ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕ್ರೀಡೆಯೊಳಗಣ ಪೀಡೆಗೆ ಪರಿಹಾರ ಸಿಒಎ

ಹಿತಾಸಕ್ತಿ ಸಂಘರ್ಷ, ಅವ್ಯವಸ್ಥೆ, ಭ್ರಷ್ಟಾಚಾರದಲ್ಲಿ ನಲುಗಿರುವ ಕ್ರೀಡಾಕ್ಷೇತ್ರ
Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

‘ಭಾರತದ ಕ್ರೀಡೆಗೆ ಹಿತಾಸಕ್ತಿ ಸಂಘರ್ಷ ಎಂಬುದು ದೊಡ್ಡ ಶಾಪ. ಇದು ದೇಶದ ಕ್ರೀಡಾಕ್ಷೇತ್ರದ ಬೆಳವಣಿಗೆಗೆ ದೊಡ್ಡ ತೊಡಕಾಗಿದೆ. ಬಹುತೇಕ ಎಲ್ಲ ಫೆಡರೇಷನ್‌ಗಳಲ್ಲಿಯ ಅವ್ಯವಸ್ಥೆ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರಗಳಿಗೆ ಈ ಹಿತಾಸಕ್ತಿಯೇ ಮೂಲಸೆಲೆ’

–ಭಾರತ ಟೇಬಲ್ ಟೆನಿಸ್ ಫೆಡರೇಷನ್‌ನಲ್ಲಿ ಆಡಳಿತ ಸುಧಾರಣೆ ಮತ್ತು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೊಳಿಸಲು ದೆಹಲಿ ಹೈಕೋರ್ಟ್ ನೇಮಕ ಮಾಡಿರುವ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥೆ, ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ಮಾತುಗಳಿವು.

ರಾಜ್ಯ ಟಿ.ಟಿ ಸಂಸ್ಥೆಯೊಂದರ ಕಾರ್ಯದರ್ಶಿ ಆಗಿದ್ದವರೇ ರಾಷ್ಟ್ರೀಯ ಕೋಚ್ ಆಗಿ ಕಾರ್ಯನಿ ರ್ವಹಿಸುತ್ತಿದ್ದರು. ಅವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡುತ್ತಾರೆ. ಇದು ಒಂದು ಉದಾಹರಣೆಯಷ್ಟೆ. ಇಂತಹ ಹಲವಾರು ಕಥನಗಳು ಪ್ರತಿಯೊಂದು ಫೆಡರೇಷನ್‌ನಲ್ಲಿಯೂ ಇವೆ. ವಂಶಾಡಳಿತವೇ ಹಾಸುಹೊಕ್ಕಾಗಿರುವ ಫೆಡರೇ ಷನ್‌ಗಳೂ ಇವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ದಶಕಗಳ ಹಿಂದೆ ಪ್ರತಿಷ್ಠೆ, ಹೆಸರು ಹಾಗೂ ಯುವ ಸಮೂಹದಲ್ಲಿ ಛಾಪು ಮೂಡಿಸುವ ಸಲುವಾಗಿ ಕ್ರೀಡಾ ಫೆಡರೇಷನ್‌ಗಳ ಪದಾಧಿಕಾರಿಗಳಾಗುತ್ತಿದ್ದ ರಾಜಕಾರಣಿ ಗಳಿದ್ದರು. ಆದರೆ, ಈಗ ಭಾರತದ ಕ್ರೀಡಾಲೋಕ ಬದ ಲಾಗಿದೆ. ಕ್ರಿಕೆಟ್ ಅಲ್ಲದೆ ಬೇರೆ ಬೇರೆ ಕ್ರೀಡೆಗಳಲ್ಲಿಯೂ ತಾರೆಗಳು ಉದಯಿಸುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಪ್ರಾಯೋಜಕತ್ವ ನೀಡಲು ಮುಂದಾಗಿವೆ.ಮೆಲ್ಲಗೆ ಹಣದ ಒಳಹರಿವು ಹೆಚ್ಚಾಗಿದೆ. ಇದು ಪಟ್ಟ ಭದ್ರರಿಗೆ ಮತ್ತೊಂದು ಆಕರ್ಷಣೆಯಾಗಿರುವುದುಸುಳ್ಳಲ್ಲ.

ಆದರೆ, ಇದರಿಂದಾಗಿ ಕ್ರೀಡೆಗಳಲ್ಲಿ ನಿಜವಾದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತಿರುವುದರ ವಿರುದ್ಧ ದನಿಯೆತ್ತುವ ದಿಟ್ಟ ಕ್ರೀಡಾಪಟುಗಳು ಇರುವುದು ಹೊಸ ಕ್ರಾಂತಿಗೆ ದಾರಿ ಮಾಡಿಕೊಡುತ್ತಿದೆ. ತಮ್ಮ ಕೋಚ್ ವಿರುದ್ಧ ದೂರು ದಾಖಲಿಸಿದ ಒಲಿಂಪಿಯನ್ ಮಣಿಕಾ ಬಾತ್ರಾ ಅವರಿಂದಾಗಿ ಟಿಟಿಎಫ್‌ಐನಲ್ಲಿ ಆಡಳಿತ ಸುಧಾರಣೆಗೆ ಡೆಲ್ಲಿ ಹೈಕೋರ್ಟ್ ಗಮನ ಹರಿಸಿತು. 2011ರ ರಾಷ್ಟ್ರೀಯ ಕ್ರೀಡಾ ನೀತಿ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ಸತ್ಯ ಕಣ್ಣಿಗೆ ರಾಚಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಬಿಸಿ ಮುಟ್ಟಿಸಿತು. ನೀತಿಯನ್ನು ಜಾರಿಗೊಳಿಸದ ಫೆಡರೇಷನ್‌ಗಳನ್ನು ಅಮಾನತಿನಲ್ಲಿಡಲು ಆದೇಶಿಸಿತು. ಇದರಿಂದಾಗಿ ಫುಟ್‌ಬಾಲ್ ಫೆಡರೇಷನ್‌ನ ದೀರ್ಘಕಾಲದ ಮುಖ್ಯಸ್ಥ ಪ್ರಫುಲ್ ಪಟೇಲ್ ಮತ್ತು ಹಾಕಿ ಇಂಡಿಯಾದ ನರೀಂದರ್ ಬಾತ್ರಾ ಅವರೂ ಅಧಿಕಾರ ಕಳೆದುಕೊಂಡಿದ್ದಾರೆ. ಈ ಎರಡೂ ಫೆಡರೇಷನ್‌ಗಳಿಗೆ ಸಿಒಎ ನೇಮಕ ಮಾಡಲಾಗಿದೆ. ಫೆಬ್ರುವರಿಯಿಂದ ಇಲ್ಲಿಯವರೆಗೆ ಒಟ್ಟು ಮೂರು ಫೆಡರೇಷನ್‌ಗಳಿಗೆ ಈ ಸಿಒಎ ನೇಮಕವಾಗಿದೆ.

ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗಳು ಈಗ ಫೆಡರೇಷನ್‌ಗಳಲ್ಲಿ ಇಷ್ಟು ವರ್ಷಗಳಿಂದ ಜಡ್ಡುಗಟ್ಟಿ ರುವ ವ್ಯವಸ್ಥೆಯನ್ನು ಸರಿಪಡಿಸುವ ಹಾದಿಯಲ್ಲಿವೆ. ಅದಕ್ಕಾಗಿ ಬಾಹ್ಯ ಒತ್ತಡಗಳನ್ನೂ ಎದುರಿಸುತ್ತಿವೆ. ಇವೆಲ್ಲವುಗಳ ನಡುವೆಯೇ ಈ ಎಲ್ಲ ಕಸರತ್ತುಗಳಿಂದ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳ ಕಲ್ಯಾಣಕ್ಕೆ ಸಂಪೂರ್ಣ ಲಾಭವಾಗಲಿದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಏಕೆಂದರೆ, ಭಾರತದ ಕ್ರೀಡಾರಂಗದಲ್ಲಿ ಅತಿದೊಡ್ಡ ‘ಆಡಳಿತ ಸ್ವಚ್ಛತೆ’ ಪ್ರಕ್ರಿಯೆ ನಡೆದಿದ್ದು ಕ್ರಿಕೆಟ್‌ನಲ್ಲಿ. ಅದೇ ಮಾದರಿಯಲ್ಲಿ ಈಗ ಉಳಿದ ಕ್ರೀಡೆಗಳಿಗೂ ಸಿಒಎ ನೇಮಕ ಮಾಡಲಾಗುತ್ತಿದೆ. ಬಿಹಾರದ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಮುಖ್ಯಸ್ಥ ಆದಿತ್ಯ ವರ್ಮಾ ಆಗಿನ ಬಿಸಿ ಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ವಿರುದ್ಧ ಹಾಕಿದ ಮೊಕದ್ದಮೆಯು ದೊಡ್ಡ ಬದಲಾವಣೆಗೆ ನಾಂದಿ ಹಾಡಿತು. ಶ್ರೀನಿವಾಸನ್ ಅಧಿಕಾರ ಕಳೆದುಕೊಂಡ ನಂತರ ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ (ಈಗ ಕೇಂದ್ರ ಕ್ರೀಡಾ ಸಚಿವ) ಅವರನ್ನು 2017ರಲ್ಲಿ ಪದಚ್ಯುತಗೊಳಿಸಿದ್ದ ಸುಪ್ರೀಂ ಕೋರ್ಟ್‌, ವಿನೋದ್ ರಾಯ್ ನೇತೃತ್ವದ ಆಡಳಿತ ಸಮಿತಿಯನ್ನು ನೇಮಕ ಮಾಡಿತ್ತು.

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತ ಸಮಿತಿಯು ಹೊಸ ನಿಯಮಾವಳಿಯನ್ನು (ನಿವೃತ್ತ ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿ ಶಿಫಾರಸುಗಳ ಮೇರೆಗೆ ರಚಿತ) ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಜಾರಿಗೊಳಿಸಿತು. ಮಾಜಿ ಮಹಾಲೇಖಪಾಲ ವಿನೋದ್ ರಾಯ್, ಇತಿಹಾಸಕಾರ ರಾಮಚಂದ್ರ ಗುಹಾ, ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಮತ್ತು ಆರ್ಥಿಕ ತಜ್ಞ ವಿಕ್ರಂ ಲಿಮಯೆ ಅವರು ಈ ಸಮಿತಿಯಲ್ಲಿದ್ದರು. ಕೆಲಕಾಲದ ನಂತರ ಗುಹಾ ಮತ್ತು ಲಿಮಯೆ ರಾಜೀನಾಮೆ ನೀಡಿದ್ದರು. ಹಲವು ಅಡೆತಡೆಗಳ ನಡುವೆಯೂ ಪರಿಷ್ಕೃತ ನಿಯಮಾವಳಿಯನ್ನು ಜಾರಿಗೊಳಿಸಿದ್ದ ಸಿಒಎ, ಚುನಾಯಿತ ಮಂಡಳಿಗೆ ಅಧಿಕಾರ ಕೊಟ್ಟು ನಿರ್ಗಮಿಸಿತ್ತು.

ಆದರೆ, ನೂತನ ನಿಯಮದ ಪ್ರಕಾರ, ಆಗ ಅಧಿಕಾ ರದ ಗದ್ದುಗೆಯೇರಿದ್ದ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅವಧಿಯು 2020ರಲ್ಲಿಯೇ ಮುಗಿದು ಹೋಗಿದೆ. ನಿಯಮಗಳ ಪರಿಷ್ಕರಣೆಗೆ ಅನುಮತಿ ಕೋರಿ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯ ನೆಪದಲ್ಲಿಯೇ ಇವರಿಬ್ಬರೂ ತಮ್ಮ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಇದರೊಂದಿಗೆ ನಿಯಮಾವಳಿಯನ್ನು ಬುಡಮೇಲು ಮಾಡುವತ್ತ ಮೊದಲ ಹೆಜ್ಜೆಯಿಟ್ಟಂತಾಗಿದೆ. ಆಟಗಾರರ ವ್ಯವಹಾರಗಳನ್ನು ನಿರ್ವಹಿಸುವ ವೃತ್ತಿಪರ ಕಂಪನಿಗಳನ್ನು ನಡೆಸುವ ಮಾಜಿ ಆಟಗಾರರೊಬ್ಬರು ಕಾಮೆಂಟ್ರಿ ತಂಡದಲ್ಲಿ ಸದಾ ಇರುತ್ತಾರೆಂದು ತಾವು ರಾಜೀನಾಮೆ ನೀಡುವ ಸಂದರ್ಭದಲ್ಲಿ ರಾಮಚಂದ್ರ ಗುಹಾ ಆರೋಪಿಸಿದ್ದರು. ಅಂತಹವರು ಈಗಲೂ ಬಿಸಿಸಿಐ ಆಯಕಟ್ಟಿನ ಸ್ಥಳಗಳಲ್ಲಿ ಮುಂದುವರಿದಿದ್ದಾರೆ ಎನ್ನುವುದು ಸುಳ್ಳಲ್ಲ.

ರಾಜಕಾರಣಿಗಳ ಹಸ್ತಕ್ಷೇಪವನ್ನು ದೂರ ಇಡಬೇಕು ಎಂಬ ನಿಯಮವಿದೆ. ಆದರೆ ಪ್ರಭಾವಿ ರಾಜಕಾರಣಿಗಳ ಮಕ್ಕಳು ತಮ್ಮ ಮಕ್ಕಳನ್ನು ಮಂಡಳಿ, ರಾಜ್ಯಸಂಸ್ಥೆಗಳ ದೊಡ್ಡ ಸ್ಥಾನಗಳಲ್ಲಿ ಕೂರಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ತಮ್ಮ ಪ್ರಭಾವವನ್ನು ಮಂಡಳಿಯಲ್ಲಿ ಉಳಿಸಿಕೊಂಡಿದ್ದಾರೆ. ದೆಹಲಿಯ ಸಂಸದರೂ ಆಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈಚೆಗೆ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಡಗ್‌ಔಟ್‌ನಲ್ಲಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಬಿಸಿಸಿಐ ಸರ್ಕಾರದಿಂದ ಅನುದಾನ ಪಡೆಯುತ್ತಿಲ್ಲ. ಸ್ವಾಯತ್ತ ಮತ್ತು ಶ್ರೀಮಂತ ಕ್ರೀಡಾ ಸಂಸ್ಥೆಯೆಂಬ ಹಮ್ಮು ಈ ಮಂಡಳಿಗೆ ಇದೆ. ಅದರಿಂದಾಗಿ ಈ ಮಂಡಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿ ಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಉಳಿದ ಕ್ರೀಡಾ ಫೆಡರೇಷನ್‌ಗಳಿಗೆ ಕೋಟ್ಯಂತರ ರೂಪಾಯಿ ಅನುದಾನವನ್ನು ಕ್ರೀಡಾ ಇಲಾಖೆ ನೀಡುತ್ತಿದೆ. ಆದರೂ ಒಂದು ದಶಕದಿಂದಲೂ ನಿಯಮ ಜಾರಿಗೊಳಿಸದ ಈ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿ ಸದಿರುವುದರ ಹಿಂದಿನ ಮರ್ಮವೇನೆಂಬುದು ಬಹಳಷ್ಟು ಜನರಿಗೆ ಗೊತ್ತೇ ಇದೆ. ಅದಕ್ಕಾಗಿ ಮತ್ತೆ ನ್ಯಾಯಾಂಗವೇ ಮಧ್ಯಪ್ರವೇಶಿಸಿರುವುದು ಆಡಳಿತಾಂಗದ ವೈಫಲ್ಯವೇ ಅಲ್ಲವೇ?

ಕ್ರೀಡಾ ಆಡಳಿತದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿ ಗೊಳಿಸುವುದು ತಮ್ಮ ಧ್ಯೇಯ ಎಂದು ಸಿಒಎಗಳು ಹೇಳು ತ್ತಿವೆ. ಆದರೆ, ಈ ಹಾದಿಯಲ್ಲಿ ವಿವೇಚನೆಯೊಂದಿಗೆ ಈ ಸಮಿತಿಗಳು ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇದೆ. ತಂಡಗಳ ಆಯ್ಕೆ, ತರಬೇತುದಾರರ ನೇಮಕ ಇತ್ಯಾದಿ ಚಟುವಟಿಕೆಗಳನ್ನು ಆಯಾ ಕ್ರೀಡೆಗಳ ಪರಿಣತರಿಗೆ ವಹಿಸುವುದೇ ಸೂಕ್ತ. ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಆಯ್ಕೆ ಮಾಡಲಾಗಿರುವ ಟಿಟಿ ತಂಡದ ಆಯ್ಕೆ ಸಮಿತಿಯಲ್ಲಿ ಮಾಜಿ ಡೆಕಾಥ್ಲಾನ್‌ ಅಥ್ಲೀಟ್‌ ಎಸ್‌ಡಿ ಮೌದ್ಗಿಲ್ ಅವರನ್ನು ನೇಮಕ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಆಟಗಾರ್ತಿ ದಿಯಾ ಚಿತಳೆ ಮತ್ತು ಆಟಗಾರ ಮನುಷ್ ಶಾ ತಮ್ಮನ್ನು ಮೀಸಲು ಆಟಗಾರರನ್ನಾಗಿ ನೇಮಕ ಮಾಡಿರುವುದು ಅಸಮರ್ಪಕ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ರೀತಿಯ ಬೆಳವಣಿಗೆಗಳಿಂದ ಸಮಿತಿಗಳ ವಿಶ್ವಾಸಾರ್ಹತೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಆ ರೀತಿಯಾದರೆ ಕ್ರೀಡಾ ನೀತಿಯ ಜಾರಿಗೆ ಹಿನ್ನಡೆಯಾಗುತ್ತದೆ. ಅದರಿಂದಾಗಿ ಕ್ರೀಡಾಪಟುಗಳೇ ಆಯಾ ಕ್ರೀಡೆಗಳ ಆಡಳಿತದ ಚುಕ್ಕಾಣಿ ಹಿಡಿದು, ರಾಷ್ಟ್ರ, ರಾಜ್ಯ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಇರುವ ಪಟ್ಟಭದ್ರರನ್ನು ಕಿತ್ತೊಗೆಯುವ ಕಾರ್ಯ ಈಡೇರುವುದು ಕಷ್ಟವಾಗಬಹುದು. ಪುರುಷ, ಮಹಿಳೆಯರಿಗೆ ಸಮಾನ ನಗದು ಪುರಸ್ಕಾರ, ತರಬೇತಿ ಸೌಲಭ್ಯ, ಪ್ರತಿಭಾಶೋಧದಲ್ಲಿ ಪಾರದರ್ಶಕತೆ ತರುವ ಉದ್ದೇಶಗಳೂ ಈಡೇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT