ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹೂಡಿಕೆ ಹಿಂತೆಗೆತ; ಹಿನ್ನಡೆಯೇ ಹೆಚ್ಚು!

ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಖಾಸಗೀಕರಣದ ವಿಶಿಷ್ಟ ಅವಕಾಶಗಳನ್ನು ತೆರೆದಿಟ್ಟಿದೆ
Last Updated 3 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ವಲಯದಲ್ಲಿರುವ ಉದ್ಯಮಗಳ ಒಡೆತನವು ಖಾಸಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಹಸ್ತಾಂತರಗೊಂಡಾಗ ಅದನ್ನು ಖಾಸಗೀಕರಣ ಎಂದು ಪರಿಗಣಿಸುವುದೇ ಹೆಚ್ಚು. ವಾಸ್ತವದಲ್ಲಿ ಖಾಸಗೀಕರಣ ಮತ್ತು ಸರ್ಕಾರದ ಹೂಡಿಕೆ ಹಿಂತೆಗೆತವನ್ನು ಸ್ವಲ್ಪ ಭಿನ್ನವಾದ ಪ್ರಕ್ರಿಯೆಗಳೆಂದೇ ಪರಿಭಾವಿಸಬಹುದು. ಹೂಡಿಕೆ ಹಿಂತೆಗೆತ ಭಾಗಶಃ ಖಾಸಗೀಕರಣ ಅಷ್ಟೆ, ಖಾಸಗೀಕರಣದ ಒಂದು ಪ್ರಮುಖ ಪರಿಣಾಮ ಎಂದು ಹೇಳಿದರೂ ಸರಿಯೇ. ಆದರೂ ಭಾರತ ಮತ್ತು ಪಾಕಿಸ್ತಾನದಲ್ಲಿ
ಖಾಸಗೀಕರಣವೆಂದರೆ, ಸರ್ಕಾರದ ಹೂಡಿಕೆ ಹಿಂತೆಗೆತ ವೆಂದು ಪರಿಗಣಿಸಿಬಿಡುವ ರೂಢಿ ಬೆಳೆದಿದ್ದು, ಅಷ್ಟರಮಟ್ಟಿಗಾದರೂ ಉಭಯ ರಾಷ್ಟ್ರಗಳು ಸ್ನೇಹಿತರೆಂದು ತಿಳಿಯುವ ವಿಸ್ಮಯಕಾರಿ ಅವಕಾಶ ಸೃಷ್ಟಿಯಾಗಿದೆ!

ಬ್ರಿಟನ್‌ನ ಪ್ರಧಾನಿಯಾಗಿದ್ದ ಮಾರ್ಗರೇಟ್ ಥ್ಯಾಚರ್ ಅವರು ಖಾಸಗಿ ರಂಗದ ಆರಾಧಕರೆಂದು ವಿಶ್ವದಾದ್ಯಂತ ಪ್ರಚಾರ ಪಡೆದ, ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್ ಅವರ ಆಪ್ತರಾಗಿದ್ದರು. 1999ರಲ್ಲಿ ಖಾಸಗೀಕರಣದ ಅಲೆಗಳನ್ನೇ ಥ್ಯಾಚರ್ ತಮ್ಮ ದೇಶದಲ್ಲಿ ಸೃಷ್ಟಿಸಿದ್ದರು. ವಿಮಾನಯಾನ, ಟೆಲಿ
ಕಮ್ಯುನಿಕೇಷನ್, ನೀರು ಪೂರೈಕೆ, ವಿದ್ಯುತ್ ಸರಬರಾಜು- ಹೀಗೆ ಅನೇಕ ಪ್ರಮುಖ ವಲಯಗಳನ್ನು ಖಾಸಗೀಕರಣ ಕಬಳಿಸಿಬಿಟ್ಟಿತು. ಹೀಗಾಗಿ ಬೆಲೆಗಳು ಏರುತ್ತಲೇ ಹೋಗಿ ಅಲ್ಲಿ ಜನಸಾಮಾನ್ಯರು ನೋವು ಕಾಣುವಂತಾಯಿತು.

ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಥ್ಯಾಚರ್ ವಾದದ ಪ್ರಭಾವ ಹರಡಿಕೊಂಡಿದ್ದರಿಂದ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಬಡಜನ ಬಳಲುವಂತಾ ಗಿದೆಯೆಂದು ನಮ್ಮಲ್ಲಿನ ಕೆಲವು ಆರ್ಥಿಕ ತಜ್ಞರು ವಾದಿಸಿದ್ದಾರೆ. ಕ್ಷಮತೆಗೂ ಒಡೆತನಕ್ಕೂ ನೇರ ಸಂಬಂಧ ವಿಲ್ಲವೆಂದು ತೋರಿಸುವ ಭಾರತದ ಸ್ಥಿತಿಗತಿಗೂ ಅನ್ವಯಿಸುವ ವಿಶ್ವ ಬ್ಯಾಂಕಿನ ವರದಿ ಬಂದಿದ್ದು ಆಗಲೇ. ಖಾಸಗೀಕರಣದ ಹಿತರಕ್ಷಣೆ ವಾದ ಭಾರತದಲ್ಲಿ ದಾಪುಗಾಲು ಹಾಕಲು ಥ್ಯಾಚರ್ ವಾದದ ಪ್ರಭಾವ ಕಾರಣವೆಂಬ ವಾದವೂ ಇದೆ.

ಮನಮೋಹನ್‌ ಸಿಂಗ್‌ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ, ಆರ್ಥಿಕ ಸುಧಾರಣೆಗಳನ್ನು ಸಾರಿದ 1991 ಜುಲೈ 24ರ ತಮ್ಮ ಐತಿಹಾಸಿಕ ಮುಂಗಡ ಪತ್ರದಲ್ಲಿ, ನೋವಿಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲವೆಂದು ಹೇಳಿದ್ದರು. ಅವರ ಹೇಳಿಕೆಯು ಹೂಡಿಕೆ ಹಿಂತೆಗೆತದಿಂದ ಆಗಬಹುದಾದ ಹೆಚ್ಚಿನ ನೋವಿನ ಮುನ್ಸೂಚನೆಯಾಗಿತ್ತು. ಸ್ವಾತಂತ್ರ್ಯಾನಂತರ ರಾಷ್ಟ್ರೀಕರ ಣದ ಹಾದಿಯಲ್ಲಿ ಸಾಗಿದ್ದ ದೇಶದಲ್ಲಿ ಖಾಸಗೀಕರಣ ಕಷ್ಟವೆಂಬ ಪರಿಜ್ಞಾನ ಅವರಿಗಿತ್ತು. ಮನಮೋಹನ ಸಿಂಗ್ ಮತ್ತು ಕೇಂದ್ರ ವಾಣಿಜ್ಯ ಸಚಿವರಾಗಿದ್ದ ಪಿ.ಚಿದಂಬರಂ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಆಗಿನ ಲೋಕಸಭಾ ಸದಸ್ಯರ ಮುಂದೆ ಖಾಸಗೀಕರಣದ ವಾದ್ಯ ಬಾರಿಸುವಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

1991-92ರಿಂದ 2000-01ರ ಅವಧಿಯಲ್ಲಿ ಹೂಡಿಕೆ ಹಿಂತೆಗೆತದಿಂದ ₹ 54,300 ಕೋಟಿ ಸಂಗ್ರಹ ವಾಗಬಹುದೆಂಬ ನಿರೀಕ್ಷೆಯೇನೋ ಇತ್ತು. ಆದರೆಸಂಗ್ರಹವಾಗಿದ್ದು ಕೇವಲ ₹ 20,078 ಕೋಟಿ! ಹೂಡಿಕೆ ಹಿಂತೆಗೆತ ಸೃಷ್ಟಿಸಿದ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರಗಳನ್ನು ಒದಗಿಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ. ಖಾಸಗೀಕರಣದ ರಣವಾದ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂರನೆಯ ಬಜೆಟ್ ರೂಪದಲ್ಲಿ ಈಗ ಮೊಳಗುತ್ತಿರುವಾಗ, ಬಡವರ ಹಿತರಕ್ಷಣೆಯ ವಿಚಾರ ಬದಿಗೆ ಸರಿದಿದೆ. ಬಡ ವಿರಾಟನ ಕೇಳುವವರಾರ್ ದ್ರೋಣ ಸಮರದಲಿ?

ಪ್ರಣವ್ ಮುಖರ್ಜಿ ಅವರು ಮನಮೋಹನ ಸಿಂಗ್‌ ಅವರ ನೇತೃತ್ವದ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾಗ ಹೂಡಿಕೆ ಹಿಂತೆಗೆತದ ವಿಚಾರಕ್ಕೆ ಸಂಬಂಧಿಸಿದಂತೆ ಅಳೆದೂ ತೂಗಿ ಮಾತನಾಡುತ್ತಿದ್ದರು. 2009-10ರ ಬಜೆಟ್ ಭಾಷಣದಲ್ಲಿ ‘ಸಾರ್ವಜನಿಕ ಉದ್ಯಮಗಳು ರಾಷ್ಟ್ರದ ಸಂಪತ್ತು. ಆದರೂ ಅವುಗಳಲ್ಲಿ ಜನಸಮುದಾಯದ ಪಾಲ್ಗೊಳ್ಳುವಿಕೆಯನ್ನು, ಹೂಡಿಕೆ ಹಿಂತೆಗೆತವನ್ನು ಹೆಚ್ಚಿಸುವ ಅಗತ್ಯವಿದೆ’ ಎಂದಿದ್ದರು. ಅವರಿಂದ ಬ್ಯಾಂಕುಗಳನ್ನು ಮತ್ತು ವಿಮಾ ಕಂಪನಿಗಳನ್ನು ಸಾರ್ವಜನಿಕ ರಂಗದಲ್ಲಿ ಮುಂದುವರಿಸುವ ಆಶ್ವಾಸನೆ ದೊರಕಿತ್ತು. ಇಷ್ಟಾದರೂ ಹೂಡಿಕೆ ಹಿಂತೆಗೆತದ ವಿಷಯದಲ್ಲಿ ಪ್ರಣವ್‌ ಅವರಿಗೆ ಯಶಸ್ಸು ಸಿಗಲಿಲ್ಲ.

2011-12ನೇ ಸಾಲಿನಲ್ಲಿ ಹೂಡಿಕೆ ಹಿಂತೆಗೆತದ ಮೂಲಕ ಅವರು ₹ 40,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದರೆ, ಸಂಗ್ರಹವಾಗಿದ್ದು ಕೇವಲ
₹ 19,418 ಕೋಟಿ. 2012-13ನೇ ಸಾಲಿನಲ್ಲಿ ಅವರು ಗುರಿಯನ್ನು ₹ 30,000 ಕೋಟಿಗೆ ತಗ್ಗಿಸಿಬಿಟ್ಟರು. ಹೀಗೆ ಹೂಡಿಕೆ ಹಿಂತೆಗೆತದಲ್ಲಿ ಸರಣಿ ಸೋಲಿನ ಅನುಭವಗಳನ್ನೇ ಪಡೆದಿದ್ದ ಪ್ರಣವ್ ಮುಂದೆ ರಾಷ್ಟ್ರಪತಿ ಭವನ ಸೇರಿದರು. ಪ್ರಣವ್ ನಂತರ ಕೇಂದ್ರ ಹಣಕಾಸು ಸಚಿವರಾದ ಪಿ.ಚಿದಂಬರಂ ಹೂಡಿಕೆ ಹಿಂತೆಗೆತದ ಮೂಲಕ ಆದಾಯ ಸಂಗ್ರಹಿಸುವಲ್ಲಿ ಎಣಿಸಿದಂತೆ ಯಶಸ್ಸು ಪಡೆದರಾದರೂ ಅದನ್ನು, ಬಿರಿದು ನಿಂತಿದ್ದ ವಿತ್ತೀಯ ಕೊರತೆ ತುಂಬಿಕೊಳ್ಳಲು ಬಳಸಿದರೇ ಹೊರತು ಮೂಲ ಸೌಕರ್ಯದ ಸೃಷ್ಟಿಗೆ ಉಪಯೋಗಿಸುವ ಕೆಲಸ ಮಾಡುವ ಗೋಜಿಗೆ ಹೋಗಲಿಲ್ಲ.

2014ರಲ್ಲಿ ವಿತ್ತೀಯ ಕ್ರೋಡೀಕರಣದ ಹಾದಿಯಲ್ಲಿ ಸಾಗಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂಪನ್ಮೂಲ ಸಂಗ್ರಹಕ್ಕಾಗಿ ಹೂಡಿಕೆ ಹಿಂತೆಗೆತವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಆಗ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಸಾರಿದ್ದರು. 2016ರ ಆಗಸ್ಟ್ 16ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆ ಸೇರಿ ಹೂಡಿಕೆ ಹಿಂತೆಗೆತದ ವಿಧಾನಗಳನ್ನು ಸರಳಗೊಳಿಸಿತು. 2016-17ನೇ ಸಾಲಿನಲ್ಲಿ ಹೂಡಿಕೆ ಹಿಂತೆಗೆತದ ಮೂಲಕ ಗಳಿಸಿದ ಆದಾಯ ₹ 46,246 ಕೋಟಿಯಷ್ಟಾಗಿದ್ದು ಆಗ ಯಶಸ್ಸಿನ ದಾಖಲೆ. 2017-18ರ ಸಾಲಿನ ಬಜೆಟ್ ಭಾಷಣದಲ್ಲಿ ಜೇಟ್ಲಿ ತಮ್ಮ ಮುಂದಿನ ಮಹತ್ವಾಕಾಂಕ್ಷೆ ಯುಳ್ಳ ಯೋಜನೆಯನ್ನು ಸಾರಿದಾಗ ಅವರ ಪಕ್ಷದ ಸಂಸದರಿಂದ ಹರ್ಷೋದ್ಗಾರ. ಮುಂದೆ ಸರಿಯಾದ ಯೋಜನೆಯಿಲ್ಲದ ನೋಟುಗಳ ರದ್ದತಿ ಮತ್ತು ದೋಷ ಪೂರಿತ ಜಿಎಸ್‌ಟಿಯಿಂದಾಗಿ ಆ ಹರ್ಷೋದ್ಗಾರ ಬೇಗನೇ ಹಳೆಯ ಕಥೆಯಾಗಿ ಹೋಯಿತಲ್ಲ!

ನಿರ್ಮಲಾ ಸೀತಾರಾಮನ್ ತಮ್ಮ 2020-21ನೇ ಸಾಲಿನ ಮುಂಗಡ ಪತ್ರದಲ್ಲಿ ಭಾರತೀಯರ ಅತ್ಯಂತ ವಿಶ್ವಾಸಾರ್ಹ ಕಾರ್ಪೊರೇಷನ್ ಎಂದು ಹೆಸರು ಮಾಡಿದ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಸರ್ಕಾರ ಹೊಂದಿರುವ ಪಾಲನ್ನು ಮಾರಾಟ ಮಾಡುವ ನಿರ್ಧಾರ ಸಾರಿ ಆಶ್ಚರ್ಯ ಹುಟ್ಟಿಸಿದರು. ದೇಶದಲ್ಲಿ ವಿಮಾ ಮಾರುಕಟ್ಟೆಯಲ್ಲಿ ಎಲ್ಐಸಿಯ ಪಾಲು ಇಷ್ಟೊಂದು ದೊಡ್ಡದಾಗಿರುವಾಗ ತನ್ನ ಈ ನಿರ್ಧಾರದಿಂದ, ಪಾಲಿಸಿ ಪಡೆದಿರುವ ಅಸಂಖ್ಯಾತ ಜನಸಾಮಾನ್ಯರ ಹಿತರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲೆ ಇದ್ದೇ ಇದೆ.

ನಿರ್ಮಲಾ 2020-21ರ ಬಜೆಟ್‌ನಲ್ಲಿ ಹೂಡಿಕೆ ಹಿಂತೆಗೆತದ ಮೂಲಕ ₹ 2.1 ಲಕ್ಷ ಕೋಟಿಯಷ್ಟು ಹಣ ಸಂಗ್ರಹಿಸುವ ಗುರಿ ಹೊಂದಿದ್ದರು. ಸಂಗ್ರಹಿಸಿದ್ದು ಕೇವಲ ₹ 15,220 ಕೋಟಿಯೆಂದು 2020-21ರ ಆರ್ಥಿಕ ಸಮೀಕ್ಷೆ ವರದಿ ಮಾಡಿ, ಕೊರೊನಾದ ಪ್ರತಾಪಕ್ಕೆ ಸಾಕ್ಷಿಯಾಗಿತ್ತು. 2021-22ನೇ ಹಣಕಾಸು ವರ್ಷದಲ್ಲಿ ಹೂಡಿಕೆ ಹಿಂತೆಗೆತದ ಮೂಲಕ ₹ 1.75 ಲಕ್ಷ ಕೋಟಿಯಷ್ಟು ಆದಾಯ ಸಂಗ್ರಹಿಸುವ ಗುರಿ ಹಣಕಾಸು ಸಚಿವೆಯದ್ದು. 2020ರ ಆರ್ಥಿಕ ಸಮೀಕ್ಷೆ ಹೆಚ್ಚಿನ ಲಾಭ, ಕ್ಷಮತೆಯ ಸಾಧನೆ, ಸ್ಪರ್ಧಾತ್ಮಕ ಶಕ್ತಿಯ ಸಂಪಾದನೆ ಮತ್ತು ವೃತ್ತಿಪರತೆಯಲ್ಲಿ ಹೆಚ್ಚಳವು ಹೂಡಿಕೆ ಹಿಂತೆಗೆತದಿಂದ ಸಾಧ್ಯವೆಂದು ಘೋಷಿಸಿ, ಕೇಂದ್ರ ಸರ್ಕಾರಕ್ಕೆ ಬೇಕಾದ ಹಸಿರು ನಿಶಾನೆ ಹಾರಿಸಿದೆ.

2021-22ನೇ ವರ್ಷದ ಮುಂಗಡ ಪತ್ರದ 3ನೇ ಅನುಬಂಧದಲ್ಲಿ ನಿರ್ಮಲಾ ಖಡಕ್ ಆದ ಹೂಡಿಕೆ ಹಿಂತೆಗೆತದ ಯೋಜನೆಯನ್ನು ನೀಡಿದ್ದಾರೆ. ಆಯಕಟ್ಟಿನ ಕ್ಷೇತ್ರಗಳಾದ ಅಣುಶಕ್ತಿ, ರಕ್ಷಣೆ, ಸಾಗಾಟ ಮತ್ತು
ಟೆಲಿಕಮ್ಯುನಿಕೇಷನ್, ಶಕ್ತಿ, ಪೆಟ್ರೋಲಿಯಂ, ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವೆಗಳಲ್ಲಿ ಖಾಸಗೀಕರಣದ ಅವಕಾಶಗಳನ್ನು ಅವರು ತಿಳಿಸಿದ್ದಾರೆ. ಇತರ
ಕ್ಷೇತ್ರಗಳಲ್ಲಿರುವ ಖಾಸಗೀಕರಣದ ಅವಕಾಶ
ಗಳನ್ನೂ ವಿಶಿಷ್ಟ ರೀತಿಯಲ್ಲಿ ತಿಳಿಸಲಾಗಿದೆ. ಖಾಸಗೀಕರಣ ಸಾಧ್ಯವಿಲ್ಲವೆಂದಾದರೆ, ನಿರುದ್ಯೋಗ ಸಮಸ್ಯೆ ತೀವ್ರ
ವಾಗಿರುವಾಗಲೇ ಕೇಂದ್ರ ಸರ್ಕಾರದ ಒಡೆತನದಲ್ಲಿರುವ
ಉದ್ದಿಮೆಗಳನ್ನು ಮುಚ್ಚೇಬಿಡುವ ನೋವಿನ ವಿಚಾರವೂ ಪ್ರಕಟವಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT