಳುವ ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ‌ ಜಾಲತಾಣಗಳು ಮಾಡುತ್ತಿರುವುದು ಕೂಡ ಜನರನ್ನು ಕಲೆಹಾಕುವ ಕೆಲಸವನ್ನೇ. ಆದರೆ, ಈ ಡಿಜಿಟಲ್ ಹರಟೆಕಟ್ಟೆಗಳ ಮೂಲಕ ಮನಸ್ಸುಗಳನ್ನು ಓದುವುದು ಸಾಧ್ಯವಾಗುತ್ತಿಲ್ಲ. ಹೊಸಗಾಲದ ಈ ಹರಟೆಕಟ್ಟೆಗಳು ಮನಸ್ಸುಗಳನ್ನು ಸ್ಪರ್ಶಿಸುವ ಬದಲು ಗಾಸಿಗೊಳಿಸುವ ಕೆಲಸಕ್ಕೇ ಹೆಚ್ಚು ಬಳಕೆಯಾಗುತ್ತಿವೆ. ಮನುಷ್ಯ ಮನುಷ್ಯನ ನಡುವಣ ಹೃದಯಸಂವಾದ ಪ್ರಕೃತಿಯ ಸಹಜ ಬೆಳಕಿನಲ್ಲಿ ಸಾಧ್ಯವಾದಂತೆ, ಡಿಜಿಟಲ್‌ನ ಕೃತಕ ಪ್ರಭೆಯಲ್ಲಿ ಸಾಧ್ಯವಾಗದು. ಮೊಬೈಲ್‌ ಹಾಗೂ ಟಿ.ವಿ.ಗಳಿಂದಾಗಿ ಮನೆಯ ಚೌಕಟ್ಟಿನಲ್ಲಿಯೂ ಒಟ್ಟಿಗೆ ಕೂತು ಉಣ್ಣುವುದು ಹಾಗೂ ಪಡಸಾಲೆಯಲ್ಲಿ ಹರಟೆ ಕೊಚ್ಚುವುದು ಕಡಿಮೆಯಾಗುತ್ತಿದೆ. ಈ ಅಂತರವು ಅಂತ ರಂಗದ ಆರ್ದ್ರತೆ ತೆಳುವಾಗಲು ಕಾರಣಗಳಲ್ಲೊಂದಾಗಿ, ಅದರ ಪರಿಣಾಮದಿಂದಾಗಿ ವ್ಯಕ್ತಿ ವ್ಯಕ್ತಿಯ ನಡುವಣ ಸಂಬಂಧ ವಿಷಮಿಸಬಹುದು; ಸಾಮಾಜಿಕ ಅಸಹನೆ ರೂಪುಗೊಳ್ಳಬಹುದು.

ನಾಡಿನ ವಿವಿಧ ಭಾಗಗಳಲ್ಲಿ ಧರ್ಮದ ಹೆಸರಿನಲ್ಲಿ ಕೆಲವರು ಎಸಗುತ್ತಿರುವ ಅಧರ್ಮದ ಕೆಲಸಗಳ ಹಿಂದೆಯೂ ‘ಮನುಷ್ಯರ ಓದುವಿಕೆ’ಯ ಕೊರತೆ ಇರು ವಂತಿದೆ. ಧಾರ್ಮಿಕ ಅಸಹನೆಯನ್ನು ಬಿತ್ತುತ್ತಿರುವ ವ್ಯಕ್ತಿಗಳನ್ನು ಗಮನಿಸಿದರೆ, ಅವರಿಗೆ ಭಾರತೀಯ ಸಮಾಜದ ಸಂರಚನೆಯ ಪರಿಚಯವೇ ಸರಿಯಾಗಿ ಇರುವಂತಿಲ್ಲ. ಕಲ್ಲಂಗಡಿ ಹಣ್ಣುಗಳನ್ನು ಮಣ್ಣುಪಾಲು ಮಾಡಿದ ಪುಂಡರಿಗೆ ಅವರ ಕೆಲಸ, ಮೊಬೈಲ್‌ ಫೋನ್‌ನಲ್ಲಿ ಯಾವುದೋ ‘ಹೊಡಿ ಬಡಿ’ ಗೇಮ್‌ ಆಡಿದಂತೆ ಭಾಸವಾಗಿದ್ದರೆ ಆಶ್ಚರ್ಯವೇನೂ ಇಲ್ಲ. ಕಾಲಾಳುಗಳ ಮಾತು ಬಿಡಿ, ಅವರನ್ನು ಮಾತಿನ ತುದಿಯಲ್ಲಿ ಕುಣಿಸುತ್ತಿರುವ ಧರ್ಮ ಹಾಗೂ ರಾಜಕೀಯ ನಾಯಕರಿದ್ದಾರಲ್ಲ– ಸಮಾಜಕ್ಕೆ ನಿಜವಾದ ಆತಂಕ ಇರುವುದು ಅವರಿಂದಲೇ. ಅಧಿಕಾರ ಸಾಧನೆಗಾಗಿ ಏನನ್ನು ಮಾಡಲೂ ಹಿಂಜರಿಯದ ಈ ಮು‘ಖಂಡ’ರನ್ನು ಓದುವುದು ಜನಸಾಮಾನ್ಯರಿಗೆ ಎಲ್ಲಿಯವರೆಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಮನುಷ್ಯ ಮನುಷ್ಯ ನನ್ನು ಕೊಂದುಕೊಳ್ಳುವ ಪ್ರಯತ್ನಗಳಿಗೆ ಕೊನೆಯಿಲ್ಲ.

ನಾವೀಗ ಬದುಕುತ್ತಿರುವುದು ರಿಯಾಲಿಟಿ ಷೋಗಳ ಕಾಲಘಟ್ಟ. ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳನ್ನು ಸುಮಾರು ಮೂರು ತಿಂಗಳ ಕಾಲ ಮನೆಯೊಂದರಲ್ಲಿ ಕೂಡುವ ‘ಬಿಗ್‌ ಬಾಸ್’ ರಿಯಾಲಿಟಿ ಷೋ ಕೂಡ ‘ಹ್ಯೂಮನ್‌ ಲೈಬ್ರರಿ’ಯೇ. ಬಾಯಿ ತೆರೆದರೆ ಧರ್ಮದ ಹೆಸರಿನಲ್ಲಿ ವಿಷವನ್ನೇ ಕಾರುವ ಶಾಸಕರು, ಸಂಸದರು, ಸಚಿವರು, ಮಠಾಧೀಶರು ಹಾಗೂ ಧಾರ್ಮಿಕ ಸಂಘಟನೆಗಳ ವೀರರೊಂದಿಗೆ ಹಿಜಾಬ್ ಸೋದರಿಯರನ್ನೂ ಹಲಾಲ್ ಸಹೋದರರನ್ನೂ ಬಡ ಮುಸ್ಲಿಂ ವ್ಯಾಪಾರಿಗಳನ್ನೂ ಒಂದಷ್ಟು ಕಾಲ ಮನೆಯೊಂದರಲ್ಲಿ ಕೂಡಿ ‘ಬಿಗ್‌ ಬಾಸ್’ ನಡೆಸುವಂತಾದರೆ‌ ಹೇಗೆ? ಮನೆಯಿಂದ ಹೊರಬಂದಾಗ, ಈ ನಾಯಕರ ಮಾತು– ಕೃತಿಯಲ್ಲಿ ಏನಾದರೂ ಬದಲಾವಣೆ ಕಾಣಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT