ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Independence Day 2022 - ಲೇಖನ| ಸ್ವಾತಂತ್ರ್ಯದ ಅಮೃತ ಮಥನ

Last Updated 13 ಆಗಸ್ಟ್ 2022, 16:30 IST
ಅಕ್ಷರ ಗಾತ್ರ

‘ಸಾವಿರ ಸಾವಿರ ಯುಗಯುಗಗಳು ಕಳೆದರೂ ಸಾಗಿದ ಸಂಗ್ರಾಮ ..ದುರ್ಜನ ಸಜ್ಜನ ಸಂಗ್ರಾಮ.....’

ಎಂಬ ‘ಪಡುವಾರ ಹಳ್ಳಿ ಪಾಂಡವರು’ ಸಿನಿಮಾದ ಹಾಡು, ಸ್ವಾತಂತ್ರ್ಯ ಪದದ ಅಗಾಧತೆಯಮಹಾ ಪ್ರಬಂಧದ ಕುರಿತು ತೆರೆದುಕೊಳ್ಳುತ್ತದೆ.

ಈಗ ಒಂದು ಪ್ರಶ್ನೆಯೊಂದಿಗೆ ಪುಟ್ಟ ಸಂಶೋಧನೆ ಮಾಡೋಣ. ಸ್ವಾತಂತ್ರ್ಯ ಯಾರಿಗಿದೆ?

ಗಂಡನಿಗೆ/ ಹೆಂಡತಿಗೆ/ ಮಗ– ಮಗಳಿಗೆ/ ಮಾಧ್ಯಮಗಳಿಗೆ/ ಉದ್ಯೋಗಿಗಳಿಗೆ... ಯಾರಿಗೆ ಇದೆ ಸ್ವಾತಂತ್ರ್ಯ ಎಂದು ಕೇಳಿದರೆ ಅವರವರ ದೃಷ್ಟಿಯಲ್ಲಿ ಎಲ್ಲರೂ ಇಲ್ಲ ಎಂದೇ ಉತ್ತರಿಸಿಯಾರು.

ಹಾಗಿದ್ದೂ ಈ ಎಲ್ಲದರ ನಡುವೆಯೂ ನಾವು ಸ್ವತಂತ್ರರು. ಸ್ವಾತಂತ್ರ್ಯ ಎಂದರೆ ನೀರಿನ ಹಾಗೆ. ಚಲಿಸುವ ಒಂದು ವ್ಯವಸ್ಥೆಗೆ ಅಂಟಿಕೊಳ್ಳುವ ಅಭಿರುಚಿ. ಸ್ವಾತಂತ್ರ್ಯದ ಪದವನ್ನು ಕನಿಷ್ಠ ಏಳು ಪ್ರಮುಖ ಹಿನ್ನೆಲೆಯಲ್ಲಿ ಅಭಿಪ್ರಾಯ ಮಂಡನೆಗೆ - ಚರ್ಚೆಗೆ ಸಾಧ್ಯವಾದಿತು. ಅವು ಹೀಗಿವೆ.
* ಸ್ವಾತಂತ್ರ್ಯ ಮತ್ತು ಬದುಕು * ಸ್ವಾತಂತ್ರ್ಯ ಮತ್ತು ಜವಾಬ್ದಾರಿ
* ನನ್ನ ದೇಶವೆಂಬ ಪರಿಕಲ್ಪನೆಯಲ್ಲಿ ಸ್ವಾತಂತ್ರ್ಯ * ಜಾಗತಿಕ ಪ್ರಜೆ ಆಗಿ ಸ್ವಾತಂತ್ರ್ಯ
* ಸ್ವಾತಂತ್ರ್ಯ ಮತ್ತು ಕಟ್ಟುಪಾಡುಗಳು * ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ.

ಸ್ವಾತಂತ್ರ್ಯ ಮತ್ತು ಬದುಕು

ಮನುಷ್ಯನ ಬದುಕು ಬದಲಿಸುವ ಕಾಲ. ನನ್ನ ಬಾಲ್ಯದ ಜಗತ್ತು ಬೇರೆ, ಕಲಿಯುವ ದಿನಗಳು ಬೇರೆ, ವೃತ್ತಿಯ ಸ್ವಾತಂತ್ರ್ಯ ಬೇರೆ, ಮದುವೆಯಾದ ನಂತರದ ಮನೆ - ಮನಗಳ ಬದುಕು ಬೇರೆ, ದೂರದಲ್ಲಿದ್ದು ಪರ ಊರಿನ ಸಂಸ್ಕೃತಿ - ಸನ್ನಿವೇಶಗಳನ್ನು ನಾನು ಕಟ್ಟಿಕೊಳ್ಳುವ ಬದುಕು, ಆಯಾಮಗಳು, ಹೊಂದಾಣಿಕೆಗಳು...... ಹೀಗೆ ಬದುಕಿನ ವಿವಿಧ ಕಾಲಘಟ್ಟಗಳ ಬದುಕಿನೊಂದಿಗೆ ಬರುವ ಸ್ಥಳ - ಸನ್ನಿವೇಶಗಳ ಜೊತೆಗೆ ಇದು ಅರ್ಥ ಪಡೆದುಕೊಳ್ಳುತ್ತದೆ. ನಾಯಕತ್ವದ ಗುಣದ ಮತ್ತು ಜನಸಾಮಾನ್ಯರ ವ್ಯಕ್ತಿಗಳಿಗೆ ಅದರ ಅರ್ಥ ವಿಶೇಷಣಗಳು ಬೇರೆ ಬೇರೆಯಾಗಿರುತ್ತದೆ. ಒಂದು ಪುಸ್ತಕ, ವಿಷಯ, ಸಿನಿಮಾ, ಕಥೆ, ಅನುಭವ ಸ್ವಾತಂತ್ರ್ಯದ ಪದದ ಹಿನ್ನೆಲೆಯಲ್ಲಿ ಬದುಕನ್ನು ಬದಲಿಸುತ್ತದೆ.

ಸ್ವಾತಂತ್ರ್ಯ ಮತ್ತು ಜವಾಬ್ದಾರಿ

ಈ ಶಬ್ದ ಕಪ್ಪು - ಬಿಳುಪಿನ ವ್ಯತ್ಯಾಸವಿದ್ದರೂ ಭಾರತದ ಪ್ರಜೆ ಎರಡು ಬಣ್ಣಗಳ ನಡುವಿನ ಬೂದು ಬಣ್ಣವನ್ನೇ ಇಷ್ಟಪಡುತ್ತಾನೆ. ರಾಜಕಾರಣಿ ಆಶ್ವಾಸನೆ ನೀಡುತ್ತಾನೆ; ಜವಾಬ್ದಾರಿ ಮರೆಯುತ್ತಾನೆ. ಮಗ ತಂದೆ ತಾಯಿಯೇ ಸರ್ವಸ್ವ ಎನ್ನುತ್ತಾನೆ; ಅವನೇ ಹೆತ್ತವರಿಗೆ ಆಶ್ರಮವನ್ನು ಹುಡುಕುತ್ತಾನೆ. ಮನೆಯೊಳಗೆ ಸ್ವಚ್ಛ ಇರಿಸಿಕೊಳ್ಳುತ್ತಾನೆ; ಕಸವನ್ನು ತನ್ನದೇ ಮನೆಯ ಹೊರಗೆ ಎಸೆಯುತ್ತಾನೆ. ನಾನು ನಿರ್ಭೀತ ಎನ್ನುತ್ತಾನೆ; ಆದರೆ ವ್ಯವಸ್ಥೆಯೊಳಗೆ ಸುರುಳಿ ಸುತ್ತುತ್ತಾನೆ...... ಪತ್ರಿಕೋದ್ಯಮ, ಮನೆ, ದಾಂಪತ್ಯ, ರಾಜಕಾರಣ, ಪರಿಸರ ಪ್ರಜ್ಞೆ .... ಎಲ್ಲವೂ ಎಲ್ಲೋ ಬಿಳಿ - ಕಪ್ಪುಗಳ ಮಧ್ಯೆ ‘ಸ್ವಾತಂತ್ರ್ಯ’ ನಿಜವಾದ ಬಣ್ಣ ಕಳೆದುಕೊಳ್ಳುತ್ತಿದೆ.....

ನನ್ನ ದೇಶದ ಪರಿಕಲ್ಪನೆ

ದೇಶ ಎನ್ನುವುದೇ ಒಂದು ಮಾಯ ಲೋಕದ ಪರಿಕಲ್ಪನೆ. ಇತಿಹಾಸದಿಂದ ಇದು ತುಂಡು ತುಂಡಾಗಿ ಹರಡಿಕೊಂಡಿರುವ ಪ್ರದೇಶವೇ ಆಗಿಬಿಟ್ಟಿದೆ. ಯುರೋಪ್ ದೇಶಗಳಿಗೆ ಹೋಲಿಸಿದರೆ ರಾಜ್ಯಗಳು ದೇಶವಾದಂತೆ. ಉದಾಹರಣೆಗೆ ಆಫ್ರಿಕಾ, ಅಮೆರಿಕಾ ಖಂಡಗಳಲ್ಲಿ ದೇಶಗಳನ್ನೇ ‘ಸ್ಟೇಟ್‌’ ಎಂದು ಕರೆಯುವುದುಂಟು. ಖಂಡ - ರಾಜ್ಯ - ದೇಶ .... ಸಂಸ್ಕೃತಿ, ಭಾಷೆ, ಉಡುಗೆ- ತೊಡುಗೆ, ನಂಬಿಕೆ, ಆಚಾರ- ವಿಚಾರ ಇವುಗಳ ಸುತ್ತ ‘ದೇಶ’ ಕಲ್ಪನೆ ನಮ್ಮದು ಎಂಬ ಪರಿಕಲ್ಪನೆ, ನಮ್ಮವರು ಎನ್ನುವ ಅಭಿಲಾಷೆ.... ಎಲ್ಲವನ್ನು ನೋಡಿದಾಗ ಒಂದು ದೇಶ ನನ್ನದು. ‘ದೇಶ ಮೊದಲು; ಉಳಿದೆಲ್ಲವೂ ಅನಂತರ’ ಎನ್ನುವುದು ಅತ್ಯಗತ್ಯ.

ಅಸ್ಪೃಶ್ಯತೆ ಕಡಿಮೆಯಾದಂತೆಯೇ ಜಾತಿವಾದ ಜಾಸ್ತಿಯಾದದ್ದು 75 ವರ್ಷಗಳ ದುರಂತಗಳಲ್ಲೊಂದು.

ಜಾಗತಿಕ ಪ್ರಜೆ (ಗ್ಲೋಬಲ್ ಸಿಟಿಜನ್ )

ಸಾಮಾಜಿಕ ಮಾಧ್ಯಮ, ಅಂತರ್ಜಾಲ ಜಗತ್ತಿನ 10 ವರ್ಷಗಳನ್ನು ಗಮನಿಸಿದಾಗ ‘ಜಾಗತಿಕ ಪ್ರಜೆ’ ಎಂಬ ಪರಿಕಲ್ಪನೆ ಅರಿವಿಗೆ ಬರುತ್ತದೆ.ವಿದೇಶದಲ್ಲಿರುವ ಭಾರತೀಯರು, ಅವರ ಕುಟುಂಬ, ಮಕ್ಕಳು, ಅಲ್ಲಿನ ಶಿಸ್ತು ಇದನ್ನೆಲ್ಲಾ ನೋಡಿದಾಗ ‘ನಾನು ಯಾಕೆ ಜಾಗತಿಕ ನಾಗರಿಕ’ ಆಗಬಾರದು. ಭಾರತವನ್ನು ಪರಿಧಿಯೊಳಗೆ ನೋಡದೆ ಜಗತ್ತನ್ನು ಅಪ್ಪಿಕೊಳ್ಳಬಾರದೇ ಎಂದೆನಿಸುತ್ತದೆ. ‘ವಸುದೈವ ಕುಟುಂಬಕಂ’ ಎನ್ನುವುದು ಗ್ಲೋಬಲ್ ಸಿಟಿಜನ್‌ಗೆ ಸರಿಯಾದ ಅರ್ಥವಲ್ಲವೇ .

* ಸ್ವಾತಂತ್ರ್ಯ ಮತ್ತು ಕಟ್ಟುಪಾಡು
* ನಮ್ಮ ಆಚರಣೆಗಳಲ್ಲಿ ವಿಚಾರವಿರಲಿ !!!
* ಧರ್ಮದ ದ್ವಂದ್ವಗಳು ‘ಆರ್ಷ ಧರ್ಮ’ದ ರೂಪದಲ್ಲಿ ಮೂಡಿ ಬರಲಿ
* ಏನಾದರೂ ಆಗು ಮೊದಲು ಮಾನವನಾಗು

ಈ ಮೂರು ವಾಕ್ಯಗಳ ಗೂಡಾರ್ಥಗಳು ನಮ್ಮ ಕಟ್ಟುಪಾಡುಗಳೊಳಗೆ ಸ್ವಯಂ ಪ್ರೇರಿತ ತೀರ್ಮಾನಗಳಾಗಬೇಕಿವೆ.

ಜ್ಞಾನವನ್ನು ಪಡೆದು ಪ್ರತಿಕ್ರಿಯಿಸುವುದು ಒಳ್ಳೆಯದು.... ದೇವರು ಇಲ್ಲ ಎನ್ನುವುದಕ್ಕಿಂತ ನನಗೆ ದೇವರ ಬಗ್ಗೆ ಗೊತ್ತಿಲ್ಲ, ಸದ್ಯ ನನಗೆ ಅದು ಅರ್ಥವಾಗುವುದಿಲ್ಲ ಎನ್ನುವುದು ಒಳಿತು. ತತ್ವ ಸಿದ್ಧಾಂತಗಳ ಅತಿಯಾದ ಅವಲಂಬನೆಯೂ ಕಷ್ಟ. ನೆನಪಿಡಿ. ಒಂದು ಕಮ್ಯುನಿಸಂ, ರಾಜತ್ವ, ಸೋಶಿಯಲಿಸಂ ಒಳಗಡೆ ಒಂದು ದೇಶವನ್ನು ಕಟ್ಟಲಾಗದು. ಸ್ವಾತಂತ್ರ್ಯದಿಂದ ಮಾತ್ರ ಸಾಧ್ಯ. ನಿರ್ಬಂಧಗಳಿಂದ ದೇಶ, ಬದುಕು ಕಟ್ಟಲಾಗದು. ಸರಿಯಾದ ಸ್ವಾತಂತ್ರ್ಯದಿಂದ ಮಾತ್ರ ಸಾಧ್ಯ.

ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ

ಈ ವಿಷಯದ ಬಗ್ಗೆ ಬೇಕಾದಷ್ಟು ಹೇಳಬಹುದು. ಈ ಹಿಂದೆಯೂ ಹಲವರು ಹೇಳಿದ್ದಾರೆ..... ನೇರವಾಗಿ ನನಗೆ ಹೇಳಲು ಬಿಡಿ ಎನ್ನುತ್ತಾ ಎಲ್ಲವನ್ನು ಪ್ರಶ್ನಿಸುವ ಗುಣ ಇರಬೇಕು. ಸರಿ! ಆದರೆ ಉತ್ತರದ ಜೊತೆಗೆ ಎಲ್ಲವನ್ನೂ ಪ್ರಶ್ನಿಸುತ್ತಲೇ ಕೂರುವುದೂ ಆಗಬಾರದು.

ಡಿಜಿಟಲ್ ಯುಗದಲ್ಲಿ ಅಭಿಪ್ರಾಯ ಮಂಡಿಸುತ್ತಾ ಸತ್ಯ- ಅಸತ್ಯಗಳನ್ನು ತಿಳಿಯದಿರುವ ಬಾಲಿಶವಾಗಿ ಪ್ರತಿಕ್ರಿಯಿಸುವ, ಹಣದಿಂದ- ಅಧಿಕಾರದಿಂದ ಎಲ್ಲವನ್ನೂ ಗಳಿಸಬಲ್ಲೆ ಎಂಬ ಸ್ವೇಚ್ಛಾಚಾರ 75 ವರ್ಷಗಳಿಂದ ಇದ್ದರೂ -ಅದನ್ನು ಇನ್ನಾದರೂ ಬದಲಿಸಬೇಕಾಗಿದೆ.... ‘ಹುಟ್ತಾ ಚೆನ್ನಾಗಿದ್ದೆ ; ವಿದ್ಯಾಭ್ಯಾಸ ಹಾಳು ಮಾಡಿತು’ ಎಂಬ ಮಾತು ಕೂಡ ಈ ಸ್ವೇಚ್ಛಾಚಾರದ ಬಗೆಗೆ ಉಲ್ಲೇಖನೀಯ.

ನನ್ನ ‘ಮೈ ಅಂತರಾತ್ಮ’ದ ಅನಿಸಿಕೆ ಏನೆಂದರೆ ಸ್ವತಂತ್ರ ಭಾರತದ ಪರಿಕಲ್ಪನೆಗೆ ಒಂದು ನೀತಿ ನಿಯಮದ ಕರಡು ಆಗಬೇಕು. ಅದನ್ನು ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಸಾಲಿನಲ್ಲಿ ಪೂರಕವಾಗಿ ಸೇರಿಸಬೇಕು.
*ಪ್ರತಿ ಪ್ರಜೆಯ, ಸರಕಾರಿ ನೌಕರನ, ಐಎಎಸ್‌, ಐಪಿಎಸ್‌ ಅಧಿಕಾರಿಯ ಜವಾಬ್ದಾರಿಯನ್ನು ಸ್ಪಷ್ಟವಾಗಿ ಬರೆಯಬೇಕು.

*ಅಭಿವೃದ್ಧಿ ಕೆಲಸಗಳ/ ನೀತಿ ಆಯೋಗದ ಕೆಲಸಗಳು

*ಜಾಗತಿಕ ಪ್ರಜೆ ಮತ್ತು ಸ್ವತಂತ್ರ ಭಾರತದ ಕುರಿತು ಉಲ್ಲೇಖ ಇರಬೇಕು.
* ಜಾತಿ ನಂತರ, ಭಾರತ ಮೊದಲು ಕುರಿತು ಕಾನೂನಾತ್ಮಕವಾಗಿ ಸ್ಪಷ್ಟ ನೀತಿ ರೂಪಿಸಬೇಕು. ಹೀಗೆ ‘ಸ್ವತಂತ್ರತೆ– ಸ್ವಾತಂತ್ರ್ಯ ಮತ್ತು ದೇಶ’ದ ಪರಿಕಲ್ಪನೆ ನಿಜವಾದ, ಅರ್ಥಪೂರ್ಣವಾದ 75ನೇ ವರ್ಷದ ಆಚರಣೆ ಆಗಲಿದೆ. ಇಲ್ಲದೆ ಇದ್ದಲ್ಲಿ ಇದು ಒಂದು ಆಚರಣೆಗೆ ಮಾತ್ರ ಸೀಮಿತವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT