ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹೊರಗೊಂದು ಮಾತು, ಒಳಗೊಂದು ಮಾತು!

ವಿದೇಶದಲ್ಲಿ ಪ್ರಜಾಪ್ರಭುತ್ವದ ಆಶಯ ಎತ್ತಿಹಿಡಿಯುವ ಮಾತು, ಸ್ವದೇಶದಲ್ಲಿ ತದ್ವಿರುದ್ಧದ ನಡೆ
Last Updated 22 ಡಿಸೆಂಬರ್ 2021, 4:12 IST
ಅಕ್ಷರ ಗಾತ್ರ

ಹಲವಾರು ರಾಷ್ಟ್ರಗಳಲ್ಲಿ ನಿರಂಕುಶ ಪ್ರಭುತ್ವದ ಎದುರು ಮಂಡಿಯೂರಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೆಲವೇ ದಿನಗಳ ಹಿಂದೆ ‘ಪ್ರಜಾಪ್ರಭುತ್ವ ಶೃಂಗ ಸಭೆ’ಯೊಂದನ್ನು ಏರ್ಪಡಿಸಿದ್ದರು. ಜಾಗತಿಕ ಮಟ್ಟದ ‘ಪ್ರಜಾಪ್ರಭುತ್ವದ ಶ್ರೇಯಾಂಕ’ ಪಟ್ಟಿಯಲ್ಲಿ (ಫ್ರೀಡಂ ಹೌಸ್– 2021) ಭಾರತದ ಸ್ಥಾನ ಕೆಳಗಿಳಿದಿದ್ದು ಈಗ ‘ಭಾಗಶಃ ಮುಕ್ತ’ ಪರಿಸ್ಥಿತಿಯಲ್ಲಿದೆ.

ಹಾಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖ ಆಹ್ವಾನಿತರಾಗಿ ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಅವರ ಭಾಷಣದಲ್ಲಿ ‘ಕಾನೂನಿನ ಆಧಿಪತ್ಯವೂ ಒಳಗೊಂಡಂತೆ ಪ್ರಜಾಪ್ರಭುತ್ವದ ಆತ್ಮ, ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ಗುಣವಿಶೇಷಗಳೆಲ್ಲವೂ ಭಾರತೀಯರಲ್ಲಿ ಬೇರೂರಿವೆ. ಸಂವಿಧಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೌಲ್ಯಗಳನ್ನು ರಕ್ಷಿಸಿ ಜಾರಿಗೆ ತರುತ್ತೇವೆ. ಜನರ ಆಶಯಗಳನ್ನು ಪ್ರಜಾಪ್ರಭುತ್ವ ಸಫಲಗೊಳಿಸುತ್ತದೆ ಎಂಬ ಸಂದೇಶ ಭಾರತದ್ದು’ ಎಂದು ಹೇಳಿದರು. ಇದೇ ಧಾಟಿಯಲ್ಲಿ ‘ಉತ್ತರ
ದಾಯಿತ್ವ’, ಅದಕ್ಕೆ ಪೂರಕವಾದ ಸರ್ಕಾರಿ ನಿರ್ಧಾರ ಗಳಲ್ಲಿ ‘ಪಾರದರ್ಶಕತೆ’ ಕುರಿತು ಪ್ರಧಾನಿಯವರು ವಿದೇಶಗಳಲ್ಲಿ ಭಾಷಣ ಮಾಡುತ್ತಾ ಬಂದಿದ್ದಾರೆ.

ದೇಶದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅಪಾಯ ಎದುರಾ ಗಿರುವಾಗ ಪ್ರಧಾನಿಯವರ ಈ ಮಾತುಗಳ ಉದ್ದೇಶ ಪಾಶ್ಚಾತ್ಯರ ಮನವೊಲಿಸುವುದೇ ಆಗಿದೆ. ದೇಶದಲ್ಲಿ ದಿನನಿತ್ಯವೂ ಕ್ರೈಸ್ತರು, ಮುಸ್ಲಿಮರ ವಿರುದ್ಧ ಒಂದಲ್ಲ ಒಂದು ಕಾರಣಕ್ಕೆ ಹಲ್ಲೆ ನಡೆಯುತ್ತಿದ್ದರೂ ಚಕಾರವೆತ್ತದ ಪ್ರಧಾನಿ, ಹೊರದೇಶಗಳಲ್ಲಿ ‘ವೈವಿಧ್ಯ’ದ ಬಗ್ಗೆ ನಿರರ್ಗಳ ವಾಗಿ ಮಾತನಾಡುವುದು ವಿಪರ್ಯಾಸ! ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ವಿದೇಶಿಯರಿಂದ ಬೆನ್ನು ತಟ್ಟಿಸಿಕೊಳ್ಳುವ ಈ ಹಂಬಲ ಭಾರತೀಯರ ಆತ್ಮಗೌರವಕ್ಕೆ ಧಕ್ಕೆ ತರುವುದಿಲ್ಲವೇ?

ಒಂದು ಪ್ರಶ್ನೆ: ದೇಶದೊಳಗಿನ ವಾಸ್ತವ ಸ್ಥಿತಿ ಹೀಗಿದೆಯೇ? ಪ್ರಜಾಪ್ರಭುತ್ವದ ಮೂಲ ತತ್ವಗಳಾದ ‘ಉತ್ತರದಾಯಿತ್ವ’ ಮತ್ತು ‘ಪಾರದರ್ಶಕತೆ’ಯು ಈಏಳು ವರ್ಷಗಳ ಆಡಳಿತದಲ್ಲಿ ಎಲ್ಲಿವೆ ಎಂದು ಹುಡುಕ ಬೇಕಾಗಿದೆ. ಸಚಿವ ಸಂಪುಟ, ವಿವಿಧ ಇಲಾಖೆಗಳು ತೆಗೆದುಕೊಳ್ಳುವ ತೀರ್ಮಾನಗಳನ್ನು ಜನಸಾಮಾನ್ಯರಿಗೆ ನಿಖರ ಮತ್ತು ಕರಾರುವಾಕ್‌ ಮಾಹಿತಿಗಳ ಮೂಲಕ ತಿಳಿಸಬೇಕಾದ ಜವಾಬ್ದಾರಿ ಈಡೇರಿಲ್ಲ.

ನೈಜ ಪ್ರಜಾಪ್ರಭುತ್ವದ ಆತ್ಮದಂತಿರುವುದು ಸಂಸತ್ತು ಹಾಗೂ ಇತರ ಕೆಲವು ಆಧಾರಸ್ತಂಭಗಳು. ಗಣನೀಯವಾದ ಪ್ರತಿಯೊಂದು ವಿಷಯವೂ ಸಂಸತ್ತಿನಲ್ಲಿ ಚರ್ಚೆಗೊಳಗಾಗುವುದು ಅನಿವಾರ್ಯ. ಕೇಂದ್ರ ಸರ್ಕಾರ ಈ ಬಗ್ಗೆ ಉದಾಸೀನ ಮಾಡುತ್ತಲೇ ಬಂದಿದೆ. ನೋಟು ರದ್ದತಿ ವಿಷಯವನ್ನು ಭಾರತೀಯ ರಿಸರ್ವ್ ಬ್ಯಾಂಕ್, ಸಚಿವ ಸಂಪುಟ ಮತ್ತು ಸಂಸತ್ತಿನಲ್ಲಿ ಪರಿಶೀಲನೆಗೆ ಒಳಪಡಿಸದಿದ್ದದ್ದು; ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಚರ್ಚೆಯಿಲ್ಲದೆಯೇ ಜಾರಿಗೆ ತಂದದ್ದು ಮತ್ತು ವಾಪಸ್ ಪಡೆದದ್ದು, ‘ಪೆಗಾಸಸ್’ ಗುಪ್ತಚರ ಕುತಂತ್ರಾಂಶದ ಬಳಕೆ, ರಫೇಲ್ ವಿಮಾನ ಖರೀದಿ... ಇದಕ್ಕೆ ಉದಾಹರಣೆಗಳು.

2005ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಜಾರಿಗೆ ತಂದು, ಮಾಹಿತಿ ಕೇಳುವುದು ಸಾರ್ವಜನಿಕರ ಹಕ್ಕು ಎಂದು ಪ್ರತಿಪಾದಿಸಿತ್ತು. ಗುಪ್ತವಾಗಿ ತೀರ್ಮಾನ ಕೈಗೊಳ್ಳುವುದು, ಮಾಹಿತಿಗಳನ್ನು ಮುಚ್ಚಿಡುವುದು, ಕಾನೂನು ಉಲ್ಲಂಘಿಸಿ ಬೇಕಾದವರಿಗೆ ನೆರವಾಗು ವುದನ್ನು ತಪ್ಪಿಸುವುದೇ ಈ ಕಾಯ್ದೆಯ ಮುಖ್ಯ ಉದ್ದೇಶ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿಕೊಂಡು ‌ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಆದರೆ, ಅಧಿಕಾರವನ್ನು ಯಾವ ಹಿಂಜರಿಕೆಯೂ ಇಲ್ಲದೆ ಚಲಾಯಿಸಿ ಆರ್‌ಟಿಐನಂತಹ ಮಹತ್ತರ ಕಾಯ್ದೆಯ ಕತ್ತು ಹಿಸುಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾ ಬಂದಿದೆ.

ಸುಪ್ರೀಂ ಕೋರ್ಟ್‌ 2019ರಲ್ಲಿ ನಿರ್ದೇಶನ ನೀಡಿ ದ್ದರೂ, ಕೇಂದ್ರ ಮತ್ತು ರಾಜ್ಯಗಳ ಮಾಹಿತಿ ಹಕ್ಕು ಆಯೋಗಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಕಾಲದಲ್ಲಿ ಕ್ರಮ ಕೈಗೊಂಡಿಲ್ಲ. ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತಂದು ಮಾಹಿತಿ ಹಕ್ಕು ಆಯೋಗಗಳ ಅಧ್ಯಕ್ಷರ ನೇಮಕಾತಿ, ವೇತನ, ಭತ್ಯೆ ನಿಗದಿ ಸೇರಿದಂತೆ ಇತರ ವಿಷಯಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕೇಂದ್ರದ ಈ ನಡೆಯು ಒಕ್ಕೂಟ ವ್ಯವಸ್ಥೆಗೆ ಸಂಪೂರ್ಣ ವಿರುದ್ಧ. ದೆಹಲಿಯಲ್ಲಿ ಅಧಿಕಾರ ಕೇಂದ್ರೀಕರಣವೇ ಇದರ ಕಾರ್ಯಸೂಚಿ ಇದ್ದಂತಿದೆ.

ಸಾರ್ವಜನಿಕರಿಂದ ಮಾಹಿತಿ ಮುಚ್ಚಿಡುವು ದಕ್ಕಾಗಿಯೇ ತಿದ್ದುಪಡಿ ತಂದು ಮಾಹಿತಿ ಆಯೋಗಗಳನ್ನು ಕೇಂದ್ರ ಸರ್ಕಾರವು ಕೈಗೊಂಬೆಗಳನ್ನಾಗಿಸಿಕೊಂಡಿದೆ. ಇಸ್ರೇಲ್ ದೇಶದ ಕುತಂತ್ರಾಂಶ ‘ಪೆಗಾಸಸ್’ ಬಳಸಿ ದೇಶದ ಕೆಲವು ರಾಜಕಾರಣಿಗಳು, ಪತ್ರಕರ್ತರ ಮೇಲೆ ಕಣ್ಗಾವಲು ಇರಿಸಿದ ಪ್ರಕರಣ ವರದಿಯಾಗಿದೆ. ಇದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿ ಭಾರತಕ್ಕೆ ಮುಜುಗರವನ್ನುಂಟು ಮಾಡಿದೆ. ಈ ಪ್ರಕರಣದಲ್ಲಿ ದಾಖಲಾದ ಎಲ್ಲಾ ಅರ್ಜಿ ಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಗೆ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ. ಈ ಸಂಬಂಧ ಆದೇಶ ಹೊರಡಿಸುವಾಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, ಬ್ರಿಟಿಷ್ ಕಾದಂಬರಿಕಾರ ಜಾರ್ಜ್ ಆರ್ವೆಲ್‍ನ ‘ನೀವು ರಹಸ್ಯ ವನ್ನು ಮುಚ್ಚಿಡಲು ಬಯಸಿದರೆ, ಅದನ್ನು ನಿಮ್ಮಿಂದಲೂ ಮುಚ್ಚಿಟ್ಟುಕೊಳ್ಳುವುದು ಅವಶ್ಯಕ’ ಎಂಬ ಖ್ಯಾತ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಹಾಗೆಯೇ, ರಫೇಲ್ ಯುದ್ಧ ವಿಮಾನಗಳ ಖರೀದಿಯ ಬಗ್ಗೆ ರಾಜಕೀಯ ಪಕ್ಷಗಳು ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೇಳಿದರೆ, ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ನಿರಾಕರಿಸಿದೆ. ಖರೀದಿಗೂ ರಾಷ್ಟ್ರದ ಭದ್ರತೆಗೂ ಸಂಬಂಧ ಕಲ್ಪಿಸುವುದು ನಿಜಕ್ಕೂ ಹಾಸ್ಯಾಸ್ಪದ! ಮುಖ್ಯ ನ್ಯಾಯಮೂರ್ತಿ ಅವರ ಉಲ್ಲೇಖವು ಪೆಗಾಸಸ್ ಪ್ರಕರಣದ ನಿಗೂಢತೆ ಮತ್ತು ಆಳವನ್ನು ಸೂಚಿಸುತ್ತದೆ. ಸರ್ಕಾರಗಳು ದೇಶದ ಭದ್ರತೆಯ ನೆಪವೊಡ್ಡಿ ಜನರಿಗೆ ಮಾಹಿತಿ ನಿರಾಕರಿಸುವುದು ಇನ್ನು ಸಾಧ್ಯವಿಲ್ಲ ಎಂಬು ದನ್ನು ಸ್ಪಷ್ಟಪಡಿಸುತ್ತದೆ. ಮೇಲಿನ ಸಂಗತಿಗಳಿಗೂ ಮುನ್ನ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಸೇರಿದಂತೆ ಹಲವು ಸಂಶೋಧನಾ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು, ಕೆಲವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಖ್ಯಾತ ಆರ್ಥಿಕ ತಜ್ಞರಿಂದ 2014- 15ಕ್ಕಿಂತ ಹಿಂದೆ ಇದ್ದ ಆರ್ಥಿಕ ಪರಿಸ್ಥಿತಿ, ತದನಂತರ ದೇಶದ ಜಿಡಿಪಿ ವೃದ್ಧಿಯ ಬಗ್ಗೆ ಮರೆಮಾಚಿದ ಹಾಗೂ ಉತ್ಪ್ರೇಕ್ಷಿತ ಅಂಕಿ ಅಂಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇಷ್ಟಾದರೂ ಆರ್ಥಿಕತೆಯ ಕುಸಿತದ ನಿಜ ಅಂಕಿ ಅಂಶಗಳನ್ನು ಮರೆಮಾಚಲು ಸಾಧ್ಯವಾಗಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿದೆ.

ಆಳುವ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ, ಇ-ಮೇಲ್ ಹ್ಯಾಕ್ ಮಾಡಿಸಿದ ಆರೋಪಗಳಿವೆ. ದೇಶವಿರೋಧಿ ಮೊಕದ್ದಮೆಗಳನ್ನು ಹಾಕುವುದು, ಸರ್ಕಾರದ ನಡೆಯನ್ನು ಟೀಕಿಸುವ ಪತ್ರಕರ್ತರು, ಹಾಸ್ಯ ಕಲಾವಿದರಂತಹ ವ್ಯಕ್ತಿಗಳನ್ನು ಜೈಲಿಗಟ್ಟುವ ಕೃತ್ಯಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ‘ಅನಧಿಕೃತ ತುರ್ತು ಪರಿಸ್ಥಿತಿ’ ಜಾರಿಯಲ್ಲಿರುವಾಗ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿದೆಯೇ ಎಂದು ಕೇಳುವಂತಾಗಿದೆ.

ಕೇಂದ್ರದ ನಾಯಕರೆಲ್ಲರೂ ಪ್ರತಿನಿತ್ಯ ಪ್ರಜಾಪ್ರಭುತ್ವದ ಭಜನೆ ಮಾಡುತ್ತಾ ‘ಭಾರತವು ಪ್ರಜಾಪ್ರಭುತ್ವದ ತಾಯಿ. ನಮ್ಮ ಸಂವಿಧಾನ ಪರಮ ಪವಿತ್ರವಾದ ಗ್ರಂಥ’ ಎಂದೆಲ್ಲಾ ಪುಂಖಾನುಪುಂಖವಾಗಿ ಹೇಳುತ್ತಲೇ, ಸಂವಿಧಾನದ ವಿಧಿವಿಧಾನಗಳನ್ನು ಬಾಹ್ಯ ಸ್ವರೂಪದಲ್ಲಿ ಮಾತ್ರವೇ ಉಳಿಸಿಕೊಂಡು, ನಡತೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಗಳನ್ನು ಹಿಂಜರಿಕೆಯಿಲ್ಲದೇ ಅನುಸರಿಸುತ್ತಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ರಚನಾ ಸಮಿತಿಯ ಚರ್ಚೆ ವೇಳೆ 1948ರಲ್ಲಿ ನೀಡಿದ್ದ, ‘ಸಂವಿಧಾನ ಯಾವ ರೂಪದಲ್ಲಿ ಇರುತ್ತದೆಯೋ ಅದೇ ರೂಪದಲ್ಲಿ ಆಡಳಿತ ವ್ಯವಸ್ಥೆಯೂ ಇರಬೇಕು. ಒಂದು ವೇಳೆ ಆಡಳಿತ ವ್ಯವಸ್ಥೆಯ ಸ್ವರೂಪ ಬದಲಾವಣೆಯಾಗದೆ, ತೋರಿಕೆಗೆ ಮಾತ್ರ ಬದಲಾವಣೆ ಯಾದರೆ ಸಂವಿಧಾನ ದುರುಪಯೋಗಕ್ಕೀಡಾಗಲಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧದ ನಡೆ’ ಎಂಬ ಹೇಳಿಕೆ ಈಗಲೂ ಪ್ರಸ್ತುತ.

ಲೇಖಕರು: ಪ್ರೊ.ಚಂದ್ರಶೇಖರ್– ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ.

ವೆಂಕಟೇಶ ನಾಯಕ್‌– ಸಂಶೋಧಕ, ಕಾಮನ್‌ವೆಲ್ತ್‌ ಹ್ಯೂಮನ್‌ರೈಟ್ಸ್‌ ಇನಿಷಿಯೇಟಿವ್‌ (ಸಿಎಚ್‌ಆರ್‌ಐ), ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT