ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಗೆದ್ದರೆ ಹತ್ತಾರು ಸರ್ವಾಧಿಕಾರಿಗಳ ಹುಟ್ಟು!

ಇನ್ನಷ್ಟು ಆಕ್ರಮಣಗಳಿಗೆ ಉತ್ತೇಜನ: ಶಸ್ತ್ರಾಸ್ತ್ರ ಸಂಗ್ರಹ, ರಕ್ಷಣಾ ವೆಚ್ಚಗಳಲ್ಲಿ ಭಾರಿ ಏರಿಕೆ ಸಾಧ್ಯತೆ
Last Updated 14 ಮಾರ್ಚ್ 2022, 12:19 IST
ಅಕ್ಷರ ಗಾತ್ರ

ಉಕ್ರೇನ್ ಬಿಕ್ಕಟ್ಟು ಅನೇಕ ಮಹತ್ವಾಕಾಂಕ್ಷೆಯ ರಾಷ್ಟ್ರಗಳು ತಮ್ಮ ನೆರೆಹೊರೆಯ ಮತ್ತು ಸಣ್ಣ ದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಉತ್ತೇಜಿಸಬಹುದು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಕ್ಕೂ ಆದ್ಯತೆ ನೀಡಬಹುದು ಎಂದು ಈ ಯುದ್ಧವನ್ನು ಗಮನಿಸುತ್ತಿರುವ ಮಿಲಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ಈ ಮೊದಲು ತೈವಾನ್ ಮೇಲೆ ದಾಳಿ ಮಾಡಿದೆ. ಡ್ರ್ಯಾಗನ್ (ಚೀನಾದ ಸೇನೆ) ಈಗ ಪಾಕಿಸ್ತಾನವನ್ನು ಬಹಿರಂಗವಾಗಿಯೇ ಶಸ್ತ್ರಸಜ್ಜಿತಗೊಳಿಸುತ್ತಿರುವುದರಿಂದ ಚೀನಾ-ಭಾರತದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಇನ್ನೊಂದು ಬದಿಯಲ್ಲಿ ಏಜಿಯನ್ ಸಮುದ್ರದಲ್ಲಿ ಟರ್ಕಿಯು ಸೈಪ್ರಸ್ ಮತ್ತು ಗ್ರೀಸ್‌ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ. ಆಕ್ರಮಣಕಾರರು ಮತ್ತು ರಕ್ಷಕರ ನಡುವೆ ಜಗತ್ತು ಹಂಚಿ ಹೋಗುತ್ತದೆ. ಈ ಮೇಲೆ ಸೂಚಿಸಲಾದ ಸನ್ನಿವೇಶಗಳು ಈಗ ಕೇವಲ ಕಾಲ್ಪನಿಕವಾಗಿವೆ . ಆದರೆ ಉಕ್ರೇನ್ ಮೇಲೆ ರಷ್ಯಾವು ಪಾರಮ್ಯ ಸಾಧಿಸಿದ್ದೇ ಆದಲ್ಲಿ, ಇವೆಲ್ಲವೂ ನಿಜವಾಗುವ ದಿನಗಳು ದೂರವಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಯೋಜನೆಯಲ್ಲಿ ಯಶಸ್ವಿಯಾದರೆ ಜಗತ್ತು ಇಂತಹ ಇನ್ನಷ್ಟು ಆಕ್ರಮಣಗಳನ್ನು ನೋಡುತ್ತದೆ ಎಂದು ಇಸ್ರೇಲ್ ಮಿಲಿಟರಿ ತಜ್ಞ ಯುವಲ್ ನೋಹ್ ಹರಾರಿ ಹೇಳಿದ್ದಾರೆ.

'ಎರಡನೇ ವಿಶ್ವ ಮಹಾಯುದ್ಧವು ಕೊನೆಗೊಂಡ ವರ್ಷವಾದ 1945ರಿಂದ, ಒಂದು ದೇಶವು ದುರ್ಬಲ ರಾಷ್ಟ್ರದ ಮೇಲೆ ಆಕ್ರಮಣ ಮಾಡುವುದು ಮತ್ತು ಅದನ್ನು ಅಳಿಸಿಹಾಕುವುದು ಸ್ವೀಕಾರಾರ್ಹವಲ್ಲ. ಆದರೆ, ಪುಟಿನ್ ಅದನ್ನೇ ಮಾಡುತ್ತಿದ್ದಾರೆ. ಅವರು ಇದರಲ್ಲಿ ಯಶಸ್ವಿಯಾದರೆ, ಜಗತ್ತಿನ ಹಲವು ದೇಶಗಳಲ್ಲಿರುವ ನಿರಂಕುಶಾಧಿಕಾರಿಗಳು ಇದನ್ನು ಗಮನಿಸಿ ತಾವೂ ಅಂತಹ ಪ್ರಯತ್ನಗಳಿಗೆ ಮುಂದಾಗುವ ಸಾಧ್ಯತೆ ಇರುತ್ತದೆ. ಈ ಮೂಲಕ ಇತಿಹಾಸದಲ್ಲಿ ಮತ್ತೊಂದು ಕರಾಳ ಯುಗವನ್ನು ನಾವು ಪ್ರವೇಶಿಸುವ ಸಾಧ್ಯತೆಯಿದೆ' ಎಂದು ಅವರು ಹೇಳಿದರು.

ಪ್ರಸ್ತುತ ಪ್ರತಿ ರಾಷ್ಟ್ರವೂ ತನ್ನ ಬಜೆಟ್‌ನ 6 ಪ್ರತಿಶತ ಮೊತ್ತವನ್ನು ಮಿಲಿಟರಿ ವೆಚ್ಚಕ್ಕಾಗಿ ಮೀಸಲಿಟ್ಟಿದೆ. ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೆಚ್ಚಿನ ವೆಚ್ಚಗಳನ್ನು ಮಾಡುತ್ತಿದೆ. 'ಪುಟಿನ್ ಅವರು ಉಕ್ರೇನ್ ಮೇಲೆ ವಿಜಯ ಸಾಧಿಸಿದರೆ, ಇಡೀ ಜಗತ್ತಿನಲ್ಲಿ ರಕ್ಷಣಾ ಬಜೆಟ್ ಗಗನಕ್ಕೇರುತ್ತದೆ'. ಇದರ ಸೂಚನೆಗಳು ಈಗಾಗಲೇ ಲಭಿಸಿವೆ.

ಜರ್ಮನಿ ಒಂದೇ ದಿನದಲ್ಲಿ ತನ್ನ ಮಿಲಿಟರಿ ಬಜೆಟ್ ಅನ್ನು ದ್ವಿಗುಣಗೊಳಿಸಿದೆ. ಶಿಕ್ಷಕರು ಮತ್ತು ವೈದ್ಯರಿಗಾಗಿ ವ್ಯಯಿಸಬೇಕಿದ್ದ ಹಣ ಈಗ ಟ್ಯಾಂಕ್‌ಗಳು ಮತ್ತು ಯುದ್ಧ ವಿಮಾನಗಳಿಗೆ ಹೋಗುತ್ತಿದೆ. ಹವಾಮಾನ ಬದಲಾವಣೆಯಂತಹ ಮಾನವಕುಲಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕೃತಕ ಬುದ್ಧಿಮತ್ತೆಯ ಏರಿಕೆಯು ಹಿನ್ನೆಲೆಗೆ ಸರಿಯುತ್ತಿವೆ.

ರಷ್ಯಾ ದಾಳಿ ಮಾಡಿದ 24 ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಡೊಡಿಮಿರ್ ಝೆಲೆನ್‌ಸ್ಕಿ, ತಮ್ಮ ದೇಶವನ್ನು ತ್ಯಜಿಸಿ ಓಡಿಹೋಗುತ್ತಾರೆ, ಉಕ್ರೇನ್ ಸೈನ್ಯವು ಶರಣಾಗುತ್ತದೆ ಮತ್ತು ಜನರು ರಷ್ಯಾದ ಟ್ಯಾಂಕ್‌ಗಳ ಮೇಲೆ ಹೂಮಳೆ ಸುರಿಸುತ್ತಾರೆ ಎಂಬುದು ಅವರ ಊಹೆಯಾಗಿತ್ತು. ಆದರೆ, ಯುದ್ಧಕ್ಕೆ ಅಂಜಿ ಝೆಲೆನ್‌ಸ್ಕಿ ಓಡಿಹೋಗಲಿಲ್ಲ. 17 ದಿನಗಳ ಯುದ್ಧದ ಬಳಿಕವೂ ಉಕ್ರೇನ್ ಸೇನೆ ಕೆಚ್ಚೆದೆಯಿಂದ ಹೋರಾಡುತ್ತಿದೆ. ಜನರು ರಷ್ಯಾದ ಟ್ಯಾಂಕ್‌ಗಳ ಮೇಲೆ ಮೊಲೊಟೊವ್ ಕಾಕ್‌ಟೇಲ್‌ (ಪೆಟ್ರೋಲ್ ಬಾಂಬ್‌)ಗಳನ್ನು ಎಸೆಯುತ್ತಿದ್ದಾರೆ. ಪುಟಿನ್ ದೇಶವನ್ನು ವಶಪಡಿಸಿಕೊಳ್ಳಬಹುದು, ಆದರೆ ಅದನ್ನು ಅಧೀನದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವೆ ದ್ವೇಷವಿರುತ್ತದೆ, ಅದು ತಲೆಮಾರುಗಳವರೆಗೆ ಸಾಗುತ್ತದೆ.

ಗಮನಿಸಬೇಕಾದ ಅಂಶವೆಂದರೆ, ರಷ್ಯಾ ದೊಡ್ಡ ದೇಶವಾಗಿದ್ದರೂ ಅದರ ಆರ್ಥಿಕತೆಯು ಇಟಲಿ ಅಥವಾ ದಕ್ಷಿಣ ಕೊರಿಯಾದ ಆರ್ಥಿಕತೆಗಿಂತ ಚಿಕ್ಕದಾಗಿದೆ. ಇದರ ಜಿಡಿಪಿ 1.6 ಟ್ರಿಲಿಯನ್ ಡಾಲರ್ ಆಗಿದೆ. ಯುರೋಪಿನ ಒಟ್ಟು ಜಿಡಿಪಿ 20 ಟ್ರಿಲಿಯನ್‌ ಡಾಲರ್‌ಗಿಂತ ಜಾಸ್ತಿ ಇದೆ. ರಷ್ಯಾ ವಿರುದ್ಧ ಯುರೋಪ್ ಮತ್ತು ಜಗತ್ತಿನ ಉಳಿದ ರಾಷ್ಟ್ರಗಳು ಒಂದಾದರೆ, ಪುಟಿನ್ ಗೆಲ್ಲುವ ಸಾಧ್ಯತೆ ಇಲ್ಲ.

ರಷ್ಯಾದ ಆರ್ಥಿಕತೆಯು ಕೇವಲ ಅನಿಲ ಮತ್ತು ತೈಲದ ಮೇಲೆ ನಿಂತಿದೆ ಎಂಬುದನ್ನು ಬಹುತೇಕ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಣುಬಾಂಬ್‌ಗಳನ್ನು ಹೊಂದಿರುವ 'ಗ್ಯಾಸ್ ಸ್ಟೇಷನ್' (ರಷ್ಯಾವನ್ನು ಪಾಶ್ಚಿಮಾತ್ಯರು ಹಾಗೆಂದು ಕರೆಯುತ್ತಾರೆ) ಜತೆಗೆ ವ್ಯವಹಾರ ನಿಲ್ಲಿಸಿ, ತೈಲ ಮತ್ತು ಅನಿಲವನ್ನು ಪರ್ಯಾಯ ಶಕ್ತಿಯೊಂದಿಗೆ ಬದಲಿಸಲು ಹಸಿರು ಮ್ಯಾನ್‌ಹಾಟನ್ ಯೋಜನೆಯನ್ನು ರಚಿಸಿದರೆ, ಪುಟಿನ್ ಆಡಳಿತವು ಖಂಡಿತವಾಗಿಯೂ ಕುಸಿಯುತ್ತದೆ.

ಆದರೆ, ಪುಟಿನ್ ತನ್ನ ಮಹತ್ವಾಕಾಂಕ್ಷೆಯನ್ನು ಸಾಧಿಸಿಕೊಳ್ಳುವುದಕ್ಕಾಗಿ ರಷ್ಯಾ ಸೇರಿದಂತೆ ಜಗತ್ತಿನ ಲಕ್ಷಾಂತರ ಜನರನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಈ ಯುದ್ಧ ಪ್ರಾರಂಭವಾದಾಗ ಯಾರೂ ರಷ್ಯಾಕ್ಕೆ ಬೆದರಿಕೆ ಹಾಕಲಿಲ್ಲ. ರಷ್ಯಾ ಕಳವಳ ವ್ಯಕ್ತಪಡಿಸಿದ್ದರೆ ಶಾಂತಿ ನೆಲೆಸುತ್ತಿತ್ತು ಎಂದು ಇಸ್ರೇಲ್‌ನ ಇತಿಹಾಸ ತಜ್ಞ ಯುವಲ್ ನೋಹ್ ಹರಾರಿ ಹೇಳಿದ್ದಾರೆ.

ಪುಟಿನ್ ಮತ್ತು ಹಿಟ್ಲರ್ ನಡುವೆಯೂ ಅನೇಕ ವ್ಯತ್ಯಾಸಗಳಿವೆ. ಆದರೆ, ಒಬ್ಬ ವ್ಯಕ್ತಿಯು ಇಡೀ ಪ್ರಪಂಚದ ಮೇಲೆ ಭೀಕರ ಯುದ್ಧಕ್ಕೆ ಕಾರಣರಾದ ಅರ್ಥದಲ್ಲಿ, ಅವರು ಹಿಟ್ಲರ್‌ನನ್ನು ಹೋಲುತ್ತಾರೆ. ಇತರ ಎಲ್ಲ ಸರ್ವಾಧಿಕಾರಿಗಳಂತೆ ಅವರೂ ಸುಳ್ಳು ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ ಮತ್ತು ಅವುಗಳನ್ನೇ ಪ್ರಚಾರ ಮಾಡುತ್ತಾರೆ. ಅವರ ಸುತ್ತಲಿರುವ ಯಾರೂ ಅವರನ್ನು ಎದುರು ಹಾಕಿಕೊಳ್ಳುವುದಿಲ್ಲ ಅಥವಾ ವಿರೋಧಿಸುವುದಿಲ್ಲ... ಅವರು ತಮ್ಮ ಕಲ್ಪನೆಗಳನ್ನು ಬಿಚ್ಚಿಟ್ಟಾಗ ಅಥವಾ ಯೋಜನೆಗಳನ್ನು ಹೇಳಿಕೊಂಡಾಗ ಎಲ್ಲರೂ ಅವರು ಹೇಳಿದ್ದಕ್ಕೆ ತಲೆದೂಗುತ್ತಾರೆ ಮತ್ತು ಒಪ್ಪುತ್ತಾರೆ. ಅದರ ಪರಿಣಾಮವೇ ಈ ಯುದ್ಧ.

ಲೇಖಕರು- ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT