ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಐಪಿಎಲ್: ದೇಶಿ ಪ್ರತಿಭೆಗಳಿಗೆ ‘ಮೆಗಾ’ ಅವಕಾಶ

Last Updated 14 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡದ ‘ಟೋಪಿ’ ಧರಿಸುವ ಅವಕಾಶದ ನಿರೀಕ್ಷೆಯಲ್ಲಿರುವ ಯುವ ಆಟಗಾರರ ದೊಡ್ಡ ದಂಡು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಂಡಿತು.

19 ವರ್ಷದ ರಾಜ್ ಬಾವಾ, ಯಶ್ ಧುಳ್, ಕರ್ನಾಟಕದ 27 ವರ್ಷದ ಅಭಿನವ್ ಮನೋಹರ್ ಸದಾರಂಗನಿ ಹೀಗೆ ಪಟ್ಟಿ ಬೆಳೆಯುತ್ತದೆ. ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಈ ಹುಡುಗರ ಮುಖಗಳು ಅಷ್ಟೇನೂ ಚಿರಪರಿಚಿತವಲ್ಲ. ಆದರೆ, ಐಪಿಎಲ್ ಫ್ರ್ಯಾಂಚೈಸಿಗಳ ಮಾಲೀಕರು ಮತ್ತು ಪರಿಣತರ ಕಣ್ಣಿಗೆ ಇವರು ಬಿದ್ದಿದ್ದು ಹೇಗೆ?

ಭಾರತದ ಕ್ರಿಕೆಟ್‌ನ ಜೀವನಾಡಿ ದೇಶಿ ಟೂರ್ನಿಗಳು ಇದಕ್ಕೆ ಕಾರಣ ಎಂದರೆ ಅತಿಶಯೋಕ್ತಿಯೇನಲ್ಲ. ಒಂದು ನದಿ ಭರಪೂರ ಹರಿಯಲು ಜಲಾನಯನ ಪ್ರದೇಶ ಇರುವಂತೆ ದೇಶದ ಕ್ರಿಕೆಟ್ ಶ್ರೀಮಂತಗೊಳಿಸಲು ದೇಶಿ ಕ್ರಿಕೆಟ್‌ ಎಂಬ ಅಚ್ಚುಕಟ್ಟು ಇದೆ. ಈ ಬಾರಿಯ ಲಿಲಾವು ಪ್ರಕ್ರಿಯೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೂ ಇದು ಮನದಟ್ಟಾಗಿರಬಹುದು. ಇತ್ತೀಚೆಗೆ ರಣಜಿ ಟೂರ್ನಿ ಆಯೋಜಿಸಲು ಮೀನಮೇಷ ಎಣಿಸಿದ್ದ (ಕೋವಿಡ್ ಕಾರಣಕ್ಕಾಗಿ) ಬಿಸಿಸಿಐ ಟೀಕೆಗೂ ಒಳಗಾಗಿತ್ತು. ನಂತರ ಪರಿಷ್ಕೃತ ವೇಳಾಪಟ್ಟಿ ರಚಿಸಿ ಇದೇ 17ರಿಂದ ಟೂರ್ನಿಯನ್ನು ಆರಂಭಿಸುತ್ತಿದೆ. ಕೆಲವು ವರ್ಷಗಳಿಂದ ರಾಷ್ಟ್ರೀಯ ತಂಡಗಳ ಆಯ್ಕೆಗೆ ಐಪಿಎಲ್‌ನಲ್ಲಿ ಮಿಂಚಿದವರಿಗೆ ಮಣೆ ಹಾಕುವ ರೂಢಿ ಆಯ್ಕೆ ವ್ಯವಸ್ಥೆಯಲ್ಲಿ ನುಸುಳಿದೆ. ಆದರೆ ಆ ಹಾದಿಯಲ್ಲಿ ಬಂದು ರಾಷ್ಟ್ರೀಯ ತಂಡದಲ್ಲಿ ಸಫಲರಾದವರ ಸಂಖ್ಯೆ ಕಡಿಮೆ.

ಆದರೆ, ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಗಟ್ಟಿ ಗುರುತು ಮೂಡಿಸಿದವರು ಐಪಿಎಲ್‌ಗೂ ಸೈ, ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ಸೈ ಎಂದು ತೊಡೆ ತಟ್ಟಿರುವ ಉದಾಹರಣೆಗಳು ಹಲವಾರು ಇವೆ. ಈ ಬಾರಿ ಅತಿ ಹೆಚ್ಚು ಮೌಲ್ಯ ಪಡೆದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಎರಡು ಕೋಟಿ ರೂಪಾಯಿ ಗಿಟ್ಟಿಸಿದಹತ್ತೊಂಬತ್ತು ವರ್ಷದ ರಾಜ್ ಅಂಗದ್ ಬಾವಾ, ₹ 50 ಲಕ್ಷ ಬಾಚಿಕೊಂಡ ಯಶ್ ಧುಳ್, ರಾಹುಲ್ ಚಾಹರ್, ಜೈದೇವ್ ಉನದ್ಕತ್, ₹2.60 ಕೋಟಿ ಗಳಿಸಿದ ಕನ್ನಡಿಗ ಅಭಿನವ್ ಮನೋಹರ್ ಮತ್ತು ₹ 10 ಕೋಟಿ ಗಳಿಸಿದ ವೇಗಿ ಪ್ರಸಿದ್ಧಕೃಷ್ಣ ಹೀಗೆ ದೊಡ್ಡ ಪಟ್ಟಿ ಬೆಳೆಯುತ್ತದೆ. ಕ್ರಿಕೆಟ್ ಕಲಿಕೆಯಲ್ಲಿ ಮಕ್ಕಳು ಕೌಶಲ, ತಂತ್ರಗಾರಿಕೆ, ನಾಯಕತ್ವ ಗುಣಗಳನ್ನು ಕಲಿಯುವುದೇ ವಯೋಮಿತಿಯ ದೇಶಿ ಟೂರ್ನಿಗಳಲ್ಲಿ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ರಾಬಿನ್ ಉತ್ತಪ್ಪ ಅವರು ಇಷ್ಟು ವರ್ಷ ಕಣದಲ್ಲಿ ಬೆಳಗುತ್ತಿರುವುದು ಇದೇ ಕಾರಣಕ್ಕೆ ಅಲ್ಲವೇ?

ಅಷ್ಟಕ್ಕೂ ಫ್ರ್ಯಾಂಚೈಸಿಗಳು ಇಂತಹದೊಂದು ಯೋಚನೆ ಮಾಡಲು ಪ್ರತೀ ಐಪಿಎಲ್ ತಂಡಗಳಿಗೆ ಮೆಂಟರ್ ಮತ್ತು ತರಬೇತುದಾರರಾಗಿರುವ ದಿಗ್ಗಜ ಕ್ರಿಕೆಟಿಗರು ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಪ್ರವೀಣ ಆಮ್ರೆ, ಅನಿಲ್ ಕುಂಬ್ಳೆ, ಜಹೀರ್ ಖಾನ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರಂತಹ ದಿಗ್ಗಜರು ತಂಡಗಳಲ್ಲಿರುವುದು ಐಪಿಎಲ್ ‘ಶ್ರೀಮಂತಿಕೆ’ ಹೆಚ್ಚಿಸಿದೆ.

ಈ ಬಾರಿ ಹರಾಜಿನಲ್ಲಿ ಪಾಲ್ಗೊಂಡ ಹತ್ತು ತಂಡಗಳೂ ಕೆಲವು ವಿಭಿನ್ನ ತಂತ್ರಗಳನ್ನು ಅನುಸರಿಸಿದ್ದು ಗಮನ ಸೆಳೆಯಿತು. ಹಣ ವಿನಿಯೋಗಿಸುವಾಗ ಅವಸರಪಡದೇ, ವಿದೇಶಿ ವ್ಯಾಮೋಹಕ್ಕೂ ಒಳಗಾಗದೇ ಅತೀವ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡವು. ತಮ್ಮ ತಂಡದ ಹಳೆಯ ಆಟಗಾರರನ್ನೇ ಮರಳಿ ಹೆಚ್ಚು ಹಣ ಕೊಟ್ಟು ಕೊಳ್ಳಲು ಹಿಂಜರಿಯಲಿಲ್ಲ. ಆದ್ದರಿಂದಲೇ ಇಶಾನ್ ಕಿಶನ್, ಹರ್ಷಲ್ ಪಟೇಲ್, ದೀಪಕ್ ಚಾಹರ್ ಅವರಂತಹ ಪ್ರತಿಭಾವಂತರು ‘ತವರು’ ತಂಡಕ್ಕೇ ಮರಳಿದರು. ಅದೂ ಎರಡೂವರೆ–ಮೂರು ಪಟ್ಟು ಹಣದ ಥೈಲಿಯೊಂದಿಗೆ!

ಮೂರು ವರ್ಷಗಳ ಹಿಂದಷ್ಟೇ ಇದೇ ಮುಂಬೈ ತಂಡವು ₹ 6.20 ಕೋಟಿ ಕೊಟ್ಟು ಇಶಾನ್‌ ಅವರನ್ನು ಸೆಳೆದಿತ್ತು. ಇದೀಗ ₹15.25 ಕೋಟಿ ಕೊಟ್ಟು ಮತ್ತೆ ಕೊಂಡುಕೊಂಡಿದೆ. ಸಿಎಸ್‌ಕೆಯ ಚಾಹರ್ ₹14 ಕೋಟಿ ಮತ್ತು ಆರ್‌ಸಿಬಿಯ ಹರ್ಷಲ್ ₹ 8 ಕೋಟಿ ಗಳಿಸಿದರು. ಆದರೆ, ತಮ್ಮ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ದಿಸೆಯಲ್ಲಿ ಮುಂಬೈ ತೆಗೆದುಕೊಂಡ ನಿರ್ಧಾರ ಅಚ್ಚರಿ ಮೂಡಿಸಿತು. ಹಲವು ತಿಂಗಳುಗಳಿಂದ ಗಾಯಗೊಂಡು ಕ್ರಿಕೆಟ್‌ನಿಂದ ದೂರವೇ ಇರುವ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಅವರನ್ನು ಭಾರಿ ಮೊತ್ತಕ್ಕೆ ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಶ್ರೀಲಂಕಾದ ವಣಿಂದು ಹಸರಂಗಾ ಅವರ ಮೇಲೆ ದೊಡ್ಡ ಮೊತ್ತ ವಿನಿಯೋಗಿಸಿತು. ಅಲ್ಲದೇ ಅನುಭವಿ ದಿನೇಶ್ ಕಾರ್ತಿಕ್ ಮತ್ತು ಫಫ್‌ ಡುಪ್ಲೆಸಿ ಅವರನ್ನೂ ಸೇರ್ಪಡೆ ಮಾಡಿಕೊಂಡಿದೆ. ಉಳಿದಂತೆ ದೇಶಿ ಕ್ರಿಕೆಟಿಗರ ದೊಡ್ಡ ದಂಡು ತಂಡಕ್ಕೆ ಸೇರಿಕೊಂಡಿದೆ. ಅದರಲ್ಲಿ ಕನ್ನಡಿಗ ಅನೀಶ್ವರ್ ಗೌತಮ್ ಇದ್ದಾರೆ.

ಫಾರ್ಮ್‌ನಲ್ಲಿ ಇಲ್ಲದ, ವಯಸ್ಸು ಮೀರಿರುವ ಮತ್ತು ಕಳಂಕಿತ ಆಟಗಾರರತ್ತ ಫ್ರ್ಯಾಂಚೈಸಿಗಳು ಕಣ್ಣು ಹಾಯಿಸಲಿಲ್ಲ. ಕೋಟ್ಯಂತರ ಹಣವನ್ನು ವಿನಿಯೋಗಿಸಿಕೊಳ್ಳುವ ಆಟಗಾರರು ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸುವ ರಾಯಭಾರಿಗಳಾಗಲೇಬೇಕು ಎಂಬ ಉತ್ಕಟತೆ ಮಾಲೀಕರ ಯೋಜನೆಗಳಲ್ಲಿ ಢಾಳಾಗಿ ಕಂಡಿತು.ಅದಕ್ಕಾಗಿಯೇ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಎಸ್. ಶ್ರೀಶಾಂತ್, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸುರೇಶ್ ರೈನಾ ಅವರು ಬಿಕರಿಯಾಗದೇ ಉಳಿದರು. ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್‌ ತಂಡವೇ ಮತ್ತೊಮ್ಮೆ ₹ 30 ಲಕ್ಷಕ್ಕೆ ಖರೀದಿಸಿತು. ಅಪ್ಪನ ತಾರಾ ವರ್ಚಸ್ಸು, ತಂಡದ ನಂಟಿಗಿಂತಲೂ ಪ್ರತಿಭೆ ಮತ್ತು ಸಾಮರ್ಥ್ಯವೇ ಮುಖ್ಯ ಎಂಬುದಕ್ಕೆ ಅರ್ಜುನ್ ಉದಾಹರಣೆಯಾಗುತ್ತಾರೆ.

ದೇಶಿ ಕ್ರಿಕೆಟ್‌ನಲ್ಲಿ ಕಳೆದೆರಡು ವರ್ಷಗಳಲ್ಲಿ ಹೆಚ್ಚಿನ ಸಾಧನೆಯನ್ನೇನೂ ಮಾಡದ ಕರ್ನಾಟಕದ ಕರುಣ್ ನಾಯರ್ ಕೊನೆಗೂ ಅವಕಾಶ ಗಿಟ್ಟಿಸಿದ್ದಾರೆ. ₹ 1.40 ಕೋಟಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿಲ್ಲ. ರಾಜ್ಯ ತಂಡದಲ್ಲಿಯೂ ಅವರ ಸಾಧನೆ ಅಷ್ಟಕ್ಕಷ್ಟೇ. ತಂಡದ ಇನ್ನೊಬ್ಬ ಪ್ರತಿಭಾವಂತ ಆಲ್‌ರೌಂಡರ್ ಕೆ. ಗೌತಮ್ ₹ 90 ಲಕ್ಷಕ್ಕೆ ಬಿಕರಿಯಾದರು. ಆದರೆ, ಕಳೆದ ಬಾರಿ ಅವರನ್ನು ಚೆನ್ನೈ ತಂಡವು ₹9.25 ಕೋಟಿ ಕೊಟ್ಟು ಖರೀದಿಸಿತ್ತು. ಒಂದೇ ವರ್ಷದಲ್ಲಿ ಅವರ ಮೌಲ್ಯ ಇಷ್ಟೊಂದು ಕುಸಿದಿದ್ದು ಹೇಗೆ? ಅದರ ಮಾನದಂಡವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕಳೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿ ದೊಡ್ಡ ಸಿಕ್ಸರ್, ಬೌಂಡರಿ ಸಿಡಿಸಿದ್ದ ಅಭಿನವ್ ₹ 2.60 ಕೋಟಿ ಗಿಟ್ಟಿಸಿದರು. ಇದು ಕೂಡ ದೇಶಿ ಕ್ರಿಕೆಟ್‌ಗೆ ಸಂದ ಶ್ರೇಯ.

ಇದೇ ನೆಪದಲ್ಲಿ ಐಪಿಎಲ್‌ನಲ್ಲಿ ದೇಶಿ ಕ್ರಿಕೆಟ್‌ಗೆ ಸಿಗುತ್ತಿರುವ ಮನ್ನಣೆಯು ಭವಿಷ್ಯದಲ್ಲಿ ದುಪ್ಪಟ್ಟಾಗುವ ಸಣ್ಣ ಆಸೆ ಚಿಗುರಿದೆ. ಇದು ಇಂದಿನ ಅಗತ್ಯವೂ ಆಗಿದೆ. ಏಕೆಂದರೆ, ಇಂಗ್ಲೆಂಡ್ ತಂಡವು ಸಾಲು ಸಾಲು ಸೋಲು ಅನುಭವಿಸುತ್ತಿರುವುದರ ಹಿಂದೆ ಅಲ್ಲಿಯ ಕೌಂಟಿ ಕ್ರಿಕೆಟ್ ದುರ್ಬಲಗೊಂಡಿರುವುದೇ ಕಾರಣ ಎಂದು ಆ ದೇಶದ ದಿಗ್ಗಜ ಆಟಗಾರರೇ ಹೇಳಿದ್ದಾರೆ. ಅದರಿಂದಲೂ ಬಿಸಿಸಿಐ ಪಾಠ ಕಲಿಯಬೇಕು. ಐಪಿಎಲ್ ಹಣದ ಹೊಳೆಯೊಂದಿಗೆ ಕ್ರಿಕೆಟ್‌ ಅಂಗಳ ನೈಜ ಕಳೆಯನ್ನು ಹೆಚ್ಚಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT